ಅಂಕಣಗಳು

ಸೆಲ್ಫಿ ವಿದ್ ಡಾಟರ್’

ಸುನಿಲ್‌ ಜಗ್ಲಾನ್‌ರ ‘ಪಿರಿಯಡ್ ಚಾರ್ಟ್ ಆಂದೋಲನ
ಪಂಜು ಗಂಗೊಳ್ಳಿ

ಹರಿಯಾಣದ 43 ವರ್ಷ ಪ್ರಾಯದ ಸುನಿಲ್ ಜಗ್ಲಾನ್ ಕಾಕತಾಳೀಯ ಎಂಬಂತೆ 2012ರ ‘ರಾಷ್ಟ್ರೀಯ ಹೆಣ್ಣು ಮಗುವಿನ ದಿನ’ದಂದು ಒಂದು ಹೆಣ್ಣು ಮಗುವಿನ ತಂದೆಯಾದರು. ಸಹಜವಾಗಿಯೇ ಆ ದಿನ ಅವರ ಬದುಕಿನ ಅತ್ಯಂತ ಖುಷಿಯ ದಿನವಾಗಿತ್ತು. ಆಸ್ಪತ್ರೆಯಲ್ಲಿ ಮಗುವಿನ ಹೆರಿಗೆಯಾದಾಗ ನರ್ಸ್ ಬಂದು ಸುನಿಲ್ ಜಗ್ಲಾನ್‌ರಿಗೆ ಸುದ್ದಿ ತಿಳಿಸಿದರು. ತಾನು ಅಪ್ಪನಾದ ಖುಷಿಯಲ್ಲಿ ಸುನಿಲ್ ಆ ನರ್ಸ್‌ಗೆ ಕೃತಜ್ಞತೆಯ ಸೂಚಕವಾಗಿ ಒಂದಷ್ಟು ಹಣ ಕೊಟ್ಟರು. ಆದರೆ, ಆ ನರ್ಸ್ ಹಣ ತೆಗೆದುಕೊಳ್ಳಲು ನಿರಾಕರಿಸಿದಳು. ಕಾರಣ ಕೇಳಿದಾಗ ಆಕೆ, ‘ನಿಮಗೆ ಹುಟ್ಟಿರುವುದು ಗಂಡು ಮಗುವಲ್ಲ, ಹೆಣ್ಣು ಮಗು. ನಾನು ಈ ಹಣ ತೆಗೆದುಕೊಂಡರೆ ಡಾಕ್ಟರ್ ಸಿಟ್ಟಾಗುತ್ತಾರೆ’ ಅಂದಳು.

ಪ್ರಥಮ ಬಾರಿ ತಂದೆಯಾದ ಖುಷಿಯಲ್ಲಿದ್ದ ಸುನಿಲ್ ಆ ಬಗ್ಗೆ ಹೆಚ್ಚು ಆಲೋಚಿಸಲಿಲ್ಲ. ಆದರೆ, ಮನೆಗೆ ಹಿಂತಿರುಗಿ ಅಕ್ಕಪಕ್ಕದವರಿಗೆ ಸಿಹಿ ಹಂಚುವಾಗ ಜನರ ಪ್ರತಿಕ್ರಿಯೆ ಅವರನ್ನು ಆಲೋಚಿಸುವಂತೆ ಮಾಡಿತು. ಸುನಿಲ್ ಸಿಹಿ ಹಂಚುವುದನ್ನು ನೋಡಿ ಅವರ ನೆರೆಹೊರೆಯವರು ಸುನಿಲ್‌ಗೆ ಗಂಡು ಮಗುವಾಯಿತು ಎಂದು ಭಾವಿಸಿ, ‘ಓಹ್! ತುಂಬಾ ಸಂತೋಷ ಗಂಡು ಮಗುವಿನ ತಂದೆಯಾದುದಕ್ಕೆ ಅಭಿನಂದನೆಗಳು’ ಎಂದರು. ಸುನಿಲ್ ‘ಗಂಡು ಮಗುವಲ್ಲ, ಹೆಣ್ಣು ಮಗು’ ಅಂದಾಗ ಅವರೆಲ್ಲ, ‘ಓಹ್…ಹೌದಾ! ಇರಲಿ ಬಿಡಿ, ಚಿಂತಿಸಬೇಡಿ, ಮುಂದಿನ ಬಾರಿ ಗಂಡು ಮಗುವಾಗುತ್ತೆ ಅಂತ ಅವರಿಗೆ ಸಮಾಧಾನ ಮಾಡುವ ದನಿಯಲ್ಲಿ ಪ್ರತಿಕ್ರಿಯಿಸಿದರು. ಆಗ ಸುನಿಲ್ ಜಗ್ಲಾನ್‌ಗೆ ಪರಿಸ್ಥಿತಿ ಏನೆಂಬುದು ಸ್ಪಷ್ಟವಾಯಿತು. ಆಗ ಅವರು ಏನು ಮಾಡಿದರು ಗೊತ್ತೇ? ‘ಚಾತಿ’ ಎಂಬುದು ಹರಿಯಾಣದ ಹಳ್ಳಿಗಳಲ್ಲಿ ಗಂಡು ಮಕ್ಕಳ ಜನನವನ್ನು ಸಂಭ್ರಮಿಸಲು ನಡೆಸುವ ಒಂದು ಕಾರ್ಯಕ್ರಮ. ಅವರು ಮತ್ತಷ್ಟು ಸಿಹಿ ಖರೀದಿಸಿ ತಂದು, ಇಡೀ ಒಂದು ತಿಂಗಳು ‘ಚಾತಿ’ ನಡೆಸಿದರು!

