ಅಂಕಣಗಳು

ಬಡವ ಹೆಚ್ಚು ಬಡವ, ಸಾಹುಕಾರ ಹೆಚ್ಚು ಸಾಹುಕಾರ ಆಗ್ತಿದ್ದಾನೆ!

ಡಿ. ಉಮಾಪತಿ

ಕೇಂದ್ರ ಸರ್ಕಾರದ ಬಜೆಟ್ಟುಗಳು ಬಡವರನ್ನು ಬಡವರನ್ನಾಗಿಯೇ ಉಳಿಸಿ, ಧನಿಕರನ್ನು ಇನ್ನಷ್ಟು ಧನಿಕರನ್ನಾಗಿಸುವ ಸಾಧನಗಳಾಗಿ ಹೋಗಿವೆ. ಸಾಮಾಜಿಕ ವಲಯಗಳ ಮೇಲೆ ಸರ್ಕಾರಿ ವೆಚ್ಚ ತಗ್ಗುತ್ತಲೇ ನಡೆದಿದೆ.

ಕೃಷಿ ಆದಾಯವನ್ನು ದುಪ್ಪಟ್ಟು ಮಾಡುವ ಭರವಸೆ ಕಾಗದದ ಮೇಲೆಯೇ ಉಳಿದಿದೆ. ಶೇ.90ರಷ್ಟು ಉದ್ಯೋಗಾವಕಾಶಗಳನ್ನು ಒದಗಿಸುವ ಅಸಂಘಟಿತ ಕ್ಷೇತ್ರವೂ ನೆಲಕಚ್ಚಿದೆ. ಹಣದುಬ್ಬರ ಮತ್ತು ಉದ್ಯೋಗರಹಿತ ಅಭಿವೃದ್ಧಿ ದರ ಏರುಮುಖದಲ್ಲಿವೆ. ಜನಸಾಮಾನ್ಯರ ಆಹಾರದ ಬುಟ್ಟಿ ತುಟ್ಟಿಯಾಗುತ್ತಲೇ ನಡೆದಿದೆ. ಇನ್ನಷ್ಟು ತುಟ್ಟಿಯಾಗುವ ಸೂಚನೆಗಳೇ ಅಧಿಕವಾಗಿವೆ.

ಬಡವರು ಮತ್ತು ಬಲ್ಲಿದರ ನಡುವಣ ಅಸಮಾನತೆ ದಶಕಗಳಿಂದ ಹಿಗ್ಗುತ್ತಲೇ ಬಂದಿದೆ. ಸಂಪತ್ತು ಬಡ ಸಮುದಾಯಗಳಿಗೆ ಹನಿ ಹನಿಯಾದರೂ ತೊಟ್ಟಿಕ್ಕುವುದೆಂಬ ನಿರೀಕ್ಷೆ ಸಾರಾಸಗಟು ಹುಸಿಯಾಗಿದೆ. ವಿಶ್ವದ ಬಡಜನರ ಪ್ರಮಾಣದಲ್ಲಿ ಭಾರತದ ಪಾಲು ಹೆಚ್ಚುತ್ತಲೇ ನಡೆದಿದೆ. ಅಸಮಾನತೆಯನ್ನು ಒಡಲಲ್ಲಿ ಇಟ್ಟುಕೊಂಡೇ ಹುಟ್ಟಿದ್ದು ನಮ್ಮ ಅರ್ಥವ್ಯವಸ್ಥೆ. ಈ ಅಸಮಾನತೆಯ ಕಂದರವನ್ನು ತೀವ್ರ ಅಮಾನುಷಗೊಳಿಸಿದ ಕೀರ್ತಿ ನವ ಉದಾರವಾದೀ ಅರ್ಥ ನೀತಿಗಳಿಗೆ ಸಲ್ಲಬೇಕು. ತೊಂಬತ್ತರ ದಶಕದ ಆರಂಭದಲ್ಲಿ ಜಾಗತಿಕ ಉದಾರವಾದಕ್ಕೆ ಪೂರಕವಾಗಿ ಇಂತಹ ಅರ್ಥನೀತಿಯನ್ನು ಕಟೆದು ನಿಲ್ಲಿಸಿದವರು ಮನಮೋಹನ್‌ಸಿಂಗ್. ಅವರಿಗೆ ಕುಮ್ಮಕ್ಕಾಗಿ ನಿಂತವರು ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್.

