ಅಂಕಣಗಳು

ನವೆಂಬರ್ ಕ್ರಾಂತಿಗೆ ಸಜ್ಜಾಗಿದೆ ವೇದಿಕೆ

ಸಿದ್ದರಾಮಯ್ಯರಿಂದ ಉರುಳಲಿದೆ ಪರ್ಯಾಯ ನಾಯಕತ್ವದ ದಾಳ 

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಆಪ್ತ ಸಚಿವರು ಉರುಳಿಸುತ್ತಿರುವ ದಾಳಗಳನ್ನು ನೋಡಿದರೆ ನವೆಂಬರ್ ಕ್ರಾಂತಿ ನಡೆಯುವುದು ನಿಶ್ಚಿತವಾದಂತಿದೆ. ಗಮನಿಸಬೇಕಾದ ಮತ್ತೊಂದು ಸಂಗತಿ ಎಂದರೆ, ಈ ಕ್ರಾಂತಿಗೆ ಸಿದ್ದರಾಮಯ್ಯ ಅವರೇ ಮುಂಚಿತವಾಗಿ ಸಿದ್ಧರಾಗಿರುವುದು.

ಅಂದ ಹಾಗೆ ನವೆಂಬರ್ ಕ್ರಾಂತಿಯ ಮಾತು ಈ ಹಿಂದೆ ಕೇಳಲು ಇದ್ದ ಕಾರಣವೆಂದರೆ ಅಧಿಕಾರ ಹಂಚಿಕೆಯ ಮಾತು.೨೦೨೩ ರ ಮೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುವಾಗ ಸಿಎಂ ಹುದ್ದೆಗಾಗಿ ಪೈಪೋಟಿ ನಡೆದಿತ್ತು.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವೆ ನಡೆದ ಪೈಪೋಟಿಯಲ್ಲಿ ಅಂತಿಮವಾಗಿ ಸಿದ್ದರಾಮಯ್ಯ ಅವರು ಗೆದ್ದರು.ಅವರ ಈ ಗೆಲುವನ್ನು ಹೈಕಮಾಂಡ್ ವರಿಷ್ಠರು ಏಕೆ ಒಪ್ಪಿಕೊಳ್ಳಬೇಕಾಯಿತು ಎಂದರೆ, ಶಾಸಕಾಂಗ ಸಭೆಯ ಬಹುತೇಕ ಶಾಸಕರು ಸಿದ್ದರಾಮಯ್ಯ ಅವರ ಪರವಾಗಿ ನಿಂತಿದ್ದು.ಮತ್ತು ಹಿರಿತನ, ವರ್ಚಸ್ಸಿನ ದೃಷ್ಟಿಯಿಂದ ಸಿದ್ದರಾಮಯ್ಯ ಅವರ ಶಕ್ತಿ ಹೆಚ್ಚಿದ್ದುದು.

ಪರಿಣಾಮ ಸಿದ್ದರಾಮಯ್ಯ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು ಮತ್ತು ಇದಾದ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ಒಂದು ಸುದ್ದಿ ಸುನಾಮಿಯಂತೆ ಹರಡತೊಡಗಿತು. ಅದೆಂದರೆ, ಮುಖ್ಯಮಂತ್ರಿ ಹುದ್ದೆಯನ್ನು ಕಾಂಗ್ರೆಸ್ ಹೈಕಮಾಂಡ್ ವರಿಷ್ಠರು ಎರಡು ಅವಧಿಗೆ ಹಂಚಿದ್ದಾರೆ. ಮೊದಲನೆಯ ಎರಡೂವರೆ ವರ್ಷಗಳ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರೆ, ತದನಂತರದ ಎರಡೂವರೆ ವರ್ಷಗಳ ಅವಧಿಗೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿರಲಿದ್ದಾರೆ ಎಂಬುದು.

ಕುತೂಹಲದ ಸಂಗತಿ ಎಂದರೆ ಈ ಸುದ್ದಿಯನ್ನು ಯಾರೂ ಪುರಸ್ಕರಿಸಲಿಲ್ಲ. ಅಥವಾ ಯಾರೂ ನಿರಾಕರಿಸಲಿಲ್ಲ. ಎರಡು ವರ್ಷಗಳ ನಂತರ ಈ ಮಾತು ತಾರಕಕ್ಕೆ ಹೋದಾಗ ಸಿದ್ದರಾಮಯ್ಯ ಅವರು ದಿಲ್ಲಿಗೇ ನುಗ್ಗಿ ಅಧಿಕಾರ ಹಂಚಿಕೆ ಒಪ್ಪಂದ ಅಂತೇನೂ ಆಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕರ ಬಲವಿಲ್ಲ. ಅದೇ ರೀತಿ ಶಾಸಕಾಂಗ ನಾಯಕನ ಆಯ್ಕೆಗಾಗಿ ನಡೆದ ಚುನಾವಣೆಯ ಸಂದರ್ಭದಲ್ಲಿ ನಾನು ಡಿ.ಕೆ.ಶಿವಕುಮಾರ್ ಅವರನ್ನು ಸೋಲಿಸಿದ್ದೇನೆ ಎಂದು ಗಟ್ಟಿಯಾಗಿ ಹೇಳಿದರು.

ಇದನ್ನು ಓದಿ : ‘ನಾಡಿನ ಪರಂಪರೆಯ ಕಲಾ ಪ್ರಕಾರಗಳ ಉತ್ತೇಜನಕ್ಕೆ ಬದ್ಧ’

ಯಾವಾಗ ಅವರು ಈ ಮಾತು ಹೇಳಿದರೋ ಇದಾದ ನಂತರ ದಿಲ್ಲಿಯ ಕಾಂಗ್ರೆಸ್ ವರಿಷ್ಠರೇ ಆಗಲೀ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಆಗಲಿ, ಚಕಾರವೆತ್ತಲಿಲ್ಲ. ಒಂದು ವೇಳೆ ಅಧಿಕಾರ ಹಂಚಿಕೆ ಒಪ್ಪಂದ ಅಂತ ಆಗಿದ್ದರೆ ವರಿಷ್ಠರು ಅದನ್ನು ಪುಷ್ಟೀಕರಿಸಬಹುದಿತ್ತು. ಆದರೆ ಅವರೇ ಸ್ಪಷ್ಟೀಕರಣ ಕೊಡಲು ಮುಂದಾಗದೆ ಹೋದಾಗ ಸಿದ್ದರಾಮಯ್ಯ ಅವರ ಮಾತಿಗೆ ಇನ್ನಷ್ಟು ಶಕ್ತಿ ಬಂತು. ಆದರೆ ಇದಾದ ನಂತರ ತಣ್ಣಗಾಗಿದ್ದ ಅಧಿಕಾರ ಹಂಚಿಕೆಯ ಮಾತಿಗೆ ಡಿ.ಕೆ.ಶಿವಕುಮಾರ್ ಆಪ್ತರು ಪುನಃ ಚಾಲನೆ ನೀಡಿದ್ದಾರೆ. ಬಿಹಾರ ವಿಧಾನಸಭೆ ಚುನಾವಣೆಯ ನಂತರ ಆಟ ಶುರುವಾಗಲಿದೆ ಎಂಬ ಸಂಕೇತಗಳನ್ನು ರವಾನಿಸಿದ್ದಾರೆ.

ಯಾವಾಗ ಅವರು ಈ ರೀತಿ ಸಂಕೇತಗಳನ್ನು ರವಾನಿಸಿದರೋ ಇದಾದ ನಂತರ ಸಿದ್ಧರಾಮಯ್ಯ ಬ್ರಿಗೇಡ್ ನ ಪವರ್ ಫುಲ್ ಸಚಿವರಾದ ಡಾ. ಎಚ್.ಸಿ.ಮಹದೇವಪ್ಪ, ಡಾ.ಜಿ.ಪರಮೇಶ್ವರ್ ಅವರಿಂದ ಹಿಡಿದು ಜಮೀರ್ ಅಹ್ಮದ್ ಅವರವರೆಗೆ ಹಲವರು ಸಿದ್ದರಾಮಯ್ಯ ಅವರ ನಾಯಕತ್ವ ಮುಂದುವರಿಯಲಿದೆ ಎಂದು ಘೋಷಿಸಿ ಆಟಕ್ಕೆ ಕಳೆ ತುಂಬಿದರು. ಮೂಲಗಳ ಪ್ರಕಾರ,ಈ ಬೆಳವಣಿಗೆಯ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದಿಲ್ಲಿ ವರಿಷ್ಠರ ಜತೆ ಸತತ ಸಂಪರ್ಕದಲ್ಲಿದ್ದು, ತಮ್ಮನ್ನು ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಿಸಬೇಕು ಎಂಬ ಒತ್ತಡ ಹೇರುತ್ತಿದ್ದಾರೆ.

ಆದರೆ ಒಂದು ಕಡೆ ಅವರು ಇಂತಹ ಆಟ ಶುರುವಿಟ್ಟುಕೊಂಡರೆ ಮತ್ತೊಂದು ಕಡೆಯಿಂದ ಸಿದ್ದರಾಮಯ್ಯ ಮತ್ತವರ ಆಪ್ತರು ಮತ್ತೊಂದು ಆಟ ಶುರು ಮಾಡಿಕೊಂಡಿದ್ದಾರೆ. ಈ ಪೈಕಿ ಸಿದ್ದರಾಮಯ್ಯ ಅವರು ತಮ್ಮ ಸಚಿವ ಸಂಪುಟವನ್ನು ಪುನಾರಚಿಸುವ ಇಂಗಿತ ವ್ಯಕ್ತಪಡಿಸಿದ್ದರೆ, ಡಾ.ಎಚ್.ಸಿ. ಮಹದೇವಪ್ಪ, ಡಾ.ಜಿ.ಪರಮೇಶ್ವರ್ ಮತ್ತು ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷ ಪಟ್ಟದಿಂದ ಡಿಕೆಶಿ ಕೆಳಗಿಳಿಯಬೇಕು ಮತ್ತು ಮುಖ್ಯಮಂತ್ರಿ ಹುದ್ದೆಯಲ್ಲಿ ಸಿದ್ದರಾಮಯ್ಯ ಅವರೇ ಮುಂದುವರಿಯಬೇಕು ಎಂದು ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ದಾರೆ.

ಯಾವ ದೃಷ್ಟಿಯಿಂದ ನೋಡಿದರೂ ಇದು ಡಿ.ಕೆ.ಶಿವಕುಮಾರ್ ಅವರಿಗೆ ಇಕ್ಕಳ ಹಾಕುವ ಯತ್ನ. ಏಕೆಂದರೆ, ಸಂಪುಟ ಪುನಾರಚನೆ ಮಾಡಲು ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ವರಿಷ್ಠರು ಅನುಮತಿ ನೀಡಿದರೆ ಒಂದು ವಿಷಯ ಸ್ಪಷ್ಟವಾಗುತ್ತದೆ. ಅದೆಂದರೆ, ಯಾವ ಕಾರಣಕ್ಕೂ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂಬುದು. ಇದೇ ರೀತಿ ಡಾ.ಎಚ್.ಸಿ.ಮಹದೇವಪ್ಪ, ಡಾ.ಜಿ.ಪರಮೇಶ್ವರ್ ಮತ್ತು ಸತೀಶ್ ಜಾರಕಿಹೊಳಿ ಅವರ ಆಗ್ರಹದ ಅನುಸಾರ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿ.ಕೆ.ಶಿವಕುಮಾರ್ ಅವರನ್ನು ಕೆಳಗಿಳಿಸಲು ಹೈಕಮಾಂಡ್ ವರಿಷ್ಠರು ಒಪ್ಪಿದರೆ ಅದು ಕೂಡ ಡಿಕೆಶಿ ಶಕ್ತಿ ಕುಸಿಯುವ ಹಾಗೆ ಮಾಡಲಿದೆ.

ಇದನ್ನು ಓದಿ : ದುಷ್ಟರ ನಿಯಂತ್ರಣಕ್ಕೆ ಮತ್ತೆ ರೌಡಿ ಪ್ರತಿಬಂಧಕ ದಳ

ಅರ್ಥಾತ್, ಸಿದ್ದರಾಮಯ್ಯ ಮತ್ತವರ ಆಪ್ತ ಸಚಿವರ ಪಡೆ ಎರಡು ಕೋನಗಳಿಂದ ಡಿಕೆಶಿ ಅವರನ್ನು ಕಟ್ಟಿ ಹಾಕಲು ಹೊರಟಿದೆ. ಹೀಗೆ ಸಿದ್ದರಾಮಯ್ಯ ಮತ್ತು ಅವರ ಆಪ್ತರು ಉರುಳಿಸಿರುವ ದಾಳಗಳೇ ಈಗ ರಾಜಕೀಯ ವಲಯಗಳ ಕುತೂಹಲಕ್ಕೆ ಕಾರಣವಾಗಿರುವುದು. ಮೂಲಗಳ ಪ್ರಕಾರ,ಅಧಿಕಾರ ಹಸ್ತಾಂತರದ ಮಾತಿಗೆ ತಿರುಗೇಟು ನೀಡಲು ಜಾರಿಯಾಗಿರುವ ಇಂತಹ ತಂತ್ರಗಳು ಫಲಿಸದಿದ್ದರೆ ಸಿದ್ದರಾಮಯ್ಯ ಮತ್ತೊಂದು ಡೆಡ್ಲಿ ದಾಳವನ್ನು ಉರುಳಿಸಲಿದ್ದಾರೆ. ಅದೆಂದರೆ, ಪರ್ಯಾಯ ನಾಯಕನ ಆಯ್ಕೆ ಅನಿವಾರ್ಯ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ವರಿಷ್ಠರು ಬಂದರೆ, ಶಾಸಕಾಂಗ ಸಭೆಯಲ್ಲಿ ನನ್ನ ಬಲವನ್ನು ಸಾಬೀತುಪಡಿಸುತ್ತೇನೆ ಎಂದು ವರಿಷ್ಠರಿಗೆ ಸಡ್ಡು ಹೊಡೆಯುವುದು. ಒಂದು ವೇಳೆ ಅವರು ಈ ದಾಳ ಉರುಳಿಸಿದರೆ ಕಾಂಗ್ರೆಸ್ ವರಿಷ್ಠರು ತಬ್ಬಿಬ್ಬಾಗುವುದು ನಿಜ. ಏಕೆಂದರೆ ಪರ್ಯಾಯ ನಾಯಕನ ಆಯ್ಕೆಗೆ ಶಾಸಕಾಂಗ ಸಭೆಯಲ್ಲಿ ಮತದಾನ ನಡೆದರೆ ಯಥಾಪ್ರಕಾರ ಸಿದ್ದರಾಮಯ್ಯ ಗೆಲುವು ಸಾಧಿಸುತ್ತಾರೆ.

ಹೀಗೆ ಸಿದ್ದರಾಮಯ್ಯ ಅವರು ದಾಳ ಉರುಳಿಸಿದರೆ ಅದನ್ನು ಬೇಡ ಎಂದು ಹೇಳುವ ಸ್ಥಿತಿಯಲ್ಲೂ ವರಿಷ್ಠರು ಇರುವುದಿಲ್ಲ. ಏಕೆಂದರೆ, ಇವತ್ತು ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರಮೋದಿ ಸರ್ಕಾರದ ವಿರುದ್ಧ ತಿರುಗಿ ಬೀಳುವ ರಾಹುಲ್ ಗಾಂಧಿ ಅವರು ಮಾತೆತ್ತಿದರೆ ಸಂವಿಧಾನವನ್ನು ಎತ್ತಿ ಹಿಡಿಯುತ್ತಾರೆ. ಮೋದಿಯವರ ಸರ್ಕಾರದ ಈ ನಡೆ ಸಂವಿಧಾನ ವಿರೋಧಿ ಅಂತ ರಾಹುಲ್ ಗಾಂಧಿ ಪದೇ ಪದೇ ಎತ್ತಿ ತೋರಿಸುತ್ತಲೇ ಇರುತ್ತಾರೆ. ಅರ್ಥಾತ್, ಸಂವಿಧಾನದ ಬಗ್ಗೆ ಇಂತಹ ಗೌರವವಿರುವವರು ಪಕ್ಷದ ನಾಯಕನ ಆಯ್ಕೆ ಶಾಸಕಾಂಗ ಸಭೆಯಲ್ಲಿ ಆಗಬೇಕು ಎಂಬ ವಿಷಯ ಬಂದಾಗ ಸಂವಿಧಾನಬದ್ಧವಾಗಿಯೇ ನಡೆದುಕೊಳ್ಳಬೇಕು. ಏಕೆಂದರೆ ಒಂದು ಪಕ್ಷದ ನಾಯಕನ ಆಯ್ಕೆ ಶಾಸಕಾಂಗ ಸಭೆಯಲ್ಲೇ ಆಗಬೇಕು ಎಂಬುದು ಸಂವಿಧಾನ ಬದ್ಧ. ಹೀಗಾಗಿ ತಾವು ಶಾಸಕಾಂಗ ಸಭೆಯಲ್ಲಿ ತಮ್ಮ ಬಲ ಸಾಬೀತು ಮಾಡುವುದಾಗಿ ಸಿದ್ದರಾಮಯ್ಯ ಹೇಳಿದರೆ ಅದನ್ನು ತಿರಸ್ಕರಿಸುವ ಸ್ಥಿತಿಯಲ್ಲಿ ರಾಹುಲ್ ಗಾಂಧಿ ಕೂಡ ಇರುವುದಿಲ್ಲ. ಪರಿಣಾಮ ನವೆಂಬರ್ ಕ್ರಾಂತಿಯ ಮುನ್ನಾ ದಿನಗಳು ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಾಗುವಂತೆ ಮಾಡುತ್ತಿವೆ. ಕೊನೆಯ ಮಾತು

ಅಂದ ಹಾಗೆ ನವೆಂಬರ್ ಕ್ರಾಂತಿಯ ಮಾತು ದಟ್ಟವಾಗುತ್ತಿದ್ದಂತೆಯೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ಹಂಚಿಕೆಯೂ ಇಲ್ಲ, ಸಂಪುಟ ಪುನಾರಚನೆಯೂ ಇಲ್ಲ ಅಂತ ಹೇಳುವ ಮೂಲಕ ಬ್ರೇಕ್ ಹಾಕುವ ಯತ್ನ ಮಾಡಿದ್ದಾರೆ. ಆದರೆ ಅದನ್ನು ನಂಬುವವರ ಸಂಖ್ಯೆ ಕಡಿಮೆ.

” ಡಾ.ಎಚ್.ಸಿ.ಮಹದೇವಪ್ಪ, ಡಾ.ಜಿ. ಪರಮೇಶ್ವರ್ ಮತ್ತು ಸತೀಶ್ ಜಾರಕಿಹೊಳಿ ಅವರ ಆಗ್ರಹದ ಅನುಸಾರ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿ.ಕೆ.ಶಿವಕುಮಾರ್ ಅವರನ್ನು ಕೆಳಗಿಳಿಸಲು ಹೈಕಮಾಂಡ್ ವರಿಷ್ಠರು ಒಪ್ಪಿದರೆ ಅದು ಕೂಡ ಡಿಕೆಶಿ ಶಕ್ತಿ ಕುಸಿಯುವ ಹಾಗೆ ಮಾಡಲಿದೆ.”

-ಬೆಂಗಳೂರು ಡೈರಿ 
ಆರ್.ಟಿ.ವಿಠ್ಠಲಮೂರ್ತಿ 

ಆಂದೋಲನ ಡೆಸ್ಕ್

Recent Posts

ಹನೂರು| ಕಾಡಾನೆ ದಾಳಿಗೆ ಬೆಳೆ ನಾಶ: ಆತ್ಮಹತ್ಯೆ ಎಚ್ಚರಿಕೆ ನೀಡಿದ ಅನ್ನದಾತ

ಹನೂರು: ಜಮೀನಿನಲ್ಲಿ ಬೆಳೆದಿರುವ ತರಕಾರಿ ಬೆಳೆಗಳನ್ನು ಕಾಡಾನೆಗಳ ಹಿಂಡು ಕಳೆದ ಮೂರು ದಿನಗಳಿಂದ ರಾತ್ರಿ ವೇಳೆ ದಾಳಿ ನಡೆಸಿ ಬೆಳೆ…

24 mins ago

ಬ್ಯಾಡ್ಮಿಂಟನ್‌ ಅಂಗಳಕ್ಕೆ ಸೈನಾ ನೆಹ್ವಾಲ್‌ ವಿದಾಯ

ಹೈದರಾಬಾದ್: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಅಂತರರಾಷ್ಟೀಯ ಪಂದ್ಯಾವಳಿಗೆ ನಿವೃತ್ತಿ ಘೋಷಿಸಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ…

37 mins ago

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್‌ ನಬಿನ್‌ ಅಧಿಕಾರ ಸ್ವೀಕಾರ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ನಿತಿನ್ ನಬಿನ್ ಅವರು ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರ ಹರ್ಷೋದ್ಘಾರದ ನಡುವೆ…

54 mins ago

ಮೈಸೂರಿನಲ್ಲಿ ಯುವಕನ ಬರ್ಬರ ಹತ್ಯೆ

ಮೈಸೂರು: ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನ ಉದಯಗಿರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಹಬಾಜ್‌ ಎಂಬಾತನೇ ಕೊಲೆಯಾದ ಯುವಕನಾಗಿದ್ದಾನೆ.…

1 hour ago

ಎಚ್.ಡಿ.ಕೋಟೆ: ಕಬಿನಿ ಉಳಿಸುವಂತೆ ಒತ್ತಾಯಿಸಿ ರೈತ ಸಂಘಟನೆ ಪ್ರತಿಭಟನೆ

ಎಚ್.ಡಿ.ಕೋಟೆ: ಕಬಿನಿ ಜಲಾಶಯವನ್ನು ಉಳಿಸುವಂತೆ ಒತ್ತಾಯಿಸಿ ರೈತ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು. ಎಚ್.ಡಿ.ಕೋಟೆ ತಾಲ್ಲೂಕು ಕಚೇರಿ ಮುಂದೆ ಜಮಾಯಿಸಿದ ರೈತ…

1 hour ago

ಈಗಿರುವ ಬಿಜೆಪಿ ನಾಯಕರಿಗೆ ಮೆಚ್ಯುರಿಟಿ ಇಲ್ಲ: ಸಚಿವ ಭೋಸರಾಜು ವ್ಯಂಗ್ಯ

ಮಡಿಕೇರಿ: ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಮೆಚ್ಯುರಿಟಿ ಇಲ್ಲ ಅಂತಾ ಬಿಜೆಪಿಯವರೇ ಹೇಳುತ್ತಾರೆ ಎಂದು ಸಚಿವ ಭೋಸರಾಜು ವ್ಯಂಗ್ಯವಾಡಿದ್ದಾರೆ. ಅಬಕಾರಿ…

2 hours ago