ದೆಹಲಿ ಕಣ್ಣೋಟ
ಸರ್ಕಾರಿ ಅಧಿಕಾರಿ ಮತ್ತು ನೌಕರರಿಗೆ ಇರುವ ವಯೋಮಿತಿ ರಾಜ ಕಾರಣಿಗಳಿಗೇಕೆ ಇಲ್ಲ, ರಾಜಕಾರಣಕ್ಕೆ ಪ್ರವೇಶಿಸುವವರಿಗೆ ಅರ್ಹತಾ ಮಾನದಂಡವಾಗಿ ಕನಿಷ್ಠ ಪದವಿಯವರೆಗೆ ಓದಿರಬೇಕು ಎಂಬ ನಿಯಮವನ್ನು ರೂಪಿಸಬೇಕು ಹಾಗೂ ನಿವೃತ್ತಿಯ ವಯಸ್ಸನ್ನೂ ನಿಗದಿ ಪಡಿಸಬೇಕು ಎನ್ನುವ ಮಾತುಗಳನ್ನು ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ನಮ್ಮ ಯುವ ಜನರು ಆಗಾಗ್ಗೆ ಹೇಳುವುದನ್ನು ಕೇಳುತ್ತಿರುತ್ತೇವೆ.
ಐಎಎಸ್, ಐಪಿಎಸ್, ಐಎಫ್‌ಎಸ್ ವರ್ಗದ ಅಧಿಕಾರಿಗಳು ರಾಜಕಾರಣಿಗಳು ಹೇಳಿದಂತೆ ಕೇಳಬೇಕು. ಇವರು ಹೇಳಿದಂತೆಯೇ ಕೆಲಸ ಮಾಡಬೇಕು ಎಂಬ ಕೊಂಕು ಮಾತುಗಳೂ ಕೇಳಿಬರುತ್ತಲೇ ಇವೆ. ನಿಜ. ಈ ವಾದದಲ್ಲಿ ಸತ್ಯವಿಲ್ಲ ಎನ್ನುವ ಹಾಗಿಲ್ಲ. ಹಾಗೆಯೇ ಜನತಂತ್ರ ವ್ಯವಸ್ಥೆಯಲ್ಲಿ ಜನರು ತಮ್ಮ ಪ್ರತಿನಿಽಗಳನ್ನು ಆಯ್ಕೆ ಮಾಡುವಾಗ ರಾಜಕಾರಣಿಗಳಿಗೆ ವಯಸ್ಸಿನ ಮಿತಿ ಇರಬೇಕೆ ಬೇಡವೇ ಎನ್ನುವ ಚರ್ಚೆ ನಿರಂತರವಾಗಿ ಹಲವು ವೇದಿಕೆಗಳಲ್ಲಿ, ಬರವಣಿಗೆಯಲ್ಲಿ ಮತ್ತು ವೈಯಕ್ತಿಕ ನೆಲೆಯಲ್ಲಿ ನಡೆಯುತ್ತಲೇ ಇದೆ. ಬಗೆಹರಿಯಲಾರದ ಈ ವಿವಾದಕ್ಕೆ ಒಂದು ತಾರ್ಕಿಕ ಅಂತ್ಯವನ್ನು ಹಾಡುವುದು ಅವಶ್ಯ.
ಬಿಜೆಪಿ ನೇತೃತ್ವದ ಕೇಂದ್ರದಲ್ಲಿನ ಎನ್‌ಡಿಎ ಸರ್ಕಾರ ಸಾಮಾನ್ಯವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೂಚನೆ ಮತ್ತು ಮಾರ್ಗದರ್ಶನದಂತೆ ನಡೆಯುವುದು ಗುಟ್ಟಾಗಿ ಉಳಿದಿಲ್ಲ. ಕೇಂದ್ರದಲ್ಲಿರಲಿ ಅಥವಾ ರಾಜ್ಯಗಳಲ್ಲಿರಲಿ ಬಿಜೆಪಿ ಅಧಿಕಾರ ಸೂತ್ರ ಹಿಡಿಯಲು ಆರ್‌ಎಸ್‌ಎಸ್ ಕಾರ್ಯಕರ್ತರು ಚುನಾವಣೆಗೆ ಮುನ್ನ ಮತ್ತು ಚುನಾವಣೆ ದಿನಗಳಲ್ಲಿ ತಳಮಟ್ಟದಲ್ಲಿ ಮತದಾರರನ್ನು ಮಾನಸಿಕವಾಗಿ ಸಿದ್ಧಗೊಳಿಸುತ್ತಾರೆ.
ಬಿಜೆಪಿಯ ಬಹುತೇಕ ನಾಯಕರು ಈ ಆರ್‌ಎಸ್‌ಎಸ್ ಗರಡಿಯಲ್ಲಿ ನುರಿತ ಸ್ವಯಂ ಸೇವಕರಾಗಿ ಬಂದವರೇ ಆಗಿದ್ದಾರೆ. ಬಿಜೆಪಿಯ ಸೈದ್ಧಾಂತಿಕ ನಿಲುವು ಕೂಡ ಆರ್‌ಎಸ್‌ಎಸ್‌ನದ್ದೇ ಆಗಿರುತ್ತದೆ. ಹಿಂದುತ್ವ, ಸನಾತನ ಧರ್ಮ ರಕ್ಷಣೆಯೇ ಇದರ ಮುಖ್ಯ ಧ್ಯೇಯ. ಹಾಗಾಗಿ ಅವರು ಆರ್‌ಎಸ್‌ಎಸ್‌ನ ಮುಖ್ಯಸ್ಥರು ನೀಡುವ ಸೂಚನೆ ಮತ್ತು ಆದೇಶವನ್ನು ಶಿರಸಾವಹಿಸಿ ಪಾಲಿಸುವುದನ್ನು ನೋಡಿದ್ದೇವೆ. ಇದು ಬಿಜೆಪಿ ಆಡಳಿತದ ಕಾರ್ಯವೈಖರಿ.
ಬಿಜೆಪಿ ಆಡಳಿತವು ತನ್ನ ಸೈದ್ಧಾಂತಿಕ ವಿಚಾರವನ್ನು ಬಿಟ್ಟು ನಡೆದಾಗ ಆರ್ ಎಸ್‌ಎಸ್ ಆಗಾಗ್ಗೆ ಪರೋಕ್ಷವಾಗಿ ಮತ್ತು ನೇರವಾಗಿ ಎಚ್ಚರಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದೆ. ಈ ಪರಿಪಾಟ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತದಿಂದ ಇಂದಿನ ಪ್ರಧಾನಿ ನರೇಂದ್ರ ಮೋದಿವರೆಗೂ ನಡೆದುಕೊಂಡು ಬಂದಿದೆ. ಅದು ಶ್ರೀರಾಮ ಮಂದಿರ ನಿರ್ಮಾಣ ನನ್ನಿಂದಾಗಿದೆ ಎಂದು ಹೇಳಿಕೊಳ್ಳುವುದನ್ನಾಗಲಿ, ನಾನು ನಾನ್ ಬಯೋಲಾಜಿಕಲ್ ಮ್ಯಾನ್ ಎಂದು ಹೇಳಿಕೊಂಡಾಗ ಪ್ರಧಾನಿ ಮೋದಿ ಅವರನ್ನು ಆರ್‌ಎಸ್‌ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಕಟುವಾಗಿ ಟೀಕಿಸಿರುವ ಉದಾಹರಣೆಯಿದೆ.
‘ವಯಸ್ಸು ಎಪ್ಪತ್ತೈದು ದಾಟಿದ ಮೇಲೆ ನಿವೃತ್ತರಾಗಿ ಬೇರೆಯವರು ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು’ ಎಂದು ಮೋಹನ್ ಭಾಗವತ್ ಅವರು ಪುಣೆಯಲ್ಲಿ ಕಳೆದ ಬುಧವಾರ ಆರ್‌ಎಸ್‌ಎಸ್‌ನ ಸಂಸ್ಥಾಪಕರಲ್ಲೊಬ್ಬರಾಗಿದ್ದ ದಿ.ಮೋರೊಪಂತ್ ಪಿಂಗ್ಳೆ ಅವರ ನೆನಪಿನ ಕೃತಿಯೊಂದನ್ನು ಬಿಡುಗಡೆ ಮಾಡುತ್ತಾ ಹೇಳಿದ್ದು, ಈ ಮಾತು ಈಗ ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಹೇಳಿರುವುದು ಎನ್ನುವ ವ್ಯಾಖ್ಯಾನ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿರುವುದು ಮೋದಿ ಬೆಂಬಲಿಗರ ತಲೆಗೆ ಹುಳು ಬಿಟ್ಟಂತಾಗಿದೆ.
ಮೋದಿ ಮತ್ತು ಭಾಗವತ್ ಇಬ್ಬರಿಗೂ ಬರುವ ಸೆಪ್ಟೆಂಬರ್‌ನಲ್ಲಿ ಎಪ್ಪತ್ತೈದು ವರುಷ ತುಂಬಲಿದೆ. ಭಾಗವತ್ ಅವರ ಮಾತು ಸ್ವಯಂ ಅವರಿಗೂ ಅನ್ವಯಿಸುವಂತಹದ್ದು. ಆದರೆ ಭಾಗವತ್ ಅವರ ಈ ಮಾತು ಮೋದಿ ಅವರನ್ನು ಕುರಿತದ್ದಲ್ಲ. ಸಹಜವಾಗಿಯೇ ಎಲ್ಲರಿಗೂ ಅನ್ವಯವಾಗುವಂತೆ ಹೇಳಿದ್ದಾರೆ. ಈ ಮಾತನ್ನು ಮೋದಿಗೆ ಅನ್ವಯಿಸುವುದು ಸರಿಯಲ್ಲ ಎನ್ನುವ ರಾಗ ಈಗ ಮೋದಿ ಬೆಂಬಲಿಗರದ್ದು. ಭಾಗವತ್ ಅವರ ಮಾತಿನ ಆಳ ಅಗಲವನ್ನು ಕೆದಕುವ ಕೆಲಸ ಈಗ ಮೋದಿ ವಿರೋಧಿಗಳದ್ದಾಗಿದೆ. ಹಾಗಾಗಿ ಭಾಗವತ್ ಅವರ ಮಾತಿಗೆ ಈಗ ರಾಷ್ಟ್ರೀಯ ಪ್ರಾಮುಖ್ಯತೆ ದೊರೆತಂತಾಗಿದೆ. ರಾಜಕೀಯ ನಾಯಕರ ನಿವೃತ್ತಿಯ ವಯಸ್ಸು ಬಿಜೆಪಿಯ ಸಂವಿಧಾನದಲ್ಲಿ ಇಲ್ಲ. ಮೋದಿ ಅವರ ನಾಯಕತ್ವ ೨೦೨೯ರವರೆಗೂ ಅವಶ್ಯವಿದೆ. ವಿಶ್ವದಲ್ಲಿಯೇ ಭಾರತವನ್ನು ಮೂರನೇ ಆರ್ಥಿಕ ಸದೃಢ ರಾಷ್ಟ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಮೋದಿ ರಕ್ಷಣೆಗೆ ನಿಂತಿದ್ದಾರೆ. ಹೌದು ಬಿಜೆಪಿಯ ಸಂವಿಧಾನದಲ್ಲಿ ನಾಯಕರ ವಯೋಮಿತಿಯನ್ನು ನಿಗದಿಪಡಿಸಿಲ್ಲ. ಆದರೆ ಈ ಪಕ್ಷವನ್ನು ಕಟ್ಟಿದ ಎರಡನೇ ಅಗ್ರಗಣ್ಯ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ ಅವರು ೭೫ ವರ್ಷಗಳನ್ನು ದಾಟಿದ್ದಾರೆ ಎನ್ನುವ ಕಾರಣವೊಡ್ಡಿ ಅವರಿಗೆ ಗುಜರಾತ್‌ನ ಗಾಂಧಿನಗರದಿಂದ ೨೦೧೪ರ ಚುನಾವಣೆಯಲ್ಲಿ ಟಿಕೆಟ್ ನೀಡಲು ನಿರಾಕರಿಸಿ ಅವರನ್ನು ಬಿಜೆಪಿ ಮಾರ್ಗದರ್ಶಕರೆನ್ನುವ ಹೊಸ ಹುದ್ದೆಯೊಂದನ್ನು ನಾಮಕಾವಸ್ತೆಗೆ ಸೃಷ್ಟಿಸಿ ಮೂಲೆಗುಂಪು ಮಾಡಲಾಯಿತು. ಅದೇ ರೀತಿ ಪಕ್ಷದ ಹಿಂದಿನ ಅಧ್ಯಕ್ಷರಾದ ಡಾ.ಮುರಳಿ ಮನೋಹರ ಜೋಷಿ ಮತ್ತು ಜಸ್ವಂತ್ ಸಿಂಗ್ ಅವರನ್ನೂ ಚುನಾವಣಾ ಕಣದಿಂದ ದೂರ ಇಡಲಾಯಿತು ಎನ್ನುವುದು ಈಗಾಗಲೇ ಬಿಜೆಪಿ ರಾಜಕೀಯ ಇತಿಹಾಸದ ಪುಟ ಸೇರಿದೆ. ಈ ಸತ್ಸಂಪ್ರದಾಯವನ್ನು ಪಾಲಿಸ ಬೇಕಾದುದು ಈಗ ಮೋದಿ ಅವರ ಸರದಿ. ತಾವೇ ಹಾಕಿದ ಈ ಸಂಪ್ರದಾಯವನ್ನು ಮೋದಿ ಮುರಿಯಬಾರದು ಎಂದು ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವುತ್ ಪ್ರಧಾನಿ ಅವರಿಗೆ ಪರೋಕ್ಷವಾಗಿ ಕಿವಿ ಮಾತು ಹೇಳಿದ್ದಾರೆ.
ಮೋದಿ ಅವರನ್ನು ಹೆಜ್ಜೆ ಹೆಜ್ಜೆಗೂ ಟೀಕಿಸುತ್ತಾ ಬಂದಿರುವ ಕಾಂಗ್ರೆಸ್ ನಾಯಕರು ಕೂಡ ಮೋದಿ ಅವರಿಗೆ ಇದೇ ಸವಾಲನ್ನು ಎಸೆದಿದ್ದಾರೆ. ಆದರೆ ಮೋದಿ ಅವರ ಆಪ್ತರಾದ ಗೃಹ ಸಚಿವ ಅಮಿತ್ ಶಾ, ಬಿಜೆಪಿಯಲ್ಲಿ ಇಂತಹ ಕಟ್ಟುನಿಟ್ಟಾದ ನಿಯಮಗಳೇನಿಲ್ಲ. ಮೋದಿ ಅವರ ಸೇವೆ ರಾಷ್ಟ್ರಕ್ಕೆ ಇನ್ನೂ ಹತ್ತಾರು ವರ್ಷಗಳು ಬೇಕಾಗಿದೆ ಎಂದು ವಕಾಲತ್ತು ವಹಿಸಿದ್ದಾರೆ. ಆದರೆ ಗೃಹ ಸಚಿವರಾಗಿ ಬಿಜೆಪಿಯ ಅಜೆಂಡಾವನ್ನು ಚಾಚೂ ತಪ್ಪದೇ ಜಾರಿಗೆ ತಂದಿರುವ ಸಂತೃಪ್ತಿ ವ್ಯಕ್ತಪಡಿಸಿರುವ ಅವರು, ರಾಜಕೀಯದಿಂದ ನಿವೃತ್ತಿಯಾದ ಮೇಲೆ ಸಾವಯವ ಕೃಷಿಯಲ್ಲಿ ತಮ್ಮ ಮುಂದಿನ ದಿನಗಳನ್ನು ತೊಡಗಿಸಿಕೊಳ್ಳುವುದಾಗಿ ತಮ್ಮ ಭವಿಷ್ಯವನ್ನು ಈಗಾಗಲೇ ಕಂಡುಕೊಂಡಂತಿದ್ದಾರೆ.
ಜನರ ಅಪೇಕ್ಷೆಯಂತೆ ರಾಜಕಾರಣಿಗಳಿಗೂ ನಿವೃತ್ತಿಯ ವಯಸ್ಸು ಮತ್ತು ಶೈಕ್ಷಣಿಕ ಅರ್ಹತೆಯನ್ನು ವಿಧಿಸುವುದು ಸೂಕ್ತ ಎನ್ನುವ ಮನಸ್ಸು ಈಗಿನ ಪೀಳಿಗೆಯದ್ದು. ವಿಶ್ವದ ಯಾವುದೇ ರಾಷ್ಟ್ರದಲ್ಲೂ ರಾಜಕಾರಣಿಗಳಿಗೆ ನಿವೃತ್ತಿ ವಯಸ್ಸನ್ನು ನಿಗದಿಪಡಿಸಿರುವ ಉದಾಹರಣೆಗಳು ಸಿಗುತ್ತಿಲ್ಲ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಯಸ್ಸು ಈಗ ೭೮. ಹಿಂದಿನ ಅಧ್ಯಕ್ಷರಾಗಿದ್ದ ಜೋ ಬೈಡನ್ ಅವರ ವಯಸ್ಸು ಅಽಕಾರದಿಂದ ಇಳಿಯುವಾಗ ೮೨ ಅಗಿತ್ತು. ಅಧಿಕಾರಸ್ಥ ರಾಜಕಾರಣಿಗಳಿಗೆ ವಯೋಮಿತಿಯನ್ನು ಹೇರಿದರೆ ಈಗ ಸಂಸತ್ತಿನ ಹಿರಿಯ ಅಜ್ಜರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರದ್ದು ೯೨ ಆಗಿದ್ದು ಅವರೂ ಸೇರಿದಂತೆ ೮೨ ದಾಟಿರುವ ಕಾಂಗ್ರೆಸ್ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ, ೯೫ ದಾಟಿರುವ ರಾಜ್ಯ ವಿಧಾನಸಭೆಯ ಸದಸ್ಯ ಶಾಮನೂರು ಶಿವಶಂಕರಪ್ಪ ಮುಂತಾದ ಘಟಾನುಘಟಿಗಳು ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ. ನಲವತ್ತು ಐವತ್ತು ವರ್ಷಗಳ ರಾಜಕೀಯ ಅಧಿಕಾರಕ್ಕೆ ಅಂಟಿಕೊಂಡು ತಾವು ರಾಜಕಾರಣದಲ್ಲಿ ಸಕ್ರಿಯವಾಗಿರುವ ಜೊತೆಗೆ ಮಕ್ಕಳು ಮತ್ತು ಮೊಮ್ಮಕ್ಕಳನ್ನೂ ಪ್ರಜಾತಂತ್ರ ವ್ಯವಸ್ಥೆಯಲ್ಲಿ ತಮ್ಮ ರಾಜಕೀಯ ವಾರಸುದಾರರನ್ನಾಗಿ ಮಾಡುವ ಪ್ರವೃತ್ತಿಗೆ ಜನರಿಂದ ಬರುವ ಕಟು ಟೀಕೆಯನ್ನು ತಪ್ಪು ಎನ್ನಲಾಗದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಯಾವುದೇ ದೇಶಕ್ಕೂ ಅನಿವಾರ್ಯವಲ್ಲ ಎನ್ನುವ ತಿಳಿವಳಿಕೆ ಈಗ ಎಲ್ಲರಲ್ಲಿಯೂ ಇದೆ.
