ಅಂಕಣಗಳು

ಸೋಲೊಪ್ಪಿ ಕೊಳ್ಳದ ಜಾಯಮಾನದ ಅರಸು

ವಿಕ್ರಂ ಚದುರಂಗ

ಇಂದು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜಯಂತಿ

ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಮುತ್ಸದ್ದಿತನ, ಚಾಣಾಕ್ಷ ಸ್ವಭಾವದ ಬಗ್ಗೆ, ಅವರು ಕರ್ನಾಟಕ ರಾಜ್ಯಕ್ಕೆ ಕೊಟ್ಟ ಎಲ್.ಜಿ.ಹಾವನೂರು ವರದಿ, ಭೂ ಸುಧಾರಣೆ, ಜನಸಾಮಾನ್ಯರಿಗೆ ಹಾಕಿ ಕೊಟ್ಟ ಕ್ರಾಂತಿಕಾರಕ ಯೋಜನೆಗಳು, ದೀನ – ದಲಿತರ ಉದ್ಧಾರ… ಹೀಗೆ ಅವರನ್ನು ಕುರಿತು ಅನೇಕ ಪುಸ್ತಕಗಳು ಬಂದಿವೆ. ಅವರಿಗಿದ್ದ Leadership Qualitis (ಜನ ನಾಯಕ ಗುಣಗಳು) ಪ್ರೆಗ್ ಮೆಟಿಸಂ, ಅವರ ಅರ್ಥಗರ್ಭಿತ ಮೌನ (ಮೌನವಾಗಿದ್ದವರನ್ನು ಬ್ರಹ್ಮನೂ ಗೆಲ್ಲಲಾರ) ಹೀಗೆ ಅನೇಕ ಬಗೆಯ ಸ್ವಭಾವಗಳು ದಾಖಲಿಸಲ್ಪಟ್ಟಿವೆ.

ದೇವರಾಜ ಅರಸು ಅವರು ನಮ್ಮ ನಾಡು ಕಂಡ ಧಿಮಂತ ನಾಯಕ. ಕಡಿಮೆ ಜನಸಂಖ್ಯೆ ಇರುವ ಜನಸಮುದಾಯದಲ್ಲಿ ಹುಟ್ಟಿದ ಅವರು, ಸಾಮಾನ್ಯ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿ, ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಸಾಮಾನ್ಯ ರೈತರಾಗಿದ್ದವರು. ರೈತರು ಅನುಭವಿಸುತ್ತಿದ್ದ ಆರ್ಥಿಕ ಮತ್ತು ಸಾಮಾಜಿಕ ಸಂಕಷ್ಟಗಳನ್ನು ಕಣ್ಣಾರೆ ಕಂಡು, ಆದಷ್ಟು ಮಟ್ಟಿಗೆ ಪರಿಹರಿಸಬೇಕು ಎಂದು ಸಂಕಲ್ಪ ಮಾಡಿದ್ದರು. ಅದರಂತೆಯೇ ನಡೆದುಕೊಂಡ ಅಪರೂಪದ ರಾಜಕಾರಣಿ.

