ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೊ ದರವನ್ನು ೫೦ ಮೂಲ ಅಂಶಗಳಷ್ಟು (ಶೇ.೦.೫೦) ಏರಿಕೆ ಮಾಡಿದೆ. ರೆಪೊದರ ಏರಿಕೆ ಅನಿರೀಕ್ಷಿತವೇನೂ ಆಗಿರಲಿಲ್ಲ. ಮೇ ತಿಂಗಳಲ್ಲಿ ಅಕಾಲಿಕವಾಗಿ ರೆಪೊದರ ಶೇ.೦.೪೦ರಷ್ಟು ಏರಿಕೆ ಮಾಡಿದಾಗಲೇ ಜೂನ್ ತಿಂಗಳ ಹಣಕಾಸು ನೀತಿ ಸಮಿತಿ ಸಭೆಯ ಹೊತ್ತಿಗೆ ಮತ್ತೆ ದರ ಏರಿಕೆ ಮಾಡುವುದು ನಿಶ್ಚಿತವಾಗಿತ್ತು. ಹಣಕಾಸು ಮಾರುಕಟ್ಟೆ ಕುತೂಹಲದಿಂದ ವೀಕ್ಷಿಸುತ್ತಿದ್ದುದು ಬಡ್ಡಿದರ ಎಷ್ಟು ಏರಿಕೆ ಮಾಡಬಹುದು ಎಂಬುದನ್ನಷ್ಟೇ. ಪೂರ್ವಭಾವಿಯಾಗಿ ನಡೆದ ಸಮೀಕ್ಷೆಗಳಲ್ಲಿ ಕೆಲವು ಆರ್ಥಿಕತಜ್ಞರು ಶೇ.೦.೭೫ರಷ್ಟು ಬಡ್ಡಿದರ ಏರಿಕೆ ನಿರೀಕ್ಷಿಸಿದ್ದರು. ಬಹುತೇಕ ಮಂದಿ ಶೇ.೦.೫೦ರಷ್ಟು ದರ ಏರಿಕೆ ನಿರೀಕ್ಷಿಸಿದ್ದರು. ಆ ನಿರೀಕ್ಷೆ ಹುಸಿಯಾಗಿಲ್ಲ.
ನಿಜ, ನಾವೀಗ ಬಡ್ಡಿದರ ಏರಿಕೆಯ ಹಾದಿಯ ಆರಂಭದಲ್ಲಿ ಇದ್ದೇವೆ. ಕೋವಿಡ್ ಸಂಕಷ್ಟದ ಕಾಲದಲ್ಲಿ ಎರಡು ವರ್ಷಗಳ ಕಾಲ ಆರ್‌ಬಿಐ ಬಡ್ಡಿದರವನ್ನು ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿ ಕಾಯ್ದುಕೊಂಡಿತ್ತು. ಇದರಿಂದಾಗಿ ಇಡೀ ದೇಶದ ಆರ್ಥಿಕತೆಯು ಕೋವಿಡ್ ಸಂಕಷ್ಟದಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ಸಾಧ್ಯವಾಯಿತು. ಪೂರ್ಣ ಪ್ರಮಾಣದಲ್ಲಿ ಆರ್ಥಿಕತೆ ಚೇತರಿಸಿಕೊಳ್ಳಲು ಇನ್ನೂ ಒಂದು ವರ್ಷ ಕನಿಷ್ಟ ಬಡ್ಡಿದರ ಕಾಯ್ದುಕೊಳ್ಳುವುದು ಅಗತ್ಯವಾಗಿತ್ತು. ಜಾಗತಿಕ ಆರ್ಥಿಕ ಮತ್ತು ರಾಜಕೀಯ ಕ್ಷೋಭೆಗಳಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸರಕು ಮತ್ತು ಸೇವೆಗಳ ದರಗಳು ತ್ವರಿತಗತಿಯಲ್ಲಿ ಏರಿದ್ದವು. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ಕಚ್ಚಾ ತೈಲ ದರವು ಸಾರ್ವಕಾಲಿಕ ಗರಿಷ್ಠಮಟ್ಟಕ್ಕೆ ಜಿಗಿದಿತ್ತು. ನಂತರ ಇಳಿದಿದ್ದರೂ, ಒಟ್ಟಾರೆ ಕಚ್ಚಾತೈಲ ಮಾರುಕಟ್ಟೆಯಲ್ಲಿ ಅಸ್ಥಿರತೆ ಮನೆಮಾಡಿದೆ. ಈ ಎಲ್ಲಾ ಕಾರಣಗಳಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಬಹುತೇಕ ಸರಕು ಮತ್ತು ಸೇವೆಗಳ ದರಗಳು ಏರಿದ್ದು, ಹಣದುಬ್ಬರವು ಆರ್‌ಬಿಐ ವಿಧಿಸಿಕೊಂಡಿರುವ ಮಿತಿಯಾದ ಶೇ.೬ರ ಗಡಿದಾಟಿ ಹೋಗಿದೆ. ಮತ್ತಷ್ಟು ಹಣದುಬ್ಬರ ಏರಿಕೆಯಾಗುವುದನ್ನು ತಡೆಯುವ ಮೊದಲ ಹಂತವಾಗಿ ಮೇ ತಿಂಗಳಲ್ಲೇ ಆರ್‌ಬಿಐ ರೆಪೊದರವನ್ನು ಶೇ.೦.೪೦ರಷ್ಟು ಏರಿಕೆ ಮಾಡಿತ್ತು. ಇದೀಗ ಶೇ.೦.೫೦ರಷ್ಟು ಏರಿಕೆ ಮಾಡಿದೆ. ಬರುವ ತಿಂಗಳುಗಳಲ್ಲಿ ಮತ್ತಷ್ಟು ಬಡ್ಡಿದರ ಏರಿಕೆ ಆಗಲಿದೆ. ಸಾಮಾನ್ಯ ಮಾನ್ಸೂನ್ ಮಳೆ ಮತ್ತು ಕಚ್ಚಾ ತೈಲ ಪ್ರತಿ ಬ್ಯಾರೆಲ್ ಗೆ ೧೦೫ ಡಾಲರ್ ಆಧಾರದ ಲೆಕ್ಕದಲ್ಲಿ
೨೦೨೨-೨೩ನೇ ಸಾಲಿನಲ್ಲಿ ಒಟ್ಟಾರೆ ಸರಾಸರಿ ಹಣದುಬ್ಬರವು ಶೇ.೬.೭ರಷ್ಟು ಇರಲಿದೆ ಎಂದು ಹಣಕಾಸು ಸಮಿತಿ ಸಭೆ ಮುನ್ನಂದಾಜು ಮಾಡಿದೆ.
ಈಗ ಏರಿಸಿರುವ ಬಡ್ಡಿಯಿಂದಲೇ ಹಣದುಬ್ಬರ ನಿಯಂತ್ರಣಕ್ಕೆ ಬರುವುದಿಲ್ಲ. ಮತ್ತಷ್ಟು ಬಡ್ಡಿದರ ಏರಿಕೆ ಮಾಡಿ ನಗದು ಹರಿವಿಗೆ ಕಡಿವಾಣ ಹಾಕಬೇಕು. ಜತೆಗೆ ಕೇಂದ್ರ ಸರ್ಕಾರವೂ ಸುಂಕಗಳನ್ನು ಕಡಿತ ಮಾಡಬೇಕು. ರಷ್ಯಾ ಮತ್ತು ಉಕ್ರೇನ್ ದೇಶಗಳಿಂದ ಖಾದ್ಯ ತೈಲ ಸರಬರಾಜು ನಿಂತ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಬೆಲೆ ಜಿಗಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.೧೦೦ರಷ್ಟು ಏರಿಕೆಯಾಗಿದೆ. ಹಣದುಬ್ಬರ ಏರಿಕೆಗೆ ಇಂಧನವಷ್ಟೇ ಅಲ್ಲದೇ ನಿತ್ಯೋಪಯೋಗಿ ಸರಕು ಸೇವೆಗಳ ದರ ಏರಿಕೆಯೂ ಕಾರಣವಾಗಿದೆ. ಕೇಂದ್ರ ಸರ್ಕಾರ ಸುಂಕ ಇಳಿಕೆ ಮಾಡುವುದರಿಂದ ಮಾತ್ರವೇ ಪರಿಣಾಮಕಾರಿಯಾಗಿ ಹಣದುಬ್ಬರ ನಿಯಂತ್ರಿಸಲು ಸಾಧ್ಯ.
