ಅಂಕಣಗಳು

ವೈಚಾರಿಕ  ಮೌಲ್ಯಗಳ ಬಿತ್ತುವ ‘ಗಾಂಧಿ ಮರ’

ಪ್ರಶಾಂತ್ ಬೆಳತೂರು

ಬಾಲ್ಯ ಕಾಲದಲ್ಲಿ ನಮ್ಮ ಶಾಲಾ ಮೇಷ್ಟ್ರೊಬ್ಬರು ‘ಆ ಹಾಳು ಗಾಂಧಿ ಗಿಡಗಳನ್ನು ಕಿತ್ತೆಸೆಯಲಿಕ್ಕೆ ನಿಮ್ಗೆಷ್ಟು ಖರ್ಚಾಗುತ್ತದೆ? ಶಾಲಾ ಮುಂಬದಿಯ ಆವರಣ ಎಷ್ಟು ಅಸಹ್ಯವಾಗಿ ಕಾಣ್ತಾ ಇದೆಯೇನೋ’ ಎಂದು ಶಾಲಾ ಜವಾನನೊಂದಿಗೆ ಹೌಹಾರುವಾಗ ನಾವು ಯಾವುದೀ ಗಾಂಧಿ ಗಿಡ? ಎಂದು ಶಾಲೆಯ ಸುತ್ತಾ ಕಣ್ಣು ಹಾಯಿಸುತ್ತಾ ಕೂತಿದ್ದ ನೆನಪು ಡಾ.ನೀ.ಗೂ. ರಮೇಶ್ ಅವರ ‘ಗಾಂಧಿಮರ’ ಕವನ ಸಂಕಲನದ ಪುಸ್ತಕ ನೋಡಿ ತತ್ ಕ್ಷಣ ಮರುಕಳಿಸಿತು. ನಿರುಪಯುಕ್ತವಾಗಿ ಹುಲುಸಾಗಿ ಬೆಳೆದುಕೊಂಡಿರುವ ಕಳೆ ಸಸ್ಯಗಳಂತೆ ಗಾಂಧಿ ಹಾಗೂ ಅವರ ತತ್ವಗಳು ಕೂಡ ಪ್ರಸ್ತುತದಲ್ಲಿ ಎಷ್ಟು ನಿಷ್ಪ್ರಯೋಜಕ ಎಂಬ ಅರ್ಥ ದಲ್ಲಿ ಲೇವಡಿ ಮಾಡಲು ಹಾಗೆ ಬಳಸುತ್ತಿದ್ದರೆಂಬುದು ಕಾಲಾಂತರದಲ್ಲಿ ನನ್ನ ಅರಿವಿಗೆ ಬಂದದ್ದು ಬೇರೆಯೇ ವಿಚಾರ.

ತದನಂತರದಲ್ಲಿ ಗಾಂಧಿ ಕುರಿತ ಹತ್ತಾರು ಲೇಖಕರ ಪುಸ್ತಕಗಳ ಪುಟಗಳನ್ನು ತಿರುವಿಹಾಕಿದ್ದೂ ಇದೆ. ಸಾಕ್ಷ್ಯಚಿತ್ರ, ಸಿನಿಮಾ, ವಿಮರ್ಶೆ ಇತ್ಯಾದಿಯಾಗಿ ಗಾಂಧಿಯನ್ನು ಮರು ವಿಮರ್ಶೆಗೆ, ಮರು ಓದಿಗೆ ಒಳಪಡಿಸುತ್ತಿರುವುದು ಕನ್ನಡ ಸಾಹಿತ್ಯದಲ್ಲಿ ಒಳ್ಳೆಯ ಬೆಳವಣಿಗೆ. ಅಂತೆಯೇ ಡಾ.ನೀ.ಗೂ.ರಮೇಶ್ ಅವರ ಈ ‘ಗಾಂಧಿ ಮರ’ ಕವನ ಸಂಕಲನಕ್ಕೆ ಗಾಂಧಿಯ ತತ್ವಾದರ್ಶಗಳೇ ಪೋಷಣಾಶಕ್ತಿ ಮತ್ತು ಜೀವಾಳ. ಈ ಸಂಕಲನದ ವೈಶಿಷ್ಟ್ಯವೆಂದರೆ ಈ ನೆಲದ ಸಾಂಸ್ಕೃತಿಕ ನಾಯಕರುಗಳಾದ ಬಸವಣ್ಣ, ಕನಕದಾಸರು ಮತ್ತು ಕುವೆಂಪು ಅವರನ್ನು ತಮ್ಮ ವೈಚಾರಿಕ ಚಿಂತನೆಗಳಲ್ಲಿ ಕವಿತೆಯಾಗಿಸುವ ಮೂಲಕ ಜಾತಿ ಮೀರಿದ ಬಸವಣ್ಣನವರನ್ನು ಜಾತಿಗಂಟಿಸುವ ಸಣ್ಣತನವನ್ನು, ವ್ಯಕ್ತಿ ಪೂಜೆ ಖಂಡಿಸಿದ ಬಸವಣ್ಣನವರನ್ನೇ ದೇವರು ಮಾಡಿದ ಈ ಸಾಮಾಜಿಕ ವ್ಯವಸ್ಥೆಯ ವ್ಯಂಗ್ಯಕ್ಕೆ ಮರುಕ ಪಡುತ್ತಾ ಕ್ಷಮೆಯಾಚಿಸುವ ಅವರ ಕವಿಹೃದಯ ನೊಂದುಕೊಳ್ಳುತ್ತದೆ..! ಕನಕದಾಸರನ್ನು ‘ವಾಸ್ತವದ ಬೆಳಕು’ ಎನ್ನುವ ಅವರ ಕಾವ್ಯ ಮನೋಧರ್ಮವು ಕವಿತೆಯುದ್ದಕ್ಕೂ ಬೆಳಕಿನ ರೂಪಕದಲ್ಲಿ ಹಿಡಿದಿಟ್ಟಿದೆ.

ಕವಿಯೊಬ್ಬ ತನ್ನ ಬಾಲ್ಯ ಕಾಲದಿಂದ ಇಲ್ಲಿಯವರೆಗೆ ಬೆಳೆದು ಬಂದ ತನ್ನ ಜೀವನಾನುಭವದ ವಿವಿಧ ಮಗ್ಗುಲುಗಳನ್ನು ತನ್ನ ಸೂಕ್ಷ್ಮ ಕಂಗಳಿಂದ ತಾನೇ ನೋಡಿಕೊಂಡು ಸಂವೇದನಾ ಶೀಲತೆಯಲ್ಲಿ ಬರೆದಿರುವುದು ಬಹಳ ವಿಶಿಷ್ಟ. ಹಾಗಾಗಿ ಈ ಸಂಕಲನದ ಹತ್ತಾರು ಕವಿತೆಗಳು ಅವರ ಅನುಭವದ ಮೂಸೆಯಿಂದ ಒಡಮೂಡಿರುವ ಕಾರಣಕ್ಕೆ ವೈವಿಧ್ಯಮಯವಾಗಿವೆ. ಕವಿಯೊಬ್ಬ ತಾನು ಪಡೆದ ಜ್ಞಾನದ ಹೊಳಹುಗಳಿಂದ ಅನ್ಯರ ಬದುಕನ್ನು ತನ್ನೊಳಗೆ ಜೀವಿಸಿ ಬರೆಯಬಲ್ಲ ಎಂಬುದಕ್ಕೆ ‘ಸುಳ್ಳೊಂದು ಮಹಾಮಂತ್ರ’ ಎನ್ನುವ ಕವಿತೆ ಒಂದೊಳ್ಳೆಯ ಉದಾಹರಣೆ. ಗ್ರಾಮೀಣ ಜನಜೀವನದ ಬದುಕನ್ನು ಹೆಚ್ಚು ಆಸ್ವಾದಿಸುವ, ಹಾತೊರೆಯುವ ಕವಿಮನ ನಗರದ ನಿರ್ಲಿಪ್ತತೆಯನ್ನು, ಅನಾಮಿಕತೆಯನ್ನು ಹೇಳುತ್ತಾ ನಗರದ ಜನಜೀವನ ಶೈಲಿಗಳು ಅವರ ದೃಷ್ಟಿಯಲ್ಲಿ ‘ಇದು ನಗರ ಮರುಭೂಮಿಯ ಥರ..!’ ಎಂಬ ನೀರಸತೆಯೆ ಸಾಲುಗಳಿಗೆ ನಮ್ಮನ್ನು ಕೊಂಡೊಯ್ಯುವಾಗ ಕವಿಯು ತಳೆದಿರುವ ನಿಲುವುಗಳು ಮೂಲದಲ್ಲಿ ಗಾಂಧೀಜಿಯವರ ಗ್ರಾಮೀಣ ಭಾರತದ ಪರಿಕಲ್ಪನೆಗಳ ಮೇಲಣ ಮೋಹ ಅಥವಾ ಪ್ರಭಾವವಿರಬಹುದು.

ಆದರೂ ಈ ಕವನ ಸಂಕಲನಕ್ಕೆ ಹೆಚ್ಚಿನ ಮೌಲ್ಯವನ್ನು ತಂದು ಕೊಡುವುದು ಮಾತ್ರ ‘ಗಾಂಧಿ ಮರ’ ಎಂಬ ಕವಿತೆಯೇ..! ಹಾಗಾಗಿ ಈ ಕವಿತೆ ಇಡೀ ಕವನ ಸಂಕಲನದ ಕೇಂದ್ರಬಿಂದು ಕೂಡ ಆಗಿದೆ ಎಂಬುದನ್ನು ಪುಸ್ತಕದ ಶೀರ್ಷಿಕೆಯಿಂದ ಗುರುತಿಸಬಹುದು.ಗಾಂಽಯ ಕುರಿತ ಆಳವಾದ ತಾತ್ವಿಕ ಚಿಂತನೆಯ ನೆಲೆಗಟ್ಟಿನಲ್ಲಿ ಈ ಸಂಕಲನದ ಹಲವು ಕವಿತೆಗಳು ಚಿತ್ರಿತಗೊಂಡಿದ್ದರೂ ಈ ಕವಿತೆ ವಿಮರ್ಶಕನ ದೃಷ್ಟಿಯಿಂದ ಮಹತ್ವವಾದದ್ದು. ಶತಮಾನದ ನಾಯಕನಿಗಾಗಿ ಕಾದು ಕೂತ ಬರಡು ನೆಲದಲ್ಲಿ ಬೀಜವೊಂದು ಅಂಕುರಗೊಂಡು ಹೆಮ್ಮರವಾಗುವ ಪ್ರಕ್ರಿಯೆ ಯನ್ನು ರೂಪಕದಂತೆ ಗಾಂಧಿಯ ವ್ಯಕ್ತಿತ್ವಕ್ಕೆ ಬಳಸಿದರೂ ಆಳದಲ್ಲಿ ಅದು ಕವಿಯ ಅತಿಶಯೋಕ್ತಿ ಎನಿಸುವುದಿಲ್ಲ..! ಏಕೆಂದರೆ ಕವಿ ಗಾಂಧಿ ಎಂಬ ಮಹಾಮರದ ಅಸಲಿಯತ್ತನ್ನು ನಕಲಿ ಗಾಂಧಿವಾದಿಗಳು ಇಲ್ಲವಾಗಿಸಿದ ಬಗೆಯನ್ನು ತೀಕ್ಷ್ಣವಾಗಿ ಖಂಡಿಸುತ್ತಾರೆ. ‘ಅಕಾಲದಲ್ಲಿ ಮೈತುಂಬಾ ಹಣ್ಣಡೆದ ಬಡಕಲು ಮರಕ್ಕೆ ಮುಳ್ಳುಗಳಿಲ್ಲದ ಮಮತೆಯ ತೋಳುಗಳು; ಮೈ ತುಂಬಾ ಹಕ್ಕಿಗಳ ನಂಟು’ ಎಂಬುದು ಗಾಂಧೀಜಿಯವರ ಅಸಾಧಾರಣ ವ್ಯಕ್ತಿತ್ವವನ್ನು, ಅವರ ವ್ಯಕ್ತಿತ್ವದ ಭಾಗವಾದ ಸತ್ಯ, ಅಹಿಂಸೆ, ಸರಳತೆಯನ್ನು ಯಾವುದೇ ಕ್ಲೀಷೆಗಳಿಗೆ ಒಳಗಾಗದೆ ಚಿತ್ರಿಸಿದ್ದಾರೆ.

ಆದರೆ ಕವಿಯ ಒಳಮನಸ್ಸು ಗಾಂಧೀಯ ಕುರಿತು ತುಡಿಯುತ್ತಿರುವುದು ಮತ್ತು ಮರುಕಪಡುತ್ತಿರುವುದು ಎಂದೆಂದಿಗೂ ನಿಲ್ಲದೆ ಪ್ರತಿನಿತ್ಯ ಟೀಕೆಗೊಳಪಡುತ್ತಿರುವ ಕುರಿತು ಆತಂಕವಿದೆ. ‘ಮುಗಿದಿಲ್ಲ ಮಹಾಮರದ ಹತ್ಯೆ; ಕೋಟಿ ಬೇಟೆಗಾರರು ಮತ್ತೆ ಒಂದಾಗಿ ಬೀಜ ಬೇರುಗಳ ಹುಡುಕಿ ಕೊಲ್ಲುತ್ತಾ ದಣಿದಿದ್ದಾರೆ! ಎಂದೂ ಮಸೆಯದ ಚಾಕು ಚೂರಿಗಳ ನಡುರಾತ್ರಿಯಲ್ಲೂ ಝಳುಪಿಸಿದ್ದಾರೆ ಜಾಲತಾಣದ ಜವಾನರು!’ ಎನ್ನುವ ಅವರ ಸಾಲುಗಳಲ್ಲಿ ಕಟು ವಾಸ್ತವವಿದೆ. ರಾಜಕೀಯಕ್ಕಾಗಿ ಹತ್ತು ಹಲವು ಕಾರಣಗಳಿಗಾಗಿ ಗಾಂಧಿಯನ್ನು ಟೀಕಿಸಲು ಮತ್ತು ಪ್ರೀತಿಯ ಮುಖವಾಡ ಧರಿಸಲು ಇಲ್ಲಿ ಹಲವು ಕಾರಣಗಳಿವೆಯಾದರೂ ಅವರ ಅಹಿಂಸೆಯ ಮಂತ್ರಕ್ಕೆ ಮಾತ್ರ ಯಾವ ವಾರಸುದಾರರೂ ಇಲ್ಲದೆ ಹೋದ ವ್ಯಂಗ್ಯವನ್ನು ಗುರುತಿಸುವ ಕವಿ ಗಾಂಧಿಯನ್ನು ತಾತ್ವಿಕ ನೆಲೆಗಟ್ಟಿನಲ್ಲಿ ಅರಿಯದೆ, ಅವರ ಆದರ್ಶಮಯ ಭಾರತದ ಕನಸುಗಳನ್ನು ನುಚ್ಚುನೂರಾಗಿಸಿದ ಲಾಭಕೋರತನಗಳ ಬಗ್ಗೆಯೂ ದನಿಯೆತ್ತಿದ್ದಾರೆ. ಕಮ್ಯೂನಿಸಂ, ಮಾರ್ಕ್ಸಿಸಂ ಎಂಬ ಹತ್ತು ಹಲವು ಸೈದ್ಧಾಂತಿಕ ಸಂಘಟನೆಗಳ ಭಿನ್ನಾಭಿಪ್ರಾಯದ ನಿಲುವುಗಳು ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಮುಖಾಮುಖಿಯಾಗಿಸಿ ಈ ದೇಶದ ಬಹುಸಂಖ್ಯಾತ ಶೂದ್ರ ಸಮುದಾಯದಿಂದ, ದಲಿತರಿಂದ, ಆದಿವಾಸಿಗಳಿಂದ ಗಾಂಧಿಯನ್ನು ಸಂಪೂರ್ಣವಾಗಿ ಕಿತ್ತುಕೊಳ್ಳುವ ಪ್ರಯತ್ನ ನಿರಂತರವಾಗಿ ಸಾಗಿದೆ. ಹೊಸ ತಲೆಮಾರಿಗೆ ಗಾಂಧಿಯನ್ನು ಕೀಳುಮಟ್ಟದಲ್ಲಿ ತುಚ್ಛೀಕರಿಸುವ ರಾಜಕೀಯ ಹುನ್ನಾರಗಳಿಂದಾಗಿ ಗಾಂಧಿ ಯಾರಿಗೆಲ್ಲಾ ಮಾದರಿಯಾಗಬೇಕಿತ್ತೋ, ಆದರ್ಶಪ್ರಾಯ ವಾಗಬೇಕಿತ್ತೋ ಅಂತಹ ಬಹು ಸಂಖ್ಯಾತ ವರ್ಗಗಳಿಗೇ ಗಾಂಧಿಯ ಮೇಲಣ ದ್ವೇಷ ಇಮ್ಮಡಿಯಾಗುವಂತೆ ಮಾಡಲಾಗಿದೆ.

ಪೂನಾ ಒಪ್ಪಂದದ ಮೂಲಕ ದಲಿತರ ನೈಜ ಹಕ್ಕುಗಳನ್ನು ಈ ಹಣ್ಣು ಮುದುಕ ಉಪವಾಸದ ತಂತ್ರ ಹೂಡಿ ಕಸಿದನೆಂಬ ಅಪಕೀರ್ತಿಗೆ ತುತ್ತಾಗಿಸುವಲ್ಲಿ ಅಂಬೇಡ್ಕರವಾದಿಗಳು ಎಂದೂ ಹಿಂದೆ ಬಿದ್ದವರಲ್ಲ! ಹೀಗೆ ಎಲ್ಲಿಯಾದರೂ ಹೇಗೆ ಬೇಕಾದರೂ ಗಾಂಧಿಯನ್ನು ಮತ್ತು ಗಾಂಧಿ ತತ್ವಗಳನ್ನು ವಿನಾಕಾರಣ ಲೇವಡಿ ಮಾಡಬಹುದು ಎಂಬುದನ್ನು ವಿಷಾದನೀಯ ವಾಗಿ ಹೇಳುತ್ತಲೇ ಗಾಂಧಿ ಗತಿಸಿದರೂ, ಗಾಂಧಿಯ ಮೇಲಣ ಟೀಕೆಗಳು ಭರದಿಂದ ನಡೆಯುತ್ತಿದ್ದರೂ, ಗಾಂಧಿಯವರ ಮಾನವೀಯ ಚಿಂತನೆಗಳು ಎಲ್ಲ ಕಾಲಕ್ಕೂ ಈ ನೆಲದಲ್ಲಿ ಮತ್ತೆ ಚಿಗುರೊಡೆದು ನಿಲ್ಲುತ್ತವೆ. ಅವುಗಳಿಗೆ ಅಳಿವಿಲ್ಲವೆಂಬ ಆಶಯದೊಂದಿಗೆ ಸತ್ಯ ಮತ್ತು ಅಹಿಂಸೆ ಎಂಬ ಮಹಾಮಂತ್ರಗಳೇ ಈ ಮಣ್ಣಿನ ಗುಣದ ಜೀವಾಳ ಎಂಬುದನ್ನು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.

ಮಾನವನು ಎಷ್ಟೇ ವೈಜ್ಞಾನಿಕವಾಗಿ ಎತ್ತರಕ್ಕೆ ಏರಿದರೂ ಅವನು ಪ್ರಕೃತಿಯ ಮುಂದೆ ಕುಬ್ಜನೆಂಬ ಕಟು ಸತ್ಯವನ್ನು ಹೇಳುವ ಡಾ. ನೀ. ಗೂ. ರಮೇಶ್ ಅವರ ‘ಗಾಂಧಿ ಮರ’ ಎಂಬ ಕವನ ಸಂಕಲನ ಓದುಗನೆದೆಗೆ ತನ್ನ ವೈಚಾರಿಕ ಚಿಂತನೆಗಳನ್ನು ಬಿತ್ತಬಲ್ಲದು ಎಂಬುದರ ಬಗ್ಗೆ ನನಗೆ ಯಾವ ಸಂದೇಹಗಳಿಲ್ಲ.

ಇಲ್ಲಿನ ನಕಲಿ ದೇಶಭಕ್ತ ಪಡೆಗಳು ಎರಡು ಹೆಜ್ಜೆ ಮುಂದೆ ಹೋಗಿ ಗೋಡ್ಸೆ ಎಂಬ ಆಗಂತುಕನನ್ನು ಈ ನೆಲದ ನೈಜ ದೇಶಭಕ್ತನೆಂದು, ದೇಶಪ್ರೇಮಿಯೆಂದು, ಸ್ವಾತಂತ್ರ್ಯ ಹೋರಾಟಗಾರನೆಂದು ಬಿಂಬಿಸಲೊರಟಿವೆ. ಪ್ರಜ್ಞಾವಂತರಾದವರು, ಬುದ್ಧಿಜೀವಿಗಳು ತುಟಿ ಬಿಚ್ಚಲಾರದೆ ಮೌನವಹಿಸಿರುವ ಇಂತಹ ಹೊತ್ತಿನಲ್ಲಿ, ಮೇಲಾಗಿ ಗಾಂಧಿಯ ಕುರಿತು ಏನೇ ಮಾತಾಡಿದರೂ ಅದು ಅಪದ್ದವೆನಿಸುವ ವಿಷಮ ಕಾಲದಲ್ಲಿ ಕವಿಯೊಬ್ಬ ತನ್ನೆಲ್ಲಾ ಕವಿತೆಗಳಿಗೆ ‘ಗಾಂಧಿ ಮರ’ವೆಂದು ಹೆಸರಿಟ್ಟು ಪ್ರಕಟಿಸಿರುವುದು ಖುಷಿಯ ಸಂಗತಿ

ಆಂದೋಲನ ಡೆಸ್ಕ್

Recent Posts

ಬಿಡದಿ ಟೌನ್‌ಶಿಪ್: ಪೋಸ್ಟರ್ ಸಮರ

ಬೆಂಗಳೂರು : ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜಾ.ದಳ ನಡುವಿನ ವಾಕ್ ಸಮರ ತಾರಕಕ್ಕೇರಿದೆ.…

1 hour ago

UGC NET | ಪ್ರವೇಶ ಪತ್ರ ಬಿಡುಗಡೆ

ಹೊಸದಿಲ್ಲಿ : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಯುಜಿಸಿ ನೆಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗಾಗಿ ಪ್ರವೇಶ ಪತ್ರಗಳನ್ನು ಬುಧವಾರ ಅಧಿಕೃತವಾಗಿ ಬಿಡುಗಡೆ…

2 hours ago

ಧರ್ಮಸ್ಥಳ ಪ್ರಕರಣದಲ್ಲಿ ಪ್ರಕಾಶ್‌ ರಾಜ್‌ ಹೆಸರು: ನಟ ಏನಂದ್ರು ಗೊತ್ತಾ?

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಕರಣದಲ್ಲಿ ತಮ್ಮ ಹೆಸರನ್ನು ಕೆಲವರು ಅನಗತ್ಯವಾಗಿ ಉಲ್ಲೇಖಿಸುತ್ತಿದ್ದಾರೆ. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ.…

7 hours ago

ನೀಟ್‌ ವಿದ್ಯಾರ್ಥಿಗಳಿಗೆ ಪ್ರಯಾಣದಲ್ಲಿ 50% ರಿಯಾಯಿತಿ: ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಆದೇಶ

ಲಕ್ನೋ: ಜೂನ್.‌21ರಂದು ನಡೆಯಲಿರುವ ನೀಟ್-ಯುಜಿ ಮರುಪರೀಕ್ಷೆಗೆ ಹಾಜರಾಗುವ ಎಲ್ಲಾ ವಿದ್ಯಾರ್ಥಿಗಳ ಬಸ್‌ ಪ್ರಯಾಣದ ದರದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುವುದಾಗಿ ಉತ್ತರ…

9 hours ago

ಮುಂಬೈನಲ್ಲಿ ನೀರಿಗೆ ಭಾರೀ ಬಿಕ್ಕಟ್ಟು: ಕಟ್ಟಡ ಕಾಮಗಾರಿಗಳಿಗೆ ನೀರು ಬಂದ್‌

ಮುಂಬೈ: ದೇಶದಲ್ಲಿ ಮುಂಗಾರು ಪ್ರವೇಶಿದರೂ ಮುಂಬೈನಲ್ಲಿ ಮಳೆಯ ಕೊರತೆ ಎದುರಾಗಿದೆ. ಮಳೆ ಕೊರತೆ ಎದುರಾದ ಪರಿಣಾಮ ಜಲಾಶಯಗಳಲ್ಲಿ ನೀರಿನ ಮಟ್ಟ…

9 hours ago

ಕೆಫೆ ‘ರೂಫ್ ಟಾಪ್’ಗೆ ಅನುಮತಿಯೇ ಇರಲಿಲ್ಲ!

ಎಚ್.ಎಸ್.ದಿನೇಶ್‌ಕುಮಾರ್ ಲಿಕ್ಕರ್ ಗ್ಯಾರೇಜ್, ಫಾಕ್ಸ್ ಡೆನ್‌ಗೆ ಮಾತ್ರ ಅನುಮತಿ; ನೋಟಿಸ್ ಜಾರಿ ಮಾಡಿ ಸುಮ್ಮನಾಗಿದ್ದ ಅಧಿಕಾರಿಗಳು?; ಅಬಕಾರಿ ಡಿಸಿ ಅಮಾನತ್ತಿಗೆ…

10 hours ago