ಅಂಕಣಗಳು

ದಕ್ಷಿಣ ರಾಜ್ಯಗಳ ಬೇಡಿಕೆಗೆ ಸಿಗಬೇಕಿದೆ ಕೇಂದ್ರದ ಮಾನ್ಯತೆ

ಶಿವಾಜಿ ಗಣೇಶನ್

ದೇಶದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯ ಬಗೆಗೆ ಕರಾರುವಕ್ಕಾದ ಮಾಹಿತಿ ಸಿಗಬೇಕಾದರೆ ದೇಶದ ಒಟ್ಟು ಜನಸಂಖ್ಯೆಯ ಪ್ರಮಾಣವೇ ನಿಜವಾದ ಅಳತೆಗೋಲು. ಈ ಮಾನದಂಡ ಇಲ್ಲದೆ ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿಯತ್ತ ಹೆಜ್ಜೆ ಇಡುವುದು ಕಷ್ಟ. ೨೦೨೧ರಲ್ಲಿ ನಡೆಯಬೇಕಿದ್ದ ಜನಗಣತಿ ನನೆಗುದಿಗೆ ಬಿದ್ದಿದೆ. ೨೦೧೯ರಲ್ಲಿ ಕಾಣಿಸಿಕೊಂಡ ಕೊರೊನಾ ಎಂಬ ಮಾರಣಾಂತಿಕ ಸಾಂಕ್ರಾಮಿಕ ರೋಗದಿಂದ ಇಡೀ ವ್ಯವಸ್ಥೆ ಸ್ಥಗಿತಗೊಂಡ ಕಾರಣ ಹತ್ತು ವರ್ಷಗಳಿಗೊಮ್ಮೆ ಅಂದರೆ ೨೦೨೧ರಲ್ಲಿ ನಡೆಯಬೇಕಿದ್ದ ಜನಗಣತಿ ಮುಂದಕ್ಕೆ ಹೋಯಿತು. ಈ ವಿಳಂಬವಾಗಿ ಮೂರೂವರೆ ವರ್ಷಗಳಾದರೂ ಕೇಂದ್ರ ಸರ್ಕಾರ ಈ ಬಗೆಗೆ ಏನು ಮಾಡುತ್ತಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಬಜೆಟ್‌ನಲ್ಲಿ ಜನಗಣತಿ ಕಾರ್ಯಕ್ಕೆಂದು ಹಣ ಎತ್ತಿಟ್ಟಿಲ್ಲದಿರುವುದನ್ನು ಗಮನಿಸಿದರೆ ಜನಗಣತಿ ಮತ್ತಷ್ಟು ವಿಳಂಬವಾಗುವ ಅನಿಶ್ಚಿತತೆ ಕಾಣುತ್ತಿದೆ. ಮುಂದಿನ ಏಪ್ರಿಲ್‌ನಿಂದ ಹೊಸ ಬಜೆಟ್ ವ್ಯವಸ್ಥೆ ಜಾರಿಗೆ ಬರಲಿದೆ. ಜನಗಣತಿಯನ್ನು ಕೇಂದ್ರ ಸರ್ಕಾರ ೨೦೨೬ರಲ್ಲಿ ನಡೆಸುವ ಸುದ್ದಿ ಹರಿದಾಡುತ್ತಲೇ ಇದೆ. ಆದರೆ ಇಂತಹ ಮಹತ್ವವಾದ ದೊಡ್ಡ ಪ್ರಮಾಣದ ಕಾರ್ಯ ನಡೆಯಬೇಕಾದರೆ ಎರಡು ವರ್ಷಗಳಾದರೂ ಬೇಕಾಗುತ್ತದೆ ಎನ್ನುವುದನ್ನು ಹಿಂದಿನ ಗಣತಿ ಕಾರ್ಯವನ್ನು ಗಮನಿಸಿದಾಗ ಅರ್ಥವಾದೀತು.

ತೆರಿಗೆ ಸಂಗ್ರಹ, ತೆರಿಗೆ ಪಾಲನ್ನು ರಾಜ್ಯಗಳಿಗೆ ಹಂಚಿಕೆ ಮಾಡುವ ಸಂಬಂಧ ನೇಮಕವಾಗಿರುವ ಆರ್ಥಿಕ ತಜ್ಞ ಅರವಿಂದ ಪನಾಗರಿಯಾ ನೇತೃತ್ವದ ಹದಿನಾರನೇ ಹಣಕಾಸು ಆಯೋಗ ಕಳೆದ ವರ್ಷದ ಜನವರಿಯಿಂದ ಕೆಲಸ ಮಾಡುತ್ತಿದೆ. ಬರುವ ಅಕ್ಟೋಬರ್‌ಗೆ ತನ್ನ ವರದಿಯನ್ನು ಸಲ್ಲಿಸಬೇಕಿದೆ. ಹಣಕಾಸು ಆಯೋಗ ತೆರಿಗೆ ಸಂಗ್ರಹ ಮತ್ತು ಅದರ ಪಾಲನ್ನು ರಾಜ್ಯಗಳಿಗೆ ಹಂಚಲು ಹಾಗೂ ಇತರೆ ಯೋಜನೆಗಳ ಜಾರಿಗೆ ಅನುದಾನ ನೀಡಲು ಅನುಸರಿಸುವ ಹಲವು ಮಾನದಂಡಗಳಲ್ಲಿ ಆಯಾ ರಾಜ್ಯಗಳ ಜನಸಂಖ್ಯೆಯು ಮುಖ್ಯ ಮಾನದಂಡವಾಗಲಿದೆ.

ಇತ್ತ ಲೋಕಸಭೆ ಕ್ಷೇತ್ರಗಳ ಪುನರ್ ವಿಂಗಡಣೆ ಕಾರ್ಯವು ಮುಂದಿನ ೨೦೨೯ರ ಚುನಾವಣೆಗೆ ಸಿದ್ಧವಾಗಬೇಕಿದೆ. ೨೦೦೨ರಲ್ಲಿ ಆಗಿದ್ದ ಕ್ಷೇತ್ರಗಳ ಪುನರ್ ವಿಂಗಡಣೆ ಈಗ ಆಗಲೇಬೇಕಿರುವ ಕಾರ್ಯ. ಜೊತೆಗೆ ಲೋಕಸಭೆಯಲ್ಲಿ ಶೇ.೩೩ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಹಂಚಿಕೆ ಮಾಡಬೇಕಿದೆ. ಇದಕ್ಕಾಗಿ ಕ್ಷೇತ್ರಗಳನ್ನು ಗುರುತಿಸುವ ಕಾರ್ಯವಾಗಬೇಕಿದೆ. ಈ ಕ್ಷೇತ್ರಗಳ ಪುನರ್ ವಿಂಗಡಣೆಯಲ್ಲಿ ಜನಸಂಖ್ಯೆಯೇ ಪ್ರಧಾನ ಅಳತೆಗೋಲಾಗಿರುವುದರಿಂದ ಮಿತಿಮೀರಿ ಜನಸಂಖ್ಯೆ ಹೆಚ್ಚುತ್ತಿರುವ ಉತ್ತರ ಭಾರತದ ರಾಜ್ಯಗಳಿಗೆ ಕೊಡುತ್ತಿರುವ ಪ್ರಾತಿನಿಧ್ಯ ಮತ್ತು ಜನಸಂಖ್ಯೆಯನ್ನು ನಿಯಂತ್ರಣ ಮಾಡಿಕೊಂಡು ಬಂದಿರುವ ದಕ್ಷಿಣ ರಾಜ್ಯಗಳ ಪ್ರಾತಿನಿಧ್ಯ ಕಡಿಮೆ ಆಗುವ ಸಾಧ್ಯತೆಗಳು ಹೆಚ್ಚಿವೆ ಎನ್ನುವ ಕಾರಣಕ್ಕೆ ಉತ್ತರ- ದಕ್ಷಿಣ ರಾಜ್ಯಗಳ ನಡುವಿನ ತಾರತಮ್ಯ ನೀತಿ ಈಗ ಬಹಿರಂಗವಾಗಿ ಟೀಕೆಯ ಅಸ್ತ್ರವಾಗಿದೆ.

ಈ ಎಲ್ಲ ಸಮಸ್ಯೆಗಳ ನಡುವೆ ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎನ್ನುವುದು ಗೋಪ್ಯವಾಗಿದೆ. ದೇಶದ ಮುಂದೆ ಎಂತಹ ಕ್ಲಿಷ್ಟ ಸಮಸ್ಯೆಗಳು ಎದುರಾದರೂ ತೊಂಬತ್ತರ ದಶಕದ ಆರಂಭದಲ್ಲಿ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್ ಮೌನವಾಗಿರುತ್ತಿದ್ದರು. ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ತುರ್ತು ಕ್ರಮಕ್ಕೆ ಬದಲಿಗೆ ವಿಳಂಬ ಮಾಡುತ್ತಾ ಹೋದರೆ ಅಂತಹ ಸಮಸ್ಯೆಗಳಿಗೆ ಕಾಲವೇ ಪರಿಹಾರ ನೀಡುತ್ತದೆ ಎಂಬ ನಂಬಿಕೆ ಅವರದಾಗಿತ್ತು ಎಂಬುದು ಅವರ ಆಡಳಿತ ವೈಖರಿಯನ್ನು ಟೀಕೆ ಮಾಡುತ್ತಿದ್ದವರ ಅಭಿಪ್ರಾಯವಾಗಿತ್ತು. ಹಾಗೆ ಇಂದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಈ ಪ್ರಮುಖ ಸಮಸ್ಯೆಗಳ ಬಗೆಗೆ ಎಲ್ಲಿಯೂ ಬಾಯಿ ಬಿಡುತ್ತಿಲ್ಲ. ಅವರ ಮೌನ ಯಾರಿಗೂ ಮತ್ತು ಯಾವ ರಾಜಕೀಯ ಪಕ್ಷಗಳಿಗೂ ಅರ್ಥವಾಗದಿರಬಹುದು. ಆದರೆ ಅವರು ಏನೂ ಮಾಡುತ್ತಿಲ್ಲ ಎಂದು ಊಹೆ ಮಾಡುವುದಕ್ಕಾಗುವುದಿಲ್ಲ. ಅವರಿಗೆ ಅವರದೇ ಆದ ಅಜೆಂಡಾ ಇದೆ. ಅವರದೇ ಆದ ಚಿಂತಕರ ಚಾವಡಿ ಇದೆ. ಹಾಗೆಯೇ ಅದನ್ನು ಜಾರಿಗೆ ತರುವ ಕಾರ್ಯಪಡೆಯೂ ಇದೆ.

ಅದೇನೇ ಇರಲಿ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ನೀಡುವ ರಾಜ್ಯಗಳೆಂದರೆ ಕ್ರಮವಾಗಿ ಮಹಾರಾಷ್ಟ್ರ (ಮುಂಬೈ), ಕರ್ನಾಟಕ, ಗುಜರಾತ್ ಮತ್ತು ತಮಿಳುನಾಡು. ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತೆರಿಗೆ ಪಾಲಿನ ಹಣವನ್ನು ಹೊರತು ಪಡಿಸಿದರೆ ತನ್ನ ಪಕ್ಷದ ಮತ್ತು ತನ್ನ ಮಿತ್ರ ಪಕ್ಷಗಳ ಆಡಳಿತ ವಿರುವ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುತ್ತಾ ಬಂದಿರುವುದು ಈಗ ರಹಸ್ಯವಾಗೇನೂ ಉಳಿದಿಲ್ಲ. ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾದ ಮಿತ್ರಪಕ್ಷಗಳು ಆಡಳಿತದಲ್ಲಿರುವ ಆಂಧ್ರ ಪ್ರದೇಶ ಮತ್ತು ಬಿಹಾರಕ್ಕೆ ಈಗಾಗಲೇ ಬಜೆಟ್ ಮತ್ತು ವಿಶೇಷ ಅನುದಾನವಾಗಿ ಹೆಚ್ಚಿನ ಹಣಕಾಸು ನೆರವು ನೀಡಲಾಗಿದೆ.

ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ತೆಲಂಗಾಣ ರಾಜ್ಯಗಳು ಕಳೆದ ಹತ್ತನ್ನೆರಡು ವರ್ಷಗಳಿಂದ ಬಿಜೆಪಿಯ ಕೇಂದ್ರ ಸರ್ಕಾರದ ಅವಕೃಪೆಗೆ ಒಳಗಾಗಿ ಅವುಗಳೀಗ ತಮಗಿರುವ ಸಾಂವಿಧಾನಿಕ ಇತಿಮಿತಿಯ ಮಾರ್ಗದಲ್ಲಿ ಹೋರಾಟಕ್ಕಿಳಿದಿವೆ. ಕಾಕತಾಳೀಯ ಎನ್ನುವಂತೆ ಈ ಎಲ್ಲ ರಾಜ್ಯಗಳು ದಕ್ಷಿಣ ರಾಜ್ಯಗಳೇ ಆಗಿವೆ. ಕರ್ನಾಟಕ ಹೊರತುಪಡಿಸಿದರೆ ಈ ರಾಜ್ಯಗಳಲ್ಲಿ ಬಿಜೆಪಿಗೆ ನೆಲೆ ಇಲ್ಲ. ಬಿಜೆಪಿಯ ಮಾತೃಭಾಷೆಯಾದ ಹಿಂದಿಗೂ ಇಲ್ಲಿ ಜಾಗವಿಲ್ಲ. ಹೀಗಾಗಿ ಸಹಜ ಎನ್ನುವಂತೆ ಕೇಂದ್ರದ ಬಿಜೆಪಿ ಸರ್ಕಾರ ಹಲವು ವಿಷಯಗಳಲ್ಲಿ ತಾರತಮ್ಯ ಮತ್ತು ನಿರ್ಲಕ್ಷ್ಯ ತೋರುತ್ತಾ ಬಂದಿರುವುದು ಬೆಳಕಿನಷ್ಟು ನಿಚ್ಚಳ.ಈ ನಿರ್ಲಕ್ಷ್ಯಕ್ಕೆ ತಕ್ಕ ಉತ್ತರ ನೀಡಲು ಈಗ ತಮಿಳುನಾಡು ಸರ್ಕಾರ ನೂತನ ಶಿಕ್ಷಣ ನೀತಿ, ತ್ರಿಭಾಷಾ ಸೂತ್ರ ಮತ್ತು ಲೋಕಸಭೆ ಕ್ಷೇತ್ರಗಳ ವಿಷಯವನ್ನು ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಒಕ್ಕೂಟ ವ್ಯವಸ್ಥೆಯಲ್ಲಿನ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಈ ಹೋರಾಟ ಯಾವ ಮಟ್ಟಕ್ಕೆ ಹೋಗಲಿದೆ ಎನ್ನುವುದನ್ನು ಈಗಲೇ ಹೇಳಲಾಗದು.

ಮಹಾರಾಷ್ಟ್ರ ಹೊರತುಪಡಿಸಿದರೆ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಕಟ್ಟುತ್ತಿರುವ ಕರ್ನಾಟಕ ಸರ್ಕಾರವು ತನಗೆ ಅನ್ಯಾಯವಾಗುತ್ತಿದೆ ಎಂದು ಹಲವು ವರ್ಷಗಳಿಂದ ದೂರುತ್ತಿದೆ. ಈ ಸತ್ಯಾಂಶ ಕೇಂದ್ರ ಸರ್ಕಾರಕ್ಕೂ ಗೊತ್ತಿರುವ ಸಂಗತಿ. ಕರ್ನಾಟಕದ ಒಟ್ಟು ೨೮ ಲೋಕಸಭೆ ಕ್ವೇತ್ರಗಳಲ್ಲಿ ೧೭ ಮಂದಿ ಬಿಜೆಪಿಯ ಸದಸ್ಯರು ಮತ್ತು ಇಬ್ಬರು ಜಾ.ದಳ ಸದಸ್ಯರಿದ್ದಾರೆ. ಒಂಬತ್ತು ಮಂದಿ ಕಾಂಗ್ರೆಸ್ ಸದಸ್ಯರಿದ್ದಾರೆ. ರಾಜ್ಯದಿಂದ ನಾಲ್ವರು ಬಿಜೆಪಿಯ ಸಚಿವರಿದ್ದರೆ ಒಬ್ಬರು ಜಾ.ದಳದ ಕುಮಾರಸ್ವಾಮಿ ಇದ್ದಾರೆ. ರಾಜ್ಯಗಳಿಗೆ ಹಣಕಾಸು ಹಂಚಿಕೆಯ ಹೊಣೆಯನ್ನು ಹೊತ್ತಿರುವ ಹಣಕಾಸು ಸಚಿವರೇ ಕರ್ನಾಟಕದ ಪ್ರತಿನಿಽ ಆಗಿರುವುದು ವಿಶೇಷ. ಇವರೆಲ್ಲರಿಗೂ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ಅರಿವಿದೆ. ಆದರೂ ರಾಜ್ಯದ ಪರವಾಗಿ ನ್ಯಾಯ ಕೇಳುವ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಬಾಲಸುಟ್ಟ ಬೆಕ್ಕಿನಂತಿರುತ್ತಾರೆ. ಸಂಸತ್ತಿನಲ್ಲಿ ಇವರಾರೂ ರಾಜ್ಯದ ಸಮಸ್ಯೆಗಳ ಬಗೆಗೂ ಬಾಯಿ ಬಿಡುವುದಿಲ್ಲ ಎನ್ನುವುದು ಈಗ ಜನರಿಗೆ ಮನವರಿಕೆ ಆಗುತ್ತಿದೆ.

ಈ ಮಧ್ಯೆ ಮುಖ್ಯವಾಗಿ ಹದಿನಾರನೇ ಹಣಕಾಸು ಆಯೋಗದ ಪ್ರತಿಯೊಂದು ರಾಜ್ಯವನ್ನು ಸಮನಾಗಿ ಕಾಣಬೇಕಿದೆ. ಆದರೆ ಹೆಚ್ಚು ಜನಸಂಖ್ಯೆ ಹೊಂದಿದ್ದು ಹೆಚ್ಚಿನ ಭೂ ಪ್ರದೇಶ ಹಾಗು ಬಡತನ ಇರುವ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶಗಳಂತಹ ಬಿಮಾರು ರಾಜ್ಯಗಳೆಂದೇ ಪ್ರಸಿದ್ಧಿಯಾಗಿರುವ (ಬಿಹಾರ,ಮಧ್ಯಪ್ರದೇಶ, ರಾಜಸ್ತಾನ ಮತ್ತು ಉತ್ತರ ಪ್ರದೇಶ- ರೋಗಗ್ರಸ್ತ ರಾಜ್ಯಗಳು) ರಾಜ್ಯಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯನ್ನು ಉತ್ತಮಗೊಳಿಸುವ ಯೋಜನೆಗಳನ್ನು ಜಾರಿಗೊಳಿಸುವುದರ ಜತೆಗೆ ದಕ್ಷಿಣ ರಾಜ್ಯಗಳ ಹಿತವನ್ನೂ ಕಾಪಾಡಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ತಮಗಾಗುತ್ತಿರುವ ಅನ್ಯಾಯದ ಬಗೆಗೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಕೂಗು ಜೋರಾಗಿದೆ. ಈ ತಾರತಮ್ಯದ ಕೂಗು ಈಗ ಬೇರೆ ಬೇರೆ ಅಯಾಮವನ್ನು ಪಡೆದುಕೊಳ್ಳುತ್ತಿರುವುದರಿಂದ ಇದು ಕೇಂದ್ರ ಸರ್ಕಾರದ ನಿದ್ದೆಗೆಡಿಸಿದೆ.

ಕೇಂದ್ರ ಸರ್ಕಾರ ತೆರಿಗೆ ಪಾಲಿನ ಹಂಚಿಕೆಗೆ ಅನುಸರಿಸುತ್ತಿರುವ ಜನಸಂಖ್ಯೆಯ ಬಾಹುಳ್ಯ, ಭೂ ಪ್ರದೇಶದ ವಿಸ್ತರಣೆ ಮತ್ತು ಬಡತನವನ್ನೇ ಮಾನದಂಡವನ್ನಾಗಿಸುವ ಕ್ರಮದಲ್ಲಿ ಇರುವ ದೋಷವನ್ನು ಸರಿಪಡಿಸಬೇಕಿದೆ. ತೆರಿಗೆ ಪಾಲಿನ ಹಂಚಿಕೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ನೀಡುವ ಆರ್ಥಿಕ ನೆರವು, ಅನುದಾನ ಹಂಚಿಕೆಗಾಗಿ ಅನುಸರಿಸಿಕೊಂಡು ಬಂದಿರುವ ಮಾನದಂಡಗಳನ್ನು ಬದಲಾಯಿಸಬೇಕಿದೆ. ಅದಕ್ಕಾಗಿ ಮುಖ್ಯಮಂತ್ರಿಗಳ, ಹಣಕಾಸು ಸಚಿವರ ಮತ್ತು ಆರ್ಥಿಕ ತಜ್ಞರೊಳಗೊಂಡ ಸಭೆ ನಡೆಸಿ ಬದಲಾವಣೆಯತ್ತ ಹೆಜ್ಜೆ ಇಡಬೇಕಿದೆ. ಹಣಕಾಸು ಆಯೋಗಕ್ಕೆ ಈಗ ನೀಡಿರುವ ಅಧ್ಯಯನ ವಿಷಯವನ್ನು ಮಾರ್ಪಾಟು ಮಾಡಲು ಸಾಧ್ಯವೇ ಎನ್ನುವ ಬಗೆಗೂ ಪ್ರಧಾನಿ ಗಮನವಹಿಸಬೇಕಿದೆ.

ಈಗ ಮುಖ್ಯವಾಗಿ ಕೇಳಿ ಬರುತ್ತಿರುವ ಕೂಗು ಎಂದರೆ ರಾಜ್ಯಗಳಿಗೆ ಹಂಚಿಕೆ ಆಗುತ್ತಿರುವ ಫೆಡರಲ್ ತೆರಿಗೆ ವರಮಾನವನ್ನು ಈಗ ಚಾಲ್ತಿಯಲ್ಲಿರುವ ಶೇ. ೪೧ರಿಂದ ಶೇ. ೪೦ಕ್ಕೆ ಇಳಿಸಬೇಕೆಂಬುದು. ಈ ಸಂಬಂಧವಾಗಿ ಕೇಂದ್ರ ಸರ್ಕಾರವು ಈಗಾಗಲೇ ಹಣಕಾಸು ಆಯೋಗಕ್ಕೆ ಶಿಫಾರಸ್ಸು ಮಾಡಿರುವುದಾಗಿ ಹೇಳಲಾಗುತ್ತಿದೆ. ಈ ಕ್ರಮದಿಂದಾಗಿ ಕೇಂದ್ರ ಸರ್ಕಾರಕ್ಕೆ ೩೫ ಸಾವಿರ ಕೋಟಿ ರೂ. ಉಳಿತಾಯವಾಗಲಿದೆ ಎನ್ನುವ ಲೆಕ್ಕಾಚಾರವಿದೆ. ಹೀಗೆ ಮಾಡಿದರೆ ರಾಜ್ಯಗಳ ಆರ್ಥಿಕ ಸ್ಥಿತಿಗತಿಗೆ ಸಿಗುತ್ತಿರುವ ಕೇಂದ್ರದ ಬೆಂಬಲ ಕಡಿಮೆ ಆಗುವ ಆತಂಕ ರಾಜ್ಯ ಸರ್ಕಾರಗಳನ್ನು ಕಾಡುತ್ತಿದೆ. ಈ ವಿಷಯವಾಗಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ರಾಜ್ಯಗಳು ಮೌನವಾಗಿವೆ. ಈ ರಾಜ್ಯಗಳಿಗೆ ಒಂದಲ್ಲ ಒಂದು ರೂಪದಲ್ಲಿ ಅನುದಾನ ಹೆಚ್ಚಿಗೆ ಸಿಗುತ್ತಿರುವುದು ಒಂದು ಕಾರಣವಾದರೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಬಾಯಿ ಬಿಡುವ ಶಕ್ತಿ ಈ ಯಾವ ರಾಜ್ಯಗಳಿಗೂ ಇಲ್ಲವಾಗಿರುವುದು ದುರಂತ. ವಾಸ್ತವವಾಗಿ ಈ ಫೆಡರಲ್ ತೆರಿಗೆಯ ಪ್ರಮಾಣವನ್ನು ಈಗ ಶೇ. ೪೧ರಿಂದ ಶೇ. ೫೦ಕ್ಕೆ ಹೆಚ್ಚಿಸಬೇಕೆನ್ನುವುದು ಹಲವು ರಾಜ್ಯಗಳ ಬೇಡಿಕೆಯಾಗಿದೆ. ಕೇಂದ್ರದ ಈಗಿನ ಕ್ರಮದಿಂದ ಈಗ ಈ ಬೇಡಿಕೆಗೆ ಯಾವ ಕಿಮ್ಮತ್ತೂ ಇಲ್ಲವಾಗಲಿದೆ.

ಕೇಂದ್ರದ ಯೋಜನೆಗಳ ಜಾರಿ, ರಾಜ್ಯಗಳಿಗೆ ತೆರಿಗೆ ಪಾಲು ಹಂಚಿಕೆ ಮತ್ತು ಪಂಚಾಯತ್‌ಗಳಿಗೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುವ ವಿಷಯಗಳಲ್ಲದೆ ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚುನಾವಣೆ ಸಮಯದಲ್ಲಿ ಮತದಾರರಿಗೆ ನೀಡಿರುವ ಉಚಿತ ಕೊಡುಗೆಗಳ ಭರವಸೆಗಳನ್ನು ಅಽಕಾರಕ್ಕೆ ಬಂದಾಗ ಜಾರಿಗೊಳಿಸಲು ಆಗುವ ಹೆಚ್ಚುವರಿ ವೆಚ್ಚವನ್ನು ಹೇಗೆ ಭರಿಸಬೇಕೆನ್ನುವುದು ಹಣಕಾಸು ಆಯೋಗಕ್ಕೆ ತಲೆನೋವಾಗಿದೆ. ಜೊತೆಗೆ ಸರ್ಕಾರವು ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಬೇಕೆನ್ನುವ ಒತ್ತಡದಲ್ಲಿರುವುದರಿಂದ ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ. ಇಂತಹ ಕ್ರಮಗಳಿಂದ ಹಣಕಾಸು ಆಯೋಗ ಮತ್ತಷ್ಟು ಕಠಿಣ ಕ್ರಮಗಳಿಗೆ ಕೈಹಾಕುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ಈ ಎಲ್ಲ ಸಮಸ್ಯೆಗಳನ್ನು ಕೇಂದ್ರ ಸರ್ಕಾರ ಸುಲಭವಾಗಿ ತಳ್ಳಿಹಾಕಲಾಗದು. ದಕ್ಷಿಣ ರಾಜ್ಯಗಳು ವಿಶೇಷವಾಗಿ ತಮಿಳುನಾಡು ಸರ್ಕಾರ ಸಂಘರ್ಷಕ್ಕೆ ಇಳಿಯುವ ಮುನ್ನವೇ ಪ್ರಧಾನ ಮಂತ್ರಿ ಅವರೇ ಎಲ್ಲ ರಾಜ್ಯಗಳ ಸಾಧ್ಯವಾದರೆ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಿಸುವುದು ಅನಿವಾರ್ಯ.

 

ಆಂದೋಲನ ಡೆಸ್ಕ್

Recent Posts

ಪಿರಿಯಾಪಟ್ಟಣ| ವಿದ್ಯುತ್‌ ಸ್ಪರ್ಶ: ಕಾಡಾನೆ ಸಾವು

ಪಿರಿಯಾಪಟ್ಟಣ: ವಿದ್ಯುತ್‌ ಸ್ಪರ್ಶದಿಂದ ಕಾಡಾನೆ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಗೋಲ್ಡನ್‌ ಟೆಂಪಲ್‌ ಸಮೀಪದ ದೊಡ್ಡ ಹರವೆ ಕಾಲೋನಿ…

21 mins ago

ಹನೂರು| ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಉಳಿಸಿ, ವಿಬಿ.ಜಿ ರಾಮ್ ಜಿ ಅಳಿಸಿ ಕಾರ್ಯಕ್ರಮ

ಮಹಾದೇಶ್‌ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ಕಾಂಗ್ರೆಸ್ ಪಕ್ಷವು ದೇಶದ ಜನರಿಗೆ ಆಹಾರ ಭದ್ರತಾ ಕಾಯ್ದೆ, ಉದ್ಯೋಗ…

53 mins ago

ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆಗೆ ಸಿದ್ಧತೆ: ಬಸವನಕಡ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ನೇತೃತ್ವದ ತಂಡ

ಮಹಾದೇಶ್‌ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು  ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ 5 ದಿನಗಳ ಕಾಲ…

1 hour ago

ಮೈಸೂರಿನಲ್ಲಿ ಯಾವುದೇ ಡ್ರಗ್ ಪತ್ತೆಯಾಗಿಲ್ಲ: ಸಚಿವ ಪರಮೇಶ್ವರ್‌ ಸ್ಪಷ್ಟನೆ

ಮೈಸೂರು: ಮೈಸೂರು ಪೊಲೀಸರು ನನಗೆ ಸರಿಯಾದ ಮಾಹಿತಿ ಕೊಟ್ಟಿದ್ದು, ಯಾವುದೇ ಡ್ರಗ್ಸ್‌ ಪತ್ತೆಯಾಗಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಸ್ಪಷ್ಟನೆ…

2 hours ago

ಸಿದ್ದರಾಮಯ್ಯ ಬದಲಾವಣೆ ಬಗ್ಗೆ ಹೈಕಮಾಂಡ್ ಎಲ್ಲೂ ಮಾತನಾಡಿಲ್ಲ: ಗೃಹ ಸಚಿವ ಪರಮೇಶ್ವರ್‌

ಮೈಸೂರು: ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನು ಬದಲಾವಣೆ ಮಾಡುವ ಬಗ್ಗೆ ಹೈಕಮಾಂಡ್‌ ಎಲ್ಲೂ ಕೂಡ ಮಾತನಾಡಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್‌…

3 hours ago

ಕಿಲ್ಲರ್‌ ಬಿಎಂಟಿಸಿಗೆ ಮತ್ತೊಂದು ಬಲಿ: ಬಸ್‌ ಹರಿದು ಯುವತಿ ಸಾವು

ಬೆಂಗಳೂರು: ಕಿಲ್ಲರ್‌ ಬಿಎಂಟಿಸಿ ಬಸ್‌ಗೆ ಬೆಂಗಳೂರಿನಲ್ಲಿ ಮತ್ತೊಂದು ಬಲಿಯಾಗಿದೆ. ಬೆಂಗಳೂರಿನ ಟಿನ್‌ ಫ್ಯಾಕ್ಟರಿ ಬಳಿ ಈ ಘಟನೆ ನಡೆದಿದ್ದು, ಮೃತರನ್ನು…

3 hours ago