ಅಂಕಣಗಳು

ಹೊಸದಿಕ್ಕಿನತ್ತ ಚಲಿಸುತ್ತಿದೆ ರಾಜ್ಯ ರಾಜಕಾರಣ

ಅಧಿಕಾರ ಹಂಚಿಕೆ ವಿಫಲವಾದರೆ ಮಧ್ಯಂತರ ಚುನಾವಣೆಗೆ ಅಮಿತ್ ಶಾ ತಂತ್ರಗಾರಿಕೆ

ಕೆಲ ದಿನಗಳಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸುತ್ತಿರುವ ಚಟುವಟಿಕೆ ಕರ್ನಾಟಕದ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.

ಏಕೆಂದರೆ ಕೆಲ ದಿನಗಳ ಅವಧಿಯಲ್ಲಿ ಕೇಂದ್ರದ ಉಕ್ಕು ಮತ್ತು ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ರಾಜ್ಯ ಬಿಜೆಪಿಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ಪ್ರತ್ಯೇಕವಾಗಿ ಕರೆಸಿಕೊಂಡ ಅಮಿತ್ ಶಾ ರಾಜ್ಯ ರಾಜಕಾರಣದ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ.

ಮೂಲಗಳ ಪ್ರಕಾರ, ಎಚ್.ಡಿ.ಕುಮಾರಸ್ವಾಮಿ , ಬಿ.ವೈ.ವಿಜಯೇಂದ್ರ ಮತ್ತು ಆರ್.ಅಶೋಕ್ ಅವರ ಬಳಿ ಅಮಿತ್ ಶಾ ಚರ್ಚಿಸಿರುವುದು ರಾಜ್ಯ ರಾಜಕಾರಣದಲ್ಲಿ ಸಂಭವಿಸಬಹುದಾದ ಬೆಳವಣಿಗೆಗಳ ಬಗ್ಗೆ. ವಸ್ತುಸ್ಥಿತಿಯೆಂದರೆ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಅವರ ಜಾಗದಲ್ಲಿ ಮುಂದುವರಿದರೆ ಬಿಜೆಪಿ ವರಿಷ್ಠರಿಗೆ ತುಂಬ ಕೆಲಸವೇನೂ ಇಲ್ಲ. ಆದರೆ ಈ ವರ್ಷಾಂತ್ಯದ ಹೊತ್ತಿಗೆ ಬಿಹಾರ ವಿಧಾನಸಭಾ ಚುನಾವಣೆ ಮುಗಿದ ನಂತರ ಕರ್ನಾಟಕದ ರಾಜಕಾರಣದಲ್ಲಿ ಘಟಸೋಟ ಸಂಭವಿಸುತ್ತದೆ ಎಂಬುದು ಬಿಜೆಪಿ ನಾಯಕರ ಅಂದಾಜು. ಅರ್ಥಾತ್ ಮುಖ್ಯಮಂತ್ರಿ ಹುದ್ದೆಗಾಗಿ ಕಾತರಿಸುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ವರಿಷ್ಠರ ಮೇಲೆ ಒತ್ತಡ ಹೇರಿ ಸಿಎಂ ಹುದ್ದೆಯನ್ನು ತಮ್ಮದಾಗಿಸಿಕೊಳ್ಳಲು ಹೊರಟಿದ್ದಾರೆ. ಆದರೆ ಅವರ ಕೈಗೆ ಅಧಿಕಾರ ಕೊಡಲು ಸಿದ್ದರಾಮಯ್ಯ ಅವರು ತಯಾರಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದಲ್ಲಿ ಪಕ್ಷ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ತಮ್ಮ ಮತ್ತು ಡಿಕೆಶಿ ನಡುವೆ ಒಪ್ಪಂದವಾಗಿದೆ ಎಂಬುದನ್ನೇ ಸಿದ್ದರಾಮಯ್ಯ ಅವರು ಒಪ್ಪುತ್ತಿಲ್ಲ. ಮತ್ತು ಈ ಬಗ್ಗೆ ದಿಲ್ಲಿಗೇ ನುಗ್ಗಿ ಸಿದ್ದರಾಮಯ್ಯ ಅವರು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಮೊದಲನೆಯದಾಗಿ, ತಮ್ಮ ಮತ್ತು ಡಿಕೆಶಿ ನಡುವೆ ಅಽಕಾರ ಹಂಚಿಕೆ ಒಪ್ಪಂದವಾಗಿದೆ ಎಂಬುದನ್ನು ಸಿದ್ದರಾಮಯ್ಯ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಎರಡನೆಯದಾಗಿ, ಪಕ್ಷದ ಶಾಸಕಾಂಗದಲ್ಲಿ ತಮ್ಮ ಬಲ ಹೆಚ್ಚೇ ಹೊರತು, ಡಿಕೆಶಿ ಅವರದಲ್ಲ ಎಂದು ಖಡಾಖಂಡಿತವಾಗಿ ಸ್ಪಷ್ಟಪಡಿಸಿದ್ದಾರೆ.

ಇದನ್ನು ಓದಿ: ಹುಲಿಗಳ ಸಂರಕ್ಷಣೆ; ಆದಿವಾಸಿಗಳ ಹಿತರಕ್ಷಣೆ ನಡುವೆ ಇರಲಿ ಸಮನ್ವಯ

ಇದೇ ರೀತಿ ಪಕ್ಷದ ಶಾಸಕಾಂಗ ನಾಯಕನ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ತಾವು ಡಿಕೆಶಿಯನ್ನು ಮಣಿಸಿರುವುದಾಗಿ ಹೇಳಿದ ಸಿದ್ದರಾಮಯ್ಯ ಅವರು ಇಂತಹ ಮಾತುಗಳ ಮೂಲಕ ಪಕ್ಷದ ಹೈಕಮಾಂಡ್‌ಗೆ ಪರೋಕ್ಷ ಸಂದೇಶ ರವಾನಿಸಿದರು. ಅದೆಂದರೆ, ಪಕ್ಷದ ಶಾಸಕಾಂಗ ನಾಯಕನ ಆಯ್ಕೆ ಆಗಬೇಕಿರುವುದು ಶಾಸಕಾಂಗ ಸಭೆಯಲ್ಲೇ ಹೊರತು ಬೇರೆಲ್ಲೂ ಅಲ್ಲ ಎಂಬುದು. ಅರ್ಥಾತ್, ಮುಂದಿನ ದಿನಗಳಲ್ಲಿ ಸಿಎಂ ಹುದ್ದೆಯನ್ನು ಬಿಟ್ಟುಕೊಡಲು ಸೋನಿಯಾ ಗಾಂಧಿ ಅವರಾಗಲಿ, ರಾಹುಲ್ ಗಾಂಧಿ ಅವರಾಗಲಿ ತಮ್ಮನ್ನು ಕೋರಿದರೆ ಭವಿಷ್ಯದ ನಾಯಕನ ಆಯ್ಕೆ ಶಾಸಕಾಂಗ ಸಭೆಯಲ್ಲೇ ನಡೆಯಬೇಕು ಎಂಬುದು ಸಿದ್ದರಾಮಯ್ಯನವರ ಸ್ಪಷ್ಟ ನಿಲುವು. ಒಂದು ವೇಳೆ ವರಿಷ್ಠರು ಇದನ್ನು ಒಪ್ಪಿದರೆ ಸಿದ್ದರಾಮಯ್ಯ ಅವರು ಅನುಮಾನಕ್ಕೆ ಆಸ್ಪದವೇ ಇಲ್ಲದಂತೆ ದಲಿತ ನಾಯಕರೊಬ್ಬರ ಬೆನ್ನಿಗೆ ನಿಲ್ಲುತ್ತಾರೆ ಮತ್ತು ಅವರನ್ನು ಭವಿಷ್ಯದ ಮುಖ್ಯಮಂತ್ರಿ ಹುದ್ದೆಗೆ ತರಲು ಅಣಿಯಾಗುತ್ತಾರೆ.

ಈ ಅಂಶ ತಿಳಿದಿರುವುದರಿಂದಲೇ ಕಾಂಗ್ರೆಸ್ ಪಕ್ಷದ ದಲಿತ ನಾಯಕರು, ಮುಂದಿನ ಮುಖ್ಯಮಂತ್ರಿ ಹುದ್ದೆ ತಮಗೆ ದಕ್ಕಬೇಕು ಎಂದು ಪಟ್ಟು ಹಿಡಿದಿರುವುದು ಮತ್ತು ಬೃಹತ್ ಸಮಾವೇಶವೊಂದನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿರುವುದು. ವಾಸ್ತವವಾಗಿ ಸಿದ್ದರಾಮಯ್ಯ ಅವರ ಈ ಇಂಗಿತ ಜಾರಿಯಾದರೆ ಭವಿಷ್ಯದ ಮುಖ್ಯಮಂತ್ರಿ ಹುದ್ದೆಗೆ ದಲಿತ ನಾಯಕರೇ ಬರುತ್ತಾರೆ. ಮತ್ತು ಈ ಹುದ್ದೆಯ ಮೇಲೆ ಕಣ್ಣಿಟ್ಟ ಡಿ.ಕೆ.ಶಿವಕುಮಾರ್ ಅವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿಯಾಗಲಿದೆ. ಆದರೆ ಇಲ್ಲೊಂದು ಧರ್ಮಸಂಕಟವೂ ಇದೆ. ಅದೆಂದರೆ, ಭವಿಷ್ಯದ ಶಾಸಕಾಂಗ ನಾಯಕನ ಆಯ್ಕೆ ಶಾಸಕಾಂಗ ಸಭೆಯಲ್ಲೇ ನಡೆಯಬೇಕು ಎಂದಾದರೆ, ಡಿಕೆಶಿಗೆ ಅವಕಾಶ ಸಿಗುವುದಿಲ್ಲ ಎಂಬುದು ಒಂದಾದರೆ, ಡಿಕೆಶಿ ಭವಿಷ್ಯದ ಮುಖ್ಯಮಂತ್ರಿ ಹುದ್ದೆಗೆ ಬರಲು ಸಾಧ್ಯವಿಲ್ಲ ಎಂದಾದರೆ ಸಿದ್ದರಾಮಯ್ಯ ಅವರನ್ನು ಬದಲಿಸುವುದು ಏಕೆ ಎಂಬುದು ಮತ್ತೊಂದು. ಹೀಗಾಗಿ ಸಿದ್ದರಾಮಯ್ಯ ಅವರ ಲೆಕ್ಕಾಚಾರದ ಪ್ರಕಾರ, ಶಾಸಕಾಂಗ ನಾಯಕನ ಆಯ್ಕೆ ಶಾಸಕಾಂಗ ಪಕ್ಷದಲ್ಲೇ ನಡೆಯುತ್ತದೆ ಎಂದಾದರೆ ಡಿಕೆಶಿ ಅದನ್ನು ಒಪ್ಪುವುದಿಲ್ಲ. ಏಕೆಂದರೆ ಸಿದ್ದರಾಮಯ್ಯ ಅವರು ಕೆಳಗಿಳಿದು ತಾವು ಸಿಎಂ ಆಗುವುದಾದರೆ ಬೇರೆ ಮಾತು. ಆದರೆ ಶಾಸಕಾಂಗ ಸಭೆಯಲ್ಲೇ ನಾಯಕನ ಆಯ್ಕೆ ನಡೆಯಬೇಕು ಎಂದಾದರೆ ಡಿಕೆಶಿ ಮುಂದಿರುವ ಅವಕಾಶ ಕಡಿಮೆಯಾಗುತ್ತದೆ.

ಹೀಗಾಗಿ ಡಿಕೆಶಿ ಇದನ್ನು ಒಪ್ಪವುದಿಲ್ಲ. ಅಲ್ಲದೇ ವರಿಷ್ಠರೇನಾದರೂ ಇಂತಹ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದರೆ ಡಿಕೆಶಿ ತಿರುಗಿ ಬೀಳುತ್ತಾರೆ. ಡಿಕೆಶಿ ತಿರುಗಿ ಬಿದ್ದರೆ ಸರ್ಕಾರ ಅಸ್ಥಿರವಾಗುತ್ತದೆ ಎಂದಲ್ಲ, ಆದರೆ ಸಿಎಂ ಹುದ್ದೆಗಾಗಿ ಜಪಿಸುತ್ತಿರುವ ಡಿಕೆಶಿ ಬಂಡಾಯಕ್ಕೆ ಮುಂದಾಗುವುದಂತೂ ನಿಶ್ಚಿತ. ಡಿಕೆಶಿ ಬಂಡಾಯ ಹೂಡಿದರೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಪತ್ತಿಗೆ ಸಿಲುಕುವುದಿಲ್ಲ. ಏಕೆಂದರೆ, ಶಾಸಕಾಂಗ ಪಕ್ಷದಲ್ಲಿ ಸಿದ್ದರಾಮಯ್ಯ ಅವರ ಬಲ ಹೆಚ್ಚು. ಬಿಜೆಪಿ ವರಿಷ್ಠರ ಅನುಮಾನವೆಂದರೆ, ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಡಿಕೆಶಿ ದೊಡ್ಡ ಪ್ರಮಾಣದ ಬಂಡವಾಳ ಹೂಡಿದ್ದಾರೆ. ಹೀಗಾಗಿ ಅವರಿಗೆ ಒಂದು ಬಾರಿ ಸಿಎಂ ಹುದ್ದೆ ದಕ್ಕಿಸಿಕೊಡುವ ಇಚ್ಛೆ ಸೋನಿಯಾ ಮತ್ತು ಪ್ರಿಯಾಂಕ ಗಾಂಧಿ ಅವರಲ್ಲಿದೆ.

ಇದನ್ನು ಓದಿ: ಗಗನಚುಕ್ಕಿ ಚಲಪಾತೋತ್ಸವಕ್ಕೆ ವರ್ಣರಂಚಿತ ತೆರೆ

ಹೀಗಾಗಿ ಬಿಹಾರ ವಿಧಾನಸಭೆ ಚುನಾವಣೆ ಮುಗಿದ ನಂತರ ಅವರು, ಅಧಿಕಾರ ಬಿಟ್ಟುಕೊಡುವಂತೆ ಸಿದ್ದರಾಮಯ್ಯ ಅವರನ್ನು ಕೋರುವ ಸಾಧ್ಯತೆ ಜಾಸ್ತಿ. ಹೀಗೆ ಕೋರಿದಾಗ ಸಿದ್ದರಾಮಯ್ಯ ಅವರು ಭವಿಷ್ಯದ ನಾಯಕನ ಆಯ್ಕೆ ಶಾಸಕಾಂಗ ಪಕ್ಷದಲ್ಲೇ ನಡೆಯಲಿ ಎನ್ನುತ್ತಾರೆ. ಆದರೆ ಸೋನಿಯಾ ಗಾಂಧಿ ಅವರು ಇದನ್ನು ಒಪ್ಪದೆ ಹೋದರೆ ಸರ್ಕಾರಕ್ಕೆ ಗಂಡಾಂತರ ಶುರುವಾಗುತ್ತದೆ ಎಂಬುದು ಬಿಜೆಪಿ ವರಿಷ್ಠರ ಲೆಕ್ಕಾಚಾರ. ಇಂತಹ ಲೆಕ್ಕಾಚಾರ ಇರುವುದರಿಂದಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆ ಸಿಕ್ಕ ನಂತರ ಕರ್ನಾಟಕದಲ್ಲಿ ಬಿಜೆಪಿ-ಜಾ.ದಳ ನಾಯಕರು ಕ್ರಿಯಾಶೀಲರಾಗಿದ್ದಾರೆ. ಬಿಜೆಪಿ ನಾಯಕರು ಭವಿಷ್ಯದ ಸಿದ್ಧತೆಗಾಗಿ ತುರ್ತು ಕಾರ್ಯಾಗಾರವನ್ನು ಹಮ್ಮಿಕೊಳ್ಳುತ್ತಿದ್ದಾರೆ. ಈ ಚರ್ಚೆಯ ಮೂಲ ಉದ್ದೇಶ ಮಧ್ಯಂತರ ಚುನಾವಣೆಗೆ ಅಣಿಯಾಗಿ ಎಂಬುದೇ ಹೊರತು ಬೇರೇನಿಲ್ಲ.

ಪರಿಣಾಮ ಯುದ್ಧ ಕಾಲದಲ್ಲಿ ಶಸಾಭ್ಯಾಸ ಮಾಡುವುದಕ್ಕಿಂತ ಮುಂಚಿತವಾಗಿಯೇ ಶಸಾಭ್ಯಾಸ ಮಾಡುವುದು ಒಳ್ಳೆಯದು ಎಂಬುದು ಅವರ ಯೋಚನೆ. ಪರಿಣಾಮ ಕರ್ನಾಟಕದ ರಾಜಕಾರಣ ಹೊಸ ದಿಕ್ಕಿನತ್ತ ಚಲಿಸುತ್ತಿದೆ. ಮುಂದೇನು ಕತೆಯೋ?

” ಮುಂದಿನ ದಿನಗಳಲ್ಲಿ ಸಿಎಂ ಹುದ್ದೆಯನ್ನು ಬಿಟ್ಟುಕೊಡಲು ಸೋನಿಯಾ ಗಾಂಧಿ ಅವರಾಗಲಿ, ರಾಹುಲ್ ಗಾಂಧಿ ಅವರಾಗಲಿ ತಮ್ಮನ್ನು ಕೋರಿದರೆ ಭವಿಷ್ಯದ ನಾಯಕನ ಆಯ್ಕೆ ಶಾಸಕಾಂಗ ಸಭೆಯಲ್ಲೇ ನಡೆಯಬೇಕು ಎಂಬುದು ಸಿದ್ದರಾಮಯ್ಯನವರ ಸ್ಪಷ್ಟ ನಿಲುವು.”

-ಬೆಂಗಳೂರು ಡೈರಿ 
ಆರ್.ಟಿ.ವಿಠ್ಠಲಮೂರ್ತಿ 

ಆಂದೋಲನ ಡೆಸ್ಕ್

Recent Posts

ಹನೂರು | ಕಾಡಾನೆದಾಳಿಗೆ 500ಕ್ಕೂ ಹೆಚ್ಚು ಬಾಳೆ ನಾಶ

ಹನೂರು : ಏಕ ಕಾಲದಲ್ಲಿ ಬುಧವಾರ ತಡರಾತ್ರಿ ಕಾಡಾನೆಗಳು ರೈತರ ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳ ಮೇಲೆ ದಾಳಿ ನಡೆಸಿ ಸುಮಾರು…

3 mins ago

ಪರಿಶ್ರಮದಿಂದ ಮಾತ್ರ ಬದುಕು ರೂಪಿಸಿಕೊಳ್ಳಲು ಸಾಧ್ಯ : ಹೆಚ್ಚುವರಿ ಆಯುಕ್ತೆ ವೀಣಾ

ಮೈಸೂರು : ಸ್ಪರ್ಧಾತ್ಮಕ ಜಗತ್ತು ಸಾಗರದಂತೆ. ಇವತ್ತಿನ ಸ್ಪರ್ಧಾತ್ಮಕ ಸಮಾಜದಲ್ಲಿ ಹೆಚ್ಚಿನ ಬದಲಾವಣೆಗಳು, ಒತ್ತಡಗಳಿದ್ದು, ಎಲ್ಲದಕ್ಕೂ ಸಿದ್ಧರಿರಬೇಕು. ನಿರಂತರ ಅಭ್ಯಾಸ…

15 mins ago

ಪ್ರೇಮಿಗಳ ಆತ್ಮಹತ್ಯೆ ; ಪೊನ್ನಾಚಿ ಗ್ರಾಮದಲ್ಲಿ ದುರಂತ

ಹನೂರು : ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಇಬ್ಬರು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಹನೂರು…

2 hours ago

ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷೆ ಮೀರಿ ಜನಬೆಂಬಲ: ಸಿಎಂ ಸಿದ್ದರಾಮಯ್ಯ

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ ದೊರೆಯುತ್ತಿದ್ದು, ಅಭಿವೃದ್ಧಿ ಮಾಡದ ಬಿಜೆಪಿಯ ಸತ್ಯವನ್ನು ಜನರು ಅರಿತಿದ್ದಾರೆ…

3 hours ago

ಎಲ್ಲಾ ರಾಜ್ಯದಲ್ಲೂ ದ್ವಿಭಾಷಾ ಶಿಕ್ಷಣದ ವ್ಯವಸ್ಥೆ ಜಾರಿಯಲ್ಲಿದೆ: ಸಚಿವ ಮಧುಬಂಗಾರಪ್ಪ

ಬೆಂಗಳೂರು: ಎಲ್ಲಾ ರಾಜ್ಯದಲ್ಲೂ ದ್ವಿಭಾಷಾ ಶಿಕ್ಷಣದ ವ್ಯವಸ್ಥೆ ಜಾರಿಯಲ್ಲಿದೆ ಎಂದು ಶಾಲಾ ಶಿಕ್ಷಣ ಸಾಕ್ಷರತಾ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು,…

3 hours ago

ಬೇಸಿಗೆಯ ಉಷ್ಣತೆ ಹೆಚ್ಚಾದಂತೆ ರಾಜ್ಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ

ಬೆಂಗಳೂರು: ಬೇಸಿಗೆಯ ಉಷ್ಣತೆ ಹೆಚ್ಚಾದಂತೆ ರಾಜ್ಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ ಎಂದು ರಾಜ್ಯ ಮಟ್ಟದ ಹವಾಮಾನ ವೀಕ್ಷಣಾ…

3 hours ago