ಅಂಕಣಗಳು

ಜನವರಿಯಲ್ಲಿ ಚಾಲಕ ಉದ್ದಿಮೆಗಳ ಬೆಳವಣಿಗೆ ಇಳಿಕೆ

• ಪ್ರೊ.ಆರ್.ಎಂ.ಚಿಂತಾಮಣಿ

ಇದೇ ಫೆಬ್ರವರಿ 29ರಂದು ಕೇಂದ್ರ ಅಂಕಿಸಂಖ್ಯಾ ಕಚೇರಿ (Central Statistical Office) ರಾಷ್ಟ್ರೀಯ ಒಟ್ಟಾದಾಯದ (ಜಿಡಿಪಿ) 2023-24ನೇ ಹಣಕಾಸು ವರ್ಷದ ಮೂರನೇ ತೈಮಾಸಿಕದ ಎರಡನೇ ಅಂದಾಜುಗಳನ್ನು ಪ್ರಕಟಿಸಿದೆ. ಜೊತೆಯಲ್ಲೇ ಆರ್ಥಿಕ ಬೆಳವಣಿಗೆಗೆ ಮೂಲಾಧಾರ ಮತ್ತು ಶಕ್ತಿಯನ್ನು ಒದಗಿಸುವ ‘ಚಾಲಕ ಉದ್ದಿಮೆ’ಗಳೆಂದೇ (Core Industries) ಕರೆಯಲ್ಪಡುವ ಎಂಟು ಉದ್ದಿಮೆಗಳ ಮಾಸಿಕ ಬೆಳವಣಿಗೆಯ ಜನವರಿ ತಿಂಗಳ ಅಂಕಿ ಸಂಖ್ಯೆಗಳನ್ನೂ ಪ್ರಕಟಿಸಿದೆ. ಮೊದಲನೆಯದು ನಿರೀಕ್ಷೆ ಮೀರಿ ಏರಿಕೆ ಕಂಡಿದ್ದರೆ, ಇನ್ನೊಂದರಲ್ಲಿ ಇಳಿಕೆಯಾಗಿದೆ.

ಅಕ್ಟೋಬರ್-ಡಿಸೆಂಬರ್ 2023ರ ಅವಧಿಯ ಜಿಡಿಪಿಯು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.8.4ರಷ್ಟು ಬೆಳವಣಿಗೆ ಕಂಡಿದೆ. ಆಗ ಹಿಂದಿನ ಇದೇ ಅವಧಿಗಿಂತ ಶೇ.4.3ರಷ್ಟು ಮಾತ್ರ ಹೆಚ್ಚಳ ಕಂಡಿತ್ತು. ಈ ವರ್ಷದ ಒಂದು ವಿಶೇಷವೆಂದರೆ, ಮೊದಲ ಮೂರು ತ್ರೈಮಾಸಿಕಗಳಲ್ಲಿಯೂ ಶೇ.8.0ರ ಮೇಲೆಯೇ ಮುಂದುವರಿದಿದೆ. ಇದು ಸರ್ಕಾರ ಇನ್ನಷ್ಟು ಉತ್ತೇಜಿತವಾಗಿ ವಾರ್ಷಿಕ ಬೆಳವಣಿಗೆ ಶೇ.7.6 ಆಗಲಿದೆ ಎಂದು ಅಂದಾಜು ಮಾಡಲು ಕಾರಣವಾಗಿದೆ. ಈ ಅಂದಾಜು ಜನವರಿಯಲ್ಲಿನ ಅಂದಾಜಿಗಿಂತ ಶೇ.0.3ರಷ್ಟು ಹೆಚ್ಚಾಗಿದೆ. ಅಂದರೆ ಜನವರಿ-ಮಾರ್ಚ್ 2024ರ ತೈಮಾಸಿಕ ದಲ್ಲಿ ಏನೇ ಏರುಪೇರುಗಳಾದರೂ ಜಿಡಿಪಿ ಬೆಳವಣಿಗೆ ಶೇ.5.7ಕ್ಕಿಂತ ಕೆಳಗೆ ಹೋಗಲಿಕ್ಕಿಲ್ಲ ಎನ್ನುವುದು ಸರ್ಕಾರದ ಲೆಕ್ಕಾಚಾರ. ಕಾದು ನೋಡಬೇಕು.

ಇದನ್ನೇ ಆಧಾರವಾಗಿಟ್ಟುಕೊಂಡು ನಮ್ಮ ಪ್ರಧಾನಿಗಳು ಈ ಶೇ.8.4ರಷ್ಟು ಬೆಳವಣಿಗೆಯು ಭಾರತದ ಅರ್ಥವ್ಯವಸ್ಥೆಯ ಸಾಮರ್ಥ್ಯವನ್ನು ತೋರಿಸುತ್ತದೆ. ನಮ್ಮ 1.4 ಬಿಲಿಯನ್ ಜನರು ವಿಕಸಿತ (ಶ್ರೀಮಂತ) ಭಾರತದಲ್ಲಿ ನೆಮ್ಮದಿ ಯಿಂದ ಜೀವಿಸುವಂತೆ ಮಾಡಲು ನಮ್ಮ ಪ್ರಯತ್ನಗಳನ್ನು ಮುಂದುವರಿ ಸುತ್ತೇವೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇನೋ ಸರಿಯೆ. ಆದರೆ ಅಲ್ಪಾವಧಿ ಅಂದಾಜುಗಳ ಆಧಾರದ ಮೇಲೆ ದೀರ್ಘಾವಧಿ ಪರಿಣಾಮಗಳ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಾದೀತೆ?

ಈ ತೈಮಾಸಿಕದ ಜಿಡಿಪಿ ಬೆಳವಣಿಗೆಯ ಹೆಚ್ಚಳಕ್ಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾದ ತೆರಿಗೆ ಸಂಗ್ರಹ, ಸಬ್ಸಿಡಿ ವೆಚ್ಚಗಳಲ್ಲಿ ಇಳಿಕೆ ಮತ್ತು ಇಂದಿನ ತೈಮಾಸಿಕಗಳ ಮತ್ತು ಹಿಂದಿನ ಹಣಕಾಸು ವರ್ಷದ ಜಿಡಿಪಿಯ ಮರು ಅಂದಾಜಿನಲ್ಲಿ ಇಳಿಕೆ ಮುಂತಾದವುಗಳೂ ಕಾರಣವಾಗಿವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಈ ತೈಮಾಸಿಕದಲ್ಲಿ ಉತ್ಪಾದಕ ಕೈಗಾರಿಕೆಗಳೇ <font face=”SHREE- KAN-0850AN”>(Manufacturing) ಗತಿ (ಶೇ.11.6) ಕಂಡಿದ್ದು, ನಿರ್ಮಾಣ (Construction) ವಲಯ (ಶೇ.9.5) ಮತ್ತು ಸೇವಾ ವಲಯ (ಶೇ.7.0) ನಂತರದ ಸ್ಥಾನಗಳಲ್ಲಿವೆ. ಕೃಷಿ ವಲಯದಲ್ಲಿ (ಶೇ.-0.8) ಹಿನ್ನಡೆಯಾಗಿರುವುದು ಕಾಣುತ್ತದೆ. ದೇಶಾದ್ಯಂತ ಮಳೆಗಾಲ ಕಡಿಮೆಯಾಗಿದ್ದು, ಕೆಲವು ಪ್ರದೇಶಗಳಲ್ಲಿ ಬರಗಾಲದ ತೀವ್ರ ಛಾಯೆ ಇದೆ. ನಾಲ್ಕನೇ ತ್ರೈಮಾಸಿಕದಲ್ಲಿಯೂ ಕೃಷಿ ಬೆಳವಣಿಗೆ ಕಡಿಮೆಯೇ. ಹಿನ್ನಡೆಯನ್ನು ಕೃಷಿ ಉತ್ಪಾದನೆ ಅನುಭವಿಸಿದರೂ ಆಶ್ಚರ್ಯವಿಲ್ಲ.

ಎಲ್ಲ ವಲಯಗಳಿಗೂ ಮೂಲವಸ್ತುಗಳನ್ನು ಮತ್ತು ಶಕ್ತಿ ಮೂಲಗಳನ್ನು ಒದಗಿಸುವ ಕಚ್ಚಾತೈಲ, ರಿಫೈನರಿಗಳು, ಗೊಬ್ಬರಗಳು, ವಿದ್ಯುಚ್ಛಕ್ತಿ, ನೈಸರ್ಗಿಕ ಅನಿಲ, ಸಿಮೆಂಟ್, ಉಕ್ಕು ಮತ್ತು ಕಲ್ಲಿದ್ದಲು ಹೀಗೆ ಎಂಟು ಚಾಲಕ ಉದ್ದಿಮೆಗಳ ಬಗ್ಗೆ ತಿಳಿದುಕೊಳ್ಳಬೇಕು. ಇವುಗಳಿಗೆ ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ (Index of Industrial Production -ಐ.ಐ.ಪಿ.) ಶೇ.40.43 ಮಹತ್ವವಿದೆ. ಇವುಗಳನ್ನು ಮೂಲ ಉದ್ದಿಮೆಗಳೆಂದೂ ಕರೆಯಲಾಗುತ್ತದೆ.

ಮೂಲ ಉದ್ದಿಮೆಗಳ ಬೆಳವಣಿಗೆ: ಸಿಎಸ್‌ಒ ವರದಿಯಂತೆ ಈ ಜನವರಿಯಲ್ಲಿ ಒಟ್ಟಾರೆ ಎಂಟು ಉದ್ದಿಮೆಗಳೂ ಸೇರಿ ಶೇ.3.6ರಷ್ಟು ಬೆಳವಣಿಗೆಯಾಗಿದ್ದು, ಕಳೆದ 14 ತಿಂಗಳಲ್ಲೇ ಇದು ಕಡಿಮೆ. 2022ರ ಅಕ್ಟೋಬರ್‌ನಲ್ಲಿ ಮಾತ್ರ ಹಿಂದಿನ ಇದೇ ಅವಧಿಗೆ ಹೋಲಿಸಿದರೆ ಶೇ.0.7ರ ಬೆಳವಣಿಗೆ ತಳಮಟ್ಟದಲ್ಲಿತ್ತು. ನಂತರದ ತಿಂಗಳುಗಳಲ್ಲಿ ಉತ್ಪಾದನೆ ಬೆಳವಣಿಗೆ ಶೇ.10.0ಕ್ಕೇರುವುದು ಶೇ.4.0ಕ್ಕಿಳಿಯುವುದು ಮತ್ತೇ ಮೇಲೇರಿ ಶೇ.11.8ಕ್ಕೆ ತಲುಪುವುದು ಹೀಗೆ ಏರಿಳಿತಗಳು ಮುಂದುವರಿದು ಈಗ ಈ ಮಟ್ಟಕ್ಕಿಳಿದಿದೆ. 2023ರ ಜನವರಿಯಲ್ಲಿ ಶೇ.9.7 ಬೆಳೆದಿದ್ದವು. ಕಳೆದ ಡಿಸೆಂಬರ್ ತಿಂಗಳಲ್ಲಿ ಇವುಗಳ ಬೆಳವಣಿಗೆ ಶೇ.4.9 ಇತ್ತು.

ಒಂದೊಂದನ್ನೇ ಪರಿಶೀಲಿಸಿದರೆ ಜನವರಿಯಲ್ಲಿ ರಿಫೈನರೀಸ್ (ಶೇ.-4.3) ಮತ್ತು ಗೊಬ್ಬರಗಳು (ಶೇ.-0.6) ಹಿನ್ನಡೆ ಕಂಡಿದ್ದರೆ, ಕಚ್ಚಾ ತೈಲ ಉತ್ಪಾದನೆ ಹೆಸರಿಗೆ ಮಾತ್ರ ಎನ್ನುವ ಮಟ್ಟಿಗೆ ಶೇ.0.7 ಮಾತ್ರ ಹೆಚ್ಚಾಗಿದೆ. ಉಳಿದ ಐದರಲ್ಲಿ ಕಲ್ಲಿದ್ದಲು ಉತ್ಪಾದನೆ ಮಾತ್ರ ಶೇ.10.2ರಷ್ಟು ಹೆಚ್ಚಾಗಿದ್ದು, ಎರಡಂಕಿಯ ಮುನ್ನಡೆ ಇದೆ. ಉಕ್ಕು ಶೇ.7.0, ಸಿಮೆಂಟ್ ಶೇ.5.6, ನೈಸರ್ಗಿಕ ಅನಿಲ ಶೇ.5.5 ಮತ್ತು ವಿದ್ಯುತ್ ಶೇ.5.2 ಬೆಳವಣಿಗೆ ಆಗಿರುತ್ತವೆ. ಬರುವ ಎರಡು ತಿಂಗಳಲ್ಲಿ ಕೃಷಿ ಚಟುವಟಿಕೆಗಳು ಕಡಿಮೆಯಾಗುವುದರಿಂದ ಕೃಷಿ ಉತ್ಪಾದನೆ ಕಡಿಮೆಯಾಗುವ ಭಯವಿದೆ. ಹಲವು ಪ್ರದೇಶಗಳಲ್ಲಿ ಹಿಂಗಾರು ಬೆಳೆ ಬಾರದಿರುವುದೂ ಕಾರಣವಾಗಬಹುದು. ಗೊಬ್ಬರಗಳ ಬೇಡಿಕೆ ಈ ಹಣಕಾಸು ವರ್ಷಾಂತ್ಯದವರೆಗೆ ಇನ್ನೂ ಕಡಿಮೆಯಾಗುವ ಆತಂಕವಿದೆ. ಗೊಬ್ಬರಗಳ ಉತ್ಪಾದನೆ ಹೆಚ್ಚಿಸುತ್ತಾ ದಾಸ್ತಾನುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಅವಶ್ಯ. ಮುಂದಿನ ಮುಂಗಾರು ಹಂಗಾಮಿನಲ್ಲಿ ಮತ್ತು ನಂತರ ಮಳೆ ಚೆನ್ನಾಗಿ ಬಿದ್ದು ಗೊಬ್ಬರಗಳಿಗೆ ಬೇಡಿಕೆ ಹೆಚ್ಚಾದಾಗ ಕೊರತೆ ಅನುಭವಿಸುವಂತಾಗಬಾರದು.

ವಿದ್ಯುತ್‌ ಒಂದು ಶಕ್ತಿ ಮೂಲವಾಗಿ ಮತ್ತು ಶಕ್ತಿಯಾಗಿ ಎಲ್ಲ ರಂಗಗಳಲ್ಲಿಯೂ ಬೇಕೇ ಬೇಕು. ಉತ್ಪಾದಿಸಿದ ವಿದ್ಯುತ್ತನ್ನು ಸಂಗ್ರಹಿಸಿಡುವ ಮತ್ತು ವಿತರಣಾ ವೆಚ್ಚಗಳನ್ನು ಮತ್ತು ಸೋರಿಕೆಯನ್ನು ಕಡಿಮೆ ಮಾಡುವ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಬೇಕು. ಅಗ್ಗದ ಮತ್ತು ಪರಿಸರಸ್ನೇಹಿ ಸೌರಶಕ್ತಿ ಮತ್ತು ಗಾಳಿ ವಿದ್ಯುತ್ ಉತ್ಪಾದನೆ ಹೆಚ್ಚಬೇಕು. ಈಗ ಸರ್ಕಾರ ‘ರೂಫ್ ಟಾಪ್’ ವಿದ್ಯುತ್ ಉತ್ಪಾದನೆ ಮತ್ತು ಗ್ರಿಡ್‌ಗಳಿಗೆ ವರ್ಗಾವಣೆ ಮಾಡಲು ಉತ್ತೇಜನಗಳನ್ನು ಘೋಷಿಸಿರುವುದರಿಂದ ಅದು ಹೆಚ್ಚಾದೀತು. ಒಟ್ಟಾರೆ ನಿರಂತರ ವಿದ್ಯುತ್‌ ಉತ್ಪಾದನೆ ಹೆಚ್ಚಳವಾಗಬೇಕು.

ಉಕ್ಕು ಮತ್ತು ಸಿಮೆಂಟ್ ಎಲ್ಲ ರಂಗಗಳಲ್ಲಿಯೂ ಬೇಕು. ಇವುಗಳ ಉತ್ಪಾದನೆ ಒಂದು ಮಟ್ಟದಲ್ಲಿ ಹೆಚ್ಚುತ್ತಿದೆ. ಸರ್ಕಾರ ಮೂಲ ಸೌಲಭ್ಯಗಳಿಗೆ ಹೆಚ್ಚು ಒತ್ತು ಕೊಟ್ಟಿರುವುದರಿಂದ ಬರುವ ದಿನಗಳಲ್ಲಿ ಬೇಡಿಕೆಯು ಹೆಚ್ಚಾಗುತ್ತದೆ ಎಂದು ನಿರೀಕ್ಷಿಸೋಣ. ಉತ್ಪಾದನೆ ತಯಾರಿರಬೇಕು.

ಕಲ್ಲಿದ್ದಲು ಇಂಧನವಾಗಿ ವಿದ್ಯುತ್ ಉತ್ಪಾದನೆ ಸೇರಿದಂತೆ ಎಲ್ಲ ವಲಯಗಳಲ್ಲಿಯೂ ಬಳಸಲ್ಪಡುತ್ತದೆ. ತಕ್ಕಂತೆ ಪೂರೈಕೆಯೂ ಇದೆ. ಆದರೆ ಅದು ಪರಿಸರಕ್ಕೆ ಹೆಚ್ಚು ಹಾನಿ ಮಾಡುವುದರಿಂದ ಮತ್ತು ದುಬಾರಿಯೂ ಆಗಿರುವುದರಿಂದ ನಿಧಾನವಾಗಿಯಾದರೂ ಬೇರೆ ಅಗ್ಗದ ಪರಿಸರಸ್ನೇಹಿ ಇಂಧನಗಳಿಗೆ ಮೊರೆ ಹೋಗಲೇಬೇಕಾಗುತ್ತದೆ ಅಲ್ಲಿಯವರೆಗೂ ಹೊಸ ತಂತ್ರಜ್ಞಾನಗಳನ್ನು ಹುಡುಕಿ ಪರಿಸರಕ್ಕೆ ಹಾನಿ ಕಡಿಮೆ ಮಾಡಬೇಕಾಗುತ್ತದೆ. ಇನ್ನಷ್ಟು ದಿವಸ ಕಲ್ಲಿದ್ದಲು ನಮ್ಮೊಡನೆ ಇರಲೇಬೇಕು. ಇದ್ದುದ್ದರಲ್ಲಿಯೇ ಒಂದು ಸಮಾಧಾನವೆಂದರೆ ಈ ವರ್ಷದ (2023-24) ಮೊದಲ 10 ತಿಂಗಳಲ್ಲಿ ಒಟ್ಟಾರೆ ಮೂಲ ಉದ್ದಿಮೆಗಳು ಕಳೆದ ವರ್ಷದ ಇದೇ ಅವಧಿಗಿಂತ ಶೇ.7.7 ಉತ್ಪಾದನಾ ಬೆಳವಣಿಗೆಯನ್ನು ಹೊಂದಿರುತ್ತವೆ. ಜಿಡಿಪಿಯ ಬೆಳವಣಿಗೆ ಅಂದಾಜಿಗಿಂತ ಸ್ವಲ್ಪವಾದರೂ ಹೆಚ್ಚಾಗಿದೆ. ಆರ್ಥಿಕಾಭಿವೃದ್ಧಿಗೆ ಇವು ಬೆನ್ನೆಲುಬು.

andolana

Recent Posts

ಓದುಗರ ಪತ್ರ: ರೈಲು ನಿಲ್ದಾಣದಲ್ಲಿ ಪ್ರೀಪೇಯ್ಡ್  ಆಟೋ ಕೌಂಟರ್ ಆರಂಭಿಸಿ

ಮೈಸೂರು ರೈಲು ನಿಲ್ದಾಣದಲ್ಲಿ ದಿನದ ೨೪ ಗಂಟೆಯೂ ಕಾರ್ಯನಿರ್ವಹಿಸುವ ಪ್ರೀಪೇಯ್ಡ್ ಆಟೋ ಕೌಂಟರ್ ಇಲ್ಲದೆ ಬೆಳಗಿನ ಜಾವ ಬೇರೆ ಊರುಗಳಿಂದ…

1 hour ago

ಓದುಗರ ಪತ್ರ: ನ್ಯಾಯಾಂಗದ ಬಗ್ಗೆ ಗೌರವ ಮೂಡಿಸಿ

ಕೇಂದ್ರೀಯ ಪಠ್ಯಕ್ರಮದ (ಎನ್ ಸಿಇಆರ್ ಟಿ) ೮ನೇ ತರಗತಿಯ ಪಠ್ಯ ಪುಸ್ತಕದಲ್ಲಿ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲೂ ಭ್ರಷ್ಟಾಚಾರ ಇದೆ…

1 hour ago

ಓದುಗರ ಪತ್ರ: ಅಂಬೇಡ್ಕರ್ ಸಮುದಾಯ ಭವನ ಅಭಿವೃದ್ಧಿಪಡಿಸಿ

ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಡಾ.ಬಿ .ಆರ್.ಅಂಬೇಡ್ಕರ್ ಸಮುದಾಯ ಭವನವನ್ನು ಅಂದಿನ ಸಚಿವರಾಗಿದ್ದ ಶ್ರೀನಿವಾಸ ಪ್ರಸಾದ್…

1 hour ago

ಓದುಗರ ಪತ್ರ: ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಿ

ಸರಗೂರು ತಾಲ್ಲೂಕಿನ ಮುಳ್ಳೂರು, ಚಾಮಲಾಪುರ, ಕುಂದೂರು, ಕಲ್ಲಂಬಾಳು, ನಂಜೀಪುರ, ಕಟ್ಟೆಹುಣಸೂರು ಈ ಗ್ರಾಮಗಳ ಮಾರ್ಗವಾಗಿ ಹೆಚ್ಚಿನ ಸರ್ಕಾರಿ ಬಸ್ಸುಗಳ ಸಂಚಾರವಿಲ್ಲದೆ…

1 hour ago

ದಿ ಕೇರಳ ಸ್ಟೋರಿ-2 : ಸತ್ಯ V/S ಅಜೆಂಡಾ..!

ವಿವಾದಾಸ್ಪದ ‘ದಿ ಕೇರಳ ಸ್ಟೋರಿ-೨ ಗೋಸ್ ಬಿಯಾಂಡ್’ ಚಲನಚಿತ್ರ ಪ್ರದರ್ಶನಕ್ಕೆ ಕೇರಳದ ಹೈಕೋರ್ಟ್‌ನ ವಿಭಾಗೀಯ ಪೀಠ ಶುಕ್ರವಾರ ಹಸಿರು ನಿಶಾನೆ…

1 hour ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಕಾವೇರುತ್ತಿರುವ ತಮಿಳುನಾಡು ವಿಧಾನಸಭೆ ಚುನಾವಣೆ

ತಮಿಳುನಾಡಿನಲ್ಲಿ ಬೇಸಿಗೆಯ ಸುಡು ಬಿಸಿಲಿಸಿನ ನಡುವೆ ವಿಧಾನಸಭೆಯ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದೆ. ಚುನಾವಣೆಯು ಏಪ್ರಿಲ್ ಕೊನೆಯ ವಾರದೊಳಗೆ…

1 hour ago