ಅಂಕಣಗಳು

ಕರ್ನಾಟಕ ರಾಜಕಾರಣ ಐತಿಹಾಸಿಕ ತಿರುವು ಪಡೆದ ಆ ಕ್ಷಣ

ಬೆಂಗಳೂರು ಡೈರಿ 

ಆರ್.ಟಿ.ವಿಠ್ಠಲಮೂರ್ತಿ 

ನಲವತ್ತೈದು ವರ್ಷಗಳ ಹಿಂದೆ ಆ ಬೆಳವಣಿಗೆ ಸಂಭವಿಸದೆ ಹೋಗಿದ್ದರೆ ಕರ್ನಾಟಕದ ರಾಜಕಾರಣ ಅಂತಹದೊಂದು ಐತಿಹಾಸಿಕ ತಿರುವು ಪಡೆಯುತ್ತಿತ್ತೇ? ಈ ಪ್ರಶ್ನೆ ರಾಜ್ಯ ರಾಜಕೀಯದ ಒಳವಲಯಗಳಲ್ಲಿ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಅಂದ ಹಾಗೆ ನಲವತ್ತೈದು ವರ್ಷಗಳ ಹಿಂದೆ ಆ ಬೆಳವಣಿಗೆ ನಡೆದ ಕೆಲವೇ ಕಾಲದಲ್ಲಿ, ಅಂದರೆ ೧೯೮೩ರಲ್ಲಿ ಕರ್ನಾಟಕ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರವನ್ನು ನೋಡಿತು.

ಒಂದು ವೇಳೆ ೧೯೮೦ರಲ್ಲಿ ಈ ನಿರ್ದಿಷ್ಟ ಬೆಳವಣಿಗೆ ನಡೆಯದೆ ಹೋಗಿದ್ದರೆ ೧೯೮೩ರಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬರಲು ಸಾಧ್ಯವಿರಲಿಲ್ಲ ಅಂತ ಈಗಲೂ ಬಹುತೇಕ ರಾಜಕೀಯ ತಜ್ಞರು ವಾದಿಸುತ್ತಾರೆ.

ಅಂದ ಹಾಗೆ ೧೯೮೦ರಲ್ಲಿ ನಡೆದ ಆ ಬೆಳವಣಿಗೆ ಎಂದರೆ ಮುಖ್ಯ ಮಂತ್ರಿ ದೇವರಾಜ ಅರಸರ ಪದಚ್ಯುತಿ. ೧೯೭೨ರಿಂದ ೧೯೮೦ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸರು ಇತಿಹಾಸದ ಚಕ್ರಕ್ಕೆ ವೇಗ ತಂದರು. ಶೋಷಿತ ವರ್ಗಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದರು. ಅವರು ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ಮಂತ್ರವನ್ನು ಜಪಿಸಿದ ಪರಿಣಾಮವಾಗಿ ನಾಡಿನ ಭೂ ಸಂಪತ್ತಿನ ಒಂದು ಭಾಗ ಶೋಷಿತ ವರ್ಗಗಳ ಕೈ ಸೇರಿತು.

ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಶೋಷಿತ ವರ್ಗಗಳು ಬಲಿಷ್ಠವಾಗದಿದ್ದರೆ ಅವು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ ಎಂಬ ಅರಿವಿನಿಂದ ಅವರು ಮಾಡಿದ ಕೆಲಸ ಸಹಜವಾಗಿಯೇ ಅವರನ್ನು ಸಾಮಾಜಿಕ ಕ್ರಾಂತಿಯ ಹರಿಕಾರ ಎಂದು ಗುರುತಿಸುವಂತೆ ಮಾಡಿತು. ಅರಸರ ಈ ಕೆಲಸದ ಫಲವನ್ನು ನೋಡಲು ಕಾಂಗ್ರೆಸ್ ಬಹುಕಾಲ ಕಾಯಬೇಕಾಗಲಿಲ್ಲ. ಅಂದರೆ ೧೯೭೨ರಿಂದ ೧೯೭೮ರವರೆಗಿನ ಅವಧಿಯಲ್ಲಿ ಅವರು ಜಾರಿಗೆ ತಂದ ಕಾರ್ಯಕ್ರಮಗಳು ೧೯೭೮ರಲ್ಲಿ ಕಾಂಗ್ರೆಸ್ ಪಕ್ಷವನ್ನು ಪುನಃ ಅಧಿಕಾರದ ಗದ್ದುಗೆಗೇರಿಸಿದವು.

ಹಾಗೆ ನೋಡಿದರೆ ೧೯೭೮ರ ಗೆಲುವು ಕೂಡಾ ಸಣ್ಣ ಸಾಧನೆಯಾಗಿರಲಿಲ್ಲ. ಏಕೆಂದರೆ ಆ ಹೊತ್ತಿಗಾಗಲೇ ದೇಶದಲ್ಲಿ ಇಂದಿರಾ ವಿರೋಧಿ ಅಲೆ ಸುನಾಮಿಯ ರೂಪ ಪಡೆದಿತ್ತು. ಅದರ ವೇಗಕ್ಕೆ ದೇಶದ ಬಹುತೇಕ ಕಡೆ ಕಾಂಗ್ರೆಸ್ ಸರ್ಕಾರಗಳು ಮಗುಚಿ ಬಿದ್ದಿದ್ದವು. ಆದರೆ ರಾಷ್ಟ್ರ ರಾಜಕಾರಣ ತಲುಪಿದ್ದ ಅಂತಹ ಸಂಕೀರ್ಣ ಕಾಲಘಟ್ಟದಲ್ಲೂ ಅರಸು ನೇತೃತ್ವದ ಕಾಂಗ್ರೆಸ್ ಕರ್ನಾಟಕದ ಅಧಿಕಾರ ಸೂತ್ರವನ್ನು ಮರುವಶ ಮಾಡಿಕೊಂಡಿತ್ತು.

ಇದಾದ ನಂತರ ಕರ್ನಾಟಕದ ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಸತತ ಎರಡು ಬಾರಿ ಗೆದ್ದ ಉದಾಹರಣೆಯೇ ಇಲ್ಲ. ಆದರೆ ಇಂತಹ ಸಾಧನೆ ಮಾಡಿದ ದೇವರಾಜ ಅರಸರ ಬಗ್ಗೆ ಕಾಂಗ್ರೆಸ್‌ನ ಸರ್ವೋಚ್ಚ ನಾಯಕಿ ಇಂದಿರಾ ಗಾಂಧಿ ಮನಸ್ಸಿನಲ್ಲಿ ಅಪನಂಬಿಕೆ ಶುರುವಾಯಿತು. ಅರಸರು ತನಗೆ ನಿಷ್ಠರಾಗಿ ಉಳಿದಿಲ್ಲ ಎಂಬ ಅವರ ಅಪನಂಬಿಕೆ ದಿನಕಳೆದಂತೆ ಜ್ವಾಲಾಮುಖಿಯಾಯಿತು. ಪರಿಣಾಮ ಅರಸರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಲು ನಿರ್ಧರಿಸಿದ ಇಂದಿರಾಗಾಂಧಿ ಪಟ್ಟು ಬಿಡದೆ ಆ ಕೆಲಸವನ್ನು ಮಾಡಿ ಮುಗಿಸಿದರು.

ಆದರೆ ತಮ್ಮ ಅಹಂಅನ್ನು ತೃಪ್ತಿಪಡಿಸಿಕೊಂಡ ಅವರಿಗೆ ಕರ್ನಾಟಕದ ಸಾಮಾಜಿಕ ಸಂರಚನೆ ಅರ್ಥವಾಗಲಿಲ್ಲ. ಸತತ ಎಂಟ್ಹತ್ತು ವರ್ಷಗಳ ಕಾಲ ದುಡಿದು ಅರಸರು ಕಟ್ಟಿದ ಬಲಾಢ್ಯ ಸೈನ್ಯದಲ್ಲಿ ಎಂತಹ ಬಿರುಕು ಮೂಡಬಹುದು ಎಂಬುದು ಅರ್ಥವಾಗಲಿಲ್ಲ. ಯಾಕೆಂದರೆ ರಾಜ್ಯವನ್ನು ಆಳುತ್ತಾ ಬಂದ ಬಲಿಷ್ಠವರ್ಗಗಳ ಸೈನ್ಯಕ್ಕೆ ಪ್ರತಿಯಾಗಿ ಅರಸರು ಶೋಷಿತ ವರ್ಗಗಳ ಸೈನ್ಯ ಕಟ್ಟಿದ್ದರು. ಆದರೆ ಯಾವಾಗ ಇಂದಿರಾ ಗಾಂಧೀ ಅವರು ಅರಸರನ್ನು ಪದಚ್ಯುತಗೊಳಿಸಿದರೋ ಇದಾದ ನಂತರ ಆ ಶೋಷಿತ ವರ್ಗಗಳ ಸೈನ್ಯದಲ್ಲಿ ಬಿರುಕು ಕಾಣಿಸಿಕೊಂಡಿತು. ಮತ್ತು ಅರಸರ ನಂತರ ಮುಖ್ಯಮಂತ್ರಿಯಾದ ಗುಂಡೂರಾಯರಿಗೆ ಈ ಬಿರುಕು ಸರಿಪಡಿಸುವ ಕೌಶಲವಾಗಲೀ,ಅದಕ್ಕೆ ಅಗತ್ಯವಾಗಿದ್ದ ಸೋಷಿಯಲ್ ಎಂಜಿನಿಯರಿಂಗ್ ಆಗಲೀ ಗೊತ್ತೇ ಇರಲಿಲ್ಲ.

ಪರಿಣಾಮ! ಅರಸರ ಪದಚ್ಯುತಿಯ ಸಂಪೂರ್ಣ ಲಾಭವನ್ನು ಪಡೆದ ಬಲಿಷ್ಠ ವರ್ಗಗಳು ಹೊಸ ಸೈನ್ಯವನ್ನು ಕಟ್ಟಿದವು.ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಆ ಸೈನ್ಯ ಅಖಂಡವಾಗಿ ನಿಲ್ಲದಿದ್ದರೂ ಪ್ರತ್ಯೇಕ ನೆಲೆಯಲ್ಲಿ ಅದಕ್ಕೆ ಬೇಕಾದ ಬ್ರಿಗೇಡ್‌ಗಳು ತಲೆ ಎತ್ತಿದವು. ಅಷ್ಟೊತ್ತಿಗಾಗಲೇ ಕಾಂಗ್ರೆಸ್‌ನಿಂದ ಹೊರಬಂದ ಹಿಂದುಳಿದ ವರ್ಗಗಳ ನಾಯಕ ಸಾರೆಕೊಪ್ಪ ಬಂಗಾರಪ್ಪ ಕೂಡ ಅಂತ ಬ್ರಿಗೇಡ್ ಒಂದರ ನೇತೃತ್ವ ವಹಿಸಿದ್ದರು.

ಅರ್ಥಾತ್, ಕಾಂಗ್ರೆಸ್‌ನಿಂದ ಹೊರಬಂದು ದೇವರಾಜ ಅರಸರು ಕಟ್ಟಿದ ಕ್ರಾಂತಿರಂಗವನ್ನು ಮುನ್ನಡೆಸುತ್ತಿದ್ದರು. ಇದೇ ಕಾಲಕ್ಕೆ ಅರಸರ ಭೂ ಸುಧಾರಣಾ ಕಾಯ್ದೆಯಿಂದ ಹೊಡೆತ ತಿಂದ ಶಕ್ತಿಗಳು ರಾಜ್ಯದ ಕೆಲ ಭಾಗಗಳಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಬಿಜೆಪಿ ಜತೆ ನಿಂತಿದ್ದವು.

ಹೀಗಾಗಿ ಒಂದು ಕಡೆಯಿಂದ ಜನತಾ ಪಕ್ಷ, ಮತ್ತೊಂದು ಕಡೆಯಿಂದ ಬಿಜೆಪಿ, ಮಗದೊಂದು ಕಡೆಯಿಂದ ಕ್ರಾಂತಿರಂಗ ಎಂಬ ಶಕ್ತಿಗಳು ಸುತ್ತುವರಿದು ಕಾಂಗ್ರೆಸ್ ಸೈನ್ಯವನ್ನು ಪರಾಭವಗೊಳಿಸಿದವು. ಪರಸ್ಪರ ಕೈಗೂಡಿಸಿ ಸರ್ಕಾರ ರಚಿಸಿದವು. ಮುಂದೆ ಜನತಾಪಕ್ಷ, ಕ್ರಾಂತಿರಂಗ ಒಂದು ನೆಲೆಯಲ್ಲಿ ಬೆಸೆದು ಕೊಂಡುವಾದರೆ ಬಿಜೆಪಿ ಪ್ರತ್ಯೇಕ ಶಕ್ತಿಯಾಗಿ ಉಳಿಯಿತು. ಯಾವಾಗ ಈ ಬೆಳವಣಿಗೆ ನಡೆಯಿತೋ ಇದಾದ ನಂತರ ಕಾಂಗ್ರೆಸ್ ಯಾವತ್ತೂ ಸತತವಾಗಿ ಎರಡನೇ ಬಾರಿ ಅಽಕಾರ ಹಿಡಿಯಲಿಲ್ಲ. ಒಂದು ವೇಳೆ ಅರಸರನ್ನು ಕೆಳಗಿಳಿಸುವ ಕೆಲಸವಾಗದಿದ್ದಿದ್ದರೆ, ಮತ್ತು ಈ ಬೆಳವಣಿಗೆಯಿಂದ ಶೋಷಿತ ವರ್ಗಗಳ ಸೈನ್ಯ ದಿಕ್ಕೆಡದೆ ಹೋಗಿದ್ದರೆ ಜನತಾರಂಗ ಸರ್ಕಾರ ಮೇಲೆದ್ದು ನಿಲ್ಲುವುದು ಕಷ್ಟವಿತ್ತು.

ಅಂದ ಹಾಗೆ ಈ ಅಂಶವನ್ನೇಕೆ ಗಮನಿಸಬೇಕೆಂದರೆ ಇವತ್ತು ಕರ್ನಾಟಕದ ರಾಜಕಾರಣ ಪುನಃ ಇದೇ ಹಳಿಯ ಮೇಲೆ ಬಂದು ನಿಂತಿದೆ. ಅವತ್ತು ಅರಸರಂತೆ, ಇವತ್ತು ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಶೋಷಿತ ವರ್ಗಗಳ ಸೈನ್ಯ ಕಟ್ಟಿದ್ದಾರೆ. ಈ ಮಧ್ಯೆ ಇಂದಿರಾ-ಅರಸರ ಮಧ್ಯೆ ಸಂಬಂಧ ಹಳಸಿದಂತೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹೈಕಮಾಂಡ್ ಮಧ್ಯೆ ಸಂಬಂಧ ಹಳಸಿಲ್ಲ. ಅಷ್ಟಾದರೂ ಅಧಿಕಾರ ಹಂಚಿಕೆಯ ಮಾತು ಜೀವಂತ ವಾಗಿರುವುದರಿಂದ ಮುಂದೇನು? ಎಂಬ ವಿಷಯದಲ್ಲಿ ಅನುಮಾನ ಉಳಿದುಕೊಂಡೇ ಇದೆ.

