ಅಂಕಣಗಳು

ಶೂ ಎಸೆದ ಘಟನೆ ಭವಿಷ್ಯದ ಆತಂಕಕಾರಿ ಬೆಳವಣಿಗೆ

ದೆಹಲಿ ಕಣ್ಣೋಟ 

ಅಕ್ಟೋಬರ್ ೬ರಂದು (ಸೋಮವಾರ) ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ (ಬಿ.ಆರ್.ಗವಾಯಿ) ಅವರು ನ್ಯಾಯಪೀಠದಲ್ಲಿದ್ದಾಗ ಅವರತ್ತ ವಕೀಲನೊಬ್ಬ ಶೂ ಎಸೆದಿದ್ದು, ಪ್ರಜಾಪ್ರಭುತ್ವದ ಮೂರನೇ ಅಂಗವಾದ ನ್ಯಾಯಾಂಗಕ್ಕೆ ಮಾಡಿದ ಅಪಚಾರವಾಗಿದೆ. ಈ ಕರಾಳ ದಿನವು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ದುರದೃಷ್ಟಕರ ಬೆಳವಣಿಗೆ. ನ್ಯಾಯಾಲಯದೊಳಗೆ ಮುಕ್ತವಾಗಿ ಪ್ರವೇಶಿಸಿ ತಮ್ಮ ಕಾರ್ಯನಿರ್ವಹಿಸುವ ಸ್ವಾತಂತ್ರ್ಯವನ್ನು ಹಿರಿಯ ವಕೀಲರೊಬ್ಬರು ದುರುಪಯೋಗಪಡಿಸಿಕೊಂಡಿದ್ದು ಖಂಡನೀಯ.

ಇಂತಹ ಘಟನೆಗಳ ಇತಿಹಾಸವನ್ನು ಕೆದಕಿದರೆ ೧೯೬೮ರ ಮಾರ್ಚ್ ೧೩ರಂದು ಅಂದಿನ ಮುಖ್ಯ ನ್ಯಾಯಮೂರ್ತಿ ಎಂ.ಹಿದಾಯತ್ ಉಲ್ಲಾ ಅವರ ಪೀಠದಲ್ಲಿದ್ದ ನ್ಯಾಯಮೂರ್ತಿ ಎ.ಎನ್.ಗ್ರೋವರ್ ಅವರನ್ನು ಗುರಿಯಾಗಿಸಿಕೊಂಡು ಕಕ್ಷಿದಾರನೊಬ್ಬ ದಾಳಿಮಾಡಲು ಮುಂದಾಗಿದ್ದ ಪ್ರಸಂಗ ನಡೆದಿತ್ತು. ಆಗ ಮುಖ್ಯನ್ಯಾಯಮೂರ್ತಿಯವರೇ ದಾಳಿಮಾಡಲು ಬಂದವನನ್ನು ತಡೆದಿದ್ದರು. ಪೊಲೀಸರು ಆತನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಹೋಗುವಾಗ ಆತನ ಮೇಲೆ ದೈಹಿಕ ಹಲ್ಲೆ ಮಾಡಬೇಡಿ ಎಂದು ನ್ಯಾಯಮೂರ್ತಿ ಭದ್ರತಾ ಸಿಬ್ಬಂದಿಗೆ ಆದೇಶಿಸಿದ್ದರು. ಅದೇ ರೀತಿ ನ್ಯಾಯಮೂರ್ತಿ ಗವಾಯಿ ಅವರು ಕೂಡ ತಮ್ಮ ಮೇಲೆ ದಾಳಿ ಮಾಡಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ಬಗ್ಗೆ ಔದಾರ್ಯದಿಂದಲೇ ನಡೆದುಕೊಂಡಿದ್ದಾರೆ. ಆಗ ಈ ಘಟನೆ ತಮಗೆ ಏನೂ ಆಘಾತ ಉಂಟು ಮಾಡಿಲ್ಲ ಎಂದಿದ್ದ ಮುಖ್ಯ ನ್ಯಾಯಮೂರ್ತಿಗಳು ಎರಡು ದಿನಗಳ ನಂತರ ಈ ಬಗೆಗೆ ಅಚ್ಚರಿ ಮತ್ತು ಆತಂಕ ವ್ಯಕ್ತಪಡಿಸಿದ್ದಾರೆ.

ಅನೇಕ ಕಕ್ಷಿದಾರರು ನ್ಯಾಯ ವಿಳಂಬವಾದಾಗ, ಹತಾಶೆಗೊಂಡಾಗ ಹೈಕೋರ್ಟ್, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಮೇಲೆ ಹಲ್ಲೆ ನಡೆಸಿರುವ ಕೆಲವು ಘಟನೆಗಳು ನಡೆದಿವೆ. ಆದರೆ ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟಿನಲ್ಲಿ ಅದರಲ್ಲೂ ಮುಖ್ಯನ್ಯಾಯಮೂರ್ತಿಯವರ ಮೇಲೆ ಶೂ ತೂರುವ ಘಟನೆ ನಡೆದದ್ದು ನಿಜಕ್ಕೂ ತಲೆತಗ್ಗಿಸುವಂತಹದ್ದು. ಮಧ್ಯಪ್ರದೇಶದ ಪುರಾತನ ಖಜುರಾಹೋ ದೇವಾಲಯದಲ್ಲಿ ಭಗ್ನಗೊಂಡಿರುವ ವಿಷ್ಣುಮೂರ್ತಿಯ ಪುನರ್ ಪ್ರತಿಷ್ಠಾಪನೆಯ ಪ್ರಕರಣ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಈ ಪ್ರಕರಣ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಅಲ್ಲಿಗೆ ಹೋಗಿ ಎಂದು ಅರ್ಜಿದಾರರ ಅರ್ಜಿಯನ್ನು ತಿರಸ್ಕರಿಸಿ, ಹೇಗಿದ್ದರೂ ನೀವು ವಿಷ್ಣುವಿನ ಪರಮ ಭಕ್ತರಾದುದರಿಂದ ಭಗವಾನ್ ವಿಷ್ಣು ಬಳಿಯೇ ಪ್ರಾರ್ಥಿಸಿಕೊಳ್ಳಿ ಎಂದು ತಮಾಷೆಯಾಗಿ ನ್ಯಾ.ಗವಾಯಿ ಹೇಳಿದ್ದೇ ಈಗ ದೊಡ್ಡ ರಾದ್ಧಾಂತವಾಗಿದೆ.

ತಮ್ಮ ಈ ಮಾತು ವಿವಾದಕ್ಕೆ ಎಡೆ ಮಾಡಿ ಕೊಡುತ್ತದೆ ಎನಿಸಿದಾಗ, ಅವರು ‘ತಾವು ಯಾವುದೇ ಧರ್ಮದ ವಿರೋಧಿಯಲ್ಲ. ಎಲ್ಲ ಧರ್ಮಗಳನ್ನೂ ಗೌರವಿಸುತ್ತೇನೆ’ ಎಂದು ಸ್ಪಷ್ಟನೆ ನೀಡಿದರು. ಅಲ್ಲಿಗೆ ಈ ವಿವಾದ ಕೊನೆಗೊಳ್ಳಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಈ ಘಟನೆ ದೇಶದಲ್ಲಿ ಅಶಾಂತಿ ಉಂಟು ಮಾಡುವ ಮಟ್ಟಕ್ಕೆ ಹೋಗಿರುವುದು ದುರದೃಷ್ಟಕರ ಸಂಗತಿಯಾಗಿದೆ. ದೇವರು, ಧರ್ಮ ಜನರ ಭಾವನೆಗಳಿಗೆ ಸಂಬಂಽಸಿದ್ದು. ಅವರ ನಂಬಿಕೆ ಮತ್ತು ಭಕ್ತಿಯನ್ನು ಎಲ್ಲರೂ ಗೌರವಿಸಬೇಕು. ಭಾರತದಂತಹ ವೈವಿಧ್ಯತೆಯ ದೇಶದಲ್ಲಿ ಎಲ್ಲ ಜನರ ನಂಬಿಕೆ ಮತ್ತು ಭಾವನೆ ಮುಖ್ಯ. ಆರೋಪಿ ರಾಕೇಶ್ ಕಿಶೋರ್, ಸ್ವತಃ ವಕೀಲರಾಗಿರುವುದರಿಂದ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಹೇಳಿಕೆಯನ್ನು ನ್ಯಾಯಾಲಯದಲ್ಲೇ ಪ್ರಶ್ನಿಸಬಹುದಿತ್ತು. ಕಾನೂನು ಮಾರ್ಗ ಬಿಟ್ಟು ನ್ಯಾಯಾಲಯದೊಳಗೇ ದಾಳಿಕೋರರಂತೆ ನಡೆದುಕೊಂಡಿರುವುದನ್ನು ನಮ್ಮ ನ್ಯಾಯಾಂಗ ವ್ಯವಸ್ಥೆ ಮತ್ತು ಕಾನೂನಿನ ಬಗ್ಗೆ ಗೌರವ ಇರುವ ಯಾರೂ ಒಪ್ಪಲಾರರು. ಇವರ ಈ ನಡತೆಯು ಈಗ ಉಗ್ರ ಸನಾತನವಾದಿಗಳನ್ನು ಪ್ರಚೋದಿಸಿದಂತಿದೆ.

ನ್ಯಾಯಮೂರ್ತಿಗಳು ಕೆಲವೊಮ್ಮೆ ವಿಚಾರಣೆ ನಡೆಯುವ ಪ್ರಕರಣಗಳ ಬಗೆಗೆ ಹೀಗೆ ತಮಾಷೆಯ ಅಥವಾ ಸಾಂದರ್ಭಿಕವಾದ ಅಥವಾ ಕೆಲವು ಹಿಂದಿನ ಘಟನೆಗಳನ್ನು ಮೆಲುಕು ಹಾಕುವುದು ವಾಡಿಕೆ. ಇಂತಹ ಘಟನೆಗಳ ಬಗೆಗೆ ಕರ್ನಾಟಕ ಹೈಕೋರ್ಟಿನ ಹಿರಿಯ ವಕೀಲರಾದ ಸಿ.ಎಚ್. ಹನುಮಂತರಾಯ ಅವರ ಅನುಭವದ ಪ್ರಕಾರ ‘ಮುಖ್ಯ ನ್ಯಾಯಮೂರ್ತಿಗಳಾಡಿದ ಮಾತುಗಳು ವೈಯಕ್ತಿಕವಾದವು. ಇದನ್ನು ಒತ್ತಡದಿಂದ ಏಕತಾನತೆಯಿಂದ ತುಮುಲ ಆವರಿಸಿದ ಸಂದರ್ಭದಿಂದ ಆಡಿದ ಭಾವವೀರೇಚಕ ಮಾತುಗಳೆಂದೇ ಪರಿಗಣಿಸಬೇಕಾಗುತ್ತದೆ. ಅಂದರೆ ನ್ಯಾಯಮೂರ್ತಿಗಳು ಕೆಲವು ಸಂದರ್ಭಗಳಲ್ಲಿ ಹಗುರವಾದ, ಲಘುವಾದ, ನಿರ್ದಿಷ್ಟ ಉದ್ದೇಶವಿಲ್ಲದ ತಮಾಷೆಯ ಮಾತುಗಳನ್ನು ತೆರೆದ ಕಲಾಪಗಳಲ್ಲಿ ಆಡುವುದುಂಟು. ಆದರೆ ಮುಖ್ಯ ನ್ಯಾಯಮೂರ್ತಿಗಳು ಆಡಿದರೆನ್ನುವ ಮಾತುಗಳು ಇಂತಹ ಭಾವಲಹರಿಯಿಂದ ಜಿಗಿದು ಬೇರೆಯದೇ ಅರ್ಥಪಡೆದುಕೊಂಡಿರುವುದು ದುರದೃಷ್ಟಕರ’ (ಪ್ರಜಾವಾಣಿ ಅಕ್ಟೋಬರ್ ೧೦) ಎಂದು ಹೇಳಿರುವುದು ಗಮನಾರ್ಹ.

ಇದನ್ನು ಓದಿ :  ಅ.೧೭ಕ್ಕೆ ಶ್ರೀ ಕಾವೇರಿ ತುಲಾ ಸಂಕ್ರಮಣ ತೀರ್ಥೋದ್ಭವ

ಮುಖ್ಯ ನ್ಯಾಯಮೂರ್ತಿ ಅವರ ಮೇಲೆ ಶೂ ಎಸೆಯುವ ಯತ್ನ ಮಾಡಿದ ವಕೀಲ ರಾಕೇಶ್ ಕಿಶೋರ್ ಮನಃಸ್ಥಿತಿ, ಅಸಹನೆ, ಅತಿರೇಕ ನಡವಳಿಕೆ ಮತ್ತು ಅತ್ಯಂತ ಕೀಳುಮಟ್ಟಕ್ಕೆ ಹೋಗಿರುವುದನ್ನು ಈ ಘಟನೆ ತೋರುತ್ತದೆ. ಈ ಆರೋಪಿಯನ್ನು ಮುಖ್ಯನ್ಯಾಯಮೂರ್ತಿ ಕ್ಷಮಿಸಿರ ಬಹುದು. ಆದರೆ ನ್ಯಾಯಾಂಗದ ಮೇಲೆ ನಡೆದ ದಾಳಿ ಇದಾದ್ದರಿಂದ ಕ್ಷಮೆಗೆ ಈ ಘಟನೆ ಅರ್ಹವಲ್ಲ. ಆದ್ದರಿಂದ ಕಾನೂನು ಪ್ರಕಾರ ಆರೋಪಿ ವಕೀಲನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಲ್ಲವಾದರೆ ಇಂತಹ ಘಟನೆಗಳು ನಿರಂತರವಾಗಿ ನಡೆಯುವುದಕ್ಕೆ ಅವಕಾಶ ನೀಡಿದಂತಾಗುತ್ತದೆ. ಮತ್ತೊಂದು ಆಘಾತಕಾರಿ ಘಟನೆ ಎಂದರೆ ಮಧ್ಯಪ್ರದೇಶದ ವಕೀಲ ಅನಿಲ್ ಮಿಶ್ರ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗೆಗೆ  ಅವಹೇಳನಕಾರಿ ಮಾತುಗಳನ್ನಾಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿರುವುದರಿಂದ ಅಲ್ಲಿ ವಕೀಲರಲ್ಲಿ ಎರಡು ಗುಂಪುಗಳಾಗಿ ಬೀದಿಗಿಳಿದಿದ್ದಾರೆ. ಅಷ್ಟೇ ಆಗಿದ್ದರೆ ತೊಂದರೆ ಇರಲಿಲ್ಲ. ಆದರೆ ಮಿಶ್ರ ಅವರ ಮಾತುಗಳು ಈಗ ದೇಶದಾದ್ಯಂತ ದಲಿತರನ್ನು ಬೀದಿಗಿಳಿದು ಪ್ರತಿಭಟನೆ ಮಾಡುವಂತೆ ಪ್ರಚೋದನೆ ನೀಡಿರುವುದು ಪರಿಸ್ಥಿತಿಯನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತದೋ ಎಂಬುದು ಈ ಘಟನೆಯ ಬಗೆಗೆ ಮೌನವಾಗಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮವನ್ನು ಅವಲಂಬಿಸಿದೆ.

ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ನಡೆದ ಈ ಕುಕೃತ್ಯವನ್ನು ಪ್ರಧಾನಿ ನರೇಂದ್ರ ಮೋದಿ ತಡವಾಗಿಯಾದರೂ ಖಂಡಿಸಿದ್ದಾರೆ. ಇನ್ನು ಸುಪ್ರೀಂ ಕೋರ್ಟಿನ ವಕೀಲರ ಸಂಘವು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಬೆನ್ನಿಗೆ ನಿಂತಿದ್ದು, ವಕೀಲ ರಾಕೇಶ್ ಕಿಶೋರ್ ಸದಸ್ಯತ್ವವನ್ನು ರದ್ದು ಮಾಡಿದೆ. ಇದು ಕೇವಲ ಮುಖ್ಯ ನ್ಯಾಯಮೂರ್ತಿಯವರ ಮೇಲೆ ನಡೆದ ಹಲ್ಲೆ ಮಾತ್ರವಲ್ಲ ಇಡೀ ದೇಶದ ನ್ಯಾಯಾಂಗದ ಮೇಲೆಯೇ ದಾಳಿ ಮಾಡಿದಂತಾಗಿದೆ ಎಂದು ಸುಪ್ರೀಂ ಕೋರ್ಟಿನ ವಕೀಲರ ಸಂಘ ಮತ್ತು ಹಿರಿಯ ನ್ಯಾಯವಾದಿಗಳಾದ ಹರೀಶ್ ಸಾಳ್ವೆ, ಮನುಸಿಂ ಮುಂತಾದವರು ಕಟುವಾಗಿ ಟೀಕಿಸಿದ್ದಾರೆ. ಈ ಘಟನೆಯ ಬಗೆಗೆ ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಮತ್ತು ಎಡ ಪಕ್ಷಗಳು ಖಂಡಿಸಿರುವುದನ್ನು ಬಿಟ್ಟರೆ ಸನಾತನವಾದದ ವ್ಯವಸ್ಥೆಯನ್ನು ಮತ್ತೆ ಮರುಸ್ಥಾಪನೆ ಮಾಡುವ ಸಿದ್ಧಾಂತ ಹೊಂದಿರುವ ಬಿಜೆಪಿ ಮತ್ತು ಅದರ ಸಂಘ ಪರಿವಾರ ಮೌನವಹಿಸಿವೆ. ಈ ಮೌನವೇ ರಾಕೇಶ್ ಕಿಶೋರ್ ಅವರ ಕೃತ್ಯಕ್ಕೆ ಬೆಂಬಲವಾಗಿ ನಿಂತಿರುವಂತೆ ಸ್ಪಷ್ಟವಾಗಿ ಕಾಣುತ್ತಿದೆ. ರಾಕೇಶ್ ಕಿಶೋರ್ ತನ್ನ ಸ್ಥಾನಮಾನ ಮತ್ತು ವರ್ಚಸ್ಸನ್ನು ಬಿಟ್ಟು ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ದಾಳಿ ಮಾಡುವುದರಹಿಂದೆ ಮನುವಾದಿಗಳ ಸಿದ್ಧಾಂತದಲ್ಲಿ ನಂಬಿಕೆ ಇರುವವರ ಮತ್ತು ಕೆಲವು ರಾಜಕೀಯ ಪಕ್ಷ ಹಾಗೂ ರಾಜಕೀಯ ನಾಯಕರ ಕೈವಾಡ ಇರುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಮುಖ್ಯನ್ಯಾಯಮೂರ್ತಿ ಗವಾಯಿ ಮತ್ತು ದಲಿತರ ಬಗೆಗೆ ಅಸಹನೆ ಹೊಂದಿರುವ ಈ ಸನಾತನವಾದಿ ರಾಜಕೀಯ ಶಕ್ತಿ ಒಳಗೊಳಗೆ ಕುದಿಯುತ್ತಿರುವುದನ್ನು ಇಲ್ಲ ಎನ್ನಲಾಗದು.

ನ್ಯಾಯಮೂರ್ತಿ ಗವಾಯಿ ಅವರ ಹೇಳಿಕೆಯಿಂದ ಸನಾತನ ಧರ್ಮಕ್ಕೆ ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಸನಾತನಿಗಳುಮತ್ತು ಸಾವಿರಾರು ವರ್ಷಗಳಿಂದ ಜಾತಿ, ಅಸ್ಪೃಶ್ಯತೆ ಆಚರಣೆಯಅಮಾನವೀಯ ನಡವಳಿಕೆಯಿಂದ ನೊಂದಿರುವ ದಲಿತರು ಈಗ ಬೀದಿಗಿಳಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಲಂಗುಲಗಾಮಿಲ್ಲದ ಅವಹೇಳನಕಾರಿ ಟೀಕೆಗಳು ನ್ಯಾ.ಗವಾಯಿ ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ದಲಿತರ ವಿರುದ್ಧ ಕಾಣಿಸಿಕೊಳ್ಳುತ್ತಿವೆ. ಈ ಅತಿರೇಕದ ನಡವಳಿಕೆಯು ದಲಿತರನ್ನು ರೊಚ್ಚಿಗೆಬ್ಬಿಸಿ ಇಡೀ ದೇಶದಾದ್ಯಂತ ಪ್ರತಿಭಟನೆಗೆ ಇಳಿಯುವಂತೆ ಮಾಡಿದೆ. ಪಂಜಾಬ್ ಸರ್ಕಾರ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಡಾ. ಅಂಬೇಡ್ಕರ್, ನ್ಯಾ. ಗವಾಯಿ ಮತ್ತು ದಲಿತರ ವಿರುದ್ಧದ ಕೆಟ್ಟ ಪ್ರತಿಕ್ರಿಯೆಗಳನ್ನು ಮಾಡಿರುವವರ ವಿರುದ್ಧ ಎಫ್ ಐಆರ್ ದಾಖಲಿಸುವ ಮೂಲಕ ಕ್ರಮ ಕೈಗೊಂಡಿರುವುದರಿಂದ ಇಂತಹ ದುಷ್ಟಶಕ್ತಿಗಳನ್ನು ನಿಯಂತ್ರಿಸುವಂತಾಗಿದೆ.

ಇದನ್ನು ಓದಿ : ಎದೆಯಲ್ಲೇ ಉಳಿದ ಗೆಳೆಯನ ಮಾತುಗಳು…

ವಾಸ್ತವವಾಗಿ ಸನಾತನ ಧರ್ಮ ಮನುಷ್ಯ ಮನುಷ್ಯರ ನಡುವೆ ತಾರತಮ್ಯ, ಮೇಲು-ಕೀಳು, ಅಸ್ಪೃಶ್ಯತೆ ಮತ್ತು ಜಾತಿ ಪದ್ಧತಿಯನ್ನು ಆಚರಿಸಿಕೊಂಡು ಬರುತ್ತಿರುವುದು ತಿಳಿಯದ ಸಂಗತಿಯೇನಲ್ಲ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದು ದೇಶಕ್ಕೆ ಸಮರ್ಪಿಸಿದ ಸಮಾನತೆ, ಸಹೋದರತೆ ಮತ್ತು ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವವನ್ನು ಸನಾತನವಾದಿಗಳು ಮತ್ತು ಸನಾತನ ಧರ್ಮದ ವ್ಯವಸ್ಥೆ ಇಂದಿಗೂ ಮನಸಾರೆ ಒಪ್ಪುತ್ತಿಲ್ಲ. ಹಾಗಾಗಿ ಬಲಪಂಥೀಯ ವಿಚಾರಧಾರೆಯ ಜನರಿಂದ ಮೂರು ದಶಕಗಳಿಂದ ಸಂವಿಧಾನದ ಮೇಲೆ ಸಂಸತ್ತಿನ ಒಳಗೂ ಮತ್ತು ಹೊರಗೂ ನಿರಂತರವಾಗಿ ದಾಳಿ ನಡೆಯುತ್ತಲೇ ಇದೆ. ಈಗಿನ ಸಂವಿಧಾನ ಇರುವವರೆಗೂ ಬಹುತ್ವ ಭಾರತ ಉಳಿಯುತ್ತದೆ. ನ್ಯಾ. ಬಿ.ಆರ್.ಗವಾಯಿ ಅವರ ಮಾತಿನಿಂದ ಸನಾತನ ಧರ್ಮಕ್ಕೆ ಆಗಿರುವ ಅಪಮಾನವನ್ನು ಸಹಿಸಲಾಗದು ಎಂದು ವಕೀಲ ರಾಕೇಶ್ ಕಿಶೋರ್ ತನ್ನ ಕೈಯಿಂದ ಶೂ ಎಸೆಯುವಂತೆ, ಸಾವಿರಾರು ವರ್ಷಗಳಿಂದ ಈ ಸನಾತನ ಧರ್ಮದ ಶೋಷಣೆಯಿಂದ ಪ್ರಾಣಿಗಳಂತೆ ಬದುಕಿ ಈಗಷ್ಟೇ ಕಣ್ಣುತೆರೆದಿರುವ ಕೋಟ್ಯಂತರ ದಲಿತರು ಕೂಡ ಒಂದು ದಿನ ತಮ್ಮ ಕೈಗಳಿಗೆ ಸಿಕ್ಕಿದ್ದನ್ನು ಎಸೆಯುವಂತಹ ಸಂದರ್ಭ ಬಂದರೆ ದೇಶ ದೇಶವಾಗಿ ಉಳಿದೀತೇ ಎನ್ನುವ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಾಗುತ್ತದೆ.

ಡಾ. ಅಂಬೇಡ್ಕರ್ ಮತ್ತು ಸಂವಿಧಾನದ ಮೇಲೆ ಪದೇ ಪದೇ ನಡೆಯುತ್ತಿರುವ ದಾಳಿ ಮತ್ತು ಮುಖ್ಯ ನ್ಯಾಯಮೂರ್ತಿ ಬಿ.ಆರ್. ವಾಯಿ ಅವರ ಮೇಲೆ ನಡೆದ ಅವಮಾನಕಾರಿ ಘಟನೆ ಕೇವಲ ಅವರ ಮೇಲಷ್ಟೇ ಅಲ್ಲ. ಅದು ಇಡೀ ದೇಶದ ತಳಸಮುದಾಯದ ನೊಂದ ಜನರ ಮೇಲೆ ನಡೆದಿರುವ ವ್ಯವಸ್ಥಿತ ಸಂಚು ಎನ್ನುವ ಗುಮಾನಿಗೆ ಎಡೆಮಾಡಿ ಕೊಡುತ್ತದೆ.

” ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆಯುವ ಯತ್ನ ಮಾಡಿದ ವಕೀಲ ರಾಕೇಶ್ ಕಿಶೋರ್ ಮನಃ ಸ್ಥಿತಿ, ಅಸಹನೆ, ಅತಿರೇಕ ನಡವಳಿಕೆ ಮತ್ತು ಅವರ ನಡತೆ ಅತ್ಯಂತ ಕೀಳುಮಟ್ಟಕ್ಕೆ ಹೋಗಿರುವುದನ್ನು ಈ ಘಟನೆ ತೋರುತ್ತದೆ.”

ಶಿವಾಜಿ ಗಣೇಶನ್‌ 

ಆಂದೋಲನ ಡೆಸ್ಕ್

Recent Posts

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಎವ್ಗನ್ ಬಾವ್ಚಾರ್ ಎಂಬ ಕಣ್ಣಿಲ್ಲದ ಫೋಟೋಗ್ರಾಫರ್!

ಪಂಜು ಗಂಗೊಳ್ಳಿ  ನೂರಾರು ಜನ ವಿಶೇಷಚೇತನರಿಗೆ ಫೋಟೋಗ್ರಫಿ ತರಬೇತಿ ಎವ್ಗನ್ ಬಾವ್ಚಾರ್ ೧೯೪೬ರಲ್ಲಿ ಸ್ಲೊವೇನಿಯಾ (ಆಗ ಯುಗೊಸ್ಲೇವಿಯಾ)ದಲ್ಲಿ ಹುಟ್ಟಿದರು. ಏಳು…

2 hours ago

ಓದುಗರ ಪತ್ರ: ಕಳ್ಳಸಾಗಣೆ ಕಪಿಮುಷ್ಟಿಯಲ್ಲಿ ದೇಶದ ಆರ್ಥಿಕತೆ

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಅಕ್ರಮ ಸಿಗರೇಟ್ ಮಾರುಕಟ್ಟೆಯು ವಾರ್ಷಿಕವಾಗಿ ಸುಮಾರು ರೂ.೧೫,೦೦೦ ಕೋಟಿಗೂ ಅಧಿಕ ನಷ್ಟವನ್ನು ಸರ್ಕಾರಕ್ಕೆ ಉಂಟುಮಾಡುತ್ತಿದೆ.…

2 hours ago

ಓದುಗರ ಪತ್ರ: ದ್ವಿಚಕ್ರವಾಹನಗಳಿಗೆ ದರ್ಪಣ(ಕನ್ನಡಿ) ಕಡ್ಡಾಯವಾಗಲಿ

ದ್ವಿಚಕ್ರ ವಾಹನಗಳಿಗೆ ಸಂಚಾರ ನಿಯಮದಂತೆ ಎರಡೂ ಕಡೆ ದರ್ಪಣವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಯಾರು ಈ ನಿಯಮವನ್ನು ಉಲ್ಲಂಘಿಸುತ್ತಾರೋ ಅವರಿಗೆ ಸಂಚಾರ…

2 hours ago

ಓದುಗರ ಪತ್ರ: ವಾಹನ ನಿಲುಗಡೆ ನಿಷೇಧಿಸಿ

ಮೈಸೂರಿನ ಕುವೆಂಪುನಗರದ ನೃಪತುಂಗ ರಸ್ತೆಯ ಶಾಂತಿ ಸಾಗರ್ ಕಾಂಪ್ಲೆಕ್ಸ್ ನ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಮದ್ದೂರು ವಡೆ ಸೆಂಟರ್ ಮತ್ತು…

2 hours ago

ರಸ್ತೆಗಳು ಅಧ್ವಾನ; ಸವಾರರು ಹೈರಾಣ!

ಪ್ರಶಾಂತ್ ಎಸ್. ಮೈಸೂರು: ನಗರ ಹೊರವಲಯದ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ರಸ್ತೆಗಳ ದುಸ್ಥಿತಿಯಿಂದಾಗಿ ವಾಹನಗಳ ಸವಾರರು ಜೀವವನ್ನು…

2 hours ago

ವೈಭವದ ಸುತ್ತೂರು ಜಾತ್ರಾ ಮಹೋತ್ಸವ ಸಂಪನ್ನ

ಕೆ.ಬಿ.ರಮೇಶನಾಯಕ ಮೈಸೂರು: ಕಪಿಲಾ ನದಿ ತೀರದ ಸುತ್ತೂರಿನಲ್ಲಿ ಆರುದಿನಗಳ ಕಾಲ ಅತ್ಯಂತ ಸಡಗರ, ಸಂಭ್ರಮದಿಂದ ನಡೆದ ಧಾರ್ಮಿಕ, ಸಾಂಸ್ಕೃತಿಕ, ವೈಜ್ಞಾನಿಕ…

2 hours ago