ಅಸ್ಸಾಮಿನ ಚಹಾ ತೋಟಗಳ ಹಸಿವು- ಆಳುವವರ ಹೃದಯಹೀನತೆ; ದೆಹಲಿ ಧ್ಯಾನ

ಶತಕೋಟಿ ಡಾಲರುಗಳ ಲಾಭ ದೋಚುವ ಚಹಾ ಉದ್ಯಮ ಕಾರ್ಮಿಕರ ಬದುಕುಗಳನ್ನು ಕೊಲ್ಲತೊಡಗಿದೆ. ಈ ನವ ಗುಲಾಮಗಿರಿಗೆ ಸರ್ಕಾರಗಳು ಕುರುಡುಗಣ್ಣಾಗಿವೆ.

ನರೇಂದ್ರ ಮೋದಿಯವರು ತಮ್ಮನ್ನು ‘ಚಾಯ್ ವಾಲಾ’ ಎಂದು ಕರೆದುಕೊಂಡರು. ಚಹಾ ಮಾರಿದೆನೆಂದು ಹೇಳಿಕೊಂಡು ಅದನ್ನು ಚುನಾವಣೆಯಲ್ಲಿ ರಾಜಕೀಯ ಬಂಡವಾಳವನ್ನೂ ಮಾಡಿಕೊಂಡರು. ಆದರೆ ದೇಶದ ಚಹಾ ಮಾರುವವರ ಬದುಕುಗಳನ್ನು ಅರಳಿಸುವಂತಹದೇನನ್ನೂ ಅವರು ಮಾಡಲಿಲ್ಲ. ತಮ್ಮ ದಿನಗೂಲಿ ಹೆಚ್ಚಿಸುವಂತೆ ಚಹಾ ತೋಟದ ಕೂಲಿಯಾಳುಗಳುಗಳು ಪ್ರಧಾನಿಯ ಪ್ರಾರ್ಥಿಸಿ ನಾಲ್ಕು ವರ್ಷಗಳೇ ಉರುಳಿವೆ. 2014ರ ಲೋಕಸಭಾ ಚುನಾವಣೆಗಳ ಪ್ರಚಾರ ಭಾಷಣಗಳಲ್ಲಿ ದಿನಗೂಲಿಯನ್ನು 350 ರುಪಾಯಿಗೆ ಹೆಚ್ತಿಸುವ ಭರವಸೆ ನೀಡಿದ್ದುಂಟು.

ಇದೇ ಭರವಸೆಯನ್ನು ಬಿಜೆಪಿ 2016ರಲ್ಲಿ ಅಸ್ಸಾಮ್ ವಿಧಾನಸಭಾ ಚುನಾವಣೆಗಳು ಸಮೀಪಿಸಿದರೂ ಈ ಭರವಸೆ ಈಡೇರಲಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ಈ ಆಶ್ವಾಸನೆಯನ್ನು ಅಚ್ಚು ಮಾಡಲಾಯಿತು. ಅಲ್ಲಿಂದ ಇಲ್ಲಿಯ ತನಕ  ಐದು ವರ್ಷ ಉರುಳಿ ಮತ್ತೊಂದು ಚುನಾವಣೆ ಬಂದಿದೆ. ಆದರೆ ಆಶ್ವಾಸನೆ ಚುನಾವಣೆ ಪ್ರಣಾಳಿಕೆಯ ಪುಟಗಳಲ್ಲೇ ಹೂತು ಹೋಗಿದೆ. ಈ ನಡುವೆ ಏರಿಸಲಾದ ಕೂಲಿಯ ಮೊತ್ತ ಕೇವಲ 30 ರುಪಾಯಿ. ಇದೀಗ ಈ ಬಡಪಾಯಿಗಳ ಕೂಲಿ 167 ರುಪಾಯಿ. ಇನ್ನೂ 50 ರುಪಾಯಿ ಹಚ್ಚಿಸುವ ಆಶ್ವಾಸನೆಯನ್ನೂ ತೂಗು ಬಿಡಲಾಗಿದೆ. ಅದು ಈಡೇರುವುದು ಯಾವ ಕಾಲಕ್ಕೋ?

