ರಾಜಕಾರಣವೀಗ ಅಧಿಕಾರದಾಹಿಗಳ ಅಡ್ಡ ಆಗಿಹೋಗಿದೆ. ಅಧಿಕಾರವಿಲ್ಲದೆ ಯಾರಿಗೂ ಯಾವ ಸೈದ್ಧಾಂತಿಕ ರಾಜಕಾರಣವೂ ಬೇಡವಾಗಿದೆ. ಕಾಲ ಸರಿಯುತ್ತಿದ್ದಂತೆ ನಿತ್ಯದ ರಾಜಕಾರಣದ ಬದಲಾವಣೆಯೂ ನಿರಂತರ ಪ್ರಕ್ರಿಯೆಯಾಗಿ ನಡೆಯುತ್ತಿದೆ. ದೇಶದಲ್ಲಿ ಒಡೆಯದ ಸಂಘಟನೆ ಇಲ್ಲ. ಒಡೆಯದ ರಾಜಕೀಯ ಪಕ್ಷವಿಲ್ಲ. ಅಧಿಕಾರಕ್ಕಾಗಿ ಪಕ್ಷ ಕಟ್ಟಿ ಬೆಳೆಸಿದವರ ಜೊತೆಯ ಇದ್ದು ಸಮಯ ಬಂದಾಗ ಬೆನ್ನಿಗೆ ಚೂರಿ ಹಾಕಿ ತಾವೊಂದು ಬಣವಾಗಿ ಅಧಿಕಾರ ನಡೆಸುವ ಪಕ್ಷದತ್ತ ಹೋಗುವುದು ಹೊಸದೇನಲ್ಲ. ಇಂತಹ ಘಟನೆಗಳು ನಡೆದಿರುವ ಬಗೆಗೆ ಪ್ರಪಂಚದ ಇತಿಹಾಸದತ್ತ ನೋಡಿದಾಗ ಕ್ರಿಸ್ತಪೂರ್ವ ೪೪ರಲ್ಲಿ ರೋಮ್ ದೇಶದ ಸರ್ವಾಧಿಕಾರಿಯಾಗಿದ್ದ ಜೂಲಿಯಸ್ ಸೀಸರ್‌ನನ್ನು ಆತನ ಆಪ್ತರೆನಿಸಿದ ಮಾರ್ಕಸ್ ಜೂನಿಯಸ್ ಬ್ರೂಟಸ್ ಸೇರಿದಂತೆ ಸೆನೆಟರ್‌ಗಳ ಗುಂಪೊಂದು ಅಧಿಕಾರಕ್ಕಾಗಿ ಹತ್ಯೆ ಮಾಡಿದ ಇತಿಹಾಸವನ್ನು ಕಾಣುತ್ತೇವೆ. ರೋಮನ್ ರಿಪಬ್ಲಿಕ್‌ನ್ನು ಉಳಿಸಲು ಇದು ಅನಿವಾರ್ಯವಾಗಿತ್ತು ಎಂದು ಹತ್ಯೆ ನಡೆಸಿದ ಸಂಚುಕೋರರು ಹೇಳಿಕೊಂಡರು. ಆದರೆ ಈ ಹತ್ಯೆಯು ಮುಂದೆ ಇಡೀ ರೋಮನ್ ರಿಪಬ್ಲಿಕ್‌ನ್ನು ನಾಶ ಮಾಡಿದ್ದನ್ನು ಚರಿತ್ರೆ ಹೇಳುತ್ತದೆ.
ದೇಶದಲ್ಲಿ ಹುಟ್ಟಿಕೊಂಡ ಕಾಂಗ್ರೆಸ್ ಮತ್ತು ಜನತಾ ಪಕ್ಷವು ಒಡೆದು ಹತ್ತಾರು ಪಕ್ಷಗಳಾಗಿ ಸಿಡಿದು ಹೋಗಿವೆ. ಜನತಾ ಪಕ್ಷದಿಂದ ಸಿಡಿದು ಹೋಗಿ ಬೆಳೆದ ಭಾರತೀಯ ಜನತಾ ಪಕ್ಷವೀಗ ನಮ್ಮ ಕಣ್ಣೆದುರು ಒಂದು ದೊಡ್ಡ ಪಕ್ಷವಾಗಿ ಆಡಳಿತ ಚುಕ್ಕಾಣಿ ಹಿಡಿದಿದೆ. ಈ ಒಡಕಿನ ಪರಂಪರೆಗೆ ಈಗ ಹೊಸದಾಗಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸೇರಿಕೊಳ್ಳುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹತ್ತಾರು ತಪ್ಪು ಹೆಜ್ಜೆಗಳ ವಿರುದ್ಧ ಗಟ್ಟಿ ದನಿಯಾಗಿದ್ದ ಬಂಗಾಳದ ಹೆಣ್ಣು ಹುಲಿ ಎಂದೇ ಖ್ಯಾತಿಯಾಗಿದ್ದ ಬಂಗಾಳಿಗಳ ಅಕ್ಕರೆಯ ದೀದಿ ಎನ್ನುವ ಮಮತಾ ಬ್ಯಾನರ್ಜಿ ಈಗ ಏಕಾಂಗಿಯಾಗಿ ಚುನಾವಣೆಯ ಸೋಲಿನಿಂದ ಅಽರರಾಗಿzರೆ. ೨೮ ವರ್ಷಗಳ ಹಿಂದೆ ಕಾಂಗ್ರೆಸ್ಸಿನಿಂದ ಹೊರಬಂದು ಕಟ್ಟಿದ ತೃಣಮೂಲ ಕಾಂಗ್ರೆಸ್ ಈಗ ಕವಲು ದಾರಿ ಹಿಡಿದಿದೆ. ಪಶ್ಚಿಮ ಬಂಗಾಳದ ಕಮ್ಯೂನಿಸ್ಟ್ ಆಡಳಿತದ ಅಕ್ರಮಗಳು, ಕಾಮ್ರೇಡುಗಳು ನಡೆಸುತ್ತಿದ್ದರೆನ್ನಲಾದ ಗೂಂಡಾಗಿರಿಯನ್ನು ಹತ್ತಿಕ್ಕಲು ಸ್ವಂತ ತೀರ್ಮಾನ ಕೈಗೊಂಡು ಬೀದಿ ಹೋರಾಟಕ್ಕಿಳಿಯಲು ಮಮತಾಗೆ ಮುಕ್ತ ಅವಕಾಶ ಬೇಕಿತ್ತು. ಅದಕ್ಕಾಗಿ ತಮ್ಮದೇ ಆದ ಪಕ್ಷವೊಂದನ್ನು ಕಟ್ಟಿಕೊಂಡು ಬಂಗಾಳದಲ್ಲಿ ತಮ್ಮಂತೆ ಯೋಚಿಸುವ ಯುವ ಪಡೆಯನ್ನು ಕಟ್ಟಿಕೊಂಡು ಬೀದಿಗಿಳಿದರು.
ಬೀದಿ ಹೋರಾಟದಿಂದಲೇ ೨೦೧೧ರ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿಯನ್ನು ಅಧಿಕಾರಕ್ಕೆ ತರುವ ಮೂಲಕ ೩೪ ವರ್ಷಗಳ ಕಮ್ಯೂನಿಸ್ಟ್ ಆಳ್ವಿಕೆಯನ್ನು ಕೊನೆಗಾಣಿಸಿ ಮೂರು ಬಾರಿ ಸತತವಾಗಿ ಅಧಿಕಾರ ನಡೆಸುವಲ್ಲಿ ತಮ್ಮ ರಾಜಕೀಯ ಜೀವನವನ್ನು ಯಶಸ್ವಿಯಾಗಿ ನಡೆಸಿದರು. ಆದರೆ ಈ ಬಾರಿಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಚುನಾವಣಾ ತಂತ್ರಗಳನ್ನು ಹೆಣೆಯುವಲ್ಲಿ ಚಾಣಕ್ಯ ಎಂದೇ ಖ್ಯಾತಿಯಾಗಿರುವ ಗೃಹ ಸಚಿವ ಅಮತ್ ಶಾ ಅವರು ನಡೆಸಿದ ಆಕ್ರಮಣಕಾರಿ ಕ್ರಮಗಳಿಂದ ದೀದಿ ಸ್ವತಃ ಸೋಲುವುದಲ್ಲದೆ ಇಡೀ ಪಕ್ಷ ಅಧಿಕಾರ ಕಳೆದುಕೊಂಡಿತು.
ಟಿಎಂಸಿ ಕಟ್ಟಿದ ಆರಂಭದ ದಿನಗಳಲ್ಲಿ ತಮ್ಮ ಆಪ್ತರೆನಿಸಿಕೊಂಡಿದ್ದ ಸುವೇಂದು ಅಧಿಕಾರಿಯೇ ಕಳೆದ ಬಾರಿ ಮತ್ತು ಈ ಸಲ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿ ಈಗ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಪರಿಸ್ಥಿತಿಯನ್ನು ಗಮನಿಸಿದರೆ ಈಗಿನ ಸೋಲು ಮಮತಾ ಬ್ಯಾನರ್ಜಿ ಮತ್ತೆ ರಾಜಕೀಯವಾಗಿ ಚೇತರಿಸಿಕೊಳ್ಳುವುದು ಸುಲಭವಾಗಿಲ್ಲ. ಕೇವಲ ಸುವೇಂದು ಅಧಿಕಾರಿ ಮಾತ್ರವಲ್ಲ. ರಾಜ್ಯ ವಿಧಾನಸಭೆ ಮತ್ತು ಸಂಸತ್ತಿನ ಉಭಯ ಸದನಗಳಲ್ಲೂ ಹಲವಾರು ಮಂದಿ ಸುವೇಂದು ಅಧಿಕಾರಿಯಂತೆ ಒಳಗಿನ ಶತ್ರುಗಳು ಧುತ್ತನೆ ಹುಟ್ಟಿಕೊಂಡಿರುವುದರಿಂದ ಮಮತಾ ಅವರೀಗ ದಿಕ್ಕು ತಪ್ಪಿದವರಾಗಿzರೆ. ಆಪ್ತರೆನಿಸಿದವರೇ ಅವರ ಬೆನ್ನಿಗೆ ಚೂರಿ ಹಾಕುವ ಇತಿಹಾಸ ಮರುಕಳಿಸುತ್ತಿರುವುದು ನಮ್ಮ ಇಂದಿನ ಅಽಕಾರ ರಾಜಕಾರಣದ ನಿಜವಾದ ಮುಖವನ್ನು ಅನಾವಣಗೊಳಿಸಿದೆ.
ಹಲವು ರಾಜಕಾರಣಿಗಳಿಗೆ ಪುತ್ರ ವ್ಯಾಮೋಹವಿದ್ದರೆ ಮದುವೆ ಆಗದ ಮಮತಾ ಬ್ಯಾನರ್ಜಿಗೆ ಸೋದರ ಸಂಬಂಧಿ ಅಭಿಷೇಕ್ ಬ್ಯಾನರ್ಜಿಯ ಅಧಿಕಾರ ವ್ಯಾಮೋಹವನ್ನು ಪ್ರೋತ್ಸಾಹಿಸುತ್ತಾ ಬಂದುದೇ ಈಗ ಅವರ ರಾಜಕೀಯ ಎಡವಟ್ಟಿಗೆ ಕಾರಣ ಎಂಬುದು ಪಕ್ಷವನ್ನು ಒಡೆದು ಹೊರ ನಡೆದಿರುವ ಗುಂಪಿನ ಆರೋಪ. ಎಂಬತ್ತು ಮಂದಿ ಶಾಸಕರಲ್ಲಿ ೬೪ ಮಂದಿ ಈಗ ದೀದಿ ಮಮತಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹಾಗೆಯೇ ೨೮ ಮಂದಿ ಲೋಕಸಭೆ ಸದಸ್ಯರ ಪೈಕಿ ೧೯ ಮಂದಿ ಪ್ರತ್ಯೇಕ ಗುಂಪು ಮಾಡಿಕೊಂಡು ಸೋಮವಾರ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ತಮ್ಮದೇ ನಿಜವಾದ ಟಿಎಂಸಿ ತಮ್ಮ ಪಕ್ಷ ,ತಾವು ಅಧಿಕಾರರೂಢ ಎನ್ ಡಿ ಎ ಭಾಗವಾಗಿ ಇರುವುದಾಗಿ ಮತ್ತು ಅದಕ್ಕಾಗಿ ತಮಗೆ ಸದನದಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಬೇಕೆಂದು ಕೋರುವುದಾಗಿ ಸುಮಾರು ೪೦ ವರ್ಷ ಮಮತಾ ಬ್ಯಾನರ್ಜಿ ಅವರ ಜೊತೆ ರಾಜಕೀಯವಾಗಿ ಗುರುತಿಸಿಕೊಂಡಿದ್ದ ಶ್ರೀಮತಿ ಕಾಕೋಳಿ ಮತ್ತು ಹಿರಿಯ ನಾಯಕ ಕಲ್ಯಾಣ್ ಬ್ಯಾನರ್ಜಿ ಹೇಳಿಕೊಂಡಿದ್ದಾರೆ. ಮತ್ತೊಂದು ಕಡೆ ಮೂವರು ರಾಜ್ಯಸಭೆಯ ಸದಸ್ಯರು ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ಮಮತಾ ಬ್ಯಾನರ್ಜಿ ಅವರ ರಾಜಕೀಯದಿಂದ ದೂರ ಸರಿದಿದ್ದಾರೆ. ಹೀಗಾಗಿ ಮಮತಾ ಅವರನ್ನು ರಾಜಕೀಯವಾಗಿ ಅತಂತ್ರಗೊಳಿಸುವ ಪ್ರಕ್ರಿಯೆ ನಡೆದಿರುವುದು ನಮ್ಮ ರಾಜಕೀಯ ಇಂದು ಎತ್ತ ಸಾಗುತ್ತಿದೆ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ.
ರಾಜ್ಯ ಮತ್ತು ದೆಹಲಿ ಮಟ್ಟದ ನಾಯಕರಲ್ಲಿ ಮಮತಾ ಬ್ಯಾಜರ್ಜಿ ಅವರ ಜೊತೆ ಗುರುತಿಸಿಕೊಂಡಿದ್ದ ಘಟಾನುಘಟಿ ನಾಯಕರೇ ಈಗ ಅವರ ವಿರೋಧಿ ಬಣದಲ್ಲಿದ್ದಾರೆ. ಕಲ್ಯಾಣ್ ಬ್ಯಾನರ್ಜಿ ಅವರಲ್ಲದೆ ಜವಾಹರ್ ಸರ್ಕಾರ್, ಸುಶ್ಮಿತಾ ದೇವ್, ಸುಖೇಂದು ಶೇಖರ್ ರಾಯ್ ಮುಂತಾದವರೂ ಸೇರಿಕೊಂಡಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಮಮತಾ ಬ್ಯಾನರ್ಜಿ ಅವರಿಗೆ ಲೋಕಸಭೆಯಲ್ಲಿ ಮೋಹುವಾ ಮೈತ್ರಾ ಜೊತೆಗಿದ್ದ ಒಳ್ಳೆಯ ಮಾತುಗಾರ್ತಿ ನಟಿ ಸಾಯೋನಿ ಘೋಷ್ ಕೂಡ ವಿರೋಧಿ ಬಣಕ್ಕೆ ಜಿಗಿದಿರುವುದು.
ಆದರೆ ಮೋಹುವಾ ಮೈತ್ರಾ ತಮ್ಮ ಜೀವ ಇರುವವರೆಗೂ ಬಿಜೆಪಿ ನೇತೃತ್ವದ ಮೋದಿ ಸರ್ಕಾರದ ವಿರುದ್ಧ ಹೋರಾಡಲು ಮಮತಾ ಬ್ಯಾನರ್ಜಿ ಅವರ ಜೊತೆಗಿರುವೆ ಎಂದಿದ್ದಾರೆ. ಇಂತಹ ಕಷ್ಟ ಕಾಲದಲ್ಲಿ ಮಮತಾ ಬ್ಯಾನರ್ಜಿ ಅವರೊಡನೆಯೇ ಇರುವೆ ಎನ್ನುವುದು ಅಸನ್ಸೋಲ್ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿರುವ ಮತ್ತೊಬ್ಬ ಹಿರಿಯ ಹೆಸರಾಂತ ನಟ ಶತೃಘ್ನ ಸಿನ್ಹಾ ಅವರ ಸ್ಪಷ್ಟ ನಿಲುವು. ಇವರ ಜೊತೆಗೆ ಪ್ರತಿಮಾ ಮೊಂಡಲ್ ಸಹ ಮಮತಾ ಅವರನ್ನು ಬಿಟ್ಟು ಹೋಗುವುದಿಲ್ಲ ಎಂದು ದೃಢವಾಗಿ ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಹದಿಮೂರು ಪಕ್ಷಗಳ ಇಂಡಿಯಾ ಮೈತ್ರಿಕೂಟದ ಸಕ್ರಿಯ ರಾಜಕಾರಣದಿಂದ ದೂರ ಸರಿದು ತಾನು ನಡೆದದ್ದೇ ದಾರಿ ಎನ್ನುವ ಧೋರಣೆ ಹೊಂದಿದ್ದ ಮಮತಾ ಬ್ಯಾನರ್ಜಿ ಬಂಗಾಳದಲ್ಲಿನ ತಮ್ಮ ಸೋಲಿನ ಕಹಿ ಮತ್ತು ಬೆಂಬಲಿಗರೆಲ್ಲ ತಮ್ಮನ್ನು ಬಿಟ್ಟು ಹೋಗುತ್ತಿರುವ ಅತಂತ್ರ ಸ್ಥಿತಿಯಲ್ಲಿರುವಾಗ ಮೂರು ದಿನಗಳ ಹಿಂದೆ ದೆಹಲಿಯಲ್ಲಿ ನಡೆದ ಬಿಜೆಪಿ ವಿರೋಧಿ ‘ಇಂಡಿಯಾ’ ವೇದಿಕೆಯಲ್ಲಿ ಭಾಗಿಯಾಗಿದ್ದರು. ಈ ಮಧ್ಯೆ ವಿಧಾನಸಭೆ ಚುನಾವಣೆ ಸೋಲಿನಿಂದ ಧೃತಿಗೆಡದೆ ಟಿಎಂಸಿಯನ್ನು ಕಾಂಗ್ರೆಸ್ ಜೊತೆ ವಿಲೀನ ಮಾಡಿ ಎನ್ನುವ ಸಲಹೆಯನ್ನು ಸೋನಿಯಾ ಅವರು ಮಮತಾಗೆ ನೀಡಿದ್ದಾರೆ ಎನ್ನುವುದರ ಬಗ್ಗೆ ಈಗ ವ್ಯಾಪಕವಾದ ಚರ್ಚೆ ನಡೆದಿದೆ.
ಕಾಂಗ್ರೆಸ್ಸಿಗೆ ಮರಳಿದರೆ ಪಕ್ಷದ ಉಪಾಧ್ಯಕ್ಷ ಸ್ಥಾನ ಮತ್ತು ಅವರ ಸೋದರ ಸಂಬಂಧಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡುವುದಾಗಿ ಸೋನಿಯಾ ಭರವಸೆ ನೀಡಿದ್ದಾರೆನ್ನಲಾಗಿದೆ. ಆದರೆ ಈ ಆಮಂತ್ರಣದ ಬಗೆಗೆ ಮಮತಾ ಇನ್ನೂ ತುಟಿ ಬಿಚ್ಚಿಲ್ಲ. ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ, ಅದರ ವಿರುದ್ಧ ಬೀದಿ ಹೋರಾಟದ ಜೊತೆಗೆ ಸುಪ್ರೀಂ ಕೋರ್ಟಿನಲ್ಲಿ ಸ್ವತಃ ವಕೀಲರಾಗಿ ವಾದ ಮಾಡಿ ಪಕ್ಷದ ಕಚೇರಿ ಮತ್ತು ತಮ್ಮ ಆಪ್ತರ ಮನೆಗಳ ಮೇಲಿನ ಇಡಿ ದಾಳಿ, ಜೊತೆಗೆ ಬಿಜೆಪಿಯ ಆಕ್ರಮಣಕಾರಿ ಪ್ರಚಾರದ ವಿರುದ್ಧ ಹೋರಾಡಿ ಬಸವಳಿದ ಮಮತಾ ಈಗ ಏಕಾಂಗಿಯಾಗುತ್ತಿರುವುದು ಅವರ ಹೋರಾಟದ ರಾಜಕೀಯವನ್ನೇ ಅಣಕಿಸುವಂತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಅವರ ಭವಿಷ್ಯದ ರಾಜಕೀಯ ನಡೆ ಕುತೂಹಲಕಾರಿಯಾಗಿದೆ.
ಈ ಮಧ್ಯೆ ಕೋಲ್ಕತ್ತಾದ ಸರ್ಕಾರಿ ಕಟ್ಟಡದಲ್ಲಿ ಇರಿಸಿದ್ದ ಚುನಾವಣೆಗೆ ಬಳಸಿದ್ದ ವಿದ್ಯುನ್ಮಾನ ಯಂತ್ರಗಳಿದ್ದ ಕಟ್ಟಡಕ್ಕೆ ಬೆಂಕಿ ಬಿದ್ದು ಸುಮಾರು ನಾಲ್ಕು ಸಾವಿರ ಇವಿಎಂ ಯಂತ್ರಗಳು ಸುಟ್ಟು ಹೋಗಿರುವುದಾಗಿ ಹೇಳಲಾಗುತ್ತಿದೆ. ಒಂದು ಕಡೆ ಟಿಎಂಸಿಯ ಶಾಸಕರು ಮತ್ತು ಲೋಕಸಭೆ ಸದಸ್ಯರ ಪಕ್ಷಾಂತರ ಪರ್ವ ನಡೆಯುವ ಈ ಗಳಿಗೆಯಲ್ಲಿ ಬೆಂಕಿ ಅವಘಡ ನಡೆದಿರುವುದನ್ನು ಗಮನಿಸಿದರೆ ಬಂಗಾಳದಲ್ಲಿ ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
” ಆಶ್ರಯ ಅನಿವಾರ್ಯ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ಸನ್ನು ತಮ್ಮ ವೈರಿಯ ಪಟ್ಟಿಯಲ್ಲಿ ನೋಡುತ್ತಿದ್ದ ಮಮತಾ ಈಗ ಕಾಂಗ್ರೆಸ್‌ನ ಮಹಾನಾಯಕಿ ಸೋನಿಯಾ ಗಾಂಧಿ ಅವರ ಜೊತೆ ಆತ್ಮೀಯವಾಗಿ ಬೆರೆಯಲು ಮುಂದಾಗಿದ್ದಾರೆ. ಈಗಿನ ರಾಜಕೀಯ ಪರಿಸ್ಥಿತಿ ಅವರನ್ನು ದುರ್ಬಲರನ್ನಾಗಿ ಮಾಡಿರುವ ಈ ದಿನಗಳಲ್ಲಿ ಅವರಿಗೆ ಒಂದು ಹುಲ್ಲುಕಡ್ಡಿಯ ಆಶ್ರಯ ಕೂಡ ಅನಿವಾರ್ಯವಾಗಿದೆ”
‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ…
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ…
ಮನುಷ್ಯನಿಗೆ ಅತ್ಯಗತ್ಯವಾಗಿರುವುದು ಆಹಾರ. ಇದಕ್ಕೆ ಕೃಷಿಯೇ ಮೂಲ. ರೈತನ ಪರಿಶ್ರಮದಿಂದ ಜನರು ನೆಮ್ಮದಿಯಿಂದ ಊಟ ಮಾಡಲು ಸಾಧ್ಯವಾಗಿದೆ. ಆಧುನಿಕ ಆವಿಷ್ಕಾರಗಳಿಂದ…
ಟಿ.ಕೆ.ಹರೀಶ್ ತಂತ್ರಜ್ಞಾನ ಬಳಕೆ ಅತಿಯಾದರೆ ಮಕ್ಕಳಲ್ಲಿ ಸಹಾನುಭೂತಿ ಕ್ಷೀಣ ಮಾನವೀಯತೆಯ ಮೂಲ ಮಂತ್ರವೇ ಸೌಹಾರ್ದತೆ. ಇದು ಕೇವಲ ಸಹಬಾಳ್ವೆಯಲ್ಲ, ಬದಲಿಗೆ…
ರೇಣುಕಾ ನಿಡುಗುಂದಿ ಯಾವುದೇ ಒಬ್ಬ ಸರ್ವಾಧಿಕಾರಿ ಅಥವಾ ಭ್ರಷ್ಟ ರಾಜಕಾರಣಿ ಜನರಲ್ಲಿ ತನ್ನ ಬಗ್ಗೆ ಭಯ ಹುಟ್ಟಿಸಿ ಆಡಳಿತ ನಡೆಸುತ್ತಾನೆ.…
ದಿಲೀಪ್ ಎನ್ಕೆ ಊರ ಮಾರಿಹಬ್ಬಗಳಲ್ಲಿ ಕೇರಿಯಾಗಿನ ಕೇರಿಗಳಲ್ಲಿ ಮೊಳಗುವ ಚಿತ್ರಗೀತೆಗಳಂತೆ ಈಗ ದೇಶದ ತುಂಬೆಲ್ಲಾ ಬರೀ ಅವ್ಯವಸ್ಥೆಯ ವಿರುದ್ಧ ಸೆಟೆದು…