ಅಂಕಣಗಳು

ನೇಪಾಳದಲ್ಲಿ ಯುವಕರ ಬಂಡಾಯ, ಹಿಂಸೆ, ಪ್ರಧಾನಿ ಪಲಾಯನ

ವಿದೇಶ ವಿಹಾರ

ಆಡಳಿತ ಮಿಲಿಟರಿ ವಶಕ್ಕೆ, ಕಾರ್ಕಿ ಮುಂದಿನ ಹಂಗಾಮಿ ಪ್ರಧಾನಿ ?

ಭಾರತದ ನೆರೆಯ ದೇಶ ನೇಪಾಳ ಮತ್ತೆ ಅಸ್ಥಿರತೆಯತ್ತ ಹೊರಳಿದೆ. ಇದೇ ಸೋಮವಾರ ಹಠಾತ್ತನೆ ಆರಂಭವಾದ ಯುವಕರ ಬಂಡಾಯ ಕಾಡ್ಗಿಚ್ಚಿನಂತೆ ಹಬ್ಬಿದ ಪರಿಣಾಮವಾಗಿ ಸರ್ಕಾರ ಪತನವಾಗಿದೆ. ಪ್ರಧಾನಿ ಖಡ್ಗ ಪ್ರಸಾದ್ ಶರ್ಮ ಓಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ್ದಾರೆ. ಪ್ರತಿಭಟನಾಕಾರರು ಪಾರ್ಲಿಮೆಂಟ್ ಭವನಕ್ಕೆ, ಸರ್ಕಾರಿ ಕಚೇರಿಗಳಿಗೆ, ಅಧ್ಯಕ್ಷರು, ಸಚಿವರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಹಣಕಾಸು ಸಚಿವರನ್ನು ಬೀದಿಗಳಲ್ಲಿ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಮಾಜಿ ಪ್ರಧಾನಿ ದೇವುಬಾ ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಹುಪಾಲು ಸಚಿವರು ಸೇನೆಯ ರಕ್ಷಣೆ ಪಡೆದಿದ್ದಾರೆ.

ಯುವಕರ ಹಿಂಸಾಚಾರ ಮತ್ತು ಪೊಲೀಸರ ದಾಳಿಯಲ್ಲಿ ೩೫ಕ್ಕೂ ಹೆಚ್ಚು ಜನರು ಸತ್ತಿದ್ದಾರೆ, ೧,೪೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಾಜಧಾನಿ ಕಠ್ಮಂಡು ನಗರವನ್ನು ಇದೀಗ ಸೇನೆ ವಶಕ್ಕೆ ತೆಗೆದುಕೊಂಡಿದ್ದು ಶಾಂತಿ ಕಾಪಾಡುವಂತೆ ಮುಖ್ಯ ಸೇನಾಧಿಕಾರಿ ಅಶೋಕ್ ರಾಜ್ ಸಿಗ್ದೆಲ್ ಪ್ರತಿಭಟನಾಕಾರರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಕಠ್ಮಂಡು ನಗರದ ಹಲವೆಡೆ ಇನ್ನೂ ಹಿಂಸಾಚಾರದ ಘಟನೆಗಳು ವರದಿಯಾಗುತ್ತಿವೆ. ಪರಿಸ್ಥಿತಿ ಸುಧಾರಣೆಯಾಗುವ ಸೂಚನೆಗಳು ಕಾಣುತ್ತಿವೆ.

ಇದನ್ನು ಓದಿ : ನೇಪಾಳದ ಪರಿಸ್ಥಿತಿ ರಾಜ್ಯಕ್ಕೂ ಬರಲಿದೆ : ಯತ್ನಾಳ್‌ ಭವಿಷ್ಯ

ಈ ಮಧ್ಯೆ ಆಡಳಿತವನ್ನು ನಿರ್ವಹಿಸುವಂಥ ರಾಜಕೀಯೇತರ ವ್ಯಕ್ತಿಯನ್ನು ತಾತ್ಕಾಲಿಕ ಪ್ರಧಾನಿಯನ್ನಾಗಿ ನೇಮಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಪ್ರಯತ್ನ ಮುಖ್ಯ ಸೇನಾಧಿಕಾರಿಯಿಂದಲೇ ಆರಂಭಗೊಂಡಿದೆ. ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯನ್ಯಾಯಾಽಶೆ ಸುಶೀಲ ಕಾರ್ಕಿ, ನೇಪಾಳ ವಿದ್ಯುತ್ ನಿಗಮದ ಮಾಜಿ ಅಧ್ಯಕ್ಷ ಕುಲ್ ಮನ್ ಸಿಂಗ್ ಅವರ ಹೆಸರಿದ್ದು, ಅಂತಿಮ ವಾಗಿ ಕಾರ್ಕಿ ಆಯ್ಕೆಯಾಗಿದ್ದಾರೆ. ಹಂಗಾಮಿ ಪ್ರಧಾನಿ ಸ್ಥಾನಕ್ಕೆ ಸೂಚಿಸಿರುವ ಇಬ್ಬರೂ ಭಾರತದಲ್ಲಿ ಶಿಕ್ಷಣ ಪಡೆದವರೆಂಬುದು ವಿಶೇಷ. ಹಂಗಾಮಿ ಪ್ರಧಾನಿ ಆಯ್ಕೆ ಬಗ್ಗೆ ಜೆನ್ ಝಿ ತಂಡದಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿದ್ದು ಮಿಲಿಟರಿ ಮುಖ್ಯಸ್ಥ ಜನರಲ್ ಸಿಗ್ದೆಲ್ ಮಾತುಕತೆ ನಡೆಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್, ಯುಟ್ಯೂಬ್ ಮುಂತಾದ ೨೬ ಜಾಲತಾಣಗಳನ್ನು ಸರ್ಕಾರ ನಿಷೇಧಿಸಿದ್ದೇ ಕಾರಣವಾಗಿ ಅವುಗಳ ಬಳಕೆದಾರರರಾದ ಯುವಕರು ಬಂಡೆದ್ದು ