ಅಂಕಣಗಳು

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಉತ್ತರದ ಕಾಲೇಜುಗಳ ‘ಚಹ ಕಪ್ಪಿನಲ್ಲಿ ಬಿರುಗಾಳಿ’

ತಾಯಿಯೇ ಮೊದಲ ಶಿಕ್ಷಕಿ; ಮನೆಯೇ ಮೊದಲ ಪಾಠ ಶಾಲೆ’ ಎನ್ನುವ ನಾಣ್ಣುಡಿಯನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ದಲಿತರಲ್ಲದ ಬಲಿಷ್ಠ ಜಾತಿಗಳ ಅಷ್ಟೇ ಏಕೆ ಹಿಂದುಳಿದ ಹಲವು ಜಾತಿಗಳ ಅನೇಕ ತಾಯಂದಿರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ‘ಅವನ (ದಲಿತ ಮಕ್ಕಳ) ಜೊತೆ ಸೇರಬೇಡ; ಅವನು ಕೊಟ್ಟಿದ್ದನ್ನು ತಿನ್ನಬೇಡ; ಇನ್ನೂ ಮಡಿವಂತಿಕೆಯವರಾಗಿದ್ದರೆ ಅವನನ್ನು ಮುಟ್ಟಿಸಿಕೊಳ್ಳಬೇಡ, ಜೊತೆ ಸೇರಬೇಡ. ಅವನ ಜೊತೆ ಆಟ ಆಡಬೇಡ’ ಎಂದು ‘ಬುದ್ಧಿವಾದ’ ಹೇಳಿ ಕಳುಹಿಸುವುದು ಕಟು ವಾಸ್ತವ. ಈ ಎಲ್ಲ ಅವಮಾನದ ನಡುವೆ ಪರಿಶಿಷ್ಟ ಜಾತಿಯ ಜನರು ಶಿಕ್ಷಣದ ಮಹತ್ವವನ್ನು] ಅರಿತು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ವಾತಾವರಣ ಹೆಚ್ಚಾಗಿದೆ. ಈಗಂತೂ ಪರಿಸ್ಥಿತಿ ಬದಲಾಗಿದ್ದು, ಮಕ್ಕಳೇ ಶಾಲೆಗಳಿಗೆ ಸ್ವಯಂ ಆಸಕ್ತಿಯಿಂದ ಹೋಗುತ್ತಿದ್ದಾರೆ.

ದಲಿತ ವರ್ಗದ ಮಕ್ಕಳು ಹುಟ್ಟಿನ ಕಾರಣಕ್ಕೆ ಹಲವು ವರ್ಷಗಳಿಂದ ಇಂತಹ ಅವಮಾನತೆಯನ್ನು ಅನುಭವಿಸುತ್ತಲೇ ಬರುತ್ತಿದ್ದಾರೆ. ಹಸಿವು, ಅಸ್ಪ ಶ್ಯತೆಯ ಸಂಕಟದ ಜೊತೆಗೆ ಶಾಲೆಗಳಲ್ಲಿ ಜಾತಿ ಹೆಸರು ಹಿಡಿದು ನಿಂದಿಸುವ ಸಹಪಾಠಿಗಳು ಮತ್ತು ಶಾಲೆಗಳ ಸಿಬ್ಬಂದಿಯಿಂದಾಗುವ ನೋವುಗಳನ್ನು ನುಂಗಿ ನಂತರ ಕಾಲೇಜು ಮತ್ತು ಉನ್ನತ ಶಿಕ್ಷಣ ಸಂಸ್ಥೆಗೆ ಕಾಲಿಟ್ಟರೆ ಅಲ್ಲಿಯೂ ಜಾತಿ ಹೆಸರಿನಲ್ಲಿ ತಾರತಮ್ಯವನ್ನು ಅನುಭವಿಸಲೇಬೇಕು ಎನ್ನುವ ವಾಸ್ತವವನ್ನು ತಳ್ಳಿಹಾಕುವಂತಿಲ್ಲ.

