Star Saroja Devi Shone as the Jewel of Kannada Cinema
ವೈಡ್ ಆಂಗಲ್
ಬಾ.ನಾ.ಸುಬ್ರಹ್ಮಣ್ಯ
ಪ್ರತಿಭೆಯನ್ನು ಗೌರವಿಸುವುದರಲ್ಲಿ ತಮಿಳುನಾಡು ಮುಂದೆ ಎನ್ನುವ ಮಾತಿದೆ. ಹಲವು ಪ್ರತಿಭೆಗಳು ವಿಶೇಷವಾಗಿ ತಾರೆಯರಿಗೆ ಇದು ಹೆಚ್ಚು ಅನ್ವಯವಾಗುವ ಮಾತು. ಅಲ್ಲಿ ಭಾಷೆ ತೊಡಕಾಗಲಿಲ್ಲ. ಮಲಯಾಳ ಮೂಲದ ಎಂಜಿಆರ್ ಜನಪ್ರಿಯ ನಟ ಆದದ್ದಷ್ಟೇ ಅಲ್ಲ, ಮುಂದೆ ಅಲ್ಲಿನ ಮುಖ್ಯಮಂತ್ರಿ ಕೂಡ ಆದರು. ಕರ್ನಾಟಕದಿಂದ ಹೋದ ತಾರೆ, ನಟಿ ಜಯಲಲಿತಾ ಅದೇ ಹಾದಿಯಲ್ಲಿ ಸಾಗಿದರು. ನಲವತ್ತರ ದಶಕದಿಂದಲೇ ಅಲ್ಲಿ ನೆಲೆಯೂರಿದ್ದ ನಟಿ, ನಿರ್ಮಾಪಕಿ ಎಂ.ವಿ.ರಾಜಮ್ಮ ಕರ್ನಾಟಕದ ಜೊತೆ ತಮಿಳುನಾಡನ್ನು ಹೋಲಿಸುತ್ತಾ, ಅಲ್ಲಿನ ಮಂದಿ ಪ್ರತಿಭಾವಂತರಿಗೆ ನೀಡುವ ಗೌರವದ ಕುರಿತು ಹೇಳಿದ್ದರು. ತಮಿಳು ಚಿತ್ರಪ್ರೇಮಿಗಳ ಕಣ್ಮಣಿಯಾಗಿರುವ ಕನ್ನಡಿಗ ರಜನಿಕಾಂತ್ ನಮ್ಮ ಕಣ್ಣ ಮುಂದಿರುವ ಉದಾಹರಣೆ.
ನಮ್ಮನ್ನಗಲಿದ ತಾರೆ ಬಿ. ಸರೋಜಾದೇವಿ ಈ ಪ್ರಸ್ತಾಪಕ್ಕೆ ಕಾರಣ. ತಮಿಳುನಾಡಿನಲ್ಲಿ ಅತ್ಯಂತ ಜನಪ್ರಿಯ ತಾರೆಯಾಗಿ ಮೆರೆದ, ಕನ್ನಡದ ಈ ಪ್ರತಿಭೆ, ತೆಲುಗು, ಹಿಂದಿ ಚಿತ್ರರಂಗಗಳಲ್ಲೂ ತನ್ನ ಪ್ರಭೆಯನ್ನು ಬೀರಿದ್ದು ಮಾತ್ರವಲ್ಲ, ಕನ್ನಡ ಚಿತ್ರರಂಗದಲ್ಲೂ ಸೈ ಎನಿಸಿಕೊಂಡದ್ದು ಇತಿಹಾಸ. ಅಪರೂಪದಲ್ಲಿ ಅಪರೂಪ ಎನ್ನುವಂತೆ ವೃತ್ತಿ ಜೀವನ ಮತ್ತು ವೈಯಕ್ತಿಕ ಬದುಕನ್ನು ನಡೆಸಿದವರು ಸರೋಜಾದೇವಿ. ಚನ್ನಪಟ್ಟಣದ ದಶಾವರದಲ್ಲಿ ಜನಿಸಿದ ಸರೋಜಾದೇವಿ ಬೆಳೆದದ್ದು ಬೆಂಗಳೂರಿನಲ್ಲಿ. ೧೯೫೫ರಲ್ಲಿ ತೆರೆಕಂಡ ‘ಮಹಾಕವಿ ಕಾಳಿದಾಸ’ದಲ್ಲಿ ಅವರದು ಮುಖ್ಯ ಭೂಮಿಕೆ.
ಚಿತ್ರರಸಿಕರಿಗೆ ಅವರನ್ನು ಪರಿಚಯಿಸಿದ್ದು ಮೊದಲು ತೆರೆಕಂಡ ಆ ಚಿತ್ರವಾದರೂ, ಅವರು ಮೊದಲು ಬಣ್ಣ ಹಚ್ಚಿದ್ದು ‘ಶ್ರೀರಾಮ ಪೂಜಾ’ ಚಿತ್ರಕ್ಕಾಗಿ. ಆ ಚಿತ್ರ ಸರೋಜಾದೇವಿ ಮಾತ್ರವಲ್ಲದೆ ಚಿತ್ರರಂಗಕ್ಕೆ ಹಲವು ಪ್ರತಿಭಾವಂತರನ್ನು ಪರಿಚಯಿಸಿತು. ಸಂಗೀತ ಸಂಯೋಜಕ ವಿಜಯಭಾಸ್ಕರ್, ಗೀತರಚನೆಕಾರರಾಗಿ ಬಂದು ನಿರ್ದೇಶಕರಾಗಿ ಹೆಸರಾದ ಗೀತಪ್ರಿಯ, ಸಂಧ್ಯಾ (ಜಯಲಲಿತಾ ತಾಯಿ) ನಾಯಕಿಯಾಗಿ ಪರಿಚಯವಾದರು. ನಿರ್ದೇಶಕ ಕೃಷ್ಣಮೂರ್ತಿ ಅವರ ಸೋದರಳಿಯ ಎನ್. ಲಕ್ಷ್ಮೀನಾರಾಯಣ್ ಅವರು ಸಹಾಯಕ ನಿರ್ದೇಶಕರಾಗಿ ಬಂದವರು ಮುಂದೆ ನಿರ್ದೇಶಕರಾಗಿ ಕನ್ನಡದಲ್ಲಿ ಬಹುದೊಡ್ಡ ಹೆಸರಾದರು.
ಸರೋಜಾ ದೇವಿ ಅವರು ಮುಂದೆ ‘ಆಷಾಢಭೂತಿ’, ‘ಕಚದೇವಯಾನಿ’ ಚಿತ್ರಗಳಲ್ಲಿ ನಟಿಸಿದರು. ಮದರಾಸಿನಲ್ಲಿ ನಡೆಯುತ್ತಿದ್ದ ‘ಕಚದೇವಯಾನಿ’ ಚಿತ್ರದ ಚಿತ್ರೀಕರಣ ಸಮಯದಲ್ಲಿ ಆ ಸೆಟ್‌ಗೆ ಭೇಟಿ ನೀಡಿದ ತಮಿಳು ಚಿತ್ರರಂಗದ ಖ್ಯಾತ ನಟ ಎಂ.ಜಿ. ರಾಮಚಂದ್ರನ್, ಸರೋಜಾದೇವಿ ಅವರ ಪ್ರತಿಭೆಯನ್ನು ಗಮನಿಸಿ ತಮ್ಮ ‘ನಾಡೋಡಿ ಮನ್ನನ್’ ಚಿತ್ರದಲ್ಲಿ ಅಭಿನಯಿಸಲು ಆಹ್ವಾನಿಸಿದರು. ಅದು ಹೊಸ ಇತಿಹಾಸವೊಂದರ ಆರಂಭವಾಯಿತು. ತಮಿಳು ಚಿತ್ರರಸಿಕರ ಕಣ್ಮಣಿಯಾದರು ಸರೋಜಾದೇವಿ. ಎಂಜಿಆರ್ ಜೋಡಿಯಾಗಿ ೨೮ ಚಿತ್ರಗಳಲ್ಲಿ ನಟಿಸಿದ ಅವರು ಶಿವಾಜಿ ಗಣೇಶನ್, ಜೆಮಿನಿ ಗಣೇಶನ್ ಅವರ ಜೋಡಿಯಾಗಿಯೂ ನಟಿಸಿದರು. ತಾರಾ ಸ್ಪರ್ಧೆಯ ಆ ದಿನಗಳಲ್ಲಿ, ಎಂಜಿಆರ್ ಮತ್ತು ಶಿವಾಜಿ ಗಣೇಶನ್ ಅವರಿಬ್ಬರ ಚಿತ್ರಗಳಲ್ಲೂ ಜೋಡಿಯಾಗಿ ನಟಿಸಿ, ಸೈ ಅನ್ನಿಸಿಕೊಂಡವರು ಸರೋಜಾದೇವಿ.
ತಮಿಳಿಗಷ್ಟೇ ಅವರು ಸೀಮಿತವಾಗಲಿಲ್ಲ. ಎನ್‌ಟಿಆರ್ ಜೊತೆ ‘ಪಾಂಡುರಂಗ ಮಹಾತ್ಮಂ’ ಚಿತ್ರದಲ್ಲಿ ನಟಿಸುವ ಮೂಲಕ ತೆಲುಗು ಚಿತ್ರಗಳಲ್ಲಿಯೂ ಅಭಿನಯಿಸಲು ಆರಂಭಿಸಿದರು. ಬೆನ್ನಲ್ಲೇ ಹಿಂದಿ ಚಿತ್ರ ‘ಪೈಗಾಮ್’. ಅದು ಜೆಮಿನಿ ಸ್ಟುಡಿಯೋದ ವಾಸನ್ ಕೈಗೆತ್ತಿಕೊಂಡ ಚಿತ್ರ. ತಮಿಳು ಹಾಗೂ ಹಿಂದಿಯಲ್ಲಿ. ಹಿಂದಿಯಲ್ಲಿ ದಿಲೀಪ್ ಕುಮಾರ್ ಹಾಗೂ ವೈಜಯಂತಿ ಮಾಲಾ ಅಭಿನಯದಲ್ಲಿ ‘ಪೈಗಾಮ್’ನಲ್ಲಿ ವೈಜಯಂತಿಮಾಲಾ ಅವರ ತಂಗಿಯ ಪಾತ್ರಕ್ಕೆ ಸರೋಜಾದೇವಿ ಅವರ ಹೆಸರನ್ನು ದಿಲೀಪ್ ಕುಮಾರ್ ಸೂಚಿಸಿದರಂತೆ. ತಮಿಳು ಹಾಗೂ ಹಿಂದಿಗಳೆರಡರಲ್ಲೂ ವೈಜಯಂತಿಮಾಲಾ ಅವರ ತಂಗಿಯಾಗಿ ಸರೋಜಾದೇವಿ ನಟಿಸಿದರು. ಚಿತ್ರರಂಗಕ್ಕೆ ಕಾಲಿಟ್ಟ ನಾಲ್ಕು ವರ್ಷಗಳಲ್ಲಿ, ಸರೋಜಾದೇವಿ ಚತುರ್ಭಾಷಾ ನಟಿಯಾಗಿ ಜನಪ್ರಿಯರಾದರು. ಆ ದಿನಗಳಲ್ಲಿ ಬಿಡುವಿಲ್ಲದೆ ನಾಲ್ಕು ಶಿ-ಗಳಲ್ಲಿ ಅವರು ಕೆಲಸ ಮಾಡುತ್ತಿದ್ದರಂತೆ. ವೃತ್ತಿಬದುಕಿನ ಉತ್ತುಂಗದ ದಿನಗಳಲ್ಲಿ ಅವರು ಇಪ್ಪತ್ತು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದುದನ್ನು ಮೆಲುಕು ಹಾಕುತ್ತಿದ್ದರು.
ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ಹೆಚ್ಚು ನಟಿಸುತ್ತಿದ್ದರೂ, ಕನ್ನಡ ಚಿತ್ರಗಳ ಅವಕಾಶವನ್ನು ಅವರು ದೂರಮಾಡಲಿಲ್ಲ. ರಾಜಕುಮಾರ್ ಅವರ ಜೊತೆ ಅಭಿನಯಿಸಿದ ಮೊದಲ ಚಿತ್ರ ‘ಅಣ್ಣತಂಗಿ’. ‘ಜಗಜ್ಯೋತಿ ಬಸವೇಶ್ವರ’, ‘ಭೂಕೈಲಾಸ’, ‘ಸರ್ವಜ್ಞಮೂರ್ತಿ’, ‘ಮಲ್ಲಮ್ಮನ ಪವಾಡ’, ‘ನ್ಯಾಯವೇ ದೇವರು’, ‘ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ’, ‘ಬಬ್ರುವಾಹನ’, ‘ಭಾಗ್ಯವಂತರು’, ‘ಯಾರಿವನು’ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದರು. ಅಲ್ಲದೆ ‘ಲಕ್ಷ್ಮೀ ಸರಸ್ವತಿ’, ‘ಕಥಾ ಸಂಗಮ’, ‘ಅನುರಾಗ ಸಂಗಮ’, ‘ಬೆರೆತ ಜೀವ’, ‘ತಂದೆ ಮಕ್ಕಳು’, ‘ಪಾಪ ಪುನ್ಯ’, ‘ಪುಟ್ಮಲ್ಲಿ’ ಹೀಗೆ ಐವತ್ತರವರೆಗೆ ಕನ್ನಡ ಚಿತ್ರಗಳು. ಸಾಮಾಜಿಕ ಕಥಾನಕವಿರಲಿ, ಪೌರಾಣಿಕ, ಐತಿಹಾಸಿಕ ಚಿತ್ರಗಳ ಪಾತ್ರಗಳಿರಲಿ, ಅವುಗಳನ್ನು ಲೀಲಾಜಾಲವಾಗಿ, ಸಮರ್ಥವಾಗಿ ನಿರ್ವಹಿಸುವ ಪ್ರತಿಭೆ ಅವರದಾಗಿತ್ತು. ಕನ್ನಡದಲ್ಲಿ ‘ಕಿತ್ತೂರು ಚೆನ್ನಮ್ಮ’ನಾಗಿ ಅವರು ನಿರ್ವಹಿಸಿದ ಪಾತ್ರವನ್ನು ಇಂದಿಗೂ ಚಿತ್ರರಸಿಕರು ಮರೆತಿಲ್ಲ. ಬ್ರಿಟಿಷರ ವಿರುದ್ಧ ನಿಂತು ‘ನಿಮಗೇಕೆ ಕೊಡಬೇಕು ಕಪ್ಪ..’ ಎನ್ನುವ ಸಾಲುಗಳು ಈಗಲೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರತಿಭಾಪ್ರದರ್ಶನದ ವಿಷಯ. ಕನ್ನಡದ ಮೊದಲ ವರ್ಣಚಿತ್ರ ‘ಅಮರಶಿಲ್ಪಿ ಜಕಣಾಚಾರಿ’ ಚಿತ್ರದ ನಾಯಕಿಯಾಗಿ ನಟಿಸಿದ ಕೀರ್ತಿ ಅವರದು. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾದ ಚಿತ್ರವಿದು. ಕನ್ನಡದಲ್ಲಿ ಕಲ್ಯಾಣ್ ಕುಮಾರ್ ಜೊತೆ ಅಭಿನಯಿಸಿದರೆ, ತೆಲುಗಿನಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್ ಅವರೊಂದಿಗೆ ಕಾಣಿಸಿಕೊಂಡರು. ಹಿಂದಿ, ತೆಲುಗು, ತಮಿಳು ಚಿತ್ರರಂಗದ ಖ್ಯಾತನಾಮ ನಟರೊಂದಿಗೆ ನಟಿಸಿದ ಏಕೈಕ ನಟಿ ಸರೋಜಾದೇವಿ.
ಜಯಲಲಿತಾ ಅವರಂತೆ ರಾಜಕೀಯದತ್ತ ಒಲವು ತೋರಿಸಿದ್ದರೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅವರು ಆಡಳಿತ ನಡೆಸುತ್ತಿದ್ದರು ಎನ್ನುವವರೂ ಇದ್ದಾರೆ. ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗಲೇ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸರೋಜಾದೇವಿ ಅವರು ವಿವಾಹಾನಂತರವೂ ನಟಿಸಿದರು. ತಾಯಿಯ ಆಕ್ಷೇಪ ಇದ್ದರೂ ಪತಿಯ ಒತ್ತಾಸೆ ಅದಕ್ಕೆ ಕಾರಣವಾಗಿತ್ತು. ಮೂರು ದಶಕಗಳ ಕಾಲ ನಾಯಕಿಯಾಗಿ ೧೬೧ ಚಿತ್ರಗಳಲ್ಲಿ ನಟಿಸಿರುವ ಸರೋಜಾದೇವಿ, ಅಭಿನಯಿಸಿರುವ ಒಟ್ಟು ಚಿತ್ರಗಳು ಇನ್ನೂರರವರೆಗೆ. ವೈಯಕ್ತಿಕ ಬದುಕಿನಲ್ಲಿ ತಮ್ಮದೇ ಆದ ಶಿಸ್ತನ್ನು ರೂಢಿಸಿಕೊಂಡಿದ್ದ ಸರೋಜಾದೇವಿ ಇತರರಿಗೂ ಅದನ್ನು ಪಾಲಿಸಲು ಸಲಹೆ ನೀಡುತ್ತಿದ್ದರು. ವಿಶೇಷವಾಗಿ ತಾವು ದುಡಿಯುವ ದಿನಗಳಲ್ಲಿ ಉಳಿತಾಯ ಮಾಡಲು ಹೇಳುತ್ತಿದ್ದರು. ವೃತ್ತಿ ಬದುಕು, ವೈಯಕ್ತಿಕ ಬದುಕುಗಳ ಹೊಂದಾಣಿಕೆಯ ಅಗತ್ಯವನ್ನು ಹೇಳುತ್ತಿದ್ದರು. ಬಾಳಸಂಗಾತಿ ಶ್ರೀಹರ್ಷ ನಿಧನ, ಮಗಳು ಭುವನೇಶ್ವರಿಯ ಸಾವಿನ ನಂತರದ ದಿನಗಳ ಕುರಿತಂತೆ ಅವರು ಹೇಳಿಕೊಂಡಿದ್ದಾರೆ. ಮೊಮ್ಮಕ್ಕಳು ಮಕ್ಕಳಂತೆ ಅಜ್ಜಿಯನ್ನು ನೋಡಿಕೊಂಡದ್ದಿದೆ.
ಸರೋಜಾದೇವಿ ಅವರಿಗೆ ಸಂದ ಗೌರವ, ಪ್ರಶಸ್ತಿಗಳೋ ಹತ್ತಾರು. ತಮಿಳುನಾಡು ಸರ್ಕಾರದ ಶಿಫಾರಸಿನ ಮೂಲಕ ಅವರಿಗೆ ಪದ್ಮ ಗೌರವ ಸಂದವು. ಜೀವಮಾನ ಸಾಧನೆಗಾಗಿ ಕರ್ನಾಟಕ ಸರ್ಕಾರ ನೀಡುವ ‘ರಾಜಕುಮಾರ್ ಪ್ರಶಸ್ತಿ’, ತಮಿಳುನಾಡು ನೀಡುವ ‘ಎಂಜಿಆರ್ ಪ್ರಶಸ್ತಿ’, ಆಂಧ್ರಪ್ರದೇಶ ನೀಡುವ ‘ಎನ್‌ಟಿಆರ್ ಪ್ರಶಸ್ತಿ’ಗಳನ್ನು ಪಡೆದ ಏಕೈಕ ತಾರೆ ಸರೋಜಾದೇವಿ. ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷದಲ್ಲಿ ಕೇಂದ್ರ ಸರ್ಕಾರ ಚಿತ್ರೋದ್ಯಮದ ನಾಲ್ವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿತು. ಅದಕ್ಕೆ ದಕ್ಷಿಣ ಭಾರತದಿಂದ ಸರೋಜಾದೇವಿ ಅವರನ್ನು ಆಯ್ಕೆ ಮಾಡಿತ್ತು ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿದರೆ, ಬೆಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟೊರೇಟ್ ನೀಡಿ ಗೌರವಿಸಿತ್ತು. ಅವರಿಗೆ ಭಾರತೀಯ ಚಿತ್ರರಂಗದ ಶತಮಾನೋತ್ಸವ ವೇಳೆ ಸನ್ಮಾನ ಸಂದಿತ್ತು.ಅ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ತೀರ್ಪುಗಾರರ ಸಮಿತಿಯ ಅಧ್ಯಕ್ಷೆಯಾಗಿ ಎರಡು ಬಾರಿ ನಾಮಕರಣಗೊಂಡಿದ್ದ ಸರೋಜಾದೇವಿ ಸೆನ್ಸಾರ್ ಮಂಡಳಿಯ ಸದಸ್ಯೆಯಾಗಿ ಕೆಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. ರಾಜ್ಯ ಸರ್ಕಾರದ ಹಲವು ಸಂಸ್ಥೆಗಳಲ್ಲೂ ಅವರು ಕೆಲಸ ಮಾಡಿದ್ದಾರೆ. ಕರ್ನಾಟಕ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ, ಕಂಠೀರವ ಸ್ಟುಡಿಯೋಲಿ. ಅಧ್ಯಕ್ಷೆಯಾಗಿ ಚಿತ್ರೋದ್ಯಮದಲ್ಲಿ ಕೆಲಸ ಮಾಡಿದ್ದಾರೆ. ಅಂತಾರಾಷ್ಟ್ರೀಯ ಚಿತ್ರೋತ್ಸವ, ಭಾರತೀಯ ಪನೋರಮಾ ಚಿತ್ರಗಳ ಆಯ್ಕೆ ಸಮಿತಿಗಳಲ್ಲಿ ಅವರ ಕೊಡುಗೆಯೂ ಮರೆಯುವಂತಹದಲ್ಲ.
ಸಾಹಿತ್ಯ, ಸಾಂಸ್ಕೃತಿಕ ವಲಯಗಳಲ್ಲಿ ಅವರ ಕೊಡುಗೆ ಕಡಿಮೆ ಏನಲ್ಲ. ತಮ್ಮ ಹುಟ್ಟೂರಲ್ಲಿ ಶಾಲೆಯೊಂದನ್ನು ತೆರೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ತಮ್ಮ ಹೆಸರಿನಲ್ಲಿ ಪುದುವಟ್ಟು ಇಟ್ಟು ಪ್ರತಿ ವರ್ಷ ದತ್ತಿ ಪ್ರಶಸ್ತಿ ನೀಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಸಾಧಕಿಯರಿಗೆ ಪ್ರತಿ ವರ್ಷ ಒಂದು ಲಕ್ಷ ರೂ. ನಗದಿನೊಂದಿಗೆ ತಮ್ಮ ಹೆಸರಿನಲ್ಲಿ ಪ್ರಶಸ್ತಿ ನೀಡಲು ಭಾರತೀಯ ವಿದ್ಯಾಭವನದಲ್ಲಿ ಪದುವಟ್ಟು ಇಟ್ಟಿದ್ದಾರೆ. ಮೊದಲ ಪ್ರಶಸ್ತಿಯನ್ನು ಹಿರಿಯ ತಾರೆಯರಾದ ಜಮುನ, ಹರಿಣಿ ಮತ್ತು ಅಂಜಲಿದೇವಿ ಪಡೆದಿದ್ದರು.
ತಮಿಳುನಾಡಿನಲ್ಲಿ ಅತಿ ಹೆಚ್ಚು ಜನಪ್ರಿಯರಾಗಿದ್ದ ತಾರೆ ಸರೋಜಾದೇವಿ ಅವರು ‘ಅಭಿನಯ ಸರಸ್ವತಿ’ ಎಂದೇ ಹೆಸರಾದವರು. ಅದು ಕರ್ನಾಟಕದ ಚಿತ್ರರಸಿಕರು ನೀಡಿದ ಗೌರವ. ತಮಿಳುನಾಡಿನಲ್ಲಿ ಅವರನ್ನು ‘ಕನ್ನಡತ್ತು ಪೈಂಗಿಳಿ’ ಎಂದು ಚಿತ್ರೋದ್ಯಮ ಮತ್ತು ಚಿತ್ರರಸಿಕರು ಕರೆದರು. ‘ಕನ್ನಡದ ಅರಗಿಣಿ’ ಎನ್ನುವುದು ಇದರರ್ಥ. ಅದು ಸರೋಜಾದೇವಿ ಅವರಿಗೆ ಮಾತ್ರವಲ್ಲ, ಕನ್ನಡಕ್ಕೂ ಸಂದ ಗೌರವ ಅಂದರೆ ತಪ್ಪೇನಿಲ್ಲ. ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗಗಳಲ್ಲಿ ಮೆರೆದರೂ, ಕನ್ನಡ ಮರೆಯದ, ಕನ್ನಡನಾಡನ್ನು ಮರೆಯದ ಅವರು ನೆಲೆಯೂರಿದ್ದು ಬೆಂಗಳೂರಲ್ಲೇ. ಕೊನೆಯುಸಿರು ಎಳೆದದ್ದೂ. ಚಿರಶಾಂತಿಗೆ ಬಯಸಿದ್ದು ತಾಯಿಯ ಮಡಿಲನ್ನು. ರಾಜ್ಯ ಸರ್ಕಾರವೂ ಅವರನ್ನು ಸೂಕ್ತ ಗೌರವದೊಂದಿಗೆ ಬೀಳ್ಕೊಟ್ಟಿದೆ.
” ಕನ್ನಡದಲ್ಲಿ ‘ಕಿತ್ತೂರು ಚೆನ್ನಮ್ಮ’ನಾಗಿ ಸರೋಜಾದೇವಿ ಅವರು ನಿರ್ವಹಿಸಿದ ಪಾತ್ರವನ್ನು ಇಂದಿಗೂ ಚಿತ್ರರಸಿಕರು ಮರೆತಿಲ್ಲ. ಬ್ರಿಟಿಷರ ವಿರುದ್ಧ ನಿಂತು ‘ನಿಮಗೇಕೆ ಕೊಡಬೇಕು ಕಪ್ಪ..’ ಎನ್ನುವ ಸಾಲುಗಳು ಈಗಲೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರದರ್ಶನದ ವಿಷಯವಾಗಿದೆ.”
ಚೆನ್ನೈ : ನಟ, ರಾಜಕಾರಣಿ ವಿಜಯ್ ಅವರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಚುನಾವಣಾ ಆಯೋಗವು ಗುರುವಾರ ಚಿಹ್ನೆ…
ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ತಾಳು ಬೆಟ್ಟದಿಂದ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…
ಬೆಂಗಳೂರು : ಮೊದಲ ವರ್ಷದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೇ, ಸಂವಿಧಾನದ ವಿಧಿಗಳನ್ನು ಉಲ್ಲಂಘನೆ…
ಸುತ್ತೂರು : ಕೇವಲ 1 ಎಕರೆ ಪ್ರದೇಶದಲ್ಲಿ ಸುಮಾರು 102 ಮಾದರಿಯ ವಿವಿಧ ತಳಿಯ ಬೆಳೆಗಳನ್ನು ಬೆಳೆಯಬಹುದೆಂಬುದನ್ನು ಸಾಬೀತು ಪಡಿಸಲಾಗಿದೆ.…
ದಕ್ಷಿಣ ಕನ್ನಡ: ದಕ್ಷಿಣ ಭಾರತದ ನಾಗರಾಧನೆಯ ಹೆಸರಾಂತ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣು ದೇವಸ್ಥಾನದ ಆದಾಯ 2025ರ ನವೆಂಬರ್ ಹಾಗೂ…
ಬೆಂಗಳೂರು: ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಹಾಗೂ ದ್ವೇಷ ರಾಜಕಾರಣ ಮಾಡಲು ಸದನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯ…