ಅಂಕಣಗಳು

ಸಮಗ್ರ ಸಾಮಾಜಿಕ ಕ್ರಾಂತಿಯ ಕಲ್ಪನೆಗೆ ಭಾವನಾತ್ಮ ರಾಜಕಾರಣದ ಸವಾಲು

ಆರ್.ಟಿ.ವಿಠಲಮೂರ್ತಿ

ಇದು 1978ರಲ್ಲಿ ನಡೆದ ಘಟನೆ. ಆ ಸಂದರ್ಭದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿತ್ತು. ಸಹಜವಾಗಿಯೇ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಹೀಗೆ ನಡೆದ ಪ್ರಚಾರ ಕಾರ್ಯದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ರಾಜ್ಯ ಸುತ್ತಾಡುತ್ತಿದ್ದ ಮುಖ್ಯಮಂತ್ರಿ ದೇವರಾಜ ಅರಸರನ್ನು ಆಪ್ತರೊಬ್ಬರು ಕೇಳಿದರಂತೆ:

‘ಸಾರ್, ನೀವು ಪ್ರಚಾರ ಕಾರ್ಯಕ್ಕೆ ಅಂತ ಸುತ್ತಾಡುತ್ತಿದ್ದೀರಿ. ಆದರೆ ನಿಮ್ಮ ಸಭೆಗಳಲ್ಲಿ ಹೆಚ್ಚು ಜನರೇ ಇರುವುದಿಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಯಾಗುವ ಸೂಚನೆಯಲ್ಲವೇ?” ಎಂಬುದು ಅವರ ಪ್ರಶ್ನೆ.

ತಮಗೆ ಎದುರಾದ ಈ ಪ್ರಶ್ನೆಗೆ ಉತ್ತರಿಸಿದ ದೇವರಾಜ ಅರಸರು: ‘ಖಂಡಿತ ಇಲ್ಲ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತ ದಿಂದ ಅಧಿಕಾರಕ್ಕೆ ಬರುತ್ತದೆ. ಇದರಲ್ಲಿ ಯಾವ ಅನುಮಾನವೂ ಬೇಡ’ ಎಂದರು. ಆದರೆ ಪಟ್ಟು ಬಿಡದ ಆ ಆಪ್ತರು: ನಿಮ್ಮ ಸಭೆಗಳಲ್ಲಿ ಹೆಚ್ಚು ಜನರೇ ಇರುವು ದಿಲ್ಲ. ಅಂದ ಮೇಲೆ ನಿಮ್ಮ ಮತದಾರರು ಎಲ್ಲಿದ್ದಾರೆ?’ ಎಂದು ಕೇಳಿದರೆ ದೇವರಾಜ ಅರಸರು ಮುಗುಳಕ್ಕು: ಇದ್ದಾರೆ, ಎಲ್ಲ ಕಡೆ ನಮ್ಮ ಮತದಾರರು ಇದ್ದಾರೆ. ಆದರೆ ಅವರು ಅದೃಶ್ಯರಾಗಿದ್ದಾರೆ. ಚುನಾವಣೆ ನಡೆಯಲಿ, ಮತಪೆಟ್ಟಿಗೆಯ ಮೂಲಕ ಅವರು ಪ್ರತ್ಯಕ್ಷರಾಗುತ್ತಾರೆ’ ಎಂದರು.

ಅವರ ಮಾತು ಕೇಳಿದ ಆ ಆಪ್ತರಿಗೆ ವಿಸ್ಮಯವಾಯಿತು. ಆದರೆ ಚುನಾವಣೆ ನಡೆದು ಫಲಿತಾಂಶ ಬಂದಾಗ ದೇವರಾಜ ಅರಸು ನೇತೃತ್ವದ ಕಾಂಗ್ರೆಸ್ ಪಕ್ಷ 149 ಕ್ಷೇತ್ರಗಳಲ್ಲಿ ಗೆಲುವು ಗಳಿಸಿ ಅಧಿಕಾರದ ಗದ್ದುಗೆಗೇರಿತ್ತು.

ಹೀಗೆ ಕರ್ನಾಟಕದ ದೇವರಾಜ ಅರಸರಂತೆ ಅದೃಶ್ಯ ಮತದಾರರನ್ನು ಸೃಷ್ಟಿಸಲು ಬೇರೊಬ್ಬರಿಗೆ ಸಾಧ್ಯವಾಗಿಲ್ಲ ಎಂಬುದು ಹೇಗೆ ಅರಸರ ಹೆಗ್ಗಳಿಕೆಯೋ ಹಾಗೆಯೇ ರಾಜಕಾರಣದ ದುರಂತವೂ ಹೌದು. ಅಂದ ಹಾಗೆ ಈ ರೀತಿ ತಮಗೆ ಅದೃಶ್ಯ ಮತದಾರರಿದ್ದಾರೆ ಅಂತ ಅರಸರಿಗೆ ಗೊತ್ತಿರಲು ಕಾರಣವೂ ಇತ್ತು.

ಅದೆಂದರೆ 1972ರಲ್ಲಿ ಮೊದಲ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸರು, ಆ ಅವಧಿಯಲ್ಲಿ ಉಳುವವನೇ ಹೊಲದೊಡೆಯ ಎಂಬುದೂ ಸೇರಿದಂತೆ ಅನೇಕ ಕ್ರಾಂತಿಕಾರಿ ಯೋಜನೆಗಳನ್ನು ರೂಪಿಸಿದರು ಮತ್ತು ಇಂತಹ ಯೋಜನೆಗಳು ವ್ಯವಸ್ಥೆಯ ತಳ ತಲುಪಿದ್ದವರು ಸಮಾಜದ ಮುಖ್ಯವಾಹಿನಿಗೆ ಬರಲು ಶಕ್ತಿ ನೀಡಿತ್ತು. ಇದೇ ಕಾರಣಕ್ಕಾಗಿ ಅವರ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಅದೃಶ್ಯ ಮತದಾರರು ಸೃಷ್ಟಿಯಾಗಿದ್ದರು.

ಆದರೆ ದೇವರಾಜ ಅರಸರು ಅಧಿಕಾರದಿಂದ ಕೆಳಗಿಳಿದ ನಂತರ ಇಂತಹ ಅದೃಶ್ಯ ಮತದಾರರು ಹೆಚ್ಚು ಕಡಿಮೆ ನಾಪತ್ತೆಯಾಗಿ ಹೋಗಿದ್ದಾರೆ. ಕಾರಣ ರಾಜಕೀಯ ಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಿರುವ ಮತದಾರರನ್ನು ಈಗ ಸಾಮಾಜಿಕ ಕ್ರಾಂತಿಯ ಮೂಲಕ ತಲುಪುವುದು ಕಷ್ಟ. ಬದಲಿಗೆ ಭಾವನಾತ್ಮಕ ವಿಷಯಗಳ ಮೇಲೆ ತಲುಪುವುದು ಸುಲಭ.

ಅಂದ ಹಾಗೆ ರಾಜಕಾರಣಕ್ಕೆ ಸಾಮಾಜಿಕ ಕ್ರಾಂತಿಯ ಆಯಾಮವನ್ನು ಕೊಟ್ಟ ಅರಸರ ನಂತರ ಹಲವರು ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ಕಾಲ ಕ್ರಮೇಣ ಪರಿಸ್ಥಿತಿ ಹೇಗಾಗಿದೆ ಎಂದರೆ ವ್ಯವಸ್ಥೆಯಲ್ಲಿರುವ ಅಶಕ್ತರಿಗೆ ಬಲ ನೀಡಿ ದಕ್ಕಿಸಿಕೊಳ್ಳುವ ಶಕ್ತಿ ಸರ್ಕಾರಗಳಿಗೆ ಕಡಿಮೆಯಾಗುತ್ತಾ ಬಂದಿದೆ. ಹೀಗಾಗಿ ಅರಸರ ಸಾಮಾಜಿಕ ಕ್ರಾಂತಿಯ ರಾಜಕಾರಣ ಕಾಲ ಕ್ರಮೇಣ ಮೌಲ್ಯಾಧಾರಿತ ರಾಜಕಾರಣದ ಸ್ವರೂಪ ಪಡೆದು, ಅಭಿವೃದ್ಧಿಯ ರೂಪ ಪಡೆದು ಈಗ ಭಾವನಾತ್ಮಕ ನೆಲೆಯ ಮೇಲೆ ಪ್ರತಿಷ್ಠಾಪಿತವಾಗಿಬಿಟ್ಟಿದೆ. ಹೀಗಾಗಿ ರಾಜಕೀಯ ಪಕ್ಷಗಳು ಕೂಡ ಸಂದರ್ಭಕ್ಕೆ ತಕ್ಕಂತೆ ಯಾವ ಜಾತಿಗಳನ್ನು ಹೇಗೆ ಒಲಿಸಿಕೊಳ್ಳಬಹುದು ಎಂಬ ಅಂಶದ ಮೇಲೆ ಹೆಚ್ಚು ಗಮನ ನೀಡುತ್ತಿವೆಯೇ ಹೊರತು ಅರಸರಂತೆ ಸಮಗ್ರ ಸಾಮಾಜಿಕ ಕ್ರಾಂತಿಯ ಮನಃಸ್ಥಿತಿಯನ್ನು ಅವಲಂಬಿಸಿಲ್ಲ.

ಈ ಮನಃಸ್ಥಿತಿಯ ವಿಶೇಷವೇನೆಂದರೆ ಅಧಿಕಾರಕ್ಕೆ ಯಾವ ರಾಜಕೀಯ ಪಕ್ಷವೇ ಬರಲಿ, ಅವು ವ್ಯವಸ್ಥೆಯ ಎಲ್ಲ ಜಾತಿಗಳ ಪರವಾಗಿವೆ ಎಂಬ ಭಾವನೆ ಬರುತ್ತದೆ. ಇಂತಹ ಭಾವನೆ ಬಿಡಿಬಿಡಿಯಾಗಿ ನಿಜವಾದರೂ ಒಟ್ಟಾರೆಯಾಗಿ ನೋಡಿದಾಗ ಅವು ಸಮಾಜದ ದುರ್ಬಲರನ್ನು ಅಖಂಡವಾಗಿ ಮೇಲೆತ್ತುವ ಶಕ್ತಿ ಹೊಂದಿರುವುದಿಲ್ಲ. ಪರಿಣಾಮ ದೇವರಾಜ ಅರಸರು ಮುಖ್ಯಮಂತ್ರಿಯಾಗಿ ನಾಲ್ಕೂವರೆ ದಶಕಗಳು ಕಳೆಯುತ್ತಾ ಬಂದರೂ ಸರ್ಕಾರಗಳು ಆಯಾ ಜಾತಿಯ ಜನರನ್ನು ತೃಪ್ತಿಪಡಿಸಲು, ವರ್ಗಗಳನ್ನು ತೃಪ್ತಿಪಡಿಸಲು ಸರ್ಕಸ್ಸು ಮಾಡುತ್ತಲೇ ಇವೆ.

ಇದನ್ನು ಒಂದು ಉದಾಹರಣೆಯ ಮೂಲಕ ಮತ್ತಷ್ಟು ಸ್ಪಷ್ಟಪಡಿಸಿಕೊಳ್ಳಬಹುದು. ಅದೆಂದರೆ ದೇವರಾಜ ಅರಸರು ಜಾರಿಗೆ ತಂದ ಉಳುವವನೇ ಹೊಲದೊಡೆಯ ಎಂಬ ಯೋಜನೆಯ ಲಾಭ ಪಡೆದ ಶೋಷಿತ ಸಮುದಾಯಗಳ ಜನ ಸಮಾಜದ ಮುಖ್ಯವಾಹಿನಿಗೆ ಬಂದರಷ್ಟೇ ಅಲ್ಲ, ರಾಜಕೀಯ, ಸಾಮಾಜಿಕ ಪ್ರಜ್ಞೆಯನ್ನೂ ಎತ್ತರಿಸಿಕೊಂಡರು. ಅರ್ಥಾತ್, ವ್ಯವಸ್ಥೆಯ ಎಲ್ಲರೂ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಅರಸರ ಕನಸೇನಿತ್ತು ಅದಕ್ಕೆ ಅವರ ಯೋಜನೆಗಳು ಸಹಕಾರಿಯಾದವು. ಆದರೆ ತದ ನಂತರದ ದಿನಗಳಲ್ಲಿ ಜಾರಿಯಾದ ಹಲವು ಕಾರ್ಯಕ್ರಮಗಳು ಒಂದಷ್ಟು ಗಮನ ಸೆಳೆದಿವೆಯಾದರೂ, ಅವು ಅರಸರ ಯೋಜನೆಗಳಿಗಿದ್ದ ಸ್ಪಷ್ಟತೆಯನ್ನು ಹೊಂದಿಲ್ಲ. ಪರಿಣಾಮ ವ್ಯವಸ್ಥೆಯಲ್ಲಿ ದಿನ ಕಳೆದಂತೆ ಬಡವರು ಮತ್ತು ಶ್ರೀಮಂತರ ನಡುವಣ ಕಂದರ ಹೆಚ್ಚಾಗುತ್ತಲೇ ಹೋಗುತ್ತಿದೆ. ನಮ್ಮ ಸರ್ಕಾರಗಳು ಕೊಟ್ಟ ಕಾರ್ಯಕ್ರಮಗಳ ಮೂಲಕ ಗಣನೀಯ ಪ್ರಮಾಣದ ಜನ ಜಾಗತೀಕರಣದ ಕಾಲಘಟ್ಟದಲ್ಲಿ ಈಸುವ ಸಾಮರ್ಥ್ಯ ಪಡೆದಿದ್ದಾರಾದರೂ, ಅವರಿಗಿಂತ ಹಲವು ಪಟ್ಟು ಹೆಚ್ಚು ಜನ ಅಂತಹ ಈಜುವಿಕೆಯ ಸಾಮರ್ಥ್ಯ ಪಡೆಯದೆ ಅಸಹಾಯಕರಾಗಿದ್ದಾರೆ. ಪರಿಣಾಮ ಅಸಮಾನತೆಯ ಪ್ರಮಾಣ ಯಾವ ಮಟ್ಟದಲ್ಲಿ ಹೆಚ್ಚುತ್ತಾ ಹೋಗುತ್ತಿದೆ ಎಂದರೆ ಮುಂದಿನ ಕೆಲವೇ ವರ್ಷಗಳಲ್ಲಿ ಇದು ವ್ಯವಸ್ಥೆಯ ಅಸ್ಥಿರತೆಗೆ ಕಾರಣವಾಗುವಂತಿದೆ.ಈ ಅಸ್ಥಿರತೆಯನ್ನು ತೊಡೆದು ಹಾಕಿ ಸ್ಥಿರತೆಯನ್ನು ಸ್ಥಾಪಿಸಬೇಕು ಎಂದರೆ ಆಡಳಿತಗಾರರಿಗೆ ದೇವರಾಜ ಅರಸರಂತೆ ಸಮಗ್ರ ಸಾಮಾಜಿಕ ಕ್ರಾಂತಿಯ ಕಲ್ಪನೆ ಇರಬೇಕು.

ಆದರೆ ದೇಶದಲ್ಲಿ ಶುರುವಾಗಿರುವ ಭಾವನಾತ್ಮಕ ರಾಜಕಾರಣದ ಅಲೆಯನ್ನು ನೋಡಿದರೆ ಅರಸರಂತೆ ಸಾಮಾಜಿಕ ಕ್ರಾಂತಿಯ ಕಲ್ಪನೆ ಇರುವ ರಾಜಕಾರಣಿಗಳು ಮುಂದಿನ ಕೆಲವೇ ಕಾಲದಲ್ಲಿ ಮೂಲೋತ್ಪಾಟನೆ ಯಾಗಲಿದ್ದಾರೆ. ಅದೇ ಇವತ್ತಿನ ದುರಂತ.

andolanait

Recent Posts

ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಲೋಕಾ ಪೊಲೀಸ್‌ ಕಸ್ಟಡಿಗೆ : ಕೋರ್ಟ್‌ ಆದೇಶ

ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್‌…

3 hours ago

ಅನಾರೋಗ್ಯ ಹಿನ್ನಲೆ ದುಬಾರೆ ಸಾಕಾನೆ ʻತಕ್ಷʼ ಸಾವು

ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ. ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ…

5 hours ago

ಮೈಸೂರು | ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನಿಗೇ ಚಾಕು ಇರಿತ

ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…

6 hours ago

ಮಹಿಳಾ ಉದ್ಯೋಗಿಗೆ ಕಿರುಕುಳ : ಕಾರ್ಖಾನೆ ಮಾಲೀಕನ ವಿರುದ್ದ ದೂರು

ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…

6 hours ago

ಚಾಮುಂಡೇಶ್ವರಿ ದರ್ಶನ : ಸೇವಾ ಶುಲ್ಕ ಏರಿಕೆಗೆ ಖಂಡನೆ

ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…

6 hours ago

ಮೂರು ತಿಂಗಳಲ್ಲಿ ಪಿಎಸ್‌ಐ ಖಾಲಿ ಹುದ್ದೆ ಭರ್ತಿ : ಗೃಹ ಸಚಿವ ಪರಮೇಶ್ವರ್‌

ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…

6 hours ago