ಆದರೆ ಸದ್ಯದ ಪರಿಸ್ಥಿತಿ ಹೇಗೆ ನಿರ್ಮಾಣವಾಗಿದೆ ಎಂದರೆ ಸಿದ್ದರಾಮಯ್ಯ ತಮ್ಮ ಕಾರ್ಯಕ್ರಮಗಳ ಮೂಲಕ, ಎಲ್ಲಕ್ಕಿಂತ ಮುಖ್ಯವಾಗಿ ಶೋಷಿತ ವರ್ಗಗಳಲ್ಲಿ ರಾಜಕೀಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಮೂಲಕ ಪ್ರಬಲ ಶಕ್ತಿಯಾಗಿ ನೆಲೆಯಾಗಿದ್ದಾರೆ. ಹೀಗಾಗಿ ಇವತ್ತಿನ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರನ್ನು ಯಾವುದೇ ಮಾರ್ಗದಿಂದಲೂ ಕೆಳಗಿಳಿಸುವುದು ಕಷ್ಟ. ಹಾಗೇನಾದರೂ ಮಾಡುವ ದುಸ್ಸಾಹಸ ನಡೆದರೆ ೨೦೨೮ರ ವಿಧಾನಸಭೆ ಚುನಾವಣೆ ೧೯೮೩ರ ವಿಧಾನಸಭಾ ಚುನಾವಣೆಯ ಪ್ರತಿರೂಪವಾಗುತ್ತದೆ.

ಅರ್ಥಾತ್, ಅವತ್ತು ಅರಸರಿಲ್ಲದ ಕಾಂಗ್ರೆಸ್ ಸೈನ್ಯಕ್ಕೆ ಯಾವ ನಿಶ್ಶಕ್ತಿ ಆವರಿಸಿತೋ ಅದೇ ಬಗೆಯ ನಿಶ್ಶಕ್ತಿ ೨೦೨೮ರ ವಿಧಾನಸಭಾ ಚುನಾವಣೆಯಲ್ಲೂ ಆವರಿಸುತ್ತದೆ. ಕೌತುಕದ ಸಂಗತಿ ಎಂದರೆ ಅವತ್ತು ಕಾಂಗ್ರೆಸ್ ಪಕ್ಷವನ್ನು ಎದುರಿಸಲು ಬಲಿಷ್ಠ ವರ್ಗಗಳ ಸೈನ್ಯ ಹೇಗೆ ಸಜ್ಜಾಗುತ್ತಿತ್ತೋ ಇವತ್ತೂ ಅದೇ ರೀತಿ ಅವು ಸಜ್ಜಾಗುತ್ತಿವೆ. ಇಂತಹ ದೈತ್ಯ ಶಕ್ತಿಯನ್ನು ಎದುರಿಸಲು ಕಾಂಗ್ರೆಸ್ ಪಕ್ಷಕ್ಕೆಸಿದ್ದರಾಮಯ್ಯ ಎಂಬ ದಂಡನಾಯಕ ಅನಿವಾರ್ಯ. ಒಂದು ವೇಳೆ ೨೦೨೮ರ ಮಹಾ ಸಂಗ್ರಾಮದಲ್ಲಿ ಕಾಂಗ್ರೆಸ್ ಸೈನ್ಯದ ಮುಂಚೂಣಿಯಲ್ಲಿ ಸಿದ್ಧರಾಮಯ್ಯ ಇಲ್ಲದಿದ್ದರೆ ನೋ ಡೌಟ್,ಕಾಂಗ್ರೆಸ್ ವಿರೋಧಿ ಸೈನ್ಯ ಕರ್ನಾಟಕವೆಂಬ ಕೋಟೆಯನ್ನು ನಿರಾಯಾಸವಾಗಿ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ.

” ಸದ್ಯದ ಪರಿಸ್ಥಿತಿ ಹೇಗೆ ನಿರ್ಮಾಣವಾಗಿದೆ ಎಂದರೆ ಸಿದ್ದರಾಮಯ್ಯ ತಮ್ಮ ಕಾರ್ಯಕ್ರಮಗಳ ಮೂಲಕ, ಎಲ್ಲಕ್ಕಿಂತ ಮುಖ್ಯವಾಗಿ ಶೋಷಿತ ವರ್ಗಗಳಲ್ಲಿ ರಾಜಕೀಯ ಪ್ರಜ್ಞೆಯನ್ನು ಜಾಗೃತಗೊಳಿಸುವ ಮೂಲಕ ಪ್ರಬಲ ಶಕ್ತಿಯಾಗಿ ನೆಲೆಯಾಗಿದ್ದಾರೆ. ಹೀಗಾಗಿ ಇವತ್ತಿನ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರನ್ನು ಯಾವುದೇ ಮಾರ್ಗದಿಂದ ಕೆಳಗಿಳಿಸುವುದು ಕಷ್ಟ. ಹಾಗೇನಾದರೂ ಮಾಡುವ ದುಸ್ಸಾಹಸ ನಡೆದರೆ ೨೦೨೮ರ ವಿಧಾನಸಭೆ ಚುನಾವಣೆ ೧೯೮೩ರ ವಿಧಾನಸಭಾ ಚುನಾವಣೆಯ ಪ್ರತಿರೂಪವಾಗುತ್ತದೆ.”

ಆಂದೋಲನ ಡೆಸ್ಕ್

Recent Posts

ಪಹಲ್ಗಾಮ್‌ ದಾಳಿಗೆ ಪ್ರತೀಕಾರ: ಪಾಕಿಸ್ತಾನಕ್ಕೆ ಮರ್ಮಾಘಾತ ಕೊಟ್ಟ ಭಾರತ ಸರ್ಕಾರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಭಾರತ ಸರ್ಕಾರ ಪ್ರತೀಕಾರ ತೀರಿಸಿಕೊಂಡಿದ್ದು, ನೆರೆಯ ದೇಶ ಪಾಕಿಸ್ತಾನಕ್ಕೆ…

2 hours ago

ನಾಳೆ ಅರ್ಧ ದಿನ ಶಿವಮೊಗ್ಗ ಬಂದ್

ಶಿವಮೊಗ್ಗ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿನ ದಾಳಿಗೆ ಬಲಿಯಾದ ಮಂಜುನಾಥ್‌ ಪಾರ್ಥಿವ ಶರೀರದ ಮೆರವಣಿಗೆ ಹಾಗೂ ಅಂತ್ಯಸಂಸ್ಕಾರ ನೆರವೇರಿಸುವ ಹಿನ್ನೆಲೆಯಲ್ಲಿ…

2 hours ago

ಹುಣಸೂರಿನ ಸರ್ವತೋಮುಖ ಅಭಿವೃದ್ಧಿಗೆ ಒತ್ತು: ಶಾಸಕ ಜಿ.ಡಿ.ಹರೀಶ್‌ ಗೌಡ

ಹುಣಸೂರು: ಹುಣಸೂರು ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಆದ್ಯತೆ ನೀಡಿದ್ದು, ಕಳೆದ ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದ್ದ…

2 hours ago

ಹನೂರು| ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಗೆ ಕ್ಷಣಗಣನೆ

ಹನೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಾಳೆ ಸಚಿವ ಸಂಪುಟ ಸಭೆ ನಡೆಯಲಿದ್ದು, ಇದಕ್ಕಾಗಿ ಬೆಟ್ಟದಲ್ಲಿ…

3 hours ago

ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಮೇಣದಬತ್ತಿ ಹಿಡಿದು ಶ್ರದ್ಧಾಂಜಲಿ

ಮೈಸೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದು, ಹಲವರು ಸಾವನ್ನಪ್ಪಿದ್ದಾರೆ. ಉಗ್ರರ ದಾಳಿಗೆ ಸಿಲುಕಿ ಸಾವನ್ನಪ್ಪಿರುವವರಿಗೆ…

3 hours ago

ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಮೇಣದಬತ್ತಿ ಹಿಡಿದು ಶ್ರದ್ಧಾಂಜಲಿ

ಮೈಸೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದು, ಹಲವರು ಸಾವನ್ನಪ್ಪಿದ್ದಾರೆ. ಉಗ್ರರ ದಾಳಿಗೆ ಸಿಲುಕಿ ಸಾವನ್ನಪ್ಪಿರುವವರಿಗೆ…

3 hours ago