ಶಿಕ್ಷಕಿ ರಜನಿ ಬಾಲಾ ಹತ್ಯೆಯ ಸುತ್ತಾ…

ಅವಿಜಿತ್ ಪಾಠಕ್

ಹಿಂಸೆಯ ಯುಗದಲ್ಲಿ ಸಾವು ಎನ್ನುವುದು ಕೇವಲ ಅಂಕಿಅಂಶಗಳಿಗೆ ಸೇರ್ಪಡೆಯಾಗುವ ಒಂದು ದತ್ತಾಂಶವಾಗಿರುವ ಸಂದರ್ಭದಲ್ಲಿ ರಜನಿ ಬಾಲಾ ಎಂಬ ಶಿಕ್ಷಕಿಯ ಸಾವು ಸಹ ನೆನೆಗುದಿಗೆ ಬೀಳುವುದು ಸಹಜ. ಜಮ್ಮು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಯೋತ್ಪಾದಕರ ಗುಂಡೇಟಿಗೆ ಬಲಿಯಾದ ೩೬ ವರ್ಷದ ಶಿಕ್ಷಕಿ ರಜನಿ ಬಾಲಾ ಅವರ ದಾರುಣ ಅಂತ್ಯವೂ ಸಾರ್ವಜನಿಕ ಬದುಕಿನ ವಿಸ್ಮೃತಿಗೆ ಜಾರಿಬಿಡುತ್ತದೆ. ಏಕೆಂದರೆ ನಮ್ಮ ಮನೋಭಾವ ಮತ್ತು ಆಧ್ಯಾತ್ಮಿಕ ದಾರಿದ್ರ್ಯದ ಪರಿಣಾಮ ನಮ್ಮಲ್ಲಿ ಅನೇಕರು ಮತ್ತೊಂದು ರೀತಿಯ ಹಿಂಸೆಯನ್ನು ಆಹ್ವಾನಿಸುತ್ತಿರುತ್ತೇವೆ. ಭಯೋತ್ಪಾದನೆಯನ್ನು ಎದುರಿಸಲು ಸೇನಾ ಕಾರ್ಯಾಚರಣೆಯನ್ನು ಅಪೇಕ್ಷಿಸುತ್ತಿರುತ್ತೇವೆ. ಆದಾಗ್ಯೂ ಹಿಂಸೆಯು ಶಾಲಾ ಆವರಣವನ್ನು ಪ್ರವೇಶಿಸುವುದನ್ನು ಹೇಗೆ ಅರ್ಥೈಸಲು ಸಾಧ್ಯ ? ತಮ್ಮ ಅಸ್ಮಿತೆಗಳ ಲೋಕದ ಪರಿವೆಯೇ ಇಲ್ಲದ ಶಾಲಾ ಮಕ್ಕಳ ಎದುರಿನಲ್ಲೇ ಅವರ ಆತ್ಮೀಯ ಶಿಕ್ಷಕಿಯೊಬ್ಬರು ಭಯೋತ್ಪಾದಕರಿಂದ ಹತ್ಯೆಗೀಡಾಗುವುದನ್ನು ಹೇಗೆ ಅರ್ಥಮಾಡಿಕೊಳ್ಳುವುದು ?

ಬಹುಶಃ ನಾವು ಶಿಕ್ಷಣದ ಚಿಕಿತ್ಸಕ ಶಕ್ತಿಯ ಮೌಲ್ಯಗಳನ್ನು ಮರೆತೇಬಿಟ್ಟಿದ್ದೇವೆ ಎನಿಸುತ್ತದೆ. ಅಥವಾ ಒಬ್ಬ ಹಿಂದೂ ಬೋಧಕ ಮತ್ತು ಮುಸ್ಲಿಂ ವಿದ್ಯಾರ್ಥಿಗಳ ನಡುವಿನ ಸಂವಹನ ಪ್ರಕ್ರಿಯೆಯಾಗಿ ಶಿಕ್ಷಣದ ಈ ಸಾಧ್ಯತೆಯನ್ನೂ ಮರೆತಿದ್ದೇವೆ ಎನಿಸುತ್ತದೆ. ಭಯೋತ್ಪಾದಕರು ರಜನಿ ಬಾಲಾ ಅವರನ್ನು ಹತ್ಯೆ ಮಾಡಿರುವುದರೊಂದಿಗೇ ಶಿಕ್ಷಣದ ಈ ವಿಮೋಚನೆಯ ಶಕ್ತಿ ಮತ್ತು ಸಾಧ್ಯತೆಗಳನ್ನೂ ಕೊಂದುಹಾಕಿದ್ದಾರೆ. ಏಕೆಂದರೆ ಮೂಲತಃ ಭಯೋತ್ಪಾದನೆ ಎನ್ನುವುದು ಅಧ್ಯಾತ್ಮದಿಂದ ವಿಮುಖವಾದ, ಅಸ್ತಿತ್ವವನ್ನೇ ನಿರಾಕರಿಸುವಂತಹ ಒಂದು ಕೃತ್ಯ. ಇದು ಭೀತಿಯನ್ನು ಸೃಷ್ಟಿಸುವಂತೆಯೇ ಸಂವಹನದ ಕ್ರಿಯೆಯನ್ನೂ ನಿರಾಕರಿಸುತ್ತದೆ. ಇತರ ಯಾವುದೇ ತೀವ್ರಗಾಮಿ ತತ್ವದಂತೆಯೇ ಭಯೋತ್ಪಾದನೆಯೂ ಸಹ ತನ್ನ ಶತ್ರುಗಳನ್ನು ಗುರುತಿಸುವ ಹಿಂಸಾತ್ಮಕ ರೂಢಮಾದರಿಯೊಂದನ್ನು ಸೃಷ್ಟಿಸಿಕೊಳ್ಳುತ್ತದೆ.

ಆದರೆ, ಸ್ವತಃ ಒಬ್ಬ ಉಪನ್ಯಾಸಕನಾಗಿ ನನಗೆ ರಜನಿ ಬಾಲಾ ಅವರನ್ನು ಮರೆಯಲಾಗುವುದಿಲ್ಲ. ಅಥವಾ ಭಯೋತ್ಪಾದಕರ ವಿರುದ್ಧ ಸೇನಾ ಕಾರ್ಯಾಚರಣೆಯಲ್ಲಿ ಪುಲ್ವಾಮಾದಲ್ಲಿ ಇಬ್ಬರು ಜೈಷ್ ಎ ಮುಹಮ್ಮದ್ ಉಗ್ರರನ್ನು ಹತ್ಯೆ ಮಾಡಲಾಯಿತು ಎಂಬ ಪ್ರತಿ ನಿರೂಪಣೆಯಿಂದ ನಾನು ಯಾವುದೇ ರೀತಿಯ ಪರಾರ್ಥವಾದ ಸಂತೋಷವನ್ನು ಅನುಭವಿಸುವುದಿಲ್ಲ. ವಾಸ್ತವ ಎಂದರೆ ಈ ಹಿಂಸೆ ಮತ್ತು ಪ್ರತಿ ಹಿಂಸೆಯ ವಿಷ ವರ್ತುಲವು ನಮ್ಮ ಪ್ರಜ್ಞೆ ಮತ್ತಷ್ಟು ಕ್ರೂರವಾಗುವಂತೆ ಮಾಡುತ್ತದೆ. ಓರ್ವ ಉಪನ್ಯಾಸಕನಾಗಿ ನನಗೆ, ಒಂದು ಅರ್ಥಪೂರ್ಣ ಸಂವಾದದ ಭೂಮಿಕೆಯಾಗಿ ಶಿಕ್ಷಣ ಎನ್ನುವುದು ಮಾನವ ಸಮಾಜ ಕೂಡಿ ಬಾಳುವ ಸಮನ್ವಯತೆಯನ್ನು ಸಾಕಾರಗೊಳಿಸುವ ಪರಮೋಚ್ಚ ಕೊಡುಗೆ ಹಾಗೂ ಶಾಲಾ ಕೊಠಡಿ ಎಂದರೆ ಕೇವಲ ರಣಭೂಮಿಯಲ್ಲದೆ ನಮ್ಮನ್ನು ಹೊಸ ದಿಗಂತಗಳನ್ನು ಬೆಸೆಯಲು ಕೊಂಡೊಯ್ಯುವ ಸಾಧನ ಎಂದೇ ಭಾಸವಾಗುತ್ತದೆ. ನಂಜು ತುಂಬಿದ ಉಗ್ರವಾದಿಗಳಿಗೆ ಅಥವಾ ಕರ್ತವ್ಯನಿರತ ಸೇನೆಗೆ ಇದು ಅರ್ಥವಾಗುವುದಿಲ್ಲ. ಉದಾಹರಣೆಗೆ ನನ್ನ ತರಗತಿಯಲ್ಲಿ ನಾನು ಪ್ರತಿಭಾವಂತ ಕಾಶ್ಮೀರಿ ಮುಸ್ಲಿಂ ವಿದ್ಯಾರ್ಥಿಗಳನ್ನು ಕಂಡಿದ್ದೇನೆ. ನಾವು ಒಟ್ಟಿಗೇ ಓಡಾಡಿದ್ದೇವೆ, ಕಲಿತಿದ್ದೇವೆ, ತಪ್ಪು ಒಪ್ಪುಗಳನ್ನು ಅರಿತಿದ್ದೇವೆ. ಭಯೋತ್ಪಾದಕರಾಗಲೀ, ಸೇನಾ ಪ್ರವೃತ್ತಿಯ ಪ್ರಭುತ್ವವಾಗಲೀ ಈ ಸಾಧ್ಯತೆಯನ್ನು ಮನಗಾಣಲು ಸಾಧ್ಯವಾಗುವುದಿಲ್ಲ. ಆದುದರಿಂದಲೇ ನನಗೆ, ರಜನಿ ಬಾಲಾ ಅವರ ಹತ್ಯೆಯು, ಶಿಕ್ಷಣದ ಚಿಕಿತ್ಸಕ ಗುಣದ ಬಗ್ಗೆ ವಿಶ್ವಾಸ ಇರುವ ಎಲ್ಲರನ್ನೂ ವಿಚಲಿತಗೊಳಿಸಬೇಕು ಎನಿಸುತ್ತದೆ.

ಮೇ ೩೧ರ ಆ ಆಘಾತಕಾರಿ ಮುಂಜಾನೆಯನ್ನು ಊಹಿಸಿಕೊಳ್ಳಿ. ರಜನಿ ಬಾಲಾ ಆಗತಾನೇ ಶಾಲೆಯನ್ನು ಪ್ರವೇಶಿಸುವುದರಲ್ಲಿದ್ದರು. ಮಕ್ಕಳು ಪ್ರಾರ್ಥನೆಗೆ ನಿಲ್ಲಲು ಸಿದ್ಧವಾಗುತ್ತಿದ್ದರು. ಆ ಸಂದರ್ಭದಲ್ಲೇ ತಮ್ಮ ಶಿಕ್ಷಕಿಯು ಗುಂಡೇಟಿಗೆ ಬಲಿಯಾಗಿ ಸಾಯುವುದನ್ನು ಮಕ್ಕಳು ಕಣ್ಣಾರೆ ನೋಡುತ್ತಾರೆ. ಬಹುಶಃ ಈ ಚರಿತ್ರೆಯ ಬೋಧಕಿ ತರಗತಿಯಲ್ಲಿ ತಮ್ಮ ಜ್ಞಾನವನ್ನು ಹೆಚ್ಚಿಸುತ್ತಾರೆ ಎಂದು ಆ ಮಕ್ಕಳು ಭಾವಿಸಿರಬಹುದು. ರಜನಿ ಬಾಲಾ ಅವರೂ ಸಹ ಎಲ್ಲ ಶಿಕ್ಷಕಿಯರೂ ಬಯಸುವಂತೆ, ಮಕ್ಕಳಿಗೆ ಪಾಠ ಬೋಧಿಸುವುದರ ಮೂಲಕ, ಖಲೀಲ್ ಗಿಬ್ರಾನ್ ಹೇಳಿರುವಂತೆ ನಿಮ್ಮ ಮಕ್ಕಳು ವಾಸ್ತವದಲ್ಲಿ ನಿಮ್ಮ ಮಕ್ಕಳಲ್ಲ ಎಂಬ ವಾಸ್ತವವನ್ನು ಮನನ ಮಾಡಿಕೊಳ್ಳುವ ಮಧುರ ಕ್ಷಣಗಳಿಗಾಗಿ ಕಾತುರದಿಂದಿದ್ದಿರಬಹುದು. ಜೀವ ವಿಕಾಸ ಪ್ರಕ್ರಿಯೆಯಲ್ಲಿನ ಶಿಶುಗಳಾಗಿ ಈ ಮಕ್ಕಳು ಕಾಣುತ್ತಾರೆ.

ಆದರೆ ಭಯೋತ್ಪಾದನೆ ಎನ್ನುವುದು ಯಾವುದೇ ಮತಧರ್ಮದ ಸಮವಸ್ತ್ರವನ್ನು ಧರಿಸಿದ್ದರೂ ಅದರಲ್ಲಿ ಧಾರ್ಮಿಕತೆ ಇರುವುದಿಲ್ಲ. ಅದು ಜೀವ ವಿರೋಧಿ. ಅದು ಸಾಮೂಹಿಕ ಆತ್ಮಹತ್ಯೆಯತ್ತ ಚಲಿಸುತ್ತದೆ. ತಮ್ಮ ಮುಂಜಾವಿನ ಪ್ರಾರ್ಥನೆಯನ್ನು ಸಲ್ಲಿಸಲು ಸಜ್ಜಾಗುತ್ತಿದ್ದ ಆ ಸುಂದರ ಮಕ್ಕಳಲ್ಲಿ, ಯಾವುದೇ ಶಿಕ್ಷಕರು ಬಯಸುವಂತೆ, ಕ್ರಿಯಾಶೀಲತೆಯ ಸಾಧ್ಯತೆಗಳು ಇರಲು ಸಾಧ್ಯ. ಅವರಲ್ಲೇ ಹಲವರು ಜಲಾಲುದ್ದಿನ್ ರೂಮಿ ಅವರಂತಹ ಆಧ್ಯಾತ್ಮಿಕ ವ್ಯಕ್ತಿಗಳು ಹೊರಹೊಮ್ಮಲು ಸಾಧ್ಯ. ಅಥವಾ ಶಾಂತಿದೂತ ಮಾರ್ಟಿನ್ ಲೂರ್ಥ ಕಿಂಗ್ (ಜೂನಿಯರ್) ಹೊರಹೊಮ್ಮಲು ಸಾಧ್ಯ. ಅಥವಾ ಜಾನ್ ಲೆನ್ನನ್ ಅವರಂತಹ ಅದ್ಭುತ ಗಾಯಕ ಹುಟ್ಟಲು ಸಾಧ್ಯ. ಈ ಸಾಧ್ಯತೆಗಳೇ ಭಯೋತ್ಪಾದಕರಲ್ಲಿ ಭೀತಿ ಉಂಟುಮಾಡುತ್ತದೆ.

ರಜನಿ ಬಾಲಾ ಅವರನ್ನು ಹತ್ಯೆ ಮಾಡುವ ಮೂಲಕ ಭಯೋತ್ಪಾದಕರು ಈ ಮಕ್ಕಳಿಗೆ, ಎಲ್ಲ ಉದಾತ್ತ ಕನಸುಗಳನ್ನು ನಿಕೃಷ್ಟವಾಗಿ ನೋಡುವಂತೆ, ಸಂವಾದ ಮತ್ತು ಸಂವಹನದ ಸ್ಫೂರ್ತಿಯನ್ನು ನಿರಾಕರಿಸುವಂತೆ ಬೋಧಿಸುತ್ತಾರೆ. ನಿಮ್ಮ ಶಿಕ್ಷಕರೇ ನಿಮ್ಮ ಶತ್ರುಗಳು, ನೀವು ಹಿಂಸೆಯನ್ನೇ ಸಹಜ ಎಂದು ಒಪ್ಪಿಕೊಳ್ಳಿ, ಒಂದು ಮುಕ್ತ ಪ್ರಪಂಚವನ್ನು ಸಾಧಿಸಲು ಹಿಂಸೆ ಅನಿವಾರ್ಯ ಮತ್ತು ಅಪೇಕ್ಷಿತ ಎನ್ನುವುದನ್ನು ಒಪ್ಪಿಕೊಳ್ಳಿ ಎಂದು ಬೋಧಿಸಲೆತ್ನಿಸುತ್ತಾರೆ. ಈ ಮಕ್ಕಳಿಗೆ ಸಮರ್ಪಕವಾಗಿ ಹಿತವಚನ ನೀಡದೆ ಹೋದರೆ, ಉದಾತ್ತ ಮನಸಿನ ಶಿಕ್ಷಕರು ಇವರನ್ನು ಪ್ರೀತಿಸಿ ಪೋಷಿಸದೆ ಹೋದರೆ, ಅವರಲ್ಲಿ ಅನೇಕರು ಭಾವನೆಗಳ ಮತ್ತು ಭಾವೋದ್ರೇಕದ ಬಂಧಿಗಳಾಗಿ ಮಾನಸಿಕವಾಗಿ ಘಾಸಿಗೊಂಡರವಾಗಿಬಿಡುತ್ತಾರೆ. ಉಗ್ರಗಾಮಿಗಳ ಹಿಂಸೆ, ಎನ್ಕೌಂರ್ಟ ಹತ್ಯೆಗಳು ಮತ್ತು ನಿರ್ದಿಷ್ಟ ಗುರಿ ಇಟ್ಟ ಕೊಲೆಗಳು ಸಾಂಸ್ಕೃತಿಕ ವಾತಾವರಣವನ್ನು ಕಲುಷಿತಗೊಳಿಸಲಾಗ, ಭಯ ಭೀತಿ ಎಲ್ಲೆಡೆ ವ್ಯಾಪಿಸುತ್ತದೆ, ಅನುಮಾನಗಳ ಹುತ್ತ ಸೃಷ್ಟಿಯಾಗುತ್ತದೆ, ಸಂವಹನ ಪ್ರಕ್ರಿಯೆ ಇಲ್ಲವಾಗುತ್ತದೆ. ಇಂತಹ ವಿಷಮ ಸನ್ನಿವೇಶದಲ್ಲಿ ಶಿಕ್ಷಣವನ್ನು ವಿಮೋಚನೆಗೊಳಿಸುವ ಒಂದು ಪದ್ಧತಿಯನ್ನು ಊಹಿಸಿಕೊಳ್ಳಲು ಸಾಧ್ಯವೇ ?

ರಜನಿಬಾಲಾ ಒಬ್ಬ ಸೆಲೆಬ್ರಿಟಿ ಆಗಿರಲಿಲ್ಲ. ಕಾಶ್ಮೀರದ ಬಹುತೇಕ ಎಲ್ಲ ರಾಜಕೀಯ ನಾಯಕರೂ, ಮೆಹಬೂಬಾ ಮುಫ್ತಿ ಇಂದ ಓರ್ಮ ಅಬ್ದುಲ್ಲಾವರೆಗೆ, ಭಯೋತ್ಪಾದಕ ಕೃತ್ಯವನ್ನು ಖಂಡಿಸಿದ್ದರೂ, ಬಹುಬೇಗನೆ ಆಕೆಯನ್ನು ಮರೆತುಬಿಡುತ್ತೇವೆ. ಹೆಚ್ಚೆಂದರೆ ಭಾರತ ಸರ್ಕಾರದ ವತಿಯಿಂದ ಒಂದು ಪತ್ರಿಕಾಗೋಷ್ಟಿ ನಡೆಯಬಹುದು, ಹೊಸ ಅಂಕಿಅಂಶಗಳನ್ನು ಒದಗಿಸಬಹುದು, ಬಂಧಿಸಲ್ಪಟ್ಟ ಭಯೋತ್ಪಾದಕರು, ಕೊಲ್ಲಲ್ಪಟ್ಟ ಉಗ್ರಗಾಮಿಗಳ ಸಂಖ್ಯೆಯನ್ನು ನೀಡಬಹುದು ಮತ್ತು ಭಾರತದ ವಿರುದ್ಧ ಪಿತೂರಿ ನಡೆಸುತ್ತಿರುವ ಪಾಕಿಸ್ತಾನದ ಬಗ್ಗೆ ಮಾಹಿತಿ ಒದಗಿಸಬಹುದು. ಅತಿರೇಕದ ರಾಷ್ಟ್ರೀಯತೆಯನ್ನೇ ಅವಲಂಬಿಸಿರುವ ಆಳುವ ಪಕ್ಷವು, ಸಂವಿಧಾನ ಅನುಚ್ಚೇದ ೩೭೦ರ ರದ್ದತಿಯ ಪರಿಣಾಮವಾಗಿಯೇ ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಸಹಜ ಸ್ಥಿತಿಗೆ ಮರಳಿದೆ ಎಂದು ಹೇಳಬಹುದು. ಏತನ್ಮಧ್ಯೆ ಕಾಶ್ಮೀರಿ ಪಂಡಿತರು ತಮ್ಮನ್ನು ಸುರಕ್ಷಿತ ವಲಯಕ್ಕೆ ರವಾನಿಸದೆ ಹೋದರೆ ತಾವು ಕಣಿವೆಯಿಂದ ಸಾಮೂಹಿಕ ವಲಸೆ ಹೋಗುವುದಾಗಿ ಬೆದರಿಕೆ ಹಾಕಬಹುದು.

ಈ ಘಟನಾವಳಿಗಳ ನಡುವೆ , ರಜನಿ ಬಾಲಾ ಅವರಂತಹ ಅಪರಿಚಿತ ಸರಳ ವ್ಯಕ್ತಿಯ ದುರಂತ ಸಾವು ನಮ್ಮನ್ನು ಏಕಾದರೂ ಬಾಧಿಸಬೇಕು ? ವಾಸ್ತವ ಎಂದರೆ ಭಾರತದ ಮುಖ್ಯವಾಹಿನಿಯಲ್ಲಿ ಹಿತವಲಯದ ನಾಗರಿಕರಿಗೆ ಕಾಶ್ಮೀರ ಒಂದು ಸುಂದರ ಪ್ರವಾಸೀ ತಾಣವಾಗಿಯೇ ಕಾಣುತ್ತದೆ. ದಾಲ್ ಲೇಕ್‌ನಲ್ಲಿ , ಸೋನಾ ಮಾರ್ಕ್‌ನಲ್ಲಿ ತಮ್ಮ ಮಧುರ ಕ್ಷಣಗಳನ್ನು ಆ ಕ್ಷಣದಲ್ಲೇ ಸಾಮಾಜಿಕ ಮಾಧ್ಯಮಗಳ ಮೂಲಕ ಹಂಚಿಕೊಳ್ಳುತ್ತಾ ಆನಂದಿಸುತ್ತಾರೆ. ಈ ಹಿತವಲಯದ ನಾಗರಿಕರಿಗೆ, ದೆಹಲಿಯಲ್ಲಿ ಕುಳಿತಿರುವ ಉನ್ಮತ್ತ ರಾಷ್ಟ್ರೀಯವಾದಿಗಳು ಕಾಶ್ಮೀರ ಕಣಿವೆಯಲ್ಲಿ ಸಹಜ ಸ್ಥಿತಿ ಇರುವಂತೆ ಕ್ರಮ ಕೈಗೊಳ್ಳುವುದು ಅಪ್ಯಾಯಮಾನವಾಗಿ ಕಾಣುತ್ತದೆ. ನಮ್ಮ ಅಬ್ಬರದ ವಿದ್ಯುನ್ಮಾನ ಸುದ್ದಿವಾಹಿನಿಗಳ ನಿರೂಪಕರು , ಈ ನಂಜಿನ ಯುಗದ ಹೊಸ ಉಪನ್ಯಾಸಕರು , ಕಾಶ್ಮೀರದಲ್ಲಿ ಸಹಜ ಸ್ಥಿತಿಯನ್ನು ಕಾಪಾಡಲು ಇರುವ ಏಕೈಕ ಮಾರ್ಗ ಸೇನಾ ನಿಯಂತ್ರಣವನ್ನು ಹೆಚ್ಚಿಸುವುದು ಅಥವಾ ಇಡೀ ಪ್ರದೇಶವನ್ನು ಬೇಹುಗಾರಿಕೆಗೊಳಪಡಿಸುವುದು ಎಂದು ವ್ಯಾಖ್ಯಾನಿಸುತ್ತಾರೆ.

ಆದರೆ ರಜನಿ ಬಾಲಾ ವಿಭಿನ್ನ ವ್ಯಕ್ತಿ. ಆಕೆ ತಮ್ಮ ಕಾರ್ಯಕ್ಷೇತ್ರದಲ್ಲಿದ್ದರು. ಸಂಬಾ ಜಿಲ್ಲೆಯ ತಮ್ಮ ಮನೆಯಿಂದ ಹೊರಬಂದು ಕುಲ್ಗಾಮ್‌ನಲ್ಲಿ ಕಳೆದ ೧೪ ವರ್ಷಗಳಿಂದ ಜೀವನ ನಡೆಸುತ್ತಿದ್ದರು. ಮೇಲಾಗಿ ಅವರು ಒಬ್ಬ ಶಿಕ್ಷಕಿ. ಉದ್ದೇಶಿತ ಹತ್ಯೆಗಳು ತೀವ್ರವಾಗುತ್ತಿದ್ದ ವಾತಾವರಣದಲ್ಲಿ ಸಹಜವಾಗಿಯೇ ಸೃಷ್ಟಿಯಾಗಿದ್ದ ಮಾನಸಿಕ ಭೀತಿ ಆಕೆಯನ್ನು ಆವರಿಸಿದ್ದರೂ, ಯಾವುದೇ ಒಬ್ಬ ಶಿಕ್ಷಕಿಯು ಯೋಚಿಸುವಂತೆ, ಮಕ್ಕಳನ್ನು ಕುಸುಮಗಳಂತೆ ವಿಕಸಿಸುವುದನ್ನು ನೋಡಲು, ಪ್ರಕ್ಷುಬ್ಧ ಪ್ರದೇಶದ ಶಾಲೆಯೊಂದರಲ್ಲಿ ಪ್ರೀತಿಯ ಬೀಜಗಳನ್ನು ಬಿತ್ತುವ ಆಲೋಚನೆಯೊಂದಿಗೆ ಆಕೆ ಶಾಲೆಗೆ ಬಂದಿದ್ದರು. ಒಂದು ರೀತಿಯಲ್ಲಿ ಇದು ಅಸಾಧಾರಣ ಸನ್ನಿವೇಶದಲ್ಲಿ ಸಾಧಾರಣವಾದ ಸಂಗತಿಯಾಗಿತ್ತು. ಮೃತ್ಯುವಾಹಕ ಭಯೋತ್ಪಾದಕರು ಆಕೆಯನ್ನು ಹತ್ಯೆ ಮಾಡಿದ್ದರು.

(ಮೂಲ : ಇಂಡಿಯನ್ ಎಕ್ಸ್‌ಪ್ರೆಸ್ ) ಅನುವಾದ : ನಾ ದಿವಾಕರ

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

5 mins ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

33 mins ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

2 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

2 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

3 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

4 hours ago