ದಮನಿತರು ಶೋಷಿತರು ಅವಮಾನಿತರ ನೋವುಗಳಿಗೆ ದನಿಯಾಗಿದ್ದ ಇಂಗ್ಲಿಷು ಕಾದಂಬರಿಕಾರ  ದಿವಂಗತ ಮುಲ್ಕರಾಜ್ ಆನಂದ್ ಅವರು ಚಹಾ ತೋಟಗಳಲ್ಲಿ ಕಾರ್ಮಿಕರು ಅನುಭವಿಸುವ ರೌರವ ನರಕವನ್ನು ಸೆರೆಹಿಡಿದು ಜಗತ್ತಿಗೆ ತೋರಿದ ಮೊದಲಿಗರು. ಈ ಕಾದಂಬರಿಯ ಹೆಸರು Two Leaves and a Bud (ಎರಡೆಲೆ ಮತ್ತು ಒಂದು ಮುಗುಳು). 1937ರಲ್ಲಿ ಬರೆದಿದ್ದ ಕೃತಿಯದು.

ಒಮ್ಮೆ ಹೊಕ್ಕರೆ ಮತ್ತೆಂದೂ ಹೊರಬೀಳದಂತೆ ಬಂಧಿಸಿ ಹಗಲಿರಳು ರಕ್ತ ಬೆವರು ಒಂದು ಮಾಡಿಸಿ ದುಡಿಸಿಕೊಳ್ಳುವ ಚಹಾ ತೋಟಗಳ ನರಕದಿಂದ ಮುಕ್ತಿ ನೀಡುವ ಶಕ್ತಿಯಿರುವುದು ಸಾವಿಗೆ ಮಾತ್ರವೇ ಎಂಬ ಕ್ರೂರ ಸತ್ಯ ಈ ಕಾದಂಬರಿಯಲ್ಲಿ ಅನಾವರಣ ಆಗುತ್ತ ಹೋಗುತ್ತದೆ. ಅಮಾಯಕರ ಶ್ರಮವನ್ನು ದರೋಡೆ ಮಾಡುವ ಒಡೆಯರ ಪಾಲಿಗೆ ಕೂಲಿಗಳು ದುಡಿವ ಯಂತ್ರಗಳೇ ವಿನಾ ಮನುಷ್ಯರಲ್ಲ. ದಿನಕ್ಕೆ ಬೆಳಗಿನಂತ ರಾತ್ರಿಯ ತನಕ ಬಿಡುವಿಲ್ಲದೆ ದುಡಿದರೆ ಕೈಗೆ ಬೀಳುವ ಕೂಲಿ ಮೂರು ಆಣೆಗಳು. ದಿನಸಿ ತರಲು ಸಂತೆಗೆ ಹೋದರೆ ಯಾತಕ್ಕೂ ಸಾಲದು. ಮೈಮುರಿಯವಂತೆ ಹೊಡೆತಗಳನ್ನು ತಿನ್ನಬೇಕಲ್ಲದೆ ಪತ್ನಿ ಪುತ್ರಿಯರನ್ನು ಒಡೆಯರ ಲೈಂಗಿಕ ವಾಂಛೆಗೆ ಒಪ್ಪಿಸಲೇಬೇಕು. ಕೂಲಿಗಳ ಮುರುಕು ವಸತಿಗಳು ಕೊಳಕಿನ ಕೂಪಗಳು. ಕೊಕ್ಕೆಹುಳುಗಳ ಆಗರ. ಹೊಂಚು ಹಾಕುವ ಕಾಲರಾ. ಬಂಡವಾಳ ಹಾಕಿದ ಒಡೆಯರ ಪಾಲಿಗೆ ಕೂಲಿಗಳು ಸುಳ್ಳರು, ಕಳ್ಳರು ಹಾಗೂ ಸೋಮಾರಿಗಳು. ನೈರ್ಮಲ್ಯವೇ ಇಲ್ಲದ ಕೂಪದಲ್ಲಿ ಕೂಲಿ ಗಂಗುವಿನ ಪತ್ನಿ ಸಜನಿ ಕಾಲರಾಕ್ಕೆ ತುತ್ತಾಗಿ ಸಾಯುತ್ತಾಳೆ. ಅಂತ್ಯಕ್ರಿಯೆಗೆ ಗಂಗುವಿನ ಬಳಿ ಹಣವಿಲ್ಲ. ಕೇಳಲು ಹೋದರೆ ಗದರಿ ಅಟ್ಟುತ್ತಾನೆ ಒಡೆಯ. ತೋಟದ ಮ್ಯಾನೇಜರ್ ಕಣ್ಣು ಗಂಗುವಿನ ಮಗಳ ಮೇಲೆ ಬೀಳುತ್ತದೆ. ತಡೆಯಲು ಅಡ್ಡ ಬಂದ ಗಂಗು ಗುಂಡೇಟಿಗೆ ಹೆಣವಾಗಿ ಉರುಳುತ್ತಾನೆ.