ನಾನು ಅರಸು ಅವರಲ್ಲಿ ಕಂಡ ವಿಶಿಷ್ಟವಾದ ಗುಣಗಳನು, ನನ್ನ ಗ್ರಹಿಕೆಗೆ ಬಂದ ಒಂದೆರಡುವಿವರಗಳನ್ನು ಇಲ್ಲಿ ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ. ೧೯೧೫ರ ಆಗಸ್ಟ್ ೨೦ರಂದು ಜನಿಸಿದ ಅರಸು ಅವರು ರಾಜಕಾರಣಿಯಾಗಿ ಬೆಳೆದು, ಎರಡು ಬಾರಿ ಈ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದು ಅನುಕರಣೀಯ. ರೈತರು, ಹಿಂದುಳಿದ ವರ್ಗಗಳು, ದಲಿತರ ನೋವುಗಳಿಗೆ ಧ್ವನಿಯಾದಗಿದ್ದರು. ೧೯೮೨, ಜೂನ್ ೬ರಂದು ಅರಸು ಅಸುನೀಗಿದರು.ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕು ಕಲ್ಲಹಳ್ಳಿಯಲ್ಲಿ ವಾಸ ಮಾಡುತ್ತಿದ್ದದ್ದು ಒಂದೇ ಒಂದು ಜೈನ ಕ್ಷತ್ರಿಯ ಕುಟುಂಬ. ನಮ್ಮ ತಂದೆ ಸುಬ್ರಹ್ಮಣ್ಯರಾಜೇ ಅರಸು ಕನ್ನಡ ಸಾರಸ್ವತ ಲೋಕದಲ್ಲಿ ಚದುರಂಗ ಎಂದೇ ಖ್ಯಾತರಾದವರು. ಅವರು ದೇವರಾಜ ಅರಸು ಅವರಿಗೆ ದೊಡ್ಡಮ್ಮನ ಮಗ.

ಅರಸು ಅವರ ಮುತ್ತಜ್ಜಿ ಮತ್ತು ನನ್ನ ಅಜ್ಜಿ ಅಕ್ಕ ತಂಗಿಯರು. ಹಾಗಾಗಿ ಅವರು ನನ್ನ ಅಣ್ಣ. ನಮ್ಮದುಜೈನ ಕ್ಷತ್ರಿಯ ವಂಶ. ಸುಪ್ರಸಿದ್ಧ ಜೈನ ಕವಿ,  ಕಲ್ಲಹಳ್ಳಿಯನ್ನು ಆಳಿದ ಭೂಪ ಮೂರನೆಯ ಮಂಗರಸ ನಮ್ಮ ಪೂರ್ವಿಕರು. ಅವರು ಜೆಟ್ಟಿಯಾಗಿಯೂ ಪ್ರಸಿದ್ಧರು. ಅವರನ್ನು ಸೋಲಿಸಬೇಕು ಎಂಬ ಹಠದಿಂದ ಉತ್ತರ ಭಾರತದಪೈಲ್ವಾನ್ ಕಲ್ಲಹಳ್ಳಿಗೆ ಬಂದು ಅವರಿಗೆ ಸವಾಲು ಹಾಕುತ್ತಾನೆ. ತಮ್ಮ ಅರಮನೆಯ ಮುಂಭಾಗದಲ್ಲಿ  ಸಾಮಾನ್ಯ ರೈತನಂತೆ ಕಾಣುತ್ತಿದ್ದ, ಬೆಳಿಗ್ಗೆ ಮೈಗೆ ಎಣ್ಣೆಯನ್ನು ಬಳಿದುಕೊಂಡ ಮಂಗರಸರು ಅವನನ್ನು ನೋಡಿ ಏನೂ ಮಾತನಾಡದೆ ಅರಮನೆಗೆ ಹೋಗಿ ಉದ್ದನೆಯ ಕಬ್ಬಿಣದ ಹಾರೆಯನ್ನು ತರುತ್ತಾರೆ.

ಉದ್ದವಾದ ಹಾರೆಯನ್ನು ತಾವು ಕತ್ತರಿಯ ಹಾಗೆ ಬಗ್ಗಿಸಬೇಕು ಎಂದು ಹೇಳಿದರು. ಅಯ್ಯೋ ಇಷ್ಟೇನಾ ಎಂದು ಜಂಭದಿಂದ ಅದನ್ನು ಕೈಗೆ ಎತ್ತಿಕೊಂಡು ಬಗ್ಗಿಸಲಾಗದೇ ಸೋತು ಹೋಗುತ್ತಾನೆ. ಇದನ್ನು ತೆಗೆದುಕೊಂಡು ನಾನು ಪ್ರಯತ್ನಿಸಬಹುದೇ ಎಂದು ಹೇಳಿದಾಗ ಉತ್ತರ ಭಾರತ ಜೆಟ್ಟಿ ನನ್ನ ಕೈಯಿಂದಲೇ ಆಗಲಿಲ್ಲ, ನಿನ್ನ ಕೈಯಿಂದ ಆಗುತ್ತದೆಯೇ ಎಂದು ಅಪಹಾಸ್ಯ ಮಾಡಿದನು. ಮಂಗರಸರು ಉದ್ದವಾದ ಹಾರೆಯನ್ನು ಕೈಯಲ್ಲಿ ಹಿಡಿದು ಕ್ಷಣಾರ್ಧದಲ್ಲಿ ಅದನ್ನು ಬಗ್ಗಿಸಿಬಿಟ್ಟರು. ಆಗ ಅವರು ಆ ಮಹಾನುಭಾವ ದೊರೆಯೇ ಇರಬೇಕು ಎಂದು ತಿಳಿದು ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ದೊರೆ ಮಂಗರಸ ಅವನನ್ನು ಸನ್ಮಾನ ಮಾಡಿ ಬೀಳ್ಕೊಟ್ಟರು.

ಮೂರನೆಯ ಮಂಗರ ದೊರೆಯ ಗುಣಗಳಾದ ಶಕ್ತಿ, ಬಲ, ಸಾಮರ್ಥ್ಯ, ಅಚಲವಾದ ನಿಯಂತ್ರಣ, ಮಾನಸಿಕ ಶಿಸ್ತು, ಸೋಲನ್ನು ಒಪ್ಪಿಕೊಳ್ಳದ ಜಾಯಮಾನ, ವಿನಯ, ಸಂಪನ್ನತೆ, ಕಷ್ಟ ಸಹಿಷ್ಣುತೆ, ಎಲ್ಲರನ್ನೂ ಸಮಾಧಾನ ಮಾಡುವ ರೀತಿ, ಈ ಅಪರೂಪದ ಗುಣಗಳು ನನ್ನ ಅಣ್ಣ ದೇವರಾಜ ಅರಸು ಅವರಲ್ಲಿ ವಂಶವಾಹಿಯಾಗಿ ಬಂದಿದ್ದವು. ಇನ್ನೊಂದು ವಿವರ – ಪಿ.ಲಂಕೇಶ್ ನಮ್ಮ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಸಿದ್ಧವಾದ ಹೆಸರು. ಅವರ ‘ಲಂಕೇಶ್ ಪತ್ರಿಕೆ’ ಕನ್ನಡ ಪತ್ರಿಕೋದ್ಯಮದಲ್ಲಿ ವಿಶಿಷ್ಟವಾದ ಕನ್ನಡಿಗರ ಗುಣಮಟ್ಟದ ಜಾಣ – ಜಾಣೆಯರ ಪತ್ರಿಕೆಯಾಗಿತ್ತು. ಒಮ್ಮೆ ಲಂಕೇಶ್ ಅವರು ದೇವರಾಜ ಅರಸು ಅವರನ್ನು ಭೇಟಿಯಾಗಿ ಇಬ್ಬರೂ ದೀರ್ಘ ಕಾಲ ರಾಜಕೀಯ ಮತ್ತು ಸಾಮಾಜಿಕ ಹೊಸ ಆವಿಷ್ಕಾರಗಳ ಬಗ್ಗೆ ಸಾಂಸ್ಕೃತಿಕವಾಗಿ ಜಡ್ಡುಗಟ್ಟಿದ ಸಮಾಜಕ್ಕೆ ಚುರುಕು ಮುಟ್ಟಿಸಲು ಏನು ಮಾಡಬೇಕು ಎಂದು ಗಾಢವಾಗಿ ಆಲೋಚನೆ ಮಾಡುತ್ತಿದ್ದರು. ಇಂತಹ ಚರ್ಚೆ ನಡೆದ ಒಂದು ದಿನ ರಾತ್ರಿ ಲೇಟ್ ಆಗಿತ್ತು. ಆಗ ದೇವರಾಜ ಅರಸು ಅವರು ಲಂಕೇಶ್ ಅವರನ್ನು ಕುರಿತು, “ಬನ್ನಿ ನಾನೇ ಗಾಂಧಿ ಬಜಾರಿನಲ್ಲಿರುವ ನಿಮ್ಮ ಮನೆಗೆ ನನ್ನ ಕಾರಿನಲ್ಲಿ ಡ್ರಾಪ್ ಮಾಡುತ್ತೇನೆ’ ಎಂದು ಹೇಳಿ ಅರಸು ಅವರೇ ಡ್ರೈವ್ ಮಾಡಿಕೊಂಡು ಲಂಕೇಶ್ ಅವರನ್ನು ಜತೆಗೆ ಕರೆದೊಯ್ಯುತ್ತಿದ್ದರು. ಆ ಸಂದರ್ಭದಲ್ಲಿ ಅವರನ್ನು ಭ್ರಷ್ಟಾಚಾರಿ ಎಂದು ಟೀಕೆ ಮಾಡುತ್ತಿದ್ದ ಲಂಕೇಶ್ ಮೇಷ್ಟರಿಗೆ, ವರ್ಣರಂಜಿತವಾದ, ಕ್ರಾಂತಿಕಾರಿ ಇತಿಹಾಸವೇ ನನ್ನ ಜೊತೆ ಬರುತ್ತಿದೆ ಎಂಬಂತೆ ಭಾಸವಾಗಿತ್ತಂತೆ.

