ಸುಪ್ರೀಂಕೋರ್ಟ್ ದೂರು ಆಲಿಸಲು ವಿಳಂಬ ಮಾಡಿದರೆ ದೂರುವುದಾರೂ ಯಾರಿಗೆ?

ಸಂಪಾದಕೀಯ

 

ಹರಿದ್ವಾರದಲ್ಲಿ ನಡೆದ ‘ಧರ್ಮ ಸಂಸದ್’ ಸಭೆಯಲ್ಲಿ ಮುಸ್ಲಿಂಮರ ನರಮೇಧಕ್ಕೆ ಕರೆ ನೀಡಿದ ಘಟನೆ ಕುರಿತಂತೆ ಸುಪ್ರೀಂ ಕೋರ್ಟ್ ವಿಳಂಬ ಧೋರಣೆ ಅನುಸರಿಸುವ ಬಗ್ಗೆ ಪ್ರಾಜ್ಞರ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.  ಈ ಸಂಬಂಧ ಸಲ್ಲಿಸಲಾದ  ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇದೀಗ ವಿಚಾರಣೆಗೆ ಅಂಗೀಕರಿಸಿದ ಸುಪ್ರೀಂ ಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ದುರಾದೃಷ್ಟವಶಾತ್ ಸುಪ್ರೀಂ ಕೋರ್ಟ್ ಈ ಪ್ರಕರಣದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ತೆಗೆದುಕೊಂಡಿದ್ದು ಮೂರು ವಾರಗಳಷ್ಟು ಸುಧೀರ್ಘ ಅವಧಿ.

ಡಿಸೆಂಬರ್ ೧೭ ರಂದು ಹರಿದ್ವಾರದಲ್ಲಿ, ೧೯ರಂದು ದೆಹಲಿಯಲ್ಲಿ ನಡೆದ ಸಭೆಗಳಲ್ಲಿ ಮುಸ್ಲಿಮರ ನರಮೇಧಕ್ಕೆ ಕರೆ ನೀಡಲಾಗಿತ್ತು. ಕರೆ ನೀಡಿದವರ ಮಾಹಿತಿ ಪೊಲೀಸರ ಬಳಿಯಿದ್ದರೂ ತಕ್ಷಣ ಕ್ರಮ ಕೈಗೊಂಡಿರಲಿಲ್ಲ. ದೇಶವ್ಯಾಪಿ ತೀವ್ರ ಆಕ್ರೋಶವ್ಯಕ್ತವಾದ ನಂತರವಷ್ಟೇ ಕೆಲವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆದರೆ, ಯಾರನ್ನೂ ಬಂಧಿಸಿಲ್ಲ. ಈ ಘಟನೆಯನ್ನು ಪ್ರಧಾನಿಗಳಾಗಲೀ, ಉತ್ತರಾಖಂಡದ ಮುಖ್ಯಮಂತ್ರಿಗಳಾಗಲೀ ಖಂಡಿಸಿಲ್ಲ.

ನರಮೇಧಕ್ಕೆ ಕರೆ ನೀಡುವುದು ಅತ್ಯಂತ ಘೋರ ಅಪರಾಧ.  ಭಾರತವೂ ಸೇರಿದಂತೆ ೧೫೨ ದೇಶಗಳು ಒಪ್ಪಿ ಸಹಿ ಹಾಕಿರುವ ವಿಶ್ವಸಂಸ್ಥೆಯ ಜಿನೋಸೈಡ್ ಕನ್ವೆನ್ಷನ್, ಮೂರನೇ ವಿಧಿಯಡಿ, ‘ನರಮೇಧಕ್ಕೆ ಕರೆ ನೀಡುವುದು, ನರಮೇಧಕ್ಕೆ ಪ್ರೋತ್ಸಾಹಿಸುವುದು ನರಮೇಧ ನಡೆಸಿದಷ್ಟೇ ಘೋರ ಅಪರಾಧ’ ಎಂದು ಘೋಷಿಸಲಾಗಿದೆ.

ಘಟನೆ ನಡೆದ ೧೦ ದಿನಗಳಾದರೂ ಮಧ್ಯ ಪ್ರವೇಶಿಸದ ಕಾರಣ, ಕೇಂದ್ರ ಮಾಜಿ ಕಾನೂನು ಸಚಿವರು ಸೇರಿದಂತೆ ದೇಶದ ೭೬ ಮಂದಿ ಹಿರಿಯ ನ್ಯಾಯವಾದಿಗಳು ತುರ್ತು ಕ್ರಮಕೈಗೊಳ್ಳುವಂತೆ ಸುಪ್ರೀಂ ಕೋರ್ಟಿಗೆ ಪತ್ರ ಬರೆದಿದ್ದರು. ಅಷ್ಟಾದರೂ ಸುಪ್ರೀಂ ಕೋರ್ಟ್ ಈ ಪ್ರಕರಣದ ಬಗ್ಗೆ ಚರಾಕ ಎತ್ತಿರಲಿಲ್ಲ. ನರಮೇಧಕ್ಕೆ ಕರೆ ನೀಡುವುದು ದೇಶದ ಜನರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತೆ. ಸುಪ್ರೀಂಕೋರ್ಟಿನ ಮೂಲ ಆಶಯವೇ ದೇಶದ ನಾಗರಿಕರ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವುದಾದ್ದರಿಂದ ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಬಹುದಿತ್ತು. ತುರ್ತಾಗಿ ಉತ್ತರಿಸುವಂತೆ ತಾಕೀತು ಮಾಡಬಹುದಿತ್ತು. ಆದರೆ, ೭೬ ಮಂದಿ ಹಿರಿಯ ನ್ಯಾಯವಾದಿಗಳ ಪತ್ರ ತಲುಪಿದ ನಂತರವೂ ಸುಪ್ರೀಂ ಕೋರ್ಟ್ ಮೌನಕ್ಕೆ ಮೊರೆಹೋಗಿದ್ದು ಆಘಾತಕಾರಿ ಬೆಳವಣಿಗೆಯೇ ಹೌದು.

 

ಕೋವಿಡ್ ಮೊದಲನೆ ಅಲೆ ಅಪ್ಪಳಿಸಿ, ಏಕಾಏಕಿ ಲಾಕ್ಡೌನ್ ಮಾಡಿದಾಗ ವಲಸೆ ಕಾರ್ಮಿಕರು ಬೀದಿಪಾಲಾದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸುವಂತೆ ನ್ಯಾಯವಾದಿಗಳು ಸುಪ್ರೀಂ ಕೋರ್ಟಿಗೆ ಮನವಿ ಮಾಡಿದ್ದರು. ಆಗ ಮನವಿ ಪುರಸ್ಕರಿಸಿದ್ದ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ತುರ್ತು ನೋಟಿಸ್ ಜಾರಿ ಮಾಡಿತ್ತು. ವಲಸೆ ಕಾರ್ಮಿಕರ ಸಮಸ್ಯೆ ನಿವಾರಣೆಗೆ ತಕ್ಷಣ ಸ್ಪಂದಿಸಿದ್ದ ಸುಪ್ರೀಂ ಕೋರ್ಟ್ ಈಗ ಏಕೆ ವಿಳಂಬ ಧೋರಣೆ ಅನುಸರಿಸಿತು? ಸ್ವರೂಪ ಬೇರೆ ಬೇರೆ ಇದ್ದರೂ, ನರಮೇಧಕ್ಕೆ ಕರೆ ನೀಡುವಂತಹ ಅಪರಾಧವು ವಲಸೆ ಕಾರ್ಮಿಕರ ಸಮಸ್ಯೆಯಷ್ಟು ಗಂಭೀರವಲ್ಲವೇ? ಇಂತಹ ಸಂದರ್ಭದಲ್ಲಿ ಕಾರ್ಯಾಂಗವು ನಿಷ್ಕ್ರಿಯವಾದಾಗ ತ್ವರಿತವಾಗಿ ಸ್ಪಂದಿಸಬೇಕಾದುದು ಸುಪ್ರೀಂ ಕೋರ್ಟಿನ ನೈತಿಕ ಕರ್ತವ್ಯವಲ್ಲವೇ? ಈ ಪ್ರಕರಣದ ಸಂಬಂಧ ಸುಪ್ರೀಂಕೋರ್ಟ್ ಸ್ವಯಂಪ್ರೇರಣೆಯಿಂದ ಕ್ರಮಕ್ಕೆ ಮುಂದಾಗದಿರಲು ಯಾವುದಾದರೂ ಒತ್ತಡ ಇತ್ತೆ? ಈ ಎಲ್ಲಾ ಪ್ರಶ್ನೆಗಳೂ ಪ್ರಶ್ನೆಗಳಾಗಿೆುೀಂ ಉಳಿದುಕೊಂಡಿವೆ.

 

ಸಂವಿಧಾನದ ಸಂರಕ್ಷಣೆಯ ಹೊಣೆಹೊತ್ತಿರುವ ಸುಪ್ರೀಂಕೋರ್ಟ್ ಇತ್ತೀಚಿನ ಕೆಲ ಪ್ರಕರಣಗಳಲ್ಲಿ ಎಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕಿತ್ತೋ ಅಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಿಲ್ಲ ಎಂಬುದು ಬಹಿರಂಗ ಸತ್ಯ. ಈ ಬಗ್ಗೆ ವ್ಯಾಪಕವಾಗಿ ಚರ್ಚೆಗಳು ನಡೆಯುತ್ತಲೇ ಇವೆ. ಆಯ್ದ ಪ್ರಕರಣಗಳಲ್ಲಿ ನ್ಯಾಯಾಂಗದ ಕ್ರಿಯಾಶೀಲತೆ ನಿರೀಕ್ಷೆ ಮೀರಿರುತ್ತದೆ. ಹಾಗೆಯೇ ಆಯ್ದ ಪ್ರಕರಣಗಳಲ್ಲಿ, ಉದಾಹರಣೆಗೆ ನರಮೇಧಕ್ಕೆ ಕರೆ ನೀಡಿದ ಪ್ರಕರಣದಲ್ಲಿ  ಬಹುತೇಕ ನಿಷ್ಕ್ರಿಯತೆ ಎದ್ದು ಕಾಣುತ್ತಿದೆ.

ಸುಪ್ರೀಂ ಕೋರ್ಟ್ ಬಗ್ಗೆ ದೇಶದ ಜನರಿಗೆ ನಂಬಿಕೆ, ಹೆಮ್ಮೆ, ಗೌರವ ಇದ್ದೇ ಇದೆ. ಇವೆಲ್ಲವೂ ಸುಪ್ರೀಂಕೋರ್ಟ್ ಕಾಲಕಾಲಕ್ಕೆ ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ, ಶ್ರಮಮೀರಿ ನಿರ್ಹಿಸಿದ್ದರ ಫಲ. ನಾಗರಿಕರು ಈಗಲೂ ಅಂತಿಮ ‘ನ್ಯಾಯಭಿಕ್ಷೆ’ಯನ್ನು ಬೇಡುವುದು ಸುಪ್ರೀಂಕೋರ್ಟಿನಿಂದಲೇ. ಜನರ ನಂಬಿಕೆಗೆ ಕಿಂಚಿತ್ತೂ ಕುಂದಾಗದಂತೆ ಕಾರ್ಯನಿರ್ವಹಿಸುವುದು ಸುಪ್ರೀಂಕೋರ್ಟಿನ ನೈತಿಕ ಜವಾಬ್ಧಾರಿ. ಅದರಲ್ಲೂ ಕಾರ್ಯಾಂಗ ತನ್ನ ವ್ಯಾಪ್ತಿ ಮೀರಿ ಕಾರ್ಯನಿರ್ವಹಿಸುತ್ತಿರುವ ಹೊತ್ತಿನಲ್ಲಿ ನ್ಯಾಯಾಂಗದ ‘ಸಕಾರಾತ್ಮಕ ಕ್ರಿಯಾಶೀಲತೆ’ಯ ತುರ್ತು ಅಗತ್ಯವಿರುತ್ತದೆ.

 

ಹೀಗಾಗಿ ತನ್ನ ಕಾರ್ಯನಿರ್ವಹಣೆಯ ಬಗ್ಗೆ ಬೇರೆಯವರು ಬೆರಳುತೋರಿಸುವಂತಹ ಲೋಪವನ್ನು ಸುಪ್ರೀಂಕೋರ್ಟ್ ಮಾಡಬಾರದಷ್ಟೇ!

× Chat with us