ಡಿ.ವಿ.ರಾಜಶೇಖರ
ವಿಶ್ವದ ಶ್ರೀಮಂತ ದೇಶಗಳಲ್ಲಿ ಒಂದಾಗಿರುವ ದಕ್ಷಿಣ ಕೊರಿಯಾ ಹಿಂದೆಂದೂ ಎದುರಿಸದೆ ಇದ್ದಂಥ ರಾಜಕೀಯ ಬಿಕ್ಕಟ್ಟನ್ನು ಈಗ ಎದುರಿಸುತ್ತಿದೆ. ದೇಶದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರನ್ನು ಬಂಧಿಸಲು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಶುಕ್ರವಾರ ಬೆಳಿಗ್ಗೆ ಅವರ ಮನೆಯ ಬಳಿ ತೆರಳಿದ್ದಾರೆ. ಆದರೆ ಅಧ್ಯಕ್ಷರ ಕಾವಲುಪಡೆಯ ಸೈನಿಕರು ಅವರ ಬಂಧನಕ್ಕೆ ಅವಕಾಶ ನೀಡಿಲ್ಲ. ಬಂಧನ ವಾರೆಂಟ್ ಕೊಡಲೂ ಆಗಿಲ್ಲ. ಆ ನಂತರವೂ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಅಧ್ಯಕ್ಷರ ಮನೆ ಪ್ರವೇಶಿಸಲು ನಡೆಸಿದ ಯತ್ನ ವಿಫಲವಾಗಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಧ್ಯಕ್ಷ ಯೂನ್ ಮನೆಯ ಮುಂದೆ ಅವರ ಸಹಸ್ರಾರು ಬೆಂಬಲಿಗರು ಜಮಾಯಿಸಿದ್ದು ಕಾನೂನು ಸುವ್ಯವಸ್ಥೆ ಸಮಸ್ಯೆ ತಲೆದೋರುವಂತೆ ಕಾಣುತ್ತಿದೆ.
ಈ ಮಧ್ಯೆ ಇಂಥ ಕಾನೂನು ಬಾಹಿರ ಕ್ರಮವನ್ನು ತಮ್ಮ ಕೊನೆಯುಸಿರು ಇರುವವರೆಗೆ ಪ್ರತಿರೋಧಿಸುವುದಾಗಿ ಮತ್ತು ಅಧ್ಯಕ್ಷರ ಅಧಿಕಾರದ ಸಾರ್ವಭೌಮತ್ವವನ್ನು ರಕ್ಷಿಸಲು ಹೋರಾಡುವುದಾಗಿ ಯೂನ್ ಘೋಷಿಸಿದ್ದಾರೆ. ಅಧ್ಯಕ್ಷರನ್ನು ಬಂಧಿಸುವ ಅಧಿಕಾರ ಯಾರಿಗೂ ಇಲ್ಲ. ಸರ್ಕಾರ ಈಗ ಹೊರಡಿಸಿರುವ ಬಂಧನ ವಾರೆಂಟ್ ಅಕ್ರಮವಾದುದು ಎಂದು ಯೂನ್ ಅವರ ವಕೀಲರು ಹೇಳಿದ್ದಾರೆ. ಈಗಾಗಲೇ ಪಾರ್ಲಿಮೆಂಟ್ ತೆಗೆದು ಕೊಂಡಿರುವ ದೋಷಾರೋಪಣೆ ನಿರ್ಣಯ ಮತ್ತು ಆ ನಂತರ ಸಿಯೋಲ್ ಕೋರ್ಟ್ ಹೊರಡಿಸಿರುವ ಬಂಧನ ವಾರೆಂಟನ್ನು ಸಂವಿಧಾನ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ ಎಂದೂ ಅವರು ಹೇಳಿದ್ದಾರೆ. ಆದರೆ ಭ್ರಷ್ಟಾಚಾರ ನಿರೋಧದಳ, ಅಧ್ಯಕ್ಷ ಯೂನ್ ಅವರನ್ನು ಬಂಧಿಸಲು ಇನ್ನೂ ಒಂದು ಪ್ರಯತ್ನ ನಡೆಸುವ ಸಂಭವ ಇದೆ ಎನ್ನಲಾಗಿದೆ. ಯೂನ್ ಅವರನ್ನು ಬಂಧಿಸುವಲ್ಲಿ ಮತ್ತೆ ವಿಫಲವಾದರೆ ರಾಜಕೀಯ ಬಿಕ್ಕಟ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ. ಅಧ್ಯಕ್ಷರಿಗೆ ಹೆಚ್ಚು ಅಧಿಕಾರವಿದೆಯೋ ಅಥವಾ ಪಾರ್ಲಿಮೆಂಟಿಗೋ ಎನ್ನುವ ಪ್ರಶ್ನೆ ಈಗ ಮತ್ತೆ ಎದ್ದಿದೆ.
ಈಗಾಗಲೇ ಈ ಬಿಕ್ಕಟ್ಟು ದೇಶದ ಆರ್ಥಿಕ ವ್ಯವಹಾರಗಳ ಮೇಲೆ ಕೆಟ್ಟ ಪರಿಣಾಮ ಬೀರಲಾರಂಭಿಸಿದೆ. ಷೇರು ಮಾರುಕಟ್ಟೆ ಸತತವಾಗಿ ಕುಸಿಯುತ್ತಿದೆ. ಅಂತಾರಾಷ್ಟ್ರೀಯ ವ್ಯವಹಾರಗಳು ಒಂದು ರೀತಿಯ ಅನಿಶ್ಚ ಯವನ್ನು ಎದುರಿಸುತ್ತಿವೆ. ಈ ಬಿಕ್ಕಟ್ಟಿನ ಸನ್ನಿವೇಶ ಬಳಸಿಕೊಂಡು ಉತ್ತರ ಕೊರಿಯಾ ಸರ್ಕಾರ ದಕ್ಷಿಣ ಕೊರಿಯಾ ವಿರುದ್ಧ ಅಪಪ್ರಚಾರವನ್ನು ದೊಡ್ಡ ಮಟ್ಟದಲ್ಲಿಯೇ ಮಾಡುತ್ತಿದೆ. ಈ ಮಧ್ಯೆ ಸರ್ಕಾರ ಮತ್ತೊಬ್ಬರನ್ನು ತಾತ್ಕಾಲಿಕ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಸರ್ಕಾರ ಹೇಳಿದಂತೆ ಸಂವಿಧಾನ ಕೋರ್ಟ್‌ನಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬುವಲ್ಲಿ ತಡಮಾಡಿದ್ದರಿಂದ ಅವರ ವಿರುದ್ಧವೂ ಪಾರ್ಲಿಮೆಂಟಿನಲ್ಲಿ ದೋಷಾರೋಪಣೆ ಹೊರಿಸಲಾಯಿತು. ಅವರು ಕೆಲವೇ ದಿನಗಳಲ್ಲಿ ತಾತ್ಕಾಲಿಕ ಹುದ್ದೆ ತ್ಯಜಿಸಿದರು. ನಂತರ ಸರ್ಕಾರ ಹಣಕಾಸು ಸಚಿವರಾಗಿದ್ದ ಚೊಯ್ ಸಂಗ್ ಮೋಕ್ ಅವರನ್ನು ತಾತ್ಕಾಲಿಕ ಅಧ್ಯಕ್ಷರನ್ನಾಗಿ ನೇಮಿಸಿದೆ. ಸರ್ಕಾರ ಬಯಸಿದಂತೆ ಅವರು ಹೊಸದಾಗಿ ಇಬ್ಬರು ನ್ಯಾಯಾಧೀಶರನ್ನು ಸಂವಿಧಾನ ಕೋರ್ಟಿಗೆ ನೇಮಕ ಮಾಡಿದ್ದಾರೆ. ದೋಷಾರೋಪಣೆ ಮತ್ತು ಬಂಧನ ವಾರೆಂಟ್ ಪ್ರಶ್ನೆ ಸಂವಿಧಾನದ ಪೀಠದ ಮುಂದೆ ಬಂದಾಗ ತನ್ನ ವಿರುದ್ಧ ತೀರ್ಪು ಬರುವಂತಹ ಸ್ಥಿತಿ ಬರಬಾರದು ಎಂಬ ಮುನ್ನೆಚ್ಚರಿಕೆಯ ಸರ್ಕಾರದ ಕ್ರಮ ಇದಾಗಿರುವಂತಿದೆ.
ಬಿಕ್ಕಟ್ಟು ಆರಂಭವಾದುದು ಕಳೆದ ತಿಂಗಳ ಮೊದಲ ವಾರದಲ್ಲಿ. ತಾವು ತರಬಯಸಿದ ಸುಧಾರಣೆ ಕ್ರಮಗಳಿಗೆ ವಿರೋಧಿ ನಿಯಂತ್ರಣದ ಪಾರ್ಲಿ ಮೆಂಟ್ ಒಪ್ಪಿಗೆ ನೀಡುತ್ತಿಲ್ಲ ಎಂದು ಆರೋಪಿಸಿ ಅಧ್ಯಕ್ಷ ಯೂನ್ ಹಠಾತ್ತನೆ ಮಿಲಿಟರಿ ಆಡಳಿತ ಜಾರಿಗೆ ತರುವುದಾಗಿ ಘೋಷಿಸಿಬಿಡುತ್ತಾರೆ. ಆ ಸಂಬಂಧ ಸುಗ್ರೀವಾಜ್ಞೆಯನ್ನೂ ಹೊರಡಿಸಿಬಿಡುತ್ತಾರೆ. ದೇಶದ ಎಲ್ಲಕಡೆ ಮಿಲಿಟರಿ ಬಂದು ನಿಲ್ಲುತ್ತದೆ. ಈ ಆದೇಶ ಪಾರ್ಲಿಮೆಂಟ್ ಸದಸ್ಯರಿಗಷ್ಟೇ ಅಲ್ಲ ಸಾಮಾನ್ಯ ಜನರಿಗೂ ಆಘಾತವುಂಟುಮಾಡುತ್ತದೆ. ಇನ್ನೇನು ಪಾರ್ಲಿಮೆಂಟ್ ವಿಸರ್ಜನೆ ಆಗಲಿದೆ ಎನ್ನುವ ವೇಳೆಗೆ ತುರ್ತಾಗಿ ಪಾರ್ಲಿಮೆಂಟ್ ಅಧಿವೇಶನ ಕರೆಯಲಾಗುತ್ತದೆ. ಪಾರ್ಲಿಮೆಂಟ್ ಸದಸ್ಯರು ಸರ್ವಾನುಮತದಿಂದ ಮಿಲಿಟರಿ ಆಡಳಿತ ಘೋಷಣೆಯನ್ನು ರದ್ದುಮಾಡುತ್ತಾರೆ. ಈ ಬಿಕ್ಕಟ್ಟು ಡಿಸೆಂಬರ್ ೧೪ರ ವೇಳೆಗೆ ತಾರಕಕ್ಕೆ ಏರುತ್ತದೆ. ಮಿಲಿಟರಿ ಆಡಳಿತ ಘೋಷಿಸಿದಕ್ಕಾಗಿ ಅಧ್ಯಕ್ಷ ಯೂನ್ ವಿರುದ್ಧ ದೋಷಾರೋಪಣೆ ಹೊರಿಸಲು ಪಾರ್ಲಿಮೆಂಟ್ ಸಿದ್ಧವಾಗುತ್ತದೆ. ಪ್ರಜಾತಂತ್ರ ವ್ಯವಸ್ಥೆಯನ್ನು ಬುಡಮೇಲು ಗೊಳಿಸಿ ಅಧಿಕಾರ ಕಬಳಿಸಿ ಸರ್ವಾಧಿಕಾರಿಯಾಗಲು ಯೂನ್ ಪ್ರಯತ್ನಿಸುತ್ತಿದ್ದಾರೆ ಎಂದು ಅವರ ವಿರೋಧಿಗಳು ಆರೋಪ ಮಾಡುತ್ತಾರೆ. ದೇಶದಲ್ಲಿ ಸದ್ಯ ನಡೆಯುತ್ತಿರುವ ವೈದ್ಯರ ಮುಷ್ಕರದಿಂದಾಗಿ ಆರೋಗ್ಯ ಸೇವೆ ಅಸ್ತವ್ಯಸ್ತಗೊಂಡಿದ್ದು ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ವಿಫಲವಾಗಿದೆ. ಅಲ್ಲದೆ ದೇಶದಲ್ಲಿ ಉತ್ತರ ಕೊರಿಯಾ ಬೆಂಬಲಿತ ಶಕ್ತಿಗಳು ಬಲಗೊಳ್ಳುತ್ತಿವೆ ಮತ್ತು ದೇಶವನ್ನು ದುರ್ಬಲಗೊಳಿಸುತ್ತಿದ್ದು ಈ ಶಕ್ತಿಗಳನ್ನು ಮಟ್ಟಹಾಕುವ ಉದ್ದೇಶದಿಂದ ಮಿಲಿಟರಿ ಆಡಳಿತ ಜಾರಿಗೆ ತಂದಿರುವುದಾಗಿ ಅಧ್ಯಕ್ಷ ಯೂನ್ ಬಹಿರಂಗವಾಗಿ ಸ್ಪಷ್ಟೀಕರಣ ಕೊಡುತ್ತಾರೆ. ಆದರೆ ಜನ ಅಂತೆಯೇ ಜನಪ್ರತಿನಿಧಿಗಳು ಈ ಸಮರ್ಥನೆಯನ್ನು ಒಪ್ಪುವುದಿಲ್ಲ. ಯೂನ್ ವಿರುದ್ಧ ರಾಜಧಾನಿ ಸಿಯೋಲ್‌ನಲ್ಲಿ ಪ್ತಿ ಭಟನಾ ರ‍್ಯಾಲಿಗಳು ನಡೆಯಲಾರಂಭಿಸುತ್ತವೆ. ಯೂನ್ ಪರವೂ ಅವರ ಬೆಂಬಲಿಗರು ಬೀದಿಗೆ ಇಳಿಯುತ್ತಾರೆ. ಅಧ್ಯಕ್ಷರ ಮನೆ ಒಂದುರೀತಿಯಲ್ಲಿ ಸ್ಛೋಟಕ ಪರಿಸ್ಥಿತಿಯ ಕೇಂದ್ರವಾಗಲು ಆರಂಭಿಸುತ್ತದೆ. ಪಾರ್ಲಿಮೆಂಟ್‌ನಲ್ಲಿ ಮೊದಲು ದೋಷಾರೋಪಣೆ ನಿರ್ಣಯ ಮಂಡಿಸಿದಾಗ ಅದಕ್ಕೆ ಅಗತ್ಯ ಬಹುಮತ ಸಿಗಲಿಲ್ಲ. ಯೂನ್ ಬೆಂಬಲಿಗರು ನಿರ್ಣಯ ಬೆಂಬಲಿಸಲು ನಿರಾಕರಿಸಿದ್ದರು. ಆದರೆ ಎರಡನೆಯ ಬಾರಿ ದೋಷಾರೋಪಣೆ ನಿರ್ಣಯ ಮಂಡಿಸಿದಾಗ ಯೂನ್ ಬೆಂಬಲಿಗರಲ್ಲಿ ಕೆಲವರು ವಿರೋಧಿ ಪಾಳೆಯದ ಜೊತೆ ಗುರುತಿಸಿಕೊಂಡರು. ಆಗ ಸಹಜವಾಗಿಯೇ ನಿರ್ಣಯ ಬಹುಮತದಿಂದ ಅಂಗೀಕಾರಗೊಂಡಿತು. ನಂತರ ಯೂನ್ ವಿರೋಧಿ ಸರ್ಕಾರ ಅವರ ವಿರುದ್ಧ ಸಿಯೋಲ್ ಕೋರ್ಟ್ ನಿಂದ ಬಂಧನ ವಾರೆಂಟನ್ನು ಪಡೆಯುವಲ್ಲಿಯೂ ಸಫಲವಾಯಿತು. ಈ ವಾರೆಂಟ್ ಹಿಡಿದೇ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಯೂನ್ ಮನೆಗೆ ತೆರಳಿದ್ದು. ಆದರೆ ಅಲ್ಲಿ ಮಿಲಿಟರಿ ಅಧಿಕಾರಿಗಳು ಅಧ್ಯಕ್ಷರ ಭದ್ರತೆಯ ಜವಾಬ್ದಾರಿ ಹೊತ್ತಿರುತ್ತಾರೆ. ಅವರು ಭ್ರಷ್ಟಾಚಾರ ನಿಗ್ರಹದಳವನ್ನು ಮನೆಯ ಹೊರಗೆಯೇ ತಡೆಯುತ್ತಾರೆ. ಯೂನ್ ಮತ್ತು ಅವರ ಪತ್ನಿ ವಿರುದ್ಧ ಅಧಿಕಾರ ದುರುಪಯೋಗದ ಆರೋಪ ಹೊರಿಸಲಾಗಿದ್ದು ಆ ಸಂಬಂಧ ಪಾರ್ಲಿಮೆಂಟಿನಲ್ಲಿ ಅಂಗೀಕಾರವಾದ ದೋಷಾರೋಪಣೆ ನಿರ್ಣಯ ಮತ್ತು ಆ ನಂತರ ಸಿಯೋಲ್ ಕೋರ್ಟ್ ಹೊರಡಿಸಿದ ಬಂಧನ ವಾರೆಂಟನ್ನು ಸಂವಿಧಾನ ಕೋರ್ಟಿನಲ್ಲಿ ಪ್ರಶ್ನಿಸಲಾಗಿದ್ದು ಮುಂದಿನ ಬೆಳವಣಿಗೆಗಳು ಈ ಕೋರ್ಟಿನ ತೀರ್ಪನ್ನು ಅವಲಂಬಿಸಿದೆ. ಒಂಬತ್ತು ಸದಸ್ಯರ ಸಂವಿಧಾನಪೀಠದಲ್ಲಿ ಈಗ ಎಂಟು ನ್ಯಾಯಾಧೀಶರಿದ್ದು ಅವರಲ್ಲಿ ಆರು ನ್ಯಾಯಾಧೀಶರು ದೋಷಾ ರೋಪಣೆ ಮತ್ತು ಬಂಧನ ವಾರೆಂಟ್ ಎತ್ತಿಹಿಡಿದರೆ ಅಧ್ಯಕ್ಷ ಯೂನ್ ರಾಜೀನಾಮೆ ಅನಿವಾರ್ಯವಾಗುತ್ತದೆ. ಆ ನಂತರ ಅವರ ವಿರುದ್ಧ ವಿಚಾರಣೆ ನಡೆಸಿ ಕಾನೂನು ಪ್ರಕಾರ ಜೈಲಿಗೂ ಕಳುಹಿಸಬಹುದಾಗಿದೆ.
ಈ ಪ್ರಕರಣವನ್ನು ಸಂವಿಧಾನ ಕೋರ್ಟ್ ಇತ್ಯರ್ಥಮಾಡಲು ಆರು ತಿಂಗಳ ಕಾಲಾವಕಾಶವಿದೆ. ಪಾರ್ಲಿಮೆಂಟ್ ಸದಸ್ಯರು ಮತ್ತು ಜನರು ಅಷ್ಟು ಕಾಲ ಕಾಯುವರೇ ಎನ್ನುವ ಪ್ರಶ್ನೆ ಈಗ ಉದ್ಭವವಾಗಿದೆ. ಯೂನ್ ಅವರೂ ಸುಮ್ಮನಿರುವಂತೆ ಕಾಣುತ್ತಿಲ್ಲ. ಮಿಲಿಟರಿ ಬೆಂಬಲದಿಂದ ಆಡಳಿತದಲ್ಲಿ ಬದಲಾವಣೆ ತರಲು ಮುಂದಾಗಬಹುದು. ಉತ್ತರ ಕೊರಿಯಾ ಪರ ಇರುವ ಸಂಘಟನೆಗಳ ವಿರುದ್ಧ ಕ್ರಮಕ್ಕೆ ಮುಂದಾಗಬಹುದು. ಏಕ ಕೊರಿಯಾ ಹೋರಾಟಗಾರರಿಗೂ ತೊಂದರೆ ಕೊಡಬಹುದು. ಇದರಿಂದ ಈಗಾಗಲೇ ಹಾಳಾಗಿರುವ ಉತ್ತರ ಕೊರಿಯಾ ಜೊತೆಗಿನ ಸಂಬಂಧ ಮತ್ತಷ್ಟು ಹದಗೆಡಬಹುದು.
ದಕ್ಷಿಣ ಕೊರಿಯಾದ ರಾಜಕೀಯ ವ್ಯವಸ್ಥೆ ಈ ಎಲ್ಲ ಅವಾಂತರಕ್ಕೆ ಕಾರಣವಾಗುತ್ತ ಬಂದಿದೆ. ಎರಡು ಶಕ್ತಿ ಕೇಂದ್ರಗಳು (ಅಂದರೆ ಅಧ್ಯಕ್ಷರು ಮತ್ತು ಪಾರ್ಲಿಮೆಂಟ್) ಅಧಿಕಾರಕ್ಕಾಗಿ ಹೋರಾಡುತ್ತ ಬಂದಿವೆ. ಹಿಂದೆ ಒಮ್ಮೆ ಇಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿದ್ದು ಅಧ್ಯಕ್ಷರನ್ನು ಪಾರ್ಲಿಮೆಂಟ್ ವಜಾಮಾಡಿದ್ದುಂಟು. ಜೈಲಿಗೂ ಕಳುಹಿಸಲಾಗಿದೆ. ಈ ಬಾರಿ ಏನಾಗುತ್ತದೆ ನೋಡಬೇಕು.
ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ ನಡುವಣ ವೈಮನಸ್ಯ ಹಳೆಯದು. ಶೀತಲ ಸಮರದ ನಂತರದ ಕಾಲದ್ದು. ಕೊರಿಯಾ ಯುದ್ಧ(೧೯೫೦-೫೩) ಭೀಕರವಾದುದು. ಮೂರೇ ವರ್ಷಗಳಲ್ಲಿ ಮೂವತ್ತು ಲಕ್ಷ ಜನರು ಯುದ್ಧಕ್ಕೆ ಬಲಿಯಾದರು. ಉತ್ತರ ಕೊರಿಯಾ ದೇಶ ದಕ್ಷಿಣ ಕೊರಿಯಾವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸಿತು. ಸೋವಿಯತ್ ರಷ್ಯಾ, ಚೀನಾ ಉತ್ತರ ಕೊರಿಯಾ ಕಡೆ, ಮತ್ತೊಂದು ಕಡೆ ಅಮೆರಿಕ ಮತ್ತಿತರ ಪಾಶ್ಚಿಮಾತ್ಯ ದೇಶಗಳು ದಕ್ಷಿಣ ಕೊರಿಯಾ ಪರ ಯುದ್ಧದಲ್ಲಿ ತೊಡಗಿದ್ದವು. ಅಂತಿಮವಾಗಿ ಯಾವುದೇ ರೀತಿಯ ಒಪ್ಪಂದವಿಲ್ಲದೆ ದಕ್ಷಿಣ ಮತ್ತು ಉತ್ತರ ಕೊರಿಯಾಗಳು ಬೇರೆ ಬೇರೆಯಾದವು.
ದಕ್ಷಿಣ ಕೊರಿಯಾ ತಮ್ಮ ದೇಶದ ಭಾಗ ಎಂದು ಎಂದು ಉತ್ತರ ಕೊರಿಯಾ ಈಗಲೂ ಹೇಳುತ್ತಿದೆ. ಹೀಗಾಗಿಯೇ ದಕ್ಷಿಣ ಕೊರಿಯಾದ ಮೇಲೆ ನಾನಾ ರೀತಿಯ ದಾಳಿ ನಡೆಸುತ್ತಾ ಬಂದಿದೆ. ದಕ್ಷಿಣ ಕೊರಿಯಾ ಕೂಡ ಪ್ರತಿದಾಳಿ ನಡೆಸುತ್ತಿದೆ. ವಿಶ್ವದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಸೇನೆ ನಿಂತಿರುವುದು ಮತ್ತು ಮಾರಕ ಶಸ್ತ್ರಾಸ್ತ್ರ ಸಂಗ್ರಹ ಇರುವುದು ಈ ದೇಶಗಳ ಗಡಿಯಲ್ಲಿ. ಉತ್ತರ ಕೊರಿಯಾ ಪರಮಾಣು ಅಸ್ತ್ರವನ್ನು ತಯಾರಿಸಿರುವ ವಿಚಾರ ದಕ್ಷಿಣ ಕೊರಿಯಾವನ್ನು ಆತಂಕಕ್ಕೆ ಈಡುಮಾಡಿದೆ. ಅದರ ರಕ್ಷಣೆಗೆ ಪರಮಾಣು ಅಸ್ತ್ರಗಳಿರುವ ಅಮೆರಿಕ ನಿಂತಿದೆ. ಹೀಗಾಗಿ ಈ ಎರಡೂ ದೇಶಗಳ ರಾಜಕೀಯ ಸದಾ ಆತಂಕ ಹುಟ್ಟಿಸುತ್ತಾ ಬಂದಿದೆ. ಸದ್ಯ ಉತ್ತರ ಕೊರಿಯಾ, ಉಕ್ರೇನ್ ವಿರುದ್ಧದ ರಷ್ಯಾ ಯುದ್ಧಕ್ಕೆ ಸೈನಿಕರ ನೆರವನ್ನು ನೀಡಿದೆ. ಇದರಿಂದ ಕುಪಿತಗೊಂಡ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಅವರು ಉಕ್ರೇನ್‌ಗೆ ಯುದ್ಧಾಸ್ತ್ರಗಳ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಈ ಎರಡೂ ದೇಶಗಳ ವೈಮನಸ್ಯಕ್ಕೆ ಇದು ಒಂದು ಉದಾಹರಣೆಯಷ್ಟೆ. ಸದಾ ಎರಡೂ ದೇಶಗಳ ನಡುವೆ ಮುಸುಕಿನ ಯುದ್ಧ ನಡೆಯುತ್ತಲೇ ಇದೆ.
ಉತ್ತರ ಕೊರಿಯಾದ ಸರ್ವಾಧಿಕಾರಿ ಸರ್ಕಾರ ಬಲೂನುಗಳ ಮೂಲಕ ಕಸವನ್ನು ದಕ್ಷಿಣ ಕೊರಿಯಾಕ್ಕೆ ಹಾರಿ ಬಿಟ್ಟು ಕೆಣಕುತ್ತಿದ್ದರೆ, ದಕ್ಷಿಣ ಕೊರಿಯಾ ಆಡಳಿತಗಾರರು ಉತ್ತರ ಕೊರಿಯಾಕ್ಕೆ ಡ್ರೋನ್‌ಗಳನ್ನು ಹಾರಿಬಿಟ್ಟು ಆ ದೇಶದ ವಿರುದ್ಧ ಅಪಪ್ರಚಾರದ ಕರಪತ್ರಗಳನ್ನು ಹಂಚುತ್ತಿದ್ದಾರೆ.
” ಬಿಕ್ಕಟ್ಟು ಆರಂಭವಾದುದು ಕಳೆದ ತಿಂಗಳ ಮೊದಲ ವಾರದಲ್ಲಿ. ತಾವು ತರಬಯಸಿದ ಸುಧಾರಣೆ ಕ್ರಮಗಳಿಗೆ ವಿರೋಧೀ ನಿಯಂತ್ರಣದ ಪಾರ್ಲಿಮೆಂಟ್ ಒಪ್ಪಿಗೆ ನೀಡುತ್ತಿಲ್ಲ ಎಂದು ಆರೋಪಿಸಿ ಅಧ್ಯಕ್ಷ ಯೂನ್ ಹಠಾತ್ತನೆ ಮಿಲಿಟರಿ ಆಡಳಿತ ಜಾರಿಗೆ ತರುವುದಾಗಿ ಘೋಷಿಸಿಬಿಡುತ್ತಾರೆ. ಆ ಸಂಬಂಧ ಸುಗ್ರೀವಾಜ್ಞೆಯನ್ನೂ ಹೊರಡಿಸಿಬಿಡುತ್ತಾರೆ. ದೇಶದ ಎಲ್ಲ ಕಡೆ ಮಿಲಿಟರಿ ಬಂದು ನಿಲ್ಲುತ್ತದೆ. ಈ ಆದೇಶ ಪಾರ್ಲಿಮೆಂಟ್ ಸದಸ್ಯರಿಗಷ್ಟೇ ಅಲ್ಲ ಸಾಮಾನ್ಯ ಜನರಿಗೂ ಆಘಾತವುಂಟು ಮಾಡುತ್ತದೆ. ಇನ್ನೇನು ಪಾರ್ಲಿಮೆಂಟ್ ವಿಸರ್ಜನೆ ಆಗಲಿದೆ ಎನ್ನುವ ವೇಳೆಗೆ ತುರ್ತಾಗಿ ಪಾರ್ಲಿಮೆಂಟ್ ಅಧಿವೇಶನ ಕರೆಯಲಾಗುತ್ತದೆ”.
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್…
ಮಡಿಕೇರಿ : ದುಬಾರೆ ಶಿಬಿರದ ಸಾಕಾನೆ ತಕ್ಷ ಅನಾರೋಗ್ಯದಿಂದ ಸೋಮವಾರ ರಾತ್ರಿ ಮೃತಪಟ್ಟಿದೆ. ಡಿ.೮ರಂದು ರಾತ್ರಿ ೯.೩೦ರ ಸಮಯದಲ್ಲಿ ತಕ್ಷ…
ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…
ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…
ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…
ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…