ಅಂಕಣಗಳು

ನಿಜ ವಿರಕ್ತಿಯ ಮಹಾಚೇತನ ತರಳಬಾಳು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ

‘ದಕ್ಷಿಣೋತ್ತರ ಕರ್ನಾಟಕದ ವಿವಿಧ ಸಾಂಸ್ಕೃತಿಕ ಹಿನ್ನೆಲೆಯ ದಲಿತ, ಕುರುಬ, ಬ್ರಾಹ್ಮಣ, ಜಂಗಮ ಎಂಬಿತ್ಯಾದಿ ಭೇದವಿಲ್ಲದೆ ಒಂದೇ ಕಂಬದಿಂದ ಬೆಳಗಿದ ದೀಪ ಎಲ್ಲ ಮನೆಗಳ ಬೆಳಕಾಯಿತು. ಒಂದೇ ತೊಟ್ಟಿಯ ನಲ್ಲಿಯಿಂದ ಸುರಿದ ನೀರು ಎಲ್ಲರ ದಾಹ ತಣಿಸಿತು. ಜವಾನ, ಪ್ರಾಚಾರ್ಯ ಎಂಬ ವ್ಯತ್ಯಾಸವಿಲ್ಲದೆ ಎಲ್ಲರ ಮಕ್ಕಳು ಅಲ್ಲಿ ಕೂಡಿ ಆಡಿ ವಧಿಸಿದರು. ತಮ್ಮ ತಮ್ಮ ಬಗೆಯಲ್ಲಿ ಸಾರ್ಥಕ ಬದುಕನ್ನು ಕಂಡುಕೊಂಡರು…

ತರಳಬಾಳು ಎಂಬುದು ಮರುಳಸಿದ್ಧರ ಒಂದು ಆಶೀರ್ವಚನ ಮಾತ್ರ ಅಲ್ಲ, ಅದೊಂದು ಆದರ್ಶ, ದರ್ಶನ, ಬದುಕು ಪಡೆಯಬೇಕಾದ ಅನುಭೂತಿ. ತರಳಬಾಳು ನಗರ ಒಂದು ಕನಸು ನನಸಾದ ಮಂಟಪ. ಮಂಟಪದ ಕಾಲು, ಕೀಲುಗಳ ಬಂಧಕ್ಕೆ ಪೂಜನೀಯರ ಅನುಭಾವದ ಅಂಟಿನ ಬೆಸುಗೆ ಸೇರಿತ್ತು. ಮಹತ್ತಿನಿಂದಲೇ ಮಹತ್ತು ಎನ್ನುವುದು ಎಲ್ಲ ಕಾಲದ ಸತ್ಯ…’

ಸರಳ ಸುಂದರವಾದ ಈ ಕಾವ್ಯಾತ್ಮಕ ಮಾತುಗಳನ್ನು ಬರೆದವರು ಪ್ರೊ.ಗಜನನ ಈಶ್ವರ ಹೆಗಡೆಯವರು. ಈ ಮಾತುಗಳು ಏಕಕಾಲಕ್ಕೆ ಮರುಳಸಿದ್ಧರು, ಶ್ರೀ ಶಿವಕುಮಾರ ಸ್ವಾಮೀಜಿ ಮತ್ತು ಸಿರಿಗೆರೆಯ ಶ್ರೀಮಠದ ಸಾಧನೆಗಳು ಹೇಗೆ ಬಸವ ಪರಂಪರೆಯ ಆದರ್ಶಗಳ ಪ್ರಾಯೋಗಿಕ ನಿದರ್ಶನಗಳಾಗಿವೆ ಎಂಬುದನ್ನು ಸ್ಪಷ್ಟವಾಗಿ ಮನಗಾಣಿಸುತ್ತವೆ.

ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು ತರಳಬಾಳು ಸದ್ಧರ್ಮ ಸಿಂಹಾಸನದ ಅಧಿಪತಿಗಳಾದ ಸಂದರ್ಭವಂತೂ ಸಾಕಷ್ಟು ಸಂಕೀರ್ಣ ಸಮಸ್ಯೆಗಳನ್ನು ಒಳಗೊಂಡ ಕಾಲಘಟ್ಟವಾಗಿತ್ತು. ದೇಶ ಬ್ರಿಟಿಷರ ಪಾರತಂತ್ರ್ಯಕ್ಕೆ ಒಳಗಾಗಿತ್ತು. ಲಿಂಗಾಯತ ಸಮುದಾಯ ತನ್ನ ಅಸ್ತಿತ್ವಕ್ಕಾಗಿಹೋರಾಟ ನಡೆಸುತ್ತಿತ್ತು. ತರಳಬಾಳು ಶ್ರೀಮಠದ ಶಿಷ್ಯ ಸಮುದಾಯ ಉಳಿದವರಿಂದ ತಿರಸ್ಕಾರ-ಅವಮಾನಗಳನ್ನು ಎದುರಿಸುವ ಸ್ಥಿತಿಯಲ್ಲಿತ್ತು. ಮಠದ ಒಳಗಿನ ಪರಿಸ್ಥಿತಿ ಪರಸ್ಪರ ವಿಶ್ವಾಸವಿಲ್ಲದೇ ವಿಕ್ಷಿಪ್ತ ಹಂತಕ್ಕೆ ಹೋಗಿ ತಲುಪಿತ್ತು. ಅಧಿಕಾರದ ಆಮಿಷವನ್ನು ಮೀರಿ ನಿಲ್ಲಬೇಕಾದ ವಿರಕ್ತಿಯೆ ಅಧಿಕಾರಕ್ಕಾಗಿ ಗುರುಜೀವವನ್ನು ಬಲಿ ತೆಗೆದುಕೊಂಡ ದುರಂತ ಶ್ರೀಪೀಠವನ್ನು ಬಾಧಿಸುತ್ತಿತ್ತು.

ಇದನ್ನು ಓದಿ : ವ್ಯರ್ಥ ಪದಾರ್ಥಗಳ ಸಂಗ್ರಹಣೆ ಬ್ಯಾಂಕ್‌

ಇಂತಹ ದುರ್ಬರ ಸಂದರ್ಭದಲ್ಲಿ ಕಾರ್ಮೋಡಗಳ ಮರೆಯಿಂದ ಹೊರಬರುವ ಸೂರ್ಯನಂತೆ ಶ್ರೀ ಶಿವಕುಮಾರ ಸ್ವಾಮೀಜಿಯವರು ಸದ್ಧರ್ಮ ಪೀಠದ ೧೦-೫-೧೯೪೦ರಂದು ೨೦ನೆಯ ಪೀಠಾಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಳ್ಳುತ್ತಾರೆ. ಬಸವಣ್ಣನವರ ತತ್ವಾದರ್ಶಗಳ ಬೆಳಕಿನಲ್ಲಿ ಸಮಾಜ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಬೇಕು ಎಂಬುದು ಪೂಜ್ಯರ ಮಹದಾಶಯವಾಗಿತ್ತು. ಜಗಜ್ಯೋತಿ ಬಸವಣ್ಣನವರು ಮತ್ತು ಮರುಳಸಿದ್ಧರ ಗುರು ರೇವಣಸಿದ್ಧರ ಬಗ್ಗೆ ಸ್ವಾಮೀಜಿಯವರಿಗೆ ವಿಶೇಷವಾದ ಒಲವು. ಅವರ ಬದುಕಿನ ಆಶಯದಂತೆಯೇ ತಾವೂ ಬದುಕಿ, ಸಮಾಜವನ್ನೂ ಮುನ್ನಡೆಸಬೇಕು ಎಂಬುದು ಅವರ ಅಪೇಕ್ಷೆಯಾಗಿತ್ತು. ತೀರಾ ಆಕಸ್ಮಿಕವೋ ಅಥವಾ ಪೂರ್ವ ನಿಶ್ಚಿತವೋ ಎನ್ನುವಂತೆ ಶ್ರೀಗಳು ಜನಿಸಿದ್ದು ೧೯೧೪ ಏಪ್ರಿಲ್ ೨೮ ಮಂಗಳವಾರ ಶ್ರೀ ಬಸವೇಶ್ವರ ಜಯಂತಿಯ ದಿನದಂದು.

ಸ್ವಾಮೀಜಿಯವರಿಗೆ ಬಾಲ್ಯದಿಂದಲೂ ಶಿಕ್ಷಣದ ಬಗ್ಗೆ ವಿಶೇಷವಾದ ಒಲವು. ಅವರ ಹುಟ್ಟೂರು ಮುತ್ತುಗದೂರಿನಲ್ಲಿ ಲೋಯರ್ ಸೆಕೆಂಡರಿವರೆಗೆ ಶಿಕ್ಷಣವನ್ನು ಪಡೆಯುತ್ತಾರೆ. ಶಿಕ್ಷಣದ ಬಗೆಗಿನ ಆಸಕ್ತಿ ಅವರನ್ನು ಕಾಶಿಗೂ ಕರೆದೊಯ್ಯುತ್ತದೆ. ಅಲ್ಲಿಯ ಸಂಸ್ಕೃತ ವಿದ್ಯಾಭ್ಯಾಸ ಶ್ರೀಗಳನ್ನು ಒಬ್ಬ ಪ್ರತಿಭಾವಂತ ಕವಿ-ವಿದ್ವಾಂಸರನ್ನಾಗಿ ರೂಪಿಸುತ್ತದೆ. ಅವರು ಆಗಾಗ ರಚಿಸಿದ ಪದ್ಯಗಳನ್ನು ಗಮನಿಸಿದರೆ ಸಂಸ್ಕೃತ ಸಾಹಿತ್ಯದ ಒಬ್ಬ ಶ್ರೇಷ್ಠ ಕವಿವರ್ಯರಾಗುವ ಎಲ್ಲ ಲಕ್ಷಣಗಳೂ ಅದರಲ್ಲಿ ಕಂಡುಬರುತ್ತವೆ. ಆದರೆ ಮಠದ ಅಧಿಕಾರದ ಜವಾಬ್ದಾರಿಯಿಂದಾಗಿ ಸ್ವಾಮೀಜಿಯವರು ಸಂಸ್ಕೃತ ಸಾಹಿತ್ಯದ ಅಧ್ಯಯನದಿಂದ ಸಾಮಾಜಿಕ ಸಮಸ್ಯೆಗಳ ಪರಿಹಾರದ ಕಡೆಗೆ ಗಮನ ಹರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಬಸವಣ್ಣನವರು ಅವರಿಗೆ ಮಾರ್ಗದರ್ಶಕ ಶಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಬಸವಣ್ಣನವರ ವಚನಗಳ ಅಧ್ಯಯನ ಶ್ರೀ ಶಿವಕುಮಾರ ಸ್ವಾಮೀಜಿ ಅವರನ್ನು ಹೆಚ್ಚು ಸಮಾಜಮುಖಿಯಾಗಿಸುತ್ತದೆ. ಬಸವಣ್ಣನವರ ಪರಿಚಯ ಎಲ್ಲರಿಗೂ ಆಗಬೇಕು ಎನ್ನುವ ಹಿನ್ನೆಲೆಯಲ್ಲಿ ವಚನಗಳನ್ನು ಇಂಗ್ಲಿಷ್, ಹಿಂದಿ, ತೆಲುಗು ಮುಂತಾದ ಭಾಷೆಗಳಿಗೆ ಅನುವಾದಿಸಿ ಶ್ರೀಮಠದಿಂದ ಪ್ರಕಟಿಸಿದರು.

ಶಿಕ್ಷಣದ ಮೂಲಕ ಸಮಾಜವನ್ನು ಸದೃಢಗೊಳಿಸುವುದು ಮತ್ತು ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವ ಮೂಲಕ ಮನುಷ್ಯರೆಲ್ಲರನ್ನೂ ಒಂದುಗೂಡಿಸುವುದು ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪ್ರಮುಖ ಕಾಳಜಿಯಾಗಿತ್ತು. ಅವರು ಆರಂಭಿಸಿದ ಯಾವುದೇ ಶಾಲಾ ಕಾಲೇಜುಗಳು ಮತ್ತು ವಿದ್ಯಾರ್ಥಿನಿಲಯಗಳಲ್ಲಿ ಜತಿಮತ ಭೇದಕ್ಕೆ ಅವಕಾಶವನ್ನು ನೀಡುತ್ತಿರಲಿಲ್ಲ. ಈ ವಿಷಯದಲ್ಲಿ ಸಮಾಜವನ್ನು ಪ್ರಾಂಜಲವಾಗಿ ಮತ್ತು ಅಗತ್ಯ ಸಂದರ್ಭಗಳಲ್ಲಿ ಕಠಿಣವಾದ ಮಾತುಗಳ ಮೂಲಕವೂ ತಿದ್ದುವ ಪ್ರಯುತ್ನ ಮಾಡಿದರು. ಒಂದು ಸಂದರ್ಭದಲ್ಲಿ ಅವರು, ‘ವಿದ್ಯಾಭ್ಯಾಸ, ಕಾಯಕಗೌರವ, ಜತಿವಾದದ ನಿರ್ಮೂಲನ ಇದರಲ್ಲಿ ನಾವು ಯಶಸ್ವಿಯಾಗುತ್ತೇವೆಂಬ ನಂಬಿಕೆಯನ್ನಿಟ್ಟುಕೊಂಡೇ ಮುನ್ನಡೆದೆವು’ ಎಂದು ಹೇಳುತ್ತಾರೆ.

ನಾಡಿನ ಧರ್ಮ, ಸಾಹಿತ್ಯ, ಸಂಸ್ಕೃತಿ, ಅಧ್ಯಾತ್ಮ ಮುಂತಾದ ಕ್ಷೇತ್ರಗಳಲ್ಲಿ ಈಗಲೂ ‘ತರಳಬಾಳು ಹುಣ್ಣಿಮೆ’ ಒಂದು ವಿಶಿಷ್ಟ ಕಾರ್ಯಕ್ರಮವಾಗಿದೆ. ಪ್ರತಿವರ್ಷ ನಡೆಯುವ ಈ ಕಾರ್ಯಕ್ರಮವನ್ನು ಶ್ರೀ ಶಿವಕುಮಾರ ಸ್ವಾಮೀಜಿಯವರು ಮಠಾಧಿಪತಿಗಳ ಸಂಘಟನೆ, ಮಠ – ಮಠಗಳ ನಡುವೆ ಸಂಪರ್ಕ-ಹೊಂದಾಣಿಕೆ ಸಾಧಿಸಲು ಆರಂಭಿಸಿದರು. ಯಾವುದೇ ಭೇದವಿಲ್ಲದೆ ಎಲ್ಲ ಸಮುದಾಯಗಳ ಸ್ವಾಮಿಗಳು, ಸಾಹಿತಿಗಳು, ರಾಜಕೀಯ ನೇತಾರರು, ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಧಾರ್ಮಿಕ ಕ್ಷೇತ್ರಕ್ಕೆ ಇದು ಸ್ವಾಮೀಜಿ ಅವರ ವಿಶೇಷ ಕೊಡುಗೆಯಾಗಿದೆ.

ಇದನ್ನು ಓದಿ : ಒಂದೇ ವೇದಿಕೆಯಲ್ಲಿ ಅನಿಲ್ ಚಿಕ್ಕಮಾದು-ಬೀಚನಹಳ್ಳಿ ಚಿಕ್ಕಣ್ಣ

ಸಂಶೋಧನೆ ಕೂಡ ಶ್ರೀ ಶಿವಕುಮಾರ ಸ್ವಾಮೀಜಿ ಆಸಕ್ತಿಯ ಕ್ಷೇತ್ರವಾಗಿತ್ತು. ತರಳಬಾಳು ಪೀಠದ ಮೂಲ ಕ್ಷೇತ್ರಗಳಾದ ಉಜ್ಜಯಿನಿ, ತೆಲುಗುಬಾಳು ಮತ್ತು ಅಕ್ಕ ಮಹಾದೇವಿ ಅವರ ಐಕ್ಯ ಸ್ಥಳವಾದ ಕದಳಿಯ ಬಗ್ಗೆ ಅವರು ಸಂಶೋಧನಾ ಯಾತ್ರೆಗಳನ್ನೇ ಕೈಗೊಂಡಿದ್ದರು. ರಾಜಕೀಯ ಕ್ಷೇತ್ರ ಮತ್ತು ರಾಜಕಾರಣಿಗಳ ನಿಲುವುಗಳ ಬಗೆಗೂ ಸ್ವಾಮೀಜಿ ತೀರಾ ಸೂಕ್ಷ್ಮವಾಗಿ ಪ್ರತಿಕ್ರಿಯಿಸುತ್ತಿದ್ದರು. ಯೋಗ್ಯರಾದವರನ್ನು ಬೆಂಬಲಿಸುವ ಮೂಲಕ ಎಷ್ಟೋ ಜನರಿಗೆ ಸಾಮಾಜಿಕ ರಾಜಕೀಯ ಶಕ್ತಿಯನ್ನು ತಂದುಕೊಟ್ಟರು.

ಒಟ್ಟಿನಲ್ಲಿ, ಶ್ರೀ ಶಿವಕುಮಾರ ಸ್ವಾಮೀಜಿ ಬದುಕನ್ನು ಸಮಗ್ರ ದೃಷ್ಟಿಕೋನದಿಂದ ಕಂಡು ಸಮರ್ಥವಾಗಿ ಮುನ್ನಡೆಸಲು ಬೇಕಾದ ಧೃತಿಯನ್ನು ಭಕ್ತ ಸಮುದಾಯಕ್ಕೆ ತಂದುಕೊಟ್ಟ ಮಹಾಗುರುವರೇಣ್ಯರು. ಇನ್ನೂ ಅವರ ಮಾರ್ಗದರ್ಶನದ ಅಗತ್ಯವಿದೆ ಎನ್ನುವಾಗಲೇ ನಿವೃತ್ತಿಯನ್ನು ಘೋಷಿಸಿ ನಿಜ ವಿರಕ್ತರು ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟವರು. ಇಂತಹ ಮಹಾಚೇತನ ೧೯೯೨ ಸೆಪ್ಟೆಂಬರ್ ೨೪ ರಂದು ಬೆಳಗಿನೊಳಗಣ ಮಹಾಬೆಳಗಾಗಿ ಅವರ ಜಂಗಮ ಪ್ರಭಾ ಪುಂಜದಿಂದಲೇ ಈಗಿನ ಗುರುಗಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಮೂಲಕ ನಮ್ಮನ್ನು ಮುನ್ನಡೆಸುತ್ತಿದ್ದಾರೆ.

ಶ್ರೀ ಶಿವಕುಮಾರ ಸ್ವಾಮೀಜಿ ಅವರ ಒಂದೆರಡು ಮಾತುಗಳಲ್ಲಿಯೇ ಹೇಳಬೇಕೆಂದರೆ ಸಂತ ಮಹಂತರು ಧರಿಸುವ ಕಾವಿಯನ್ನು ಪವಿತ್ರಾಗ್ನಿಯ ಸಂಕೇತವೆಂದು ಹೇಳುವುದುಂಟು. ಅದು ಬೆಂಕಿಯೂ ಅಹುದು, ಬೆಳಕೂ ಅಹುದು. ಕೆಲವರಿಗೆ ಅದು ಬೆಂಕಿಯಾದರೂ ಬಹುಜನಕ್ಕೆ ಅದು ಬೆಳಕು. ಶಿವಕುಮಾರ ಸ್ವಾಮೀಜಿ ಅವರು ಅಷ್ಟೇ. ಕೆಲವರಿಗೆ ಅವರು ಬೆಂಕಿಯೇ ಆದರೂ ಅದು ಚಿನ್ನವನ್ನು ಪುಟಕ್ಕಿಡುವ ಬೆಂಕಿ. ಆದರೆ ಲಕ್ಷಾಂತರ ಮಂದಿಗೆ ಅವರು ಬೆಳಕು ಕೊಟ್ಟವರು. ಕಾವಿಯೇ ಕರ್ಪೂರವಾಗಿ ಉರಿದು ಮರೆಯಾದಂತೆ ಮರೆಯಾದವರು. ಅಂಥವರ ಜೀವನ ತೆರೆದ ಪುಸ್ತಕ. ಅವರ ಬದುಕು ಸಟಿಕದಂತೆ ಒಳಗೂ ಹೊರಗೂ ಪಾರದರ್ಶಕ. ಆದರೆ ಅವರು ಬಿರುಗಾಳಿಯಂತೆ ಬೀಸಿದರು, ಗುಡುಗಿನಂತೆ ಗುಡುಗಿದರು, ಸಿಡಿಲಿನಂತೆ ಜಡಿದರು, ಮಳೆಯಂತೆ ಸುರಿದರು. ಕಾರಣ, ಭೂಮಿ ತಂಪಾಗಿ ಬೆಳೆ ಬೆಳೆಯಲೆಂದು. ಜೀವಕೋಟಿ ಬದುಕಲೆಂದು. ಇದು ಪ್ರಕೃತಿಯ ಸ್ವಾಭಾವಿಕ ಕ್ರಿಯೆಯಷ್ಟೆ! ಅದರಂತೆಯೇ ಶಿವಕುಮಾರ ಸ್ವಾಮೀಜಿ ಸನ್ಯಾಸವೂ ಸಹ.

ಸೆ.೨೮ರಂದು ಶ್ರದ್ಧಾಂಜಲಿ ಸಮಾರಂಭ

ಮೈಸೂರು: ತರಳಬಾಳು ಸಮಾಗಮ ಮತ್ತು ಶ್ರೀ ತರಳಬಾಳು ಶಿಕ್ಷಣ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಶ್ರೀ ತರಳಬಾಳು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಮೂವತ್ತನಾಲ್ಕನೆಯ ಶ್ರದ್ಧಾಂಜಲಿ ಸಮಾರಂಭವನ್ನು ಸೆ.೨೮ರಂದು ಬೆಳಿಗ್ಗೆ ೧೧ಕ್ಕೆ ನಗರದ ತೊಣಚಿಕೊಪ್ಪಲು ಬಡಾವಣೆಯಲ್ಲಿ ಶ್ರೀ ತರಳಬಾಳು ಶಿಕ್ಷಣ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಗಾವಡಗೆರೆಯ ಶ್ರೀ ಗುರುಲಿಂಗಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಎಚ್.ಕೆ. ಲಿಂಗರಾಜು ನುಡಿನಮನ ಸಲ್ಲಿಸಲಿದ್ದಾರೆ. ಶ್ರೀ ತರಳಬಾಳು ಸಮಾಗಮದ ಅಧ್ಯಕ್ಷ ಡಿ.ಎನ್. ಲೋಕಪ್ಪ ಅಧ್ಯಕ್ಷತೆ ವಹಿಸಲಿದ್ದು, ಉಪಾಧ್ಯಕ್ಷ ಡಾ.ಕೆ.ಬಿ.ಗುರುಮೂರ್ತಿ, ಶಿಕ್ಷಣ ಕೇಂದ್ರದ ಪ್ರಾಂಶುಪಾಲ ಎಸ್.ಮಹದೇವಸ್ವಾಮಿ ಹಾಜರಿರುವರು

-ಪ್ರೊ.ಮೊರಬದ ಮಲ್ಲಿಕಾರ್ಜುನ

ಆಂದೋಲನ ಡೆಸ್ಕ್

Recent Posts

ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ: ಇಬ್ಬರ ಬಂಧನ

ಮಹೇಂದ್ರ ಹಸಗೂಲಿ, ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ಪಟ್ಟಣದ ಜನತಾ ಕಾಲೋನಿಯ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆ…

7 hours ago

ಭಾರತ-ಯುರೋಪ್‌ ಒಕ್ಕೂಟ ವ್ಯಾಪಾರ ಒಪ್ಪಂದಕ್ಕೆ ಸಹಿ

ನವದೆಹಲಿ: ಮದರ್‌ ಆಫ್‌ ಆಲ್‌ ಡೀಲ್ಸ್‌ ಎಂದೇ ಕರೆಯಲ್ಪಡುವ ಭಾರತ-ಯುರೋಪ್‌ ಒಕ್ಕೂಟವು ಮುಕಕ್ತ ವ್ಯಾಪಾರ ಒಪ್ಪಂದಕ್ಕೆ ಇಂದು ಅಧಿಕೃತವಾಗಿ ಸಹಿ…

12 hours ago

ಶಿಡ್ಲಘಟ್ಟ ಕೇಸ್‌ನಲ್ಲಿ ಕಾನೂನಿನಂತೆ ಕ್ರಮ: ಸಚಿವ ಭೈರತಿ ಸುರೇಶ್‌

ಬೆಂಗಳೂರು: ಶಿಡ್ಲಘಟ್ಟದಲ್ಲಿ ಪೌರಾಯುಕ್ತಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡನನ್ನು ಸರ್ಕಾರ ರಕ್ಷಣೆ ಮಾಡಲ್ಲ. ಕಾನೂನು ಪ್ರಕಾರ ಶಿಕ್ಷೆ…

12 hours ago

ಪಿರಿಯಾಪಟ್ಟಣ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಸವಾರ ಸಾವು

ಪಿರಿಯಾಪಟ್ಟಣ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೋಣಿಕೊಪ್ಪ-ಪಿರಿಯಾಪಟ್ಟಣ ರಸ್ತೆಯಲ್ಲಿ ನಡೆದಿದೆ. ತಾಲ್ಲೂಕಿನ…

12 hours ago

ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ: ಲೇಖಕಿಯರಿಂದ ಕಥಾಸಂಕಲನ ಆಹ್ವಾನ

ಮೈಸೂರು: ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಸಂಸ್ಥಾಪಕ ಅಧ್ಯಕ್ಷೆ, ಖ್ಯಾತ ಸ್ತ್ರೀವಾದಿ ವಿಮರ್ಶಕಿ ಹಾಗೂ ಲೇಖಕಿ ಡಾ.ವಿಜಯಾ ದಬ್ಬೆ ಅವರ ಹೆಸರಿನಲ್ಲಿ 2022…

13 hours ago

ಗುಂಡ್ಲುಪೇಟೆ: ಬೊಮ್ಮಲಾಪುರದಲ್ಲಿ ವಾಸದ ಮನೆಗೆ ನುಗ್ಗಿದ ಕಡವೆ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ದೊರೆ ಎಂಬುವವರ ವಾಸದ ಮನೆಗೆ ನುಗ್ಗಿದ ಕಡವೆಯನ್ನು…

13 hours ago