ಅಂಕಣಗಳು

2028ಕ್ಕೆ ಬೇಳೆಕಾಳುಗಳಲ್ಲಿ ಸ್ವಾವಲಂಬನೆ ಸಾಧ್ಯವೆ?

• ಪ್ರೊ.ಆರ್.ಎಂ.ಚಿಂತಾಮಣಿ

ಕೇಂದ್ರ ಗೃಹಮಂತ್ರಿ ಮತ್ತು ಸಹಕಾರ ಸಚಿವ ಅಮಿತ್ ಶಾ ಇತ್ತೀಚೆಗೆ ತೊಗರಿ ಕಾಪು ದಾಸ್ತಾನಿಗಾಗಿ ರೈತರಿಂದ ನೇರವಾಗಿ ಬೆಂಬಲ ಬೆಲೆಯಲ್ಲಿ ಅಥವಾ ಪೇಟೆ ಬೆಲೆಯಲ್ಲಿ (ಯಾವುದು ಹೆಚ್ಚ ಅದರಲ್ಲಿ) ತೊಗರಿ ಖರೀದಿಸುವ ಪೋರ್ಟಲ್ ಆರಂಭಿಸುವ ಮೂಲಕ ‘ಜನವರಿ 1, 2028ರಿಂದ ಒಂದು ಕಿಲೋ ಗ್ರಾಂ ಬೇಳೆಕಾಳುಗಳನ್ನೂ ಆಮದು ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ. ಅಂದರೆ ಅಂದಿನಿಂದ ದೇಶದಲ್ಲಿಯ ಬೇಳೆಕಾಳು ಬೇಡಿಕೆಯನ್ನು ಸ್ಥಳೀಯ ಉತ್ಪಾದನೆಯಿಂದಲೇ ಪೂರೈಸಲಾಗುವುದು ಎಂದರ್ಥವಲ್ಲವೆ? ಈ ನಾಲ್ಕು ವರ್ಷಗಳಲ್ಲಿ ಇದು ಸಾಧ್ಯವಾದೀತೆ? ಸರ್ಕಾರ ಮತ್ತು ರೈತರಿಗೆ ಇದೊಂದು ಸವಾಲೇ ಸರಿ. ಇದನ್ನು ಅವಕಾಶವಾಗಿ ಪರಿವರ್ತಿಸಿಕೊಂಡು ಗೆಲ್ಲಲು ಕೃಷಿ ತಜ್ಞರು ಸೇರಿ ಎಲ್ಲರೂ ಹೊಸ ತಂತ್ರಗಳನ್ನು ಹುಡುಕಬೇಕಾಗುತ್ತದೆ.

ಜನಜೀವನಕ್ಕೆ ಅತ್ಯವಶ್ಯವಾಗಿರುವ ಬೇಳೆಕಾಳುಗಳು ಸೇರಿದಂತೆ ಆಹಾರ ಧಾನ್ಯಗಳು ಮತ್ತು ಎಣ್ಣೆ ಕಾಳುಗಳ ಪೂರೈಕೆಯು ಯಾವಾಗಲೂ ಬೆಲೆಗಳು ಮತ್ತು ಆಮದುಗಳ ಸುಳಿಗಳಲ್ಲಿ ಸಿಲುಕಿರುತ್ತದೆ. ಪೂರೈಕೆಯಲ್ಲಿ ಕೊರತೆಯಾದರೆ ಬೆಲೆಗಳು ವಿಪರೀತ ಹೆಚ್ಚಾಗಿ ಉಪಭೋಗಕರಿಗೆ ತೊಂದರೆಯಾಗಿ ಹಾಹಾಕಾರವೇಳುತ್ತದೆ. ಇದನ್ನು ಸರಿಪಡಿಸಲು ಆಮದು ಹೆಚ್ಚಿಸಿದರೆ ವಿದೇಶಿ ಉತ್ಪನ್ನಗಳು ಪೇಟೆಯಲ್ಲಿ ಹೆಚ್ಚಾಗಿ ಬೆಲೆಗಳು ಕುಸಿಯುತ್ತವೆ. ಆಗ ನಮ್ಮ ರೈತರಿಗೆ ಲಾಭದಾಯಕ ಬೆಲೆಗಳು ಸಿಗದೇ ತೊಂದರೆಯಾಗುತ್ತದೆ. ದೇಶದ ಬೆನ್ನೆಲುಬಾಗಿರುವ ಅನ್ನದಾತರ ಹಿತ ಕಾಪಾಡಬೇಕಾದುದು ಸರ್ಕಾರ ಮತ್ತು ಸಮಾಜದ ಕರ್ತವ್ಯ.

ಇದಕ್ಕೆಲ್ಲ ಪರಿಹಾರವಾಗಿ ಸರ್ಕಾರ ದಶಕಗಳಿಂದ ತನ್ನ ಗೊಡೌನುಗಳಲ್ಲಿ ಮುಖ್ಯ ಆಹಾರ ಧಾನ್ಯಗಳ ಕಾಪು ದಾಸ್ತಾನು (Buffer Stock) ಸಂಗ್ರಹಿಸಿಟ್ಟಿರುತ್ತದೆ. ಕೊರತೆ ಕಂಡುಬಂದಾಗ ಇಲ್ಲಿಂದ ಪೇಟೆಗೆ ಬಿಡುಗಡೆ ಮಾಡಿ ಬೆಲೆಗಳನ್ನು ಸ್ಥಿರೀಕರಿಸುತ್ತದೆ. ಸುಗ್ಗಿ ಕಾಲದಲ್ಲಿ ಪೂರೈಕೆ ಹೆಚ್ಚಿದ್ದಾಗ ಹೆಚ್ಚಿನ ಬೆಂಬಲ ಬೆಲೆಯಲ್ಲಿ ರೈತರಿಂದ ನೇರವಾಗಿ ಖರೀದಿ ಮಾಡಿ ದಾಸ್ತಾನು ಹೆಚ್ಚಿಸಿಕೊಳ್ಳುತ್ತದೆ. ಈಗ ಬೇಳೆಕಾಳುಗಳು ಮತ್ತು ಎಣ್ಣೆ ಕಾಳುಗಳಿಗೂ ಈ ದಾಸ್ತಾನು ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತಿದೆ. ಇದರ ಭಾಗವಾಗಿಯೇ ತೊಗರಿ ಖರೀದಿ ಪೋರ್ಟಲ್ ಆರಂಭವಾಗಿದೆ. ಶಾಶ್ವತ ಪರಿಹಾರಕ್ಕೆ ಇದಿಷ್ಟೇ ಸಾಲದು. ಎಲ್ಲ ದಿಕ್ಕಿನಲ್ಲೂ ಬೆಳವಣಿಗೆಗಳಾಗಿ ನಾವು ಸ್ವಾವಲಂಬಿಗಳಾಗಬೇಕು. ನಮ್ಮ ನೀತಿ ಆಯೋಗವು ತನ್ನ ಸಂಶೋಧನೆಗಳ ಆಧಾರದ ಮೇಲೆ ಬೇಳೆಕಾಳುಗಳ ಬೇಡಿಕೆ ಮತ್ತು ಪೂರೈಕೆಯ ಮುನ್ನೋಟ ಪ್ರಕಟಿಸಿದೆ. ಮುನ್ನೋಟದ ವಿವರಗಳನ್ನು ಇಲ್ಲಿಯ ಸಂಖ್ಯಾ ಪಟ್ಟಿಯಲ್ಲಿ ಕೊಡಲಾಗಿದೆ. ಈ ಅಂದಾಜುಗಳಂತೆ 2021-22ರಲ್ಲಿ 26.72 ಮಿ.ಟನ್ ಇದ್ದ ಬೇಡಿಕೆಯು 2032-33ರಲ್ಲಿ 35.24 ಮಿ. ಟನ್‌ಗೆ ಏರಲಿದೆ. ಅದೇ ರೀತಿಯಲ್ಲಿ ಉತ್ಪಾದನೆ ಹೆಚ್ಚಿದರೂ (24.35 ಮಿ. ಟನ್‌ನಿಂದ 33.95 ಮಿ. ಟನ್‌ಗಳಿಗೆ) ಕೊರತೆ ಎರಡೂ ಕಾಲು ಮಿ. ಟನ್‌ಗಿಂತ ಮೇಲೆಯೇ ಮುಂದುವರಿಯುತ್ತದೆ. ಅಂದರೆ ಅಷ್ಟು ಆಮದು ಮಾಡಿಕೊಳ್ಳಲೇಬೇಕಾಗುತ್ತದೆ.

ಆಹಾರದಲ್ಲಿ ಬೇಳೆಕಾಳುಗಳ ಮಹತ್ವ: ತೊಗರಿ ಮತ್ತು ಕಡಲೆಗಳಲ್ಲದೆ ಹೆಸರು, ಅಲಸಂದೆ, ಉದ್ದು, ಹುರುಳಿ, ಅವರ ಮುಂತಾದ ಎಲ್ಲ ಬೇಳೆಕಾಳುಗಳಲ್ಲಿಯೂ ಇತರ ಪೋಷಕಾಂಶಗಳೊಡನೆ ಪ್ರೊಟೀನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆಹಾರ ತಜ್ಞರ ಪ್ರಕಾರ ಭಾರತದ ಪರಿಸರದಲ್ಲಿ ಪತ್ರಿಯೊಬ್ಬ ಆರೋಗ್ಯವಂತ ಮನುಷ್ಯನಿಗೂ ಪ್ರತಿ ದಿನ 450 ಗ್ರಾಂ ಪ್ರೊಟೀನ್ ಬೇಕಾಗುತ್ತದೆ. ಆದರೆ ಹಿರಿಯ ಆರ್ಥಿಕ ಸಂಶೋಧಕ ಮತ್ತು ಮುಂಬೈಯ ಇಂದಿರಾ ಗಾಂಧಿ ಅಭಿವೃದ್ಧಿ ಸಂಶೋಧನಾ ಸಂಸ್ಥೆಯ ಮಾಜಿ ಕುಲಪತಿ ಎಸ್. ಮಹೇಂದ್ರ ದೇವ ಪ್ರಕಾರ ಈಗ ಭಾರತದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ದಿನ ಸರಾಸರಿ 195 ಗ್ರಾಂ ಮತ್ತು ನಗರ ಪ್ರದೇಶಗಳಲ್ಲಿ 250 ಗ್ರಾಂ ಪ್ರೊಟೀನ್ ಮಾತ್ರ ಲಭ್ಯವಾಗುತ್ತಿದೆ. ಅಂದರೆ ನಮ್ಮಲ್ಲಿ ಬಹಳ ಜನ (ವಿಶೇಷವಾಗಿ ಹಳ್ಳಿಗಳಲ್ಲಿ) ಪ್ರೊಟೀನ್ ಕೊರತೆಯಿಂದ ಬಳಲುತ್ತಿದ್ದಾರೆ. ಇದನ್ನು ಸರಿಪಡಿಸಲು ಕೈಗೆಟಕುವ ಬೆಲೆಗಳಲ್ಲಿ ಎಲ್ಲ ಬೇಳೆಕಾಳುಗಳೂ ಎಲ್ಲರಿಗೂ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕಾಗುತ್ತದೆ.

ಆಹಾರ ಭದ್ರತೆ ಕಾಯ್ದೆಯಡಿ ಸಾರ್ವಜನಿಕ ವಿತರಣಾ ಪ್ರಣಾಳಿಕೆಯ ಮೂಲಕ ಮತ್ತು ಪ್ರಧಾನಿಯವರ ಗರೀಬ್‌ ಕಲ್ಯಾಣ ಅನ್ನ ಯೋಜನೆಯಡಿ (83 ಕೋಟಿ ಜನರಿಗೆ) ವಿತರಿಸಲಾಗುವ ಆಹಾರ ಧಾನ್ಯಗಳೊಡನೆ ಬೇಳೆ ಕಾಳುಗಳನ್ನೂ ಸಣ್ಣ ಪ್ರಮಾಣದಲ್ಲಿಯಾದರೂ ವಿತರಿಸಬೇಕು. ಅದರಲ್ಲಿಯೂ ಹಳ್ಳಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿತರಣೆ ಮಾಡಬೇಕಾಗುತ್ತದೆ. ಇದಕ್ಕಾಗಿ ಪೇಟೆಯಿಂದ ಖರೀದಿ ಮಾಡಿದರೂ ಚಿಂತೆ ಇಲ್ಲ. ಇದರಿಂದ ಸಮರ್ಥ ಸದೃಢ ಮಾನವ ಸಂಪನ್ಮೂಲಗಳನ್ನು ಬಲಪಡಿಸಿದಂತಾಗುತ್ತದೆ.

ನಮ್ಮ ಆಹಾರ ಉತ್ಪನ್ನಗಳ ವಿಷಯದಲ್ಲಿ ಒಂದಿಷ್ಟು ಇತಿಹಾಸವನ್ನು ಇಲ್ಲಿ ಹೇಳಲೇಬೇಕು. ನಮ್ಮ ಹಿಂದಿನ ಸಮಸ್ಯೆಗಳು ಮತ್ತು ಸಾಧನೆಗಳನ್ನು ಇಂದಿನವರು ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಸ್ವತಂತ್ರ ಭಾರತದ ಮೊದಲ ಅರ್ಥ ಮಂತ್ರಿ ಷಣ್ಮುಗಂ ಚೆಟ್ಟಿಯವರು ತಮ್ಮ ಮೊದಲ ಬಜೆಟ್‌ ಅನ್ನು ನವೆಂಬರ್ 1947ರಲ್ಲಿ ಸಂಸತ್ತಿನಲ್ಲಿ ಮಂಡಿಸುತ್ತ ‘ನಾವು ಕೈಗಾರಿಕಾ ರಂಗದಲ್ಲಿ ತಕ್ಕಮಟ್ಟಿಗೆ ಸುಸ್ಥಿತಿಯಲ್ಲಿದ್ದೇವೆ. ಆದರೆ ಫಲವತ್ತಾದ ಮತ್ತು ಅಭಿವೃದ್ಧಿಪಡಿಸಲ್ಪಟ್ಟ ಕೃಷಿ ಭೂಮಿಯ ಬಹುಭಾಗ ಪಾಕಿಸ್ತಾನಕ್ಕೆ ಹೋಗಿರುವುದರಿಂದ ಕೃಷಿ ರಂಗದಲ್ಲಿ ಸ್ವಲ್ಪ ಸಮಸ್ಯೆಗಳಿವೆ. ಅವುಗಳನ್ನೆಲ್ಲ ಸಮರ್ಥವಾಗಿ ನಿಭಾಯಿಸಿ ಅಭಿವೃದ್ಧಿ ಹೊಂದುವ ಶಕ್ತಿ ನಮ್ಮ ದೇಶಕ್ಕೆ ಮತ್ತು ಸರ್ಕಾರಕ್ಕೆ ಇದೆ’ ಎಂದು ಅರ್ಥಪೂರ್ಣವಾಗಿ ಹೇಳಿದ್ದರು.

ಇದೇ ಕಾರಣದಿಂದ 1950ರ ದಶಕದಲ್ಲಿ ಬೇಳೆಕಾಳುಗಳೂ ಸೇರಿ ಐದಾರು ಮಿಲಿಯನ್ ಟನ್ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳಬೇಕಾಗಿತ್ತು. ಅಂದಿನ ಸರ್ಕಾರಗಳ ಅಭಿವೃದ್ಧಿ ನೀತಿಗಳಿಂದ 1960ರ ದಶಕದ ಕೊನೆಯಲ್ಲಿ ಆಹಾರದಲ್ಲಿ ಸ್ವಾವಲಂಬಿಗಳಾದೆವು. ಆದರೂ ಸ್ವಲ್ಪ ಪ್ರಮಾಣದಲ್ಲಿ ಬೇಳೆಕಾಳುಗಳ ಆಮದು ಅನಿವಾರ್ಯವಾಯಿತು. ನಂತರದ ಸರ್ಕಾರಗಳು ಹಲವು ಯೋಜನೆಗಳ ಮೂಲಕ ಬೇಳೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುತ್ತಿವೆಯಾದರೂ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಬೇಡಿಕೆ ಇನ್ನೂ ಹೆಚ್ಚಾಗುತ್ತಿದೆ. ಈ ಸರ್ಕಾರದಲ್ಲಿಯೂ ಆಮದು ಅನಿವಾರ್ಯವಾಗಿದೆ. ವರದಿಗಳಲ್ಲಿ ಈ ಸರ್ಕಾರ ನೇಮಿಸಿದ್ದ ಅರವಿಂದ ಸುಬ್ರಮಣ್ಯಂ ಸಮಿತಿಯ ವರದಿಯೂ ಒಂದಾಗಿದೆ. ಅದರ ವರದಿ ಪೂರ್ಣ ಅನುಷ್ಠಾನಗೊಳ್ಳಬೇಕು.

ಮಾಡಬೇಕಾದುದೇನು?: ದೇಶದಲ್ಲಿ ನೀರಾವರಿ ಭೂಮಿ ಹೆಚ್ಚಾಗುತ್ತಿದ್ದರೂ ಬೇಳೆಕಾಳುಗಳನ್ನು ಮಳೆ ಆಶ್ರಯದಲ್ಲೇ ಬೆಳೆಯಲಾಗುತ್ತಿದೆ. ನಮ್ಮ ರೈತರು ಕಬ್ಬು, ಅರಿಶಿನ ಮುಂತಾದ ಹಣದ ಬೆಳೆಗಳನ್ನು ಬೆಳೆಯುವ ಬದಲು ಬೆಂಬಲ ಬೆಲೆ ಮತ್ತು ಖರೀದಿಯ ಖಾತ್ರಿ ಇರುವುದರಿಂದ ಬೇಳೆ ಕಾಳುಗಳನ್ನು ನೀರಾವರಿ ಭೂಮಿಯಲ್ಲಿ ಹೆಚ್ಚಾಗಿ ಬೆಳೆಯಬೇಕು. ಅಂದರೆ ಇಳುವರಿ ಹೆಚ್ಚಾಗುತ್ತದೆ.

ಮಾಯನ್ಮಾರ್ ದೇಶದಲ್ಲಿಯ ಇಳುವರಿಗಿಂತ ನಮ್ಮಲ್ಲಿಯ ಇಳುವರಿ ತೀರ ಕಡಿಮೆ ಇದೆ. ಇದನ್ನು ಹೆಚ್ಚಿಸಲು ನಮ್ಮ ವಿಜ್ಞಾನಿಗಳು, ಸರ್ಕಾರ ಮತ್ತು ರೈತರು ಹೆಚ್ಚು ಶ್ರಮ ಪಡಬೇಕಾಗುತ್ತದೆ. ಅಲ್ಲದೆ ಬೆಲೆ ಸ್ಥಿರೀಕರಣ ಮತ್ತು ರೈತರಿಗೆ ಲಾಭದಾಯಕ ಬೆಲೆಯ ಖಾತ್ರಿಗಾಗಿ ಸರ್ಕಾರದ ನೀತಿಗಳು ಬಲಯುತವಾಗಿದ್ದು ಅನುಷ್ಠಾನಗೊಳ್ಳಬೇಕು.

andolanait

Recent Posts

ಮುಡಾಗೆ ಆರ್ಥಿಕ ಸಂಕಷ್ಟ; 20 ಕೋಟಿ ರೂ ನಷ್ಟ

ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…

54 mins ago

ಆಂದೋಲನ ಫಲಶ್ರುತಿ: ಕೊನೆಗೂ ತೆರವಾಯ್ತು ಬೃಹತ್‌ ಮರದ ಕಾಂಡ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…

1 hour ago

ಜಂಬೂ ಸವಾರಿ ಮಾರ್ಗದಲ್ಲಿ ಸಣ್ಣ ಬದಲಾವಣೆ

ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…

1 hour ago

ಪೈಲ್ವಾನರ ಕಸರತ್ತಿಗೆ ಗರಡಿ ಮನೆಗಳು ಸಜ್ಜು

ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…

1 hour ago

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

9 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

11 hours ago