ನಾಡು, ನುಡಿ ಉಳಿಸುವ ಹೋರಾಟಕೂ ವಿಸ್ತರಣೆ ಆವಶ್ಯಕ
ಆರ್.ಪಿ.ವೆಂಕಟೇಶಮೂರ್ತಿ, ಹಾಸನ
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ‘ಮಹೇಶ್ ಜೋಶಿ ಇಳಿಸಿ ಪರಿಷತ್ ಉಳಿಸಿ’ ಎಂಬ ಆಂದೋಲನವೊಂದು ಮಂಡ್ಯದಿಂದ ಆರಂಭವಾಗಿದೆ. ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಖರ್ಚಾದ ಅಂದಾಜು ೩೦ ಕೋಟಿ ರೂಪಾಯಿಗಳಲ್ಲಿ ರೂ. ೨.೫ ಕೋಟಿಗಳಿಗೆ ಲೆಕ್ಕ ಕೊಟ್ಟಿಲ್ಲ. ಜೋಶಿ ಅವರು ವೇತನ, ದಿನಭತ್ಯೆ, ಪ್ರವಾಸಭತ್ಯೆ ಹೆಸರಿನಲ್ಲಿ ದುಂದು ವೆಚ್ಚ ಮಾಡುತ್ತಿದ್ದಾರೆ. ಸಾಹಿತಿಗಳು ಹಾಗೂ ಪರಿಷತ್ ಸದಸ್ಯರನ್ನು ಗೌರವದಿಂದ ನಡೆಸಿ ಕೊಳ್ಳುವುದಿಲ್ಲ. ಪ್ರಶ್ನೆ ಕೇಳಿದರೆ ಅವರಿಗೆ ನೋಟಿಸ್ ಕೊಟ್ಟು ಬಾಯಿ ಮುಚ್ಚಿಸುತ್ತಾರೆ. ಪರಿಷತ್‌ನಲ್ಲಿದ್ದ ವಿಕೇಂದ್ರೀಕೃತ ವ್ಯವಸ್ಥೆಯನ್ನು ನಾಶ ಮಾಡಿ ಅಧ್ಯಕ್ಷ ಸ್ಥಾನವನ್ನು ಸರ್ವಾಧಿಕಾರಿಯಂತಾಗಿ ಮಾಡಲು ಹೊರಟಿದ್ದಾರೆ; ಮುಂತಾಗಿ ಆರೋಪ ಮಾಡಲಾಗುತ್ತಿದೆ. ಭವ್ಯ ಇತಿಹಾಸ ಹೊಂದಿರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಪರಿಷತ್‌ನ ಘನತೆಯನ್ನು ಎತ್ತಿ ಹಿಡಿಯಬೇಕಾದ ಅಧ್ಯಕ್ಷರೇ ಈ ರೀತಿ ಜನ ವಿರೋಧಿಯಾಗಿ, ಸ್ವಾರ್ಥಿಯಾಗಿ, ಸರ್ವಾಧಿಕಾರಿಯಂತೆ ನಡೆದುಕೊಳ್ಳುವುದನ್ನು ಕನ್ನಡಿಗರು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ.
ನಾಡಿನ ಶ್ರೇಷ್ಠ ತತ್ವಪದಕಾರರಲ್ಲಿ ಒಬ್ಬರಾದ ಶಿಶುನಾಳ ಶರೀಫರ ಗುರು ಗೋವಿಂದ ಭಟ್ಟರ ವಂಶಸ್ಥರೆಂದು ತಮ್ಮನ್ನು ಬಣ್ಣಿಸಿಕೊಳ್ಳುವ ಮಹೇಶ್ ಜೋಶಿ ಅವರು ದೂರದರ್ಶನದ ವೇದಿಕೆಯನ್ನೂ ತನ್ನನ್ನು ಬಿಂಬಿಸಿಕೊಳ್ಳಲು ಬಳಸುತ್ತಿದ್ದರು. ಆಗ ಇದೆಲ್ಲ ಚಿಲ್ಲರೆ ಖಯಾಲಿಗಳೆಂದು ಕನ್ನಡಿಗರು ನಿರ್ಲಕ್ಷ ಮಾಡಿದ್ದರು. ಆದರೆ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ, ಸಂಘ ಪರಿವಾರ ಮತ್ತು ಬಿಜೆಪಿಯ ಬೆಂಬಲದಿಂದ ನಿರಾಯಾಸವಾಗಿ ಆಯ್ಕೆಯಾದ ನಂತರವಷ್ಟೇ ಜೋಶಿಯವರ ಬಣ್ಣ ಬಯಲಾಗುತ್ತಿದೆ.
ನಾಡಿನ ನೆಲ, ಜಲ ಹಾಗೂ ಕನ್ನಡದ ರಕ್ಷಣೆಗಾಗಿ ಅಗ್ರಗಣ್ಯ ಪಾತ್ರ ವಹಿಸಬೇಕಾದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದಲ್ಲಿರುವವರೇ ಹೀಗೆ ಸ್ವಹಿತಾಸಕ್ತಿಯ ರಕ್ಷಣೆಯಲ್ಲಿ ಮುಳುಗಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ನೆಲ, ಜಲ ಮತ್ತು ಭಾಷೆಯ ವಿಚಾರದಲ್ಲಿ ಕನ್ನಡ ಎಂತಹ ಅಪಾಯಕ್ಕೆ ಸಿಲುಕಿದೆ ಎಂಬ ಕನಿಷ್ಠ ಎಚ್ಚರ, ಕಾಳಜಿ ಇದ್ದವರು ಜೋಶಿಯವರಂತೆ ವರ್ತಿಸಲು ಸಾಧ್ಯವೇ ಇಲ್ಲ. ರಾಜ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಬಂದೊದಗಿರುವ ಚಿಂತಾಜನಕ ಸ್ಥಿತಿಯನ್ನು ನೋಡಿ. ರಾಜ್ಯದಲ್ಲಿ ಈಗಾಗಲೇ ಆರು ಸಾವಿರ ಸರ್ಕಾರಿ ಶಾಲೆಗಳು ಮುಚ್ಚಿ ಹೋಗಿವೆ. ಸಾವಿರಾರು ಶಾಲೆಗಳಲ್ಲಿ ಕೇವಲ ಎರಡು ಮೂರು ಮಕ್ಕಳಿದ್ದಾರೆ. ಮುಂದಿನ ಕೆಲವೇ ವರ್ಷಗಳಲ್ಲಿ ಒಂದೇ ಒಂದು ಕನ್ನಡ ಮಾಧ್ಯಮ ಶಾಲೆ ಇರುವುದಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಜಾಗತೀ ಕರಣದ ಭರಾಟೆಯಲ್ಲಿ ವಿಶ್ವದ ಶೇ.೯೨ರಷ್ಟು ಜನರು ಮಾತನಾಡುವ ಭಾಷೆಗಳು ಮೂಲೆಗುಂಪಾಗಿ ಕೇವಲ ಶೇ.೮ರಷ್ಟು ಜನರು ಮಾತನಾಡುವ ಭಾಷೆಗಳು ಮಾತ್ರ ಉಳಿದುಕೊಳ್ಳಲಿವೆಯಂತೆ. ಈಗಾಗಲೇ ಕೊಡವ, ಕೊರಗ ಭಾಷೆ ಮಾತನಾಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಂಕಿ ಅಂಶಗಳ ಸಹಿತ ವಿವರಿಸುತ್ತಿದ್ದಾರೆ.
ಇಂಗ್ಲಿಷ್ ಪ್ರವಾಹದಲ್ಲಿ ಹೀಗೆ ಜನಸಾಮಾನ್ಯರ ಭಾಷೆಗಳು ಕೊಚ್ಚಿ ಹೋಗುತ್ತಿರುವ ಭಯಾನಕ ಸ್ಥಿತಿ ಕಂಡು ಕನಿಷ್ಠ ಪ್ರಜ್ಞೆಯುಳ್ಳವರು ಕಣ್ಣೀರುಗರೆಯುತ್ತಾರೆ. ಅವರ ಮನಸ್ಸು ಮರುಗುತ್ತದೆ. ಸರ್ಕಾರಗಳ ತಪ್ಪು ನೀತಿಗಳ ಫಲವಾಗಿ ನಾಡಿನ ಭೂ ಸಂಪತ್ತು ಕೆಲವೇ ಕಾರ್ಪೊರೇಟ್ ಕಂಪೆನಿಗಳ ಪಾಲಾಗುತ್ತಿದೆ. ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಏಳು ಹಳ್ಳಿಗಳ ರೈತರು ಭೂಸ್ವಾಽನದ ವಿರುದ್ಧ ಕಳೆದ ಒಂದು ವರ್ಷದಿಂದ ನಡೆಸುತ್ತಿರುವ ಹೋರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಸಿಕ್ಕಿಲ್ಲ.
ಕೆಲವೇ ಕೆಲವು ವರ್ಷಗಳ ಹಿಂದೆ ಹೆಮ್ಮೆಯ ನಗರ, ಸುಂದರ ನಗರವೆಂದು ಖ್ಯಾತಿ ಹೊಂದಿದ್ದ ಬೆಂಗಳೂರು, ಹಲವು ಬಗೆಯ ದಾಳಿಗಳಿಂದಾಗಿ ವಿಪರೀತ ಒತ್ತಡಕ್ಕೆ ಸಿಲುಕಿದೆ. ಇಂತಹ ದಯನೀಯ ಸ್ಥಿತಿಯಲ್ಲಿ ರಾಜ್ಯದ ಕೈಗಾರಿಕಾ ಮಂತ್ರಿ ಎಂ.ಬಿ.ಪಾಟೀಲರು ರಾಜ್ಯಕ್ಕೆ ೧೦ ಲಕ್ಷ ಕೋಟಿ ರೂ. ವಿದೇಶಿ ಬಂಡವಾಳ ಹರಿದು ಬರುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಇನ್ನು ಜಲದ ವಿಷಯವನ್ನು ಕೇಳುವುದೇ ಬೇಡ. ರಾಜ್ಯದ ಬಹುತೇಕ ನದಿಗಳು ಮಲಿನಗೊಂಡಿವೆ. ಕೃಷಿ ಕ್ಷೇತ್ರದ ಬಿಕ್ಕಟ್ಟು, ರೈತರ ಸಂಕಷ್ಟ ತೀವ್ರಗೊಳ್ಳುತ್ತಿದೆ. ಬದುಕುಳಿಯಲು ದಿನನಿತ್ಯ ಹೋರಾಟ ನಡೆಸಬೇಕಾದ ರೈತರು, ಅರಿವಿದ್ದರೂ ಕಳೆನಾಶಕದಂತಹ ವಿಷಗಳನ್ನು ಭೂಮಿಗೆ ಸುರಿದು ಪರಿಸರ ಸ್ನೇಹಿ ಜೀವಿಗಳನ್ನು ಕೊಲ್ಲುತ್ತಿದ್ದಾರೆ.
ದೊಡ್ಡವರ ಸ್ಪರ್ಧೆಯನ್ನು ಎದುರಿಸಿ ಸಣ್ಣಪುಟ್ಟ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಭೂ ತಾಪಮಾನ ಏರಿಕೆ ಆಗುತ್ತಿದೆ, ಹವಾಮಾನ ವೈಪರೀತ್ಯ ಹೆಚ್ಚಾಗುತ್ತಿದೆ. ಪರಿಸರಕ್ಕೆ ತುರ್ತು ಪರಿಸ್ಥಿತಿ ಬಂದಿದೆ. ನಮ್ಮ ನೈಸರ್ಗಿಕ ಸಂಪನ್ಮೂಲಗಳೆಲ್ಲ ಬರಿದಾಗುತ್ತಿವೆ. ಇಂತಹ ಹತ್ತು ಹಲವು ಗಂಭೀರ ವಿಷಯಗಳನ್ನು ಕುರಿತು ಸರ್ಕಾರ ಮತ್ತು ಸಮಾಜದ ಕಣ್ಣು ತೆರೆಸಬೇಕಾದವರು ಸಾಹಿತಿಗಳು ಮತ್ತು ಬರಹಗಾರರಲ್ಲವೇ? ಸಾಹಿತಿಗಳಿಗೆ ವೇದಿಕೆ ಒದಗಿಸಿಕೊಡಬೇಕಾದುದು, ಸಾಹಿತ್ಯ ಪರಿಷತ್ತಿನ ಆದ್ಯ ಕರ್ತವ್ಯವಲ್ಲವೇ? ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಕೋಟ್ಯಂತರ ರೂ. ಹಣ ಖರ್ಚು ಮಾಡಿ ಲಕ್ಷಾಂತರ ಜನರನ್ನು ಸೇರಿಸಿ ಜಾತ್ರೆ ಮಾಡುವ ಅಗತ್ಯ ಖಂಡಿತ ಇಲ್ಲ. ಸಂತೆಗಳಲ್ಲಿ, ಜಾತ್ರೆಗಳಲ್ಲಿ ನಾಡು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಗಂಭೀರ ಚಿಂತನೆ ಸಾಧ್ಯವೇ ಇಲ್ಲ. ಜಾತ್ರೆಗಳ ಬದಲಾಗಿ ಪ್ರತಿ ಜಿಲ್ಲೆಗಳಲ್ಲಿ, ತಾಲ್ಲೂಕುಗಳಲ್ಲಿ ವಿಚಾರಗೋಷ್ಠಿಗಳನ್ನು ನಡೆಸಿ ನಾಡಿನ, ದೇಶದ ಹಾಗೂ ವಿಶ್ವದ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಾದ ಕೆಲಸ ತುರ್ತಾಗಿ ಆಗಬೇಕಾಗಿದೆ.
ಕನ್ನಡದ ಮಾಧ್ಯಮದ ಶಾಲೆಗಳನ್ನು ಉಳಿಸಿಕೊಳ್ಳುವ ಕುರಿತು ಮೊದಲು ಚರ್ಚೆ ಆಗಬೇಕು. ಕನ್ನಡ ಬರೆಯುವವರು, ಓದುವವರು ಇಲ್ಲದಿದ್ದರೆ ಕನ್ನಡ ಸಾಹಿತ್ಯ ವನ್ನು ಯಾರಿಗಾಗಿ ಬರೆಯಬೇಕು? ಕನ್ನಡ ಪರಿಸರವೇ ಇಲ್ಲದಿದ್ದರೆ ಸಾಹಿತಿ ಹೇಗೆ ರೂಪುಗೊಳ್ಳುತ್ತಾನೆ? ಈಗ ಆರಂಭ ಆಗುತ್ತಿರುವ ಆಂದೋಲನ ಜೋಶಿಯವರನ್ನು ಇಳಿಸಲು ಮಾತ್ರ ಸೀಮಿತ ಆಗಬಾರದು. ಜೋಶಿಯವರನ್ನೂ ಇಳಿಸಿ, ಪರಿಷತ್ತನ್ನು, ಕನ್ನಡವನ್ನು, ನಾಡನ್ನು ಉಳಿಸುವ ಹೋರಾಟ ಆಗಬೇಕು, ಜಾಗತೀಕರಣಕ್ಕೆ ಪರಿಹಾರ ರೂಪಿಸುವ ಮನ್ವಂತರ ನಡೆಯಬೇಕು.
” ಕೆಲವೇ ಕೆಲವು ವರ್ಷಗಳ ಹಿಂದೆ ಹೆಮ್ಮೆಯ ನಗರ, ಸುಂದರ ನಗರವೆಂದು ಖ್ಯಾತಿ ಹೊಂದಿದ್ದ ಬೆಂಗಳೂರು, ಹಲವು ಬಗೆಯ ದಾಳಿಗಳಿಂದಾಗಿ ವಿಪರೀತ ಒತ್ತಡಕ್ಕೆ ಸಿಲುಕಿದೆ. ಇಂತಹ ದಯನೀಯ ಸ್ಥಿತಿಯಲ್ಲಿ ರಾಜ್ಯದ ಕೈಗಾರಿಕಾ ಮಂತ್ರಿ ಎಂ.ಬಿ.ಪಾಟೀಲರು ರಾಜ್ಯಕ್ಕೆ ೧೦ ಲಕ್ಷ ಕೋಟಿ ರೂ. ವಿದೇಶಿ ಬಂಡವಾಳ ಹರಿದು ಬರುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಇನ್ನು ಜಲದ ವಿಷಯ ಕೇಳುವುದೇ ಬೇಡ. ರಾಜ್ಯದ ಬಹುತೇಕ ನದಿಗಳು ಮಲಿನಗೊಂಡಿವೆ, ಕೃಷಿ ಕ್ಷೇತ್ರದ ಬಿಕ್ಕಟ್ಟು, ರೈತರ ಸಂಕಷ್ಟ ತೀವ್ರಗೊಳ್ಳುತ್ತಿದೆ.”
ಮೈಸೂರು : ಹೊಸದಿಲ್ಲಿಯಲ್ಲಿ ಬುದ್ಧಗಯಾ ವಿಮೋಚನೆ ಐತಿಹಾಸಿಕ ಚಳವಳಿಯಲ್ಲಿ ಬೌದ್ಧ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬೌದ್ಧ ಚಿಂತಕ,…
ಮೈಸೂರು : ರಥಸಪ್ತಮಿ ಅಂಗವಾಗಿ ನಗರದಲ್ಲಿ ಭಾನುವಾರ ಅರಮನೆ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೂರ್ಯನಿಗೆ ನಮಿಸಲಾಯಿತು.…
ಬೆಳಗಾವಿ : ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್‌ನಲ್ಲಿ ಖತರ್ನಾಕ್ ರಾಬರಿ ಗ್ಯಾಂಗ್ ಒಂದಲ್ಲ, ಎರಡಲ್ಲ ಬರೋಬರಿ 400 ಕೋಟಿ…
ಮೂವರು ಕನ್ನಡಿಗರಿವರು ; ಮಂಡ್ಯದ ಅಂಕೇಗೌಡ, ದಾವಣಗೆರೆಯ ಡಾ. ಸುರೇಶ್ ಹನಗವಾಡಿ, ಬೆಂಗಳೂರಿನ ಎಸ್.ಜಿ. ಸುಶೀಲಮ್ಮ ಬೆಂಗಳೂರು : ದೇಶದ…
ಮೈಸೂರು : ಮುಂದಿನ ಬಜೆಟ್ ಮಂಡನೆಗೆ ಫೆ.2 ರಿಂದ ಇಲಾಖಾವಾರು ಅಧಿಕಾರಿಗಳ ಸಭೆ ನಡೆಸಿ ತಯಾರಿ ಶುರು ಮಾಡಲಿದ್ದೇನೆ ಎಂದು…
ಮೈಸೂರು : ಕರ್ನಾಟಕದಲ್ಲಿ ಬಿಜೆಪಿ-ಜಾ.ದಳ ಒಂದಾದರೂ ಅಧಿಕಾರಕ್ಕೆ ಬರಲ್ಲವೆಂದು ಭವಿಷ್ಯ ನುಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 2028ಕ್ಕೂ ನಾವೇ ಅಧಿಕಾರಕ್ಕೆ ಬರುವುದು…