-ದೆಹಲಿ ಕಣ್ಣೋಟ
ಶಿವಾಜಿ ಗಣೇಶನ್
ಜನಗಣತಿ ಮತ್ತು ಕ್ಷೇತ್ರಗಳ ಪುನರ್ ವಿಂಗಡಣೆ ಮಾಡುವ ಸಾಂವಿಧಾನಿಕ ಹೊಣೆಗಾರಿಕೆ ಈಗ ಕೇಂದ್ರ ಸರ್ಕಾರದ ಮೇಲಿದೆ. ತಮ್ಮದು ‘ನ್ಯಾಯಯುತ ಕ್ಷೇತ್ರ ಪುನರ್ ವಿಂಗಡಣೆಯ ಮನವಿ’ ಎನ್ನುವುದು ಚೆನ್ನೈಯಲ್ಲಿ ನಡೆದ ಸಮಾವೇಶದ ಆಗ್ರಹ. ಈ ಗುರುತರ ಹೊಣೆಗಾರಿಕೆಯನ್ನು ಪ್ರಸ್ತಾಪಿಸುವ ರಾಜ್ಯಗಳ ಬೇಡಿಕೆಯನ್ನು ಲಘುವಾಗಿ ನೋಡುವುದು ಒಂದು ಜನತಂತ್ರ ವ್ಯವಸ್ಥೆಯ ಸರ್ಕಾರದ ನೀತಿ ಆಗಬಾರದು.
ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಹೇರಿಕೆ, ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರ ಜಾರಿ ಮತ್ತು ಲೋಕಸಭೆ ಕ್ಷೇತ್ರಗಳ ಪುನರ್ ವಿಂಗಡಣೆಯಿಂದ ಆಗಬಹುದಾದ ಪ್ರಾತಿನಿಧ್ಯದಲ್ಲಿ ಕಡಿತ, ಈ ಮೂರು ಜ್ವಲಂತ ಸಮಸ್ಯೆಗಳಿಂದ ಉತ್ತರ ಮತ್ತು ದಕ್ಷಿಣ ಹೆಸರಿನಲ್ಲಿ ದೇಶ ಮಾನಸಿಕವಾಗಿ ಇಬ್ಭಾಗವಾಗಲಿದೆಯೇ?
ಪ್ರಸ್ತುತ ಈ ಪ್ರಶ್ನೆ ದೇಶವನ್ನು ಕಾಡಲು ಶುರುವಾಗಿದೆ. ‘ಭಾಷೆ, ಗಡಿ ಪ್ರದೇಶಗಳ ಹೆಸರಿನಲ್ಲಿ ಅನೇಕ ಶಕ್ತಿಗಳು ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಸವಾಲನ್ನು ಒಡ್ಡುತ್ತಿವೆ. ಉತ್ತರ ಭಾರತ ಮತ್ತು ದಕ್ಷಿಣ ಭಾರತ ಎಂದು
ವಿಭಜಿಸಲು ಹೊರಟಿವೆ.‘- ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಪರೋಕ್ಷವಾಗಿ ಸೈದ್ಧಾಂತಿಕವಾಗಿ ನಿಯಂತ್ರಿಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಬಲವಾದ ಶಂಕೆ.
ಇಂತಹ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕೆನ್ನುವುದು ಆರ್‌ಎಸ್‌ಎಸ್‌ನ ಆಶಯ. ಕೇಂದ್ರ ಸರ್ಕಾರವನ್ನು ನಿಯಂತ್ರಿಸಬಲ್ಲ ಮತ್ತು ಆ ಶಕ್ತಿಯನ್ನು ಹೊಂದಿರುವ ಈ ಸಂಘಟನೆ ತನ್ನ ಈ ಆಶಯವನ್ನು ಕೇವಲ ಭಾಷಣ ಮತ್ತು ಉಪದೇಶದ ಬದಲಿಗೆ ಅದನ್ನು ಬಗೆಹರಿಯುವಂತೆ ನೋಡಿಕೊಳ್ಳುವುದು ಕೂಡ ಮುಖ್ಯ.
ಹಾಗೆಯೇ ರಾಜ್ಯಗಳ ಬೇಡಿಕೆಗಳನ್ನು ನಿರ್ಲಕ್ಷಿಸುವುದಾಗಲಿ ಅಥವಾ ಆ ಬೇಡಿಕೆಗಳನ್ನು ಬಗೆಹರಿಸಲಾರದೆ ಮುಂದೂಡುತ್ತಾ ಹೋಗುವುದಾಗಲಿ ಕೇಂದ್ರ ಸರ್ಕಾರದ ಜಾಣ ನಡೆ ಆಗುವುದಿಲ್ಲ ಎನ್ನುವುದನ್ನು ತಿಳಿಯ
ಬೇಕು. ಹೀಗಾಗಿ ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವವರು ಪ್ರಜಾತಂತ್ರ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಉಳಿಸುವುದು ಇಂದಿನ ತುರ್ತು ಅವಶ್ಯ.
ಚೆನ್ನೈನಲ್ಲಿ ತಮಿಳುನಾಡು ಸರ್ಕಾರದ ನೇತೃತ್ವದಲ್ಲಿ ಶನಿವಾರ ನಡೆದ ಒಡಿಶಾ ಮತ್ತು ಪಂಜಾಬ್ ಸೇರಿದಂತೆ ಕರ್ನಾಟಕ (ಉಪಮುಖ್ಯಮಂತ್ರಿ), ತಮಿಳುನಾಡು, ಕೇರಳ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳ ಮೊದಲ ಸಭೆಯಲ್ಲಿ ಜನಸಂಖ್ಯೆಯ ಆಧಾರದ ಮೇಲೆ ಲೋಕಸಭೆ ಕ್ಷೇತ್ರಗಳ
ಪುನರ್ ವಿಂಗಡಣೆಯಿಂದ ಕಡಿಮೆ ಆಗುವ ಈ ರಾಜ್ಯಗಳ ಪ್ರಾತಿನಿಧ್ಯದಿಂದ ಕೇಂದ್ರದ ರಾಷ್ಟ್ರೀಯ ಕುಟುಂಬ ನೀತಿಯನ್ನು ಪಾಲಿಸಿಕೊಂಡು ಬಂದದ್ದು ಈಗ ಈ ರಾಜ್ಯಗಳ ಪಾಲಿಗೆ ಮುಳುವಾಗುತ್ತಿದೆ ಎನ್ನುವ ಆತಂಕ
ವ್ಯಕ್ತವಾಗಿರುವುದು ವಿಪರ್ಯಾಸ.
2002ರಲ್ಲಿ ನಡೆದಿದ್ದ ಲೋಕಸಭೆ ಕ್ಷೇತ್ರಗಳ ಮರುವಿಂಗಡಣೆಯ ನಂತರ ಇಪ್ಪತ್ತೈದು ವರ್ಷಗಳವರೆವಿಗೆ ಮುಂದೂಡಿದ್ದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದ ಅಂದಿನ ನಿರ್ಧಾರದಂತೆ 2026ರ ಜನಗಣತಿ ಆಧಾರದ ಮೇಲೆ ಮತ್ತೆ ಕ್ಷೇತ್ರಗಳ ಪುನರ್ ವಿಂಗಡಣೆ ಅಗುವ ಕಾಲ ಸನ್ನಿಹಿತವಾಗಿದೆ. ಅಂದರೆ 2029ರಲ್ಲಿ ನಡೆಯಬೇಕಾದ ಲೋಕಸಭೆ ಚುನಾವಣೆಗೆ ಈ ಕಾರ್ಯ ಈಗ ಸಿದ್ಧವಾಗಬೇಕಿದೆ. ಇದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡವಲ್ಲದೆ ಕಳೆದ ವರ್ಷ ಸಂಸತ್ತಿನ ಉಭಯ ಸದನಗಳು ಒಮ್ಮತದಿಂದ ಅಂಗೀಕರಿಸಿದ ಮಹಿಳಾ ಮೀಸಲು ವ್ಯವಸ್ಥೆಗೂ ಅವಕಾಶ ಕಲ್ಪಿಸಬೇಕಿದೆ.
ಈ ಸಮಸ್ಯೆಗಳನ್ನು ಕುರಿತು ಕಾಂಗ್ರೆಸ್, ತಮಿಳುನಾಡಿನ ಡಿಎಂಕೆ, ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಮತ್ತು ಇತರೆ ಒಂದೆರಡು ಪಕ್ಷಗಳು ಈಗಾಗಲೇ ದನಿ ಎತ್ತಿದ್ದರೆ ಕೇಂದ್ರ ಸರ್ಕಾರ ಮಾತ್ರವಲ್ಲ ದೇಶದ ಬಹುತೇಕ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷ ಇದನ್ನು ಮರೆತಂತೆ ನಟಿಸುತ್ತಿರುವುದು ದುರದೃಷ್ಟಕರ. ಪ್ರಾಯಶಃ ಈ ಎಲ್ಲ ಸಮಸ್ಯೆಗಳನ್ನೂ ಪ್ರಧಾನಿ ನರೇಂದ್ರ ಮೋದಿ ಅವರು ನೋಡಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ಹೊಂದಿರುವಂತೆ ಕಾಣುತ್ತಿದೆ. ದುರದೃಷ್ಟಕರ ಎಂದರೆ ಇಂತಹ ಗಂಭೀರ ಸಮಸ್ಯೆಗಳ ಬಗೆಗೂ ಪ್ರಧಾನಿ ನರೇಂದ್ರ ಮೋದಿ ಅವರು ಬಾಯಿ ಬಿಡುತ್ತಿಲ್ಲ, ಇತ್ತ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಚರ್ಚಿಸುವ ಸುಳಿವನ್ನೂ ನೀಡುತ್ತಿಲ್ಲವಾದ ಕಾರಣ ಅವರ ನಡೆಯಿಂದ ಬಿಜೆಪಿಯೇತರ ಪಕ್ಷಗಳಲ್ಲಿ ಕಳವಳ ಉಂಟಾಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ದೇಶದ ಜನಸಂಖ್ಯೆಯು ನೂರು ಕೋಟಿ ದಾಟಿದ ಸಂದರ್ಭದಲ್ಲಿ ಆದ ಕ್ಷೇತ್ರಗಳ ಪುನರ್ ವಿಂಗಡಣೆಯು ಈಗ ದೇಶದ ಜನಸಂಖ್ಯೆ 140 ಕೋಟಿ ದಾಟಿರುವಾಗ ಆಡಳಿತ ಪಕ್ಷದಲ್ಲಿ ಈ ಕುರಿತಂತೆ ಯಾವ ಸುಳಿವೂ ಇಲ್ಲದಿರುವುದು ಸಹಜವಾಗಿಯೇ ಕಳವಳಕಾರಿಯಾಗಿದೆ.
ಈ ಆತಂಕದ ಸಂಗತಿ ದಕ್ಷಿಣ ರಾಜ್ಯಗಳನ್ನು ಕಾಡುತ್ತಿರುವುದು ನಿಜವಾದರೂ, ಈ ಸಮಸ್ಯೆಯನ್ನು ಹೇಗೆ ಎದುರಿಸಬೇಕೆನ್ನುವ ಗಂಭೀರ ಚಿಂತನೆಯನ್ನು ತಮಿಳುನಾಡು ಎಲ್ಲ ರಾಜ್ಯಗಳಿಗಿಂತ ಒಂದು ಕೈ ಮೇಲೆನ್ನುವಂತೆ ಕೇಂದ್ರದ ವಿರುದ್ಧ ಸವಾಲಿನ ಮೇಲೆ ಸವಾಲು ಹಾಕುತ್ತಾ ರಾಜಕೀಯ ಹೋರಾಟದ
ಅಖಾಡಕ್ಕಿಳಿದಿದೆ.
ಹಿಂದೂಗಳ ಜನಸಂಖ್ಯೆ ಕಡಿಮೆ ಆಗುತ್ತಿರುವುದರಿಂದ ಹೆಚ್ಚು ಮಕ್ಕಳನ್ನು ಹುಟ್ಟಿಸಿ, ಕುಟುಂಬಕ್ಕೆ ಭಾರ ಎನಿಸುವ ಮಕ್ಕಳನ್ನು ಮಠಗಳಿಗೆ ಬಿಡಿ ಎನ್ನುವ ಕಾವಿಧಾರಿಗಳ ಒತ್ತಡ ಒಂದು ಕಡೆಯಾದರೆ ಮತ್ತೊಂದೆಡೆ
ಜನಸಂಖ್ಯೆಯ ಆಧಾರದ ಮೇಲೆ ನಡೆಯುವ ಕ್ಷೇತ್ರಗಳ ಪುನರ್ ವಿಂಗಡಣೆಯ ಲಾಭ ಜನಸಂಖ್ಯೆಯನ್ನಾಧರಿಸಿದೆ ಎನ್ನುವ ಆಂಧ್ರ ಪ್ರದೇಶದ ಮುಖ್ಯಮಂತ್ರಿ ನರಾ ಚಂದ್ರ ಬಾಬು ನಾಯ್ಡು ತಮ್ಮ ರಾಜ್ಯದಲ್ಲಿ ಮೂರಕ್ಕಿಂತ ಹೆಚ್ಚುಮಕ್ಕಳನ್ನು ಹುಟ್ಟಿಸಿ ಎಂದು ಕರೆ ನೀಡುತ್ತಾರೆ. ಇತ್ತ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ತಡ ಮಾಡದೆ ಹೆಚ್ಚು ಮಕ್ಕಳಿಗೆ ಜನ್ಮ ನೀಡಿ ಎಂದಿದ್ದಾರೆ.
ಜನಸಂಖ್ಯಾ ಹೆಚ್ಚಳದಿಂದ ಆಹಾರ ಧಾನ್ಯದ ಕೊರತೆ ಉಂಟಾಗಿ ದೇಶದಲ್ಲಿ ಕ್ಷಾಮ ಕಾಣಿಸಿಕೊಳ್ಳಲಿದೆ, ಕೊನೆಗೆ ಇದು ಯುದ್ಧಕ್ಕೂ ಎಡೆಮಾಡಿಕೊಡಲಿದೆ ಎನ್ನುವ ಆತಂಕವನ್ನು ಥಾಮಸ್ ರಾರ್ಬಟ್ ಮಾಲ್ತೂಸ್ 1798ರಲ್ಲಿ ‘ ಅನ್ ಎಸ್ಸೆ ಆನ್ ದ ಪ್ರಿನ್ಸಿಪಲ್ ಆಫ್ ಪಾಪುಲೇಷನ್’ ಎನ್ನುವ ತನ್ನ ಕೃತಿಯಲ್ಲಿ ಬರೆದಿರುವುದನ್ನು ಎಪ್ಪತ್ತರ ದಶಕದಲ್ಲಿ ಭಾರತವೂ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಗಂಭೀರವಾಗಿ ಪರಿಗಣಿಸಿ ಜನಸಂಖ್ಯೆ ನಿಯಂತ್ರಣವನ್ನು ಜಾರಿಗೆ ತಂದವು.
ನಾವೀಗ ಇಡೀ ವಿಶ್ವದಲ್ಲಿಯೇ ಜನಸಂಖ್ಯೆಯಲ್ಲಿ ಮುಂದಿದ್ದೇವೆ. ಎರಡು ವರ್ಷಗಳ ಹಿಂದೆಯೇ ಚೀನಾವನ್ನು ಹಿಂದಿಕ್ಕಿದ್ದೇವೆ. ಅದೃಷ್ಟವಶಾತ್ ನಾವೀಗ ಆಹಾರ ಧಾನ್ಯ ಉತ್ಪಾದನೆಯಲ್ಲಿಸ್ವಾವಲಂಬಿಗಳಾಗಿರುವುದರಿಂದ 140 ಕೋಟಿ ಜನಸಂಖ್ಯೆ ಭಾರತಕ್ಕೆ ಭಾರ ಎನಿಸುತ್ತಿಲ್ಲ. ಆದರೆ ಪರಿಸ್ಥಿತಿ ಹೀಗೆಯೇ ಇರುತ್ತದೆ ಎಂದು ನಂಬಲಾಗದು. ಮನುಷ್ಯನಿಂದ ಪ್ರಕೃತಿಯ ನಾಶ ಎಗ್ಗಿಲ್ಲದೆ ನಡೆಯುತ್ತಿದೆ. ಅಮೆರಿಕ, ಆಸ್ಟ್ರೇಲಿಯಾ ಹೀಗೆ ಹಲವಾರು ಅಭಿವೃದ್ಧಿ ಹೊಂದಿದ ದೇಶಗಳೇ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ತತ್ತರಿಸಿಹೋಗುತ್ತಿವೆ. ಈ ಎಚ್ಚರ ನಮಗೆ ಇಂದು ಅವಶ್ಯ. ಸತತವಾಗಿ ಒಂದೆರಡು ವರ್ಷಗಳ ಕಾಲ ಮಳೆ ಕೈಕೊಟ್ಟರೆ ದೇಶ ಬರದಿಂದ ತತ್ತರಿಸಿ ಗುಟುಕು ನೀರಿಗಾಗಿ ಮತ್ತು ಅನ್ನಕ್ಕಾಗಿ ಹಾಹಾಕಾರ ಪಡಬೇಕಾಗುತ್ತದೆ.
ಹಿಂದೂಗಳ ಸಂಖ್ಯೆ ಹೆಚ್ಚಬೇಕೆನ್ನುವುದಕ್ಕಾಗಲಿ, ಸಂಸತ್ತಿನಲ್ಲಿ ನಮ್ಮ ಪ್ರಾತಿನಿಧ್ಯ ಹೆಚ್ಚಾಗಲಿ ಎನ್ನುವ ಕಾರಣಕ್ಕಾಗಿಯಾಗಲಿ ಅನಿಯಂತ್ರಿತವಾಗಿ ಜನಸಂಖ್ಯೆ ಸ್ಛೋಟಕ್ಕೆ ಎಡೆ ಮಾಡಿಕೊಟ್ಟರೆ ಮುಂದಿನ ದಿನಗಳಲ್ಲಿ ದೇಶ ಅದಕ್ಕೆ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ.
ಆದ್ದರಿಂದ ಈಗ ಕ್ಷೇತ್ರಗಳ ಪುನರ್ ವಿಂಗಡಣೆಗೆ ಕೇವಲ ಜನಸಂಖ್ಯೆ ಮತ್ತು ಭೂ ಪ್ರದೇಶದ ವಿಸ್ತರಣೆಯೇ ಆಧಾರ ಎನ್ನುವ ಮಾನದಂಡವನ್ನು ಕೇಂದ್ರ ಸರ್ಕಾರ ಪುನರ್ ಪರಿಶೀಲಿಸುವ ಅವಶ್ಯಕತೆ ಇದೆ. ಇದು ಚೆನ್ನೈನಲ್ಲಿ ನಡೆದ ದಕ್ಷಿಣ ರಾಜ್ಯಗಳ ಕೂಗು. ಆದರೆ ಈ ಕೂಗು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ‘ದಕ್ಷಿಣ ಮತ್ತು ಉತ್ತರ‘ ಎಂದು ದೇಶವನ್ನು ಎರಡು ಮಾಡುವ ಕುತಂತ್ರವಾಗಿ ಕಾಣುತ್ತಿರುವುದು ವಿಚಿತ್ರ. ಇಂತಹದೊಂದು ಸಮಸ್ಯೆಯು ಗಂಭೀರ ಸ್ವರೂಪ ಪಡೆದುಕೊಂಡಿರುವಾಗಲೂ ಪ್ರಧಾನಿ ನರೇಂದ್ರ ಮೋದಿ ಅವರು ಸಮಸ್ಯೆಗೆ ಕಿವುಡಾಗಿರುವುದು ವಿಪರ್ಯಾಸ.
ಈ ನಿಟ್ಟಿನಲ್ಲಿ ಚೆನ್ನೆ ಸಮಾವೇಶವು ನಾವು ಲೋಕಸಭೆ ಕ್ಷೇತ್ರಗಳ ಪುನರ್ ವಿಂಗಡಣೆಯ ವಿರೋಧಿಗಳಲ್ಲ, ಆದರೆ ಅದು ನ್ಯಾಯ ಸಮ್ಮತವಾಗಿ ನಡೆಯಬೇಕು, ರಾಷ್ಟ್ರಕ್ಕೆ ಹೆಚ್ಚು ಸಂಪನ್ಮೂಲ ಒದಗಿಸುವುದು ಮತ್ತು ಜನಸಂಖ್ಯೆ ನಿಯಂತ್ರಣವೇ ನಮಗೆ ಶಿಕ್ಷೆ ಆಗಬಾರದು ಎನ್ನುವುದನ್ನು ಸಾರಿ ಹೇಳಿದೆ. ಆದರೂ ಪ್ರಧಾನಿ ಪರವಾಗಿ ಎನ್ನುವಂತೆ ಎಲ್ಲ ಸಮಸ್ಯೆ ಮತ್ತು ವಿವಾದಗಳಿಗೂ ಉತ್ತರ ನೀಡುವ ಗೃಹ ಸಚಿವ ಅಮಿತ್ ಶಾ ಅವರು, ‘ಭಾಷೆ, ಶಿಕ್ಷಣ ನೀತಿ ಮತ್ತು ಕ್ಷೇತ್ರಗಳ ಪುನರ್ ವಿಂಗಡಣೆ ವಿಷಯಗಳನ್ನು ಮುನ್ನೆಲೆಗೆ ತರುವ
ಮೂಲಕ ತಮ್ಮ ಭ್ರಷ್ಟಾಚಾರವನ್ನು ಮರೆಮಾಚುವ ಕೆಲಸದಲ್ಲಿ ತಮಿಳುನಾಡು ಸರ್ಕಾರ ತೊಡಗಿದೆ’ ಎನ್ನುವ ಆರೋಪ ಮಾಡುವ ಮೂಲಕ ಸಮಸ್ಯೆಯನ್ನು ಲಘುವಾಗಿ ಕಾಣುತ್ತಿರುವುದು ರಾಜ್ಯಗಳ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಹೇಗೆ ಸ್ಪಂದಿಸುತ್ತಿದೆ ಎನ್ನುವುದರ ದ್ಯೋತಕವಾಗಿದೆ.
ಅಕ್ಷತಾ ರಜೆಗೆ ಊರಿಗೆ ಬಂದಿದ್ದೆ. ಒಂದು ಬದಿಯಲ್ಲಿ ಬಂಟಾಜೆ ಕಾಡಿನಲ್ಲಿ ಹುಟ್ಟಿ ಸೀರೆ ನದಿಯನ್ನು ಸೇರುವ ತೊರೆ. ಇನ್ನೊಂದು ಬದಿಯಲ್ಲಿ…
'ಎಲೆ? ಯಾವೂರೆಲೆ ಕಂಡರಿ ಇಲ್ಲಿ. ಅರೆಕಲ್ಲ ಮೇಲೆನೆ ಊಟ. ಪ್ಲಾಸ್ಟಿಕ್ ಲೋಟದಲ್ಲಿರೋ ನೀರಾ ಮುಂದಿರೋ ಅರೆಕಲ್ಲ ಮೇಲೆ ಚಿಮುಕಿಸಿ ರೆಡಿ…
ಹಾದಿಬದಿಯ ನಿರಾಶ್ರಿತರು ಆಕಾಶವನ್ನೇ ಹೊದಿಕೆಯಾಗಿಸಿಕೊಂಡು,ಭೂಮಿಯನ್ನೇ ಹಾಸಿಗೆಯನ್ನಾಗಿಸಿ ಕೊಂಡು ಸಿಕ್ಕ ಕೆಲಸ ಮಾಡುತ್ತಾ, ಸಿಕ್ಕಸಿಕ್ಕ ಹಾಗೆ ಬದುಕು ಸವೆಸುತ್ತಾ ಕಳೆಯುತ್ತಾರೆ. ಚಳಿಯಾದರೇನು,…
ಎಚ್.ಡಿ.ಕೋಟೆ : ತಾಲೂಕಿನ ಚೌಡಹಳ್ಳಿ ಗ್ರಾಮದ ಪಕ್ಕದಲ್ಲೇ ಇರುವ ಜಮೀನೊಂದರಲ್ಲಿ ಹಸುವಿನ ಮೇಲೆ ದಾಳಿ ನಡೆಸಿರುವ ಹುಲಿ ಹಸುವನ್ನು ಕೊಂದು…
ಮೈಸೂರು : ಮೈಸೂರು ಮೂಲದ ಗೃಹಿಣಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಉತ್ತರ ಕರ್ನಾಟಕ ಮೂಲದ ಪೊಲೀಸ್ ಕಾನ್ಸ್ ಟೇಬಲ್ ನೊಂದಿಗೆ…