ಅಂಕಣಗಳು

ರಾಜ್ಯಗಳ ಸಾರ್ವಭೌಮತ್ವದ ಮನ್ನಣೆ: ಕೇಂದ್ರಕ್ಕೆ ತಮಿಳುನಾಡು ಸಡ್ಡು

  • ದೆಹಲಿ ಕಣ್ಣೋಟ
    ಶಿವಾಜಿ ಗಣೇಶನ್

ರಾಜ್ಯ ಸರ್ಕಾಗಳು ತನ್ನ ತಾಳಕ್ಕೆ ತಕ್ಕಂತೆ ಕುಣಿಯಬೇಕು ಎನ್ನುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ರಾಜ್ಯಗಳು ತೊಡೆ ತಟ್ಟಿ ನಿಂತಿವೆ. ವಾಸ್ತವವಾಗಿ ಈ ಅಖಾಡಕ್ಕೆ ಅಕ್ಷರಶಃ ಇಳಿದಿರುವುದು ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು.

ದಕ್ಷಿಣ ರಾಜ್ಯಗಳಲ್ಲಿ ತಮಿಳುನಾಡು ತನ್ನದೇ ಆದ ವೈಶಿಷ್ಟ್ಯತೆಯನ್ನು ಕಾಪಾಡಿ ಕೊಂಡು ಬಂದಿದೆ. ತನ್ನ ನೆಲದ ಭಾಷೆ, ತಮಿಳು ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ವಿಶೇಷವಾಗಿ ಕೇಂದ್ರ ಸರ್ಕಾರ ದಬ್ಬಾಳಿಕೆ ಮಾಡುವ ಯತ್ನ ಮಾಡಿದಾಗಲೆಲ್ಲ ಗರ್ಜಿಸಿದೆ. ಈ ದನಿಗೆ ಅಲ್ಲಿನ ಜನರ ಒತ್ತಾಸೆಯು ಸರ್ಕಾರಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಡುವ ಶಕ್ತಿಯನ್ನು ತುಂಬಿದೆ.

ಕಾಂಗ್ರೆಸ್ಸಿನ ಅಗ್ರಗಣ್ಯ ನಾಯಕಿ ಇಂದಿರಾ ಗಾಂಧಿ ಅವರ ಹತ್ಯೆಯಾದ ನಂತರ ಅನುಕಂಪದ ಅಲೆಯಲ್ಲಿ ರಾಜೀವ್ ಗಾಂಧಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. ಆ ಅವಧಿ ಮುಗಿದ ಮೇಲೆ ಕೇಂದ್ರ ಸರ್ಕಾರದಲ್ಲಿ ಸಮ್ಮಿಶ್ರ ಸರ್ಕಾರಗಳ ಯುಗ ಆರಂಭವಾಯಿತು. ಮಾಜಿ ಪ್ರಧಾನಿಗಳಾದ ಚಂದ್ರಶೇಖರ್, ವಿಶ್ವನಾಥ ಪ್ರತಾಪ್ ಸಿಂಗ್, ಪಿ.ವಿ. ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ ಆಡಳಿತದಲ್ಲಿ ಎಂ. ಕರುಣಾನಿಧಿ ನೇತೃತ್ವದ ಡಿಎಂಕೆ ಮತ್ತು ಜಯಲಲಿತಾ ನೇತೃತ್ವದ ಎಐಎಡಿಎಂಕೆ ಅಂದಿನ ರಾಜಕೀಯ ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ಬಂದಿದ್ದು, ದ್ರಾವಿಡ ನಾಡಿನ ಈ ಪಕ್ಷಗಳ ಸರ್ಕಾರಗಳು ಕೇಂದ್ರದಿಂದ ಸಿಂಹಪಾಲು ಪಡೆದಿವೆ.

ಈ ಅವಧಿಯಲ್ಲಿ ತಮಿಳುನಾಡು ಅಭಿವೃದ್ಧಿ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ಅನುದಾನ ಪಡೆದು ರಾಜ್ಯದ ಬೆಳವಣಿಗೆಯನ್ನು ಕಂಡಿದೆ. ಆದರೆ 2014ರ ನಂತರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತವು ಅನುಸರಿಸಿಕೊಂಡು ಬಂದ ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಸತ್ತಾತ್ಮಕ ನೀತಿಯ ವಿರುದ್ಧ ಸಡ್ಡುಹೊಡೆದು ನಿಂತಿದೆ. ವಾಸ್ತವವಾಗಿ ಡಾ.ಮನಮೋಹನ್‌ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಭಾಗಿಯಾಗಿದ್ದರಿಂದ ಡಿಎಂಕೆ ಪಕ್ಷವು ಮೋದಿ ಆಡಳಿತದ ವಿರುದ್ಧದ ತನ್ನ ನಿಲುವನ್ನು ಎಷ್ಟೇ ಕಿರುಕುಳದ ನಡುವೆಯೂ ಬದಲಾಯಿಸಿಕೊಳ್ಳಲಿಲ್ಲ.

ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳ ಆಡಳಿತವನ್ನು ಮಣಿಸಬೇಕೆನ್ನುವ ಹಠದಿಂದ ಕಾಂಗ್ರೆಸ್ಸಿನಿಂದ ಸಿಡಿದು ಬಂದು ತನ್ನದೇ ಆದ ತೃಣಮೂಲ ಕಾಂಗ್ರೆಸ್ ಪಕ್ಷ ಕಟ್ಟಿಕೊಂಡು ಮಮತಾ ಬ್ಯಾನರ್ಜಿ ಚುನಾವಣೆಯಲ್ಲಿ ಸುಮಾರು ಮೂರು ದಶಕಗಳ ಕಾಲದ ಎಡಪಕ್ಷಗಳ ಆಡಳಿತವನ್ನು ಕೊನೆಗಾಣಿಸಿದ್ದು ಇತಿಹಾಸ. ಆಗ ಎಡಪಕ್ಷಗಳನ್ನು ಮಣಿಸಲು ಮೃದು ಹಿಂದುತ್ವದ ನೀತಿಯನ್ನು ಹೊಂದಿದ್ದ ಮುಖ್ಯವಾಗಿ ಎಲ್ಲ ಪಕ್ಷಗಳ ನಾಯಕರ ಜೊತೆ ಸಹಜವಾದ ಮನುಷ್ಯ ಸಂಬಂಧ ಹೊಂದಿದ್ದ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಪಾಲುದಾರರಾಗಿ ಮಮತಾ ಬ್ಯಾನರ್ಜಿ ರಾಜಕೀಯ ಶಕ್ತಿ ಗಳಿಸಿಕೊಂಡರು.

ಆನಂತರ ಮಮತಾ ಬ್ಯಾನರ್ಜಿ ಬಿಜೆಪಿ ನೇತೃತ್ವದ ಎನ್‌ಡಿಎ ಸ್ನೇಹ ತೊರೆದು ತನ್ನದೇ ಆದ ರಾಜಕೀಯ ಶಕ್ತಿಯನ್ನು ಬೆಳೆಸಿಕೊಂಡು ಈಗಿನ ಬಿಜೆಪಿ ವಿರುದ್ಧ ಬೀದಿ ಕಾಳಗಕ್ಕಿಳಿದಿದ್ದಾರೆ. ಪಶ್ಚಿಮ ಬಂಗಾಳ ಸುಮಾರು ಮೂರು ದಶಕಗಳಿಂದ ಬೀದಿ ಕಾಳಗದ ರಾಜಕಾರಣಕ್ಕೆ ಹೆಸರುವಾಸಿ ಹೀಗಾಗಿ ಮಮತಾ ಬ್ಯಾನರ್ಜಿಯ ರಾಜಕೀಯ ಶಕ್ತಿಯನ್ನು ಕುಂದಿಸಲು ಬಿಜೆಪಿ ಹರಸಾಹಸ ಮಾಡುತ್ತಲೇ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಇಂದು ನೆಮ್ಮದಿ ಎನ್ನುವುದು ಹಾಳಾಗಿದೆ. ನಿತ್ಯವೂ ಟಿಎಂಸಿ ಮತ್ತು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ನಡುವೆ ಹೊಡೆದಾಟ, ದ್ವೇಷದ ರಾಜಕಾರಣ ಮುಂದುವರಿದಿದೆ. ಆದರೆ ಈಗ ತಮಿಳುನಾಡಿನ ಆಡಳಿತದ ಕಾರ್ಯವೈಖರಿಯ ಬಗೆಗೆ ಬಿಜೆಪಿಯ ಕೇಂದ್ರ ಸರ್ಕಾರ ಮೌನಕ್ಕೆ ಶರಣಾ ದಂತಿದೆ. ಹಿಂದಿ ಮತ್ತು ಹಿಂದುತ್ವದ ಪ್ರತಿಪಾದಕವಾಗಿರುವ ಬಿಜೆಪಿಯ ಕೇಂದ್ರ ಸರ್ಕಾರ ಜಾರಿಗೆ ತಂದ ನೀಟ್ ಪರೀಕ್ಷೆ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಡಿಎಂಕೆ ಸರ್ಕಾರ ಹೋರಾಟ ಆರಂಭಿಸಿದೆ. ಡಿಎಂಕೆ ಆಡಳಿತವು ಪ್ರತಿ ವಾರವೂ ಒಂದಲ್ಲ ಒಂದು ಸವಾಲನ್ನು ಕೇಂದ್ರದ ವಿಶೇಷವಾಗಿ ಬಿಜೆಪಿಯ ರಾಜಕೀಯ ಚಾಣಕ್ಯ ಎಂದೇ ಖ್ಯಾತಿಯಾಗಿರುವ ಗೃಹ ಸಚಿವ ಅಮಿತ್ ಶಾ ವಿರುದ್ಧ ಒಡ್ಡುತ್ತಲೇ ಸಾಗಿದೆ.

ಸುಪ್ರೀಂ ಕೋರ್ಟ್‌ ನೀಡಿದ ಬಲ: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತನ್ನ ತೆರಿಗೆಯ ನ್ಯಾಯಬದ್ದ ಪಾಲು, ಮಾನವ ಸಂಪನ್ಮೂಲ ಇಲಾಖೆಯು ಎನ್ ಇಪಿ ಜಾರಿ ಮಾಡಿಲ್ಲ ಎಂದು ಮೂರು ವರ್ಷದಿಂದ ಬಿಡಿಗಾಸೂ ನೀಡದ ಅಸಹಕಾರ, ರಾಜ್ಯಪಾಲರಿಂದ ಹಲವಾರು ಕಿರುಕುಳ, ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಅಂಗೀಕಾರ ನೀಡದೆ ವರ್ಷಾನುಗಟ್ಟಲೆ ಹಿಡಿದಿಟ್ಟುಕೊಂಡಿದ್ದ ಕ್ರಮದ ವಿರುದ್ಧ ಹೋರಾಟ ಮುಂದುವರಿಸಿದೆ. ರಾಜ್ಯಪಾಲರು ವರ್ಷಾನುಗಟ್ಟಲೆ ರಾಜ್ಯ ಸರ್ಕಾರದ ಮಸೂದೆಗಳಿಗೆ ಒಪ್ಪಿಗೆ ನೀಡದ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನಿಂದ ಈಗ ಸ್ಟಾಲಿನ್ ಅವರಿಗೆ ಕಾನೂನಿನ ಬಲ ಸಿಕ್ಕಂತಾಗಿದೆ.

