ಅಂಕಣಗಳು

ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆ ಸರಿಪಡಿಸಬೇಕು

ಪ್ರೊ.ಆರ್.ಎಂ. ಚಿಂತಾಮಣಿ

೧೯೫೫ರಲ್ಲಿ ರಾಜ್ಯಗಳ ಪುನರ್ವಿಂಗಡಣೆ ಮತ್ತು ಭಾಷಾವಾರು ಪ್ರಾಂತ್ಯಗಳ ರಚನೆಯ ನಂತರ ಮುಂಬಯಿ ರಾಜ್ಯದಿಂದ ನಾಲ್ಕು ಜಿಲ್ಲೆಗಳು, ಹೈದರಾಬಾದ್ ನಿಜಾಮ ಆಡಳಿತದಿಂದ ಮೂರು ಮತ್ತು ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿದ್ದ ಎರಡು ಜಿಲ್ಲೆಗಳನ್ನು ಹಾಗೂ ಅಂದಿನ ಮೈಸೂರು ಅರಸರ ಆಳ್ವಿಕೆಯ ಪ್ರದೇಶಗಳನ್ನು ಸೇರಿಸಿ ಕನ್ನಡ ಮಾತನಾಡುವ ಮೈಸೂರು ರಾಜ್ಯವನ್ನು ರಚಿಸಿದ್ದು ಈಗ ಇತಿಹಾಸ. ನಂತರ ೧೯೭೩ರಲ್ಲಿ ಕರ್ನಾಟಕವೆಂದು ನಾಮಕರಣವಾಯಿತು ಆ ಮಾತು ಬೇರೆ.

ಅಂದಿನಿಂದ ಮತ್ತು ವಿಶೇಷವಾಗಿ ೧೯೯೧ರ ಆರ್ಥಿಕ ಸುಧಾರಣೆಗಳು ಜಾರಿಯಾದ ನಂತರ ರಾಜ್ಯವು ವೇಗವಾಗಿ ಬೆಳೆಯುತ್ತಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ರಾಜ್ಯದ ತಲಾ ಸರಾಸರಿ ಆದಾಯವು ೧೯೯೦-೯೧ರಲ್ಲಿ ರಾಷ್ಟ್ರೀಯ ಸರಾಸರಿ ತಲಾ ಆದಾಯಕ್ಕಿಂತ ಶೇ.೧೯ರಷ್ಟು ಕಡಿಮೆ ಇದ್ದದ್ದು ೨೦೨೨-೨೩ರ ಹೊತ್ತಿಗೆ ವೇಗವಾಗಿ ಬೆಳವಣಿಗೆ ಹೊಂದಿ ರಾಷ್ಟ್ರೀಯ ತಲಾ ಆದಾಯಕ್ಕಿಂತ ಶೇ.೮೦ರಷ್ಟು ಹೆಚ್ಚಿನ ಮಟ್ಟಕ್ಕೆ ಬಂದುದನ್ನು ದೊಡ್ಡ ಸಾಧನೆ ಎಂದೇ ಹೇಳಬೇಕು. ರಾಜ್ಯವು ಈಗ ದೇಶದ ಅತಿ ದೊಡ್ಡ ತಂತ್ರಜ್ಞಾನ ಅಭಿವೃದ್ಧಿಯ ಮತ್ತು ನಾವೀನ್ಯತೆಯ (Innovation) ಕೇಂದ್ರವಾಗಿ ಬೆಳೆದಿದೆ. ಬೆಂಗಳೂರನ್ನು ದೇಶದ ತಾಂತ್ರಿಕ – ವೈಜ್ಞಾನಿಕ ರಾಜಧಾನಿ ಎಂದು ಕರೆಯಲಾಗುತ್ತಿದೆ.