ಚೀನಾದಿಂದ ಚಹಾ ಸಸ್ಯಗಳನ್ನು ಕದಿಯುವ ಈಸ್ಟ್ ಇಂಡಿಯಾ ಕಂಪನಿ ಭಾರತದಲ್ಲಿ ದಟ್ಟ ಕಾಡುಗಳನ್ನು ಬೋಳಿಸಿ ಬೆಳೆಸುತ್ತದೆ. ಬ್ರಿಟಿಷ್ ಪ್ಲಾಂಟರುಗಳು  150 ವರ್ಷಗಳ ಹಿಂದೆ ಕಾಡು ಕಡಿದು ಚಹಾ ತೋಟಗಳನ್ನು ಎಬ್ಬಿಸಲು ಮಧ್ಯಭಾರತದ ಆದಿವಾಸಿಗಳನ್ನು ಬಲವಂತದಿಂದ ಒಕ್ಕಲೆಬ್ಬಿಸಿ ಅಸ್ಸಾಮ್ ಮತ್ತು ಬಂಗಾಳಕ್ಕೆ ಪಶುಗಳಂತೆ ಸಾಗಿಸುತ್ತಾರೆ. ಮುಂಡಾ, ಸಂತಾಲ್, ಓರಾನ್, ಗೊಂಡರು, ಖಾರಿಯಾ ಹಾಗೂ ಸಾವೊರಾ ಪಂಗಡಗಳ ಈ ಆದಿವಾಸಿ ಕಾರ್ಮಿಕರನ್ನು ಈಗಲೂ Tea Tribes ಎಂದೇ ಕರೆಯಲಾಗುತ್ತದೆ. ಅಸ್ಸಾಮೊಂದರಲ್ಲೇ ಈ ಆದಿವಾಸಿ ಕಾರ್ಮಿಕರ ಸಂಖ್ಯೆ ಹತ್ತು ಲಕ್ಷಕ್ಕೂ ಹೆಚ್ಚು.
ಅಸ್ಸಾಮಿನ ಜನಸಂಖ್ಯೆಯಲ್ಲಿ ಇವರ ಪ್ರಮಾಣ ಶೇ.18ರಷ್ಟು ಎನ್ನಲಾಗಿದೆ.

ಅಂದಿನ ಬ್ರಿಟಿಷ್ ಭಾರತದಲ್ಲಿ ಬ್ರಿಟಿಷ್ ಪ್ಲಾಂಟರುಗಳಿಗೆ ಸಂಪನ್ಮೂಲಗಳು ಮತ್ತು ಕೂಲಿ ಕಾರ್ಮಿಕರ ಮೇಲೆ ಎಣೆಯಿಲ್ಲದ ಪ್ರಶ್ನಾತೀತ ಅಧಿಕಾರವನ್ನ ಅಧಿಪತ್ಯ ನೀಡಿತ್ತು.  ಬಲವಂತದ ನೇಮಕ, ಅತಿ ಕಡಿಮೆ ಕೂಲಿ, ಅಮಾನವೀಯ ವಸತಿ ಮತ್ತು ಕೆಲಸದ ಪರಿಸ್ಥಿತಿಗಳು ಅಂದಿನ ಬ್ರಿಟಿಷ್ ಮಾಲೀಕರ ಲಾಭವನ್ನು ನೂರ್ಮಡಿಗೊಳಿಸುತ್ತಿದ್ದವು. ಸ್ವತಂತ್ರ ಭಾರತದ ಚಹಾ ತೋಟಗಳ ಕಾರ್ಮಿಕರ ಪರಿಸ್ಥಿತಿ ಹೆಚ್ಚೇನೂ ಬದಲಾಗಿಲ್ಲ.