ನಾನು ಹತ್ತಿರದಿಂದ ನೋಡಿ, ನನ್ನ ಅಣ್ಣ ದೇವರಾಜ ಅರಸು ಅವರನ್ನು ಅರ್ಥ ಮಾಡಿಕೊಂಡ ರೀತಿ ಇದು. ಅವರು ಅಪ್ಪಟ ಚಿನ್ನ. ಆದರೆ ರಾಜಕೀಯ ಭ್ರಷ್ಟಾಚಾರದ ಹುಳು ಅವರನ್ನು ಬಿಟ್ಟುಬಿಟ್ಟಿದ್ದರೆ, ಪವಿತ್ರವಾದ ದೇವರ ಪೂಜೆಗೆ ಅವರು ಪರಿಮಳ ಬೀರುವ ಹೂ ಆಗಿರುತ್ತಿದ್ದರು.

” ಮೂರನೆಯ ಮಂಗರ ದೊರೆಯ ಗುಣಗಳಾದ ಶಕ್ತಿ, ಬಲ, ಸಾಮರ್ಥ್ಯ, ಅಚಲವಾದ ನಿಯಂತ್ರಣ, ಮಾನಸಿಕ ಶಿಸ್ತು, ಸೋಲನ್ನು ಒಪ್ಪಿಕೊಳ್ಳದ ಜಾಯಮಾನ, ವಿನಯ, ಸಂಪನ್ನತೆ, ಕಷ್ಟ ಸಹಿಷ್ಣುತೆ, ಎಲ್ಲವನ್ನೂ ಸಮಾಧಾನ ಮಾಡುವ ರೀತಿ, ಈ ಅಪರೂಪದ ಗುಣಗಳು ನನ್ನ ಅಣ್ಣ ದೇವರಾಜ ಅರಸು ಅವರಲ್ಲಿ ವಂಶವಾಹಿಯಾಗಿ ಬಂದಿದ್ದವು.”

