ತಮಿಳುನಾಡಿನ ವಿಲ್ಲುಪುರಂನ ತೊಲ್ಕಾಪ್ಪಿಯನ್ ಶಿವರಾಜ್‌ಗೆ ಬಾಲ್ಯದಿಂದಲೂ ಪೊಲೀಸ್ ಯೂನಿಫರ್ಮ್ ಅಂದರೆ ಎಲ್ಲಿಲ್ಲದ ಆಕರ್ಷಣೆ. ಆ ಆಕರ್ಷಣೆಯಿಂದಾಗಿಯೇ ಅವರು ಮುಂದೆ ರಾಮಕೃಷ್ಣ ಮಿಷನ್ ವಿವೇಕಾನಂದ ಕಾಲೇಜಿನಲ್ಲಿ ಮಾಸ್ಟರ‍್ಸ್ ಮಾಡಿದ ನಂತರ, ‘ತಮಿಳುನಾಡು ಪಬ್ಲಿಕ್ ಸರ್ವಿಸ್ ಕಮಿಷನ್’ ಪರೀಕ್ಷೆ ಕಟ್ಟಿದರು. ಆದರೆ, ಆಗ ಕೋಚಿಂಗ್ ಕ್ಲಾಸಿಗೆ ಸೇರಲು ಅವರಿಗೆ ಆರ್ಥಿಕ ಅನುಕೂಲತೆಯಿಲ್ಲದ ಕಾರಣ ತಾನೇ ಸ್ವತಃ ಓದಿಕೊಳ್ಳಬೇಕಾಯಿತು. ಹಾಗಿದ್ದೂ ಅವರು ಮೊದಲ ಪ್ರಯತ್ನದಲ್ಲೇ ಪೊಲೀಸ್ ಪರೀಕ್ಷೆ ಪಾಸು ಮಾಡಿದರು. ನಂತರ, ಪುದುಕೊಟ್ಟೆ ನಲ್ಲಿ ಪೊಲೀಸ್ ತರಬೇತಿ ಮುಗಿಸಿ, ೨೦೧೦ರಲ್ಲಿ ಮೆಲ್ಮರುವತೂರ್‌ನ ಕಪ್ಪೂರಿನಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ನೇಮಕಗೊಂಡರು.
ಆದರೆ, ಶಿವರಾಜ್ ಪೊಲೀಸ್ ಯೂನಿಫಾರ್ಮ್ ಧರಿಸುವ ತಮ್ಮ ಆಸೆಯನ್ನು ಪೂರೈಸಿಕೊಂಡ ನಂತರವೂ ಅದರೊಂದಿಗಿನ ಅವರ ನಂಟು ಕೊನೆಯಾಗಲಿಲ್ಲ. ತನ್ನ ಸುತ್ತಮುತ್ತ ತನ್ನಂತೆಯೇ ಪೊಲೀಸ್ ಆಗುವ ಕನಸು ಕಾಣುವ, ಆದರೆ ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಅನುಕೂಲತೆಗಳಿಲ್ಲದ ಯುವಕ ಯುವತಿಯರು ನೂರಾರು ಸಂಖ್ಯೆಯಲ್ಲಿದ್ದಾರೆ ಎಂಬುದು ಅವರಿಗೆ ತಿಳಿದಿತ್ತು. ಅಂತಹ ಬಡ ಯುವಕರಿಗೆ ಸಹಾಯ ಮಾಡುವ ಸಲುವಾಗಿ ಶಿವರಾಜ್ ಪೊಲೀಸ್ ನೌಕರಿ ಮಾಡುತ್ತಲೇ ವೈಯಕ್ತಿಕವಾಗಿ ೩೩ ವಿದ್ಯಾರ್ಥಿಗಳಿಗೆ ಉಚಿತವಾಗಿ ಪೊಲೀಸ್ ತರಬೇತಿ ನೀಡಲು ಪ್ರಾರಂಭಿಸಿದರು. ಸ್ವತಃ ಅವರಿಗೂ ಆಶ್ಚರ್ಯವಾಗುವಂತೆ, ಆ ೩೩ ವಿದ್ಯಾರ್ಥಿಗಳೂ ‘ತಮಿಳುನಾಡು ಪಬ್ಲಿಕ್ ಸರ್ವಿಸ್ ಕಮಿಷನ್’ ಪರೀಕ್ಷೆಯಲ್ಲಿ ಪಾಸಾಗಿ ಪೊಲೀಸ್ ಉದ್ಯೋಗ ಪಡೆದರು.
ಹಾಗೆ, ತಾನು ತರಬೇತಿ ನೀಡಿದ ಎಲ್ಲ ವಿದ್ಯಾರ್ಥಿಗಳೂ ಪೊಲೀಸ್ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾದುದನ್ನು ನೋಡಿ ಸ್ಛೂರ್ತಿ ಪಡೆದ ಶಿವರಾಜ್, ತಾನು ಉಳಿತಾಯ ಮಾಡಿದ ಹತ್ತು ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ, ಕಾಂಚಿಪುರಂನ ಅರಸೂರು ಎಂಬಲ್ಲಿ ಚಿಕ್ಕದೊಂದು ತರಬೇತಿ ಕೇಂದ್ರವನ್ನು ತೆರೆದರು. ಆ ಕೇಂದ್ರದಲ್ಲಿ ಅವರು ತರಬೇತಿ ನೀಡಿದ ಎಲ್ಲಾ ಯುವಕ ಯುವತಿಯರೂ ಪೊಲೀಸ್ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾದರು. ಅದರಿಂದ ಇನ್ನಷ್ಟು ಸ್ಛೂರ್ತಿಗೊಂಡ ಶಿವರಾಜ್, ೨೦೧೫ರಲ್ಲಿ ತನ್ನ ಹುಟ್ಟೂರು ವಿಲ್ಲುಪುರಂನಲ್ಲಿ ಎರಡೂವರೆ ಎಕರೆ ವಿಸ್ತೀರ್ಣದ ಜಾಗದಲ್ಲಿ ‘ಪುದಿಯ ಸಿರಗುಗಳ್ (ಹೊಸ ರೆಕ್ಕೆಗಳು)’ ಎಂಬ ಹೆಸರಿನ, ಆಧುನಿಕ ಸವಲತ್ತುಗಳುಳ್ಳ, ದೊಡ್ಡ ಮಟ್ಟದಲ್ಲಿ ತರಬೇತಿ ನೀಡುವ ಒಂದು ತರಬೇತಿ ಕೇಂದ್ರವನ್ನು ಸ್ಥಾಪಿಸಿದರು.
ಶಿವರಾಜ್ ತಮ್ಮ ಪುದಿಯ ಸಿರಗುಗಳ್ ತರಬೇತಿ ಕೇಂದ್ರ ಕಟ್ಟಿದ ಆ ಎರಡೂವರೆ ಎಕರೆ ಜಾಗ ಅವರ ತಂದೆಯ ಒಂದು ಗದ್ದೆಯಾಗಿತ್ತು. ಅವರ ತಂದೆ ಅದರಲ್ಲಿ ಕೃಷಿ ಮಾಡುತ್ತಿದ್ದರು. ಅವರು ಮಗ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಘನ ಉದ್ದೇಶವನ್ನು ಹೊಂದಿರುವುದನ್ನು ನೋಡಿ ಮೆಚ್ಚಿಕೊಂಡು ಆ ಗದ್ದೆಯನ್ನು ಅವರಿಗೆ ಬಿಟ್ಟು ಕೊಟ್ಟರು. ಶಿವರಾಜ್ ತರಬೇತಿ ನೀಡುವ ಹೆಚ್ಚಿನ ಮಕ್ಕಳು ಬಡ ದಿನಗೂಲಿ ಕಾರ್ಮಿಕರ ಮಕ್ಕಳು. ಐಎಎಸ್ ಅಥವಾ ಐಪಿಎಸ್ ಪರೀಕ್ಷೆಗಳು ಬಹಳ ಕಷ್ಟಕರವಾದವುಗಳು. ಅವುಗಳನ್ನು ಪಾಸು ಮಾಡಲು ದುಬಾರಿ ಖರ್ಚಿನ ಕಠಿಣ ತರಬೇತಿ, ಕೋಚಿಂಗ್ ತರಗತಿಗಳಿಗೆ ಒಳಗಾಗಬೇಕಾಗುತ್ತದೆ. ಪುತಿಯಾ ಸಿರಾಕುಕಳ್‌ಗೆ ಬರುವ ಮಕ್ಕಳು ಹಣ ಕೊಟ್ಟು ಕೋಚಿಂಗ್ ಪಡೆಯುವ ಆರ್ಥಿಕ ಅನುಕೂಲವಾಗಲೀ, ತಮ್ಮ ಮುಂದಿನ ಬದುಕಿಗೆ ಮಾರ್ಗದರ್ಶನ ಮಾಡುವವರಾಗಲೀ ಇಲ್ಲದ ಬಡ ಕುಟುಂಬಗಳಿಗೆ ಸೇರಿದವರು. ಹಾಗಾಗಿ, ಅವರೆಲ್ಲ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು, ತಿಂಗಳಿಗೆ ಆರೇಳು ಸಾವಿರ ರೂಪಾಯಿ ಸಂಪಾದನೆ ಮಾಡಿಕೊಂಡು ಜೀವನ ಸಾಗಿಸುವುದರಲ್ಲೇ ತೃಪ್ತಿಪಡಬೇಕಿತ್ತು.
ಶಿವರಾಜ್ ಅಂತಹ ಯುವಕರಿಗೆ ಉಚಿತ ಪೊಲೀಸ್ ತರಬೇತಿ ಕೊಟ್ಟು, ಅವರೆಲ್ಲ ಸರ್ಕಾರಿ ಉದ್ಯೋಗ ಪಡೆದು ತಿಂಗಳಿಗೆ ೨೫-೩೦ ಸಾವಿರ ರೂಪಾಯಿಗಳ ಸಾಧಾರಣವಾಗಿಯಾದರೂ ಗೌರವಯುತ ಜೀವನ ಸಾಗಿಸಲು ಅನುಕೂಲವಾಗುವಂತಹ ಉದ್ಯೋಗವಾದರೂ ಪಡೆಯುವಂತಾಗಲಿ ಎಂದು ಶ್ರಮ ಪಡುತ್ತಿದ್ದಾರೆ. ಹೀಗೆ ಶಿವರಾಜ್ ಕಳೆದ ಹನ್ನೆರಡು ವರ್ಷಗಳಲ್ಲಿ ಕನಿಷ್ಠ ೪೦೦ ಯುವಕ ಯುವತಿಯರು ಪೊಲೀಸ್ ಇಲಾಖೆಯಲ್ಲಿ ಮಾತ್ರವಲ್ಲದೆ, ರೆವಿನ್ಯೂ, ಲೇಬರ್, ಎಡ್ಮಿನಿಸ್ಟ್ರೇಟಿವ್ ಹಾಗೂ ಇತರ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಪಡೆಯುವಲ್ಲಿ ನೆರವಾಗಿದ್ದಾರೆ. ಶಿವರಾಜ್‌ರ ತಂದೆ ಪುದಿಯ ಸಿರಗುಗಳ್‌ಗೆ ತಮ್ಮ ಕೃಷಿ ಗದ್ದೆಯನ್ನು ಬಿಟ್ಟುಕೊಟ್ಟಿರುವುದಲ್ಲದೆ ಶಿವರಾಜ್‌ರ ಇಡೀ ಕುಟುಂಬ ಪುದಿಯ ಸಿರಗುಗಳ್ ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಅವರ ತಮ್ಮ ಸತ್ಯರಾಜ್ ವಿದ್ಯಾರ್ಥಿಗಳಿಗೆ ಸಬ್ಜೆಕ್ಟ್‌ಗಳನ್ನು ಕಲಿಸಲು ಮತ್ತು ದೈಹಿಕ ವ್ಯಾಯಾಮ ಮಾಡಿಸಲು ಅಣ್ಣನಿಗೆ ನೆರವಾದರೆ, ತಂಗಿ ಜೀವಿತಾ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಗೆ ತಮಿಳು ಮತ್ತು ಇಂಗ್ಲಿಷ್ ಟೈಪಿಂಗ್ ಮತ್ತು ಕಂಪ್ಯೂಟರ್ ಪ್ರೋಗ್ರಾಮ್‌ಗಳನ್ನು ಕಲಿಸುತ್ತಾರೆ. ವಾರಾಂತ್ಯಗಳಲ್ಲಿ ಹೊರಗಡೆಯಿಂದ ತಜ್ಞರನ್ನು ಆಹ್ವಾನಿಸಿ ವಿವಿಧ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ತಿಳಿವಳಿಕೆಯನ್ನು ಕೊಡಿಸುತ್ತಾರೆ.
ಪುದಿಯ ಸಿರಗುಗಳ್‌ನಲ್ಲಿ ವ್ಯಾಯಾಮ ಮಾಡಲು ವಿಶಾಲವಾದ ಅಂಗಣವಿದೆ. ಒಂದು ಗ್ರಂಥಾಲಯ, ತರಗತಿ ಕೋಣೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಡಾರ್ಮಿಟರಿ ಸವಲತ್ತುಗಳಿವೆ. ಊಟ, ವಸತಿ ಎಲ್ಲವೂ ಉಚಿತ. ಮಧುರೈ, ತಿರುವಾವೂರ್, ಕರೂರ್, ಕಾಂಚಿಪುರಂ, ಚೆಂಗಲ್‌ಪಟ್ಟು, ಚೆನ್ನೈ, ಸೇಲಂ, ತಿರುವಣ್ಣಾಮಲೈ, ಕಡಲೂರ್ ಮತ್ತು ಪುದುಚೇರಿ ಮೊದಲಾದೆಡೆಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ.
ಆರ್ಥಿಕ ಬಡತನ ಮತ್ತು ಸಾಮಾಜಿಕ ಅಸಮತೋಲನವನ್ನು ನಿವಾರಿಸಲು ಗುಣಮಟ್ಟದ ಶಿಕ್ಷಣವೊಂದೇ ಅತ್ಯಂತ ಶಕ್ತಿಶಾಲಿಯಾದ ಅಸ್ತ್ರ ಎಂದು ನಂಬಿರುವ ಶಿವರಾಜ್, ತಮ್ಮ ವಿದ್ಯಾರ್ಥಿಗಳು ಪುದಿಯ ಸಿರಗುಗಳ್‌ನ ಗ್ರಂಥಾಲಯದಲ್ಲಿ ವಿವಿಧ ವಿಷಯಗಳನ್ನು ಓದುವುದನ್ನು ಕಡ್ಡಾಯವಾಗಿಸಿದ್ದಾರೆ. ವಿದ್ಯಾರ್ಥಿಗಳು ಹಣದ ಬಗ್ಗೆ ಜವಾಬ್ದಾರಿಯುತ ಧೋರಣೆ ಬೆಳೆಸಿಕೊಳ್ಳಲು ಪುದಿಯ ಸಿರಗುಗಳ್‌ನಲ್ಲಿ ‘ಫೈನಾಸ್ಸಿಯಲ್ ಮ್ಯಾನೇಜ್ಮೆಂಟ್’ ವಿಷಯವನ್ನೂ ಕಲಿಸಲಾಗುತ್ತದೆ. ತನ್ನಿಂದ ತರಬೇತಿ ಪಡೆದು ಪೊಲೀಸ್ ಅಧಿಕಾರಿಗಳಾಗುವ ಈ ಯುವಕ ಯುವತಿಯರು ಮುಂದೆ ಕೇವಲ ತಮ್ಮ ಬದುಕನ್ನು ಮಾತ್ರವೇ ಉತ್ತಮಗೊಳಿಸಿಕೊಳ್ಳದೆ, ಇಡೀ ಸಮಾಜದ ಬಗ್ಗೆ ಕಾಳಜಿಯುಳ್ಳವರಾಗಿ ರೂಪಿತಗೊಳ್ಳುವ ಸಲುವಾಗಿ ಶಿವರಾಜ್ ಇಷ್ಟೆಲ್ಲವನ್ನು ಮಾಡುತ್ತಿದ್ದಾರೆ.
ಎಸ್.ಮಣಿಕಂಠನ್ ಎಂಬ ಯುವಕನಿಗೆ ಮೆಕಾನಿಕಲ್ ಇಂಜಿನಿಯರಿಂಗ್ ಮುಗಿಸಿದ ನಂತರ ಮುಂದೇನು ಮಾಡಬೇಕೆಂದು ಮಾರ್ಗದರ್ಶನ ಮಾಡುವವರಿಲ್ಲದೆ, ೨೦೧೯ರಲ್ಲಿ ಅವನು ಶಿವರಾಜ್‌ರನ್ನು ಸಂಪರ್ಕಿಸಿ, ಪುದಿಯ ಸಿರಗುಗಳ್ ಸೇರಿದನು. ಪುದಿಯ ಸಿರಗುಗಳ್‌ನಲ್ಲಿ ಬೆಳಗ್ಗಿನ ಎಂಟು ಗಂಟೆಗೆ ವ್ಯಾಯಾಮ ತರಗತಿ ಶುರುವಾಗಿ ಹತ್ತು ಗಂಟೆಯವರೆಗೆ ನಡೆಯುತ್ತದೆ. ನಂತರ, ದಿನವಿಡೀ ವಿವಿಧ ವಿಷಯಗಳ ಕುರಿತ ಪಾಠಗಳು ನಡೆಯುತ್ತವೆ. ಪ್ರತಿ ದಿನ ವಿವಿಧ ವಿಷಯಗಳ ಮೇಲೆ ಪರೀಕ್ಷೆಗಳು ನಡೆಯುತ್ತವೆ. ಸಂಜೆ ಹೊತ್ತಿಗೆ ಉತ್ತರ ಪತ್ರಿಕೆಗಳನ್ನು ಒಪ್ಪಿಸಬೇಕು. ರಾತ್ರಿ ಹೊತ್ತು ಆ ವಿಷಯಗಳ ಮೇಲೆ ಚರ್ಚೆ, ಸಮಾಲೋಚನೆ ನಡೆಯುತ್ತದೆ. ಆರು ತಿಂಗಳ ಕಾಲ ಪುದಿಯ ಸಿರಗುಗಳ್‌ನಲ್ಲಿ ಉಳಿದುಕೊಂಡು, ಶಿವರಾಜ್ ಮತ್ತು ಸತ್ಯರಾಜ್‌ರಿಂದ ತರಬೇತಿ ಪಡೆದ ಮಣಿಕಂಠನ್ ಮುಂದೆ ಒಂದು ಸರ್ಕಾರಿ ಉದ್ಯೋಗ ಪಡೆದನು. ಆ ಮೂಲಕ ಅವನ ಕುಟುಂಬದಲ್ಲಿ ಮೊತ್ತ ಮೊದಲ ಬಾರಿಗೆ ಸರ್ಕಾರಿ ಉದ್ಯೋಗ ಪಡೆದೆನೆಂಬ ಹೆಮ್ಮೆ ಅವನಿಗೆ. ಈಗ ಅವನು ತಾನೇ ಸ್ವತಃ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು, ಹಲವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುತ್ತಿದ್ದಾನೆ.
” ತಾನು ತರಬೇತಿ ನೀಡಿದ ಎಲ್ಲ ವಿದ್ಯಾರ್ಥಿಗಳೂ ಪೊಲೀಸ್ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾದುದನ್ನು ನೋಡಿ ಸ್ಛೂರ್ತಿ ಪಡೆದ ಶಿವರಾಜ್, ತಾನು ಉಳಿತಾಯ ಮಾಡಿದ ಹತ್ತು ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ, ಕಾಂಚಿಪುರಂನ ಅರಸೂರು ಎಂಬಲ್ಲಿ ಚಿಕ್ಕದೊಂದು ತರಬೇತಿ ಕೇಂದ್ರವನ್ನು ತೆರೆದರು. ಆ ಕೇಂದ್ರದಲ್ಲಿ ಅವರು ತರಬೇತಿ ನೀಡಿದ ಎಲ್ಲ ಯುವಕ ಯುವತಿಯರೂ ಪೊಲೀಸ್ ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾದರು. ಅದರಿಂದ ಇನ್ನಷ್ಟು ಸ್ಛೂರ್ತಿಗೊಂಡ ಶಿವರಾಜ್, ೨೦೧೫ರಲ್ಲಿ ತನ್ನ ಹುಟ್ಟೂರು ವಿಲ್ಲುಪುರಂನಲ್ಲಿ ಎರಡೂವರೆ ಎಕರೆ ವಿಸ್ತೀರ್ಣದ ಜಾಗದಲ್ಲಿ ‘ಪುದಿಯ ಸಿರಗುಗಳ್ (ಹೊಸ ರೆಕ್ಕೆಗಳು)’ ಎಂಬ ಹೆಸರಿನ, ಆಧುನಿಕ ಸವಲತ್ತುಗಳುಳ್ಳ, ದೊಡ್ಡ ಮಟ್ಟದಲ್ಲಿ ತರಬೇತಿ ನೀಡುವ ಒಂದು ತರಬೇತಿ ಕೇಂದ್ರವನ್ನು ಸ್ಥಾಪಿಸಿದರು”
ಹನೂರು : ಜಮೀನಿನಲ್ಲಿ ಬೆಳೆದಿದ್ದ ಬೆಳೆಗೆ ನೀರು ಹಾಯಿಸುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ರೈತನೋರ್ವ ಗಂಭೀರವಾಗಿ ಕೈಗೊಂಡಿರುವ…
ಹನೂರು : ನೆಮ್ಮದಿಯಾಗಿ ವಾಸಿಸಲು ಸ್ವಂತ ಸೂರಿಲ್ಲ, ಜೀವನೋಪಯಕ್ಕಾಗಿ ವೃದ್ಯಾಪ್ಯ ವೇತನವಿಲ್ಲ. ವಿಳಾಸಕ್ಕಾಗಿ ಆಧಾರ್ ಕಾರ್ಡ್ ಇಲ್ಲ. ತುತ್ತು ಅನ್ನಕ್ಕಾಗಿ…
ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ 1, 3 ಹಾಗೂ 5 ದಿನಗಳ ಅನ್‌ಲಿಮಿಟೆಡ್ ಕ್ಯೂಆರ್ ಕೋಡ್ ಪಾಸ್ ಸೇವೆ…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರ್ಚಿಗೆ ಸಂಚಕಾರ ತಂದೊಡ್ಡಿದ್ದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಆಕ್ರಮ ನಿವೇಶನ ಹಂಚಿಕೆ…
ಮಂಡ್ಯ: ಜಲಜೀವನ್ ಮಿಷನ್ ಯೋಜನೆಯಡಿ ತೆಗೆದುಕೊಳ್ಳಲಾದ ಕಾಮಗಾರಿಗಳ ಗುಣಮಟ್ಟ ಮತ್ತು ಕಾಮಗಾರಿಗಳ ಪ್ರಸ್ತುತ ಸ್ಥಿತಿ ಕುರಿತು ಪರಿಶೀಲನೆ ನಡೆಸಿದ ಜಿಲ್ಲಾ…
ಮೈಸೂರು: ಬಹುರೂಪಿ ಬಾಬಾಸಾಹೇಬ್ ರಾಷ್ಟ್ರೀಯ ನಾಟಕೋತ್ಸವ–2026ರ ಅಂಗವಾಗಿ ಮೈಸೂರಿನ ಕಲಾಮಂದಿರದಲ್ಲಿ ನಡೆಯುತ್ತಿರುವ ಮಕ್ಕಳ ನಾಟಕ ಪ್ರದರ್ಶನದಲ್ಲಿ ಇಂದು ಪ್ರದರ್ಶಿತವಾದ “ಸೂರ್ಯ–ಚಂದ್ರ”…