ಸುನಿಲ್ ಜಗ್ಲಾನ್ ಆಗ (2010ರಿಂದ 2015ರವರೆಗೆ) ತಮ್ಮ ಬೀಬಿಪುರ ಗ್ರಾಮದ ಸರಪಂಚರಾಗಿದ್ದರು. ಆ ಘಟನೆ ನಡೆದ ಕೆಲವು ದಿನಗಳ ನಂತರ ಅವರು ಗ್ರಾಮದ ಆರೋಗ್ಯ ಕೇಂದ್ರಕ್ಕೆ ಹೋಗಿ ಹರಿಯಾಣದ ಗಂಡು ಹೆಣ್ಣಿನ ಅನುಪಾತ ಪ್ರಮಾಣವನ್ನು ನೋಡಿದರು. ಅದು 1,000 ಗಂಡುಗಳಿಗೆ ಹೆಣ್ಣು ಮಕ್ಕಳ ಸಂಖ್ಯೆ ಕೇವಲ 832 ಆಗಿತ್ತು! ಹರಿಯಾಣ ಅತ್ಯಂತ ಕಡಿಮೆ ಹೆಣ್ಣು-ಗಂಡು ಅನುಪಾತಕ್ಕೆ ಕುಖ್ಯಾತಿ ಪಡೆದ ಉತ್ತರ ಭಾರತದ ರಾಜ್ಯಗಳಲ್ಲಿ ಒಂದು, ಅಂದಿನಿಂದ ಸುನಿಲ್ ಜಗ್ಲಾನ್ ಆ ಸಮಸ್ಯೆಯತ್ತ ಹೆಚ್ಚಿನ ಗಮನ ಹರಿಸಲು ಪ್ರಾರಂಭಿಸಿದರು.

ಬೀಬಿಪುರ ಗ್ರಾಮ ಪಂಚಾಯಿತಿ ಸಂಪೂರ್ಣವಾಗಿ ಪುರುಷರ ಪಾರುಪತ್ಯಕ್ಕೆ ಒಳಗಾಗಿತ್ತು. ಎಷ್ಟೆಂದರೆ, ಗ್ರಾಮ ಪಂಚಾಯಿತಿ ಸಭೆ ನಡೆಯುತ್ತಿದ್ದಾಗ ಮಹಿಳೆಯರು ಹತ್ತಿರದಲ್ಲಿ ಹಾದು ಹೋಗಬೇಕಿದ್ದರೆ ಅವರು ಗುಂಘಟಿನಿಂದ ತಮ್ಮ ಮುಖವನ್ನು ಮುಚ್ಚಿಕೊಳ್ಳಬೇಕಾಗಿತ್ತು. ದಾಖಲೆಗಳಲ್ಲಿ ಪಂಚಾಯಿತಿ ಸಮಿತಿಗಳಲ್ಲಿ ಮಹಿಳೆಯರಿಗೆ ಪುರುಷರಿಗೆ ಸರಿಸಮಾನವಾದ ಪಾಲುದಾರಿಕೆಯಿದ್ದರೂ ವಾಸ್ತವ ಸಂಪೂರ್ಣವಾಗಿ ಭಿನ್ನವಾಗಿತ್ತು. ಆಯ್ಕೆಯಾದ ಮಹಿಳಾ ಸದಸ್ಯೆಯರ ಹೆಸರಲ್ಲಿ ಅವರ ಗಂಡಂದಿರು ಸಮಿತಿ ಸಭೆಗಳಲ್ಲಿ ಭಾಗವಹಿಸುತ್ತಿದ್ದರು. 2012ರಲ್ಲಿ ಸುನಿಲ್ ಜಗ್ಲಾನ್ ಬರೀ ಹೆಂಗಸರು ಮಾತ್ರವೇ ಇದ್ದ ಒಂದು ‘ಗ್ರಾಮ ಸಭಾ ಪಂಚಾಯಿತಿ’ಯನ್ನು ನಡೆಸಿದರು. ಅದು ಭಾರತದ ಪ್ರಪ್ರಥಮ ಮಹಿಳಾ ಗ್ರಾಮ ಸಭಾ ಪಂಚಾಯಿತಿ ಆಗಿತ್ತು. ಈಗ ಬೀಬಿಪುರದಲ್ಲಿ ನಡೆಯುವ ಗ್ರಾಮ ಪಂಚಾಯಿತಿ ಸಭೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಸಾಮಾನ್ಯವೆಂಬಂತಾಗಿದೆ. ಅದೇ ವರ್ಷ ಸುನಿಲ್ ಜಗ್ಲಾನ್ ಒಂದು ‘ಖಾಪ್ ಪಂಚಾಯಿತಿ’ ನಡೆಸಿದರು. ಆ ಖಾಪ್ ಪಂಚಾಯಿತಿಯಲ್ಲಿ ಪುರುಷರ ಜೊತೆಯಲ್ಲಿಸುಮಾರು2,000 ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು. ಖಾಪ್ ಪಂಚಾಯಿತಿಯಲ್ಲಿ ಸಾಮಾನ್ಯವಾಗಿ ಪುರುಷರು ಮಾತ್ರವೇ ಭಾಗವಹಿಸುವುದು ಸಂಪ್ರದಾಯ.

ಹರಿಯಾಣವೂ ಸೇರಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಅನಧಿಕೃತ ಭ್ರೂಣ ಲಿಂಗ ಪತ್ತೆ ಕೇಂದ್ರಗಳಿದ್ದು, ಅಲ್ಲಿ ಭ್ರೂಣಗಳ ಲಿಂಗ ಪತ್ತೆ ಮಾಡಿ ಹೆಣ್ಣು ಅಂತ ಗೊತ್ತಾದರೆ ಗರ್ಭದಲ್ಲೇ ಶಿಶುಗಳ ಹತ್ಯೆ ಮಾಡುತ್ತಾರೆ. ಹಾಗೆ ಹತ್ಯೆ ನಡೆಸಲು ಆಗದಿದ್ದರೆ ಅಥವಾ ಗರ್ಭಪಾತ ನಡೆಸಲು ಅಸಾಧ್ಯವಾದರೆ, ಬಸುರಿಯರನ್ನು ಉಪವಾಸ ಬೀಳಿಸಿ ಹೆಣ್ಣು ಭ್ರೂಣಗಳನ್ನು ಹತ್ಯೆ ಮಾಡುವ ಹೇಯ ಕಾರ್ಯಗಳೂ ನಡೆಯುತ್ತವೆ. ಇದನ್ನು ತಡೆಯಲು ಸುನಿಲ್ ಜಗ್ಲಾನ್ ‘ನಿಗ್ರಾಣಿ ರಕ್ಷಾ’ ಎಂಬ ಒಂದು ವಿನೂತನ ಆದರೆ ಅತ್ಯಂತ ಸರಳವಾದ ಕಾರ್ಯಕ್ರಮವನ್ನು ರೂಪಿಸಿದರು. ಬೀಬಿಪುರದಲ್ಲಿ ಎರಡನೇ, ಮೂರನೇ ಅಥವಾ ನಾಲ್ಕನೇ ಬಾರಿ ಬಸುರಾದ ಸ್ತ್ರೀಯರ ಪಟ್ಟಿ ಮಾಡಿ, ಗ್ರಾಮ ಪಂಚಾಯಿತಿ ಮೂಲಕ ಪ್ರತಿಯೊಬ್ಬ ಬಸುರಿಯರಿಗೂ ಇಬ್ಬರು ಸ್ಥಳೀಯ ಮಹಿಳೆಯರನ್ನು ‘ಕಾವಲುಗಾರ’ರನ್ನಾಗಿ ನೇಮಿಸಿದರು. ಈ ಕಾವಲುಗಾರ ಮಹಿಳೆಯರು ಹೆರಿಗೆಯಾಗುವತನಕವೂ ಆಬಸುರಿ ಹೆಂಗಸರ ಚಲನವಲನದ ಮೇಲೆ ನಿರಂತರವಾಗಿ ನಿಗಾ ಇಡುವ ಮೂಲಕ ಆ ಬಸುರಿಯರನ್ನು ಭ್ರೂಣ ಪತ್ತೆ ಪರೀಕ್ಷೆಗೆ ಒಳಪಡಿಸುವವರಲ್ಲಿ ಭಯ ಹುಟ್ಟುವಂತೆ ಮಾಡಿದರು. ಅದೇ ಸಮಯದಲ್ಲಿ ಪೊಲೀಸ್ ಮತ್ತು ಸರ್ಕಾರಿ ವ್ಯವಸ್ಥೆಯ ಸಹಾಯದಿಂದ, ಜಿಂದ್ ಜಿಲ್ಲೆಯಲ್ಲಿ ಹುಟ್ಟಿಕೊಂಡಿದ್ದ ಅನೇಕ ಅನಧಿಕೃತ ಭ್ರೂಣ ಲಿಂಗ ಪತ್ತೆ ಕೇಂದ್ರಗಳನ್ನು ಬಂದ್ ಮಾಡಿಸಿದರು. ಬೀಬಿಪುರ ಗ್ರಾಮದ ಯಾವುದೇ ಮನೆಯಲ್ಲಿ ಹೆಣ್ಣು ಮಗುವಿನ ಜನನವಾದಾಗ ಸ್ವತಃ ಸುನಿಲ್ ಜಗ್ಲಾನ್ ಮನೆಗಳಿಗೆ ಹೋಗಿ, ಸಿಹಿ ಹಂಚಿ ‘ಜಾತಿ’ ನಡೆಸಲು ಪ್ರಾರಂಭಿಸಿದರು.

ಹೆಣ್ಣಿನ ಮುಟ್ಟು ಎಂಬನೈಸರ್ಗಿಕ ಪ್ರಕ್ರಿಯೆ ಇಪ್ಪತ್ತೊಂದನೇಶತಮಾನದಲ್ಲೂ ಸಮಾಜದಲ್ಲಿ ಮುಕ್ತವಾಗಿ ಮಾತಾಡುವ ವಿಚಾರವಾಗಿಲ್ಲ. ಹಳ್ಳಿಗಳಲಂತೂ ಮುಟ್ಟು ಎಂಬುದು ನಿಷಿದ್ಧಾರ್ಥಕ ರೂಪ ಪಡೆದಿದೆ. ಮುಟ್ಟಾದ ಹೆಣ್ಣನ್ನು ಕೊಳಕಳು, ಅಮಂಗಳೆ, ಅಪಶಕುನಿ ಎಂಬಂತೆ ನೋಡಲಾಗುತ್ತದೆ. ಕೆಲವು ಹಳ್ಳಿಗಳಲ್ಲಿ ಮುಟ್ಟಾದ ಮಹಿಳೆಯರ ವಾಸಕ್ಕಾಗಿ ಊರ ಹೊರಗೆ ಪ್ರತ್ಯೇಕ ಗುಡಿಸಲುಗಳನ್ನು ಕಟ್ಟುವ ಪರಿಪಾಟವಿದೆ. ಸುನಿಲ್ ಜಗ್ಲಾನ್ 2020ರಲ್ಲಿ ‘ಪೀರಿಯಡ್ಸ್ ಚಾರ್ಟ್ ಆಂದೋಲನ’ ಎಂಬ ಒಂದು ಕಾರ್ಯಕ್ರಮವನ್ನು ಶುರು ಮಾಡಿದರು. ಆ ಕಾರ್ಯಕ್ರಮದಡಿ ಬೀಬಿಪುರದ ಮನೆಗಳಿಗೆ ಸಾವಿರಾರು ಕ್ಯಾಲೆಂಡ‌ಗಳನ್ನು ಹಂಚಿ, ಅದರಲ್ಲಿ ಮನೆಯ ಹೆಂಗಸರು ತಮ್ಮ ಮುಟ್ಟಿನ ದಿನಾಂಕಗಳನ್ನು ಕೆಂಪು ಬಣ್ಣದ ವೃತ್ತಗಳಲ್ಲಿ ಗುರುತಿಸಲು ಪ್ರೇರೇಪಿಸಿದರು. ಇಂದು ಈ ಕಾರ್ಯಕ್ರಮ ಹರಿಯಾಣದ 40 ಸಾವಿರ ಹಳ್ಳಿಗಳಲ್ಲಿ ಜಾರಿಗೆ ಬಂದು ಅಲ್ಲಿನ ಯಾವುದೇ ಮನೆಯಲ್ಲಿ ನೋಡಿದರೂ ಗೋಡೆಗಳ ಮೇಲೆ ಕೆಂಪು ಬಣ್ಣದ ವೃತ್ತಗಳಿರುವ ಕ್ಯಾಲೆಂಡರುಗಳನ್ನು ತೂಗು ಹಾಕಿರುವುದನ್ನು ನೋಡಬಹುದು. ಹೀಗೆ ಮುಟ್ಟಿನ ದಿನಗಳನ್ನು ಮನೆಯ ಎಲ್ಲ ಸದಸ್ಯರಿಗೂ ತಿಳಿಯುವಂತೆ ಮಾಡುವುದರಿಂದ ಮುಟ್ಟಿನ ಬಗೆಗಿರುವ ಅನಗತ್ಯ ಮಡಿವಂತಿಕೆ, ಮುಜುಗರ ಕಡಿಮೆಯಾಗುತ್ತದಲ್ಲದೆ, ಮಹಿಳೆಯರಿಗೆ ತಮ್ಮ ಮುಟ್ಟಿನ ದಿನಗಳಲ್ಲಿನ ಏರಿಳಿತಗಳನ್ನು ಪತ್ತೆ ಹಚ್ಚಿ, ಸೂಕ್ತ ವೈದ್ಯಕೀಯ ಕ್ರಮ ಕೈಗೊಳ್ಳಲೂ ಸಹಾಯವಾಗುತ್ತದೆ.

ಸುನಿಲ್ ಜಗ್ಲಾನ್ ಈಗ ನಂದಿನಿ ಮತ್ತು ಯಶಿಕಾ ಎಂಬ ಇಬ್ಬರು ಹೆಣ್ಣು ಮಕ್ಕಳ ಹೆಮ್ಮೆಯ ತಂದೆ. 2011ರಲ್ಲಿ ಹರಿಯಾಣದಲ್ಲಿ 1,000ಕ್ಕೆ 832 ಇದ್ದ ಗಂಡು ಹೆಣ್ಣಿನ ಸಂಖ್ಯಾ ಅನುಪಾತ ಈಗ 1,000ಕ್ಕೆ 916 ಆಗಿದೆ. 2015ರಲ್ಲಿ ‘ಸೆಲ್ಸಿವಿದ್ ಡಾಟರ್’ ಎಂಬ ಒಂದು ಆಂದೋಲನ ಡಿಜಿಟಲ್ ಮಾಧ್ಯಮದಲ್ಲಿ ಬಹಳ ವೈರಲ್ ಆದುದು ಹೆಚ್ಚಿನವರಿಗೆ ನೆನಪಿರಬಹುದು. ಅದನ್ನು ಪ್ರಾರಂಭಿಸಿದವರು ಇದೇ ಸುನಿಲ್ ಜಗ್ಲಾನ್.

ಹರಿಯಾಣವೂ ಸೇರಿ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಅನಧಿಕೃತ ಭ್ರೂಣ ಲಿಂಗ ಪತ್ತೆ ಕೇಂದ್ರಗಳಿದ್ದು, ಅಲ್ಲಿ ಭ್ರೂಣಗಳ ಲಿಂಗ ಪತ್ತೆ ಮಾಡಿಹೆಣ್ಣು ಅಂತ ಗೊತ್ತಾದರೆ ಗರ್ಭದಲ್ಲೇ ಶಿಶುಗಳ ಮಾಡುತ್ತಾರೆ. ಹಾಗೆ ಹತ್ಯೆ ನಡೆಸಲು ಆಗದಿದ್ದರೆ ಅಥವಾ ಗರ್ಭಪಾತ ನಡೆಸಲು ಅಸಾಧ್ಯವಾದರೆ, ಬಸುರಿಯರನ್ನು ಉಪವಾಸ ಬೀಳಿಸಿ ಹೆಣ್ಣು ಭ್ರೂಣಗಳನ್ನು ಹತ್ಯೆ ಮಾಡುವ ಹೇಯ ಕಾರ್ಯಗಳೂ ನಡೆಯುತ್ತವೆ. ಇದನ್ನು ತಡೆಯಲು ಸುನಿಲ್ ಜಗ್ಲಾನ್ ‘ನಿಗ್ರಾಣಿ ರಕ್ನಾʼ ಎಂಬ ಒಂದು ವಿನೂತನ ಆದರೆ ಅತ್ಯಂತ ಸರಳವಾದ ಕಾರ್ಯಕ್ರಮವನ್ನು ರೂಪಿಸಿದರು.

ಆಂದೋಲನ ಡೆಸ್ಕ್

Recent Posts

ವೈಜ್ಞಾನಿಕ ಕಸ ವಿಲೇವಾರಿಗೆ ಜಾಗದ ಸಮಸ್ಯೆ

ರಸ್ತೆ ಬದಿಯೇ ಕಸದ ವಾಹನ ನಿಲುಗಡೆಗೊಳಿಸಬೇಕಾದ ಪರಿಸ್ಥಿತಿ; ದುರ್ವಾಸನೆಯಿಂದ ಸಾರ್ವಜನಿಕರಿಕೆ ಕಿರಿಕಿರಿ ಕೃಷ್ಣ ಸಿದ್ದಾಪುರ ಸಿದ್ದಾಪುರ: ಪಟ್ಟಣದಲ್ಲಿ ಕಸ ವಿಲೇವಾರಿ…

9 mins ago

ಹೈಟೆಕ್‌ ಬಸ್‌ ನಿಲ್ದಾಣದಲ್ಲಿ ಹಲವು ಸಮಸ್ಯೆಗಳು

ಭೇರ್ಯ: ಸಂಜೆ ನಂತರ ನಿಲ್ದಾಣದೊಳಗೆ ಬಾರದ ಬಸ್‌ಗಳು; ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ ಇಲ್ಲ ಭೇರ್ಯ ಮಹೇಶ್ ಭೇರ್ಯ: ಗ್ರಾಮದ…

34 mins ago

ಮರ ಕಡಿಯದೆಯೇ ಕಾಗದ ತಯಾರಿಸುವ ಪೇಪರ್‌ ಪವಾರ್‌

ಕೀರ್ತಿ ಇದನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಚಹ ಮಾಡಿದ ನಂತರ ಉಳಿದ ಜೊಗಟು, ಈರುಳ್ಳಿ ಸಿಪ್ಪೆ, ಚಿಂದಿ ಬಟ್ಟೆ, ಹರಿದ…

58 mins ago

ಲಿಫ್ಟ್‌ನಲ್ಲಿ ಸಿಲುಕಿಕೊಂಡ ಕನ್ನಡದ ಲೇಖಕಿ

ಅಮೆರಿಕದ ಸಿಯಾಟಲ್‌ನಲ್ಲಿ ಮಗನಿಗೆ ಹೊಸ ಕೆಲಸ ಸಿಕ್ಕಿತ್ತು. ಮನೆ ಮಾಡಿದ. ಅಲ್ಲಿ ಮನೆ ಶಿಫ್ಟ್ ಮಾಡುವುದೆಂದರೆ ನಾವೇ ಸಕಲವೂ ಆಗಿರುವುದರಿಂದ…

1 hour ago

ಹಳೆಯ ಪುಸ್ತಕಗಳ ನಡುವೆ ನಗುವ ಆನಂದರಾಯರು

ಮುಂಚೆ ಕಾಲವೊಂದಿತ್ತು. ಸಮಯ ಕಳೆಯಲು ಎಲ್ಲರೂ ಪುಸ್ತಕದ ಮೊರೆ ಹೋಗು ತ್ತಿದ್ದರು. ಮನೆ ಹತ್ತಿರದ ಪುಸ್ತಕ ದಂಗಡಿ, ಗ್ರಂಥಾಲಯ, ಸ್ನೇಹಿತರ…

1 hour ago

ಓದುಗರ ಪತ್ರ | ರೇಣುಕಾ ಇತರರಿಗೆ ಮಾದರಿ

ತೃತೀಯ ಲಿಂಗಿಯೊಬ್ಬರು ವಿಜಯನಗರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯಕ್ಕೆ ಕನ್ನಡ ಸಹಾಯಕ ಪ್ರಾಧ್ಯಾಪಕಿ ಯಾಗಿ ಆಯ್ಕೆಯಾಗಿರುವುದು ರಾಜ್ಯದ ಇತಿಹಾಸ ದಲ್ಲೇ ಮೊದಲಾಗಿದ್ದು,…

3 hours ago