ಇಂತಹ ಅವಮಾನದ ಎಲ್ಲ ಹಂತಗಳನ್ನೂ ದಾಟಿ ಬಂದ ಹಲವು ಪ್ರತಿಭಾವಂತ ದಲಿತ ವಿದ್ಯಾರ್ಥಿಗಳು ಐಐಟಿ, ಐಐಎಂ, ಐಐಎಸ್ಸಿ ಮತ್ತು ಏಮ್ಸ್ ಮುಂತಾದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ‘ಪ್ರತಿಭೆ’ಯ ಆಧಾರದ ಮೇಲೆಯೇ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದು , ಇಂಥವರಲ್ಲಿ ಹಲವು ವಿದ್ಯಾರ್ಥಿಗಳು ಪ್ರತಿ ವರ್ಷವೂ ಅರ್ಧಕ್ಕೆ ಕಾಲೇಜುಗಳನ್ನು ಬಿಡುವ ಮತ್ತು ಆತ್ಮಹತ್ಯೆಗೆ ಶರಣಾಗುತ್ತಿರುವ ಅಮಾನವೀಯವಾದ ದಾರುಣ ಪರಿಸ್ಥಿತಿ ಇಂದು ಈ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇರುವುದನ್ನು ತಳ್ಳಿಹಾಕಲಾಗದು. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವಾಲಯದ ಮಾಹಿತಿಯಂತೆಯೇ ೨೦೧೭ರಿಂದ ೨೦೧೯ರವರೆಗಿನ ಅವಧಿಯಲ್ಲಿ ದೇಶದ ಐಐಟಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಜಾತಿಗಳ ೨೪೬೧ ವಿದ್ಯಾರ್ಥಿಗಳ ಪೈಕಿ ೧,೧೭೧ವಿದ್ಯಾರ್ಥಿ ಗಳು ಆ ಶಿಕ್ಷಣ ಸಂಸ್ಥೆಗಳನ್ನು ಅರ್ಧಕ್ಕೇ ತೊರೆದಿದ್ದಾರೆ. ಅಂದರೆ ಶೇ.೪೭.೫ರಷ್ಟು ವಿದ್ಯಾರ್ಥಿಗಳು ಜಾತಿ ತಾರತಮ್ಯದ ಕಾರಣಕ್ಕೆ ತಮ್ಮ ಉನ್ನತ ಶಿಕ್ಷಣದ ಕನಸಿನಿಂದ ದೂರವಾಗಿದ್ದಾರೆ.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ತಾರತಮ್ಯದಿಂದ ಇಡೀ ದೇಶಕ್ಕೇ ಗೊತ್ತಿರುವಂತೆ ೨೦೧೬ರ ಜನವರಿ ೧೭ರಂದು ಹೈದರಾಬಾದ್‌ನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡಿದ್ದರು. ‘ನನ್ನ ಹುಟ್ಟೇ ನನಗೆ ಶಾಪವಾಗಿ ನಿತ್ಯವೂ ಅನುಭವಿಸುತ್ತಿರುವ ಅವಮಾನದಿಂದ ಜೀವನದಲ್ಲಿ ಜುಗುಪ್ಸೆಗೊಂಡು ಸಾವಿಗೆ ಶರಣಾಗುತ್ತಿದ್ದೇನೆ’ಎಂದು ರೋಹಿತ್ ತನ್ನ ಆತ್ಮಹತ್ಯೆಯ ಕಾರಣವನ್ನು ಬರದಿಟ್ಟು ಹೋಗಿದ್ದ. ಇದೇ ವಿಶ್ವವಿದ್ಯಾನಿಲಯದಲ್ಲಿ ೨೦೦೮ರಲ್ಲಿ ಸೆಂಥಿಲ್ ಕುಮಾರ್, ೨೦೧೩ರಲ್ಲಿ ಮದರಿ ವೆಂಕಟೇಶ್, ಐಐಟಿ ಮುಂಬೈಯಲ್ಲಿ ೨೦೦೭ರಲ್ಲಿ ಎಂ. ಶ್ರೀಕಾಂತ್ ಆತ್ಮಹತ್ಯೆಗೆ ಬಲಿಯಾದವರು ಎನ್ನುವುದು ವಾಸ್ತವ ಸಂಗತಿ. ಹಾಗೆಯೇ ೨೦೧೦ರಲ್ಲಿ ಕಾನ್ಪುರದ ಐಐಟಿಯಲ್ಲಿ ಮಾಧುರಿ ಸಾಲೆ, ನವದೆಹಲಿಯ ಏಮ್ಸ್‌ನಲ್ಲಿ ೨೦೧೦ರಲ್ಲಿ ಬಾಲಮುಕುಂದ ಭಾರ್ತಿ ಜಾತಿ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ನತದೃಷ್ಟ ವಿದ್ಯಾರ್ಥಿಗಳು.

ಮುಂಬೈನ ಟೋಪಿ ವಾಲಾ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಾ ಬಿವೈಎಲ್ ನಾಯರ್ ಚಾರಿಟಬಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ೨೧ ವರ್ಷದ ಪಾಯಲ್ ತಡ್ವಿ ಅಲ್ಲಿನ ಪ್ರಾಧ್ಯಾಪಕರು ಮತ್ತು ಸಿಬ್ಬಂದಿಯ ಕಿರುಕುಳ ಮತ್ತು ಜಾತಿ ತಾರತಮ್ಯಕ್ಕೆ ನೊಂದು ೨೦೧೯ರ ಮೇ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ನತದೃಷ್ಟೆ. ಒಂದು ಮಾಹಿತಿಯ ಪ್ರಕಾರ ೨೦೧೪ರಿಂದ ೨೦೨೧ರ ವರೆಗಿನ ಅವಧಿಯಲ್ಲಿ ಐಐಟಿ, ಐಐಎಂ ಸೇರಿದಂತೆ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಕಿರುಕುಳದಿಂದ ೧೨೨ ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ ೬೮ ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ.

ಬಲಿಷ್ಠ ಜಾತಿಗಳ ವಿದ್ಯಾರ್ಥಿಗಳಲ್ಲದೆ ಪ್ರಾಧ್ಯಾಪರು, ಸಂಶೋಧನಾ ಮಾರ್ಗದರ್ಶಿಗಳು ಮತ್ತು ಕಾಲೇಜು ಸಿಬ್ಬಂದಿಗಳು ದಲಿತ ವಿದ್ಯಾರ್ಥಿಗಳನ್ನು ಅವರ ಹೆಸರುಗಳ ಮತ್ತು ಅವರ ಬಡತನದ ಮೂಲಕ ಜಾತಿಯನ್ನುಪತ್ತೆ ಹಚ್ಚಿ ಹೀಯಾಳಿಸುವುದು, ಅವಮಾನಿಸುವುದು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಿರಂತರವಾಗಿ ನಡೆದು ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರೊ.ಎಸ್.ಕೆ. ತೋರಟ್ (೨೦೦೭) ಮತ್ತು ಮುಂಗೇಕರ್ ಸಮಿತಿ (೨೦೧೨) ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಜಾತಿ ತಾರತಮ್ಯ ಕುರಿತು ವರದಿ ನೀಡಿದ್ದರೂ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳು ಯಾವುದೇ ಕ್ರಮಕೈಗೊಳ್ಳದ ಕಾರಣ ದಲಿತ ವಿದ್ಯಾರ್ಥಿಗಳನ್ನು ಅವಮಾನಿಸುವುದು ಮತ್ತು ಕಿರುಕುಳ ನೀಡುವುದು ಮುಂದುವರಿದೇ ಇದೆ. ಜಾತಿ ತಾರತಮ್ಯಕ್ಕೆ ಹತ್ತಾರು ಕಾರಣಗಳಿದ್ದರೂ ದಲಿತ ವಿದ್ಯಾರ್ಥಿಗಳನ್ನು ಇತರರಂತೆ ಸಮನಾಗಿ ನೋಡಿಕೊಳ್ಳುವ ವಾತಾವರಣವಿಲ್ಲ. ಹೀಗಾಗಿ ಈ ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ವಾತಾವರಣ ದಲಿತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿಲ್ಲ ಎಂದು ಪ್ರೊ.ತೋರಟ್ ಸಮಿತಿ ಅಭಿಪ್ರಾಯಪಟ್ಟಿತ್ತು.

ಜಾತಿ ತಾರತಮ್ಯದಿಂದ ನನ್ನ ಮಗ ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡ ಎಂದು ವೇಮುಲ ಮತ್ತು ಪಾಯಲ್ ತಡ್ವಿ ಅವರ ತಾಯಂದಿರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಇಂತಹ ಅಮಾನುಷ ವ್ಯವಸ್ಥೆಯನ್ನು ತಡೆಯಲು ನ್ಯಾಯಾಲಯ ಮಧ್ಯಪ್ರವೇಶಿಸಬೇಕೆಂದು ಮಾಡಿದ ಮನವಿಯ ಹಿನ್ನೆಲೆಯಲ್ಲಿ ಈಗಿನ ಬೆಳವಣಿಗೆಗೆ ಮುನ್ನುಡಿಯಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಶೈಕ್ಷಣಿಕ ಮತ್ತು ಆಡಳಿತದ ಮೇಲೆ ನಿಯಂತ್ರಣ ಹೊಂದಿರುವ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ(ಯುಜಿಸಿ)ಕ್ಕೆ ನ್ಯಾಯಾಲಯ ನೀಡಿದ್ದ ನೋಟೀಸಿನ ಹಿನ್ನೆಲೆಯಲ್ಲಿ ಯುಜಿಸಿ ಕೆಲವು ತಿಂಗಳ ಹಿಂದೆ ಹೊಸ ನಿಯಮಾವಳಿಗಳ ಕರಡನ್ನು ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈ ಕರಡು ಪ್ರತಿಯನ್ನು ಸಾರ್ವಜನಿಕ ಅವಗಾಹನೆಗೆ ತಂದು ಉತ್ತಮ ಸಲಹೆಗಳನ್ನು ಸ್ವೀಕರಿಸಿ ತಿದ್ದುಪಡಿಗಳನ್ನು ಮಾಡುವುದಾಗಿ ನ್ಯಾಯಾಲಯದ ಮುಂದೆ ಭರವಸೆ ನೀಡಿತ್ತು.

ಸುಪ್ರೀಂ ಕೋರ್ಟಿಗೆ ನೀಡಿದ ಭರವಸೆಯಂತೆ ಕೇಂದ್ರ ಮಾನವ ಅಭಿವೃದ್ಧಿ ಸಚಿವಾಲಯ ಇದೇ ಜನವರಿ ೧೩ರಂದು ಈ ಸಂಬಂಧ ಅಽಸೂಚನೆಯನ್ನು ಹೊರಡಿಸಿದೆ. ಈ ಅಽಸೂಚನೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜೊತೆಗೆ ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನೂ ಸೇರಿಸಿದೆ. ಕಾಲೇಜುಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗೆ ಜಾತಿ ಹೆಸರಿನಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎನ್ನುವ ಕಾರಣದಿಂದ ಹೊಸ ನಿಯಮಾವಳಿಗಳನ್ನು ರೂಪಿಸಿರುವುದು ಈಗ ವಿವಾದಕ್ಕೆ ಮೂಲವಾಗಿದೆ. ಈ ನಿಯಮಾವಳಿಯ ಪ್ರಕಾರ ಸಮಾನ ಸಮಿತಿಯೊಂದರ ರೂಪರೇಷೆಯನ್ನು ವಿವರಿಸಿದೆ.

ಆದರೆ ಈ ಸಮಿತಿಯಲ್ಲಿ ಪರಿಶಿಷ್ಟರಲ್ಲದ ಬೇರೆ ಜಾತಿಗೆ ಪ್ರಾತಿನಿಧ್ಯ ನೀಡಿಲ್ಲ. ಬೇರೆ ಜಾತಿಗಳ ವಿದ್ಯಾರ್ಥಿಗಳಿಗೂ ಕ್ಯಾಂಪಸ್ಸಿನಲ್ಲಿ ಜಾತಿ ತಾರತಮ್ಯ ನಡೆಯುತ್ತಿದ್ದು, ಅವರ ನೋವಿಗೆ ಸ್ಪಂದಿಸುವ ಅವಕಾಶ ಈ ಅಧಿಸೂಚನೆಯಲ್ಲಿ ಇಲ್ಲ. ಜೊತೆಗೆ ತಳವರ್ಗದ ವಿದ್ಯಾರ್ಥಿಗಳು ಈ ಅಧಿಸೂಚನೆಯ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚು ಎನ್ನುವ ಶಂಕೆಗಳನ್ನು ಇದನ್ನು ವಿರೋಧಿಸುತ್ತಿರುವ ವಿದ್ಯಾರ್ಥಿ ವರ್ಗ ವ್ಯಕ್ತಪಡಿಸುತ್ತಿದೆ. ಇದೀಗ ಈ ವಿವಾದ ಮತ್ತೆ ಸುಪ್ರೀಂ ಕೋರ್ಟು ಮೆಟ್ಟಿಲೇರಿದ್ದು, ಉನ್ನತ ನ್ಯಾಯಾಲಯ ಕೇಂದ್ರ ಸರ್ಕಾರದ ಈ ಅಧಿಸೂಚನೆಗೆ ತಡೆ ನೀಡಿದ್ದು, ಸದ್ಯಕ್ಕೆ ೨೦೧೨ರ ನಿಯಮಾವಳಿಯನ್ನೇ ಮುಂದುವರಿಸಲು ಸರ್ಕಾರಕ್ಕೆ ಸೂಚನೆ ನೀಡಿದೆ. ಈ ವಿಷಯವನ್ನು ಮುಂದಿಟ್ಟುಕೊಂಡು ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಬಲಿಷ್ಠ ಜಾತಿಗಳ ವಿದ್ಯಾರ್ಥಿಗಳು ಬೀದಿಗಿಳಿದು ಕೇಂದ್ರ ಸರ್ಕಾರದ ವಿರುದ್ಧ ಹೋರಾಟದ ದನಿ ಎತ್ತಿದ್ದಾರೆ. ಈ ಅಪಸ್ವರಕ್ಕೆ ಉತ್ತರಿಸಿರುವ ಮಾನವ ಸಂಪನ್ಮೂಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್, ಯಾವುದೇ ವಿದ್ಯಾರ್ಥಿಗಳಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಎಲ್ಲರನ್ನು ಸಮಾನವಾಗಿ ಕಾಣಲಾಗುವುದು ಎಂದು ಭರವಸೆ ನೀಡಿದ್ದಾರೆ. ಸಚಿವರ ಆಶಯದಂತೆ ಎಲ್ಲ ವರ್ಗದ ವಿದ್ಯಾರ್ಥಿಗಳೂ ಸಮಾನವಾಗಿ ವ್ಯಾಸಂಗ ಮಾಡುವ ವಿದ್ಯಾರ್ಥಿ ಸ್ನೇಹಿ ವಾತಾವರಣವನ್ನು ಸೃಷ್ಟಿಸಬೇಕಿದೆ.

ಒಟ್ಟಾರೆ ಈಗ ‘ಚಹ ಕಪ್ಪಿನಲ್ಲಿ ಬಿರುಗಾಳಿ’ (ಸ್ಟಾರ್ಮ್ ಇನ್ ದ ಟೀ ಕಪ್) ಎದ್ದಿದೆ. ಅಂದರೆ ಸಮಾಜದಲ್ಲಿ ಅನವಶ್ಯಕ ವಿಷಯವನ್ನು ದೊಡ್ಡದು ಮಾಡಿ,ಆತಂಕ ಮತ್ತು ಕಳವಳವನ್ನು ಉಂಟು ಮಾಡಲಾಗಿದೆ. ಮತ್ತೆ ಈ ವಿವಾದ ಉನ್ನತ ನ್ಯಾಯಾಲಯದ ಮುಂದೆ ಇದ್ದು, ಅದು ಮುಂದೆ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಮತ್ತು ಅದನ್ನು ಕೇಂದ್ರ ಸರ್ಕಾರ ಹೇಗೆ ನಿರ್ವಹಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ

” ಒಂದು ಮಾಹಿತಿಯ ಪ್ರಕಾರ ೨೦೧೪ರಿಂದ ೨೦೨೧ರ ವರೆಗಿನ ಅವಧಿಯಲ್ಲಿ ಐಐಟಿ, ಐಐಎಂ ಸೇರಿದಂತೆ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಕಿರುಕುಳದಿಂದ ೧೨೨ ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ ೬೮ ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ.”

 

 

ಆಂದೋಲನ ಡೆಸ್ಕ್

Recent Posts

ಕೇಂದ್ರ ಬಜೆಟ್‌ನಿಂದ ರಾಜ್ಯಕ್ಕೆ ಯಾವುದೇ ಅನುಕೂಲವಾಗಿಲ್ಲ: ಡಿಸಿಎಂ ಡಿ.ಕೆ.ಶಿ ಆಕ್ರೋಶ

ರಾಮನಗರ: ರಾಜ್ಯಕ್ಕೆ ಇಷ್ಟರ ಮಟ್ಟಿಗೆ ಅನ್ಯಾಯ ಮಾಡುತ್ತಾರೆ ಎಂದು ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ ಎಂದು ಕೇಂದ್ರ ಬಜೆಟ್‌ ಬಗ್ಗೆ…

40 mins ago

ಹನೂರು: ಪಾದಯಾತ್ರಿಕರು ಬಿಸಾಡುವ ಕಸ ಸಂಗ್ರಹಣೆ ಡಬ್ಬ ನಿರ್ಮಾಣ ಕಾಮಗಾರಿಗೆ ಚಾಲನೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು  ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿರುವ…

3 hours ago

ಕೇಂದ್ರ ಬಜೆಟ್‌ಗೆ ರಾಜ್ಯ ಬಿಜೆಪಿ ನಾಯಕರ ಮೆಚ್ಚುಗೆ

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ…

3 hours ago

ಮಂಡ್ಯ| ನಿಂತಿದ್ದ ಟಿಪ್ಪರ್‌ಗೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಮಂಡ್ಯ‌: ನಿಂತಿದ್ದ ಟಿಪ್ಪರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ಮೂವರು ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆ…

4 hours ago

ಬಜೆಟ್‌ ದೇಶದ ಅಭಿವೃದ್ಧಿಗೆ ಹೊಸ ಸ್ಪರ್ಶ ತುಂಬಲಿದೆ: ಪ್ರಧಾನಿ ಮೋದಿ

ನವದೆಹಲಿ: 2026ರ ಬಜೆಟ್‌ 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಕುರಿತು…

4 hours ago

ಬಜೆಟ್‌ನಲ್ಲಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಕ್ಕೆ ಮತ್ತೆ ಅನ್ಯಾಯ: ಈಶ್ವರ ಖಂಡ್ರೆ

ಬೆಂಗಳೂರು: ಭಾನುವಾರ ಮಂಡಿಸಲಾದ ಕೇಂದ್ರ ಬಜೆಟ್ ದೇಶದ ಆರ್ಥಿಕತೆಗೆ ರಜೆ ನೀಡುವಂತಿದೆ. ಸಂಪೂರ್ಣ ನಿರಾಶಾದಾಯಕವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು…

4 hours ago