ಆರ್.ಟಿ.ವಿಠಲಮೂರ್ತಿ
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್‌ನ ಹಲವು ಶಾಸಕರಿಗೆ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಇಷ್ಟವಾಗುತ್ತಿದ್ದಾರೆ.
ಅಂದ ಹಾಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ಯಾವ ಕಾರಣಕ್ಕಾಗಿ ಕಾಂಗ್ರೆಸ್‌ನ ಈ ಶಾಸಕರಿಗೆ ಇಷ್ಟವಾಗುತ್ತಿದ್ದಾರೆ ಎಂಬುದು ರಹಸ್ಯವೇನಲ್ಲ. ಬಹುಮುಖ್ಯ ಕಾರಣವೆಂದರೆ, ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಎದುರಿಸುತ್ತಿರುವ ರೀತಿ.
2019ರ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸಿ ಹೊಸದಿಲ್ಲಿ ಗದ್ದುಗೆಯನ್ನು ಮರುವಶಪಡಿಸಿಕೊಂಡ ಬಿಜೆಪಿ, ಇದಾದ ಎರಡು ವರ್ಷಗಳಲ್ಲಿ ಎದುರಾದ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಬಗ್ಗುಬಡಿಯುವ ಲೆಕ್ಕಾಚಾರದಲ್ಲಿತ್ತು. ಅದರ ಲೆಕ್ಕಾಚಾರಕ್ಕೆ ಎರಡು ಅಂಶಗಳು ಪೂರಕವಾಗಿದ್ದವು. ಈ ಪೈಕಿ ಮೊದಲನೆಯದು, ದಶಕಗಳ ಕಾಲ ಪಶ್ಚಿಮ ಬಂಗಾಳವನ್ನು ಆಳಿದ ಕಮ್ಯೂನಿಸ್ಟ್ ಪಕ್ಷದ ಬಹುತೇಕ ಮತದಾರರು ಬಿಜೆಪಿಯ ಬೆನ್ನಿಗೆ ನಿಂತಿದ್ದರು. ಹೀಗೆ ಕಮ್ಯೂನಿಸ್ಟರು ಬಿಜೆಪಿಯ ಬೆನ್ನಿಗೆ ನಿಲ್ಲಲು ಒಂದು ಕಾರಣವಿತ್ತು. ಅದೆಂದರೆ ಪಶ್ಚಿಮ ಬಂಗಾಳದ ನೆಲೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಎದುರಿಸುವ ವಿಷಯದಲ್ಲಿ ಕಮ್ಯೂನಿಸ್ಟರಿಗೆ ಆತ್ಮವಿಶ್ವಾಸದ ಕೊರತೆಯಿತ್ತು. ಏಕೆಂದರೆ, ಅಷ್ಟು ಹೊತ್ತಿಗಾಗಲೇ ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಸ್ಟರಿಗಿದ್ದ ನೆಲೆಯನ್ನು ಮಮತಾ ಅಲುಗಾಡಿಸಿದ್ದಷ್ಟೇ ಅಲ್ಲ, ಸತತವಾಗಿ ಅಲ್ಲಿನ ಅಧಿಕಾರ ಸೂತ್ರ ಹಿಡಿದಿದ್ದರು. ಪರಿಸ್ಥಿತಿ ಹೀಗಿದ್ದುದರಿಂದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಅಲುಗಾಡಿಸಲು ಕಮ್ಯೂನಿಸ್ಟ್ ಪಕ್ಷದ ಬಹುತೇಕ ಕಾರ್ಯಕರ್ತರಿಗೆ ಬಿಜೆಪಿ ಅಪ್ಯಾಯಮಾನವಾಗಿ ಕಂಡಿತು. ಶತ್ರುವಿನ ಶತ್ರು ಮಿತ್ರ ಎಂಬಂತೆ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರ ಪಡೆ ತಮ್ಮ ಬೆನ್ನಿಗೆ ನಿಂತಿದ್ದರಿಂದ ಬಿಜೆಪಿಯ ಆತ್ಮವಿಶ್ವಾಸ ಸಹಜವಾಗಿಯೇ ಹೆಚ್ಚಿತ್ತು. ಇಂತಹ ಆತ್ಮವಿಶ್ವಾಸದ ಜತೆ ಅದು ಮತ್ತೊಂದು ಅಸ್ತ್ರವನ್ನು ಪರಿಣಾಮ ಕಾರಿಯಾಗಿ ಬಳಸಲು ತಯಾರಾಯಿತು. ಈ ಅಸ್ತ್ರದ ಹೆಸರು ಶ್ರೀರಾಮ.
ಹೀಗೆ ಬೆನ್ನಿಗೆ ಕಮ್ಯೂನಿಸ್ಟ್ ಸೈನ್ಯದ ಶಕ್ತಿಯನ್ನಿಟ್ಟುಕೊಂಡು ಮುಂಚೂಣಿಗೆ ಶ್ರೀರಾಮನನ್ನು ತಂದು ನಿಲ್ಲಿಸಿದ ಬಿಜೆಪಿ ಇಡೀ ಪಶ್ಚಿಮಬಂಗಾಳದಲ್ಲಿ ಜೈ ಶ್ರೀರಾಮ್ ಎಂಬ ಘೋಷಣೆಯನ್ನು ಮೊಳಗಿಸಿತು. ಅದರ ಕೂಗು ಯಾವ ಮಟ್ಟದಲ್ಲಿತ್ತು ಎಂದರೆ ಈ ಕೂಗಿನ ಅಬ್ಬರಕ್ಕೆ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಮುಳುಗಿ ಹೋಗುತ್ತದೆ ಎಂಬ ಭಾವನೆ ದೇಶದೆಲ್ಲೆಡೆ ಕಾಣಿಸಿಕೊಂಡಿತು.
ಆದರೆ ಶ್ರೀರಾಮನ ಹೆಸರಿಟ್ಟುಕೊಂಡು, ಬೆನ್ನ ಹಿಂದೆ ಬಹುತೇಕ ಕಮ್ಯೂನಿಸ್ಟ್ ಕಾರ್ಯಕರ್ತರ ಶಕ್ತಿಯನ್ನು ಇಟ್ಟುಕೊಂಡು ಮುನ್ನುಗ್ಗಿದ ಬಿಜೆಪಿಯ ಸೈನ್ಯವನ್ನು ಮಮತಾ ಬ್ಯಾನರ್ಜಿ ಅದೆಷ್ಟು ಅಗ್ರೆಸಿವ್ ಆಗಿ ಎದುರಿಸಿದರೆಂದರೆ, ಇಡೀ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅನುಸರಿಸುವ ತಂತ್ರಗಳಿಗೆ ಟಕ್ಕರ್ ಕೊಡುತ್ತಾ, ಅಗತ್ಯ ಬಿದ್ದರೆ ಬೀದಿಯಲ್ಲೇ ಬಿಜೆಪಿಗೆ ಉತ್ತರ ಕೊಡುತ್ತಾ ಹೋದ ಮಮತಾ ಬ್ಯಾನರ್ಜಿ ಚುನಾವಣೆಯಲ್ಲಿ ಗೆದ್ದುಬಿಟ್ಟರು. ಅರ್ಥಾತ್, ಅವರ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ಇನ್ನೂರಾ ಹದಿನೈದು ಸ್ಥಾನಗಳಲ್ಲಿ ಗೆಲುವು ಗಳಿಸಿ ಪಶ್ಚಿಮ ಬಂಗಾಳದ ಅಧಿಕಾರ ಸೂತ್ರವನ್ನು ವಶಪಡಿಸಿಕೊಂಡಿತು. ಇದಕ್ಕೆ ಪ್ರತಿಯಾಗಿ ಅಬ್ಬರದ ಹೋರಾಟಗಳ ನಡುವೆ ಬಿಜೆಪಿ ಕೇವಲ ಎಪ್ಪತ್ತೇಳು ಕ್ಷೇತ್ರಗಳಲ್ಲಿ ಗೆಲುವು ಗಳಿಸುವಷ್ಟಕ್ಕೆ ಸುಸ್ತಾಯಿತು.
ಹೀಗೆ ಬಿಜೆಪಿ ಸೈನ್ಯಕ್ಕೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಟಕ್ಕರ್ ಕೊಟ್ಟ ರೀತಿ ಇವತ್ತು ಕರ್ನಾಟಕದ ಬಹುತೇಕ ಕಾಂಗ್ರೆಸ್ ಶಾಸಕರಿಗೆ ಅಪ್ಯಾಯಮಾನವಾಗಿ ಕಾಣತೊಡಗಿದೆ. ಕಾರಣ ಎರಡು ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ನೆಲೆಯಲ್ಲಿ ಯಾವ ಬೆಳವಣಿಗೆ ನಡೆದಿತ್ತೋ ಅಂತಹದೇ ಬೆಳವಣಿಗೆ ಕರ್ನಾಟಕದಲ್ಲೂ ಘಟಿಸತೊಡಗಿದೆ.
ಮೊದಲನೆಯದಾಗಿ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯನ್ನು ಸ್ವಯಂಬಲದ ಮೇಲೆ ಎದುರಿಸುವುದು ಕಷ್ಟ ಅನ್ನಿಸಿದಾಗ ಕಮ್ಯೂನಿಸ್ಟರು ಯಾವ ರೀತಿ ಬಿಜೆಪಿಯ ಬೆನ್ನಿಗೆ ನಿಂತರೋ ಅದಕ್ಕಿಂತ ಸ್ಪಷ್ಟವಾಗಿ ಕರ್ನಾಟಕದ ನೆಲೆಯಲ್ಲಿ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳ ಬಿಜೆಪಿಯ ಜತೆ ನಿಂತಿದೆ. ಪಶ್ಚಿಮ ಬಂಗಾಳದಲ್ಲಿ ಕಮ್ಯೂನಿಸ್ಟರು ನೇರಾನೇರವಾಗಿ ಬಿಜೆಪಿಯ ಜತೆ ನಿಲ್ಲದೆ, ತೆರೆಯ ಹಿಂದಿನಿಂದ ಅದಕ್ಕೆ ಶಕ್ತಿ ತುಂಬಿದ್ದರಾದರೆ ಕರ್ನಾಟಕದ ನೆಲೆಯಲ್ಲಿ ಜಾ.ದಳ ಪಕ್ಷನೇರವಾಗಿಯೇ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ. ಅಲ್ಲಿಗೆ ಪಶ್ಚಿಮ ಬಂಗಾಳದಂತೆ ಮಮತಾ ವಿರುದ್ಧದ ಶಕ್ತಿಗಳು ಹೇಗೆ ಒಗ್ಗೂಡಿದವೋ ಇಲ್ಲಿ ಕಾಂಗ್ರೆಸ್ ವಿರೋಧಿಗಳು ಅದಕ್ಕಿಂತ ಪರಿಣಾಮಕಾರಿಯಾಗಿ ಒಂದಾಗಿದ್ದಾರೆ. ಹೀಗೆ ಒಗ್ಗೂಡುವುದರ ಜತೆಗೆ ಪಶ್ಚಿಮ ಬಂಗಾಳದಲ್ಲಿ ಮಾಡಿದಂತೆ ಈ ಕೂಟ ಕರ್ನಾಟಕದ ನೆಲೆಯಲ್ಲಿ ಮತ್ತೊಂದು ಅಸ್ತ್ರವನ್ನು ಪ್ರಯೋಗಿಸಿದೆ. ಅದರ ಹೆಸರು ಶ್ರೀರಾಮ್.
ಅಂದ ಹಾಗೆ ಪಶ್ಚಿಮ ಬಂಗಾಳದಲ್ಲಿ ಪ್ರಯೋಗಿಸಿದ ಶ್ರೀರಾಮನ ಅಸ್ತ್ರ ಎಷ್ಟು ಹರಿತವಾಗಿತ್ತೋ ಅದಕ್ಕಿಂತ ಕರ್ನಾಟಕದಲ್ಲಿ ಪ್ರಯೋಗಿಸಿದ ಶ್ರೀರಾಮನ ಅಸ್ತ್ರ ಮತ್ತಷ್ಟು ಡೆಡ್ಲಿಯಾಗಿದೆ. ಕಾರಣ ಪಶ್ಚಿಮಬಂಗಾಳದಲ್ಲಿ ಪ್ರಯೋಗಿಸಿದ ಶ್ರೀರಾಮನ ಅಸ್ತ್ರಕ್ಕೆ ಭಾವನಾತ್ಮಕವಾದ ಗಾಜಿನ ಪುಡಿಗಳನ್ನು ಸವರಿರಲಿಲ್ಲ. ಆದರೆ ಈಗ ಕರ್ನಾಟಕದಲ್ಲಿ ಪ್ರಯೋಗಿಸಿದ ಶ್ರೀರಾಮನ ಅಸ್ತ್ರಕ್ಕೆ ಎದುರಾಳಿಗಳನ್ನು ತರಿದು ಹಾಕುವ ಗಾಜಿನ ಪುಡಿಯನ್ನು ಸವರಲಾಗಿದೆ. ಅರ್ಥಾತ್, ಇತ್ತೀಚೆಗೆ ಅಯೋಧ್ಯೆಯಲ್ಲಿ ಉದ್ಘಾಟನೆಯಾದ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾದ ಶ್ರೀರಾಮನ ವಿಗ್ರಹವೇನಿದೆ ಅದು ಹಳೆಯ ಮೈಸೂರಿನ ನೆಲೆಯಿಂದ ಹೋದ ಶಿಲ್ಪಿ ಮತ್ತು ಶಿಲೆಯಿಂದ ರೂಪುಗೊಂಡ ವಿಗ್ರಹ. ಇಂತಹದೊಂದು ಭಾವನಾತ್ಮಕ ಸ್ಪರ್ಶ ಕರ್ನಾಟಕದಲ್ಲಿ ಪ್ರಯೋಗವಾಗಿರುವ ಶ್ರೀರಾಮ ಎಂಬ ಅಸ್ತ್ರಕ್ಕೆ ತಗಲಿದೆ. ಹೀಗಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಬಿಜೆಪಿ ಮತ್ತು ಜಾ.ದಳ ಮೈತ್ರಿಕೂಟವನ್ನು ಎದುರಿಸುವುದು ಅಷ್ಟು ಸುಲಭವಲ್ಲ.
ಆ ಮೈತ್ರಿಕೂಟವನ್ನು ನಾವು ಪರಿಣಾಮಕಾರಿಯಾಗಿ ಎದುರಿಸಬೇಕು, ಲೋಕಸಭಾ ಚುನಾವಣೆಯಲ್ಲಿ ಅದನ್ನು ಹಣಿಯಬೇಕು ಎಂದರೆ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಮಾದರಿಯ ಹೋರಾಟಕ್ಕೆ ನಾವು ಅಣಿಯಾಗಬೇಕು ಎಂಬುದು ರಾಜ್ಯ ಕಾಂಗ್ರೆಸ್‌ನ ಬಹುತೇಕ ಶಾಸಕರ ಅಭಿಪ್ರಾಯ. ಉದಾಹರಣೆಗೆ, ಬಿಜೆಪಿ ಮೈತ್ರಿಕೂಟ ಈಗ ಶ್ರೀರಾಮ ಎಂದರೆ ಅದಕ್ಕೆ ಪರ್ಯಾಯವಾಗಿ ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯಕ್ಕೆ ಮಾಡಿದ ಅನ್ಯಾಯಗಳ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪಕ್ಷದ ಎಲ್ಲ ಶಾಸಕರೊಂದಿಗೆ ಬೀದಿಗೆ ಇಳಿಯಬೇಕು. ಅಂದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂಬುದನ್ನು ಇಡೀ ದೇಶಕ್ಕೆ ಎತ್ತಿ ತೋರಿಸಬೇಕು. ಹಾಗೆ ಮಾಡಬೇಕು ಎಂದರೆ ಹೊಸದಿಲ್ಲಿಗೆ ಹೋಗಿ ಸಂಸತ್ ಭವನದ ಮುಂದೆ ಪ್ರತಿಭಟನೆ ಮಾಡಲು ಹಿಂಜರಿಯಬಾರದು.
ಮಮತಾ ಬ್ಯಾನರ್ಜಿ ಇವತ್ತು ಬಿಜೆಪಿಯನ್ನು ಎದುರಿಸುತ್ತಿರುವುದು ಹೀಗೇ ತಾನೇ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳಕ್ಕೆ ಅನ್ಯಾಯ ಮಾಡಿದೆ ಅಂತ ದೇಶಕ್ಕೆ ತಿಳಿಸಲು ಅವರು ಬೀದಿಗಿಳಿಯಲು ಹಿಂಜರಿಯುವುದಿಲ್ಲ. ಅವರ ಇಂತಹ ಹೋರಾಟ ಸಹಜವಾಗಿಯೇ ಪಶ್ಚಿಮ ಬಂಗಾಳದ ಜನರ ಮನಸ್ಸನ್ನು ಸೂರೆಗೊಂಡಿದೆ. ಇನ್ನು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರುವ ನೆರವಿನ ಪ್ರಮಾಣ ಕಡಿಮೆಯಾಗಿದೆ. ಅದೇರೀತಿರಾಜ್ಯದಲ್ಲಿ ಅನುಷ್ಠಾನಗೊಳ್ಳಬೇಕಾದ ಕೇಂದ್ರದ ಪಾಲುದಾರಿಕೆಯ ಹಲವು ಯೋಜನೆಗಳಿಗೆ ನಿರೀಕ್ಷಿತ ಪ್ರಮಾಣದ ಹಣ ನೀಡದೆ ಸತಾಯಿಸಲಾಗುತ್ತಿದೆ.
ಹೀಗೆ ಹೇಳುತ್ತಾ ಹೋದರೆ ಕರ್ನಾಟಕಕ್ಕೆ ಕೇಂದ್ರದಿಂದ ಆಗಿರುವ ಅನ್ಯಾಯವನ್ನು ಎತ್ತಿ ತೋರಿಸಲು ಹತ್ತಾರು ಅಸ್ತ್ರಗಳಿವೆ. ಈ ಅಸ್ತ್ರಗಳನ್ನು ಬೀದಿಗಿಳಿದು ಬಳಸಿದರೆ ಬಿಜೆಪಿ-ಜಾ.ದಳ ಮೈತ್ರಿಕೂಟ ಪ್ರಯೋಗಿಸುತ್ತಿರುವ ಶ್ರೀರಾಮನ ಅಸ್ತ್ರಕ್ಕೆ ಪ್ರತಿಯುತ್ತರ ಹೇಳಲು ಸಾಧ್ಯ. ಇಲ್ಲದಿದ್ದರೆ ಲೋಕಸಭಾ ಚುನಾವಣೆಯಲ್ಲಿ ದೊಡ್ಡ ಮಟ್ಟದ ಸೋಲು ನಿಶ್ಚಿತ ಎಂಬುದು ಕಾಂಗ್ರೆಸ್‌ನ ಪ್ರಮುಖ ಶಾಸಕರ ಮಾತು.
ಪಕ್ಷದ ಶಾಸಕರ ಇಂತಹ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ನಾಯಕರು ಇದೀಗ ಹೊಸದಿಲ್ಲಿಯಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಸಂಪುಟದ ಸಚಿವರ ಜತೆ ರಾಜ್ಯ ಕಾಂಗ್ರೆಸ್‌ನ ಎಲ್ಲ ಶಾಸಕರೂ ಭಾಗವಹಿಸಲಿರುವುದು ವಿಶೇಷ, ಮಮತಾ ಬ್ಯಾನರ್ಜಿ ಮಾದರಿಯ ಹೋರಾಟ ಅದಕ್ಕೆ ಅಪ್ಯಾಯಮಾನವಾಗಿದೆ ಎಂಬುದಕ್ಕೆ ಇದು ಸಾಕ್ಷಿ.
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…