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಅಂಚೆ ಕಚೇರಿ ಚಲನ್‌ಗಳು ಕನ್ನಡದಲ್ಲಿರಲಿ

ಅಂಚೆ ಕಚೇರಿಗಳಲ್ಲಿ ಗ್ರಾಹಕರು ಹಣ ಕಟ್ಟುವ ಉಳಿತಾಯ ಖಾತೆ, ಆರ್‌ಡಿ , ಪಿಪಿಎಫ್, ಎಂಐಎಸ್ ಹಾಗೂ ಅಂಚೆ ಕಚೇರಿಯ ವಿವಿಧ…

23 seconds ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ರಾಜ್ಯ ಸರ್ಕಾರದ ಮೇಲೆ ರಾಜ್ಯಪಾಲರ ಸವಾರಿಗೆ ಬೇಕಿದೆ ಕಡಿವಾಣ

ರಾಜ್ಯಗಳ ಆಡಳಿತ ಸಂವಿಧಾನಬದ್ಧವಾಗಿ ನಡೆಯುವಂತೆ ಮೇಲುಸ್ತುವಾರಿಯಾಗಿ ಕೇಂದ್ರ ಸರ್ಕಾರದ ಶಿಫಾರಸಿನಂತೆ ರಾಷ್ಟ್ರಪತಿ ಅವರು ರಾಜ್ಯಪಾಲರನ್ನು ನೇಮಕ ಮಾಡುವುದು ೧೯೫೦ರಿಂದ ನಡೆದುಕೊಂಡು…

5 mins ago

ಮೂಗಿನ ನೇರಕ್ಕೆ ಇತಿಹಾಸವನ್ನು ತಿರುಚುವುದಿದೆಯಲ್ಲಾ….

‘ಕುಸೂ ಕುಸೂ ಹೇಳಪ್ಪ ಹೇಳು ನನ್ನ ಕಂದಾ. ಅವ್ವಾ... ನಾಳಕ ಬಾವುಟದ ಹಬ್ಬ. ಬಾವುಟ ಏರಿಸೋ ಹಬ್ಬ. ಇಸ್ಕೂಲಿಗೆ ಹೊತ್ತಿಗೆ…

11 mins ago

ಸಂವಿಧಾನ ನಮ್ಮ ಬಳಿ ಇದೆ, ಆದರೆ ಅದರ ಧ್ವನಿ ಎಲ್ಲಿದೆ?

ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ವಾಸ್ತವದಲ್ಲಿ ನಾವು ಎಷ್ಟು ಮುಕ್ತರಾಗಿದ್ದೇವೆ? ಭ್ರಷ್ಟಾಚಾರ, ಪರಿಸರ ನಾಶ, ಮಾಲಿನ್ಯ ಹಾಗೂ…

15 mins ago

ಗಣರಾಜ್ಯೋತ್ಸವದ ಅಯೋಮಯ ಇಂಗ್ಲಿಷ್ ಭಾಷಣ

ಗಣರಾಜ್ಯೋತ್ಸವ ಎಂದೊಡನೆ ನಾನು ಪ್ರೌಢಶಾಲೆಯಲ್ಲಿ ಸತತವಾಗಿ ೩ವರ್ಷ ಮಾಡಿದ ಇಂಗ್ಲಿಷ್ ಭಾಷಣ ನೆನಪಾಗುತ್ತದೆ. ಈ ದಿನದ ಮಹತ್ವದ ಬಗ್ಗೆ ಇತ್ತೀಚೆಗೆ…

18 mins ago

ಈಗ ಗಣರಾಜ್ಯೋತ್ಸವದಲ್ಲೂ ದ್ವೇಷದ ಉರಿಗಾಳಿ

ಗಣರಾಜ್ಯೋತ್ಸವ ಅಂದರೆ ನನಗೆ ನೆನಪಾಗೋದು ಶಾಲಾ ದಿನಗಳು. ಗಣರಾಜ್ಯದ ಹಿಂದಿನ ಎರಡು ಮೂರು ದಿನಗಳು ಯಾವುದೇ ತರಗತಿ ನಡೆಯುತ್ತಿರ ಲಿಲ್ಲ.…

21 mins ago