ಆರ್‌ಬಿಐ ವರ್ಷವಿಡೀ ಶೇ.೬.೭ರಷ್ಟು ಹಣದುಬ್ಬರ ಇರಲಿದೆ ಎಂದು ಅಂದಾಜು ಮಾಡಿದೆ. ಎಂದರೆ- ರೆಪೊದರವು ಆ ಮಟ್ಟಕ್ಕೆ ಏರಬೇಕು. ಆನಂತರವಷ್ಟೇ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತದೆ. ಆ ಲೆಕ್ಕದಲ್ಲಿ ನೋಡುವುದಾದರೆ, ಸತತ ಎರಡು ತಿಂಗಳ ಏರಿಕೆ ನಂತರ ರೆಪೊದರ ಶೇ.೪.೯೦ಕ್ಕೆ ಏರಿದೆ. ಹಣದುಬ್ಬರದ ಮಟ್ಟಕ್ಕೆ ಏರಬೇಕಾದರೆ ಇನ್ನೂ ಶೇ.೧.೮೦ರಷ್ಟು ಬಡ್ಡಿದರ ಏರಿಕೆ ಆಗಬೇಕು. ನಿಧಾನಗತಿಯಲ್ಲಿ ಏರಿಕೆ ಮಾಡುವುದು ಆರ್‌ಬಿಐನ ಉದ್ದೇಶ. ಏಕಾಏಕಿ ಬಡ್ಡಿದರ ಏರಿಕೆ ಮಾಡಿದರೆ ಆರ್ಥಿಕ ವ್ಯವಸ್ಥೆಗೆ ಹಿನ್ನಡೆಯಾಗುವ ಅಪಾಯವೂ ಇದೆ. ಹೀಗಾಗಿ ಈ ವರ್ಷಾಂತ್ಯದ ಹೊತ್ತಿಗೆ ರೆಪೊದರವು ಶೇ.೬ರ ಗಡಿದಾಟಲಿದೆ. ಇದರರ್ಥ ಗ್ರಾಹಕರು ಹೆಚ್ಚೆಚ್ಚು ಬಡ್ಡಿ ಹೊರೆ ಹೊರಲು ಸಿದ್ಧರಾಗಬೇಕಿದೆ.
ಹಣಕಾಸು ನೀತಿ ಸಮಿತಿಯು ದೇಶೀಯ ರೂಪೇ ಕ್ರೆಡಿಟ್ ಕಾರ್ಡ್‌ಅನ್ನು ಯುಪಿಐಗೆ ಸಂಪರ್ಕಿಸುವ ನಿರ್ಧಾರ ಕೈಗೊಂಡಿರುವುದು ಗಮನಾರ್ಹ ಸಂಗತಿ. ಮುಂಬರುವ ದಿನಗಳಲ್ಲಿ ಇತರ ಕ್ರೆಡಿಟ್ ಕಾರ್ಡ್‌ಗಳನ್ನು ಯುಪಿಐಗೆ ಸಂಪರ್ಕಿಸಲಿದೆ. ಇದು ಡಿಜಿಟಲ್ ಪಾವತಿಯ ಹಾದಿಯಲ್ಲಿ ಮತ್ತೊಂದು ಮೈಲಿಗಲ್ಲಾಗಲಿದೆ. ಪ್ರಸಕ್ತ ವಿತ್ತೀಯ ವರ್ಷದ ಆರ್ಥಿಕ ಬೆಳವಣಿಗೆ (ಜಿಡಿಪಿ) ಮುನ್ನಂದಾಜು ಶೇ.೭.೨ರಷ್ಟನ್ನೇ ಕಾಯ್ದುಕೊಂಡಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. ೧೬.೨ ರಷ್ಟು ಬೆಳವಣಿಗೆ ನಿರೀಕ್ಷಿಸಿದೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ. ೬.೨, ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ. ೪.೧ ಮತ್ತು ೨೦೨೩ ರ ಜನವರಿ- ಮಾರ್ಚ್ ತ್ರೈಮಾಸಿಕದಲ್ಲಿ ಶೇ. ೪.೦ ಬೆಳವಣಿಗೆಯ ಮುನ್ನಂದಾಜು ಮಾಡಿದೆ. ಹಣದುಬ್ಬರ ಪ್ರಮಾಣಕ್ಕಿಂತ ಆರ್ಥಿಕಾಭಿವೃದ್ದಿ ಪ್ರಮಾಣ ಕೊಂಚ ಹೆಚ್ಚಾಗಲಿದೆ ಎಂಬುದಷ್ಟೇ ಸಮಾಧಾನಕರ ಸಂಗತಿ.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…