Special drastic revision that takes away voters' rights
ಮೂಲ: ಪಿಡಿಟಿ ಆಚಾರಿ
ಚುನಾವಣಾ ಆಯೋಗದ ಅಧಿಕಾರ ವ್ಯಾಪ್ತಿಯನ್ನು ಸಂಸತ್‌ನಲ್ಲಿ ಪ್ರಶ್ನಿಸಿರುವ ವಿರೋಧ ಪಕ್ಷಗಳು
ಭಾರತದ ಚುನಾವಣಾ ಆಯೋಗವು (EC), ನವೆಂಬರ್‌ನಲ್ಲಿ ಚುನಾವಣೆಗಳನ್ನು ಎದುರಿಸಲಿರುವ ಬಿಹಾರದಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಸಲುವಾಗಿ ಕೈಗೊಂಡಿರುವ ವಿಶೇಷ ತೀವ್ರ ಪರಿಷ್ಕರಣೆ (Special Intensive Revision ಎಸ್‌ಐಆರ್)ಯ ಕಾರ್ಯಕ್ಕೆ ಚಾಲನೆ ನೀಡಿದೆ. ವಿರೋಧ ಪಕ್ಷಗಳು ಈ ಎಸ್‌ಐಆರ್ ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಈ ಪ್ರಕ್ರಿಯೆಯು ಭಾರತದ ಪ್ರಜೆಗಳಲ್ಲ ಎಂಬ ಕಾರಣ ಒಡ್ಡಿ ಬಿಹಾರದ ಸಾವಿರಾರು ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಆರೋಪಿಸುತ್ತಿವೆ. ಚುನಾವಣಾ ಆಯೋಗವು ಈ ಆರೋಪವನ್ನು ನಿರಾ ಕರಿಸಿದ್ದು, ತನ್ನ ಪರಿಷ್ಕರಣೆಯ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಚುನಾವಣೆಗಳು ನಡೆಯುವ ಕೆಲವೇ ತಿಂಗಳುಗಳ ಮುನ್ನ ಆಯೋಗವು ಈ ಕ್ರಮವನ್ನು ಜಾರಿಗೊಳಿಸಿರುವುದು ವಿವಾದದ ಕೇಂದ್ರ ಬಿಂದು ಆಗಿದ್ದು, ೨೦೨೪ರಲ್ಲಿ ಈಗಾಗಲೇ ಒಮ್ಮೆ ಮತದಾರರ ಪಟ್ಟಿಯ ಪರಿಷ್ಕರಣೆ ಆಗಿರುವಾಗ ಇದು ಅಗತ್ಯವೇ ಎಂದು ಪ್ರಶ್ನಿಸಲಾಗುತ್ತಿದೆ.
ಸಂವಿಧಾನದ ಅನುಚ್ಛೇದ ೩೨೬,ವಯಸ್ಕ ಮತದಾನದ ಆಧಾರದ ಮೇಲೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಚುನಾವಣೆಗಳನ್ನು ನಡೆಸಬೇಕು, ಅಂದರೆ ಪ್ರತಿಯೊಬ್ಬ ವಯಸ್ಕ ಮತದಾರರೂ ಕೆಲವು ನಿರ್ದಿಷ್ಟ ಕಾರಣ ಗಳಿಗಾಗಿ ಅನರ್ಹಗೊಳ್ಳದೆ ಇದ್ದಲ್ಲಿ, ಮತದಾರರಾಗುವ ಹಕ್ಕು ಪಡೆದಿರುತ್ತಾರೆ ಎಂದು ಹೇಳುತ್ತದೆ. ಈ ಅನುಚ್ಛೇದದ ಅನುಸಾರ ಮತದಾರರಾಗಲು ವ್ಯಕ್ತಿಯು ಭಾರತದ ಪ್ರಜೆ ಆಗಿರಬೇಕು ಮತ್ತು ಕನಿಷ್ಠ ೧೮ ವರ್ಷ ದವರಾಗಿರಬೇಕು. ೧೯೫೦ರ ಪ್ರಜಾ ಪ್ರಾತಿನಿಧ್ಯ ಕಾಯ್ದೆಯಲ್ಲಿ ಮತದಾರರಾಗಿ ನೋಂದಣಿಯಾಗಲು ಅನರ್ಹರಾಗಲು ಸಮರ್ಥ ನ್ಯಾಯಾಲಯವೊಂದರ ಮೂಲಕ ವ್ಯಕ್ತಿಯು ಮಾನಸಿಕ ಅಸ್ವಸ್ಥ ಎಂದು ಘೋಷಿಸಿರಬೇಕು ಹಾಗೂ ೧೯೫೧ರ ಆರ್‌ಪಿಎ ಕಾಯ್ದೆಯ ಸೆಕ್ಷನ್ ೧೧ಎ ಅಡಿಯಲ್ಲಿ ಮತದಾನಕ್ಕೆ ಅನರ್ಹ ಎಂದು ಘೋಷಿಸಿರಬೇಕು.
ಮತದಾರರಾಗಿ ನೋಂದಣಿ ಮಾಡಿಸಲು ನಿಯಮಗಳನ್ನು ಕಾಯ್ದೆಯ ಸೆಕ್ಷನ್ ೧೯ರಲ್ಲಿ ನೀಡಲಾಗಿದೆ. ವ್ಯಕ್ತಿಯು ಕನಿಷ್ಠ ೧೮ ವರ್ಷ ದಾಟಿರಬೇಕು ಮತ್ತು ಆ ಕ್ಷೇತ್ರದ ಸಾಮಾನ್ಯ ನಿವಾಸಿಯಾಗಿರಬೇಕು. ಇಲ್ಲಿ ಸಾಮಾನ್ಯ ನಿವಾಸಿ (Ordinary Resident) ಎಂದರೇನು ಎಂಬುದನ್ನು ಸೆಕ್ಷನ್ ೨೦ರಲ್ಲಿವಿವರಿಸಲಾಗಿದೆ. ಇದರನ್ವಯ ವ್ಯಕ್ತಿಯು ವಾಸಿಸುವ ಮನೆಯ ಮಾಲೀಕತ್ವ ಅಥವಾ ಮತ್ತಾವುದೇ ರೀತಿಯ ಹಕ್ಕು ಹೊಂದಿರುವ ಕಾರಣಕ್ಕಾಗಿ ಸಾಮಾನ್ಯ ನಿವಾಸಿ ಎಂದು ಪರಿಭಾವಿಸಲಾಗುವುದಿಲ್ಲ ಅಥವಾ ವ್ಯಕ್ತಿಯು ತಾನು ವಾಸಿಸುವ ಸ್ಥಳದಲ್ಲಿ, ತಾತ್ಕಾಲಿಕವಾಗಿ ತಮ್ಮ ನಿವಾಸದಲ್ಲಿ ಇಲ್ಲದೆ ಹೋದ ಮಾತ್ರಕ್ಕೆ ‘ಸಾಮಾನ್ಯ ನಿವಾಸಿ ಯ ಅರ್ಹತೆಯನ್ನು ಕಳೆದುಕೊಳ್ಳುವುದಿಲ್ಲ.
ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಹಾಗೂ ಲೋಕಸಭೆ, ರಾಜ್ಯ ವಿಧಾನಸಭೆ ಚುನಾವಣೆಗಳನ್ನು ನಡೆಸುವ ಮತ್ತು ರಾಷ್ಟ್ರಪತಿ-ಉಪ ರಾಷ್ಟ್ರಪತಿಗಳ ಚುನಾವಣೆಯನ್ನು ನಡೆಸುವ ಪರಮಾಧಿಕಾರ ಇರುತ್ತದೆ. ಸಂವಿಧಾನದ ಅನುಚ್ಛೇದ ೩೨೪, ಚುನಾವಣಾ ಆಯೋಗಕ್ಕೆ ಈ ಕಾರ್ಯಗಳನ್ನು ನಿರ್ವಹಿಸುವ ಅಧಿಕಾರವನ್ನು ಕಲ್ಪಿಸುತ್ತದೆ. ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಳನ್ನು ನೆರವೇರಿಸುವುದು ಸಂವಿಧಾನದ ಮೂಲ ಸಂರಚನೆಯ (Basic Structure) ಒಂದು ಪ್ರಧಾನ ಲಕ್ಷಣವಾಗಿರುವುದರಿಂದ, ಭಾರತದ ಚುನಾವಣಾ ಆಯೋಗವು ಈ ಕಾರ್ಯವನ್ನು ಪರಿಪೂರ್ಣತೆಯಿಂದ ನಿರ್ವಹಿಸುವ ಸಲುವಾಗಿ ಎಲ್ಲ ಅವಶ್ಯ ಅಧಿಕಾರಗಳನ್ನೂ ಹೊಂದಿರುವುದು ಅತ್ಯಗತ್ಯ. ಏನೇ ಆದರೂ, ಸಂವಿಧಾನವು ಯಾವುದೇ ಅಧಿಕಾರ ಕೇಂದ್ರಕ್ಕೂ ಅನಿರ್ಬಂಧಿತ ಅಧಿಕಾರ ನೀಡುವುದನ್ನು ಊಹಿಸಲೂ ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ಕೂಡ ತನ್ನ ತೀರ್ಪುಗಳ ಮೂಲಕ, ಯಾವುದೇ ಶಾಸನಗಳ ವ್ಯಾಪ್ತಿಗೆ ಒಳಪಡದೆ ಇರುವ ಎಲ್ಲ ಪ್ರದೇಶಗಳಲ್ಲೂ ಚುನಾವಣಾ ಆಯೋಗವು ತನ್ನ ಎಲ್ಲ ಅಧಿಕಾರವನ್ನೂ ಚಲಾಯಿಸಬಹುದಾಗಿದೆ ಆದರೆ ಆಯಾ ಪ್ರದೇಶಗಳಲ್ಲಿ ಜಾರಿಯಲ್ಲಿರುವ ಕಾನೂನುಗಳ ಅನುಸಾರ ನಿರ್ವಹಿಸತಕ್ಕದ್ದು ಎಂದು ಹೇಳಿದೆ.
ಸೂಕ್ತ ದಿನಾಂಕದ ಸೂಚನೆ: ಈಗ ಮತದಾರರ ಪಟ್ಟಿಯನ್ನು ಪರಿಷ್ಕರಣೆಗೊಳಪಡಿಸುವ ನಿಟ್ಟಿನಲ್ಲಿ ಭಾರತದ ಚುನಾವಣಾ ಆಯೋಗದ ಅಧಿಕಾರ ವ್ಯಾಪ್ತಿಯನ್ನು ನಿರ್ಧರಿಸುವ ಪ್ರಜಾಪ್ರಾತಿನಿಧ್ಯ ಕಾಯ್ದೆಯ (ಆರ್‌ಪಿಎ) ಸಂಬಂಧಪಟ್ಟ ನಿಬಂಧನೆಗಳನ್ನು ಗಮನಿಸೋಣ. ೧೯೫೦ರ ಆರ್‌ಪಿಎ ಕಾಯ್ದೆಯ ಸೆಕ್ಷನ್ ೨೧ ಮತದಾರರ ಪಟ್ಟಿಯ ಸಿದ್ಧತೆ ಮತ್ತು ಪರಿಷ್ಕರಣೆಯನ್ನು ಕುರಿತು ಹೇಳುತ್ತದೆ. ಈ ನಿಟ್ಟಿನಲ್ಲಿ ಸೆಕ್ಷನ್ ೨೧ ನಾಲ್ಕು ಹಂತಗಳನ್ನು ಗುರುತಿಸುತ್ತದೆ. (೧) ಲೋಕಸಭೆ ಅಥವಾ ರಾಜ್ಯ ವಿಧಾನಸಭೆ ಚುನಾವಣೆಗಳ ಮುನ್ನ (೨) ಪ್ರತಿಯೊಂದು ಉಪಚುನಾವಣೆಗಳಿಗೂ ಮುನ್ನ (೩) ಯಾವುದೇ ವರ್ಷದಲ್ಲಿ ಭಾರತದ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಮತ್ತು (೪) ಆಯೋಗವು ಸಕಾರಣಗಳೊಂದಿಗೆ, ಯಾವುದೇ ಚುನಾವಣಾ ಕ್ಷೇತ್ರದಲ್ಲಿ ವಿಶೇಷನ ಪರಿಷ್ಕರಣೆಯನ್ನು ಆದೇಶಿಸಿದಾಗ. ನಾಲ್ಕನೆಯ ನಿಬಂಧನೆಯನ್ನು ಹೊರತುಪಡಿಸಿ ಎಲ್ಲ ಪರಿಷ್ಕರಣೆಗಳನ್ನೂ ಒಂದು ನಿರ್ದಿಷ್ಟ, ಸೂಕ್ತ ದಿನದಿಂದ, ಸಾಮಾನ್ಯವಾಗಿ ಜನವರಿ ತಿಂಗಳ ಮೊದಲನೇ ದಿನದಿಂದ ನಡೆಸಬಹುದು ಎಂದು ಸೆಕ್ಷನ್ ೧೪ರಲ್ಲಿ ಹೇಳಲಾಗಿದೆ. ಇದಕ್ಕೆ ಹೊರತಾದ ಒಂದೇ ನಿಬಂಧನೆ (೪) ಆಗಿರುತ್ತದೆ , ಇದರನ್ವಯ ಯಾವುದೇ ಸಮಯದಲ್ಲಿ ಮಾಡಬಹುದಾದ್ದರಿಂದ ಸೂಕ್ತ ದಿನವನ್ನು ನಮೂದಿಸಲಾಗಿಲ್ಲ.
ಭಾರತದ ಚುನಾವಣಾ ಆಯೋಗವು ಜೂನ್ ೨೪ರಂದು ಹೊರಡಿಸಿದ ಆದೇಶವು ಜುಲೈ ೧, ೨೦೨೫ನ್ನು ಸೂಕ್ತ ದಿನ ಎಂದು ಸೂಚಿಸುತ್ತದೆ. ಇದು ಸೆಕ್ಷನ್ ೨೧(೨)(ಬಿ) ನಿರ್ದೇಶನದ ಅನ್ವಯ ನೀಡಲಾಗಿದೆ ಎಂದು ಹೇಳುತ್ತದೆ. ಬಿಹಾರದಲ್ಲಿ ನಡೆಯುತ್ತಿರುವ ಪರಿಷ್ಕರಣೆಗೆ ಇದೇ ಸೆಕ್ಷನ್ ಅನ್ವಯಿಸಲಾಗಿದೆ ಎಂದು ಭಾವಿಸಬಹುದು. ಆದರೆ ಈ ನಿಬಂಧನೆಯಡಿ ಸೂಕ್ತ ದಿನಾಂಕವು ೧-೧-೨೦೨೫ ಆಗಿರಬೇಕು. ಪರಿಷ್ಕರಣೆಯನ್ನು ೨೦೨೫ರ ಜನವರಿ ೧ರಿಂದಲೇ ಆರಂಭಿಸಬೇಕಿತ್ತು. ಹಾಗಾಗಿ ಚುನಾವಣಾ ಆಯೋಗದ ಆದೇಶದಲ್ಲಿ ನೀಡಿರುವ ಸೂಕ್ತ ದಿನಾಂಕಕ್ಕೆ ಕಾನೂನಿನಡಿ ಸಮ್ಮತಿ ಇರುವುದಿಲ್ಲ. ಅದೇ ರೀತಿ, ‘ವಿಶೇಷ ತೀವ್ರ ಪರಿಷ್ಕರಣೆ’ (ಖಐ) ಎಂಬ ಪದವು ಕಾನೂನಿನಲ್ಲಿ ಕಾಣುವುದಿಲ್ಲ. ಚುನಾವಣಾ ಆಯೋಗವು ವಿಶೇಷ ಪರಿಷ್ಕರಣೆಯನ್ನು ಆದೇಶಿಸಬಹುದಾದ ಏಕೈಕ ಸನ್ನಿವೇಶ ಎಂದರೆ, ಅದು ಒಂದು ನಿರ್ದಿಷ್ಟ ಚುನಾವಣಾ ಕ್ಷೇತ್ರಕ್ಕೆ ಅಥವಾ ಅದರ ಒಂದು ಭಾಗಕ್ಕೆ, ಸಂಬಂಧಿಸಿರಬೇಕೇ ಹೊರತು, ಇಡೀ ರಾಜ್ಯಕ್ಕೆ ಸಂಬಂಧಿಸಿರಕೂಡದು. ಹಾಗಾಗಿ ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಪ್ರಜಾಪ್ರಾತಿನಿಧ್ಯ ಕಾಯ್ದೆಯ ನಿಬಂಧನೆಗಳ ಅನುಸಾರ ನಡೆಯುತ್ತಿಲ್ಲ ಎಂದು ತೀರ್ಮಾನಿಸುವುದು ಸಮಂಜಸವಾಗಿರುತ್ತದೆ.
ಸಂವಿಧಾನ ಅನುಚ್ಛೇದ ೩೨೪ರ ಅಡಿಯಲ್ಲಿ ಪರಮಾಧಿಕಾರವನ್ನು ಪಡೆಯುವ ಭಾರತದ ಚುನಾವಣಾ ಆಯೋಗವು ಕಾನೂನು ನಿಯಮಗಳಿಗೆ ಜವಾಬ್ದಾರಿಯುತವೂ ಆಗಿರುತ್ತದೆ. ಹಾಗೆಯೇ ಸುಪ್ರೀಂ ಕೋರ್ಟ್ ಆದೇಶಗಳನ್ವಯ ಸ್ವಾಭಾವಿಕ ನ್ಯಾಯದ ನಿಯಮಗಳಿಗೆ ಪೂರಕವಾಗಿ ಇರಬೇಕಾಗುತ್ತದೆ. ಚುನಾವಣಾ ನೋಂದಣಿ ಅಧಿಕಾರಿಗಳು, ಮತದಾರರು ತಮ್ಮ ಪೌರತ್ವವನ್ನು ನಿರೂಪಿಸುವ ಸಲುವಾಗಿ, ತಪ್ಪಾದ ದಾಖಲೆಗಳನ್ನು ನೀಡಿದ್ದಾರೆ ಎಂಬ ಕಾರಣಕ್ಕಾಗಿ ಅರ್ಜಿಯನ್ನು ತಿರಸ್ಕರಿಸಲಾಗುವುದಿಲ್ಲ. ಮತದಾರರ ನೋಂದಣಿಯ ನಿಯಮ ೮ರ ಅನುಸಾರ, ಪ್ರಜೆಗಳು ತಮ್ಮ ಗರಿಷ್ಟ ಸಾಮರ್ಥ್ಯಕ್ಕೆ ಅನುಗುಣವಾಗಿ ಮಾಹಿತಿಯನ್ನು ಒದಗಿಸ ಬಹುದಾಗಿದೆ. ಈ ಶಾಸನಬದ್ದ ಷರತ್ತನ್ನು ಚುನಾವಣಾ ಆಯೋಗ ನಿರ್ಲಕ್ಷಿಸಲಾಗುವುದಿಲ್ಲ.
(ಕೃಪೆ : ದಿ ಹಿಂದೂ )
“ಸಂವಿಧಾನದ ಅನುಚ್ಛೇದ ೩೨೬, ವಯಸ್ಕ ಮತದಾನದ ಆಧಾರದ ಮೇಲೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಚುನಾವಣೆಗಳನ್ನು ನಡೆಸಬೇಕು. ಅಂದರೆ ಪ್ರತಿಯೊಬ್ಬ ವಯಸ್ಕ ಮತದಾರರೂ, ಕೆಲವು ನಿರ್ದಿಷ್ಟ ಕಾರಣಗಳಿಗಾಗಿ ಅನರ್ಹಗೊಳ್ಳದೆ ಇದ್ದಲ್ಲಿ, ಮತದಾರರಾಗುವ ಹಕ್ಕು ಪಡೆದಿರುತ್ತಾರೆ ಎಂದು ಹೇಳುತ್ತದೆ”
ಕನ್ನಡಕ್ಕೆ : ನಾ. ದಿವಾಕರ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವೈಕುಂಠ ಏಕಾದಶಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ಶ್ರೀ ಲಕ್ಷ್ಮೀವೆಂಟಕರಮಣಸ್ವಾಮಿ ದೇವಾಲಯವು ಇಂದು…
ಬೆಂಗಳೂರು: ಹೊಸ ವರ್ಷಾಚರಣೆಯ ವೇಳೆ ರಾಜ್ಯದ ವಿವಿಧೆಡೆ ಸಾರ್ವಜನಿಕರು ಅಸ್ವಸ್ಥರಾಗುವ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಇತರೆ ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆ…
ಬೆಳಗಾವಿ: ನಿಯಮಗಳನ್ನು ಗಾಳಿಗೆ ತೂರಿ ಕೇರಳದ ಅಕ್ರಮ ವಲಸಿಗರಿಗೆ ಮನೆ ಕಲ್ಪಿಸಿಕೊಡುವ ಮೂಲಕ ಸಿಎಂ ಸಿದ್ದರಾಮಯ್ಯ ಸಿಎಂ ಕುರ್ಚಿ ಉಳಿಸಿಕೊಳ್ಳಲು…
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಅರಣ್ಯದಲ್ಲಿ ನೂತನ ವರ್ಷಾಚರಣೆಗೆ ಕಡಿವಾಣ ಹಾಕಲಾಗಿದೆ. ಈ ಬಾರಿ ವಾಸ್ತವ್ಯದ…
ಬೆಂಗಳೂರು: ದೇಶದೆಲ್ಲೆಡೆ ವೈಕುಂಠ ಏಕಾದಶಿ ಸಂಭ್ರಮ ಮನೆ ಮಾಡಿದ್ದು, ವೈಕುಂಠ ಏಕಾದಶಿಯಂದು ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಇದೆ.…
ಕುವೆಂಪು ಮಲೆನಾಡಿನಲಿ ಹುಟ್ಟಿದರು ಮೈಸೂರಿಗೆ ಕಾಲಿಟ್ಟರು ಕವಿಯಾಗಿ ಕನ್ನಡದ ಮೊದಲ ಜ್ಞಾನಪೀಠ ಗಳಿಸಿದರು ಮೂಢನಂಬಿಕೆಯನು ಬದಿಗೊತ್ತಿ ವಿಜ್ಞಾನದ ಬೀಜ ಬಿತ್ತಿ…