• ಕೀರ್ತಿ ಬೈಂದೂರು
ಸಂಜೆಗತ್ತಲ ಹೊತ್ತಿನಲ್ಲಿ ಹೂವಿನ ದೊಡ್ಡ ಬುಟ್ಟಿಯನ್ನು ಹ್ಯಾಂಡಲ್ ಬಾರ್ ಮೇಲಿಟ್ಟು, ಸೈಕಲ್ ತುಳಿಯುತ್ತಾ ಸಿದ್ದಪ್ಪಾಜಿ ಅವರು ಮಾನಸ ಗಂಗೋತ್ರಿ ಹಾದಿಯ ಮಾರ್ಗವಾಗಿ ಪಡುವಾರಹಳ್ಳಿಗೆ ಸಾಗುತ್ತಿದ್ದರು. ನಲವತ್ತೈದು ವರ್ಷಗಳಿಂದ ಹೂಗಳೇ ತನ್ನ ಬದುಕಿನ ಆಧಾರವೆಂದು ಇವರು ಹೇಳುತ್ತಿದ್ದರೆ, ಹೂಂಗುಟ್ಟುವ ರೀತಿಯಲ್ಲಿ ಸೇವಂತಿಗೆ, ಮೈಸೂರು ಮಲ್ಲಿಗೆ, ಜಾಜಿ ಹೂಗಳೆಲ್ಲ ಬುಟ್ಟಿಯಲ್ಲಿ ನಗು ಬೀರುತ್ತಿದ್ದವು.
ಸಿದ್ದಪ್ಪಾಜಿ ಅವರ ತಾತ ಕಾಡಲೆಯುತ್ತಾ, ತುಳಸಿ ಎಲೆಗಳನ್ನು ಆಯ್ದು ತಂದು, ಮಾಲೆ ಕಟ್ಟುತ್ತಿದ್ದರು. ನಂತರ ಇವರ ತಂದೆ ಚಿಕ್ಕಣ್ಣ ಅವರು ಹೂ ಕಟ್ಟುವ ಕಲೆಯನ್ನು ಕರಗತ ಮಾಡಿಕೊಂಡರು. ತಂದೆಯವರ ಜೊತೆಗೂಡಿ ಹೂ ಕಟ್ಟಲು ಆರಂಭಿಸಿದಾಗ ಸಿದ್ದಪ್ಪಾಜಿ ಅವರು ಆರೇಳು ವರ್ಷದ ಹುಡುಗ ತಂದೆ ವ್ಯಾಪಾರಕ್ಕೆಂದು ಕಟ್ಟಿದ ಹೂಗಳು ಮನದೇವರಿಗೂ ಸಮರ್ಪಿತವಾಗುತ್ತಿದ್ದವು. ತಂದೆಯ ಜೊತೆ ತಾಯಿಯೂ ಕೂಡಿಕೊಂಡು ಹೂ ಕಟ್ಟುತ್ತಿದ್ದರೂ ತಂದೆಯ ‘ಕೈ’ಗಾರಿಕೆಯೇ ವಿಶೇಷ ಎನ್ನುತ್ತಾರೆ ಸಿದ್ಧಪ್ಪಾಜಿ.
ಒಂದು ಮಾರು ಹೂವಿಗೆ ಇಪ್ಪತ್ತೈದು ಪೈಸೆ ಇದ್ದ ಕಾಲದಲ್ಲಿ ಸಿದ್ದಪ್ಪಾಜಿ ಅವರು ವ್ಯಾಪಾರಕ್ಕಿಳಿದಿದ್ದರು. ನಾಲ್ಕನೇ ತರಗತಿ ಓದುತ್ತಿದ್ದ ಹುಡುಗ ಸಿದ್ದಪ್ಪಾಜಿ ಅವರಿಗೆ ದುಡಿಮೆ ಮಾಡಲೇಬೇಕಾದ ಅನಿವಾರ್ಯತೆ ಎದುರಾಯಿತು. ಇಂದಿಗೂ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು, ಚಾಮುಂಡೇಶ್ವರಿ ಟಾಕಿಸ್ ಪಕ್ಕದಲ್ಲಿ ಮಾರುವವರಿಂದ ಸೇವಂತಿಗೆ ಹೂ, ಮಲಿಗೆ ಮೊಗ್ಗುಗಳನ್ನು ಪಡೆದು, ಆರು ಗಂಟೆಯ ಹೊತ್ತಿಗೆ ಸೈಕಲ್ ಸವಾರಿಯೊಂದಿಗೆ ಇವರ ದಿನದ ದುಡಿಮೆ ಆರಂಭವಾಗುತ್ತದೆ. ಬೆಳಗಿನ ಹೂವಿನ ವ್ಯಾಪಾರ ಮುಗಿಯುವಾಗ ಸಮಯ ಹತ್ತೂವರೆಯಾಗಿರುತ್ತದೆ. ಹನ್ನೊಂದರಿಂದ ಸಂಜೆ ನಾಲ್ಕೂವರೆಯವರೆಗೆ ಮಲ್ಲಿಗೆ ಮೊಗ್ಗುಗಳನ್ನು ಕಟ್ಟಿ ಮಾಲೆಯಾಗಿಸುತ್ತಾರೆ. ಮತ್ತೆ ಸಂಜೆ ಐದು ಗಂಟೆಗೆ ಇನ್ನೊಂದು ಸುತ್ತಿನ ಸವಾರಿ! ಜನತಾನಗರ, ಅಕ್ಷಯ ಭಂಡಾರ್, ವಿಜಯಶ್ರೀಪುರ, ಜಯಲಕ್ಷ್ಮೀಪುರಂ, ಗಂಗೋತ್ರಿ ಮಾರ್ಗಗಳಲ್ಲಿ ಸಿದ್ದಪ್ಪಾಜಿ ಅವರು ಹೆಚ್ಚಾಗಿ ಸಂಚರಿಸುತ್ತಾರೆ.
ಮೂವತ್ತು ವರ್ಷಗಳ ಹಿಂದೆ ಸಿದ್ದಪ್ಪಾಜಿ ಅವರು ಸಿದ್ದಪ್ಪಾಜಿ ದೇವರಗುಡ್ಡರಾದರು. ಅಂದಿನಿಂದ ಇಂದಿನವರೆಗೂ ಬಿಸಿಲು, ಮಳೆ, ಚಳಿ ಎಂಬುದನ್ನು ಲೆಕ್ಕಿಸದೆ ಕಾಲಿಗೆ ಚಪ್ಪಲಿ ಮೆಟ್ಟುವುದನ್ನೇ ನಿಲ್ಲಿಸಿದ್ದಾರೆ. ದಾರಿಯಲ್ಲಿ ಹೋಗುತ್ತಿರುವವರು, ‘ಹೂವಿಗೆಷ್ಟಪ್ಪಾ? ಎಂದು ಕೇಳುವುದು ಸಹಜ ಹಾಗಂದ ತಕ್ಷಣವೆ ಸೈಕಲ್ ನಿಲ್ಲಿಸಿ, ಕಾಲೂರಿ, ಮುಳ್ಳು ಚುಚ್ಚಿಸಿಕೊಂಡ ಉದಾಹರಣೆಗಳು ಬೇಕಾದಷ್ಟಿವೆ. ಕತ್ತಲು ಆವರಿಸುತ್ತಿದ್ದರೂ ಮಣ್ಣು, ದೂಳಿನ ಕಣಗಳನ್ನು ಅಂಟಿಸಿಕೊಂಡ ವಾದಗಳು ಸಿದ್ದಪ್ಪಾಜೆ ಅವರ ಶ್ರಮಸಂಸ್ಕೃತಿಯನ್ನು ಸಾರುತ್ತಿದ್ದವು. ರಾಗಿಮುದ್ದ ಸೊಪ್ಪು-ಕಾಳಿನ ಸಾರು ತನ್ನ ಶಕ್ತಿಯ ಗುಟ್ಟೆನ್ನುವ ಸಿದ್ದಪ್ಪಾಜಿ ಅವರಿಗೀಗ ಅರವತ್ತೊಂದರ ಪ್ರಾಯ, ಹೂವಿನ ವ್ಯಾಪಾರ ತನ್ನ ಬದುಕನ್ನು ಎಂದೂ ಮಂಕಾಗಿಸಿಲ್ಲ. ಹೆಂಡತಿ, ಮಕ್ಕಳ ಹೊಟ್ಟೆಯನ್ನು ಪೊರೆಯುತ್ತಿರುವದೇ ಇದು. ಹೂವಿನ ವ್ಯಾಪಾರವನ್ನು ಯಾರು ಬೇಕಾದರೂ ಮಾಡಬಹುದು. ಇವತ್ತು ಕೇವಲ 500 ರೂಪಾಯಿ ಬಂಡವಾಳ ಹಾಕಿದರೂ ಸಾಕು, ನಾಳೆಗೆ ಅದೇ ಹಣ ಸಾವಿರ ರೂಪಾಯಿಯಾಗುತ್ತದೆ. ಹೂವಿನ ವ್ಯಾಪಾರದಲ್ಲಿ ಸುಲಭ ದುಡ್ಡು ಸಂಪಾದಿಸಬಹುದು. ಆದರೆ ಇವತ್ತು ಬಂದ ಲಾಭ ನಾಳೆಯೂ ಬರುತ್ತದೆಂಬ ನಿರೀಕ್ಷೆ ಇಟ್ಟುಕೊಳ್ಳಬಾರದು ಎಂದು ತಮ್ಮ ಅನುಭವವನ್ನು ಹಂಚಿಕೊಳ್ಳುವ ಸಿದ್ದಪ್ಪಾಜಿ, ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು ಎಂಬ ಕಿವಿ ಮಾತನ್ನೂ ಹೇಳುತ್ತಾರೆ.
‘ನಿಮ್ಮ ದುಡಿಮೆಯಲ್ಲಿ ಒಂದಷ್ಟು ಕೂಡಿಟ್ಟು, ಸ್ಕೂಟರ್ ತೆಗೆದುಕೊಳ್ಳಬಹುದಲ್ಲಾ’ ಎಂದು ಅನೇಕರು ಸಲಹೆ ನೀಡಿದ್ದರು. ಅದಕ್ಕಿವರು ‘ಜೀವನಪೂರ್ತಿ ನನ್ ಜೊತೆಗೆ ನನ್ ರಥನೂ ಇರ್ಬೇಕು’ ಎನ್ನುತ್ತಾ, ಸೈಕಲ್ ಜೊತೆಗಿನ ಬಾಂಧವ್ಯವನ್ನು ಸ್ಮರಿಸಿಕೊಳ್ಳುತ್ತಾರೆ.
- ಡಾ.ಐ.ಸೇಸುನಾಥನ್ ‘ಒಬ್ಬ ನಿನ್ನ ಬಲಗೆನ್ನೆಗೆ ಹೊಡೆದರೆ ಅವನಿಗೆ ನಿನ್ನ ಇನ್ನೊಂದು ಕೆನ್ನೆಗೂ ಹೊಡೆಯಲು ಅನುವು ಮಾಡಿಕೊಡು; ನಿನ್ನ ಮೇಲಂಗಿಯನ್ನು…
‘ಸ್ಯಾಂಡಲ್ ವುಡ್’ ಎಂದೇ ಹೆಸರಾಗಿರುವ ಕನ್ನಡ ಚಿತ್ರರಂಗ ಇಂದು ಭಾರತದ ಒಂದು ಪ್ರಮುಖ ಚಿತ್ರೋದ್ಯಮವಾಗಿ ಬೆಳೆದಿದೆ. ಈ ಮೊದಲು ಪ್ರತಿ…
ಲಕ್ಷ್ಮಿಕಾಂತ್ ಕೊಮಾರಪ್ಪ ೨೦೨೩ರ ಡಿ.೪ರಂದು ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದ ಅರ್ಜುನ; ೨ ವರ್ಷ ಕಳೆದರೂ ಅರ್ಜುನನ ಸ್ಮಾರಕ, ಪ್ರತಿಮೆಗಿಲ್ಲ…
ಮೈಸೂರು: ಸಂಭ್ರಮ, ಸಡಗರ, ವಿಶೇಷ ಪ್ರಾರ್ಥನೆಯೊಂದಿಗೆ ಕ್ರೈಸ್ತ ಧರ್ಮದ ದೈವ ಬಾಲಏಸುವಿನ ಜಯಂತಿಯ ಸ್ಮರಣೆಯು ಅದ್ಧೂರಿಯಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ…
ಪ್ರಶಾಂತ್ ಎಸ್. ಗ್ರಾಮೀಣ ಭಾಗದ ರಸ್ತೆಗಳಲ್ಲಿ ಸಮಸ್ಯೆ ಕಣ್ಣಿಗೆ ದೂಳು ಬಿದ್ದರೆ ಅನಾಹುತ ಸಾಧ್ಯತೆ ವಾಹನ ಸವಾರರಿಗೆ ಸವಾಲು; ಎಚ್ಚರ…
ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…