ಈ ಆದಾಯ ಮತ್ತು ಸಂಪತ್ತಿನ ಅಸಮಾನತೆಗಳನ್ನು ಮೋದಿ ಸರ್ಕಾರದ ತೆರಿಗೆ ನೀತಿಗಳು ದಟ್ಟಗೊಳಿಸಿವೆ. ಜಿ.ಡಿ.ಪಿ. ಆಧಾರಿತ ವಿಶ್ವ ಸೂಚ್ಯಂಕದಲ್ಲಿ ಭಾರತದ ಸ್ಥಾನ ಐದನೆಯದೇ ಇರಬಹುದು. ಆದರೆ ಈ ‘ಶ್ರೇಯಾಂಕ’ದ ಜೊತೆಜೊತೆಗೆ ಅಸಮಾನತೆಯೂ ಬಹುವಾಗಿ ಹೆಚ್ಚಿದೆ. ಏಷ್ಯಾ-ಪೆಸಿಫಿಕ್ ಯು.ಎನ್.ಡಿ.ಪಿ.ಯ ಇತ್ತೀಚಿನ ವರದಿಯ ಪ್ರಕಾರ ಭಾರತ 102 ರಿಂದ 143 ಕ್ಕೆ ಏರಿದೆ. ಆದರೆ 4.60 ಕೋಟಿ ಜನ ಹೊಸದಾಗಿ ಬಡತನದ ರೇಖೆಯ ಕೆಳಕ್ಕೆ ಕುಸಿದಿರುವ ಬೆಳವಣಿಗೆಯೂ ನಡೆದಿದೆ.

ಕಳೆದ 20 ವರ್ಷಗಳಲ್ಲಿ ಭಾರತದ ತಲಾದಾಯ 442 ಡಾಲರುಗಳಿಂದ 2,389 ಡಾಲರುಗಳಿಗೆ ಹೆಚ್ಚಿದೆ ಎನ್ನಲಾಗುತ್ತಿದೆ. ಆದರೆ ಆದಾಯ ಮತ್ತು ಸಂಪತ್ತಿನ ಈ ಹೆಚ್ಚಳವು ಭಾರತದ ಅತಿ ಮೇಲ್ಮಟ್ಟದ 10 ಶೇಕಡಾ ಜನರ ಪೈಕಿ ಅತಿ ಮೇಲ್ಮಟ್ಟದ ಒಂದು ಶೇಕಡಾ ಜನರಿಗೆ ಸಂದಿದೆ. ಅರ್ಥಾತ್ ಬಡವರು ಇನ್ನಷ್ಟು ಬಡತನಕ್ಕೆ ಬಿದ್ದಿದ್ದಾರೆ. ಸಿರಿವಂತರು ಮತ್ತಷ್ಟು ಸಿರಿವಂತರಾಗಿದ್ದಾರೆ. ದೇಶದ ಶೇ.57ರಷ್ಟು ಆದಾಯವು ತುತ್ತತುದಿಯ ಶೇ.10ರಷ್ಟು ಜನಸಂಖ್ಯೆಯ ಪಾಲಾಗುತ್ತಿದೆ. ಇನ್ನೂ ಶೇ.22ರಷ್ಟು ಆದಾಯವು ತುತ್ತತುದಿಯ ಶೇ.1 ರಷ್ಟು ಜನ ಬಾಚಿಕೊಳ್ಳುತ್ತಿದ್ದಾರೆ, ದೇಶದ ಶೇ.65ರಷ್ಟು ಸಿರಿ ಸಂಪತ್ತು ಶೇ.10ರಷ್ಟು ಧನಿಕರ ಸಂದೂಕಗಳಿಗೆ ಸೇರಿ ಹೋಗಿದೆ. ಬಡತನ ನಿರುದ್ಯೋಗ ಬೃಹತ್ತಾಗಿ ಬೆಳೆಯುತ್ತಿದೆ. ಜಗತ್ತಿನ ಅರ್ಧದಷ್ಟು ಬಡವರು ಭಾರತದಲ್ಲಿದ್ದಾರೆ. ವಿಶ್ವದ ಮೂರನೆಯ ಅತಿ ಹೆಚ್ಚು ಶತಕೋಟ್ಯಾಧೀಶರು (ಬಿಲಿಯನೇರ್ಸ್) ಕೂಡ ಭಾರತದಲ್ಲಿಯೇ ಇದ್ದಾರೆ.

ದೇಶವನ್ನು ಕಾಡಿದ ನೋಟು ರದ್ದು, ಕೋವಿಡ್ ಮಹಾ ಸಾಂಕ್ರಾಮಿಕ, ನಿರುದ್ಯೋಗ, ಬಡತನ, ಹಸಿವಿನ ಸಂಕಟಗಳು ಈ ವರ್ಗದ ಸಂಪತ್ತನ್ನು ಇನ್ನಷ್ಟು ಹೆಚ್ಚಿಸಿವೆ. ಭಾರತದ ಕೇವಲ ಹತ್ತು ಮಂದಿ ಅಪಾರ ಧನಿಕರ ಬಳಿ ಇರುವ ಸಂಪತ್ತಿನಿಂದ ದೇಶದ ಎಲ್ಲ ಮಕ್ಕಳ ಶಾಲಾ ಮತ್ತು ಪ್ರೌಢ ಶಿಕ್ಷಣವನ್ನು 25 ವರ್ಷಗಳ ಕಾಲ ನಡೆಸಬಹುದಂತೆ. ದಶಕಗಳಿಂದ ಮಾಡಿಟ್ಟಿದ್ದ ರೇಲ್ವೆ, ಬಂದರು, ವಿಮಾನಯಾನ ಸೇರಿದಂತೆ ಸಾರ್ವಜನಿಕ ವಲಯದ ಆಸ್ತಿಪಾಸ್ತಿಗಳನ್ನು ಅಗ್ಗದ
ಬೆಲೆಗೆ ಕಾರ್ಪೊರೇಟುಗಳಿಗೆ ಮಾರಾಟ ಮಾಡಲಾಗುತ್ತಿದೆ.

ಉದಾರ ಆರ್ಥಿಕ ನೀತಿಯ ಜಾರಿಗೆ ಮುನ್ನ ದೇಶದ ಕೈಗಾರಿಕೆಗಳ ನಿವ್ವಳ (Net Value) ನಲ್ಲಿ ದುಡಿಯುವ ಕನರ ಕೂಲಿ-ವೇತನದ ಪಾಲು ಶೇ.30ಕ್ಕಿಂತ ಮೇಲಿತ್ತು. ಉದಾರೀಕರಣದ ನಂತರ ಈ ಪ್ರಮಾಣ ಸತತವಾಗಿ ಕುಸಿದು 2019-20 ರ ಹೊತ್ತಿಗೆ ಶೇ 18.9 ರಷ್ಟಾಯಿತು. ಜೊತೆಗೆ ಉದ್ಯಮಿಗಳು ಮತ್ತು ಷೇರುದಾರರ ಲಾಭದ ಪ್ರಮಾಣ ಶೇ.38.6ಕ್ಕೆ ಜಿಗಿಯಿತು. ಜನಸಾಮಾನ್ಯರು ಮತ್ತು ಬಡವರ ಮೇಲಿನ ಪರೋಕ್ಷ ತೆರಿಗೆ (ಜಿ.ಎಸ್.ಟಿ.) ಭಾರ ಹೆಚ್ಚಿದೆ. ಉದ್ಯಮಿಗಳು ಮತ್ತು ಮತ್ತಿತರರಿಗೆ ಆದಾಯತೆರಿಗೆಯ ಭಾರ ತಗ್ಗಿದೆ. 2019-20ನೆಯ ಹಣಕಾಸು ವರ್ಷದಿಂದ ಜಾರಿಗೆ ಬರುವಂತೆ ಕಾರ್ಪೊರೇಟ್‌ ತೆರಿಗೆಯನ್ನು ಶೇ 25 ರಿಂದ 22ಕ್ಕೆ ಮತ್ತು ಶೇ 22ರಿಂದ ಶೇ 15ಕ್ಕೆ ಇಳಿಸಲಾಗಿದೆ. 2019-20 ಮತ್ತು 2020-21ರ ಎರಡೇ ವರ್ಷಗಳಲ್ಲಿ ಈ ಕಡಿತದಿಂದ ಭಾರತದ ಬೊಕ್ಕಸಕ್ಕೆ ಆಗಿರುವ ನಷ್ಟ 2.28 ಲಕ್ಷ ಕೋಟಿ ರೂಪಾಯಿಗಳು. ಆನಂತರದ ಮೂರು ವರ್ಷಗಳಲ್ಲಿ ಆಗಿರುವ ನಷ್ಟ ಎಷ್ಟೆಂದು ಇನ್ನೂ ಅಂದಾಜು ಮಾಡಿಲ್ಲವೆಂದು ಕೇಂದ್ರ ಸರ್ಕಾರ ರಾಜ್ಯ ಸಭೆಯಲ್ಲಿ ಲಿಖಿತ ದಾಖಲೆ ಒದಗಿಸಿದೆ. ಈ ತೆರಿಗೆ ತಗ್ಗಿಸಿದರಿಂದ ಬಂಡವಾಳ ಹೂಡಿಕೆ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಆಗಿಲ್ಲವೆಂದು ಅಂಕಿ ಅಂಶಗಳು ಹೇಳಿವೆ.

