‘ಅಥಿ ಐ ಲವ್ ಯು’ ಇವತ್ತು ತೆರೆಗೆ ಬರುತ್ತಿರುವ ಚಿತ್ರಗಳಲ್ಲಿ ಒಂದು. ಈ ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡ ಹೊಸದೊಂದು ಯೋಜನೆಯನ್ನು ಪ್ರಕಟಿಸಿದೆ. ಮೊಬೈಲ್ ಯುಗ ದಂಪತಿಯ ಅನ್ಯೋನ್ಯತೆಯ ನಡುವೆ ತಡೆಯಾಗಿದೆ; ಹೊಸ ತಂತ್ರಜ್ಞಾನ ಮನುಷ್ಯ ಸಹಜ ಪ್ರೀತಿ ಪ್ರೇಮ ಪ್ರಣಯಗಳನ್ನು ಯಾಂತ್ರಿಕಗೊಳಿಸಿದೆ; ಬಾಂಧವ್ಯ ಬೆಸುಗೆ ಹಾಕಲಾರದಷ್ಟು ಸವೆದುಹೋಗಿದೆ… ಇವೇ ಮೊದಲಾದ ವಿಷಯಗಳನ್ನು ಸೂಕ್ಷ ವಾಗಿ ಹೇಳಿದೆ ಎನ್ನಲಾಗಿರುವ ಈ ಚಿತ್ರವನ್ನು ನೋಡಲು ಬರುವ ದಂಪತಿಗೆ ಟಿಕೆಟ್ ಜೊತೆ ಕೂಪನ್ ಒಂದನ್ನು ನೀಡಲಾಗುತ್ತಿದ್ದು, ಲಕ್ಕಿ ಡ್ರಾದಲ್ಲಿ ವಿಜೇತರಾದ ಏಳು ಜೋಡಿಗಳಿಗೆ ಗೋವಾ ಪ್ರವಾಸವನ್ನು ನಿರ್ಮಾಪಕರು ಏರ್ಪಡಿಸಲಿದ್ದಾರೆ.
ಕನ್ನಡದಲ್ಲಿ ಚಿತ್ರಗಳ ನಿರ್ಮಾಣವೇನೋ ಸುಲಭವಾಗಿ ಮಾಡಬಹುದು; ಆದರೆ ಅದರ ಪ್ರಚಾರ, ಜನರನ್ನು ತಲುಪುವುದು ಸುಲಭಸಾಧ್ಯವಲ್ಲ ಎನ್ನುವುದು ಬಹುತೇಕ ನಿರ್ಮಾಪಕರ ಅನುಭವ. ಡಿಜಿಟಲ್ ಕ್ರಾಂತಿಗೆ ಮೊದಲು, ಚಿತ್ರಗಳ ನಿರ್ಮಾಣ ಸಿದ್ಧತೆ ಮೊದಲ್ಗೊಂಡು, ಅದರ ಹಾಡುಗಳ ಧ್ವನಿಮುದ್ರಣ, ಮುಹೂರ್ತ, ಚಿತ್ರೀಕರಣ, ಆಡಿಯೋ ಬಿಡುಗಡೆ ಹೀಗೆ ಹಂತಹಂತವಾಗಿ ಚಿತ್ರವೊಂದು ತಯಾರಾಗುತ್ತಿರುವುದು ಪತ್ರಿಕೆಗಳ ಮೂಲಕ ತಿಳಿಯಬಹುದಾಗಿತ್ತು. ನಿರ್ಮಾಪಕರು ಪತ್ರಕರ್ತರನ್ನು ಚಿತ್ರೀಕರಣ ತಾಣಗಳಿಗೆ ಆಹ್ವಾನಿಸುವುದು ಸಾಮಾನ್ಯವಾಗಿತ್ತು.
ಸುದ್ದಿಯ ಮೂಲಕ ಮಾತ್ರವಲ್ಲ, ತಮ್ಮ ಚಿತ್ರಮಂದಿರಗಳಲ್ಲಿ ಬರಲಿರುವ ಚಿತ್ರಗಳ ಕುರಿತ ಸ್ಲೆ ಡ್‌ಗಳನ್ನು ಮಧ್ಯಂತರದ ನಂತರ ಪ್ರದರ್ಶಿಸುವ ಪದ್ಧತಿಯೂ ಇತ್ತು. ಬಿಡುಗಡೆಯ ವೇಳೆ ಪತ್ರಿಕೆಗಳಲ್ಲಿ ಜಾಹೀರಾತು, ಭಿತ್ತಿಪತ್ರಗಳ ಮೂಲಕ ಪ್ರಚಾರ, ಸೈಕಲ್, ಗಾಡಿಗಳಲ್ಲಿ ಪ್ರಚಾರ… ಹೀಗೆ ಸೆಲ್ಯುಲಾಯಿಡ್ ದಿನಗಳಲ್ಲಿ ಅದರದೇ ಆದ ಪ್ರಚಾರ ರೀತಿ ಇತ್ತು. ಸೆಲ್ಯುಲಾಯಿಡಿನಿಂದ ಡಿಜಿಟಲ್‌ಗೆ ಸಿನಿಮಾ ಹೊರಳಿದ ನಂತರ, ದೂರದರ್ಶನ, ವಾಹಿನಿಗಳು ನಡುಮನೆಗೆ ಬಂದ ಮೇಲೆ, ಸಾಮಾಜಿಕ ತಾಣಗಳು ಮನರಂಜನೋದ್ಯಮದ ಮೇಲೆ ಅವುಗಳದೇ ಆದ ಪರಿಣಾಮ ಬೀರಿದವು.
ಕೊರೊನಾ ನಂತರವಂತೂ ಚಿತ್ರಮಂದಿರಗಳತ್ತ ಜನರ ನಡಿಗೆ ಇಳಿಮುಖವಾಗಿದೆ. ಅದಕ್ಕೆ ಈ ಮೊದಲೇ ಹೇಳಿದಂತೆ, ಒಟಿಟಿ ತಾಣಗಳು, ಮತ್ತು ಚಿತ್ರಗಳ ಗುಣಮಟ್ಟಗಳೂ ಕಾರಣ ಎಂದರೆ ತಪ್ಪಲ್ಲ. ಸಾಧಾರಣ ವೆಚ್ಚದಲ್ಲಿ ನಿರ್ಮಾಣವಾದ ಚಿತ್ರಗಳಿಗೆ ಈ ದಿನಗಳಲ್ಲಿ ಪ್ರಚಾರ ವೆಚ್ಚ ಭರಿಸುವುದು ಕಷ್ಟ ಎನ್ನುವುದು ಬಹುತೇಕರ ಅಭಿಪ್ರಾಯ. ಚಿತ್ರ ನಿರ್ಮಾಣ ವೆಚ್ಚಕ್ಕಿಂತಲೂ ಹೆಚ್ಚು ಪ್ರಚಾರಕ್ಕೆ ವ್ಯಯಿಸಬೇಕಾದ ಸ್ಥಿತಿ ಬಂದಿದೆ, ನಮಗೆ ಅಷ್ಟು ಶಕ್ತಿ ಇಲ್ಲ ಎಂದುಕೊಳ್ಳುವವರೇ ಹೆಚ್ಚು.
ಕಳೆದ ಶುಕ್ರವಾರದ ವೇಳೆಗೆ 210 ಹೊಸ ಕನ್ನಡ ಚಿತ್ರಗಳು ತೆರೆಗೆ ಬಂದಿವೆ. ಅವುಗಳಲ್ಲಿ ಹೆಚ್ಚಿನ ಚಿತ್ರಗಳು ಸಿದ್ಧವಾದ ಸುದ್ದಿಯೂ ಇಲ್ಲ, ತೆರೆಕಂಡು ಮರೆಗೆ ಸರಿದದ್ದೂ ತಿಳಿಯಲಿಲ್ಲ.
ಈ ಸಂಕ್ರಾಂತಿಯ ವೇಳೆಗೆ ತೆರೆಕಂಡ ‘ವಿರಾಟಪುರ ವಿರಾಗಿ’ ಚಿತ್ರದ ಪ್ರಚಾರಕ್ಕಾಗಿ ಚಿತ್ರದ ನಿರ್ಮಾಪಕರು ರಾಜ್ಯಾದ್ಯಂತ ರಥಯಾತ್ರೆಯೊಂದನ್ನು ಹಮ್ಮಿಕೊಂಡರು. ‘ವಿರಾಗಿ ಶ್ರೀ ಕುಮಾರೇಶ್ವರ ರಥಯಾತ್ರೆ’ ಎಂದು ಹೆಸರಿಸಿದ ಆ ಯಾತ್ರೆ ಆರು ಮಾರ್ಗಗಳಲ್ಲಿ ಸುಮಾರು ಮುನ್ನೂರು ಊರುಗಳಲ್ಲಿ ಸಂಚರಿಸಿ ಗದಗದಲ್ಲಿ ಸಂಪನ್ನವಾಯಿತು. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜೀವನಯಾನದ ಕುರಿತಂತೆ ಹೇಳಿದ ಆ ಚಿತ್ರದ ಪ್ರಚಾರಯಾತ್ರೆಗೆ ಸಾಕಷ್ಟು ಸಕಾರಾತ್ಮಕ ಪ್ರತಿಕ್ರಿಯೆ ಇತ್ತು, ಮಾತ್ರವಲ್ಲ, ಮುಂಗಡ ಟಿಕೆಟ್ ಖರೀದಿಗೂ ಅಲ್ಲಿ ಅವಕಾಶ ಇತ್ತು. ದಾಖಲೆಯ ಗಳಿಕೆಯನ್ನು ಮಾಡಲು ಈ ಯಾತ್ರೆ ಸಹಕರಿಸಿತು. ಚಲನಚಿತ್ರಗಳ ಪ್ರಚಾರಕ್ಕೆ ಪರ್ಯಾಯ ಮಾರ್ಗವನ್ನು ತೋರಿಸಿದ ಕೆಲಸವನ್ನು ಈ ಚಿತ್ರ ಮಾಡಿತು. ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಬಿ.ಎಸ್.ಲಿಂಗದೇವರು ಈ ಚಿತ್ರವನ್ನು ನಿರ್ದೇಶಿಸಿದ್ದರು, ಮಾತ್ರವಲ್ಲ, ರಥಯಾತ್ರೆಯ ಯೋಜನೆಯನ್ನು ಹಾಕಿ ಅದರಲ್ಲಿ ಸಫಲರೂ ಆದರು.
ಚಿತ್ರ ಬಿಡುಗಡೆಗೆ ಮೊದಲು ಅದರ ಪ್ರೀಮಿಯರ್ ಪ್ರದರ್ಶನದ ವಾಡಿಕೆ ಇದೆ. ಚಿತ್ರೋದ್ಯಮದ ಗಣ್ಯರು, ಕಲಾವಿದರು, ತಂತ್ರಜ್ಞರು, ಆತ್ಮೀಯರಿಗಾಗಿ ಈ ಪ್ರದರ್ಶನ. ಹಿಂದೆ ಕನ್ನಡ ಚಿತ್ರರಂಗ ಮದರಾಸಿನಲ್ಲಿ ನೆಲೆ ಇದ್ದು, ಅಲ್ಲೇ ಸೆನ್ಸಾರ್ ಆಗುತ್ತಿದ್ದ ದಿನಗಳಲ್ಲಿ ಪ್ರೀಮಿಯರ್ ಪ್ರದರ್ಶನವೂ ಅಲ್ಲೇ ಆಗುತ್ತಿತ್ತು.
ಈಗ ಸಾಂಪ್ರದಾಯಿಕ ಪ್ರೀಮಿಯರ್ ಜೊತೆಗೆ ಶುಲ್ಕಸಹಿತ ಪ್ರೀಮಿಯರ್‌ಗಳನ್ನೂ ಏರ್ಪಡಿಸಲಾಗುತ್ತಿದೆ. ಒಂದೆರಡು ಚಿತ್ರಗಳು ಬೆಂಗಳೂರು ಮಾತ್ರವಲ್ಲದೆ, ಇತರ ನಗರಗಳಲ್ಲಿ ಈ ಪ್ರದರ್ಶನ ಏರ್ಪಡಿಸಿದ ಉದಾಹರಣೆಗಳೂ ಇವೆ. ಬೆಂಗಳೂರಿನಲ್ಲಿ ೩೦ರಿಂದ ೪೦ ಪರದೆಗಳಲ್ಲಿ ಇಂತಹ ಪ್ರೀಮಿಯರ್‌ಗಳನ್ನು ಏರ್ಪಡಿಸುವುದರ ಮೂಲಕ ಗಳಿಕೆ, ಪ್ರಚಾರ ಎರಡನ್ನೂ ಮಾಡಿದ ಚಿತ್ರಗಳಿವೆ.
ಇಂತಹದೊಂದು ವ್ಯವಸ್ಥೆ ಚಿತ್ರಗಳನ್ನು ನೋಡಲು ಮುಂದಿನ ದಿನಗಳಲ್ಲಿ ಪ್ರೇಕ್ಷಕರನ್ನು ಕರೆತರಲು ನೆರವಾಗುವುದಾದರೆ, ಅದು ಒಳ್ಳೆಯ ಬೆಳವಣಿಗೆ. ಆದರೆ ಎಲ್ಲ ಸಂದರ್ಭದಲ್ಲೂ ಹಾಗಿಲ್ಲ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಅದ್ಧೂರಿ ವೆಚ್ಚದ ಚಿತ್ರಗಳ ನಿರ್ಮಾಪಕರಲ್ಲಿ ಕೆಲವರು, ತಮ್ಮ ಚಿತ್ರ ಬಿಡುಗಡೆಯ ಮೊದಲ ಕೆಲವು ಪ್ರದರ್ಶನಗಳಿಗೆ ತಾವೇ ಪ್ರೇಕ್ಷಕರನ್ನು ಕರೆತರುವ ವ್ಯವಸ್ಥೆ ಮಾಡುತ್ತಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಹೀಗೆ ಪ್ರೇಕ್ಷಕರನ್ನು ಕರೆತರುವ ಮಧ್ಯವರ್ತಿಗಳು ಇದ್ದಾರಂತೆ. ರಾಜಕಾರಣಿಗಳ ಸಮಾವೇಶ, ಸಮಾರಂಭಗಳಿಗೆ ಸಭಿಕರನ್ನು ಕರೆತರುವ ಹಾಗೆ ಎನ್ನಿ. ಸಮಾವೇಶಗಳಲ್ಲಿ ಬಿಸಿಲಲ್ಲಿ ಕುಳಿತಿರಬೇಕು, ಇಲ್ಲಾದರೆ, ಹವಾನಿಯಂತ್ರಿತ ಚಿತ್ರಮಂದಿರಗಳು, ಉಚಿತ ಮನರಂಜನೆ, ಜೊತೆಗೆ ತಿನಿಸು, ಇನ್ನೂ ಶ್ರೀಮಂತ ನಿರ್ಮಾಪಕರಾದರೆ, ದಕ್ಷಿಣೆ ಬೇರೆ! ಇಂತಹ ಬೆಳವಣಿಗೆಯ ಕುರಿತಂತೆ, ಗಾಂಽನಗರದ ಲೆಕ್ಕಾಚಾರವೇ ಬೇರೆ. ಪ್ರಚಾರಕ್ಕಾದರೆ ಕೋಟಿಗಟ್ಟಲೆ ಹಣ ವ್ಯಯಿಸಬೇಕು. ಇಲ್ಲಿ ನೀವು ಟಿಕೆಟ್‌ಗಾಗಿ ಕೊಟ್ಟ ಹಣದಲ್ಲಿ ಚಿತ್ರಮಂದಿರದ ಬಾಡಿಗೆ ಮತ್ತು ಜಿಎಸ್‌ಟಿಯನ್ನು ಕಳೆದು ಉಳಿದ ಮೊತ್ತ ನಿರ್ಮಾಪಕರಿಗೆ ವಾಪಸು ಬರುತ್ತದೆ. ಹಾಗಾಗಿ ಇದು ತೀರಾ ನಷ್ಟದ ಬಾಬತ್ತಲ್ಲ ಎನ್ನುವುದು ಅವರ ಅಂಬೋಣ.
ಮೇಲ್ನೋಟಕ್ಕೆ ಇದು ಹೌದು ಅನಿಸಬಹುದಾದರೂ, ಇದರ ಇನ್ನೊಂದು ಮುಖವನ್ನೂ ಕೆಲವರು ತೋರಿಸುತ್ತಾರೆ. ಇದು ಕಪ್ಪುಹಣವನ್ನು ಬಿಳಿಮಾಡಲು ಬಳಸಬಹುದಾದ ಒಳ್ಳೆಯ ದಾರಿ ಎನ್ನುವುದು ಅವರ ಅಭಿಪ್ರಾಯ. ಕನ್ನಡ ಮಾತ್ರವಲ್ಲ, ದೇಶದ ಎಲ್ಲ ಭಾಷೆಗಳ ಚಿತ್ರೋದ್ಯಮಗಳಲ್ಲಿಯೂ ಇಂತಹದೊಂದು ಬೆಳವಣಿಗೆ ಆದದ್ದೇ ಆದರೆ ಅದರಿಂದ ಏಟು ಬೀಳುವುದು ಸಾಧಾರಣ ವೆಚ್ಚದಲ್ಲಿ ತಯಾರಾಗುವ ಸಮಾಜಮುಖಿ, ಜೀವನ್ಮುಖಿ ಚಿತ್ರಗಳಿಗೆ. ಅತ್ತ ಪ್ರಚಾರಕ್ಕೆ ಬೇಕಾಗುವಷ್ಟು ಹಣವೂ ಇಲ್ಲದ, ಚಿತ್ರಮಂದಿರ ತುಂಬಿಸಲು ಪ್ರೇಕ್ಷಕರಿಗೆ ತಾವೇ ಟಿಕೆಟ್ ಹರಿದು ಕೊಡಲು ಶಕ್ತರಲ್ಲದ, ನಿರ್ಮಾಪಕರಿಗೆ ಇದರಿಂದ ಅನ್ಯಾಯವಂತೂ ಆಗುತ್ತದೆ.
ಪ್ರಚಾರದ ವೆಚ್ಚಗಳಲ್ಲಿ, ವಾಹಿನಿಗಳಲ್ಲಿ ಪ್ರಚಾರ, ಜಾಲತಾಣಗಳಲ್ಲಿ ಪ್ರಚಾರ, ಇತರ ಸಾಮಾಜಿಕ ತಾಣಗಳಲ್ಲಿ ಪ್ರಚಾರ, ಜನಪ್ರಿಯ ಪ್ರಭಾವಿಗಳ ವೈಯಕ್ತಿಕ ತಾಣಗಳಲ್ಲಿ ಪ್ರಚಾರ, ಯುಟ್ಯೂಬ್ ವಾಹಿನಿಗಳಲ್ಲಿ ಪ್ರಚಾರ, ಹೀಗೆ ಪ್ರಚಾರಕ್ಕಾಗಿ ಕೋಟಿಗಟ್ಟಲೆ ಹಣ ಬೇಕಾಗುತ್ತದೆ. ಬಹಳಷ್ಟು ಮಂದಿಗೆ ಹೊಸ ಮಾಧ್ಯಮಗಳಲ್ಲಿ ಪ್ರಚಾರದಿಂದ ಸಿಗುವ ಪ್ರಯೋಜನದ ಕುರಿತು ಸರಿಯಾದ ಮಾಹಿತಿ ಇಲ್ಲ. ಅದೇನಿದ್ದರೂ ಅಂಧರು ಆನೆಯನ್ನು ಕಂಡು ಅದರ ಆಕಾರವನ್ನು ಹೇಳಿದಂತೆಯೇ ಸರಿ. ತಮ್ಮ ವಾಹಿನಿಗಳ ಚಂದಾದಾರರ ಸಂಖ್ಯೆ ಲಕ್ಷಗಟ್ಟಲೆ ಇದೆ ಎಂದು ಹೇಳುವ ಜಾಲತಾಣಗಳ ಮಂದಿ ಯಾವುದಾದರೂ ಚಿತ್ರದ ಟ್ರೈಲರನ್ನೋ, ಟೀಸರನ್ನೋ ಸಂದರ್ಶನವನ್ನೋ ಎಷ್ಟು ಮಂದಿ ನೋಡುತ್ತಾರೆ ಎನ್ನುವುದನ್ನು ಹೇಳುವುದು ಕಷ್ಟ. ಅದು ಕೆಲವೊಮ್ಮೆ ಮೂರಂಕೆ, ನಾಲ್ಕಂಕೆ ಬಿಡಿ ಎರಡಂಕೆ ದಾಟುವುದೂ ಇಲ್ಲ ಎನ್ನುತ್ತಾರೆ, ತಮ್ಮ ಚಿತ್ರದ ಪ್ರಚಾರಕ್ಕಾಗಿ ಅಂತಹವುಗಳ ಮೊರೆ ಹೋದ ಮಂದಿಯಲ್ಲಿ ಕೆಲವರು.
ಯಾವುದೇ ಚಿತ್ರದ ಸುದ್ದಿಗಳನ್ನೋ, ಇತರ ವಿವರಗಳನ್ನೋ ಈಗ ಪ್ರಚಾರಕರ್ತರ ಮೂಲಕವಷ್ಟೇ ಮಾಧ್ಯಮಗಳಿಗೆ ಕಳುಹಿಸುವ ನಿರ್ಮಾಪ ಕರು, ಸಂಬಂಧಪಟ್ಟ ಚಿತ್ರದ ಸ್ಥಿರಚಿತ್ರಗಳನ್ನು ನೀಡಲೂ ಆರರು. ಚಿತ್ರದ ಮುಖ್ಯ ಪಾತ್ರಧಾರಿ ನಟನದೋ, ನಟಿಯದೋ ಭಾವಚಿತ್ರವನ್ನು ಕಳುಹಿಸಿ ಕೊಟ್ಟು ಕೈತೊಳೆದುಕೊಳ್ಳುತ್ತಾರೆ. ಚಿತ್ರೀಕರಣ ತಾಣಗಳಿಗೆ ಮಾಧ್ಯಮದ ಮಂದಿ ಹೋಗುವುದು ಇತ್ತೀಚಿನ ದಿನಗಳಲ್ಲಿ ಅಪರೂಪ. ಮುಹೂರ್ತಗಳಿಗೆ ಸುದ್ದಿವಾಹಿನಿಗಳನ್ನು ಮಾತ್ರ ಕರೆಸಿ ಸುದ್ದಿಮಾಡಿಕೊಳ್ಳುವ ಮಂದಿಯೂ ಇದ್ದಾರೆ. ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಸಾಮಾಜಿಕ, ಚಿತ್ರಮಂದಿರ ತುಂಬಿ ಸುವ ಸಂಪರ್ಕ, ಇಲ್ಲವೇ ಅವುಗಳ ಮಧ್ಯವರ್ತಿಗಳನ್ನು ಬಲ್ಲ ಜಾಲತಾಣಗಳ ಮಂದಿಗೆ ಹೆಚ್ಚು ಬೇಡಿಕೆ ಎನ್ನುತ್ತಿವೆ ಗಾಂಧಿನಗರದ ಮೂಲಗಳು.
ಒಟ್ಟಿನಲ್ಲಿ ಚಿತ್ರವೊಂದರ ನಿರ್ಮಾಣದ ಸವಾಲಿಗಿಂತಲೂ, ಅದರ ಬಿಡುಗಡೆ ಪೂರ್ವ ಪ್ರಚಾರದ ಸವಾಲೇ ದೊಡ್ಡದು. ಈ ನಡುವೆ, ರಾಷ್ಟ್ರೀಯ ವಾಹಿನಿಗಳಲ್ಲಿ ಸದಾ ಸುದ್ದಿಯಲ್ಲಿರುವ ನಟನಟಿಯರ ಚಿತ್ರಗಳು ತೆರೆಗೆ ಬರುವ ವೇಳೆ ಅವುಗಳ ಕುರಿತಂತೆ ಎಲ್ಲಿಲ್ಲದ ಉತ್ಸಾಹ ಇಲ್ಲಿನದು. ಈಗ ಡಬ್ಬಿಂಗ್ ಬಂದ ಮೇಲಂತೂ ಇನ್ನೂ ಹೆಚ್ಚು. ಕನ್ನಡ ಚಿತ್ರಗಳು ಎನ್ನುವ ಹೆಸರಿನಲ್ಲಿ ಇವರ ಚಿತ್ರಗಳ ಡಬ್ಬಿಂಗ್ ಅವತರಣಿಕೆಯನ್ನು ಕೊಳ್ಳಲು, ಪ್ರಚಾರ ಮಾಡಲು ತುದಿಗಾಲಲ್ಲಿ ಸಾಕಷ್ಟು ಮಂದಿ ನಿಂತಿರುತ್ತಾರೆ. ಇವುಗಳ ಮಧ್ಯೆ ಕನ್ನಡದ ಸದಭಿರುಚಿಯ ಮೂಲ ಚಿತ್ರಗಳು ನೆಲೆನಿಲ್ಲಲು, ಜನರ ಬಳಿ ತಲುಪಲು ದಾರಿ ಹುಡುಕಬೇಕಾಗಿದೆ.
ಮೈಸೂರು : ಡಿಸೆಂಬರ್ 21 ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 5 ವರ್ಷದೊಳಗಿನ ಪ್ರತಿ ಮಗುವಿಗೆ…
ಬೆಳಗಾವಿ : ರಾಜ್ಯದ ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ…
ನವದೆಹಲಿ: ಮನೆಗೆಲಸದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೀವಾವಧಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ…
ಬೆಳಗಾವಿ: ರಾಜ್ಯದಲ್ಲಿ 1517 ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ…
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾಕು ಅಮಾನವೀಯ ಘಟನೆ ನಡೆದಿದ್ದು, ಸಾಕು ಪ್ರಾಣಿಗಳನ್ನು ಚಿತ್ರಹಿಂಸೆ ನೀಡಿ ಕೊಂದು ವಿಕೃತಿ ಮೆರೆದಿರುವ…
ಬೆಳಗಾವಿ: ರಾಜ್ಯದ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ. ಹೈಕಮಾಂಡ್ ಕ್ಲಿಯರ್ ಆಗಿ ಹೇಳಿದೆ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ…