ಡಿ.ವಿ.ರಾಜಶೇಖರ
ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಗಾಜಾ ಪ್ರದೇಶದ ಹಮಾಸ್ ಉಗ್ರವಾದಿಗಳ ನಡುವೆ ನಡೆಯುತ್ತಿರುವ ಯುದ್ಧ ಕ್ರಮೇಣ ಬೇರೆ ಬೇರೆ ಪ್ರದೇಶಗಳಿಗೂ ಹಬ್ಬುತ್ತಿದ್ದು, ವಿಶ್ವ ಬಿಕ್ಕಟ್ಟಿಗೆ ಎಡೆಮಾಡಿ ಕೊಡುತ್ತಿರುವಂತೆ ಕಾಣುತ್ತಿದೆ. ಗಾಜಾ ಪ್ರದೇಶದ ಮೇಲೆ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ಆರಂಭಿಸಿ ನೂರು ದಿನಗಳು ಕಳೆದರೂ ಸುಮ್ಮನಿದ್ದ ಹಮಾಸ್ ಬೆಂಬಲದ ಇರಾನ್ ಈಗ ಇದ್ದಕ್ಕಿದ್ದಂತೆ ಪರೋಕ್ಷವಾಗಿ ಕಣಕ್ಕೆ ಇಳಿದಿದೆ. ಇರಾಕ್, ಸಿರಿಯಾದ ಮೇಲೆ ಕ್ಷಿಪಣಿ ದಾಳಿ ನಡೆಸಿದ ನಂತರ ಪಾಕಿಸ್ತಾನದ ಮೇಲೆಯೂ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಮುಂಬರುವ ದಿನಗಳಲ್ಲಿ ಯುದ್ಧ ಭಿನ್ನ ಸ್ವರೂಪ ತಾಳಬಹುದು ಎಂದು ಊಹಿಸಲಾಗಿದೆ.
ಗಾಜಾದ ಹಮಾಸ್ ಉಗ್ರವಾದಿಗಳ ಪರವಾಗಿ ಲೆಬನಾನ್‌ನ ಇರಾನ್ ಬೆಂಬಲಿತ ಷಿಯಾ ಜನಾಂಗದ ಹೆಜಬುಲ್ಲಾ ಹೋರಾಟಗಾರರು ಇಸ್ರೇಲ್ ಸೇನೆಯ ಮೇಲೆ ಸಶಸ್ತ್ರ ದಾಳಿಯನ್ನು ಮುಂದುವರಿಸುತ್ತಿರುವಂತೆಯೇ ಯಮನ್‌ನ ಇರಾನ್ ಬೆಂಬಲದ ಹೌತಿ ಉಗ್ರವಾದಿಗಳು ಕೆಂಪುಸಮುದ್ರದ ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ಸಂಚರಿಸುವ ತೈಲ, ಅಡುಗೆ ಎಣ್ಣೆ, ಆಹಾರ ಧಾನ್ಯಗಳನ್ನು ಹೊತ್ತ ಸರಕು ಸಾಗಣೆ ಹಡಗುಗಳ ಮೇಲೆ ಕ್ಷಿಪಣಿ ಮತ್ತು ಡೋನ್ ದಾಳಿ ನಡೆಸುತ್ತಿದ್ದಾರೆ. ಇದರಿಂದಾಗಿ ಅಂತಾರಾಷ್ಟ್ರೀಯ ಸರಕು ಸಾಗಣೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ಮೊದ ಮೊದಲು ಇಸ್ರೇಲ್‌ಗೆ ಸಂಬಂಧಿಸಿದ ಹಡಗುಗಳ ಮೇಲೆ ನಡೆಯುತ್ತಿದ್ದ ದಾಳಿ ಕ್ರಮೇಣ ಅಮೆರಿಕ ಸೇರಿದಂತೆ ಆ ಜಲಮಾರ್ಗದಲ್ಲಿ ಸಂಚರಿಸುವ ಎಲ್ಲ ಸರಕು ಸಾಗಣೆ ಹಡಗುಗಳ ಮೇಲೆಯೂ ನಡೆಯುತ್ತಿದೆ. ಹೀಗಾಗಿಯೇ ಭಾರತದ ಮಂಗಳೂರು ಬಂದರಿಗೆ ಬರಬೇಕಿದ್ದ ಸರಕು ಸಾಗಣೆ ಹಡಗೊಂದರ ಮೇಲೂ ಕ್ಷಿಪಣಿ ದಾಳಿ ನಡೆದಿದೆ. ಸೂಯೆಜ್ ಕಾಲುವೆ ಮತ್ತು ಮೆಡಿಟರೇನಿಯನ್ ಸಮುದ್ರದ ಸೈಯಿದ್ ಬಂದರಿಗೆ ಸಂಪರ್ಕ ಕಲ್ಪಿಸುವ ಕೆಂಪು ಸಮುದ್ರದ ಜಲಮಾರ್ಗ ಯೂರೋಪ್, ಏಷ್ಯಾ ಮತ್ತು ಆಫ್ರಿಕಾ ನಡುವೆ ಸರಕು ಸಾಗಣೆಗೆ ಪ್ರಮುಖವಾಗಿದೆ. ಆ ಮಾರ್ಗ ಬಿಟ್ಟರೆ ಸರಕು ಸಾಗಣೆ ಹಡಗುಗಳು ಆಫ್ರಿಕಾದ ದಕ್ಷಿಣ ತುದಿಯ ಅತ್ಯಂತ ದುರ್ಗಮ ಕೇಪ್ ಆಫ್ ದಿ ಗುಡ್ ಹೋಪ್ ಜಲ ಪ್ರದೇಶ ಸುತ್ತಿಕೊಂಡು ಹೋಗಬೇಕಾಗಿದೆ. ಇದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ಅಲ್ಲದೆ ಸಾಗಣೆ ವೆಚ್ಚವೂ ಹೆಚ್ಚುತ್ತದೆ. ಹೌತಿ ಹೋರಾಟಗಾರರ ದಾಳಿಯನ್ನು ಎದುರಿಸಲು ಅಮೆರಿಕ ಮತ್ತು ಬ್ರಿಟನ್ ಮತ್ತಿತರ ದೇಶಗಳು ಒಂದು ಸುರಕ್ಷಾ ಒಕ್ಕೂಟ ರಚಿಸಿಕೊಂಡು ಕೆಂಪು ಸಮುದ್ರದಲ್ಲಿ ಸರಕು ಸಾಗಣೆ ಹಡಗುಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿವೆ. ಆದರೂ ಹೌತಿಗಳ ದಾಳಿಯಿಂದ ಅನೇಕ ಹಡಗುಗಳಿಗೆ ಹಾನಿಯಾಗಿದೆ. ಇದರಿಂದಾಗಿ ಅಮೆರಿಕ ಹಾಗೂ ಬ್ರಿಟನ್ ಜೊತೆಗೂಡಿ ಯೆಮೆನ್‌ನ ಹೌತಿಗಳ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸುತ್ತಿವೆ. ಆದರೂ ಹೌತಿಗಳ ದಾಳಿ ನಿಂತಿಲ್ಲ. ಗಾಜಾದಲ್ಲಿ ಇಸ್ರೇಲ್ ಯುದ್ಧ ನಿಲ್ಲಿಸುವವರೆಗೂ ಈ ದಾಳಿ ಮುಂದುವರಿಯುತ್ತದೆ ಎಂದು ಹೌತಿ ನಾಯಕರು ಘೋಷಿಸಿದ್ದಾರೆ.
ಷಿಯಾ ಪಂಗಡಕ್ಕೆ ಸೇರಿದ ಯಮೆನ್ ಹೌತಿಗಳಿಗೆ ಅದೇ ಜನಾಂಗದ ಪ್ರಾಬಲ್ಯವಿರುವ ಇರಾನ್ ಬೆಂಬಲ ಕೊಡುತ್ತಿರುವುದು ಈಗ ರಹಸ್ಯವಾಗಿ ಉಳಿದಿಲ್ಲ. ಯೆಮೆನ್‌ನ ಉತ್ತರದ ಬಹುಭಾಗವನ್ನು ನಿಯಂತ್ರಿಸುತ್ತಿರುವ ಈ ಹೌತಿಗಳು ಸುನ್ನಿ ಪಂಗಡಕ್ಕೆ ಸೇರಿದ ಸೌದಿ ಅರೇಬಿಯಾ ಬೆಂಬಲದ ಸರ್ಕಾರದ ವಿರುದ್ಧ ಬಂಡಾಯ ಎದ್ದು ಹೋರಾಟ ನಡೆಸುತ್ತಿದ್ದಾರೆ. ಹೌತಿಗಳ ವಿರುದ್ಧದ ಸರ್ಕಾರದ ಕಾರ್ಯಾಚರಣೆಗೆ ಸೌದಿ ಅರೇಬಿಯಾ ಬೆಂಬಲ ನೀಡುತ್ತಿದ್ದು, ಅದಕ್ಕೆ ಅಮೆರಿಕ ನೆರವಾಗುತ್ತಿರುವ ವಿಚಾರವೂ ಈಗ ರಹಸ್ಯವಾಗಿ ಉಳಿದಿಲ್ಲ. ಆದರೆ 2022ರಲ್ಲಿ ಸಂಧಾನ ನಡೆದ ನಂತರ ಸೌದಿ ಅರೇಬಿಯಾ ಮತ್ತು ಯುಎಇ ಈ ಸಂಘರ್ಷದಿಂದ ಹಿಂದೆ ಸರಿದಿವೆ. ಆದರೂ ಯೆಮೆನ್‌ನ ದಕ್ಷಿಣ ಭಾಗವನ್ನು ಹಿಡಿತಕ್ಕೆ ತಂದುಕೊಳ್ಳುವ ಹೋರಾಟ ಮುಂದುವರಿಸಿದೆ. ಗಾಜಾದ ವಿರುದ್ಧ ಇಸ್ರೇಲ್ ದಾಳಿಯ ನಂತರ ಸೌದಿ ಅರೇಬಿಯಾ ಹೌತಿಗಳು ಕೆಂಪುಸಮುದ್ರದಲ್ಲಿ ನಡೆಸುತ್ತಿರುವ ದಾಳಿ ವಿಚಾರದಲ್ಲಿ ತಟಸ್ಥ ನಿಲುವು ತಳೆದಿದೆ. ಹೀಗಾಗಿ ಹೌತಿಗಳಿಗೆ ಹೊಸ ಶಕ್ತಿ ಬಂದಂತಾಗಿದೆ.
ಗಾಜಾ ಯುದ್ಧ ಪಶ್ಚಿಮ ಏಷ್ಯಾವನ್ನು ಬಿಕ್ಕಟ್ಟಿನತ್ತ ದೂಡುತ್ತಿರುವಾಗ ಈ ವಾರದ ಮೊದಲ ಭಾಗದಲ್ಲಿ ಪಾಕಿಸ್ತಾನದ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿ ಬಹಳ ಜನರಿಗೆ ಆಶ್ಚರ್ಯ ಹುಟ್ಟಿಸಿತ್ತು.
ಪಾಕಿಸ್ತಾನ ಮತ್ತು ಇರಾನ್ ನಡುವೆ ಉತ್ತಮ ಬಾಂಧವ್ಯ ಇದ್ದರೂ ಇಂಥ ದಾಳಿ ನಡೆದದ್ದಾರೂ ಏಕೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಇರಾಕ್ ಮತ್ತು ಸಿರಿಯಾ ಮೇಲೆ ಯಾವ ಕಾರಣಕ್ಕೆ ದಾಳಿ ನಡೆಸಲಾಯಿತೋ ಅದೇ ಕಾರಣಕ್ಕೆ ಪಾಕಿಸ್ತಾನದ ಮೇಲೆಯೂ ಇರಾನ್ ದಾಳಿ ನಡೆಸಿದೆ. ಅಂದರೆ ತನ್ನ ವಿರೋಧಿ ಜಸ್-ಅಲ್ ಅದಲ್ ಉಗ್ರವಾದಿ ನೆಲೆಗಳನ್ನು ನಾಶ ಮಾಡುವ ಉದ್ದೇಶದಿಂದ ತಾನು ದಾಳಿ ನಡೆಸಿದ್ದಾಗಿ ಇರಾನ್ ನಂತರ ಸ್ಪಷ್ಟಪಡಿಸಿದೆ. ಬಲೂಚಿಸ್ತಾನ
ಮುಖ್ಯವಾಗಿ ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಇರಾನ್‌ನ ಭಾಗವಾಗಿದೆ. ಹೆಚ್ಚು ಭಾಗ ಪಾಕಿಸ್ತಾನ ವ್ಯಾಪ್ತಿಯಲ್ಲಿದ್ದು, ಸ್ವಾಯತ್ತತೆಗಾಗಿ ಬ ಬಲೂಚಿಗಳು ಹೋರಾಡುತ್ತ ಬಂದಿದ್ದಾರೆ. ಬಲೂಚಿಸ್ತಾನ ಸಂಪತ್‌ಭರಿತವಾದ ಪ್ರದೇಶ ವಾದರೂ ಇಂದಿಗೂ ಬಲೂಚಿಗಳು ಬಡವರಾಗಿಯೇ ಉಳಿದಿದ್ದಾರೆ. ಮೂರೂ ದೇಶಗಳು ಅವರನ್ನು ನಿರ್ಲಕ್ಷಿಸುತ್ತ ಬಂದಿರುವುದರಿಂದ ಪ್ರತ್ಯೇಕ ತಾವಾದ ಅಲ್ಲಿ ಬಲವಾಗಿ ಬೆಳೆದಿದೆ. ಇದಕ್ಕೆ ಪ್ರತೀಕಾರವಾಗಿ ಬಲೂಚಿ ಪ್ರತ್ಯೇಕತಾವಾದಿಗಳ ನೆಲೆಗಳಿರುವ ಇರಾನ್‌ನ ಸಿಸ್ಟಾನ್-ಬಲೂಚಿಸ್ತಾನ ಪ್ರಾಂತ್ಯದ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡೋನ್ ದಾಳಿ ನಡೆಸಲಾಯಿತೆಂದು ಪಾಕಿಸ್ತಾನ ಹೇಳಿದೆ. ಇರಾನ್ ನಡೆಸಿದ ದಾಳಿಯಲ್ಲಿ ನಾಲ್ವರು ಮತ್ತು ಪಾಕಿಸ್ತಾನ ನಡಸಿದ ಮಿಲಿಟರಿ ದಾಳಿಯಲ್ಲಿ ಒಂಬತ್ತು ಜನರು ಸತ್ತಿದ್ದಾರೆ. ಸಾರ್ವಭೌಮತೆಯನ್ನು ಗೌರವಿಸುವ ಮಾತನ್ನು ಎರಡೂ ದೇಶಗಳು ಹೇಳಿವೆ. ಪಾಕಿಸ್ತಾನ ಪ್ರತಿದಾಳಿ ನಡೆಸಿದ ನಂತರ ಪರಿಸ್ಥಿತಿ ಹದಗೆಡಬಹುದೆಂದು ಭಾವಿಸಲಾಗಿತ್ತು. ಆದರೆ ಎರಡೂ ದೇಶಗಳು ಸಂಯಮದ ಹಾದಿ ತುಳಿದಿವೆ. ಪಾಕಿಸ್ತಾನದಲ್ಲಿ ಮುಂದಿನ ತಿಂಗಳು ರಾಷ್ಟ್ರೀಯ ಚುನಾವಣೆಗಳು ನಡೆಯಲಿವೆ. ಈಗ ಇರುವುದು ಉಸ್ತುವಾರಿ ಸರ್ಕಾರ, ಪಾಕಿಸ್ತಾನ ಮೊದಲಿನಿಂದಲೂ ಸೇನೆಯ ಪ್ರಭಾವ ವಲಯದಲ್ಲೇ ಕೆಲಸಮಾಡುತ್ತ ಬಂದಿದೆ. ಇರಾನ್ ದಾಳಿಗೆ ಪ್ರತಿ ದಾಳಿ ನಡೆಸದಿದ್ದರೆ ತಾನು ದುರ್ಬಲ ಎಂದು ಜನ ಭಾವಿಸಬಹುದೆಂದು ಸೇನೆ ತಿಳಿದಂತಿದೆ. ಅಂಥ ಒಂದು ಅಭಿಪ್ರಾಯ ಜನರಲ್ಲಿ ಮೂಡಿದರೆ ಅದು ಚುನಾವಣೆಗಳ ಮೇಲೆ ಕೆಟ್ಟ ಪರಿಣಾಮ ಬೀರಬಹುದೆಂದು ಸೇನೆ ತಿಳಿದು ಪ್ರತಿದಾಳಿ ನಡೆಸಿದೆ ಎನ್ನುವ ಮಾತೂ ಕೇಳಿಬಂದಿದೆ.
ಇದೇನೇ ಇದ್ದರೂ ಎರಡೂ ದೇಶಗಳ ಮಧ್ಯೆ ಬಿಕ್ಕಟ್ಟು ಹೆಚ್ಚದಿರಲು ತಾನು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಚೀನಾ ಹೇಳಿದೆ. ಚೀನಾಕ್ಕೆ ಈ ವಿಚಾರದಲ್ಲಿ ತನ್ನದೇ ಹಿತಾಸಕ್ತಿ ಇದೆ. ಬಲೂಚಿಸ್ತಾನದಲ್ಲಿ ಬೆಲ್ಟ್ ಅಂಡ್ ರೋಡ್ ಯೋಜನೆ ಜಾರಿಗೆ ತರುತ್ತಿದ್ದು, ಅಪಾರ ಪ್ರಮಾಣದಲ್ಲಿ ಚೀನಾ ಬಂಡವಾಳ ಹೂಡಿದೆ. ಬಲೂಚಿ ಉಗ್ರವಾದಿಗಳು ಈ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಅನೇಕ ಚೀನೀ ಕಾರ್ಮಿಕರನ್ನು ಕೊಂದ ನಿದರ್ಶನವೂ ಇದೆ. ಈ ಹಿನ್ನೆಲೆಯಲ್ಲಿ ಪರಿಸಿತ್ಥಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಚೀನಾ ಮಧ್ಯಸ್ಥಿಕೆ ವಹಿಸಬಹುದಾದ ಸಾಧ್ಯತೆ ಇದೆ. ಈ ಬೆಳವಣಿಗೆ ಭಾರತಕ್ಕೆ ಅನುಕೂಲಕರವಾದುದೇನೂ ಅಲ್ಲ. ಏಕೆಂದರೆ ನೆರೆಯಲ್ಲಿ ಚೀನಾ ಪ್ರಾಬಲ್ಯ ಸಾಧಿಸುವುದು ಸಹಜವಾಗಿಯೇ ಭಾರತಕ್ಕೆ ಅಹಿತಕರವಾದ ಬೆಳವಣಿಗೆ.
ಇಷ್ಟು ಕಾಲ ಸುಮ್ಮನಿದ್ದ ಇರಾನ್ ಈಗ ತನ್ನ ಮಿಲಿಟರಿ ಬಲವನ್ನು ಪ್ರದರ್ಶಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹಮಾಸ್ ಉಗ್ರವಾದಿಗಳು ಸಂಪೂರ್ಣ ನಾಶವಾಗುವವರೆಗೂ ಗಾಜಾ ಯುದ್ಧ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ನೇತಾನ್ಯಹು ಪುನರುಚ್ಚರಿಸುತ್ತಲೇ ಇದ್ದಾರೆ. ಆದರೆ ಅದರ ಮಿತ್ರ ದೇಶ ಅಮೆರಿಕ ಯುದ್ಧದಿಂದಾಗುತ್ತಿರುವ ಸಾವು ನೋವನ್ನು ಕಡಿಮೆ ಮಾಡಬೇಕೆಂದು ಒತ್ತಾಯಿಸುತ್ತಲೇ ಇದೆ. ಯುದ್ಧ ನಿಲುಗಡೆ ಮಾಡಿ ಒತ್ತೆಯಾಳುಗಳ ಬಿಡುಗಡೆಗೆ ಅವಕಾಶ ಕೊಡಬೇಕೆಂಬುದು ಅಮೆರಿಕದ ಸಲಹೆ. ಆದರೆ ನೇತಾನ್ಯಹು ಇದಕ್ಕೆ ಒಪ್ಪುತ್ತಿಲ್ಲ. ಅಮೆರಿಕದಲ್ಲಿ ಈ ವರ್ಷ ಅಧ್ಯಕ್ಷೀಯ ಚುನಾವಣೆ ನಡೆಯಬೇಕಿದೆ. ಗಾಜಾ ಯುದ್ಧದಲ್ಲಿ ಸಂಭವಿಸುತ್ತಿರುವ ಸಾವು ನೋವುಗಳು ಅಮೆರಿಕನ್ನರನ್ನು ಕಂಗೆಡಿಸಿದೆ. ಗಾಜಾ ಯುದ್ಧದ ವಿಚಾರದಲ್ಲಿ ಅಧ್ಯಕ್ಷ ಬೈಡನ್ ನಿಲುವು ಸಮರ್ಪಕವಾಗಿಲ್ಲ ಎಂಬ ಅಭಿಪ್ರಾಯವೂ ಜನರಲ್ಲಿ ಮೂಡಿಬರುತ್ತಿದೆ. ಚುನಾವಣೆಗಳಲ್ಲಿ ಈ ಅಭಿಪ್ರಾಯ ಪ್ರತಿಫಲಿತವಾಗಬಹುದು ಎನ್ನುವ ಭೀತಿ ಬೈಡನ್‌ಗೆ ಇದೆ. ಹೀಗಾಗಿಯೇ ಹೇಗಾದರೂ ಮಾಡಿ ಗಾಜಾ ಯುದ್ಧ ಅಂತ್ಯಗೊಳಿಸುವ ದಿಸೆಯಲ್ಲಿ ಬೈಡನ್ ಮಾರ್ಗವೊಂದರ ಹುಡುಕಾಟದಲ್ಲಿದ್ದಾರೆ. ಯುದ್ಧ ವಿಸ್ತಾರಗೊಂಡರೆ ಇಸ್ರೇಲ್‌ನ ಗುರಿ ವಿಫಲವಾಗುತ್ತದೆ ಎನ್ನುವುದು ಅಮೆರಿಕದ ಅಭಿಪ್ರಾಯ.
ಅಷ್ಟೇ ಅಲ್ಲ ಯುದ್ಧ ಇತರ ಪ್ರದೇಶಗಳಿಗೂ ಹಬ್ಬಿದರೆ ವಿಶ್ವದ ಆರ್ಥಿಕ ವ್ಯವಸ್ಥೆ ಅಸ್ತವ್ಯಸ್ತವಾಗುತ್ತದೆ ಎನ್ನುವ ಆತಂಕದಲ್ಲೂ ಅಮೆರಿಕ ಇದೆ. ಅದನ್ನು ತಪ್ಪಿಸುವ ದಿಕ್ಕಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಪ್ರಯತ್ನಗಳು ಯಶಸ್ವಿಯಾಗುವ ಯಾವುದೇ ಸೂಚನೆ ಇಲ್ಲದಿರುವುದೇ ದುರಂತ.
ಬೆಂಗಳೂರು: ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿಯು ಬೆಳಗಾವಿ ಚಲೋ ನಡೆಸಲು ಮುಂದಾಗಿದೆ. ಈ ಬಗ್ಗೆ…
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ನಿಯೋಗದೊಂದಿಗೆ ಸಭೆ ನಡೆಸಿ ಕಾಂಗ್ರೆಸ್ ಸರ್ಕಾರ ರೈತರ…
ಹಾಸನ: ಈ ಜಿಲ್ಲೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ನೀಡಿದ ಕೊಡುಗೆ ಏನು ಎಂದು ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ…
ಮೈಸೂರು: ಎಂಎಲ್‌ಸಿ ಸಿ.ಟಿ.ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೇಕ್ ಎನ್‌ಕೌಂಟರ್ ಮಾಡಲು ಯತ್ನಿಸಿದ್ದರು ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ…
50 ವರ್ಷಗಳ ದೂರದೃಷ್ಟಿಯ ಡಿಪಿಆರ್ ಸಿದ್ಧ ಆಗಬೇಕು • ಭಾಮಿ ವಿ ಶೆಣೈ, ಮೈಸೂರು ಗ್ರಾಹಕರ ಪರಿಷತ್ ಮೈಸೂರು ಜಿಲ್ಲಾ…
ಹಾಸನ: ಸಿ.ಟಿ.ರವಿ ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು;…