tribale comunity
ದೇಶದ ಮೂಲ ನಿವಾಸಿಗಳು : ಮೂಲ ಸೌಲಭ್ಯ ವಂಚಿತರು !
ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದರೂ ಬುಡಕಟ್ಟು ನಿವಾಸಿಗಳಿಗೆ ಪೂರ್ಣ ಪ್ರಮಾಣದಲ್ಲಿ ದೊರಕದ ಸವಲತ್ತು
ರಶ್ಮಿ ಕೋಟಿ..
‘ಗುರುತಿನ ಚೀಟಿ ಇಲ್ಲದೆ ನನ್ನ ಮೊಮ್ಮಗಳು ಶಾಲೆಗೆ ಹೋಗಲು ಆಗುತ್ತಿಲ್ಲ. ಶಾಲೆಗೆ ಹೋಗಿದ್ದರೆ ಪಾಠ ಕಲಿ ಯುವುದರ ಜೊತೆಗೆ ಒಂದು ಹೊತ್ತು ಬಿಸಿ ಊಟವೂ ಸಿಗುತ್ತಿತ್ತು. ಈಗ ಹೊಟ್ಟೆಗೆ ಹಿಟ್ಟಿಲ್ಲ, ಅದಕ್ಕೆ ಬೇರೆಯವರ ಜಮೀನಿನಲ್ಲಿ ಕೂಲಿ ಮಾಡಲು ಹೋಗುತ್ತಿದ್ದಾಳೆ’ ಇದು ಎಚ್. ಡಿ. ಕೋಟೆ ತಾಲ್ಲೂಕಿನ ಲಕ್ಷ್ಮೀಪುರ ಹಾಡಿಯ ಜೇನುಕುರುಬ ಜನಾಂಗಕ್ಕೆ ಸೇರಿದ ಕಾಳಮ್ಮನ ಅಳಲು.
ಮೈಸೂರು-ಮಾನಂದವಾಡಿ ಹೆದ್ದಾರಿಯಲ್ಲಿರುವ ಲಕ್ಷ್ಮೀಪುರ ಹಾಡಿಯಲ್ಲಿ ತಿಪ್ಪೇಗುಂಡಿಯಂತಿರುವ ಜಾಗದಲ್ಲಿ ಮಣ್ಣು, ಬಿದಿರು, ತಗಡಿನ ಶೀಟು ಮತ್ತು ತೆಂಗಿನ ಗರಿಗಳಿಂದ ನಿರ್ಮಿಸಿರುವ ಗುಡಿಸಲೇ ಈಕೆಯ ಮನೆ. ತಾಯಿಯಿಲ್ಲದ ತಬ್ಬಲಿಯಾದ ತನ್ನ ಮೊಮ್ಮಗಳು ಶಾಲೆಗೆ ಸೇರಿ, ಬೇರೆ ಮಕ್ಕಳಂತೆ ಆಕೆಯೂ ಓದು ಬರಹ ಕಲಿಯಲಿ ಎಂಬುದು ಕಾಳಮ್ಮನ ಬಯಕೆ. ಆದರೆ ಅವರ ಬಳಿ ಯಾವುದೇ ದಾಖಲೆ ಪತ್ರಗಳಿಲ್ಲದಿರುವುದರಿಂದ ಸರ್ಕಾರದ ಎಲ್ಲ ಸೌಲಭ್ಯ ಗಳಿಂದ ವಂಚಿತರಾಗಿದ್ದಾರೆ. ಈ ರೀತಿ ದುಸ್ಥಿತಿಯಲ್ಲಿರುವುದು ಕಾಳಮ್ಮನ ಕುಟುಂಬ ಮಾತ್ರವಲ್ಲ, ಅನೇಕ ಬುಡಕಟ್ಟು ಕುಟುಂಬಗಳು ಇಂದಿಗೂ ಗುರು ತಿಲ್ಲದೆ ಉಳಿದಿರುವುದು ದುರಂತ ವಾಸ್ತವ.
ಸ್ವಾತಂತ್ರ್ಯ ಬಂದು ೭೭ ವರ್ಷಗಳು ಕಳೆದರೂ ಹಲವು ಕುಟುಂಬಗಳು ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ, ದಾಖಲೆ ಪತ್ರಗಳಿಲ್ಲದೆ, ಸರ್ಕಾರಿ ಸೌಲಭ್ಯ ಗಳನ್ನು ಪಡೆಯಲು ಸಾಧ್ಯವಾಗದೆ ಹೀನಾಯ ಜೀವನವನ್ನು ನಡೆಸುತ್ತಿದ್ದಾರೆ. ತಮ್ಮ ಹಕ್ಕುಗಳಿಂದ ವಂಚಿತರಾಗಿರುವ ಹಲವರು ನ್ಯಾಯಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ಸರ್ಕಾರ ಮತ್ತು ಸಮಾಜ ಜೇನುಕುರುಬ ಬುಡಕಟ್ಟು ಜನಾಂಗವನ್ನು ಮರೆತಂತಿದೆ. ಬುಡಕಟ್ಟು ಸಮುದಾಯದ ಮಹಿಳೆ ಈ ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ್ದರೂ ಇವರ ಜೀವನವೇನೂ ಬದಲಾದಂತಿಲ್ಲ.
ಸರ್ಕಾರಗಳು ಬುಡಕಟ್ಟು ಸಮುದಾಯಗಳ ಶ್ರೇಯೋಭಿವೃದ್ಧಿಗೆ ಹಲ ವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಅವರಿಗೆ ಮೂಲಸೌಲಭ್ಯ ಕಲ್ಪಿಸಲು ಹಲವಾರು ಕಾರ್ಯಕ್ರಮಗಳು, ಅಭಿಯಾನಗಳನ್ನು ಕೈಗೊಳ್ಳುತ್ತವೆ. ಆಗಿಂದಾಗ್ಗೆ ಅಭಿಯಾನಗಳು ನಡೆಯುತ್ತಲೂ ಇರುತ್ತವೆ. ಆದರೆ ಇಂತಹ ಯಾಂತ್ರಿಕ ಪ್ರಕ್ರಿಯೆಯಿಂದ ಬುಡಕಟ್ಟು ಜನರ ಹಕ್ಕು ಸ್ಥಾಪನೆಯಾಗುವುದೇ ಎಂದು ನೋಡುವುದಾದರೆ ವಾಸ್ತವಾಂಶ ಇದಕ್ಕೆ ವ್ಯತಿರಿಕ್ತವಾಗಿರುತ್ತದೆ ಎಂಬುದಕ್ಕೆ ಈ ಜನರ ಬದುಕಿನ ಚಿತ್ರಣ ಸಾಕ್ಷಿಯಾಗಿದೆ.
ನಾಗರಿಕ ಪ್ರಪಂಚದಿಂದ ದೂರವೇ ಉಳಿದಿರುವ ಬುಡಕಟ್ಟು ಜನರಿಗೆ ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ಜಾಬ್ ಕಾರ್ಡ್, ಜನ್‌ಧನ್ ಖಾತೆ, ಮನೆ, ವಿದ್ಯುತ್ ಮುಂತಾದ ಮೂಲಸೌಲಭ್ಯ ಪಡೆಯುವುದು ತ್ರಾಸದಾಯಕ. ಅದಕ್ಕೆ ಅವರಲ್ಲಿರುವ ಅರಿವಿನ ಕೊರತೆ ಒಂದೆಡೆಯಾದರೆ, ಆಡಳಿತ ವರ್ಗದ ಇಚ್ಛಾಶಕ್ತಿಯ ಕೊರತೆ ಇನ್ನೊಂದೆಡೆ. ಇಲ್ಲದಿದ್ದರೆ ೭೭ ವರ್ಷಗಳನ್ನು ಕಂಡ ಸ್ವತಂತ್ರ ಭಾರತದ ಮೂಲ ನಿವಾಸಿಗಳ ಬದುಕು ಇಷ್ಟು ಹೀನಾಯ ಸ್ಥಿತಿಯಲ್ಲಿ ಇರುತ್ತಿರಲಿಲ್ಲ.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಎಚ್. ಡಿ. ಕೋಟೆ, ಸರಗೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿರುವ ಹಾಡಿಗಳ ನಿವಾಸಿಗಳಿಗೆ ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಜಾಬ್ ಕಾರ್ಡ್, ಜನ್‌ಧನ್ ಖಾತೆ, ಆಯುಷ್ಮಾನ್ ಭಾರತ್ ಕಾರ್ಡ್, ಸುಕನ್ಯಾ ಸಮೃದ್ಧಿ ಯೋಜನೆ, ಪಡಿತರ ಚೀಟಿ ಮುಂತಾದವುಗಳನ್ನು ನೀಡಲು ೨೦೨೫ರ ಆ. ೪ರಿಂದ ಸೆ. ೧೦ರ ವರೆಗೆ ಐಇಸಿ ಕ್ಯಾಂಪ್‌ಗಳನ್ನು ಆಯೋಜಿಸಲಾಗಿದ್ದು, ಈ ಅಭಿಯಾನದಲ್ಲಿ ಕೆಲ ಕುಟುಂಬಗಳಿಗೆ ಅಗತ್ಯ ದಾಖಲೆಗಳನ್ನು ನೀಡಲಾಗಿದೆ. ಆದರೆ ಈ ಅಭಿಯಾನ ಪೂರ್ಣಪ್ರಮಾಣದಲ್ಲಿ ಯಶಸ್ವಿಯಾಗುತ್ತದೆಯೇ, ಆದಿವಾಸಿಗಳೆಲ್ಲರಿಗೂ ಅಗತ್ಯ ದಾಖಲೆಗಳು ಸಿಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.
ಸಾಂಸ್ಕೃತಿಕ ರಾಜಧಾನಿ ಮೈಸೂರಿನಿಂದ ೫೫ ಕಿ. ಮೀ. ದೂರದಲ್ಲಿರುವ ಹೆಚ್. ಡಿ. ಕೋಟೆ ಹಾಗೂ ಸರಗೂರು ತಾಲ್ಲೂಕುಗಳಲ್ಲಿ ೬,೯೩೦ ಆದಿವಾಸಿ ಕುಟುಂಬಗಳಿದ್ದು ಅವುಗಳಲ್ಲಿ ೪,೭೭೬ ಕುಟುಂಬಗಳು ಜೇನುಕುರುಬ ಜನಾಂಗಕ್ಕೆ ಸೇರಿದ್ದರೆ, ೮೬೪ ಬೆಟ್ಟ ಕುರುಬ, ೭೩೧ ಯರವ, ೪೮೯ ಸೋಲಿಗ, ೭೦ ಹಕ್ಕಿಪಿಕ್ಕಿ ಜನಾಂಗಗಳಿವೆ. ಇವರಲ್ಲಿ ಅನೇಕರ ಬಳಿ ಯಾವುದೇ ದಾಖಲೆ ಪತ್ರಗಳಿಲ್ಲದೆ ಅವರೆಲ್ಲ ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ.
ಜೇನುಕುರುಬ ಸಮುದಾಯವು ಕೋಟೆ ತಾಲ್ಲೂಕಿನಂಚಿನಲ್ಲಿರುವ ಕಾಡಿನಲ್ಲಿ ವಾಸಿಸುತ್ತಿದ್ದ ಸಮುದಾಯವಾಗಿತ್ತು. ೧೯೭೨ರಲ್ಲಿ ವನ್ಯಜೀವಿ ಕಾಯ್ದೆ ಜಾರಿಗೆ ಬಂದ ನಂತರ ಕಾಡಿನಲ್ಲಿ ವಾಸಿಸುತ್ತಿದ್ದ ಇವರನ್ನು ಹಂತಹಂತವಾಗಿ ಕಾಡಿನಿಂದ ಸ್ಥಳಾಂತರಿಸಲಾಯಿತು. ಹಾಗೆ ಸ್ಥಳಾಂತರಗೊಂಡ ಇವರು ಹತ್ತಿರದ ಹಳ್ಳಿಗಳ ಹಾಡಿಗಳಲ್ಲಿ ವಾಸಿಸಲು ಪ್ರಾರಂಭಿಸಿ ಜಮೀನ್ದಾರರ ಬಳಿ ಕೂಲಿ ಮಾಡಿಕೊಂಡಿರಲಾರಂಭಿಸಿದರು. ಕಾಡಿನಿಂದ ಹೊರಬಂದ ಇವರಿಗೆ ಭೂಮಿ ಕೊಡಬೇಕೆಂಬ ಕಾನೂನು ಇದ್ದರೂ ಎಲ್ಲರಿಗೂ ಭೂಮಿ ಮಂಜೂರಾಗಿಲ್ಲ.
ಬಹುಪಾಲು ಬುಡಕಟ್ಟು ಜನರು ಅಪೌಷ್ಟಿಕತೆ ಮತ್ತು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇವರ ಮಕ್ಕಳ ಭವಿಷ್ಯವು ಹಲವಾರು ರೀತಿಯಲ್ಲಿ ರಾಜಿ ಮಾಡಿಕೊಳ್ಳಲ್ಪಟ್ಟಿದೆ. ಅವಮಾನ ಇವರ ದೈನಂದಿನ ಜೀವನದ ಭಾಗವಾಗಿದೆ. ಮಕ್ಕಳು ಕುಟುಂಬದ ಬೇಡಿಕೆಗಳಿಗೆ ಆದ್ಯತೆ ನೀಡಬೇಕು. ಹಾಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಕೂಲಿ ಕೆಲಸಕ್ಕೆ ದೂಡಲ್ಪಡುತ್ತಾರೆ. ಕಲಿಕೆಯ ನಷ್ಟ ಮತ್ತು ಸಾಮಾಜಿಕ-ಭಾವನಾತ್ಮಕ ಒತ್ತಡದ ಜೊತೆಗೆ ಅವರು ಅನೇಕ ರೀತಿಯಲ್ಲಿ ಬಳಲುತ್ತಿದ್ದಾರೆ. ಹೆಣ್ಣು ಮಕ್ಕಳನ್ನು ಬಾಲ್ಯ ವಿವಾಹಕ್ಕೆ ತಳ್ಳಲಾಗುತ್ತದೆ ಮತ್ತು ಹುಡುಗರು ಶೋಷಣೆಯ ದುಡಿಮೆಯಲ್ಲಿ ತೊಡಗುತ್ತಾರೆ. ಇದು ಸಾಂವಿಧಾನಿಕ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಗಳ ಸಬಲೀಕರಣಕ್ಕಾಗಿ ಹಣವನ್ನು ಹಂಚಿಕೆ ಮಾಡಿದ್ದರೂ, ಅನುಷ್ಠಾನಗೊಳಿಸುವ ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಹೆಚ್ಚಿನ ಸಮಯ ನಿಽಗಳು ಬಳಕೆಯಾಗದೆ ಉಳಿಯುತ್ತಿವೆ. ೨೦೨೩ರಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (PM-JANMAN) ಮತ್ತು ಪ್ರಧಾನ ಮಂತ್ರಿ ಉನ್ನತ ಗ್ರಾಮ ಅಭಿಯಾನಗಳು ಭಾರತದಲ್ಲಿನ ಬುಡಕಟ್ಟು ಸಮುದಾಯಗಳ ಜೀವನವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಕಾರ್ಯಕ್ರಮ ಗಳಾಗಿವೆ.
ಆದಾಗ್ಯೂ, ಈ ಪ್ರಯತ್ನಗಳ ಹೊರತಾಗಿಯೂ, ಸ್ಥಳೀಯ ಬುಡಕಟ್ಟು ಜನಾಂಗದವರ ಸ್ಥಿತಿಗತಿಗಳು ಹೆಚ್ಚಾಗಿ ಬದಲಾಗಿಲ್ಲ. ೨೦೨೫ರಲ್ಲಿ, ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಸಮಗ್ರ ಬೆಳವಣಿಗೆಗೆ ಆರ್ಥಿಕ ಸಬಲೀಕರಣದ ಮೇಲೆ ಕೇಂದ್ರೀಕರಿಸಿ ‘ವಿಕ್ಷಿತ ಭಾರತ’ಕ್ಕಾಗಿ ಬುಡಕಟ್ಟು ಅಭಿವೃದ್ಧಿಯನ್ನು ಹೆಚ್ಚಿಸಲು ಕೇಂದ್ರ ಬಜೆಟ್‌ನಲ್ಲಿ ೧೪,೯೨೫. ೮೧ ಕೋಟಿ ರೂ. ಹಂಚಿಕೆ ಮಾಡಲಾಯಿತು. ಆದಾಗ್ಯೂ, ಬುಡಕಟ್ಟು ಸಮುದಾಯಗಳಿಗೆ ಗೌರವಯುತವಾಗಿ ಬದುಕು ಕಲ್ಪಿಸುವಲ್ಲಿ ವಿಫಲವಾಗುತ್ತಲೇ ಇದೆ. ವಸ್ತುಸ್ಥಿತಿ ಹೀಗಿದ್ದರೂ ನಾವು ಡಿಜಿಟಲ್ ಇಂಡಿಯಾ ಮತ್ತು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ಎಂದು ಹೆಮ್ಮೆಪಡುತ್ತೇವೆ.
ಹಸಿವು ನೀಗಿಸಲು ಮದ್ಯ?
ಕಾಡಿನಿಂದ ಹೊರಬಂದ ಅನೇಕ ಬುಡಕಟ್ಟು ಸಮುದಾಯದವರು ಕಳೆದ ೪೦ ವರ್ಷಗಳಿಂದ ಸ್ವಂತ ಭೂಮಿಗಾಗಿ ಪರಿತಪಿಸುತ್ತಲೇ ಇದ್ದಾರೆ. ಸರ್ಕಾರದ ನಿಯಮ, ಅರಣ್ಯ ಇಲಾಖೆಯ ಕಾನೂನುಗಳ ಮಧ್ಯೆ ಸಿಲುಕಿ ನಲುಗಿ ಹೋಗಿದ್ದಾರೆ. ಹೊಟ್ಟೆಗೆ ಹಿಟ್ಟು, ತಲೆಯ ಮೇಲೆ ಒಂದು ಸೂರಿಗಾಗಿ ಸ್ಥಳದಿಂದ ಸ್ಥಳಕ್ಕೆ ಎತ್ತಂಗಡಿಯಾಗಿದ್ದಾರೆ.
ಹತ್ತಿರದ ಗ್ರಾಮ ಹಾಗೂ ಕೊಡಗಿನ ತೋಟಗಳಲ್ಲಿ ದಿನವೆಲ್ಲಾ ಕೂಲಿ ಕೆಲಸ ಮಾಡಿದರೂ ಅವರಿಗೆ ಸಿಗು ವುದು ಒಂದು ಹೊತ್ತಿನ ಊಟ ಹಾಗೂ ಕುಡಿಯಲು ಸಾರಾಯಿ ಪ್ಯಾಕೆಟ್ಟು. ದುಡಿದು ದಣಿದ ದೇಹ ಸಾರಾಯಿ ಕುಡಿದು ಮಲಗಿದರೆ ಮತ್ತೆ ಬೆಳಿಗ್ಗೆ ಎದ್ದು ಇವರನ್ನು ಕರೆದುಕೊಂಡು ಹೋಗಲು ಬರುವ ಜೀಪಿಗೆ ಹತ್ತುವುದು. ಇದು ಇವರ ದಿನಚರಿ. ಇದರ ಮಧ್ಯೆ ಇವರ ಮಕ್ಕಳು ಕಾಡಂಚಿ ನಲ್ಲಿ ಅಲೆದಾಡಿಕೊಂಡು ಕೈಗೆ ಸಿಕ್ಕ ಹಣ್ಣು ಹಂಪಲು ತಿಂದುಕೊಂಡು ತಿರುಗಾಡುತ್ತಾರೆ. ಸರ್ಕಾರಿ ಶಾಲಾ ಅವರನ್ನು ಶಾಲೆಗೆ ಕರೆದುಕೊಂಡು ಹೋಗಿ ಕೂರಿಸಿಕೊಂಡರೆ ಒಂದು ಹೊತ್ತಿನ ಮಧ್ಯಾಹ್ನದ ಊಟ, ಇಲ್ಲದಿದ್ದರೆ ಅದೂ ಇಲ್ಲ.
ನಮಗಾಗಿ ಯಾರೂ ಬರುವುದಿಲ್ಲ
ಯಾರೂ ನಮಗಾಗಿ ಬರುವುದಿಲ್ಲ. ನಾವು ಯಾವುದೇ ಸರ್ಕಾರಿ ಸಬ್ಸಿಡಿಗಳು ಅಥವಾ ಸವಲತ್ತುಗಳಿಲ್ಲದೆ ಬದುಕುತ್ತಿದ್ದೇವೆ. ನಾವು ಎಲ್ಲ ದಾಖಲೆಗಳನ್ನು ಪಡೆಯಲು ಪ್ರಯತ್ನಿಸಿದೆವು, ಆದರೆ ಅದಕ್ಕೆ ನಮ್ಮಲ್ಲಿ ಯಾವುದೇ ಪುರಾವೆಗಳಿಲ್ಲ. ನಮಗೆ ಪಡಿತರ ಅಥವಾ ಆರೋಗ್ಯ ಸೌಲಭ್ಯಗಳು ಸಿಗುವುದಿಲ್ಲ. ಜನರು ನಮ್ಮೊಂದಿಗೆ ಕೆಟ್ಟದಾಗಿ ವರ್ತಿಸುತ್ತಾರೆ. ನಮಗೆ ಯಾರಿಂದಲೂ ಸಹಾಯ ಸಿಗುವುದಿಲ್ಲ ಎಂದು ತಿಳಿದು ಕೆಲವೊಮ್ಮೆ ನಮಗೆ ಕೊಡಬೇಕಾದ ಕೂಲಿಯನ್ನೂ ಕೊಡುವುದಿಲ್ಲ.
-ಕಾಳ, ಲಕ್ಷ್ಮೀಪುರ ಹಾಡಿ
ಎಚ್. ಡಿ. ಕೋಟೆ, ಸರಗೂರು ತಾಲ್ಲೂಕುಗಳ ವ್ಯಾಪ್ತಿಯ ಹಾಡಿಗಳಲ್ಲಿ ವಾಸಿಸುವ ನೈಜ ದುರ್ಬಲ ಬುಡಕಟ್ಟು ಜೇನುಕುರುಬ ಸಮುದಾಯದ ಜನರಿಗೆ ಕೇಂದ್ರ ಬುಡಕಟ್ಟು ಸಚಿವಾಲಯದ ಆದೇಶದಂತೆ ಬಾಕಿ ಇರುವ ಬುಡಕಟ್ಟು ಜನರಿಗೆ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಯುಷ್ಮಾನ್ ಭಾರತ್ ಕಾರ್ಡ್, ಜನ್‌ಧನ್ ಖಾತೆ, ಪಡಿತರ ಚೀಟಿ, ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಜಾಬ್‌ಕಾರ್ಡ್‌ಗಳನ್ನು ನೀಡಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ೨೦೨೫ರ ಆ. ೪ರಿಂದ ಹಾಡಿವಾರು ಕ್ಯಾಂಪ್ ಗಳನ್ನು ಏರ್ಪಡಿಸಿ ಆಧಾರ್ ಕಾರ್ಡ್ ನೀಡುವುದು, ಅಪ್‌ಡೇಟ್ ಮಾಡುವ ಕೆಲಸ ಮಾಡಲಾಗುತ್ತಿದೆ.
-ಎಂ. ಕೆ. ಮಲ್ಲೇಶ್, ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ
ಬೆಂಗಳೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಳ…
ಹೊಸದಿಲ್ಲಿ : ಹಿರಿಯ ನಟ ಧರ್ಮೇಂದ್ರ, ದಂತಕಥೆ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್, ಮಲಯಾಳಂ ಸಿನಿಮಾ ದಿಗ್ಗಜ ಮಮ್ಮುಟ್ಟಿ, ಬಂಗಾಳಿ…
ಹೊಸದಿಲ್ಲಿ : ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಅಪಾಯ ಹೊರಗಿನಿಂದಲ್ಲ, ‘ಆಂತರಿಕ ವ್ಯವಸ್ಥೆ’ಯಿಂದಲೇ ಇದೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ್…
ಬೆಂಗಳೂರು : ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆಯನ್ನು ಸ್ವೀಕರಿಸಲೇಬೇಕು ಎಂಬ ಸುತ್ತೋಲೆಯನ್ನು ಹೊರಡಿಸುವ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ…
ಮೈಸೂರು : ಹೊಸದಿಲ್ಲಿಯಲ್ಲಿ ಬುದ್ಧಗಯಾ ವಿಮೋಚನೆ ಐತಿಹಾಸಿಕ ಚಳವಳಿಯಲ್ಲಿ ಬೌದ್ಧ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬೌದ್ಧ ಚಿಂತಕ,…
ಮೈಸೂರು : ರಥಸಪ್ತಮಿ ಅಂಗವಾಗಿ ನಗರದಲ್ಲಿ ಭಾನುವಾರ ಅರಮನೆ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೂರ್ಯನಿಗೆ ನಮಿಸಲಾಯಿತು.…