ಅಂಕಣಗಳು

‘ಇಂಡಿಯಾ’ ಮೈತ್ರಿಕೂಟದ ಭವಿಷ್ಯ ಡೋಲಾಯಮಾನ

ದೆಹಲಿ ಕಣ್ಣೋಟ 

ಶಿವಾಜಿ ಗಣೇಶನ್‌ 

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವುದು ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ರಚಿತಗೊಂಡು ಮುಂದುವರಿದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮೈತ್ರಿ ಕೂಟದ ಈ ರಾಜಕೀಯ ವ್ಯವಸ್ಥೆ ಮುಂದುವರಿದಿದೆ. ಹಾಗೆಯೇ ಕಾಂಗ್ರೆಸ್ ನೇತೃತ್ವದಲ್ಲಿ ರಚಿತವಾದ ‘ಇಂಡಿಯಾ‘ ಮೈತ್ರಿ ಕೂಟ(ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ)ವು ಈಗ ವಿರೋಧ ಪಕ್ಷದ ಪಾತ್ರವನ್ನು ನಿರ್ವಹಿಸುತ್ತಿದೆ. ಮೈತ್ರಿಕೂಟದ ವ್ಯವಸ್ಥೆ ಅಂದರೆ ಹೊಂದಾಣಿಕೆ ರಾಜಕಾರಣ. ಕಳೆದೆರಡು ಚುನಾವಣೆಗಳಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟದಲ್ಲಿ ಬಿಜೆಪಿಯೇ ಸ್ವತಂತ್ರವಾಗಿ ಸರ್ಕಾರ ರಚಿಸುವಷ್ಟು ಬಹುಮತ ಪಡೆದಿತ್ತು. ಆದರೆ ಕಳೆದ ಏಪ್ರಿಲ್‌ನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಬಲ ಕುಗ್ಗಿತು. ತನ್ನ ಮೈತ್ರಿ ಕೂಟದ ಬಿಹಾರದ ಜನತಾದಳ (ಯು) ಮತ್ತು ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷಗಳ ಬೆಂಬಲದಿಂದ ಸರ್ಕಾರ ಅಸ್ತಿತ್ವಕ್ಕೆ ಬಂದದ್ದು ಈಗ ಇತಿಹಾಸ. ಆದರೆ ೧೯೯೬ರ ಅವಧಿಯಲ್ಲಿ ಎನ್‌ಡಿಎ ವಿರುದ್ಧವಿದ್ದ ತೆಲುಗು ದೇಶಂ ಪಕ್ಷ ಯುನೈಟೆಡ್ ಫ್ರಂಟ್ ಸರ್ಕಾರ ಬಿದ್ದು ಹೋದ ನಂತರ ತನ್ನ ರಾಜಕೀಯ ಅಖಾಡವನ್ನು ಬದಲಾಯಿಸಿಕೊಂಡಿತು.

ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಎನ್‌ಡಿಎ ಸೇರಿ ಅಧಿಕಾರದ ಪಾಲು ಪಡೆಯಿತು. ಕಳೆದ ಮೂರು ದಶಕಗಳಿಂದ ರಾಜಕಾರಣದಲ್ಲಿ ಕೋಮುವಾದ ಮತ್ತು ಜಾತ್ಯತೀತವಾದ ಸಿದ್ಧಾಂತದ ಹೆಸರಿನಲ್ಲಿ ಅಧಿಕಾರದ ಪೈಪೋಟಿ ನಡೆದಿದೆ. ಇಂದಿರಾ ಗಾಂಧಿ ಅವರ ನಿಧನದ ನಂತರ ಕಾಂಗ್ರೆಸ್ ಬಲ ಕುಗ್ಗಿ ಹೋಯಿತು. ಅವರ ಹತ್ಯೆಯ ಅನುಕಂಪದಿಂದ ಅವರ ಪುತ್ರ ರಾಜೀವ್ ಗಾಂಧಿ ೧೯೮೪ರ ಚುನಾವಣೆಯಲ್ಲಿ ೩೮೦ ಸ್ಥಾನಗಳನ್ನು ಗಳಿಸಿದರೂ ೧೯೮೯ರಲ್ಲಿ ಸೋಲು ಅನುಭವಿಸಬೇಕಾಯಿತು.

ನಂತರ ವಿ.ಪಿ.ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ವಿರೋಧಿ ಬಣ ಬಿಜೆಪಿ ಬೆಂಬಲದಿಂದ ಅಧಿಕಾರಕ್ಕೆ ಬಂದಿತಾದರೂ, ಹಿಂದುಳಿದ ವರ್ಗಗಳಿಗೆ ಜಾರಿಗೆ ತಂದ ಮಂಡಲ್ ಆಯೋಗದ ಮೀಸಲಾತಿಗೆ ಪ್ರತಿಯಾಗಿ ವಿರೋಧಿಸಲು ಬಿಜೆಪಿ ಕೈಗೆತ್ತಿಕೊಂಡ ಬಾಬರಿ ಮಸೀದಿ -ರಾಮಮಂದಿರ ವಿವಾದಿತ ವಿಷಯ ಕೋಮುವಾದ ಮತ್ತು ಜಾತ್ಯತೀತವಾದದ ಸೈದ್ಧಾಂತಿಕ ರಾಜಕಾರಣಕ್ಕೆ ದಿಕ್ಸೂಚಿಯಾದದ್ದು ಇಂದಿನವರೆಗೂ ಮುಂದುವರಿದಿದೆ.

ಈ ಮಧ್ಯೆ ಭ್ರಷ್ಟಾಚಾರದ ಹಗರಣಗಳು ಸದ್ದು ಮಾಡಿದರೂ ಅದು ಚುನಾವಣಾ ರಾಜಕಾರಣದಲ್ಲಿ ನಿರೀಕ್ಷಿಸಿದಷ್ಟು ಪರಿಣಾಮಕಾರಿಯಾಗಲಿಲ್ಲ. ೧೯೯೦ರ ಆರಂಭದಿಂದಲೇ ಕಾಂಗ್ರೆಸ್ ಬಲ ಕುಗ್ಗುತ್ತಾ ಬಂದಿತು. ಆದರೆ ಸಂಯುಕ್ತ ರಂಗದ ಹೆಸರಿನಲ್ಲಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಮೈತ್ರಿಕೂಟವೂ ಬಲವಾಗಿ ಬೇರೂರಲಿಲ್ಲ. ಮತ್ತೆ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಆಡಳಿತ ಬಂದಿತು. ವಾಜಪೇಯಿ ಅವರ ಆಡಳಿತದಲ್ಲಿ ಮೈತ್ರಿ ಧರ್ಮ ಪಾಲನೆ ಚೆನ್ನಾಗಿಯೇ ನಡೆಯಿತು. ದೇಶದ ನಾಲ್ಕು ಭಾಗಗಳನ್ನೂ ಸಂಪರ್ಕಿಸುವ ಹೆದ್ದಾರಿಗಳ ನಿರ್ಮಾಣ, ಪ್ರೋಕ್ರಾನ್ ಅಣು ಸ್ಛೋಟ ಮತ್ತು ಕಾರ್ಗಿಲ್ ಯುದ್ಧದ ಸಂಗತಿಗಳನ್ನು ಬಿಟ್ಟರೆ ಸಾರ್ವಕಾಲಿಕವಾಗಿ ಉಳಿಯುವಂಥ ಸಾಧನೆಗಳು ಕಾಣಲಿಲ್ಲ. ಅವರ ಆಡಳಿತದ ನಂತರದ ಚುನಾವಣೆಯಲ್ಲಿ ‘ಭಾರತ ಪ್ರಕಾಶಿಸುತ್ತಿದೆ‘ ‘ಫೀಲ್ ಗುಡ್ ‘ ಎನ್ನುವ ಪೊಳ್ಳು ಘೋಷಣೆ ಮತ್ತು ಸಂವಿಧಾನ ಪರಾಮರ್ಶೆಯಂತಹ ಮಾತಿನಿಂದಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಜನರು ಮತ್ತೆ ಕೈಹಿಡಿಯಲಿಲ್ಲ.

ಇದರ ಪರಿಣಾಮ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಯುಪಿಎ) ಮೈತ್ರಿಕೂಟ ಅಧಿಕಾರಕ್ಕೆ ಬಂದಿತು. ಅಂದಿನ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಸೋನಿಯಾ ಗಾಂಧಿ ಅವರಿಗೆ ದಕ್ಕಬೇಕಾಗಿದ್ದ ಪ್ರಧಾನಿ ಪಟ್ಟ ಅಚ್ಚರಿ ಎಂಬಂತೆ ಮುಕ್ತ ಆರ್ಥಿಕ ನೀತಿಯ ಹರಿಕಾರ ಡಾ. ಮನಮೋಹನ ಸಿಂಗ್ ಅವರಿಗೆ ದಕ್ಕಿತು. ಅವರ ಹತ್ತು ವರ್ಷಗಳ ಆಡಳಿತಾವಧಿಯಲ್ಲಿ ಸೋನಿಯಾ ಗಾಂಧಿ ಅವರ ಪರೋಕ್ಷ ಹಸ್ತ ಕ್ಷೇಪದಿಂದ ಆಡಳಿತ ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದ್ದರೂ, ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿಯು ರಾಜಕೀಯವಾಗಿ ಆ ಸಂದರ್ಭವನ್ನು ಸಮರ್ಥವಾಗಿ ಬಳಸಿಕೊಂಡಿತು. ಅದೇ ಬೆಳವಣಿಗೆ ಇಂದಿಗೂ ಬಿಜೆಪಿಗೆ ನಿರಂತರವಾಗಿ ಫಲಕೊಡುತ್ತಾ ಬಂದಿದೆ.

ಬಾಬರಿ ಮಸೀದಿ ನೆಲಸಮದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ವಾಜಪೇಯಿ ಅವರ ಕಾಲದಲ್ಲಿ ಹಿಡನ್ ಅಜೆಂಡಾ ಆಗಿತ್ತಾದರೂ, ಅದೀಗ ಮುನ್ನೆಲೆಗೆ ಬಂದಿತು. ಬಿಜೆಪಿ ಮತ್ತು ಆರ್ ಎಸ್‌ಎಸ್ ಹಿಡನ್ ಅಜೆಂಡಾಗಳೆಲ್ಲ ಈಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಆಡಳಿತದಲ್ಲಿ ಕಾರ್ಯರೂಪಕ್ಕೆ ಬರುತ್ತಿರುವುದರಿಂದ ‘ಹಿಂದುತ್ವ‘ದ ಸಿದ್ಧಾಂತ ಬಲವಾಗಿ ಬೇರೂರಿದೆ. ದೇಶದಲ್ಲಿ ಅಲ್ಪಸಂಖ್ಯಾತರ ಹೆಸರಿನ ಮುಸ್ಲಿಮರನ್ನು,ಅವರ ಗತಕಾಲದ ಇತಿಹಾಸದ ಪಾರಮ್ಯವನ್ನು ಅಳಿಸಿ ಹಾಕುವ ಮತ್ತು ಆ ವರ್ಗವನ್ನು ರಾಜಕೀಯವಾಗಿ ನಗಣ್ಯ ಮಾಡುತ್ತಿರುವು ದನ್ನು ಬಿಜೆಪಿ ರಾಜಕೀಯ ಲಾಭವನ್ನಾಗಿ ಮಾಡಿಕೊಂಡಿರುವುದು ಈಗ ರಹಸ್ಯವಾಗೇನೂ ಉಳಿದಿಲ್ಲ. ಕಾಂಗ್ರೆಸ್ ಪಕ್ಷವು ತನ್ನ ರಾಜಕೀಯ ಬಂಡವಾಳ ಮಾಡಿಕೊಂಡು ಬಂದಿರುವ ಅಲ್ಪಸಂಖ್ಯಾತರ ಓಲೈಕೆಯನ್ನು ಈಗ ಗೇಲಿ ಮಾಡುತ್ತಾ ಆ ಪಕ್ಷದ ರಾಜಕೀಯ ಶಕ್ತಿಯನ್ನೇ ಕುಂದಿಸಲಾಗಿರುವುದು ಬೆಳಕಿನಷ್ಟು ಸತ್ಯ.

ಪ್ರಧಾನಿ ಮೋದಿ ನೇತೃತ್ವದ ಬಿಜೆಪಿಯ ಈ ಹತ್ತು ವರ್ಷಗಳ ರಾಜಕಾರಣದ ಶಕ್ತಿಯನ್ನು ಕುಗ್ಗಿಸಲು ಕಾಂಗ್ರೆಸ್ ನೇತೃತ್ವದ ‘ಇಂಡಿಯಾ‘ ಮೈತ್ರಿಕೂಟವು ಅಸ್ತಿತ್ವಕ್ಕೆ ಬಂದಿತಾದರೂ ಅದು ಯಾಕೆ ಬಲವಾಗಿ ಬೇರೂರಲು ಆಗಿಲ್ಲ ಎನ್ನುವುದು ಈಗ ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಮೈತ್ರಿಕೂಟ ಮತದಾರರ ಮನಸ್ಸನ್ನು ಯಾಕೆ ಗೆಲ್ಲಲು ಆಗುತ್ತಿಲ್ಲ? ಈ ಮೈತ್ರಿಕೂಟದಲ್ಲಿ ಶರದ್ ಪವಾರ್ ಅವರ ಎನ್‌ಸಿಪಿ, ಮಮತಾ ಬ್ಯಾನರ್ಜಿ ಅವರ ಟಿಎಂಸಿ, ಡಿಎಂಕೆ, ಸಮಾಜವಾದಿ ಪಕ್ಷ, ಫಾರೂಕ್ ಅಬ್ದುಲ್ಲಾ ಅವರ ನ್ಯಾಷನಲ್ ಕಾನ್ಛರೆನ್ಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಹೀಗೆ ಎರಡು ವರ್ಷಗಳ ಹಿಂದೆ ಈ ರಾಜಕೀಯ ಶಕ್ತಿ ಆರಂಭಗೊಂಡಾಗ ಸುಮಾರು ೩೫ಕ್ಕೂ ಹೆಚ್ಚು ಸಣ್ಣಪುಟ್ಟ ಪಕ್ಷಗಳು ಇದರೊಂದಿಗೆ ಸೇರಿಕೊಂಡವು. ಆದರೂ ದೇಶದ ರಾಜಕಾರಣದಲ್ಲಿ ಮೋದಿ ಅವರ ನೇತೃತ್ವದ ಮೈತ್ರಿಕೂಟವನ್ನು ಮಣಿಸಲು ನಿರಂತರವಾಗಿ ವಿಫಲವಾಗುತ್ತಾ ಬಂದಿರುವುದು ವಿಪರ್ಯಾಸ.

ಈ ಮಧ್ಯೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್ ಸ್ವಲ್ಪಮಟ್ಟಿಗೆ ಸುಧಾರಿಸಿಕೊಂಡಿತು. ಇದರ ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿ ಕುಂದಿದ್ದು ಸುಳ್ಳಲ್ಲ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನಾಲ್ಕು ನೂರಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದ ಮೋದಿ ಅವರ ಬಿಜೆಪಿಯ ಶಕ್ತಿ ೨೪೦ಕ್ಕೆ ಇಳಿಯಿತು. ಸ್ವಂತ ಬಲದಿಂದಲೂ ಸರ್ಕಾರ ರಚಿಸಲು ಆಗದೆ ಬಿಹಾರದ ನಿತೀಶ್ ಕುಮಾರ್ ಮತ್ತು ಆಂಧ್ರ ಪ್ರದೇಶದ ಚಂದ್ರಬಾಬು ನಾಯ್ಡು ನೇತೃತ್ವದ ಪಕ್ಷಗಳ ಬೆಂಬಲದಿಂದ ಸರ್ಕಾರ ರಚಿಸುವ ಸ್ಥಿತಿ ತಲುಪಿದ್ದು ಮೋದಿ ಅವರ ವರ್ಚಸ್ಸು ಮಂಕಾದದ್ದನ್ನು ಅಲ್ಲಗಳೆಯಲಾಗದು. ಇದರಿಂದ ಮೋದಿ ರಾಜಕೀಯವಾಗಿ ಮುಜುಗರಕ್ಕೆ ಒಳಗಾಗಬೇಕಾಯಿತು.

ಕಳೆದ ಲೋಕಸಭೆ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲಾಗದಿದ್ದರೂ, ರಾಹುಲ್ ಗಾಂಽ ಎದೆಯುಬ್ಬಿಸಿ ನಡೆಯುವಂತಾಯಿತು. ಈ ಚುನಾವಣೆ ನಂತರ ಮಹಾರಾಷ್ಟ್ರ, ಜಮ್ಮು-ಕಾಶ್ಮೀರ ಮತ್ತು ಹರಿಯಾಣ ವಿಧಾನಸಭೆಗಳಿಗೆ ಚುನಾವಣೆ ನಡೆಯಿತು. ಕಾಶ್ಮೀರದಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಸೇರಿದ್ದ ನ್ಯಾಷನಲ್ ಕಾನ್ಛರೆನ್ಸ್ ಗೆದ್ದಿತು. ಕಾಂಗ್ರೆಸ್ ಕೂಡ ಒಂಬತ್ತು ಸ್ಥಾನಗಳನ್ನು ಗಳಿಸಿತು. ಸೀಟು ಹೊಂದಾಣಿಕೆಯಿಂದ ಈ ಗೆಲುವು ಉಂಟಾದದ್ದು ವಾಸ್ತವ. ಮಹಾರಾಷ್ಟ್ರದಲ್ಲೂ ಸೀಟು ಹಂಚಿಕೆ ಆದರೂ ‘ಇಂಡಿಯಾ‘ ಮೈತ್ರಿಕೂಟದ ಕನಸು ನುಚ್ಚುನೂರಾಯಿತು. ಬಿಜೆಪಿಗೇ ಅಚ್ಚರಿ ಎನಿಸುವಂತಹ ಫಲಿತಾಂಶ ಎನ್‌ಡಿಎ ಗೆ ಸಿಕ್ಕಿತು. ಇದೇ ಫಲಿತಾಂಶ ಹರಿಯಾಣದಲ್ಲೂ ಪ್ರತಿಫಲನವಾಯಿತು. ಈ ಎರಡು ಚುನಾವಣೆಗಳ ನಂತರ ಪ್ರತಿಷ್ಠಿತ ದೆಹಲಿ ವಿಧಾನಸಭೆ ಚುನಾವಣೆ ಬಂದಿತು. ಈ ವೇಳೆ ‘ಇಂಡಿಯಾ‘ ಮೈತ್ರಿಕೂಟದಲ್ಲಿ ಅಪಸ್ವರ ಎದ್ದಿತು. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಪ್ರತ್ಯೇಕವಾಗಿ ಪರಸ್ಪರ ವೈರಿಗಳಂತೆ ಬಿಜೆಪಿ ಎದುರಿಗೆ ಚುನಾವಣಾ ಅಖಾಡಕ್ಕಿಳಿದವು. ಆದರೆ ಈ ಇಬ್ಬರ ಜಗಳದಲ್ಲಿ ಮೂರನೆಯವನಿಗೆ ಗೆಲುವಾದಂತೆ ಬಿಜೆಪಿ ೨೭ ವರ್ಷಗಳ ನಂತರ ದೆಹಲಿಯ ಅಧಿಕಾರದ ಗದ್ದಿಗೆ ಏರಿತು.

ಈ ವರ್ಷದ ನವೆಂಬರ್‌ನಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಅಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ನಡುವೆ ಸೀಟು ಹೊಂದಾಣಿಕೆ ಆಗಬೇಕಿದೆ. ಮುಂದಿನ ವರ್ಷ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ಬರುತ್ತಿದೆ. ಈ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಮೂರು ದಶಕಗಳಿಂದ ತನ್ನ ಶಕ್ತಿ ಕಳೆದುಕೊಂಡು ಮೂಲೆ ಗುಂಪಾಗಿದೆ. ಈ ವಾಸ್ತವವನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕಿದೆ. ಈಗಾಗಲೇ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಜೊತೆ ಚುನಾವಣಾ ಹೊಂದಾಣಿಕೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಹೊಂದಾಣಿಕೆ ಆದರೂ ಕಾಂಗ್ರೆಸ್ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಅಂದರೆ ಬೆರಳೆಣಿಕೆ ಸೀಟುಗಳು ಸಿಗಬಹುದೇನೋ. ‘ಇಂಡಿಯಾ‘ ಮೈತ್ರಿಕೂಟದಲ್ಲಿ ಬಹುತೇಕ ಪ್ರಾದೇಶಿಕ ಪಕ್ಷಗಳ ನಾಯಕರು ಕಾಂಗ್ರೆಸ್ ಪಕ್ಷ ಹಿರಿಯಣ್ಣನ ಪಾತ್ರ ವಹಿಸುವುದಕ್ಕೆ ವಿರೋಧವಾಗಿದ್ದಾರೆ.

ತಮ್ಮ ತಮ್ಮ ರಾಜ್ಯಗಳಲ್ಲಿ ತಮ್ಮ ಮೇಲೆ ಕಾಂಗ್ರೆಸ್ ಸವಾರಿ ಮಾಡಲು ಮೈತ್ರಿಕೂಟದ ಪಕ್ಷಗಳು ಸುತಾರಾಂ ಒಪ್ಪುತ್ತಿಲ್ಲ. ಈ ಮಧ್ಯೆ ‘ಇಂಡಿಯಾ ಟುಡೆ‘ ಟಿವಿ ಚಾನಲ್‌ಗೆ ಸಿ-ವೋಟರ್ ಸಂಸ್ಥೆ ನಡೆಸಿಕೊಟ್ಟಿರುವ ‘ಮೂಡ್ ಆಫ್ ದ ನೇಷನ್‘ ಸಮೀಕ್ಷೆಯಲ್ಲಿ ಈಗ ಲೋಕಸಭೆಗೆ ಚುನಾವಣೆ ನಡೆದರೆ ಎನ್‌ಡಿಎ ೩೪೩ ಸೀಟುಗಳನ್ನು ಗೆಲ್ಲಬಹುದು. ಬಿಜೆಪಿಯೊಂದೇ ೨೮೦ ಸ್ಥಾನಗಳನ್ನು ಗೆಲ್ಲುವ ಮೂಲಕ ಸರಳಬಹುಮತ ಪಡೆಯುವ ಶಕ್ತಿ ಪಡೆದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ೨೩೨ ಸ್ಥಾನಗಳನ್ನು ಪಡೆದಿದ್ದ ‘ಇಂಡಿಯಾ‘ ಮೈತ್ರಿಕೂಟ ಈಗ ೧೮೮ ಸ್ಥಾನಗಳಿಗೆ ತೃಪ್ತಿಪಟ್ಟು ಕೊಳ್ಳಬೇಕಾಗುತ್ತದೆ ಎಂದು ಸಮೀಕ್ಷೆ ಹೇಳಿದೆ. ಅಂದರೆ ‘ಇಂಡಿಯಾ‘ ಮೈತ್ರಿಕೂಟ ೪೪ ಸ್ಥಾನಗಳನ್ನು ಕಳೆದುಕೊಳ್ಳಲಿದೆ.

ದೇಶದ ಹಲವು ಭಾಗಗಳಲ್ಲಿ ೧,೨೫,೧೨೩ ಜನರನ್ನು ಮಾತನಾಡಿಸಿರುವ ಈ ಸಮೀಕ್ಷೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಜನಪ್ರಿಯತೆ ಹೆಚ್ಚಿದೆ ಎನ್ನುವ ಅಚ್ಚರಿಯ ಅಂಶವನ್ನು ಹೊರಹಾಕಿದೆ. ಈ ಹಿನ್ನೆಲೆಯಲ್ಲಾದರೂ ಬಿಜೆಪಿಗೆ ಪರ್ಯಾಯವಾಗಬೇಕೆನ್ನುವ ‘ಇಂಡಿಯಾ‘ ಮೈತ್ರಿಕೂಟ ಕಲಿಯಬೇಕಾದುದು ಬಹಳ ಇದೆ

” ಬೆಂಗಳೂರಿನಲ್ಲಿ ೨೦೨೨ರ ಜುಲೈ ೧೭ ಮತ್ತು ೧೮ರಂದು ಸುಮಾರು ೩೮ ವಿವಿಧ ಪಕ್ಷಗಳು ಸೇರಿ ರಚಿಸಿಕೊಂಡ ‘ಇಂಡಿಯಾ‘ ಮೈತ್ರಿಕೂಟದ ಘೋಷ ವಾಕ್ಯ ‘ಯುನೈಟೆಡ್ ವಿ ಸ್ಟಾ ಂಡ್‘ ಎನ್ನುವುದು ಈಗ ಉಳಿದಿಲ್ಲ. ಎಲ್ಲ ರಾಜಕೀಯ ಪಕ್ಷಗಳ ಬಹುತೇಕ ನಾಯಕರು ಒಂದಲ್ಲ ಒಂದು ಭ್ರಷ್ಟಾಚಾರದ ಹಗರಣಗಳಲ್ಲಿ ಸಿಲುಕಿಕೊಂಡಿರುವ ದೌರ್ಬಲ್ಯವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಇಡಿ ಮತ್ತು ಸಿಬಿಐ ಮೂಲಕ ಬಿಜೆಪಿ ಸರ್ಕಾರ ತನ್ನ ರಾಜಕೀಯ ಅಧಿಕಾರದ ಶಕ್ತಿಯನ್ನು ತೋರಿಸುತ್ತಿರುವುದರಿಂದ ‘ಭ್ರಷ್ಟ ನಾಯಕರು‘ ಬಾಲಮುದುಡಿಕೊಂಡಿರಬೇಕಾದ ಪರಿಸ್ಥಿತಿ ಅನಿವಾರ್ಯವಾಗಿರುವುದು ಇಂದಿನ ರಾಜಕಾರಣದ ವಾಸ್ತವ ನೋಟ. ರಾಷ್ಟ್ರ ರಾಜಕಾರಣದ ಈ ಪರಿಸ್ಥಿತಿಯಿಂದ ಬಿಜೆಪಿ ವಿರೋಽ ಶಕ್ತಿ ಬಲಗೊಳ್ಳುವುದು ಸಾಧ್ಯವೇ ಎನ್ನುವ ಬಗೆಗೆ ‘ಇಂಡಿಯಾ‘ ಮೈತ್ರಿಕೂಟ, ವಿಶೇಷವಾಗಿ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳುವ ಮೂಲಕ ತಾನು ಅನುಸರಿಸಿಕೊಂಡು ಬರುತ್ತಿರುವ ರಾಜಕೀಯ ತಂತ್ರಗಾರಿಕೆಯನ್ನು ಬದಲಿಸಿಕೊಳ್ಳಬೇಕಿದೆ. ಹೀಗಾಗಿ ‘ಇಂಡಿಯಾ’ ಮೈತ್ರಿಕೂಟದ ಭವಿಷ್ಯ ಡೋಲಾಯಮಾನವಾಗಿ ರುವುದು ದುರದೃಷ್ಟಕರ.”

ಆಂದೋಲನ ಡೆಸ್ಕ್

Recent Posts

ಕಳಪೆ ಪ್ರಗತಿ ಸಾಧಿಸಿದ 5 ಪಿಡಿಒಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ ಸಿಇಒ ನಂದಿನಿ

ಮಂಡ್ಯ : ಜಲ ಶಕ್ತಿ ಜನ ಭಾಗೀದಾರಿ, ಮಹಾತ್ಮ ಗಾಂಧಿ ನರೇಗಾ, ತೆರಿಗೆ ವಸೂಲಾತಿ ಸೇರಿದಂತೆ ಇತರೆ ಯೋಜನೆ ಮತ್ತು…

5 hours ago

ಅಕ್ರಮ ನಾಟ ಸಾಗಾಟ : ಲಾರಿ ಸಮೇತ ಮೂವರ ಬಂಧನ

ಸೋಮವಾರಪೇಟೆ : ಮರದ ನಾಟಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ. ಹುದುಗೂರು…

5 hours ago

ಡೆವಿಲ್‌ ಅಬ್ಬರ | ಮೊದಲ ದಿನದ ಗಳಿಗೆ ಎಷ್ಟು?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ರೂ ಗುರುವಾರ ಬಿಡುಗಡೆಯಾದ ಅವರ ಅಭಿನಯದ ಡೆವಿಲ್…

6 hours ago

ಮಳವಳ್ಳಿ | ವಿದ್ಯುತ್‌ ಸ್ಪರ್ಶ ; ಕಾರ್ಮಿಕ ಸಾವು

ಮಳವಳ್ಳಿ : ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ತಾಲ್ಲೂಕಿನ ಕಲ್ಕುಣಿ ಗ್ರಾಮದ ಬಳಿ ನಡೆದಿದ್ದು, ಸೆಸ್ಕ್ ಅಧಿಕಾರಿಗಳ…

6 hours ago

2027ರ ಜನಗಣತಿ | 11,718 ಕೋಟಿ ನೀಡಲು ಕೇಂದ್ರ ಸಂಪುಟ ಅನುಮೋದನೆ

ಹೊಸದಿಲ್ಲಿ : ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ೨೦೨೭ರ ಜನಗಣತಿಗೆ ರೂ. ೧೧,೭೧೮ ಕೋಟಿ ಅನುದಾನ ನೀಡಲು ಕೇಂದ್ರ ಸಚಿವ ಸಂಪುಟವು…

6 hours ago

ಇಂಡಿಗೋ ಬಿಕ್ಕಟ್ಟು | ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳ ಅಮಾನತ್ತು

ಮುಂಬೈ : ಇಂಡಿಗೊ ವಿಮಾನ ಕಾರ್ಯಾಚರಣೆ ವ್ಯತ್ಯಯ ಪ್ರಕರಣ ಸಂಬಂಧ ನಾಲ್ವರು ವಿಮಾನ ನಿರ್ವಹಣಾ ಇನ್ಸ್‌ಪೆಕ್ಟರ್‌ಗಳನ್ನು (ಎಫ್.ಒ.ಐ) ನಾಗರಿಕ ವಿಮಾನಯಾನ…

6 hours ago