ಆದರೆ ರಾಜ್ಯದ ಎಲ್ಲ ಭಾಗಗಳೂ ಇದೇ ಮಟ್ಟದಲ್ಲಿ ಬೆಳೆದಿವೆಯೇ? ಎಂದು ಕೇಳಿದರೆ ಉತ್ತರ ನಕಾರಾತ್ಮಕವಾಗಿರುತ್ತದೆ. ಬೆಂಗಳೂರು, ಮಂಗಳೂರು ಜಿಲ್ಲೆಗಳು ಸೇರಿ ಕೆಲವು ಪ್ರದೇಶಗಳು ಅತಿ ವೇಗವಾಗಿ ಬೆಳೆದಿದ್ದರೆ ಇನ್ನು ಕೆಲವು ಪ್ರದೇಶಗಳು ತೀರಾ ಹಿಂದೆ ಉಳಿದಿರುವುದು ಕಂಡು ಬರುತ್ತದೆ. ಇದು ಪ್ರಾದೇಶಿಕ ಅಸಮಾನತೆಯಾದರೆ ಮಾನವಾಭಿವೃದ್ಧಿಯಲ್ಲಿ ಇನ್ನೂ ಗಂಭೀರ ಸಮಸ್ಯೆಗಳಿವೆ.

ಒಂದು ಉದಾಹರಣೆ ಕೊಡುವುದಾದರೆ ಹಿರಿಯ ಅರ್ಥ ಶಾಸಜ್ಞ ಮತ್ತು ರಾಜ್ಯದ ಅಸಮಾನತೆಗಳ ನಿವಾರಣೆ ಸಮಿತಿಯ ಅಧ್ಯಕ್ಷ ಡಾ.ಎಂ. ಗೋವಿಂದರಾವ್ ಅಧ್ಯಯನದಂತೆ ರಾಜ್ಯದ ಮೌಲ್ಯವರ್ಧಿತ ಹೆಚ್ಚುವರಿ ಆದಾಯಗಳಲ್ಲಿ ಶೇ.೫೦ರಷ್ಟು ಭಾಗ ಕೇವಲ ಬೆಂಗಳೂರು ಜಿಲ್ಲೆ ಮತ್ತು ಕರಾವಳಿ ಜಿಲ್ಲೆಗಳಾದ ಮಂಗಳೂರು ಮತ್ತು ಉಡುಪಿ ಈ ಮೂರು ಜಿಲ್ಲೆಗಳಿಗೆ ಬರುತ್ತದೆ. ಮತ್ತು ಅವರೇ ಹೇಳುವಂತೆ ತೂಕ ಕಡಿಮೆ ಇರುವ ಮಕ್ಕಳ ವಿಷಯದಲ್ಲಿ (ಆರೋಗ್ಯವಂತ ಮಕ್ಕಳ ತೂಕಕ್ಕಿಂತ ಕಡಿಮೆ ಇರುವ ಮಕ್ಕಳ ತೂಕ) ರಾಜ್ಯವು ೨೨ನೇ ಸ್ಥಾನದಲ್ಲಿದೆ. ಬೆಳವಣಿಗೆ ಕುಂಠಿತವಾಗಿರುವ ಮಕ್ಕಳ ವಿಷಯದಲ್ಲಿ ರಾಜ್ಯವು ೨೦ನೇ ಸ್ಥಾನದಲ್ಲಿದೆ, ಮತ್ತು ಹೈಸ್ಕೂಲು ಮಟ್ಟದಲ್ಲಿಯೇ ಶಾಲೆ ಬಿಡುವ ಮಕ್ಕಳ ಸಂಖ್ಯೆಯ ವಿಷಯದಲ್ಲಿ ೨೦ನೇ ಸ್ಥಾನದಲ್ಲಿದೆ. ಆರೋಗ್ಯ ಮತ್ತು ಶೈಕ್ಷಣಿಕ ಅಸಮಾನತೆ ವಿವರಿಸಲು ಇವಿಷ್ಟು ಗಂಭೀರವಾದ ಉದಾಹರಣೆಗಳು ಸಾಕಲ್ಲವೆ.

ಪ್ರಾದೇಶಿಕ ಅಸಮಾನತೆಗಳು: ಬೆಂಗಳೂರು ಮತ್ತು ಮೈಸೂರು ಅರಸರ ಕಾಲದಿಂದಲೂ ಬೆಳವಣಿಗೆ ಕಂಡಿರುವುದರಿಂದ ಈಗಲೂ ಬೆಳೆಯುತ್ತಿವೆ ಎಂದು ಹೇಳಬಹುದು. ಆದರೆ ಇಲ್ಲಿಯೂ ಕೇಂದ್ರ ಪ್ರದೇಶದಿಂದ ದೂರದ ಹಳ್ಳಿಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಕಡಿಮೆಯೇ. ಕೆಲವು ದೂರದ ಹಳ್ಳಿಗಳಲ್ಲಿ ತೀರ ಇತ್ತೀಚಿನ ದಶಕಗಳಲ್ಲಿ ಪ್ರಾಥಮಿಕ ಶಾಲೆಗಳು ಆರಂಭವಾಗಿರುವುದನ್ನು ಇಲ್ಲಿ ಗಮನಿಸಬಹುದು.

ಈಗ ಕಲ್ಯಾಣ ಕರ್ನಾಟಕವೆಂದು ಕರೆಯಲ್ಪಡುವ ನಾಲ್ಕು ಜಿಲ್ಲೆಗಳು ತೀರಾ ಹಿಂದುಳಿದಿವೆ ಎನ್ನುವುದಕ್ಕೆ ಸಂವಿಧಾನಬದ್ಧವಾಗಿಯೇ ವಿಶೇಷ ಅಭಿವೃದ್ಧಿ ಮಂಡಳಿ ರಚಿಸಿರುವುದೇ ಸಾಕ್ಷಿ. ನಿಜಾಮರ ಆಡಳಿತದ ಕಾಲದಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎನ್ನುವ ಕಾರಣದಿಂದಾಗಿ ಈ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಬಳ್ಳಾರಿಯ ವಿಷಯದಲ್ಲಿ ವಿಶೇಷವೇನಿಲ್ಲ. ಇದೇ ಗುಂಪಿಗೆ ಸೇರಿಸಬಹುದು. ವಿಭಜಿತ ಉಡುಪಿ ಜಿಲ್ಲೆಯೂ ಸೇರಿದಂತೆ ಮಂಗಳೂರು ಪ್ರದೇಶದ್ದೇ ಒಂದು ವಿಶೇಷತೆ. ಮದ್ರಾಸ್ ಪ್ರೆಸಿಡೆನ್ಸಿಯಲ್ಲಿದ್ದಾಗಲೂ ಕರಾವಳಿ ಮಾರ್ಗವಾಗಿ ಮುಂಬಯಿಯೊಡನೆ ಸಂಪರ್ಕ ಹೆಚ್ಚು . ಇದಕ್ಕೆ ಪೂರಕವಾಗಿ ಎನ್ನುವಂತೆ ಒಂದು ಹಂತದಲ್ಲಿ ಮಂಗಳೂರು- ಮುಂಬಯಿ ನಡುವೆ ತಿಂಗಳಿಗೆ ೫೦೦ ಬಸ್ಸುಗಳು ಓಡಾಡುತ್ತಿದ್ದವು. ಉಡುಪಿ, ಮಂಗಳೂರು ಜನರು ಅನಿವಾರ್ಯವೋ ಅವಕಾಶ ಬಳಸಿಕೊಳ್ಳುವುದೋ ಎನ್ನುವಂತೆ ಉದ್ಯಮ ಶೀಲರು ದೇಶಾದ್ಯಂತ (ಹೊರಗೂ ಸೇರಿ ), ಉಡುಪಿ ಹೋಟೆಲ್ ಸೇರಿ ‘ಉಡುಪಿ ಹೋಟೆಲ್’ ಉದ್ಯಮದಲ್ಲಿ ತೊಡಗಿಕೊಂಡು ಹೆಸರು ಮಾಡಿದವರು. ದೇಶದ ನಾಲ್ಕೈದು ಅತಿ ದೊಡ್ಡ ಬ್ಯಾಂಕುಗಳು (ಖಾಸಗಿ ಮತ್ತು ರಾಷ್ಟ್ರೀಕೃತ ಸೇರಿ) ಹುಟ್ಟಿದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ . ಮಹಿಳೆಯರಿಗೆ ಹೆಚ್ಚು ಉದ್ಯೋಗಾವಕಾಶ ಕಲ್ಪಿಸುವಲ್ಲಿ ಈ ಬ್ಯಾಂಕುಗಳ ಪಾತ್ರ ಮಹತ್ವದ್ದು. ಹೊರಗೆ ಹೋಟೆಲ್ ತೆರೆದ ಉದ್ಯಮಿಗಳು ಇಲ್ಲಿಯವರೆಗೆ ಮತ್ತು ತಾವಿದ್ದಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಹೀಗಾಗಿ ಈ ಪ್ರದೇಶ ತಕ್ಕ ಮಟ್ಟಿಗೆ ಪ್ರಗತಿ ಸಾಧಿಸಿ ಮುಂದುವರಿಯುತ್ತದೆ. ಸರ್ಕಾರದಿಂದ ಸಾಮಾನ್ಯ ಉತ್ತೇಜನ ಬೇಕಷ್ಟೇ.

ವಿಶೇಷವೆಂದರೆ ದಕ್ಷಿಣ ಕನ್ನಡ ಜಿಲ್ಲೆಯ ಪಕ್ಕದಲ್ಲಿಯೇ ಇರುವ ಇನ್ನೊಂದು ಕರಾವಳಿ ಜಿಲ್ಲೆ ಉತ್ತರ ಕನ್ನಡವು(ಕಾರವಾರ ಜಿಲ್ಲೆ) ಇದನ್ನು ನಿರೀಕ್ಷಿತ ಮಟ್ಟದಲ್ಲಿ ಅನುಸರಿಸದೇ ಮುಂಬಯಿ ಕರ್ನಾಟಕ ಭಾಗ (ಕಿತ್ತೂರು ಕರ್ನಾಟಕ) ದೊಂದಿಗೇ ಉಳಿದುಕೊಂಡಿದೆ. ಕಿತ್ತೂರು ಕರ್ನಾಟಕದ ನಾಲ್ಕು ಜಿಲ್ಲೆಗಳು ಮುಂಬಯಿ ಪ್ರಾಂತ್ಯದಲ್ಲಿದ್ದಾಗ ತಕ್ಕ ಮಟ್ಟಿಗೆ ಬೆಳವಣಿಗೆ ಸಾಧಿಸಿವೆಯಾದರೂ ನಿರೀಕ್ಷಿತ ಮಟ್ಟದಲ್ಲಿ ಉತ್ತೇಜನ ಸಿಕ್ಕಿರಲಿಲ್ಲ ಎನ್ನುವುದೂ ಅಷ್ಟೇ ಸತ್ಯ. ವಿಶಾಲ ಕರ್ನಾಟಕವಾದ ನಂತರ ಕೈಗಾರಿಕಾ ಅಭಿವೃದ್ಧಿಗಾಗಿ ಹಲವು ಯೋಜನೆಗಳು ಇಲ್ಲಿ ಜಾರಿಯಾಗಿವೆ.

ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಹೆಚ್ಚು ಉದ್ದಿಮೆಗಳು ಬಂದಿದ್ದು, ವಿಜಯಪುರ ಮತ್ತು ಕಾರವಾರ ಹಾಗೂ ಬಾಗಲಕೋಟೆ ಈ ಬೆಳೆದದ್ದು ಸಾಲದೇ ಇನ್ನಷ್ಟು ಬರಬೇಕಾಗಿದೆ. ಧಾರವಾಡ, ಹಾವೇರಿಗಳೂ ಅಷ್ಟೇ. ಕೃಷಿ ಏಳಿಗೆಗಾಗಿ ಹೊಸ ಅಣೆಕಟ್ಟೆಗಳು ನಿರ್ಮಾಣವಾಗಿದ್ದು, ನೀರಾವರಿ ಭೂಮಿ ಹೆಚ್ಚಾಗಿದೆ. ಈ ವಿಷಯದಲ್ಲಿ ಇನ್ನಷ್ಟು ಪ್ರಯತ್ನಗಳು ನಡೆಯಬೇಕಾಗಿದೆ. ಶಿಕ್ಷಣ ಮತ್ತು ಆರೋಗ್ಯ ಸೇವೆಯಲ್ಲಿ ಮೊದಲಿದ್ದ ತೀವ್ರ ಅಸಮಾನತೆ ಈಗಿಲ್ಲವಾದರೂ ಆಧುನಿಕತೆಯನ್ನು ಹಳ್ಳಿಗಳವರೆಗೆ ತಲುಪಿಸುವ ಕೆಲಸ ದೊಡ್ಡ ಮಟ್ಟದಲ್ಲಿ ನಡೆಯಬೇಕಾಗಿದೆ.

ಉತ್ತರ ಕರ್ನಾಟಕದವರ ಭಾವನಾತ್ಮಕವೆನ್ನಬಹುದಾದ ದೂರೊಂದಿದೆ. ತಾವು ರಾಜಧಾನಿಯಿಂದ ದೂರದಲ್ಲಿರುವುದರಿಂದ ಸರ್ಕಾರದ ಯೋಜನೆಗಳು ತಮ್ಮ ವರೆಗೆ ಬರುವ ಹೊತ್ತಿಗೆ ನಡುವೆ ಸೋರಿ ಹೋಗಿ ಕಡಿಮೆ ಹಣ ಉಳಿಯುತ್ತದೆ ಎಂದು ಕೆಲವರು ದೂರುತ್ತಾರೆ. ಇದರಲ್ಲಿ ಸತ್ಯಾಂಶ ಇಲ್ಲದಿರಬಹುದು. ಬೆಂಗಳೂರಿನಿಂದ ೨೦೦ ಕಿ.ಮೀ. ದೂರದಲ್ಲಿರುವಚಾಮರಾಜನಗರ ಜಿಲ್ಲೆ ಹಿಂದುಳಿದಿದೆಯಲ್ಲ, ಅದಕ್ಕೇನು ಹೇಳ ಬೇಕು? ಸರ್ಕಾರ ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳಿಗೆ ಹೆಚ್ಚು ಉತ್ತೇಜನ ಕೊಡಬೇಕಲ್ಲದೆ ಆಯಾ ತಾಲ್ಲೂಕುಗಳ ಸಂಪನ್ಮೂಲಗಳನ್ನು ಆಧರಿಸಿ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿಯೂ ಇವುಗಳನ್ನು ಸ್ಥಾಪಿಸಿ ಬೆಳೆಸಲು ಉತ್ತೇಜಕ ವಾತಾವರಣ ನಿರ್ಮಿಸಬೇಕು. ಅಂದರೆ ಕೃಷಿಕರ ಮತ್ತು ಹಳ್ಳಿಗರ ಶಿಕ್ಷಣ ಹೊಂದಿದ ಮಕ್ಕಳು ಕೃಷಿಯಾಧಾರಿತ ಉದ್ದಿಮೆಗಳನ್ನು ಸ್ಥಾಪಿಸಿ ಸ್ವಯಂ ಉದ್ಯೋಗಿಗಳು ಮತ್ತು ಉದ್ಯೋಗದಾತರಾಗಬಹುದು. ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ಸರ್ಕಾರ ಸಂಶೋಧನೆ ಮತ್ತು ಆರ್ಥಿಕ ಕ್ರಮಗಳನ್ನು ಕೈಗೊಂಡರೆ ರೈತರ ಆರ್ಥಿಕ ಸ್ಥಿತಿ ಸುಧಾರಿಸಿ ಆರ್ಥಿಕ ಅಸಮಾನತೆ ತಾನೇ ಕಡಿಮೆಯಾಗುತ್ತದೆ.

” ಕಲ್ಯಾಣ ಕರ್ನಾಟಕವೆಂದು ಕರೆಯಲ್ಪಡುವ ನಾಲ್ಕು ಜಿಲ್ಲೆಗಳು ತೀರಾ ಹಿಂದುಳಿವೆ ಎನ್ನುವುದಕ್ಕೆ ಸಂವಿಧಾನಬದ್ಧವಾಗಿಯೇ ವಿಶೇಷ ಅಭಿವೃದ್ಧಿ ಮಂಡಳಿ ರಚಿಸಿರುವುದೇ ಸಾಕ್ಷಿ. ನಿಜಾಮರ ಆಡಳಿತದ ಕಾಲದಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎನ್ನುವ ಕಾರಣದಿಂದಾಗಿ ಈ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡಬೇಕು.”

ಆಂದೋಲನ ಡೆಸ್ಕ್

Recent Posts

ಬ್ರೇಕ್ ಫೇಲ್ ಆಗಿದ್ರು ರಸ್ತೆಗಿಳಿದ ಕೆಎಸ್‌ಆರ್‌ಟಿಸಿ ಬಸ್: ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಮೈಸೂರು: ಬ್ರೇಕ್ ಫೇಲ್ ಆಗಿದ್ರು ರಸ್ತೆಗಿಳಿದ ಕೆಎಸ್‌ಆರ್‌ಟಿಸಿ ಬಸ್ಸೊಂದು ಏಕಾಏಕಿ ಮುಂದೆ ಚಲಿಸುತ್ತಿದ್ದ ಮತ್ತೊಂದು ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿರುವ…

7 hours ago

ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ: ಮಹದೇಶ್ವರನಿಗೆ ಎಣ್ಣೆಮಜ್ಜನ ಸೇವೆ, ವಿಶೇಷ ಪೂಜೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ರಾಜ್ಯದ ಪ್ರಸಿದ್ದ ಯಾತ್ರಾ ಸ್ಥಳವಾದ ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ…

11 hours ago

ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ನಂಜುಂಡೇಶ್ವರ ಸನ್ನಿಧಿಗೆ ಹರಿದು ಬಂದ ಭಕ್ತಸಾಗರ

ನಂಜನಗೂಡು: ಇಂದು ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ಸನ್ನಿಧಿಗೆ ಭಕ್ತಸಾಗರವೇ ಹರಿದುಬಂದಿದೆ. ಇಂದು ಬೆಳಿಗ್ಗೆಯಿಂದಲೂ ಸಾವಿರಾರು…

13 hours ago

ಸುಂಟಿಕೊಪ್ಪ: ನೂತನ ಪೊಲೀಸ್‌ ವಸತಿ ಗೃಹ ಉದ್ಘಾಟಿಸಿದ ಸಚಿವ ಪರಮೇಶ್ವರ್‌

ಸುಂಟಿಕೊಪ್ಪ: ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಅಭಿವೃದ್ಧಿ ನಿಗಮ ನಿಯಮಿತದಿಂದ ಸುಂಟಿಕೊಪ್ಪದಲ್ಲಿ 3.64 ಕೋಟಿ ರೂ‌ ವೆಚ್ಚದಲ್ಲಿ…

13 hours ago

ನಂಜುಂಡೇಶ್ವರನ ದೇವಸ್ಥಾನದಲ್ಲಿ ಇನ್ಮುಂದೆ ದಿನ 24 ಗಂಟೆಯೂ ಪ್ರಸಾದ ವಿತರಣೆ

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರ ದೇವಾಲಯದಲ್ಲಿ ಇನ್ನು ಮುಂದೆ ದಿನದ 24 ಗಂಟೆಯೂ ಪ್ರಸಾದ ವಿತರಣೆ ಮಾಡಲಾಗುತ್ತದೆ. ಮಧ್ಯಾಹ್ನದ…

13 hours ago

ಗುಂಡಾಲ್ ಜಲಾಶಯದಲ್ಲಿ ಹುಲಿ ಮೃತ ದೇಹ ಪತ್ತೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ಜಲಾಶಯದಲ್ಲಿ ನೀರಿನಲ್ಲಿ ಬೃಹತ್ ಗಾತ್ರದ…

13 hours ago