ಸಿನೆಮಾಗಳಲ್ಲಿ ಕಾಣುವ ಬೆಟ್ಟಗುಡ್ಡ, ಝರಿ ತೊರೆ, ಕಲಕಲ ನದಿಯ ಸೀಮೆಯ ನಡುವೆ ನಳನಳಿಸುವ ಮನಮೋಹಕ ಹಸಿರು ಚಹಾ ತೋಟಗಳ ಹಿತ್ತಿಲುಗಳಲ್ಲಿ ಅಸಹನೀಯ ಮೌನ, ಹಸಿವಿನ ಯಾತನೆ, ನಿಟ್ಟುಸಿರು, ರಕ್ತಹೀನತೆ, ರೋಗುರುಜಿನಗಳು, ಅಮಾನವೀಯ ಶೋಷಣೆ, ಸಾವಿನ ನೆರಳು ಮೈಚಾಚಿ ಮಲಗಿದೆ. ಬದುಕಿನ ಸಂಗೀತ ಮರೆಯಾಗಿದೆ.
ಕಂಗೆಟ್ಟಿರುವ ಲಕ್ಷ ಲಕ್ಷ ಕಾರ್ಮಿಕರನ್ನು ಮೈದಡವಿ ಮಾತಾಡಿಸುವ ಸರ್ಕಾರಗಳಿಲ್ಲ. ತಮ್ಮ ನೆಲದಲ್ಲೇ ಅನಾಥರಾಗಿರುವ ಅಸಂಖ್ಯಾತರ ಸಾಲಿಗೆ ಸೇರಿ ಹೋಗಿದ್ದಾರೆ ಈ ಶ್ರಮಜೀವಿಗಳು.

ತಮ್ಮ ರಾಜ್ಯಗಳಲ್ಲೇ ಬದುಕಿದ್ದರೆ ಇವರಿಗೆ ಸ್ವಾಭಾವಿಕವಾಗಿ ಹಕ್ಕಿನ ಪ್ರಕಾರವೇ ದಕ್ಕಿರುವ ಪರಿಶಿಷ್ಟ ಪಂಗಡಗಳ ಸ್ಥಾನಮಾನವನ್ನು ಸಿಗುತ್ತಿತ್ತು. ಆದರೆ ಅಸ್ಸಾಮ್ ಸರ್ಕಾರ ಇವರಿಗೆ ಆದಿವಾಸಿಗಳ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆೆ ಶಿಫಾರಸು ಮಾಡಲು ತಯಾರಿಲ್ಲ. ಈ ಸ್ಥಾನಮಾನಕ್ಕಾಗಿ ಹೋರಾಟ ನಡೆಸಿರುವ ಆದಿವಾಸಿಗಳು ಅಸ್ಸಾಮಿನ ಉಗ್ರರ ಕೆಂಗಣ್ಣಿಗೆ ಗುರಿಯಾಗಿ ಸಾವಿರ ಸಂಖ್ಯೆಯಲ್ಲಿ ಹತ್ಯೆಯಾಗಿ ಹೋಗಿದ್ದಾರೆ. ಚಹಾ ತೋಟಗಳ ಮಾಲೀಕರ ದೌರ್ಜನ್ಯಗಳಿಗೆ ಗುರಿಯಾಗಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಬಡಪಾಯಿಗಳ ವಿರುದ್ಧ ಹತ್ತು ಹಲವು ರೂಪಗಳಲ್ಲಿ ಯುದ್ಧ ಸಾರಿವೆ.

ಅಸ್ಸಾಮ್ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳ ಮೇಲೆ ಸೋಲು ಗೆಲುವಿನ ಮೇಲೆ ಪ್ರಭಾವ ಬೀರಬಲ್ಲವರು ಇವರು. ಸುಮಾರು 40 ವಿಧಾನಸಭಾ ಕ್ಷೇತ್ರಗಳ ಫಲಿತಾಂಶಗಳನ್ನು ಇವರ ಮತಗಳು ತೀರ್ಮಾನಿಸಬಲ್ಲವು.

ನೀರು, ನೆರಳು, ಅನ್ನ ಯಾವ ಸೌಲಭ್ಯವೂ ಸಮರ್ಪಕವಿಲ್ಲ. ಅತಿ ಕಡಿಮೆ ದಿನಗೂಲಿ, ಜೊತೆಗೆ ಲೈಂಗಿಕ ಕಿರುಕುಳ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ವರದಿಯೊಂದು ಅಸ್ಸಾಮಿನ ಚಹಾ ತೋಟಗಳ ಕಾರ್ಮಿಕರ ಬವಣೆಯನ್ನು ಬಣ್ಣಿಸುತ್ತದೆ. ಶೇ.89ರಷ್ಟು ಚಹಾ ತೋಟಗಳಲ್ಲಿ ನೈರ್ಮಲ್ಯದ ಸೌಲಭ್ಯಗಳಿಲ್ಲ.. ಹೆಣ್ಣುಮಕ್ಕಳು ಮಾಸಿಕ ಚಕ್ರದ ದಿನಗಳಲ್ಲೂ ದುಡಿಯಬೇಕಿದೆ. ಶಿಶುವಿಹಾರ ವ್ಯವಸ್ಥೆಯಿಲ್ಲ ಎಂದು  2017ರಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ವಿಕಾಸ ಮಂತ್ರಾಲಯಕ್ಕೆ ಸಲ್ಲಿಸಲಾದ ವರದಿ ಹೇಳಿದೆ

ಚಹಾ ಎಲೆ ಕೀಳುವ ಕೂಲಿಯಾಳುಗಳು ಬಹುತೇಕ ಮಹಿಳೆಯರು. ಚಹಾ ಕಷಾಯಕ್ಕೆ ಉಪ್ಪು ಬೆರೆಸಿ ಕುಡಿಯಬೇಕಾದ ಸ್ಥಿತಿ. ಅಧಿಕ ರಕ್ತದೊತ್ತಡ ಬೆನ್ನು ಹತ್ತಿದೆ. ಉಪ್ಪಿನ ಬದಲು ಉಚಿತ ಸಕ್ಕರೆ ಸರಬರಾಜು ಮಾಡುವುದಾಗಿ 2019ರಲ್ಲಿ ರಾಜ್ಯ ಸರ್ಕಾರ ಆಶ್ವಾಸನೆ ನೀಡಿತ್ತು. ಆದರೆ ಅದೂ ಆಶ್ವಾಸನೆಯಾಗೇ ಉಳಿದಿದೆ. ಉಪ್ಪಿನ ಚಹಾ ಕುಡಿಯುವುದು ತಪ್ಪಿಲ್ಲ. 2017 ಮತ್ತು 2018ರಲ್ಲಿ ತಲಾ 2,500 ಮತ್ತು 3000 ರುಪಾಯಿಗಳ ನಗದನ್ನು ಇವರ ಖಾತೆಗಳಿಗೆ ವರ್ಗಾಯಿಸಿದ್ದು ಬಿಟ್ಟರೆ ಬೇರೆ ಯಾವ ಆಸರೆಯೂ ಇವರಿಗೆ ದೊರೆತಿಲ್ಲ. ಈ ಐದೂವರೆ ಸಾವಿರ ರುಪಾಯಿಯನ್ನು ದೊಡ್ಡ ಆಸರೆಯೆಂದು ಕರೆಯಬೇಕೇ?

ಕಾಂಗ್ರೆಸ್ ಇರಬಹುದು, ಬಿಜೆಪಿಯೇ ಆಗಬಹುದು. ಇವರ ಬವಣೆಯಲ್ಲಿ ಬದಲಾವಣೆ ಇಲ್ಲ. ಶೋಷಣೆಯ ಸಂರಚನೆ ಅಷ್ಟೇ ಕ್ರೂರ ಮತ್ತು ನಿರ್ದಯಿ. ರಾಜಕೀಯವಾಗಿ ಸಂಘಟಿತರಾಗುವ, ಹಕ್ಕಿಗಾಗಿ ಹೋರಾಡುವ ಮಾತೇ ಇಲ್ಲ. ತುಸುವೇ ತಲೆ ಎತ್ತಿದರೂ ದಮನ ದೈತ್ಯ ನಿಶ್ಚಿತ. ಮತದಾನದ ಮುನ್ನಾ ದಿನ ಇವರಿಗೆ ಸೆರೆ ಕುಡಿಸಿ ರಮಿಸಿ ಹಿಡಿದು ತಂದು ಮತ ಹಾಕಿಸಿಕೊಳ್ಳುವವರಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಈ ದಂಧೆ ಮಾಡುತ್ತಿದ್ದವರು ಇಂದು ಬಿಜೆಪಿಗೆ ಮಾಡುತ್ತಿದ್ದಾರೆ. ಹಸ್ತದ ಚಿಹ್ನೆ ಇದೀಗ ಕಮಲದ ಚಿಹ್ನೆಯಾಗಿ ಬದಲಾಗಿದೆ ಅಷ್ಟೇ.

1951ರ ಪ್ಲ್ಯಾಂಟೇಷನ್ ಕಾರ್ಮಿಕ ಕಾಯಿದೆಯೇನೋ ಇದೆ. ಅದನ್ನು ಬಿಗಿಯಾಗಿ ಜಾರಿ ಮಾಡುವ ಮನಸ್ಸು ಸರ್ಕಾರಗಳಿಗೆ ಇಲ್ಲ. ಯಾವುದೇ ಚಹಾ ತೋಟವಿರಲಿ, ಅಲ್ಲಿನ ಕೂಲಿಕಾರರ ಓಣಿಗಳ ಪರಿಸ್ಥಿತಿಯಲ್ಲಿ ವ್ಯತ್ಯಾಸ ಇರುವುದಿಲ್ಲ. ಪಾಳುಬಿದ್ದ ಮುರುಕಲು ವಸತಿಗಳಲ್ಲಿ ಪಿತಗುಡುವ ಬಡ ಕಾರ್ಮಿಕರ ಕುಟುಂಬಗಳು, ಒಡೆದು ಹೊರ ಹರಿಯುವ ಪಾಯಿಖಾನೆ ಗುಂಡಿಗಳು, ಮಲೆತು ನಿಂತ ಕೊಳಚೆ, ಹಾಳು ಸುರಿಯುವ ಬಾಲವಾಡಿಗಳು, ಮುರಿದುಬಿದ್ದ ಒಂದು ಕಾಲದ ದವಾಖಾನೆಗಳು, ಗಾಳಿಯಲ್ಲಿ ತೂಗುತಿರುವ ಹಸಿವು, ನೋವು ಸಂಕಟಗಳು, ಗೂಟ ಹೊಡೆದಂತೆ ಕ್ಷಯರೋಗ ಮತ್ತು ವಿಷಮಶೀತ ಜ್ವರಗಳ ಕಾಯಂ ಠಿಕಾಣಿ. ಮನೆ ಮನೆಗಳಲ್ಲಿ ಹೊಂಚು ಹಾಕಿದ ಹಸಿವಿನ ಸಂಕಟ.
ಕಾರ್ಮಿಕರ ಗಾಯಗಳಿಗೆ ಉಪ್ಪು ಉಜ್ಜಿದಂತೆ ಕುಸಿಯುತ್ತಲೇ ನಡೆದಿರುವ ಚಹಾದ ಹರಾಜು ದರಗಳು. ಜೊತೆಗೆ ಟೀ ತೋಟಗಳ ಆರೈಕೆಗೆ ಕಾಸು ಬಂಡವಾಳವನ್ನೂ ಹಾಕದೆ ಬಂದ ಲಾಭವನ್ನೆಲ್ಲ ಬಿಡದೆ ದೋಚುವ ಮಾಲೀಕರ ಕಡು ಸ್ವಾರ್ಥ. ಒಂದಕ್ಕೊಂದು ತಳುಕು ಹಾಕಿ ಬೆಳೆದು ಬಿಗಡಾಯಿಸಿದ ಪರಿಸ್ಥಿತಿ ಹಾದಿ ಮಾಡಿದ್ದು ತೋಟಗಳ ಮುಚ್ಚುವಿಕೆಗೆ ಮತ್ತು ಒಡೆಯರ ಪರಾರಿಗೆ. ತೊಂಬತ್ತರ ದಶಕದಲ್ಲಿ ಶುರುವಾದ ಈ ಪರಾರಿ ಚಾಳಿ 2000ದ ದಶಕಕ್ಕೂ ಮೈ ಚಾಚಿತು. ಬದಲಿ ಜೀವನೋಪಾಯವೇ ಗೊತ್ತಿಲ್ಲದ ಕಾರ್ಮಿಕರ ಬಾಳುಗಳು ನರಕವಾದವು. ಸಾವಿರಾರು ಕೂಲಿ ಕುಟುಂಬಗಳು ಹಸಿವನ್ನೇ ಹೊದ್ದು ನೆಲ ಕಚ್ಚಿದವು.  ಚಹಾ ಕಂಪನಿಗಳು ಚಹಾದ ಎಲೆಗಳು ಪೌಷ್ಠಿಕಾಂಶದ ಕೊರತೆಯಿಂದ ಬಿಳುಚಿಕೊಂಡದ್ದನ್ನು ಪ್ರಚಾರ ಮಾಡಿದವೇ ವಿನಾ ತಮ್ಮ ಕಾರ್ಮಿಕರ ಹಸಿವು ಸಾವುಗಳತ್ತ ಕಣ್ಣೆತ್ತಿಯೂ ನೋಡಲಿಲ್ಲ.

ಹನ್ನೆರಡು ವರ್ಷಗಳಷ್ಟು ಹಿಂದೆಯೇ ದಿಲ್ಲಿಯ ಪ್ರತಿಷ್ಠ ಜವಾಹರಲಾಲ್ ವಿಶ್ವವಿದ್ಯಾಲಯದ ಅಧ್ಯಯನವೊಂದರ ಪ್ರಕಾರ ಉತ್ತರ ಬಂಗಾಳ ಮತ್ತು ಅಸ್ಸಾಮಿನ ಮುಚ್ಚಿದ ಚಹಾ ತೋಟಗಳು ಅರ್ಧ ಕೋಟಿ ಮಂದಿಯನ್ನು ಹಸಿವು ಹಾಹಾಕಾರಕ್ಕೆ ನೂಕಿದವು. ಬಂಗಾಳವೊಂದರಲ್ಲೇ ಹತ್ತು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದರು. 1,600 ಮಂದಿ ಹಸಿವು ಅಪೌಷ್ಟಿಕತೆಯಿಂದ ಸತ್ತಿದ್ದರು. ಕೂಲಿ ಕುಟುಂಬಗಳು ಹಸಿವಿನ ಬೆಂಕಿ ಆರಿಸಲು ಎಲೆಗಳು, ಇಲಿಗಳು ಹಾಗೂ ಕಾಡು ಹುಲ್ಲನ್ನು ತಿನ್ನತೊಡಗಿದ್ದರು.

ಚಹಾ ಮಾರಿದ ತಮ್ಮ ಗತವನ್ನು ವೈಭವೀಕರಿಸಿ ಚುನಾವಣೆಗೆ ದುಡಿಸಿಕೊಂಡವರು ದೇಶದ ಪ್ರಧಾನಿಯಾಗಿದ್ದಾರೆ. ಸಬ್ ಕಾ ಸಾಥ್… ಸಬ್ ಕಾ ವಿಕಾಸ್ ಎಂಬ ಘೋಷಣೆ ನೀಡಿ ವೋಟು ಗಳಿಸಿದ್ದಾರೆ. ಚಹಾ ತೋಟಗಳ ಕಾರ್ಮಿಕರನ್ನು ಮನುಷ್ಯರೆಂದೂ, ಉಂಡು ಉಟ್ಟು ಬದುಕುವ ಹಕ್ಕು ಅವರಿಗೂ ಇದೆಯೆಂದು ಅವರು ಅರಿಯುವುದು ಎಂದಿಗೆ?

× Chat with us