ಓ.ಎಲ್.ನಾಗಭೂಷಣ ಸ್ವಾಮಿ, ವಿಮರ್ಶಕರು
ಮೈಸೂರಿನ ಶರಣ ಸಾಹಿತ್ಯ ಪರಿಷತ್ ಘಟಕ ಅಭಿನಂದನೆಗೆ ಅರ್ಹವಾದ ಪ್ರಕಟಣೆಯೊಂದನ್ನು ಹೊರತಂದಿದೆ. “ಇಡೀ ಜಗತ್ತನ್ನು ೨೦೧೯ರಲ್ಲಿ ನಡುಗಿಸಿದ ಕೋವಿಡ್ ಹೆಮ್ಮಾರಿ ಇಲ್ಲಿನ ಚಿಂತನೆಗಳಿಗೆ ಹಿನ್ನೆಲೆಯಾಗಿದೆ” ಎಲ್ಲರೂ ದೂರ ಇರಬೇಕಾದ ಪರಿಸ್ಥಿತಿ ಬಂದಾಗ ಆನ್‌ಲೈನ್ ಪ್ರವಚನಗಳ ಮೂಲಕ ಜನರನ್ನು ಮಾನಸಿಕವಾಗಿ ಒಗ್ಗೂಡಿಸುವ ಪ್ರಯತ್ನ ಇದಾಗಿದೆ. ಅವುಗಳ ಪೈಕಿ ಆಯ್ದ ಐವತ್ತು ಉಪನ್ಯಾಸಗಳನ್ನು ಪ್ರಕಟಿಸುತ್ತಿರುವುದು ಪ್ರಶಂಸನೀಯ” ಎಂದು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಹರಕೆಯ ಮಾತಿನಲ್ಲಿ ಹೇಳಿದ್ದಾರೆ.
ಈ ಪುಸ್ತಕದಲ್ಲಿ ಚರ್ಚೆಗೆ ಒಳಪಟ್ಟಿರುವ ಐವತ್ತು ವಚನಕಾರರೂ “ಅಪ್ರಚಲಿತ ವಚನಕಾರರು” ಎಂದು ಶ್ರೀಗಳವರು ಗುರುತಿಸಿದ್ದಾರೆ. ಈಗ ಲಭ್ಯವಿರುವ ಸುಮಾರು ಇಪ್ಪತ್ತನಾಲ್ಕು ಸಾವಿರ ವಚನಗಳಲ್ಲಿ ನೂರರಷ್ಟನ್ನು ಮತ್ತೆ ಮತ್ತೆ ಉಲ್ಲೇಖಿಸುತ್ತಾ ಮಿಕ್ಕವನ್ನೆಲ್ಲ ಅನಗತ್ಯವೆಂಬಂತೆ ಮರೆತಿರುವುದು, ಅಷ್ಟು ಮಾತ್ರದಿಂದಲೇ ವಚನ ಸಾಹಿತ್ಯದ ಬಗ್ಗೆ ತಮಗೆಲ್ಲವೂ ತಿಳಿದಿದೆ ಎಂಬಂತೆ ನಟಿಸುವ ಮಾತುಗಾರ, ಲೇಖಕರಿಂದ ಆಗಿರುವ ಅನ್ಯಾಯ ಊಹಿಸಲಾಗದಷ್ಟು ದೊಡ್ಡದು.
ನನಗೆ ನೆನಪಿರುವ ಮಟ್ಟಿಗೆ ಎಪ್ಪತ್ತರ ದಶಕದ ಕೊನೆಯ ಭಾಗದಲ್ಲಿ ಮೈಸೂರಿನ ಮ.ನ.ಜವರಯ್ಯನವರು ಮೊದಲ ಬಾರಿಗೆ ತಳಸಮುದಾಯದ ವಚನಕಾರರನ್ನು ಕುರಿತು ಅಧ್ಯಯನ ನಡೆಸಿದರು. ಅಂದಿನಿಂದ ಅಪ್ರಚಲಿತ ವಚನಕಾರರ ಬಗ್ಗೆ ಆಗೀಗ ಅಷ್ಟಿಷ್ಟು ಕಾರ್ಯ ನಡೆಯುತ್ತ ಬಂದಿದೆ. ಬೆಂಗಳೂರಿನ ಶರಣ ಸಾಹಿತ್ಯ ಪರಿಷತ್ ಕೆಲವು ಇಂಥ ಅಪ್ರಚಲಿತ ವಚನಕಾರರ ಬಗ್ಗೆ ಕಿರುಹೊತ್ತಗೆ ಗಳನ್ನೂ ಪ್ರಕಟಿಸಿದೆ. ಹೆಚ್ಚು ಪ್ರಸಿದ್ಧರಲ್ಲದ ಐವತ್ತು ಜನ ವಚನಕಾರರ ಬದುಕು ಮತ್ತು ವಚನಗಳ ವೈಶಿಷ್ಟ್ಯವನ್ನು ಒಂದೇ ಪುಸ್ತಕದಲ್ಲಿ ಸಂಕ್ಷಿಪ್ತವಾಗಿ ಮಾಡಿಕೊಡುತ್ತಿರುವ ಈ ಪ್ರಯತ್ನ ಸ್ವಾಗತಾರ್ಹವಾದದ್ದು.
ಇಲ್ಲಿರುವ ಎಲ್ಲ ಬರಹಗಳೂ ಒಂದು ಮಾದರಿಯನ್ನು ಅನುಸರಿಸಿವೆ. ವಚನಗಳ ಸಾಮಾಜಿಕ ಮುಖ, ಕ್ರಾಂತಿ ಗುಣವನ್ನು ಪ್ರಸ್ತಾಪಿಸಿ ಆನಂತರ ಆಯ್ದ ವಚನಕಾರರ ಬದುಕಿನ ಐತಿಹ್ಯ, ಕಥೆ, ಇತ್ಯಾದಿ ವಿವರಗಳನ್ನು ನೀಡಿ ಆನಂತರ ಆಯಾ ವಚನಕಾರರ ಮುಖ್ಯವಚನಗಳತ್ತ ಓದುಗರ ಗಮನ ಸೆಳೆಯುತ್ತವೆ. ಹಾಗಾಗಿ ಈ ಪುಸ್ತಕಕ್ಕೆ ಪ್ರವೇಶಿಕೆಯ ಗುಣಪ್ರಾಪ್ತವಾಗಿದೆ. ವಿಶ್ವವಿದ್ಯಾಲಯಗಳ ವಿದ್ವಾಂಸರಿಂದ ಆರಂಭಿಸಿ ಸ್ವತಃ ಆಸಕ್ತಿಯಿಂದ ವಚನಾಧ್ಯಯನದಲ್ಲಿ ತೊಡಗಿರುವ ಲೇಖಕರವರೆಗೆ ಇಲ್ಲಿನ ಬರಹಗಾರರ ವೈವಿಧ್ಯ ಎದುರಾಗುತ್ತದೆ. ವಚನಕಾರರಲ್ಲಿ ಇರುವಂಥದೇ ವೈವಿಧ್ಯ ಇಲ್ಲಿನ ಬರಹಗಾರರಲ್ಲೂ ಇದೆ.
ಡಾ.ವೀರಣ್ಣ ದಂಡೆಯವರು ‘ಕಲ್ಯಾಣದ ಶರಣರು’ ಎಂಬ ಲೇಖನದಲ್ಲಿ ಕುತೂಹಲಕರ ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ. ವಚನಕಾರರ ವಿವರ, ಅಂಕಿತಗಳಿಗೂ ವಚನಕಾರರಿಗೂ ಇರುವ ಸಂಬಂಧ ಅರಿವಿಗೆ ಬಂದ ಬಗೆಯನ್ನು ವಿವರಿಸಿದ್ದಾರೆ. ಇದು ಓದುಗರ ಗಮನ ಸೆಳೆಯುತ್ತದೆ. ಗೊರುಚ ಅವರು ಶರಣ ಸಂಸ್ಕೃತಿಯ ಮುಖ್ಯಾಂಶಗಳನ್ನು ಸರಳವಾಗಿ ವಿವರಿಸಿದ್ದಾರೆ. ಎಂ. ಎಸ್.ಆಶಾದೇವಿಯಂಥ ಲೇಖಕರು ಸ್ತ್ರೀವಾದೀ ನೆಲೆ ಯಿಂದ, ರಂಗನಾಥ ಕಂಟನಕುಂಟೆಯವರು ಮಾತಿನ ವಿವಿಧ ಬಗೆಗಳ ನೆಲೆಯಿಂದ ವಚನಕಾರರ ವೈಶಿಷ್ಟ್ಯವನ್ನು ಪರಿಚಯಿಸಿರುವ ರೀತಿ ಗಮನ ಸೆಳೆಯುತ್ತವೆ.
ಇಲ್ಲಿನ ಎಲ್ಲ ಬರಹಗಳೂ ವಚನಯುಗ, ಹನ್ನೆರಡನೆಯ ಶತಮಾನ, ಶರಣರ ಹಿರಿಮೆ ಇಂತಹ, ಎಲ್ಲರೂ ಬಲ್ಲ ಸಂಗತಿಗಳನ್ನೇ ವಿಸ್ತಾರವಾಗಿ ಹೇಳುವುದನ್ನು ಸಂಪಾದಕರು ತಪ್ಪಿಸಿದ್ದಿದ್ದರೆ ಪುಸ್ತಕದ ಗಾತ್ರ ನೂರೈವತ್ತು ಪುಟಗಳಷ್ಟಾದರೂ ಕಡಿಮೆಯಾಗುತ್ತಿತ್ತು. ನಾವು ಅಪ್ರಚಲಿತರೆಂದು ತಪ್ಪಾಗಿ ತಿಳಿದಿರುವ ವಚನಕಾರರು ಎತ್ತುವ ಪ್ರಶ್ನೆಗಳು ಯಾವುವು, ಅವು ಒಟ್ಟು ಶರಣ ಸಮುದಾಯದ ಚಿಂತನೆಗಳಿಗೆ ಹೇಗೆ ಪೂರಕ ಅಥವಾ ಭಿನ್ನ, ನಮ್ಮ ಕಾಲದಲ್ಲಿ ಆ ಪ್ರಶ್ನೆಗಳಿಗೆ ಯಾವ ಮಹತ್ವವಿದೆ, ಯಾವ ಉತ್ತರ ದೊರೆತೀತು ಎಂಬಂಥ ಬೌದ್ಧಿಕ ಸಾಹಸ ಇಂದು ಅಗತ್ಯವಾಗಿದೆ. ಅಂಥ ಕೆಲಸಕ್ಕೆ ಪ್ರಚೋದನೆ ಒದಗಿಸುವಂಥ ಕೃತಿಯೊಂದನ್ನು ಸಂಪಾದಕರು ರೂಪಿಸಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆಗಳು. ಮುಂದೆ ಸಾಗುವ ಜವಾಬ್ದಾರಿ ವಚನಾಸಕ್ತರದು. ಶರಣ ಸಾಹಿತ್ಯ ಪರಿಷತ್ತು ಆ ಕಾರ್ಯಕ್ಕೂ ಗಮನ ನೀಡಲೆಂದು ಹಂಬಲಿಸುತ್ತೇನೆ.
ನಾಳೆ ಶರಣ ದರ್ಶನ ಕೃತಿ ಬಿಡುಗಡೆ
ಮೈಸೂರು: ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಹಾಗೂ ನಗರ ಘಟಕ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಹಾಗೂ ಕನ್ನಡ ಹಾಗೂ ಕನ್ನಡ ಸಾಹಿತ್ಯ ಕಲಾಕೂಟ ಇವುಗಳ ಸಂಯುಕ್ತಾಶ್ರಯದಲ್ಲಿ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ನಾಡೋಜ ಗೊ.ರು.ಚನ್ನಬಸಪ್ಪ ಅವರಿಗೆ ಅಭಿನಂದನೆ ಹಾಗೂ ಮ.ಗು.ಸದಾನಂದಯ್ಯ ಮತ್ತು ಪ್ರೊ.ಎಸ್.ಜಿ.ಶಿವಶಂಕರ್ ಅವರ ಸಂಪಾದಕತ್ವದ ಶರಣ ದರ್ಶನ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಡಿ.೧೮ರಂದು ಬೆಳಿಗ್ಗೆ ೧೧ಕ್ಕೆ ನಗರದ ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಗೊ.ರು.ಚನ್ನಬಸಪ್ಪ ಅವರನ್ನು ಅಭಿನಂದಿಸಲಿದ್ದು, ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಕೃತಿ ಕುರಿತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಜ್ಯೋತಿ ಶಂಕರ್ ಮಾತನಾಡಲಿದ್ದಾರೆ.
ಕೃತಿ ದರದಲ್ಲಿ ಭಾರಿ ರಿಯಾಯಿತಿ
೫೯೨ ಪುಟಗಳಿರುವ ಶರಣ ದರ್ಶನ ಕೃತಿಯ ಮೂಲ ಬೆಲೆ ೭೦೦ ರೂ. ಆಗಿದೆ. ಕಾರ್ಯಕ್ರಮ ನಡೆಯಲಿರುವ ನವಜ್ಯೋತಿ ಸಭಾಂಗಣದ ಆವರಣದಲ್ಲಿ ಕೃತಿಯನ್ನು ಮಾರಾಟ ಮಾಡಲಾಗುವುದು. ಅಲ್ಲಿಯೇ ಖರೀದಿಸಿದರೆ ಕೇವಲ ೨೦೦ ರೂ.ಗಳಿಗೆ ಪುಸ್ತಕವನ್ನು ಮಾರಾಟ ಮಾಡಲಾಗುವುದು ಎಂದು ಕೃತಿಯ ಸಂಪಾದಕ ಮ.ಗು. ಸದಾನಂದಯ್ಯ ತಿಳಿಸಿದ್ದಾರೆ.
ಮಹಾದೇಶ್ ಎಂ ಗೌಡ ಹನೂರು: ತನ್ನ ಜಮೀನಿನಲ್ಲಿ ಬೆಳೆಯಲಾಗಿದ್ದ ಜೋಳದ ಫಸಲು ಕಾಯುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿದ…
ಬೆಂಗಳೂರು: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನೆಲೆಸಿರುವ ಅಕ್ರಮ ವಲಸಿಗರಿಗೆ ಸರ್ಕಾರದ ವತಿಯಿಂದ ಮನೆ ನಿರ್ಮಾಣ ಮಾಡಿಕೊಡಲು ಅವಕಾಶ ಕೊಡುವುದಿಲ್ಲ. ಎಲ್ಲಾ…
ಬೆಂಗಳೂರು: ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿರುವ ನಗರದ ಕೋಗಿಲು ಲೇಔಟ್‍ನಲ್ಲಿ ವಲಸಿಗರು ಅನಧಿಕೃತವಾಗಿ ಮನೆ ನಿರ್ಮಾಣ…
ಬೆಂಗಳೂರು: ಅರಣ್ಯ ಪ್ರದೇಶದ ಹೊರಗೆ ವನ್ಯಜೀವಿಗಳು ಕಂಡ ಕೂಡಲೇ ಈ ಸಂಖ್ಯೆಗೆ ಕರೆ ಮಾಡಿ ಎಂದು ರಾಜ್ಯ ಸರ್ಕಾರ ಸಾರ್ವಜನಿಕರಿಗೆ…
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ 106ನೇ ವಾರ್ಷಿಕ ಘಟಿಕೋತ್ಸವವು ಕ್ರಾಪರ್ಡ್ ಹಾಲ್‌ನಲ್ಲಿ ನೆರವೇರಿತು. ಈ ಬಾರಿಯ ಘಟಿಕೋತ್ಸವದಲ್ಲಿ 30,966 ಅಭ್ಯರ್ಥಿಗಳಿಗೆ ವಿವಿಧ…
ಬೆಂಗಳೂರು: ಬಳ್ಳಾರಿ ಗಲಾಟೆ ಪ್ರಕರಣದಲ್ಲಿ ಕೊಲೆಯಾದ ಕಾಂಗ್ರೆಸ್ ಕಾರ್ಯಕರ್ತನ ಶವ ಪರೀಕ್ಷೆಯನ್ನು ಸರ್ಕಾರ ಎರಡು ಬಾರಿ ಮಾಡಿದ್ದು ಯಾಕೆ ಎಂದು…