ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರ್ಕಾರವನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬಂದ ಷಹಬಾಜ್ ಷರೀಫ್ ಅವರಿಗೆ ಆರಂಭದಲ್ಲಿಯೇ ಕಠಿಣ ಸವಾಲು ಎದುರಾಗಿದೆ. ದೇಶ ಹಿಂದೆಂದೂ ಕಾಣದಂಥ ಹಣಕಾಸು ಬಿಕ್ಕಟ್ಟನ್ನು ಎದುರಿಸುತ್ತಿದ್ದು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿರುವುದು ಅವರ ಮುಂದಿರುವ ಸವಾಲು. ತುರ್ತಾಗಿ ಈ ಬಿಕ್ಕಟ್ಟನ್ನು ಪರಿಹರಿಸದಿದ್ದರೆ ಪಾಕಿಸ್ತಾನವೂ ಶ್ರೀಲಂಕಾದಂತೆ ಪಾರ್ಪ ಆಗುವ ಸಾಧ್ಯತೆ ಇದೆ.
ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಕೊಳ್ಳಲು ಸರ್ಕಾರದ ಬಳಿ ಹಣವಿಲ್ಲ ಎಂಬ ಪ್ರಧಾನಿ ಷಹಬಾಜ್ ಅವರ ಹೇಳಿಕೆ ದೇಶದಲ್ಲಿ ಕೋಲಾಹಲ ಎಬ್ಬಿಸಿದೆ. ಈ ಸ್ಥಿತಿಯಲ್ಲಿ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಬಹುದೆಂಬ ಅನುಮಾನದಿಂದ ಜನರು ಬಂಕುಗಳಿಗೆ ಮುಗಿಬಿದ್ದಿದ್ದಾರೆ. ಕಳೆದ ವಾರವಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿದ್ದು ಮತ್ತೆ ಬೆಲೆ ಏರಿಸುವುದಿಲ್ಲ ಎಂದು ಹಣಕಾಸು ಸಚಿವ ಮಿಫ್ತಾಹ್ ಇಸ್ಮಾಯಿಲ್ ಅವರು ಸ್ಪಷ್ಟನೆ ನೀಡಿದ ನಂತರವೂ ಜನರ ಆತಂಕ ನಿವಾರಣೆ ಆಗಿಲ್ಲ. ಪೆಟ್ರೋಲ್ ಬೆಲೆ ಲೀ.ಗೆ ರೂ. ೧೭೯.೮೫, ಡೀಸೆಲ್ ಬೆಲೆ ಲೀ.ಗೆ ರೂ. ೧೭೪.೧೫ ನಿಗದಿ ಮಾಡಲಾಗಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ನಂತರ ಕಳೆದ ವಾರ ಅಡುಗೆ ಎಣ್ಣೆ ಮತ್ತು ತುಪ್ಪದ ಬೆಲೆಯನ್ನು ಶೇ. ೩೦೦ ರಷ್ಟು ಏರಿಸಿ ಸರ್ಕಾರ ಜನರಿಗೆ ಆಘಾತ ನೀಡಿದೆ. ಅಡುಗೆ ಎಣ್ಣೆ ಬೆಲೆ ಲೀಟರ್ಗೆ ೬೦೫ ರೂ ಮತ್ತು ತುಪ್ಪದ ಬೆಲೆ ಕೆಜಿಗೆ ೫೫೫ ರೂಪಾಯಿ ನಿಗದಿ ಮಾಡಲಾಗಿದೆ. ಬೇಳೆಗಳ ಬೆಲೆ ಈಗಾಗಲೇ ದುಪ್ಪಟ್ಟಾಗಿದೆ. ಈ ಬೆಲೆ ಏರಿಕೆಗೂ ಹಣದುಬ್ಬರಕ್ಕೂ ನೇರ ಸಂಬಂಧ ಇದೆ. ಹಣದುಬ್ಬರ ತಡೆಯುವ ದಾರಿಯೇ ಸರ್ಕಾರಕ್ಕೆ ಕಾಣಿಸುತ್ತಿಲ್ಲ. ವಿದೇಶೀ ವಿನಿಮಯ ಸಂಗ್ರಹ ಕುಸಿದ ಹಿನ್ನೆಲೆಯಲ್ಲಿ ಈ ಎಲ್ಲ ಬೆಳವಣಿಗೆಗಳು ಆಗಿವೆ.
ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ದಾಳಿ ಮತ್ತು ಕರೋನಾ ಪಿಡುಗಿನಿಂದಾಗಿ ತೈಲ, ಅಡುಗೆ ಎಣ್ಣೆ, ಅನಿಲ, ಬೇಳೆ ಮತ್ತಿತರ ಆಹಾರ ವಸ್ತುಗಳ ಉತ್ಪಾದನೆ ಮತ್ತು ಪೂರೈಕೆ ವಿಶ್ವದಾದ್ಯಂತ ಅಸ್ತವ್ಯಸ್ತಗೊಂಡಿದೆ. ಇದರ ಪರಿಣಾಮವಾಗಿ ಬೆಲೆಗಳು ಊಹಿಸಲಾರದಷ್ಟು ಏರಿವೆ.
ತೈಲ ಆಧಾರಿತ ವಿದ್ಯುತ್ ಘಟಕಗಳಲ್ಲಿ ಉತ್ಪಾದನೆಯಲ್ಲಿ ಕುಸಿತ ಸಂಭವಿಸಿದೆ. ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಶೇ. ೬೪ ಭಾಗ ವಿದೇಶಗಳಿಂದ ಆಮದು ಮಾಡಿಕೊಳ್ಳುವ ತೈಲ, ಕಲ್ಲಿದ್ದಲು ಮತ್ತು ಅನಿಲ ಆಧಾರಿತವಾಗಿದೆ. ಉಕ್ರೇನ್ ಯುದ್ಧದಿಂದಾಗಿ ಈ ವಿಶೇಷ ತೈಲ, ಕಲ್ಲಿದ್ದಲು ಮತ್ತು ಅನಿಲದ ಪೂರೈಕೆ ಅಸ್ತವ್ಯಸ್ತಗೊಂಡಿದೆ. ಹೀಗಾಗಿ ವಿದ್ಯುತ್ ಉತ್ಪಾದನೆ ಕಡಿತಗೊಂಡಿದೆ. ಶೇ. ೨೭ರಷ್ಟು ವಿದ್ಯುತ್ ಜಲಮೂಲಗಳಿಂದ ಉತ್ಪಾದನೆಯಾಗುತ್ತಿದೆ. ಈ ವಿದ್ಯುತ್ ಕೂಡಾ ಗರಿಷ್ಠ ಪ್ರಮಾಣದಲ್ಲಿ ಆಗುತ್ತಿಲ್ಲ. ಇದರಿಂದ ದೇಶದಲ್ಲಿ ವಿದ್ಯುತ್ ಕೊರತೆ ಉಂಟಾಗಿದೆ. ಪರಿಣಾಮವಾಗಿ ವಿದ್ಯುತ್ ದರಗಳನ್ನು ಏರಿಸಲಾಗಿದೆ. ಬೇರೆ ದಾರಿ ಕಾಣದೆ ವಿದ್ಯುತ್ ಅಭಾವವನ್ನು ನಿಭಾಯಿಸಲು ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಮೊದಲ ಹಂತದಲ್ಲಿ ನಗರಗಳಲ್ಲಿ ಮದುವೆ ಸಮಾರಂಭಗಳು ಮತ್ತು ಔತಣಕೂಟಗಳು ರಾತ್ರಿ ಹತ್ತುಗಂಟೆಗೆ ಮುಗಿಯಬೇಕೆಂಬ ನಿರ್ಬಂಧ ವಿಧಿಸಲಾಗಿದೆ. ಜೊತೆಗೆ ಔತಣಕೂಟಗಳಲ್ಲಿ ಹಲವು ರೀತಿಯ ಭಕ್ಷ್ಯಗಳನ್ನು ಬಡಿಸುವುದರ ಮೇಲೆ ನಿರ್ಬಂಧ ವಿಧಿಸಲಾಗಿದೆ. ಯಾವುದಾದರೂ ಒಂದು ಆಹಾರದ ಐಟಂ ಮಾತ್ರ ಕೊಡಬೇಕೆಂದು ತಿಳಿಸಲಾಗಿದೆ. ಈ ನಿರ್ಬಂಧಗಳು ಕಟ್ಟು ನಿಟ್ಟಾಗಿ ಜಾರಿಗೆ ತರುವ ಜವಾಬ್ದಾರಿಯನ್ನು ನಗರಗಳ ಆಡಳಿತ ಮತ್ತು ಪೊಲೀಸರಿಗೆ ನೀಡಲಾಗಿದೆ.
ವಿದ್ಯುತ್ ಸ್ಥಗಿತ ಅವಧಿ ಕರಾಚಿಯಲ್ಲಿ ದಿನಕ್ಕೆ ೧೫ ಗಂಟೆ, ಲಾಹೋರ್‌ನಲ್ಲಿ ಕನಿಷ್ಠ ೧೨ ಗಂಟೆ ಇದೆ. ಇನ್ನು ಬೇರೆ ಕಡೆಯ ಪರಿಸ್ಥಿತಿ ಕೇಳುವಂತೆಯೇ ಇಲ್ಲ. ವಿದ್ಯುತ್ ಸ್ಥಗಿತ ಅವಧಿಯನ್ನು ಕಡಿತಗೊಳಿಸುವ ಉದ್ದೇಶದಿಂದ ಸರ್ಕಾರಿ ಕಚೇರಿಗಳು ಐದು ದಿನ ಮಾತ್ರ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಮಾರುಕಟ್ಟೆಗಳು ರಾತ್ರಿ ಎಂಟುವರೆ ಗಂಟೆಗೆ ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿದೆ ಎಂದೂ ವರದಿಯಾಗಿದೆ. ವಿದ್ಯುತ್ ಸ್ಥಗಿತದಿಂದಾಗಿ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆಯಾಗಿ ಜನರು ಪರದಾಡುವಂತಾಗಿದೆ. ಹೊಟೆಲ್ ಉದ್ಯಮ ಸಂಪೂರ್ಣ ಕುಸಿದಿದೆ. ಗ್ರಾಮಾಂತರ ಪ್ರದೇಶದಲ್ಲಿ ಕೊಳವೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿರುವುದರಿಂದ ಬಾವಿ, ಕೆರೆ ನೀರನ್ನು ಜನರು ಕುಡಿಯುವಂತಾಗಿದೆ. ಇದರಿಂದ ಜನರು ಅದರಲ್ಲಿಯೂ ಹೆಚ್ಚು ಮಕ್ಕಳು ಅಸ್ವಸ್ಥಗೊಳ್ಳುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಅಭಾವದಿಂದಾಗಿ ಆಹಾರ ವಸ್ತು ಮತ್ತು ಔಷಧಗಳ ಸಾಗಣೆ ಮೇಲೆ ಪರಿಣಾಮ ಬೀರಿದೆ. ಆಹಾರ ಧಾನ್ಯ ಮತ್ತು ಔಷಧಗಳ ಲಭ್ಯತೆಯ ಸಮಸ್ಯೆ ಉಂಟಾಗಿರುವುದರಿಂದ ಜನರು ಸಂಕಷ್ಟಕ್ಕೆ ಸಿಕ್ಕಿದ್ದಾರೆ.
ಪಾಕಿಸ್ತಾನ ಇಂಥ ಬಿಕ್ಕಟ್ಟನ್ನು ಈಗ ಹೊಸದಾಗಿ ಎದುರಿಸುತ್ತಿಲ್ಲ. ಹಲವಾರು ದಶಕಗಳಿಂದ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತ ಬಂದಿದೆ. ಮುನ್ನೋಟವಿಲ್ಲದ ಆಡಳಿತ ಮತ್ತು ಅನಗತ್ಯ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಮೇಲೆ ಹಣ ವೆಚ್ಚ ಮಾಡುತ್ತ ಬಂದಿರುವುದು ಈ ಪರಿಸ್ಥಿತಿಗೆ ಕಾರಣ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಗ್ವಾರ್ಡಾ-ಕಶ್ಘರ್ ರೈಲು ಮಾರ್ಗ ನಿರ್ಮಾಣ ಮತ್ತು ಬಲೂಚಿಸ್ತಾನ ಗಡಿಯಲ್ಲಿ ಆರ್ಥಿಕ ವಲಯ ನಿರ್ಮಾಣ ಯೋಜನೆಗಳು ಅಂಥ ಅನಗತ್ಯ ವೆಚ್ಚಕ್ಕೆ ಉತ್ತಮ ಉದಾಹರಣೆಗಳು. ಈ ಯೋಜನೆಗಳಿಂದ ಚೀನಾಕ್ಕೆ ಕೊಡಬೇಕಾಗಿರುವ ಹಣ ೪೭ ಬಿಲಿಯನ್ ಡಾಲರ್‌ಗಳು. ಈ ಸಾಲ ಈಗ ೬೪ ಬಿಲಿಯನ್ ಡಾಲರ್‌ಗೆ ಏರಿದೆ. ಇದೊಂದು ಉದಾಹರಣೆಯಷ್ಟೆ. ಅನಗತ್ಯ ವೆಚ್ಚದ ದೊಡ್ಡ ಪಟ್ಟಿಯನ್ನೇ ಆರ್ಥಿಕ ತಜ್ಞರು ನೀಡುತ್ತಾರೆ.
ವಿದ್ಯುತ್ ಸ್ಥಗಿತ ಅವಧಿ ಕರಾಚಿಯಲ್ಲಿ ದಿನಕ್ಕೆ ೧೫ ಗಂಟೆ, ಲಾಹೋರ್‌ನಲ್ಲಿ ಕನಿಷ್ಠ ೧೨ ಗಂಟೆ ಇದೆ. ಇನ್ನು ಬೇರೆ ಕಡೆಯ ಪರಿಸ್ಥಿತಿ ಕೇಳುವಂತೆಯೇ ಇಲ್ಲ. ವಿದ್ಯುತ್ ಸ್ಥಗಿತ ಅವಧಿಯನ್ನು ಕಡಿತಗೊಳಿಸುವ ಉದ್ದೇಶದಿಂದ ಸರ್ಕಾರಿ ಕಚೇರಿಗಳು ಐದು ದಿನ ಮಾತ್ರ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಮಾರುಕಟ್ಟೆಗಳು ರಾತ್ರಿ ಎಂಟುವರೆ ಗಂಟೆಗೆ ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿದೆ ಎಂದೂ ವರದಿಯಾಗಿದೆ. ವಿದ್ಯುತ್ ಸ್ಥಗಿತದಿಂದಾಗಿ ಕುಡಿಯುವ ನೀರಿನ ಪೂರೈಕೆಯಲ್ಲಿ ಸಮಸ್ಯೆಯಾಗಿ ಜನರು ಪರದಾಡುವಂತಾಗಿದೆ.
ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಪಾಕಿಸ್ತಾನ ಸರ್ಕಾರಕ್ಕೆ ತುರ್ತಾಗಿ ಕನಿಷ್ಠ ೩೬ ಬಿಲಿಯನ್ ಡಾಲರ್ ವಿದೇಶೀ ವಿನಿಯಯ ಹಣ ಬೇಕಿದೆ. ಈ ವರ್ಷ ಸಾಲ ಮರುಪಾವತಿಗೇ ೨೧ ಬಿಲಿಯನ್ ಡಾಲರ್ ಹಣ ಬೇಕಿದೆ. ಸರ್ಕಾರ ಹಿಂದೆಯೇ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸಾಲ ಕೇಳಿದೆ. ಆದರೆ ಹಿಂದೆ ತೆಗೆದುಕೊಂಡ ಸಾಲದ ಕಂತುಗಳನ್ನು ಕಟ್ಟುವಲ್ಲಿ, ಅಷ್ಟೇ ಅಲ್ಲ ಬಡ್ಡಿಯನ್ನು ಕಟ್ಟುವಲ್ಲಿಯೂ ವಿಫಲವಾಗಿರುವುದರಿಂದ ಸಾಲ ಕೊಡಲು ಸಾಧ್ಯವಿಲ್ಲ ಎಂದು ಆ ಹಣಕಾಸು ಸಂಸ್ಥೆಗಳು ತಿಳಿಸಿವೆ. ಈ ಹಿಂದೆ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಅವಧಿಯಲ್ಲಿಯೇ ಸಮಸ್ಯೆ ತಲೆದೋರಿತ್ತು. ಸೌದಿ ಅರೇಬಿಯಾ, ಯುಎಇ, ಚೀನಾ ದೇಶಗಳಿಂದ ಸಾಕಷ್ಟು ಸಾಲ ಪಡೆದಿರುವುದರಿಂದ ಆ ದೇಶಗಳು ಕೂಡಾ ಮತ್ತಷ್ಟು ಸಾಲ ಕೊಡಲು ನಿರಾಕರಿಸಿದ್ದವು. ಅಂತಾರತಾಷ್ಟ್ರೀಯ ಹಣ ಸಾಲ ನೀಡಿಕೆ ಸಂಸ್ಥೆ ಐಎಂಎಫ್ ಮತ್ತೆ ಸಾಲ ನೀಡಲು ಕೆಲವು ಷರತ್ತುಗಳನ್ನು ವಿಧಿಸಿತ್ತು. ಸಂಧಾನಗಳ ನಂತರ ಕೊನೆಗೂ ಪಾಕಿಸ್ತಾನ ಐಎಂಎಫ್ ಹಾಕಿದ ಷರತ್ತುಗಳಿಗೆ ಒಪ್ಪಿತ್ತು. ೨೦೧೯ರಲ್ಲಿ ಪಾಕಿಸ್ತಾನಕ್ಕೆ ಐಎಂಎಫ್ ೧೯ ಬಿಲಿಯನ್ ಡಾಲರ್ ಸಾಲ ಮಂಜೂರು ಮಾಡಿತ್ತು. ಅದರಲ್ಲಿ ಅರ್ಧ ಹಣ ಮಾತ್ರ ಬಿಡುಗಡೆಯಾಗಿದ್ದು ಉಳಿದ ಹಣ ಕೊಡುವಂತೆ ಪಾಕಿಸ್ತಾನ ಕೋರಿದೆ. ಆ ಪೈಕಿ ಒಂದು ಬಿಲಿಯನ್ ಡಾಲರ್ ಹಣ ಕೊಡಲು ಕೆಲವು ತಿಂಗಳ ಹಿಂದೆ ಐಎಂಎಫ್ ಒಪ್ಪಿದೆ. ಆದರೆ ಷರತ್ತುಗಳು ಪಾಕಿಸ್ತಾನ ಸರ್ಕಾರ ಪಾಲಿಸಬೇಕು. ಮುಖ್ಯವಾಗಿ ವಿದ್ಯುತ್ ಮೇಲಿನ ಸಬ್ಸಿಡಿ ರದ್ದು ಮಾಡಬೇಕು. ಬಜೆಟ್ ಕೊರತೆಯನ್ನು ತಗ್ಗಿಸಬೇಕು. ಬ್ಯಾಂಕ್ ಮತ್ತು ತೆರಿಗೆಗೆ ಸಂಬಂಧಿಸಿದ ಕಾನೂನುಗಳನ್ನು ಸುಧಾರಣೆ ಮಾಡಬೇಕು. ಹೀಗೆ ಹತ್ತು ಹಲವು ನಿರ್ಬಂಧಗಳನ್ನು ಐಎಂಎಫ್ ಹಾಕಿದೆ. ಈ ನಿರ್ಬಂಧಗಳನ್ನು ಪಾಲಿಸಿದರೆ ಜನರ ಮೇಲೆ ಹೊರೆ ಹೆಚ್ಚುವುದು ಖಚಿತ. ಇದರಿಂದ ಜನರು ರೊಚ್ಚಿಗೇಳಬಹುದು. ರಾಜಕೀಯವಾಗಿ ಸಮಸ್ಯೆಯಾಗಬಹುದೆಂದು ಈಗಿನ ಆಡಳಿತಾರೂಢರೂ ಲೆಕ್ಕಾಚಾರ ಹಾಕುತ್ತಿದ್ದಾರೆ.
ಆದರೆ ಪ್ರಸ್ತುತ ಆರ್ಥಿಕ ಬಿಕ್ಕಟ್ಟು ಉಲ್ಬಣಗೊಳ್ಳುವ ಮೊದಲು ಸರ್ಕಾರ ಈ ನಿರ್ಬಂಧಗಳನ್ನು ಜಾರಿಗೆ ತರಬೇಕಿದೆ. ಸಾಲ ಅನಿವಾರ್ಯವಾಗಿರುವುದರಿಂದ ಐಎಂಎಫ್ ಹಾಕಿದ ನಿರ್ಬಂಧಗಳನ್ನು ಪಾಲಿಸದೆ ಬೇರೆ ದಾರಿಯಿಲ್ಲ. ಐಎಂಎಫ್ ಸೂಚನೆ ಪಾಲಿಸಲು ಅನುಕೂಲವಾಗುವಂತೆ ಇಮ್ರಾನ್ ಖಾನ್ ಆಡಳಿತಾವಧಿಯಲ್ಲಿಯೆ ವಿದ್ಯುತ್ ಕ್ಷೇತ್ರದ ಸುಧಾರಣೆ ಸೇರಿದಂತೆ ಕೆಲವು ಆರ್ಥಿಕ ಸುಧಾರಣೆಗಳಿಗೆ ಸಂಸತ್ತಿನ ಅನುಮೋದನೆ ಪಡೆಯಲಾಗಿದೆ. ಈಗಿನ ಸರ್ಕಾರ ಆ ಸುಧಾರಣೆಗಳನ್ನು ಜಾರಿಗೊಳಿಸಬೇಕಷ್ಟೆ. ರಾಜಕೀಯವಾಗಿ ಏನಾಗುತ್ತದೋ ಎಂದು ಹೆದರಿಕೊಂಡೇ ಷರೀಫ್ ಸರ್ಕಾರ ಸುಧಾರಣೆಗಳನ್ನು ಒಂದೊಂದಾಗಿ ಜಾರಿಗೊಳಿಸಲು ಆರಂಭಿಸಿದೆ. ಈ ಮಧ್ಯೆ ಪದಚ್ಯುತ ಇಮ್ರಾನ್ ಖಾನ್ ಸುಮ್ಮನೆ ಕುಳಿತಿಲ್ಲ.
ಷಹಬಾಜ್ ಷರೀಫ್ ಸರ್ಕಾರದ ವಿರುದ್ದ ದೇಶದಾದ್ಯಂತ ‘ಆಜಾದಿ ಮಾರ್ಚ್’ ಸಂಘಟಿಸುತ್ತಿದ್ದಾರೆ. ಈಗ ಅಸ್ತಿತ್ವಕ್ಕೆ ಬಂದಿರುವುದು ಅಮೆರಿಕ ಹೂಡಿದ ಸಂಚಿನ ಸರ್ಕಾರ. ವಿದೇಶೀ ಹಸ್ತಕ್ಷೇಪದಿಂದ ದೇಶ ಬಿಡುಗಡೆ ಆಗಬೇಕು. ಅದಕ್ಕಾಗಿ ರಾಷ್ಟ್ರೀಯ ಅಸೆಂಬ್ಲಿಗೆ ಚುನಾವಣೆ ಘೋಷಣೆಯಾಗಬೇಕು ಎಂಬುದು ಇಮ್ರಾನ್ ಖಾನ್ ಆಗ್ರಹ.
ಇಮ್ರಾನ್ ಖಾನ್ ಅಧಿಕಾರ ತ್ಯಜಿಸಲು ಸಿದ್ಧರಿರಲಿಲ್ಲ. ವಿವಿಧ ಪಕ್ಷಗಳ ಬೆಂಬಲದೊಂದಿಗೆ ಅವಿಶ್ವಾಸ ನಿರ್ಣಯ ಮಂಡಿಸಿ ಇಮ್ರಾನ್ ಖಾನ್ ಸರ್ಕಾರವನ್ನು ಷಹಬಾಜ್ ಷರೀಫ್ ಪದಚ್ಯುತಗೊಳಿಸುವಲ್ಲಿ ಸಫಲರಾದರು. ಇದೇ ಏಪ್ರಿಲ್ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಷರೀಫ್‌ಗೆ ಎದುರಾದ ಮೊದಲ ಸವಾಲು ದೇಶದ ಹಣಕಾಸು ಪರಿಸ್ಥಿತಿಯನ್ನು ಸರಿಪಡಿಸುವುದಾಗಿದೆ. ಅಧಿಕಾರವನ್ನು ಉಳಿಸಿಕೊಂಡು ಹಣಕಾಸು ಪರಿಸ್ಥಿತಿ ಸುಧಾರಿಸುವುದು ಕಠಿಣ ಸವಾಲೇ ಆಗಿದೆ.
ಉತ್ತರ ಪ್ರದೇಶ: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಶ್ರೀಮಂತರು ಹಾಗೂ ಬಡವರ ನಡುವಿನ ಆರ್ಥಿಕತೆ, ಅಸಮಾನ ಆಸ್ತಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ…
ಬೆಂಗಳೂರು: ಪ್ರಸಕ್ತ ವರ್ಷದಲ್ಲಿ ಚಳಿ ತುಂಬಾ ಜಾಸ್ತಿಯಿದ್ದು, ಶೀತಗಾಳಿ ಹೆಚ್ಚಾಗಲು ಕರಾವಳಿ ತೀರ ಪ್ರದೇಶದಲ್ಲಾದ ವಾತಾವರಣ ಬದಲಾವಣೆ ಕಾರಣ ಎಂದು…
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಮಾಡಿರುವ ವಿಚಾರ ಭಾರೀ ವಿವಾದಕ್ಕೆ…
ಕುವೈತ್/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಕುವೈತ್ ಪ್ರವಾಸದಲ್ಲಿದ್ದು, ಇಲ್ಲಿನ ರಾಜ ಶೇಕ್ ಮಿಶಾಲ್ ಅಲ್…
ಕಲಬುರ್ಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒತ್ತು ನೀಡುತ್ತಿದ್ದು, 371 ಜೆ ಜಾರಿಯಾದ ದಶಮಾನೋತ್ಸವದ ಪ್ರಯುಕ್ತ 371 ಹಾಸಿಗೆಗಳ…
ಬೆಂಗಳೂರು: ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆ ಅಮಿತ್…