ಸರ್ಕಾರಿ ನೌಕರರಿಗೆ ಇರುವ ವಯೋಮಿತಿ ೬೦ ಇರುವಾಗ ಕೊನೆಪಕ್ಷ ರಾಜಕಾರಣಿಗಳಿಗೆ ೭೦ಕ್ಕಾದರೂ ನಿವೃತ್ತಿ ವಯಸ್ಸನ್ನು ಗೊತ್ತುಪಡಿಸಬೇಕು. ದೇಶವನ್ನಾಳಲು ಯುವ ಶಕ್ತಿಗೆ ದಾರಿ ಮಾಡಿಕೊಡಬೇಕು ಎನ್ನುವ ವಾದ ಇದೆ. ಆದರೆ ಅನುಭವ ಮತ್ತು ಹಿಂದಿನ ದಿನಗಳ ರಾಜಕೀಯ, ಆಡಳಿತದ ಅರಿವಿನ ಪಕ್ವತೆಯ ದೃಷ್ಟಿಯಿಂದ ರಾಜಕೀಯ ವ್ಯಕ್ತಿಗಳಿಗೆ ವಯೋಮಿತಿಯನ್ನು ಹೇರಲಾಗದು ಎನ್ನುವ ವಾದ ಮತ್ತೊಂದು ಕಡೆ ಇದೆ. ಇಬ್ಬರು ಸಹಾಯಕರು ಅವರನ್ನು ಬಿಗಿದಪ್ಪಿ ಎತ್ತಿಕೊಂಡಂತೆ ನಡೆಯುವ ರಾಜ್ಯಸಭೆ ಸದಸ್ಯರಾಗಿರುವ ೯೨ ವರ್ಷಗಳ ದೇವೇಗೌಡರಾಗಲೀ, ಸಹಾಯಕರೊಬ್ಬರನ್ನು ಹಿಡಿದುಕೊಂಡು ನಡೆಯುವ ಮಲ್ಲಿಕಾರ್ಜುನ ಖರ್ಗೆ ಅವರನ್ನಾಗಲಿ ಮತ್ತು ೭೧ನೇ ವಯಸ್ಸಿಗೆ ತಮ್ಮ ದಢೂತಿ ದೇಹದಿಂದಾಗಿ ನಡೆಯಲಾಗದೆ ವೇದಿಕೆಗೆ ಇಬ್ಬರು ಸಹಾಯಕರು ಅನಾಮತ್ತಾಗಿ ಎತ್ತಿಕೊಂಡು ಕೂರಿಸಬೇಕಿದ್ದ ಜಗಜೀವನರಾಂ ಅವರ ದೈಹಿಕ ಸ್ಥಿತಿಯನ್ನು ನೋಡಿದಾಗ ಸಹಜವಾಗಿಯೇ ರಾಜಕಾರಣಿಗಳಿಗೂ ನಿವೃತ್ತಿಯ ವಯೋಮಿತಿಯನ್ನು ಗೊತ್ತುಪಡಿಸುವುದು ಅನಿವಾರ್ಯ ಎನ್ನುವ ವಾದವನ್ನು ನಿರಾಕರಿಸಲಾಗದು.
ಆದರೆ ಅಧಿಕಾರ ರಾಜಕಾರಣದ ಸೂಕ್ಷ್ಮತೆಯಲ್ಲಿ ಅತ್ಯಂತ ಚಾಣಾಕ್ಷತನವನ್ನು ಮೆರೆದ ಜಗಜೀವನರಾಂ ಮತ್ತು ತಮ್ಮ ಕಡೆ ಉಸಿರಿನವರೆಗೂ ರಾಜ್ಯದ ಹಿತಕ್ಕಾಗಿ ಹೋರಾಡುತ್ತೇನೆ ಎನ್ನುವ ದೇವೇಗೌಡರ ರಾಜಕೀಯ ತಂತ್ರಗಾರಿಕೆಯನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆನ್ನುವುದು ಆಯಾ ಸಮಾಜಕ್ಕೆ ಮತ್ತು ತಮ್ಮ ಈ ಬುದ್ಧಿವಂತಿಕೆಯನ್ನು ಸಮಾಜದ ಹಿತಕ್ಕಾಗಿ ಹೇಗೆ ನೀಡಬೇಕೆನ್ನುವುದು ಅವರ ವಿವೇಚನೆಗೆ ಬಿಟ್ಟಿದ್ದು. ಯಾವುದೇ ರಾಜಕೀಯ ಪಕ್ಷದ ಸಿದ್ಧಾಂತದಲ್ಲಿ ರಾಜಕಾರಣಿಗಳ ವಯೋಮಿತಿಯನ್ನು ಗೊತ್ತುಪಡಿಸಿಲ್ಲ ಎನ್ನುವುದು ನಿಜವಾದರೂ, ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಅನಧಿಕೃತವಾಗಿ ಪಾಲಿಸಿಕೊಂಡು ಬಂದಿರುವ ವಯೋಮಿತಿಯನ್ನು ಅವರು ತಮಗೂಅನ್ವಯಿಸಿಕೊಳ್ಳುವರೇ ಎನ್ನುವುದು ಕುತೂಹಲಕಾರಿ ಸಂಗತಿ. ಹಾಗೆಯೇ ೭೫ ವಯಸ್ಸು ದಾಟಿದ ಮೇಲೆ ಬೇರೆಯವರಿಗೆ ಅವಕಾಶ ನೀಡಬೇಕೆಂದುಉಪದೇಶ ಮಾಡಿರುವ ಆರ್‌ಎಸ್‌ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ಈ ಮಾತನ್ನು ಸ್ವತಃ ಪಾಲಿಸುವರೇ ಎನ್ನುವುದನ್ನೂ ಎದುರು ನೋಡಬೇಕಾದ ದಿನಗಳಿಗಾಗಿ ಕಾಯಬೇಕಿದೆ.
” ಜನರ ಅಪೇಕ್ಷೆಯಂತೆ ರಾಜಕಾರಣಿಗಳಿಗೂ ನಿವೃತ್ತಿಯ ವಯಸ್ಸು ಮತ್ತು ಶೈಕ್ಷಣಿಕ ಅರ್ಹತೆಯನ್ನು ವಿಧಿಸುವುದು ಸೂಕ್ತ ಎನ್ನುವ ಮನಸ್ಸು ಈಗಿನ ಪೀಳಿಗೆಯದ್ದು. ವಿಶ್ವದ ಯಾವುದೇ ರಾಷ್ಟ್ರದಲ್ಲೂ ರಾಜಕಾರಣಿಗಳಿಗೆ ನಿವೃತ್ತಿ ವಯಸ್ಸನ್ನು ನಿಗದಿಪಡಿಸಿರುವ ಉದಾಹರಣೆಗಳು ಸಿಗುತ್ತಿಲ್ಲ.”
– ಶಿವಾಜಿ ಗಣೇಶನ್
ಮಂಡ್ಯ : ಫೆ.21, 22ರಂದು ನಡೆಯಲಿರುವ ಬೂದನೂರು ಉತ್ಸವ-2026ರ ಪ್ರಯುಕ್ತ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಮೂರು ದಿನಗಳ ಹೆಲಿ ಟೂರಿಸಂ…
ಮಂಡ್ಯ : ಕಳೆದ 2024ರಲ್ಲಿ ಬೂದನೂರು ಉತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗಿತ್ತು. ಸದರಿ ವರ್ಷವೂ ಸಹ ಅದ್ಧೂರಿಯಾಗಿ ಉತ್ಸವವನ್ನು ಆಚರಿಸಲಾಗುವುದು ಎಂದು…
ಮೈಸೂರು : ಚಲನಚಿತ್ರಗಳು, ಧಾರಾವಾಹಿಗಳು, ಟಿವಿ ಕಾರ್ಯಕ್ರಮಗಳು, ಜಾಹೀರಾತುಗಳು ಹಾಗೂ ಇತರ ವಾಣಿಜ್ಯ ಶ್ರವಣ-ದೃಶ್ಯ ಮಾಧ್ಯಮಗಳಲ್ಲಿ ಮಕ್ಕಳು (ಬಾಲ ಕಲಾವಿದರು)…
ಬೆಂಗಳೂರು : 2026-31ನೇ ಸಾಲಿನ ಗ್ರಾಮ ಪಂಚಾಯ್ತಿಗಳ ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಹಾಗೂ…
ಬೆಂಗಳೂರು : ಹಳ್ಳಿಯಿಂದ ದಿಲ್ಲಿಯೇ ಹೊರತು, ದಿಲ್ಲಿಯಿಂದ ಹಳ್ಳಿ ಅಲ್ಲ ಎಂದು ಪ್ರತಿಪಾದಿಸಿದ ಮಹಾತ್ಮಾ ಗಾಂಧೀಜಿಯವರು ಗ್ರಾಮ ಸ್ವರಾಜ್ಯದ ಕಲ್ಪನೆಗೆ…
ಕೊಳ್ಳೇಗಾಲ : ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಮದುವೆಯ ಆರತಕ್ಷತೆಗೆ ತೆರಳುತ್ತಿದ್ದ ವರನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಏಕಾಏಕಿ ದಾಳಿ…