ಸಕಾರಣಗಳಿಲ್ಲದೆ ಸಹಿಹಾಕದೆ ವಿಧಾನಸಭೆ ಅಂಗೀಕರಿಸಿದ ಮಸೂದೆ ಗಳನ್ನು ಹಿಡಿದಿಟ್ಟುಕೊಂಡಿದ್ದ ರಾಜ್ಯಪಾಲ ಆರ್.ಎನ್.ರವಿ ಅವರ ಕ್ರಮವನ್ನು ಸುಪ್ರೀಂ ಕೋರ್ಟ್ ಕಟುವಾಗಿ ಟೀಕಿಸಿ ರಾಜ್ಯಪಾಲರ ಸ್ಟೇಚ್ಛಾಚಾರದ ಕ್ರಮಗಳಿಗೆ ಕಡಿವಾಣ ಹಾಕಿದೆ. ರಾಜ್ಯ ಸರ್ಕಾರ ಕಳುಹಿಸಿದ ಮಸೂದೆ ಮತ್ತು ಇತರೆ ಆದೇಶಗಳನ್ನು ಒಂದು ತಿಂಗಳ ಒಳಗಾಗಿ ತನ್ನ ಅಂಗೀಕಾರ ನೀಡುವ ಅಥವಾ ಸಕಾರಣಗಳಿಲ್ಲದೆ ತಿರಸ್ಕರಿಸುವ ಕ್ರಮವನ್ನು ಕೈಗೊಳ್ಳಬೇಕು.

ಸಕಾರಣಗಳಿಲ್ಲದೆ ತಿಂಗಳು ಮತ್ತು ವರ್ಷಗಟ್ಟಲೆ ತನ್ನ ಒಪ್ಪಿಗೆ ನೀಡದೆ ಸರ್ಕಾರದ ಮಸೂದೆಗಳನ್ನು ಹಿಡಿದಿಟ್ಟುಕೊಳ್ಳುವ ಹಾಗಿಲ್ಲ ಎನ್ನುವ ಐತಿಹಾಸಿಕ ತೀರ್ಪಿನಿಂದ ಈಗ ಡಿಎಂಕೆ ಸರ್ಕಾರಕ್ಕೆ ಎಲ್ಲಿಲ್ಲದ ಬಲ ಬಂದಿದೆ. ಅದೇ ರೀತಿ ರಾಜ್ಯಪಾಲರ ಮೂಲಕ ಬಿಜೆಪಿಯೇತರ ರಾಜ್ಯ ಸರ್ಕಾರಗಳನ್ನು ಮನಸ್ಸಿಗೆ ಬಂದಂತೆ ಆಟ ಆಡಿಸುತ್ತಿದ್ದ ಬಿಜೆಪಿ ನೇತೃತ್ವದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಪರೋಕ್ಷವಾಗಿ ಕಪಾಳಮೋಕ್ಷ ಮಾಡಿದಂತಾಗಿದೆ.

ನ್ಯಾಯಮೂರ್ತಿಗಳಾದ ಜೆ.ಪಿ.ಪರ್ದಿವಾಲ ಮತ್ತು ಆರ್. ಮಹಾದೇವನ್ ನೇತೃತ್ವದ ನ್ಯಾಯಪೀಠವು ತನ್ನ 415 ಪುಟಗಳ ತೀರ್ಪಿನಲ್ಲಿ ರಾಜ್ಯಪಾಲರ ಪಾತ್ರದ ಬಗೆಗೆ ಸ್ಪಷ್ಟವಾಗಿ ಹೇಳುತ್ತಾ 1949ರಲ್ಲಿ ಸಂವಿಧಾನ ಕರಡು ಸಭೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ್ದ ಹೇಳಿಕೆಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

‘ನಾವೆಷ್ಟೇ ಒಳ್ಳೆಯ ಸಂವಿಧಾನ ನೀಡಿದರೂ ಅದನ್ನು ಕಾರ್ಯಗತಗೊಳಿಸುವ ವ್ಯಕ್ತಿಯನ್ನು ಅವಲಂಬಿಸಿರುತ್ತದೆ. ನ್ಯಾಯಬದ್ಧವಾಗಿ ಮತ್ತು ಒಳ್ಳೆಯ ವ್ಯಕ್ತಿಯ ಕೈಯಲ್ಲಿ ಸಂವಿಧಾನವಿದ್ದರೆ ಅದು ಒಳ್ಳೆಯ ಸಂವಿಧಾನವಾಗಿರುತ್ತದೆ. ಕೆಟ್ಟ ವ್ಯಕ್ತಿಯ ಕೈಯಲ್ಲಿದ್ದರೆ ಎಷ್ಟೇ ಉತ್ತಮವಾದ ಸಂವಿಧಾನವಾಗಿದ್ದರೂ ಅದು ಕೆಟ್ಟದಾಗುತ್ತದೆ’ ಎಂಬ ಹೇಳಿಕೆಯನ್ನು ಈ ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.

ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಹಿಡಿದಿಟ್ಟುಕೊಂಡಿದ್ದ ಹತ್ತು ಮಸೂದೆಗಳನ್ನು ರಾಜ್ಯಪಾಲರ ಸಹಿ ಇಲ್ಲದೆ ಸ್ಟಾಲಿನ್ ಸರ್ಕಾರ ಅಧಿಕೃತ ಆದೇಶ ಹೊರಡಿಸುವ ಮೂಲಕ ಜಾರಿಗೆ ತಂದಿದೆ.

ಆಯೋಗ ರಚನೆ: ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರ ಅಸಹಕಾರದಿಂದ ರೋಸಿಹೋಗಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಈಗ ಕೇಂದ್ರದ ವಿರುದ್ಧ ಅಕ್ಷರಶಃ ಕಾನೂನು ಹೋರಾಟಕ್ಕಿಳಿದಿದ್ದಾರೆ. ರಾಜ್ಯ ಸರ್ಕಾರದ ಸ್ವಾಯತ್ತತೆ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಎತ್ತಿಹಿಡಿಯಲು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ನೇತೃತ್ವದಲ್ಲಿ ಮೂವರ ಉನ್ನತ ಸಮಿತಿಯೊಂದನ್ನು ಕಳೆದ ವಾರ ವಿಧಾನಸಭೆಯಲ್ಲಿ ಕಾನೂನು 110ರ ಪ್ರಕಾರ ಸ್ವಯಂಹೇಳಿಕೆ ಮೂಲಕ ಪ್ರಕಟಿಸಿ ಕೇಂದ್ರ ಸರ್ಕಾರ ಬೆಚ್ಚಿಬೀಳುವಂತೆ ಮಾಡಿದ್ದಾರೆ. ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರಲ್ಲದೆ ನಿವೃತ್ತ ಐಎಎಸ್‌ ಅಧಿಕಾರಿ ಹಾಗೂ ಇಂಡಿಯನ್ ಮೆರಿಟೈಂ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಕೆ.ಅಶೋಕ ವರ್ಧನ್ ಶೆಟ್ಟಿ ಮತ್ತು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ನಾಗನಾಥನ್ ಈ ಉನ್ನತ ಅಧ್ಯಯನ ಸಮಿತಿಯಲ್ಲಿದ್ದಾರೆ.

ರಾಜ್ಯ ಸರ್ಕಾರ ತನ್ನ ರಾಜ್ಯದ ಸ್ವಾಯತ್ತತೆ ಮತ್ತು ಹಕ್ಕುಗಳನ್ನು ಕಾಪಾಡಿಕೊಳ್ಳಲು ಈ ಸಮಿತಿ ನೀಡುವ ವರದಿಯು ಕೇಂದ್ರ ಸರ್ಕಾರದ ವಿರುದ್ಧ ನಡೆಸುವ ಹೋರಾಟಕ್ಕೆ ಸಹಾಯವಾಗಲಿದೆ. ಆದರೆ ಈ ಸಮಿತಿಯು ಮಾಡುವ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಒಪ್ಪುವ ಸಾಧ್ಯತೆಗಳಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಇರಬೇಕಾದ ಸಂಬಂಧ ಕುರಿತಂತೆ ಕೇಂದ್ರ ಸರ್ಕಾರವು 1969ರಲ್ಲಿ ರಾಜಮನ್ನಾರ್ ಸಮಿತಿಯನ್ನು ರಚಿಸಿತ್ತು. 1983ರಲ್ಲಿ ನ್ಯಾಯಮೂರ್ತಿ ಆರ್.ಎಸ್.ಸರ್ಕಾರಿಯಾ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿತ್ತು. ಈ ಆಯೋಗವು 1987ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. 2007ರಲ್ಲಿ ಡಾ. ಮನಮೋಹನ್ ಸಿಂಗ್ ಸರ್ಕಾರವು ಬದಲಾದ ಪರಿಸ್ಥಿತಿಗೆ ತಕ್ಕಂತೆ ಸುಧಾರಣೆ ತರಲು ಎಂ.ಎಂ. ಪೂಂಚಿ ನೇತೃತ್ವದ ಆಯೋಗವನ್ನು ರಚಿಸಿತ್ತು. ಈ ಎಲ್ಲ ಆಯೋಗಗಳು ಕೇಂದ್ರ ಮತ್ತು ರಾಜ್ಯ ಸರ್ಕಾಗಳ ನಡುವೆ ಆಡಳಿತಾತ್ಮಕವಾಗಿ ಇರಬೇಕಾದ ಹತ್ತಾರು ಕ್ರಮಗಳನ್ನು, ರಾಜ್ಯಪಾಲರ ಪಾತ್ರ, ಹಣಕಾಸು ಹಂಚಿಕೆ, ಅಂತರ್‌ ರಾಜ್ಯ ಮಂಡಳಿಯ ಸ್ಥಾಪನೆ ಹೀಗೆ ಹತ್ತಾರು ಶಿಫಾರಸುಗಳನ್ನು ಮಾಡಿದ್ದವು.

ಈ ಆಯೋಗಗಳ ಬಹುತೇಕ ಶಿಫಾರಸುಗಳನ್ನು ಅಂದಂದಿನ ಸರ್ಕಾರಗಳು ಜಾರಿಗೆ ತಂದಿವೆ. ಆದರೆ ರಾಜಕೀಯ ಕಾರಣಗಳಿಗೆ ಈ ಆಯೋಗಗಳ ಶಿಫಾರಸು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಪಕ್ಷಗಳ ಸಿದ್ಧಾಂತ ಮತ್ತು ಅನುಕೂಲಸಿಂಧು ರಾಜಕೀಯಕ್ಕೆ ದುರ್ಬಳಕೆ ಆಗುತ್ತಿರುವುದು ನಿರಂತರವಾಗಿ ನಡೆದು ಬಂದಿರುವುದು ವಿಪರ್ಯಾಸ. ಈ ದಿಕ್ಕಿನಲ್ಲಿ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಯಾವುದೇ ಆಯೋಗ ಯಾವುದೇ ಸಮಿತಿಗಳ ಸಭೆಯನ್ನು ಮತ್ತು ಸಮಿತಿಗಳ ಶಿಫಾರಸುಗಳಿಗೆ ಕಿಮ್ಮತ್ತಿಲ್ಲ ಎನ್ನುವುದು ಹಲವು ಕರೆದು ಮುಖಾಮುಖಿಯಾಗಿ ಸಮಸ್ಯೆಗಳನ್ನು ಚರ್ಚಿಸುವ ವ್ಯವಧಾನ ಮತ್ತು ಸಾಂವಿಧಾನಿಕ ಕ್ರಮಗಳು ಈಗ ಹಳ್ಳಹಿಡಿದಿವೆ.

ಬಿಜೆಪಿಗೆ ಮುಖಭಂಗ: ಬಿಜೆಪಿಯ ಚುನಾವಣಾ ತಂತ್ರಗಾರಿಕೆ ಹೆಣೆಯುವ ಗೃಹ ಸಚಿವ ಅಮಿತ್‌ ಶಾ ಕಳೆದ ವಾರವಷ್ಟೇ ಎಐಎಡಿಎಂಕೆ ಮತ್ತು ಬಿಜೆಪಿ ಮೈತ್ರಿಕೂಟವನ್ನು ಮತ್ತೆ ಭದ್ರಪಡಿಸುವ ಯತ್ನದಲ್ಲಿ ಎಲ್ಲರನ್ನೂ ಅಚ್ಚರಿಗೊಳಿಸಿದರು. ಆದರೆ ಬಿಜೆಪಿ ಜೊತೆಗಿನ ಸ್ನೇಹದಿಂದ ಆಗುವ ಅನುಕೂಲಕ್ಕಿಂತ ಅಪಾಯಗಳೇ ಹೆಚ್ಚು ಎನ್ನುವ ಸತ್ಯವನ್ನು ಅರಿತ ಎಐಎಡಿಎಂಕೆ ನಾಯಕ ಎಡಪ್ಪಾಡಿ ಪಳನಿಸಾಮಿ ಮುಂಬರುವ ಚುನಾವಣೆಯಲ್ಲಿ ತಮ್ಮ ಮೈತ್ರಿಕೂಟಕ್ಕೆ ಬೆಂಬಲ ಸಿಕ್ಕರೂ ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸುವುದಿಲ್ಲ ಎಂದು ಪ್ರಕಟಿಸಿ ಶಾ ಅವರ ತಂತ್ರಗಾರಿಕೆಗೆ ಎಳ್ಳುನೀರು ಬಿಡುವ ಮೂಲಕ ಬಿಜೆಪಿಗೆ ಮುಖಭಂಗ ಮಾಡಿದ್ದಾರೆ.

ಬಿಜೆಪಿಯೇತರ ರಾಜಕೀಯ ಮುಖಂಡರ ಮೇಲೆ ಇಡಿ ಮತ್ತು ಸಿಬಿಐ ದಾಳಿ ನಡೆಸುವ ಮೂಲಕ ಕೆಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವಂತೆ ಮಾಡಿದ ಅಮಿತ್ ಶಾ ಅವರ ಪವಾಡಗಳು, ಕುತಂತ್ರ ರಾಜಕಾರಣದ ಸೂತ್ರಗಳು ತಮಿಳುನಾಡಿನಲ್ಲಿ ನಡೆಯುವುದಿಲ್ಲ ಎಂದು ಸ್ಟಾಲಿನ್ ಅವರು ಶಾ ತಂತ್ರಗಾರಿಕೆಯನ್ನು ಗೇಲಿ ಮಾಡಿದ್ದಾರೆ.

ಸುಪ್ರೀಂ ಕೋರ್ಟ್ ರಾಷ್ಟ್ರಪತಿ ಹಾಗೂ ರಾಜ್ಯಪಾಲರು ರಾಜ್ಯ ಸರ್ಕಾರಗಳ ಮಸೂದೆಗೆ ಒಪ್ಪಿಗೆ ನೀಡುವ ವಿಷಯದಲ್ಲಿ ನೀಡಿರುವ ತೀರ್ಪು ಮತ್ತು ತಮಿಳುನಾಡು ಸರ್ಕಾರ ರಚಿಸಿರುವ ರಾಜ್ಯ ಸರ್ಕಾರದ ಸಾರ್ವಭೌಮತ್ವವನ್ನು ಎತ್ತಿಹಿಡಿಯುವ ಆಯೋಗದ ಅಂತಹ ಕ್ರಮಗಳು ಪ್ರಧಾನಿ ಮೋದಿ ಸರ್ಕಾರಕ್ಕೆ ತಲೆನೋವು ಮಾತ್ರವಲ್ಲ ಸವಾಲು ಕೂಡ ಆಗಿವೆ. ಇವುಗಳ ಬಗೆಗೆ ಕೇಂದ್ರದ ನಡೆ ಹೇಗಿರುತ್ತದೆ ಎನ್ನುವುದು ಕುತೂಹಲಕಾರಿ.

ಆಂದೋಲನ ಡೆಸ್ಕ್

Recent Posts

ಅಮೇರಿಕಾದಲ್ಲಿ ಕಾಣೆಯಾಗಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿ ಮೃತದೇಹ ಪತ್ತೆ

ನ್ಯೂಯಾರ್ಕ್: ಅಮೆರಿಕದ ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿ ಕಾಣೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ (22) ಅವರ ಮೃತದೇಹ ಪತ್ತೆಯಾಗಿದೆ ಎಂದು ಸ್ಯಾನ್…

2 hours ago

ವಿವಾಹಪೂರ್ವ ದೈಹಿಕ ಸಂಬಂಧದಲ್ಲಿ ಎಚ್ಚರಿಕೆ ಅಗತ್ಯ : ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ವಿವಾಹಪೂರ್ವ ದೈಹಿಕ ಸಂಬಂಧಗಳಲ್ಲಿ ಅತ್ಯಂತ ಜಾಗರೂಕತೆ ವಹಿಸಬೇಕು ಎಂದು ಸುಪ್ರೀಂ ಕೋರ್ಟ್‌ ಎಚ್ಚರಿಕೆ ನೀಡಿದೆ. ಮದುವೆಯ ಸುಳ್ಳು…

2 hours ago

ಎಕ್ಸ್‌ ವೆಬ್‌ಸೈಟ್‌ ಸ್ಥಗಿತ : ಜಾಗತಿಕ ಬಳಕೆದಾರರ ಪರದಾಟ

ಮೈಸೂರು : ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಜಾಲತಾಣ ಎಕ್ಸ್ (X, ಹಿಂದಿನ ಟ್ವಿಟರ್) ಇಂದು ಸಂಜೆ (ಫೆಬ್ರವರಿ 16)…

3 hours ago

ರಾಹುಲ್‌ ಗಾಂಧಿ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರಿಸಿ : ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರೈತರ ಮೇಲೆ ಪರಿಣಾಮ ಬೀರುವ ಭಾರತ-ಅಮೆರಿಕ ವ್ಯಾಪಾರ…

4 hours ago

ಕಾಡಾನೆಗಳ ದಾಳಿ ; ಗುಡಿಸಲು, ಸೋಲಾರ್ ತಂತಿಬೇಲಿ ನಾಶ

ಮಲ್ಕುಂಡಿ : ಕಾಡಾನೆಗಳ ದಾಳಿಯಿಂದ ಗುಡಿಸಲು ಹಾಗೂ ಸೋಲಾರ್ ತಂತಿ ಬೇಲಿ ನಾಶವಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ದೇವರಾಯಶೆಟ್ಟಿಪುರ ಗ್ರಾಮದಲ್ಲಿ…

4 hours ago

ಮೈಸೂರು | ಅಪರಾಧ ನಿಯಂತ್ರಣ ಕುರಿತು ಎಡಿಜಿಪಿ ಸಭೆ

ಮೈಸೂರು : ನಗರದಲ್ಲಿ ಅಪರಾಧ ನಿಯಂತ್ರಣ ಮತ್ತು ಪತ್ತೆ ಸಂಬಂಧ ರಾಜ್ಯ ಪೊಲೀಸ್ ಇಲಾಖೆಯ ಅಪರಾಧ ಮತ್ತು ತಾಂತ್ರಿಕ ಸೇವೆ…

4 hours ago