ಅಂಕಣಗಳು

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಯುಡಿಎಫ್, ಎಲ್ ಡಿಎಫ್ ಜತೆ ಬಿಜೆಪಿ ಓಡಲಿದೆಯೇ?

ದೆಹಲಿ ಕಣ್ಣೋಟ 

ಶಿವಾಜಿ ಗಣೇಶನ್‌ 

ಇದು ಧರ್ಮರಾಜಕಾರಣದ ಕಾಲ. ಧರ್ಮ ಮತ್ತು ರಾಜಕಾರಣ ಬೇರೆ ಬೇರೆ. ಇವೆರಡು ಪ್ರತ್ಯೇಕವಾಗಿರಬೇಕು ಎನ್ನುವುದು ಸಾರ್ವಜನಿಕರಿಗೆ ನೀಡುವ ಪುಕ್ಕಟೆ ಉಪದೇಶ. ಭಾರತೀಯ ಜನತಾ ಪಕ್ಷ ಸ್ಥಾಪನೆಯಾಗಿ ಚುನಾವಣೆಗೆ ಸ್ಪರ್ಧಿಸಿದ ಮೇಲೆ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳಿಂದ ನಾಲ್ಕಾರು ಮಂದಿ ಕಾವಿಧಾರಿಗಳು ಲೋಕಸಭೆಗೆ ಹಿಂದಿನಿಂದ ಆಯ್ಕೆಯಾಗಿ ಬರುತ್ತಿದ್ದಾರೆ. ಹಾಗೆ ಎರಡು ದಶಕಗಳ ಹಿಂದೆ ಆಯ್ಕೆಗೊಂಡವರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಒಬ್ಬರಾಗಿದ್ದರು. ಬಿಜೆಪಿಯ ಅಜೆಂಡಾವೇ ದೇಶವನ್ನು ಪೂರ್ಣವಾಗಿ ಹಿಂದೂರಾಷ್ಟ್ರ ಮಾಡಬೇಕೆನ್ನುವುದು. ಬಿಜೆಪಿಯ ಅಜೆಂಡಾವನ್ನು ಬಹುತೇಕ ಜನರು ಒಪ್ಪಿಕೊಂಡಿದ್ದಾರೆ ಎನ್ನುವುದನ್ನು ಚುನಾವಣಾ ಫಲಿತಾಂಶಗಳು ರುಜುವಾತುಪಡಿಸುತ್ತಿವೆ. ಈ ಪಕ್ಷವೀಗ ಪ್ರತಿ ಬಾರಿಯೂ ಬರುವ ರಾಜ್ಯಗಳ ಚುನಾವಣೆಗಳಲ್ಲಿ ಜಯಭೇರಿ ಬಾರಿಸುತ್ತಿದೆ.

ದೇಶದಲ್ಲೇ ಅತ್ಯಂತ ಬೃಹತ್ ಎನ್ನಲಾದ ಮುಂಬೈ ಮಹಾನಗರಪಾಲಿಕೆ ಚುನಾವಣೆಯಲ್ಲಿ ಶಿವಸೇನೆಯನ್ನು ಸೋಲಿಸಿ ಅಧಿಕಾರದ ಗದ್ದುಗೆ ಏರುತ್ತಿರುವುದರಿಂದ ಇಡೀ ದೇಶವನ್ನೇ ಗೆಲ್ಲುತ್ತೇವೆ ಎನ್ನುವ ಗುಂಗಿನಲ್ಲಿದೆ. ಎಡಪಕ್ಷಗಳು ನಾಲ್ಕು ದಶಕಗಳ ಕಾಲ ನಿರಂತರವಾಗಿ ಆಳಿದ ಪಶ್ಚಿಮ ಬಂಗಾಳವನ್ನು ಹದಿನೈದು ವರ್ಷಗಳಿಂದ ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಹಿಂದಿನ ಚುನಾವಣೆಗಳಿಗಿಂತ ಈ ಬಾರಿ ಹೆಚ್ಚಿನ ಸವಾಲು ಎದುರಾಗಿದೆ. ಬಿಜೆಪಿ ಪಶ್ಚಿಮ ಬಂಗಾಳವನ್ನು ಗೆಲ್ಲಲೇಬೇಕೆನ್ನುವ ಹಠಕ್ಕೆ ಬಿದ್ದಿದೆ. ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲೇ ೭೭ ಸ್ಥಾನಗಳನ್ನು ಗೆದ್ದಿರುವ ದಾಖಲೆಯನ್ನು ಮುರಿದು ಅಧಿಕಾರದ ಗದ್ದುಗೆಯನ್ನು ಹಿಡಿಯಬೇಕೆನ್ನುವ ಧಾವಂತ ಬಿಜೆಪಿಯದು. ಹಾಗಾಗಿ ಅಲ್ಲೀಗ ರಾಜಕೀಯ ಪೈಪೋಟಿ ಇರುವುದು ಟಿಎಂಸಿ ಮತ್ತು ಬಿಜೆಪಿ ನಡುವೆ. ಎಡಪಕ್ಷಗಳು ಮತ್ತು ಕಾಂಗ್ರೆಸ್ ಧೂಳೀಪಟವಾಗಿವೆ.

ಪಶ್ಚಿಮ ಬಂಗಾಳ ಬಿಟ್ಟರೆ ದಕ್ಷಿಣದ ತಮಿಳುನಾಡು, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಮೇಲೆ ಈಗ ಬಿಜೆಪಿಯ ಕಣ್ಣು ಬಿದ್ದಿದೆ. ಮೆಟ್ರೋ ಮ್ಯಾನ್ ಎಂದೇ ಖ್ಯಾತಿಗಳಿಸಿದ್ದ ಶ್ರೀಧರನ್ ಅವರನ್ನು ಬಿಜೆಪಿ ೨೦೨೧ರ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸ್ಪರ್ಧೆಗೆ ಇಳಿಸಿತ್ತು. ಆದರೆ ಅವರು ಕಾಂಗ್ರೆಸ್ ಅಭ್ಯರ್ಥಿಯ ಮುಂದೆ ಸೋಲು ಅನುಭವಿಸಿ ಕೊನೆಗೆ ರಾಜಕಾರಣಕ್ಕೆ ತಿಲಾಂಜಲಿ ಹೇಳಿದರು.

ಕೇರಳದಲ್ಲಿ ಎಡಪಕ್ಷಗಳ ಒಕ್ಕೂಟ (ಎಲ್‌ಡಿಎಫ್) ಮತ್ತು ಯುನೈಟೆಡ್ ಡೆಮಾಕ್ರಟಿಕ್ ಒಕ್ಕೂಟ ರಾಜಕೀಯದಲ್ಲಿ ಆಳವಾಗಿ ಬೇರು ಬಿಟ್ಟಿವೆ. ಈ ಎರಡು ಒಕ್ಕೂಟಗಳ ನಡುವೆಯೇ ಪೈಪೋಟಿ ಇರುವುದು. ಕಳೆದ ಹತ್ತು ವರ್ಷಗಳಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ ಡಿಎಫ್ ಅಧಿಕಾರದಲ್ಲಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೂಡ ಹಲವು ವರ್ಷ ಆಡಳಿತ ನಡೆಸಿತಾದರೂ ಎರಡು ವಿಧಾನಸಭೆ ಚುನಾವಣೆಗಳಲ್ಲಿ ನಿರಂತರವಾಗಿ ಸೋಲು ಅನುಭವಿಸುತ್ತಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ತ್ರಿಶೂರ್ ಕ್ಷೇತ್ರದಿಂದ ಹಿರಿಯ ನಟ ಪಿ.ಗೋಪಿ ಆಯ್ಕೆಯಾಗಿದ್ದು ಕೇಂದ್ರದಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾಗಿದ್ದಾರೆ. ಆದರೆ ಇತ್ತೀಚೆಗೆ ರಾಜಕೀಯದಿಂದ ಬೇಸರಗೊಂಡು ಮತ್ತೆ ತಮ್ಮ ಚಲನಚಿತ್ರರಂಗಕ್ಕೆ ಮರಳುವ ಮಾತನಾಡಿದ್ದರು. ಆದರೆ ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಬಿಜೆಪಿ ಅವರನ್ನು ಕೇಂದ್ರದ ಮಂತ್ರಿಯಾಗಿಯೇ ಮುಂದುವರಿಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದೆ.

ಕಳೆದ ಡಿಸೆಂಬರ್ ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಿತು. ಈ ಚುನಾವಣೆಯ ದಿಕ್ಸೂಚಿಯನ್ನು ಗಮನಿಸಿದರೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಎಲ್‌ಡಿಎಫ್‌ಗೆ ಬಲವಾದ ಪೈಪೋಟಿ ನೀಡುವ ಸಾಧ್ಯತೆಗಳಿವೆ. ಯುಡಿಎಫ್ ೫೦೫ ಗ್ರಾಮ ಪಂಚಾಯಿತಿಗಳು, ೭೯ ಬ್ಲಾಕ್ ಪಂಚಾಯಿತಿ, ೭ ಜಿಲ್ಲಾ ಪಂಚಾಯಿತಿ ೫೪ ಮುನಿಸಿಪಾಲಿಟಿ ಮತ್ತು ೪ ಮಹಾನಗರ ಪಾಲಿಕೆಗಳಲ್ಲಿ ಜಯಗಳಿಸಿದೆ. ಸಿಪಿಐಎಂ ನೇತೃತ್ವದ ಎಲ್‌ಡಿಎಫ್ ೩೪೦ ಗ್ರಾಮಪಂಚಾಯಿತಿ, ೬೩ ಬ್ಲಾಕ್ ಪಂಚಾಯಿತಿ, ೭ ಜಿಲ್ಲಾ ಪಂಚಾಯಿತಿ, ೨೮ ಮುನಿಸಿಪಾಲಿಟಿ ಮತ್ತು ೧ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದಿದೆ. ಕೇರಳದಲ್ಲಿ ಹಿಂದಿನ ಚುನಾವಣೆಯ ಲೆಕ್ಕಾಚಾರವನ್ನೆಲ್ಲ ಬುಡಮೇಲು ಮಾಡುವುದಾಗಿ ಹೇಳುತ್ತಿರುವ ಬಿಜೆಪಿಯ ಚುನಾವಣಾ ತಂತ್ರ ಹೆಣೆಯುವ ನಾಯಕ ಎಂದೇ ಖ್ಯಾತಿಯಾಗಿರುವ ಅಮಿತ್ ಈ ಬಾರಿ ಕೇರಳವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಆಶಯ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯು ೨೬ ಗ್ರಾಮಪಂಚಾಯಿತಿಗಳು, ಎರಡು ಮುನಿಸಿಪಾಲಿಟಿಗಳು ಮತ್ತು ತಿರುವನಂತಪುರ ಮಹಾನಗರ ಪಾಲಿಕೆಯನ್ನು ಗೆದ್ದುಕೊಂಡು ಬೀಗುತ್ತಿದೆ.

ತಿರುವನಂತಪುರ ಮಹಾನಗರ ಪಾಲಿಕೆ ಮೊದಲ ಬಾರಿಗೆ ಬಿಜೆಪಿಯ ಆಡಳಿತಕ್ಕೆ ಹೋಗಿದೆ. ಈ ಗೆಲುವಿನಿಂದ ಬಿಜೆಪಿ ನಾಯಕರು ವಿಧಾನಸಭೆ ಚುನಾವಣೆಯಲ್ಲೂ ತಮಗೆ ಗೆಲುವು ಕಾದಿಟ್ಟದ್ದು ಎಂದು ಮರಗಾಲುಕಟ್ಟಿಕೊಂಡು ಕುಣಿದಾಡುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ ಯುಡಿಎಫ್ ಶೇಕಡಾವಾರು ೩೮.೮೧, ಎಲ್‌ಡಿಎಫ್ ಶೇಕಡಾವಾರು ೩೩.೪೫ ಮತ್ತು ಬಿಜೆಪಿ ನೇತೃತ್ವದ ಎನ್ ಡಿಎ ಶೇ. ೧೪.೭೧ ಮತಗಳನ್ನು ಗಳಿಸಿವೆ. ಈ ಶೇಕಡಾವಾರು ಮತಗಳಿಕೆಯನ್ನು ಗಮನಿಸಿದರೆ ಮತ್ತು ಇದೇ ಚುನಾವಣಾ ಒಲವು ಮುಂದುವರಿದರೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಯುಡಿಎಫ್ ಅಧಿಕಾರಕ್ಕೆ ಬರುವ ಸಾಧ್ಯತೆಯನ್ನು ನಿರೀಕ್ಷಿಸಬಹುದು.

ಕಳೆದ ಹತ್ತು ವರ್ಷಗಳಿಂದ ಅಧಿಕಾರದಿಂದ ದೂರ ಉಳಿದಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಅಭ್ಯರ್ಥಿಗಳನ್ನು ಆದಷ್ಟು ಬೇಗನೆ ಆಯ್ಕೆ ಮಾಡಿ ಚುನಾವಣೆ ಪ್ರಚಾರಕ್ಕಿಳಿಸುವುದು, ಶೇ.೫೦ರಷ್ಟು ಕ್ಷೇತ್ರಗಳನ್ನು ಮಹಿಳೆಯರಿಗೆ ಬಿಟ್ಟುಕೊಡುವುದು ಮತ್ತು ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದು ಹಾಗೂ ಹೆಚ್ಚು ಜನರನ್ನು ತಲುಪಲು ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದು, ಕೃಷಿ ಮತ್ತು ಆರೋಗ್ಯ ಕ್ಷೇತ್ರವನ್ನು ಬಲಪಡಿಸುವ ಆರ್ಥಿಕ ಕಾರ್ಯಕ್ರಮಗಳನ್ನು ನೀಡುವುದಾಗಿ ಕೇರಳದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಹೇಳಿದ್ದಾರೆ.

ಇತ್ತ ಎಲ್‌ಡಿಎಫ್ ತನ್ನ ಅಽಕಾರವನ್ನು ಉಳಿಸಿಕೊಳ್ಳಲು ಈಗ ಜನರಿಗೆ ನೇರವಾಗಿ ಮುಟ್ಟುವ ಕಾರ್ಯಕ್ರಮಗಳತ್ತ ಒಲವು ತೋರಿದೆ. ಮಹಿಳೆಯರಿಗೆ ತಿಂಗಳಿಗೆ ಒಂದು ಸಾವಿರ ರೂಪಾಯಿ ನಗದು ನೆರವು, ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ತಿಂಗಳಿಗೆ ಒಂದು ಸಾವಿರ ರೂಪಾಯಿ ಮತ್ತು ಸ್ವಯಂ ಉದ್ಯೋಗ ಮಾಡಲು ಮಹಿಳೆಯರಿಗೆ ಹೆಚ್ಚಿನ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ರೂಪಿಸುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಕಟಿಸಿದ್ದಾರೆ. ಈ ಮಧ್ಯೆ ತಿರುವನಂತಪುರ ಮಹಾನಗರ ಪಾಲಿಕೆಯ ಜಯದ ಗುಂಗಿನಲ್ಲೇ ಇರುವ ಬಿಜೆಪಿಯು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಭಾರೀ ಬದಲಾವಣೆ ಆಗುವುದಾಗಿ ಹೇಳಿಕೊಳ್ಳುತ್ತಿದೆ. ಕಳೆದ ವಾರ ಕೇರಳಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಅಮಿತ್ ಶಾ, ಮೂರು ಅಂಶಗಳ ಕಾರ್ಯಕ್ರಮವನ್ನು ಘೋಷಿಸಿದ್ದಾರೆ. ಅವುಗಳೆಂದರೆ ‘ಅಭಿವೃದ್ಧಿ ಕೇರಳ, ಸುರಕ್ಷಿತ ಕೇರಳ ಮತ್ತು ಜನರ ಧಾರ್ಮಿಕ ನಂಬಿಕೆಯನ್ನು ಕಾಪಾಡುವುದು’. ಜೊತೆಗೆ ಕೇರಳದ ಶಬರಿಮಲೈ ದೇವಾಲಯದಲ್ಲಿನ ಆಭರಣ ಕಳವು ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸುವವರೆಗೂ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದಿದ್ದಾರೆ.

ಇತ್ತ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ದಕ್ಷಿಣ ರಾಜ್ಯಗಳ ಬಗೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ತೋರುತ್ತಿರುವ ತಾರತಮ್ಯದ ವಿರುದ್ಧ ಪ್ರತಿಭಟನೆ ಮೂಲಕ ಜನರಲ್ಲಿ ಅರಿವು ಮೂಡಿಸುವುದಾಗಿ ಹೇಳುತ್ತಿದ್ದಾರೆ. ಅಂತೂ ಏಪ್ರಿಲ್ ನಲ್ಲಿ ೧೪೦ ವಿಧಾನಸಭೆ ಕ್ಷೇತ್ರಗಳಿಗೆ ನಡೆಯುವ ಚುನಾವಣೆಗೆ ಮೂರೂ ಪಕ್ಷಗಳು ಸಜ್ಜಾಗುತ್ತಿವೆ. ಈ ಬಾರಿಯ ವಿಶೇಷವೆಂದರೆ ಬಿಜೆಪಿಯು ತಾನು ಕೂಡ ಪ್ರಬಲ ಸ್ಪರ್ಧಿ ಎನ್ನುವ ಗುಂಗಿನಲ್ಲಿರುವುದನ್ನು ಫಲಿತಾಂಶದ ಮೂಲಕ ಸಾಬೀತು ಪಡಿಸಲು ಸಾಕಷ್ಟು ಹೆಣಗಾಡಬೇಕಾಗುತ್ತದೆ.

” ಕಳೆದ ಡಿಸೆಂಬರ್ ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಈ ಚುನಾವಣೆಯ ದಿಕ್ಸೂಚಿಯನ್ನು ಗಮನಿಸಿದರೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಎಲ್‌ಡಿಎಫ್‌ಗೆ ಬಲವಾದ ಪೈಪೋಟಿ ನೀಡುವ ಸಾಧ್ಯತೆಗಳಿವೆ.”

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಜನತಂತ್ರಕೆ ಮಾರಕ!

ಜನತಂತ್ರಕೆ ಮಾರಕ! ದೊರಕಬೇಕು ಪ್ರತಿಪ್ರಜೆಗೂ ಘನತೆಯ ಬದುಕು ಸಮಾನ ಅವಕಾಶ ಅದುವೇ ಜನತಂತ್ರದ ಚೆಲುವು! ಕಡಿಮೆಯಾಗಲೇಬೇಕು ಬಡವ-ಬಲ್ಲಿದನ ಅಂತರ ಜನತಂತ್ರಕೆ…

1 hour ago

ಓದುಗರ ಪತ್ರ: ದೇವಸ್ಥಾನ ಅಭಿವೃದ್ಧಿಪಡಿಸಿ

ಹೆಚ್.ಡಿ.ಕೋಟೆ ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಾಲಯ ಇತಿಹಾಸ ಪ್ರಸಿದ್ಧವಾಗಿದ್ದು, ಸೂಕ್ತ ನಿರ್ವಹಣೆಯಿಲ್ಲದೇ ದೇವಾಲಯದ ಸುತ್ತಲೂ ಗಿಡ ಗಂಟಿಗಳು…

1 hour ago

ಓದುಗರ ಪತ್ರ: ಮೌಲ್ಯಯುತ ರಾಜಕಾರಣಿ ಭೀಮಣ್ಣ ಖಂಡ್ರೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಅಧ್ಯಕ್ಷರೂ, ಮಾಜಿ ಸಚಿವರೂ ಆದ ಹಿರಿಯ ರಾಜಕೀಯ ಮುತ್ಸದ್ದಿ, ಭೀಮಣ್ಣ ಖಂಡ್ರೆಯವರ…

1 hour ago

ಓದುಗರ ಪತ್ರ: ಕುಕ್ಕರಹಳ್ಳಿ ಕೆರೆಯ ಬಳಿ ವಿದ್ಯುತ್ ದೀಪ ಬೆಳಗಲಿ

ಮೈಸೂರು ವಿಶ್ವವಿದ್ಯಾನಿಲಯದ ಒಡೆತನದಲ್ಲಿರುವ ಕುಕ್ಕರಹಳ್ಳಿ ಕೆರೆ ಪರಿಸರದಲ್ಲಿ ವಾಯುವಿಹಾರ ಮಾಡುವುದಕ್ಕೆ ಪ್ರತಿದಿನ ನೂರಾರು ಜನರು ಬರುತ್ತಾರೆ. ಕೆಲವು ವಿಶೇಷ ದಿನಗಳಲ್ಲಿ…

2 hours ago

ಮಡಿಕೇರಿ ನಗರದಲ್ಲಿಲ್ಲ ಸುಸಜ್ಜಿತ ಫುಟ್‌ಪಾತ್‌ ವ್ಯವಸ್ಥೆ

ವಾಹನಗಳು, ಪಾದಚಾರಿಗಳು ಒಂದೇ ಪಥದಲ್ಲಿ ಓಡಾಡುವ ಪರಿಸ್ಥಿತಿ; ಅಗಲೀಕರಣಕ್ಕೆ ಜಾಗದ್ದೇ  ಸಮಸ್ಯೆ ಮಡಿಕೇರಿ: ಮಡಿಕೇರಿ ನಗರದಲ್ಲಿ ಪಾರ್ಕಿಂಗ್ ಸ್ಥಳವಿಲ್ಲದೇ ನಲುಗುತ್ತಿರುವ…

2 hours ago

ಎಲ್ಲಿ ಹೋದರು ಆ ಮಿಠಾಯಿ ಮಾಂತ್ರಿಕರು?

ವಿನುತ ಕೋರಮಂಗಲ   ಪಾಂ... ಪಾಂ... ಎಂಬ ಸದ್ದು ಕಿವಿಗೆ ಬೀಳುತ್ತಲೇ ಏನೇ ಕೆಲಸ ಮಾಡುತ್ತಿದ್ದರೂ ಅವೆಲ್ಲವನ್ನು ಅಲ್ಲಲ್ಲೇ ಬಿಟ್ಟು ಮನೆಯಲ್ಲಿ…

2 hours ago