ಉಣ್ಣುವುದಕ್ಕೆ, ಉಡುವುದಕ್ಕೆ, ಜಡ್ಡು ಜಾಪತ್ತಾದರೆ ಮದ್ದು ಖರೀದಿಗೆ, ಮಕ್ಕಳ ಶಿಕ್ಷಣಕ್ಕೆ ಇತರೆ ಇತ್ಯಾದಿಗಳಿಗೆ ಹಳ್ಳಿಗಳಲ್ಲಿ ನಿತ್ಯ 26 ರೂಪಾಯಿ, ಪಟ್ಟಣ ಪ್ರದೇಶಗಳಲ್ಲಿ 32 ರೂಪಾಯಿಯೇ ಸಾಕು. ಇಷ್ಟು ಸಂಪಾದಿಸಿದವನು ಬಡವ ಅಲ್ಲ. ಬಡತನದ ರೇಖೆಯ ಕೆಳಗೆ ಜೀವಿಸುವ ಜನರಿಗಾಗಿ ಸರ್ಕಾರ ಜಾರಿ ಮಾಡುವ ಯಾವುದೇ ಕಲ್ಯಾಣ ಕಾರ್ಯಕ್ರಮಗಳ ಫಲವನ್ನು ಅನುಭವಿಸಲು ಅರ್ಹನಲ್ಲ ಎಂಬವರದಿಯನ್ನು 2011ರಲ್ಲಿ ಯುಪಿಎ ಸರ್ಕಾರ) ಯೋಜನಾ ಆಯೋಗ ಸರ್ವೋಚ್ಚ ನ್ಯಾಯಾಲಯಕ್ಕೆ ನೀಡಿದ್ದುಂಟು.

ಉರಿವ ಗಾಯಕ್ಕೆ ಉಪ್ಪೆರಚುವ ಕೃತ್ಯಗಳನ್ನು ಸರ್ಕಾರಗಳು ಮತ್ತು ಅವುಗಳಡಿ ಕೆಲಸ ಮಾಡುವ ಯೋಜನಾ ಆಯೋಗ ಅಥವಾ ನೀತಿ ಆಯೋಗ ಆಗಾಗ ಮಾಡುತ್ತಲೇ ಬಂದಿವೆ. ಆಯೋಗದ ಕಾರ್ಯವೈಖರಿಯಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ.

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ ಮತ್ತಷ್ಟು ಕೆಳಕ್ಕೆ ಕುಸಿದಿದೆ. ಮಹಾರಾಷ್ಟ್ರಕ್ಕೆ ಸೀಮಿತಗೊಳಿಸಿದ ಸಮೀಕ್ಷೆಯೊಂದರ ಪ್ರಕಾರ ಮುಂಬ ಯಿಯ ಸಸ್ಯಾಹಾರಿ ಊಟದ ಥಾಲಿಯ ವೆಚ್ಚ ಕಳೆದ ಐದು ವರ್ಷಗಳಲ್ಲಿ ಶೇ.65ರಷ್ಟು ಹೆಚ್ಚಿದೆ. ಇದೇ ರಾಜ್ಯದ ನಗರಪ್ರದೇಶದ ದಿನಗೂಲಿಗಳ ಸರಾಸರಿ ಕೂಲಿಯ ದರ ಶೇ.37ರಷ್ಟು ಮತ್ತು ವೇತನಗಳ ಹೆಚ್ಚಳ ಶೇ.28 ಮಾತ್ರ.

ಭಾರತದಲ್ಲಿ ಇದೀಗ ಬಡವರ ಶ್ರಮವೇ ಅತಿ ಅಗ್ಗದ ಏಕೈಕ ಸರಕು. ಈ ಸರಕಿನ ಮೇರೆ ಮೀರಿದ ಶೋಷಣೆಯು ಶತಕೋಟ್ಯಾಧಿಪತಿಗಳನ್ನೂ ಅಪಾರ ಸಂಪತ್ತಿನ ನಡುಗಡ್ಡೆಗಳನ್ನೂ ಹುಟ್ಟಿ ಹಾಕುತ್ತಿದೆ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago