ವನ್ಯಮೃಗಗಳ ಹಾವಳಿ: ಸರ್ಕಾರ ಸಂತ್ರಸ್ತರಿಗೆ ನೀಡುವ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು

ಕೃಷಿ ಪ್ರಧಾನ ಜಿಲ್ಲೆಗಳಲ್ಲಿ ಒಂದಾಗಿರುವ ಮಲೆನಾಡಿನ ಕೊಡಗಿನಲ್ಲಿ ವನ್ಯಜೀವಿ-ಮಾನವ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಿಂದೊಮ್ಮೆ ಕಾಡಾನೆಗಳ ದಾಳಿ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಹುಲಿ ಹಾವಳಿಯೂ ಕಾಣಿಸಿಕೊಂಡು ಜನ-ಜಾನುವಾರುಗಳಿಗೆ ಕಂಟಕವಾಗಿದೆ. ಇದರ ಜತೆಗೆ ಚಿರತೆ, ಕಾಡುಕೋಣ, ಕಾಡೆಮ್ಮೆ, ಕಾಡುಹಂದಿ, ಕೋತಿ, ನವಿಲುಗಳ ಹಾವಳಿಯೂ ಕಂಗೆಡಿಸಿದೆ.

ಅರಣ್ಯದಂಚಿನಲ್ಲಿ ಕಂದಕ ತೋಡಿ, ಸೋಲಾರ್ ಬೇಲಿ, ರೈಲ್ವೆ ಕಂಬಿಗಳ ಬೇಲಿ, ಹೊಸ ಮಾದರಿಯ ನೇತಾಡುವ ಸೋಲಾರ್ ಬೇಲಿ ಅಳವಡಿಕೆ ಆಗಿದ್ದರೂ ಆನೆ ಸೇರಿ ಕಾಡುಪ್ರಾಣಿಗಳ ದಾಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಜನವಸತಿ ಪ್ರದೇಶ, ತೋಟ, ಭತ್ತದ ಗದ್ದೆಗಳಿಗೆ ದಾಳಿ ಇಡುತ್ತಿವೆ. ಮಾನವ ಪ್ರಾಣ ಹಾನಿಯ ಜತೆಗೆ ಜಾನುವಾರು, ಬೆಳೆ ನಷ್ಟದಿಂದಾಗಿ ಜನಸಾಮಾನ್ಯರು ಕಂಗೆಟ್ಟಿದ್ದಾರೆ.

ವನ್ಯಜೀವಿ ಹಾವಳಿಯಿಂದ ಬೆಳೆ, ಆಸ್ತಿ, ಮಾನವ, ಸಾಕು ಪ್ರಾಣಿಗಳ ಪ್ರಾಣ ಹಾನಿ, ಗಾಯ ಗೊಂಡವರಿಗೆ, ಶಾಶ್ವತ ಅಂಗ ವೈಕಲ್ಯಕ್ಕೆ ದಯಾತ್ಮಕ ಪರಿಹಾರ ಧನ ನೀಡಲು ಸರ್ಕಾರ ೨೦೧೬ ಸೆಪ್ಟೆಂಬರ್ ೧೯ಕ್ಕೆ ಪರಿಷ್ಕೃತ ಆದೇಶ ಹೊರಡಿಸಿದೆ. ವನ್ಯಜೀವಿಯಿಂದ ಮಾನವ ಪ್ರಾಣ ಹಾನಿ, ಶಾಶ್ವತ ಅಂಗ ವೈಕಲ್ಯಕ್ಕೆ ೫.೦೦ ಲಕ್ಷ, ಭಾಗಶಃ ಅಂಗವೈಕಲ್ಯಕ್ಕೆ ೨.೫೦ ಲಕ್ಷ, ಗಾಯಗೊಂಡವರಿಗೆ ೩೦ ಸಾವಿರ, ಕಾಡಾನೆ ದಾಳಿಯಿಂದ ಆಸ್ತಿ ನಷ್ಟಕ್ಕೆ ೧೦ ಸಾವಿರ ರೂ ಪರಿಹಾರ ಧನ ದೊರೆಯಲಿದೆ.

ಅರಣ್ಯ ಇಲಾಖೆಯಿಂದ ಪರಿಹಾರ ನಿಗದಿ ಮಾಡುವಲ್ಲಿ ಅವೈಜ್ಞಾನಿಕ ಕ್ರಮ ಅನುಸರಿಸಲಾಗಿದೆ ಎನ್ನುವುದು ಕೃಷಿಕರ ಆರೋಪ. ೭೦ ಸಾವಿರ ಬೆಲೆಯ ಹಸು ಹುಲಿ ದಾಳಿಗೆ ಬಲಿಯಾದರೆ ಸಿಗುವ ಪರಿಹಾರ ೧೦-೨೦ ಸಾವಿರ ರೂ.ಮಾತ್ರ. ಎಲ್ಲವೂ ಆನ್‌ಲೈನ್ ವ್ಯವಸ್ಥೆಯಡಿ ತರಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ ಪರಿಹಾರದ ಮೊತ್ತಕ್ಕಾಗಿ ದಾಖಲೆಗಳನ್ನು ಹೊಂದಿಸುವಲ್ಲಿ ಸಂತ್ರಸ್ತ ಸುಸ್ತಾಗಿರುತ್ತಾನೆ.

ವನ್ಯಜೀವಿಯಿಂದ ನಷ್ಟಕ್ಕೆ ಒಳಗಾದವರಿಗೆ ಅರಣ್ಯ ಇಲಾಖೆ ಕೊಡುವ ಪರಿಹಾರವನ್ನು ಇಲಾಖೆಯ ಭಾಷೆಯಲ್ಲಿ ದಯಾತ್ಮಕ ದರ ಎಂದು ಕರೆಯಲಾಗುತ್ತದೆ. ಈ ಪದ ಬಳಕೆಯೇ ಸರಿಯಿಲ್ಲ ಎಂದು ಕೊಡಗು ಬೆಳೆಗಾರರ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ. ಪರಿಹಾರವನ್ನು ಪರಿಹಾರ ಎಂದೇ ಕರೆಯಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಕೊಡಗಿನಲ್ಲಿ ೨೦೨೦-೨೧ನೇ ಸಾಲಿನಲ್ಲಿ ವನ್ಯಜೀವಿಗಳಿಂದ ಮನುಷ್ಯನಿಗೆ ವಿವಿಧ ರೀತಿಯ ಹಾನಿಗೆ ಸಂಬಂಧಿಸಿದ ೮೫೧೭ ಪ್ರಕರಣಗಳು ದಾಖಲಾಗಿದ್ದು, ಸುಮಾರು ೬.೬೮ ಕೋಟಿ ರೂ. ಪರಿಹಾರ ಸಂತ್ರಸ್ತರಿಗೆ ಪಾವತಿಸಲಾಗಿದೆ. ಮಾನವ-ವನ್ಯಜೀವಿ ಸಂಘರ್ಷ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದ್ದು, ಹಾಲಿ ಪರಿಹಾರದ ಮೊತ್ತವನ್ನು ಹೆಚ್ಚಿಸುವಂತೆ ಒತ್ತಾಯ ಕೇಳಿಬಂದಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇದೆ.

ಶಾಶ್ವತ ಪರಿಹಾರೋಪಾಯಗಳನ್ನು ಕಂಡುಕೊಂಡಲ್ಲಿ ಮಾತ್ರ ಮಾನವ-ವನ್ಯಜೀವಿ ಸಂಘರ್ಷಕ್ಕೆ ಸಂಪೂರ್ಣ ಕಡಿವಾಣ ಹಾಕಬಹುದು. ಆದರೆ ಇದಕ್ಕೆ ೭೦೦ ಕೋಟಿ ರೂ.ಅಗತ್ಯವಿದೆ ಎನ್ನುತ್ತಾರೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು. ಈ ಸಂಬಂಧ ಈಗಾಗಲೇ ಸಮಗ್ರವಾದ ಡಿಪಿಆರ್ ತಯಾರಿಸಲಾಗಿದೆ. ಸರ್ಕಾರದಿಂದ ೭೦೦ ಕೋಟಿ ರೂ. ಅನುದಾನ ಬಂದರೆ ರೈಲ್ವೆ ಹಳಿ ಬ್ಯಾರಿಕೇಡ್ ನಿರ್ಮಾಣ ಸೇರಿ ಹಲವು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ.

ಆನೆ-ಮಾನವ ಸಂಘರ್ಷ ವರ್ಷದಿಂದ ವರ್ಷಕ್ಕೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಅರಣ್ಯ ಇಲಾಖೆ ಬಿಡುಗಡೆ ಮಾಡಿರುವ ಆನೆಗಳ ಮರಣ ವರದಿ ಪ್ರಕಾರ ಕಳೆದ ವರ್ಷ ರಾಜ್ಯದಲ್ಲಿ ವಿವಿಧ ಕಾರಣಗಳಿಂದ ೭೦ ಆನೆಗಳು ಮೃತಪಟ್ಟಿವೆ. ಈ ಪೈಕಿ ಕೊಡಗಿನ ೩ ಆನೆಗಳು ಸೇರಿ ೧೦ ಆನೆಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದರೆ, ೧೫ ಆನೆಗಳು ಅಸ್ವಾಭಾವಿಕ ಕಾರಣಗಳಿಂದ ಪ್ರಾಣಬಿಟ್ಟಿವೆ. ಆನೆಗಳ ಜನಸಂಖ್ಯೆಗೆ ಹೋಲಿಸಿದರೆ ಸ್ವಾಭಾವಿಕವಾಗಿ ಮೃತಪಡುವ ಆನೆಗಳ ಪ್ರಮಾಣ ಸಹಜವಾಗಿಯೇ ಇದೆ ಎನ್ನುವ ವನ್ಯಜೀವಿ ತಜ್ಞರು ವಿವಿಧ ಕಾರಣಗಳಿಂದ ಅಸ್ವಾಭಾವಿಕವಾಗಿ ಮತ್ತು ವಿದ್ಯುತ್ ಸ್ಪರ್ಶದಿಂದ ಮೃತಪಡುತ್ತಿರುವ ಆನೆಗಳ ಸಂಖ್ಯೆ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾರೆ. ೨೦೧೪-೧೫ರಲ್ಲಿ ೧೫, ೨೦೧೫-೧೬ರಲ್ಲಿ ೮, ೨೦೧೬-೧೭ರಲ್ಲಿ ೬, ೨೦೧೭-೧೮ರಲ್ಲಿ ೧೦, ೨೦೧೮-೧೯ರಲ್ಲಿ ೯, ೨೦೧೯-೨೦ರಲ್ಲಿ ೮ ಆನೆಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿವೆ.

ಪ್ರಾಣಿಗಳ ಹಾವಳಿ ತಡೆಗಟ್ಟಲು ಶಾಶ್ವತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕಾಗಿದೆ. ಕಾಡಾನೆ ಸಂತತಿಯನ್ನು ಕಾಡಿನಲ್ಲಿ ಉಳಿಸಿ ನಾಡಿನಲ್ಲಿ ಜನತೆ ನೆಮ್ಮದಿಯ ಜೀವನ ಸಾಗಿಸುವಂತಹ ಶಾಶ್ವತ ಪರಿಹಾರವನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಬೇಕಿದೆ.

andolana

Recent Posts

ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ: ನಾಳೆ ಮನೆ ಮನೆಗೆ ತೆರಳಿ ಮತಯಾಚನೆ

ಬೆಂಗಳೂರು: ಮುಂಬರುವ 2028ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗಿರುವ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ…

12 hours ago

ಮಣಿಪುರದಲ್ಲಿ ಮನೆ ಮೇಲೆ ಬಾಂಬ್‌ ದಾಳಿ: ಇಬ್ಬರು ಮಕ್ಕಳು ಸಾವು

ಇಂಪಾಲ: ಮಣಿಪುರದಲ್ಲಿ ಮನೆಯೊಂದರ ಮೇಲೆ ಬಾಂಬ್‌ ದಾಳಿ ನಡೆದಿದ್ದು, ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಣಿಪುರದ ಬಿಷ್ಣುಪುರ ಜಿಲ್ಲೆಯ…

13 hours ago

ನನ್ನ ತಾಳ್ಮೆಗೆ ಕಾಲವೇ ಉತ್ತರ ನೀಡುತ್ತದೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ಹುಬ್ಬಳ್ಳಿ: ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂಬ ಸಚಿವ ಜಮೀರ್‌ ಅಹ್ಮಮದ್‌ ಖಾನ್‌ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.…

13 hours ago

ನಮ್ಮಣ್ಣ ಇವತ್ತೇ ಸಿಎಂ ಆಗಬೇಕು ಎಂದೇನಿಲ್ಲ: ಮಾಜಿ ಸಂಸದ ಡಿ.ಕೆ.ಸುರೇಶ್‌

ಬೆಂಗಳೂರು: ನಮ್ಮ ಅಣ್ಣ ಸಿಎಂ ಆಗಬೇಕು ಎಂಬ ಆಸೆ ಇದೆ. ಆದರೆ ಇವತ್ತೇ ಸಿಎಂ ಆಗಬೇಕು ಅಂತೇನಿಲ್ಲ. ಇನ್ನೂ ಸಮಯವಿದೆ…

13 hours ago

ಏಪ್ರಿಲ್.‌17ರಂದು ಸಿಎಂ ಸಿದ್ದರಾಮಯ್ಯ ಕೊಡಗು ಜಿಲ್ಲೆಗೆ ಭೇಟಿ ಸಾಧ್ಯತೆ

ಮಡಿಕೇರಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಏಪ್ರಿಲ್.‌17ರಂದು ಕೊಡಗು ಜಿಲ್ಲೆಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಸಂಬಂಧಪಟ್ಟ…

13 hours ago

ಇರಾನ್‌ಗೆ ಇಸ್ರೇಲ್‌ ಖಡಕ್‌ ಎಚ್ಚರಿಕೆ: ಏನದು ಗೊತ್ತಾ.?

ಟೆಹರಾನ್:‌ ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಂಡಿದೆ. ಇಸ್ರೇಲ್‌ ಈಗ ಇರಾನ್‌ ನಾಗರಿಕರಿಗೆ ಅತ್ಯಂತ ಗಂಭೀರವಾದ ಎಚ್ಚರಿಕೆಯನ್ನು…

13 hours ago