ಅಂಕಣಗಳು

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಇಡಿ ದಾಳಿ: ಕೇಂದ್ರದ ಜೊತೆ ಮತ್ತೆ ಮಮತಾ ಜಟಾಪಟಿ

ದೆಹಲಿ ಕಣ್ಣೋಟ 

ಶಿವಾಜಿ ಗಣೇಶನ್‌ 

ಪಶ್ಚಿಮ ಬಂಗಾಳದ ರಾಜಕಾರಣ ಎಂದರೆ ಅದು ಬೀದಿ ಕಾಳಗ. ಈ ಬೀದಿ ಕಾಳಗದ ರಾಜಕಾರಣ ಹೊಸದೇನಲ್ಲ. ಜ್ಯೋತಿ ಬಸು ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಎಡಪಕ್ಷಗಳು ಮತ್ತು ಮಮತಾ ಬ್ಯಾನರ್ಜಿ ನಡುವೆ ನಡೆದುಕೊಂಡು ಬಂದ ಹೋರಾಟದ ರಾಜ ಕಾರಣದ ಮುಂದುವರಿದ ಭಾಗ. ಮಮತಾ ಬ್ಯಾನರ್ಜಿ ಕಾಂಗ್ರೆಸ್ಸಿನಲ್ಲಿದ್ದಾಗಲೇ ಬೀದಿ ಹೋರಾಟ ಶುರುಮಾಡಿದ್ದರು. ಕಾಂಗ್ರೆಸ್ ಬಿಟ್ಟು ತಮ್ಮದೇ ಆದ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ಕಟ್ಟಿದ ಮೇಲೆ ಎಡ ಪಕ್ಷಗಳ ಜೊತೆ ನೇರ ಹೋರಾಟಕ್ಕಿಳಿದರು. ಎಡ ಪಕ್ಷಗಳು ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಇಡೀ ರಾಜ್ಯದ ಹಲವು ಕಡೆಗಳಲ್ಲಿ ಮುಖಾ ಮುಖಿ ಕಾಳಗ ಶುರುವಾಯಿತು. ಹಲವು ಘಟನೆಗಳಲ್ಲಿ ಜೀವಹಾನಿಯೂ ಆಗಿದೆ.

೨೦೧೧ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಂಗಾಳದ ಜನತೆ ೩೪ ವರ್ಷಗಳ ಎಡಪಕ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯನ್ನು ಅಧಿಕಾರಕ್ಕೆ ತರುವ ಮೂಲಕ ಹೊಸದೊಂದು ಶಕೆಯನ್ನು ಆರಂಭಿಸಿದರು. ಅಂದು ಅಧಿಕಾರದ ಗದ್ದಿಗೆ ಏರಿದ ಮಮತಾ ಮುಖ್ಯಮಂತ್ರಿಯಾದರೂ ಎಡಪಕ್ಷಗಳು ಮತ್ತು ಕಾಂಗ್ರೆಸ್ ಹೋರಾಟದ ನಂತರ ಅವರೀಗ ತಮಗೆ ನಿಜವಾದ ಶತ್ರು ಪಕ್ಷದಂತಿರುವ ಬಿಜೆಪಿಯ ಜೊತೆ ಬೀದಿ ಹೋರಾಟವನ್ನು ಮುಂದುವರಿಸಿದ್ದಾರೆ. ಸರಳ ಜೀವನ ಕ್ರಮ ಮತ್ತು ಜನಸಾಮಾನ್ಯರೊಡನೆ ಮುಕ್ತವಾಗಿ ಬೆರೆಯುವ ಮಮತಾ ಮುಖ್ಯಮಂತ್ರಿಯಾದರೂ ಒಂದಲ್ಲಾ ಒಂದು ಕಾರಣಕ್ಕೆ ಅವರು ಬೀದಿ ಹೋರಾಟಕ್ಕೆ ನಿಲ್ಲುವುದು ಅವರ ಜಾಯಮಾನ.

ವಿರೋಧ ಪಕ್ಷಗಳ ಪ್ರಬಲ ನಾಯಕರ ಹುಟ್ಟಡಗಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತಾನು ಅಧಿಕಾರಕ್ಕೆ ಬಂದ ಒಂದು ದಶಕದ ಆಡಳಿತದಲ್ಲಿ ಸಿಬಿಐ, ಇಡಿಯನ್ನು ತನ್ನ ರಾಜಕೀಯ ಕಾರಣಗಳಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವುದು ಈಗ ರಹಸ್ಯವಾಗಿ ಉಳಿದಿಲ್ಲ. ಈ ಎರಡೂ ಸಂಸ್ಥೆಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತಮ್ಮ ರಾಜಕಾರಣದ ಉದ್ದೇಶಗಳಿಗೆ ರಾಜಕೀಯ ಅಸ್ತ್ರವನ್ನಾಗಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಅವರು ಅಧಿಕಾರಕ್ಕೆ ಬಂದಾಗಿ ನಿಂದಲೂ ಇದೆ. ಸಿಬಿಐ ಮತ್ತು ಇಡಿ (ಜಾರಿ ನಿರ್ದೇಶನಾಲಯ) ಪ್ರತಿಪಕ್ಷಗಳ ನಾಯಕರ ವಿರುದ್ಧ ನಡೆಸುವ ದಾಳಿಯಂತಹ ಕಾರ್ಯಾಚರಣೆ ಯನ್ನು ಗಮನಿಸಿದರೆ ಈ ಆರೋಪವನ್ನು ಅಲ್ಲಗಳೆಯಲಾಗದು.

ಕಳೆದೆರಡು ದಶಕಗಳಿಂದ ರಾಜಕೀಯ ಪಕ್ಷಗಳಿಗೆ ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸಿಕೊಡುವ ಸಂಸ್ಥೆಗಳು ಮತ್ತು ಆ ಕ್ಷೇತ್ರದಲ್ಲಿ ಕೆಲವು ತಜ್ಞರು ಹುಟ್ಟಿಕೊಂಡಿದ್ದಾರೆ. ಅಧಿಕಾರದಲ್ಲಿರುವ ಮತ್ತು ಪ್ರತಿಪಕ್ಷಗಳ ಗೆಲುವಿಗೆ ಅನುಸರಿಸಬೇಕಾದ ಕಾರ್ಯತಂತ್ರಗಳನ್ನು, ಜನರನ್ನು ಮುಟ್ಟಲು ಅನುಸರಿಸಬೇಕಾದ ಮಾರ್ಗ, ಜನರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಅವರನ್ನು ಸೆಳೆಯುವ ತಂತ್ರಗಳನ್ನು ಹೆಣೆದುಕೊಡುವಲ್ಲಿ ಚುನಾವಣಾ ವಿಶ್ಲೇಷಣೆಕಾರರು ಈ ಕಾರಣಗಳಿಗಾಗಿಯೇ ಸಂಸ್ಥೆಗಳನ್ನು ಹುಟ್ಟುಹಾಕಿದ್ದಾರೆ. ಅಂತಹ ಸಂಸ್ಥೆಗಳಲ್ಲಿ ಇಂಡಿಯನ್ ಪೊಲಿಟಿಕಲ್ ಆಕ್ಷನ್ ಕಮಿಟಿ (ಐ ಪ್ಯಾಕ್) ಹೆಸರುವಾಸಿ. ಈ ಸಂಸ್ಥೆಯನ್ನು ಹುಟ್ಟುಹಾಕಿದವರು ಪ್ರಶಾಂತ್ ಕಿಶೋರ್ ಎನ್ನುವ ಚುನಾವಣಾ ಕಾರ್ಯತಂತ್ರಗಳನ್ನು ಯಶಸ್ವಿಯಾಗಿ ರೂಪಿಸಿಕೊಂಡು ಬಂದ ನಿಪುಣ, ಇವರ ಜೊತೆಗೆ ಪ್ರತೀಕ್ ಜೈನ್ ಮತ್ತು ರಿಶಿ ರಾಜ್ ಸಿಂಗ್ ಅವರು ಸಹ ಸ್ಥಾಪಕರು. ಪ್ರಶಾಂತ್ ಕಿಶೋರ್ ಈ ಸಂಸ್ಥೆಯನ್ನು ಬಿಟ್ಟು ತಮ್ಮದೇ ಬೇರೊಂದು ಸಂಸ್ಥೆಯನ್ನು ಕಟ್ಟಿಕೊಂಡಿದ್ದಾರೆ. ಈ ಸಂಸ್ಥೆಯ ಪ್ರಧಾನ ಕಾರ್ಯಾಲಯ ಇರುವುದು ಕೊಲ್ಕತ್ತಾದಲ್ಲಿ. ಇದರ ಮುಖ್ಯ ಉದ್ದೇಶ ದೇಶದಲ್ಲಿ ಉತ್ತಮ ಆಡಳಿತ ವ್ಯವಸ್ಥೆಯನ್ನು ರೂಪಿಸಲು ಚುನಾವಣೆಯಲ್ಲಿ ಅನುಸರಿಸಬೇಕಾದ ರೂಪರೇಷೆಯನ್ನು ಸಿದ್ಧಪಡಿಸುವುದು, ಈ ಕಾರ್ಯಕ್ಕಾಗಿ ವಿದ್ಯಾವಂತ ಯುವಕರನ್ನು ಒಳಗೊಳ್ಳುವುದು, ಸಮೀಕ್ಷೆ ನಡೆಸುವುದು, ಜನರ ಒಲವು ಎತ್ತ ಮತ್ತು ಯಾವ ಪಕ್ಷದ ಕಡೆ ಇದೆ? ಒಂದು ವೇಳೆ ಜನರು ಏಕೆ ಆಡಳಿತ ಮತ್ತು ಪ್ರತಿಪಕ್ಷಗಳ ವಿರುದ್ಧ ಇದ್ದಾರೆ. ಅದಕ್ಕೆ ಕಾರಣಗಳೇನು. ಈ ಲೋಪಗಳನ್ನು ಸರಿಪಡಿಸಿಕೊಂಡು ಚುನಾವಣೆಯಲ್ಲಿ ಗೆಲ್ಲುವುದು ಹೇಗೆ ಎನ್ನುವ ಕಾರ್ಯತಂತ್ರಗಳನ್ನು ರೂಪಿಸಿಕೊಡುವುದು. ಈ ಕಾರ್ಯತಂತ್ರಗಳನ್ನು ಬಳಸಿಕೊಂಡು ಆಂಧ್ರದಲ್ಲಿ ವೈ.ಎಸ್.ಜಗನ್‌ಮೋಹನ ರೆಡ್ಡಿ ಪ್ರಜಾ ಸಂಕಲ್ಪ ಯಾತ್ರೆ ನಡೆಸುವ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದರು.

ಹಾಗೆಯೇ ೨೦೨೧ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಬಿಹಾರದಲ್ಲಿ ನಿತೀಶ್ ಕುಮಾರ್, ಪಂಜಾಬ್‌ನಲ್ಲಿ ಎಎಪಿ ಐ-ಪ್ಯಾಕ್ ನೆರವು ಪಡೆದು ಅಧಿಕಾರದ ಗದ್ದಿಗೆ ಏರಿದವು. ಕಳೆದ ಲೋಕಸಭೆ ಚುನಾವಣೆಯಲ್ಲಿಕಾಂಗ್ರೆಸ್ ಕೂಡ ಈ ಸಂಸ್ಥೆಯ ನೆರವು ಪಡೆದಿತ್ತು. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ನೇತೃತ್ವದಲ್ಲಿ ಪಳಗಿದ ಕುನಗೋಳ್ ತಂಡದ ನೆರವು ಪಡೆದದ್ದು ರಾಜ್ಯದ ಜನರಿಗೆ ಗೊತ್ತಿರುವ ಸಂಗತಿ. ಈ ತಂಡ ಚುನಾವಣೆ ಗೆಲುವಿಗೆ ಸಲಹೆ ನೀಡಿದ್ದೇ ಐದು ಗ್ಯಾರಂಟಿಗಳು ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ.

ಬೆಂಗಳೂರಿನಲ್ಲೊಂದು ಐ-ಪ್ಯಾಕ್ ಮಾದರಿಯ ಬಿ-ಪ್ಯಾಕ್ (ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ) ಇದೆ. ಬಯೋ ಟೆಕ್ನಾಲಜಿ ಸಂಸ್ಥೆಯ ಅಧ್ಯಕ್ಷೆ ಕಿರಣ್ ಮಜುಂದಾರ್ ಅಧ್ಯಕ್ಷರಾದರೆ, ಮೋಹನ್‌ದಾಸ್ ಪೈ ಉಪಾಧ್ಯಕ್ಷರು ಮತ್ತು ಮಹಾನಗರ ಪಾಲಿಕೆಗೆ ಎರಡು ಬಾರಿ ಆಯುಕ್ತರಾಗಿ ಉತ್ತಮ ಆಡಳಿತ ನೀಡಿದ ಕೆ.ಜೈರಾಜ್ ಅವರು ಕಾರ್ಯದರ್ಶಿಯಾಗಿದ್ದಾರೆ. ಆದರೆ ಈ ಐ-ಪ್ಯಾಕ್ ಸಂಸ್ಥೆಗೂ ಬಿ-ಪ್ಯಾಕ್ ಸಂಸ್ಥೆಗೂ ಸಂಬಂಧವಿಲ್ಲ. ಇವುಗಳ ಕಾರ್ಯವೈಖರಿಯಲ್ಲೂ ವ್ಯತ್ಯಾಸವಿದೆ. ಬಿ-ಪ್ಯಾಕ್ ಬೆಂಗಳೂರಿನಲ್ಲಿ ಉತ್ತಮ ಸೌಲಭ್ಯ ಒದಗಿಸಲು ಜನಜಾಗೃತಿ ಉಂಟು ಮಾಡುವುದು, ಉತ್ತಮ ಕೆಲಸ ಮಾಡುವಂತೆ ರಾಜಕೀಯ ಪಕ್ಷಗಳನ್ನು ಮತ್ತು ಸರ್ಕಾರವನ್ನು ಎಚ್ಚರಿಸುವುದು ಹಾಗೂ ಮಹಾನಗರ ಪಾಲಿಕೆಗೆ ಅವಶ್ಯ ಸಲಹೆ ನೀಡುವುದಷ್ಟಕ್ಕೇ ಸೀಮಿತವಾಗಿದೆ.

ಐ-ಪ್ಯಾಕ್ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಬಿಜೆಪಿಯ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಈ ಐ-ಪ್ಯಾಕ್ ಪಶ್ಚಿಮ ಬಂಗಾಳದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ಸಿಗೆ ಚುನಾವಣಾ ಕಾರ್ಯತಂತ್ರವನ್ನು ರೂಪಿಸಿಕೊಟ್ಟಿತ್ತು. ಈ ಸಂಸ್ಥೆಯೇ ಇನ್ನು ಮೂರು ತಿಂಗಳಲ್ಲಿ ಬರಲಿರುವ ವಿಧಾನಸಭೆ ಚುನಾವಣೆಗೂ ಟಿಎಂಸಿಗೆ ಕಾರ್ಯತಂತ್ರವನ್ನು ಸಿದ್ಧಮಾಡಿಕೊಡುತ್ತಿದೆ. ಜೊತೆಗೆ ಮೊದಲಿನಿಂದಲೂ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಮಾಹಿತಿ ತಂತ್ರಜ್ಞಾನದ ನೆರವು ನೀಡುತ್ತಾ ಬಂದಿದೆ.

ಚುನಾವಣಾ ಆಯೋಗವು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ(ಎಸ್‌ಐಆರ್)ದಲ್ಲಿ ಲಕ್ಷಾಂತರ ಮತದಾರರ ಹೆಸರನ್ನು ತೆಗೆದು ಹಾಕುವ ಮೂಲಕ ರಾಜ್ಯ ಸರ್ಕಾರ ಮತ್ತು ಕೇಂದ್ರದ ಮಧ್ಯೆ ಘರ್ಷಣೆ ನಡೆಯುತ್ತಿರುವಾಗಲೇ ಈಗ ಮತ್ತೊಂದು ಸಮಸ್ಯೆ ಎದುರಾಗಿದೆ. ಜನವರಿ ೮ರಂದು (ಗುರುವಾರ) ಇಡಿ ತನಿಖಾ ಸಿಬ್ಬಂದಿ ಐ-ಪ್ಯಾಕ್ ಸಂಸ್ಥೆಯ ಕೊಲ್ಕತ್ತಾ ಕಾರ್ಯಾಲಯ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ನಿವಾಸದ ಮೇಲೆ ದಿಢೀರನೇ ದಾಳಿ ನಡೆಸಿ ಅದರ ವ್ಯವಹಾರದ ಕಾಗದ ಪತ್ರ ದಾಖಲೆಗಳನ್ನು ವಶಕ್ಕೆ ತೆಗೆದುಕೊಂಡಿದೆ. ಐ-ಪ್ಯಾಕ್ ಬಹುಕೋಟಿ ಕಲ್ಲಿದ್ದಲು ಕಳ್ಳ ಸಾಗಣೆ ವ್ಯವಹಾರದ ಹಣಕಾಸು ವ್ಯವಹಾರವನ್ನು (ಮನಿ ಲ್ಯಾಂಡರಿಂಗ್) ನೋಡಿಕೊಳ್ಳುತ್ತಿತ್ತು ಎನ್ನುವುದು ಈ ದಾಳಿಗೆ ನೀಡುತ್ತಿರುವ ಕಾರಣ. ಜಾರಿ ನಿರ್ದೇಶನಾಲಯ ದಾಳಿ ನಡೆಸಿದ ಸುದ್ದಿ ಕಿವಿಗೆ ಬಿದ್ದಕೂಡಲೇ ಮಮತಾ ಬ್ಯಾನರ್ಜಿ, ಪೊಲೀಸ್ ಕಮೀಷನರ್ ಅವರನ್ನು ಕರೆದುಕೊಂಡು ನೇರವಾಗಿ ಐ-ಪ್ಯಾಕ್ ಕಾರ್ಯಾಲಯ ಮತ್ತು ಪ್ರತೀಕ್ ಜೈನ್ ನಿವಾಸಕ್ಕೆ ತೆರಳಿ ಇಡಿ ಅಧಿಕಾರಿಗಳ ಜೊತೆ ವಾಗ್ವಾದಕ್ಕಿಳಿದು ಕೆಲವು ಕಡತಗಳನ್ನು ತೆಗೆದುಕೊಂಡು ಬಂದಿದ್ದನ್ನು ಇಡಿ ಮತ್ತು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತನ್ನ ಕಾರ್ಯಾಚರಣೆಗೆ ಅಡ್ಡಿಪಡಿಸಿ ಕೆಲವು ಪ್ರಮುಖ ದಾಖಲೆಗಳ ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಇಡಿ ಯು ಕೊಲ್ಕತ್ತಾ ಹೈಕೋರ್ಟ್ ಮೊರೆ ಹೋಯಿತು.ಆದರೆ ಹೈಕೋರ್ಟ್ ಈ ಪ್ರಕರಣವನ್ನು ತುರ್ತಾಗಿ ಕೈಗೆತ್ತಿಕೊಳ್ಳುವ ಬದಲು ವಿಚಾರಣೆಯನ್ನು ಮುಂದಿನ ಬುಧವಾರಕ್ಕೆ ಮುಂದೂಡಿತು. ಇದರಿಂದ ಇಡಿಗೆ ಮುಖಭಂಗವಾದಂತಾಗಿದೆ. ಇಷ್ಟೇ ಅಲ್ಲದೆ ಟಿಎಂಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಕೇವಿಯೇಟ್ ತಂದಿದೆ. ಈ ಪ್ರಕರಣ ಒಂದು ವೇಳೆ ನ್ಯಾಯಾಲಯದಗಮನಕ್ಕೆ ಬಂದರೆ ನಮ್ಮ ಗಮನಕ್ಕೆ ತಾರದೆ ಯಾವುದೇ ಆಜ್ಞೆಯನ್ನು ಹೊರಡಿಸಬೇಡಿ ಎಂದು ಟಿಎಂಸಿಯು ಸುಪ್ರೀಂ ಕೋರ್ಟಿಗೆ ಮೊರೆ ಹೋಗಿದೆ.

ಐ-ಪ್ಯಾಕ್ ಸಂಸ್ಥೆಯು ತಮ್ಮ ಪಕ್ಷದ ಚುನಾವಣಾ ಕಾರ್ಯತಂತ್ರವನ್ನು ರೂಪಿಸುವುದು, ಪ್ರಚಾರ ಕಾರ್ಯವೈಖರಿಗೆ ಸಲಹೆ ನೀಡುವುದು ಮತ್ತು ಪ್ರತಿ ಕ್ಷೇತ್ರದ ಬಗೆಗೆ ಹಲವು ಮಾಹಿತಿ ಒದಗಿಸುವ ಜೊತೆಗೆ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಸಲಹೆ ನೀಡುತ್ತಿದೆ. ಇಂತಹ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಯ ಮೇಲೆ ಕೇಂದ್ರ ಸರ್ಕಾರ ವಿಶೇಷವಾಗಿ ಗೃಹ ಸಚಿವ ಅಮಿತ್ ಶಾ ಮಾರ್ಗದರ್ಶನದಲ್ಲಿ ಇಡಿ ತಮ್ಮ ಚುನಾವಣಾ ಕಾರ್ಯತಂತ್ರದ ಮಾಹಿತಿಯನ್ನು ದಾಳಿ ನಡೆಸುವ ಮೂಲಕ ಪಡೆದುಕೊಂಡಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಡೆಸಿದ ದಾಳಿ. ತಾವು ಟಿಎಂಸಿಯ ಅಧ್ಯಕ್ಷೆಯಾಗಿ ಈ ದಾಳಿಯ ನಡುವೆ ಮಧ್ಯೆ ಪ್ರವೇಶಿಸಿ ಕೆಲವು ದಾಖಲೆ ಪತ್ರಗಳ ಕಡತವನ್ನು ಪಡೆದುಕೊಂಡಿದ್ದೇನೆಯೇ ಹೊರತು ಮುಖ್ಯಮಂತ್ರಿಯಾಗಲ್ಲ ಎಂದು ಮಮತಾ ಬ್ಯಾನರ್ಜಿ ತಮ್ಮ ಕಾರ್ಯದ ಬಗೆಗೆ ಸ್ಪಷ್ಟನೆ ನೀಡಿದ್ದಾರೆ. ಆದರೆ ಮಮತಾ ಅವರ ಈ ಸ್ಪಷ್ಟನೆಯನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದ್ದು ಮುಖ್ಯಮಂತ್ರಿಯಾಗಿ ಇಡಿ ಕಾರ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದೆ.

ಈ ಪ್ರಕರಣದದ ಬಗೆಗೆ ಕೆಲವು ಪತ್ರಿಕೆಗಳು ಸಂಪಾದಕೀಯ ಬರೆದು ‘ಕಲ್ಲಿದ್ದಲು ಕಳ್ಳಸಾಗಣೆಯ ಹಣಕಾಸು ವ್ಯವಹಾರದಲ್ಲಿ ಐ -ಪ್ಯಾಕ್ ಸಂಪರ್ಕ ಇದೆ ಎನ್ನುವ ಆರೋಪದ ಹೆಸರಿನಲ್ಲಿ ಟಿಎಂಸಿಯ ಚುನಾವಣಾ ಕಾರ್ಯ ತಂತ್ರವನ್ನು ತಿಳಿಯಲು ಸಂಬಂಽಸಿದ ಕಡತಗಳನ್ನು ವಶಪಡಿಸಿಕೊಳ್ಳುವ ದಾಳಿಯನ್ನು ಒಪ್ಪಲಾಗದು. ಕೇಂದ್ರ ಸರ್ಕಾರವು ವಿರೋಧ ಪಕ್ಷಗಳ ರಾಜ್ಯ ಸರ್ಕಾರಗಳ ಮೇಲೆ ಈ ರೀತಿ ದಾಳಿ ಮಾಡುತ್ತಿರುವುದು ಮೊದಲಲ್ಲ. ಇದು ಪ್ರಜಾಪ್ರಭುತ್ವ ವಿರೋಽ’ ಎಂದು ಟೀಕಿಸಿರುವುದನ್ನು ಕೇಂದ್ರ ಸರ್ಕಾರ ಗಮನಿಸಬೇಕು. ಇಂತಹ ಕ್ರಮವು ಕೇಂದ್ರ -ರಾಜ್ಯಗಳ ನಡುವೆ ಇರುವ ಬಾಂಧವ್ಯವನ್ನು ಹಾಳುಮಾಡುವುದಲ್ಲದೆ, ವಾಮಮಾರ್ಗ ಹಿಡಿದು ಪಶ್ಚಿಮ ಬಂಗಾಳವನ್ನು ಬರಲಿರವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಬೇಕೆನ್ನುವುದನ್ನು ಬಿಟ್ಟರೆ ಈ ದಾಳಿಯಲ್ಲಿ ಬೇರಾವ ಸದುದ್ದೇಶ ಇಲ್ಲ ಎಂದು ಪತ್ರಿಕೆಗಳು ಖಂಡಿಸಿವೆ. ಇಂತಹ ಸೇಡಿನ ಕ್ರಮಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಇರುವ ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಸಿಬಿಐ ಮತ್ತು ಇಡಿ ಯಂತಹ ಸಂಸ್ಥೆಗಳನ್ನು ಬಳಸಿಕೊಳ್ಳುವ ಮೂಲಕ ಚುನಾವಣೆ ಗೆಲ್ಲುವ ತಂತ್ರಗಾರಿಕೆ ಜನತಂತ್ರ ವ್ಯವಸ್ಥೆಗೆ ಮಾರಕವಲ್ಲದೆ ಮತ್ತೇನೂ ಅಲ್ಲ.

” ಐ-ಪ್ಯಾಕ್ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಬಿಜೆಪಿಯ ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ. ಈ ಐ-ಪ್ಯಾಕ್ ಪಶ್ಚಿಮ ಬಂಗಾಳದಲ್ಲಿಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ಸಿಗೆ ಚುನಾವಣಾ ಕಾರ್ಯತಂತ್ರವನ್ನು ರೂಪಿಸಿಕೊಟ್ಟಿತು”

ಆಂದೋಲನ ಡೆಸ್ಕ್

Recent Posts

ಮೂಲ ಸೌಕರ್ಯ ಸಮಸ್ಯೆ : ಪಾಲಿಕೆ ಆಯುಕ್ತರಿಗೆ ಪತ್ರ ಬರೆದ ಸಂಸದ ಯದುವೀರ್‌

ಮೈಸೂರು : ನಗರದ ಎಲ್ಲ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಪರಿಹಾರ ದೊರಕಿಸಿಕೊಡಲಾಗುವುದು. ಈ ನಿಟ್ಟಿನಲ್ಲಿ ಸಲ್ಲಿಕೆಯಾಗಿರುವ ಅಹವಾಲುಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು…

36 mins ago

ಮಾರ್ಚ್.‌6ರಂದು ರಾಜ್ಯ ಬಜೆಟ್‌ ಮಂಡನೆಗೆ ಚಿಂತನೆ

ಬೆಂಗಳೂರು: ಮುಂಬರುವ ಮಾರ್ಚ್‌ ತಿಂಗಳಲ್ಲಿ ಬಜೆಟ್‌ ಮಂಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಮಾರ್ಚ್.‌6ರಂದು ಬಜೆಟ್‌ ಮಂಡಿಸುವ ಬಗ್ಗೆ ಸಿಎಂ…

2 hours ago

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ಪ್ರಯಾಣಿಕರಿಗೆ ಗಾಯ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಭೀಮನಬೀಡು ಗ್ರಾಮದ ಸಮೀಪ ಎರಡು ಕಾರುಗಳ ನಡುವೆ ಮುಖಾಮುಕಿ ಡಿಕ್ಕಿ ಸಂಭವಿಸಿ ಪ್ರಯಾಣಿಕರಿಗೆ ಗಂಭೀರವಾದ…

3 hours ago

ಮೈಸೂರು| ಕೇರಳ ಸಿಎಂ ಪಿಣರಾಯಿ ವಿಜಯನ್‌ ವಿರುದ್ಧ ಪೊರಕೆ ಚಳುವಳಿ

ಮೈಸೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇರಳದಲ್ಲಿ ಕನ್ನಡ ಶಾಲೆಗಳನ್ನು ಬಂದ್ ಮಾಡಿಸಲು ಹೊರಟಿದ್ದಾರೆ ಎಂದು ಆರೋಪಿಸಿ ಕನ್ನಡಪರ…

3 hours ago

ಮಲೆಮಹದೇಶ್ವರ ಬೆಟ್ಟ: ನೂತನ ಸೋಲಾರ್‌ ಘಟಕ ಉದ್ಘಾಟಿಸಿದ ಶಾಸಕ ಎಂ.ಆರ್.ಮಂಜುನಾಥ್‌

ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನೂತನವಾಗಿ ಉದ್ಘಾಟನೆ ಮಾಡಿರುವ ಸೋಲಾರ್ ಘಟಕದಿಂದ ಪ್ರಾಧಿಕಾರಕ್ಕೆ ಪ್ರತಿ ತಿಂಗಳು 15…

3 hours ago

ಸೋಮವಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ಜಲಜಾ ಶೇಖರ್‌ ಆಯ್ಕೆ

ಸೋಮವಾರಪೇಟೆ: ತಾಲ್ಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ಫೆಬ್ರವರಿ.9, 2026ರಂದು ಐಗೂರು ಗ್ರಾಮದಲ್ಲಿ ನಡೆಯಲಿದ್ದು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ…

3 hours ago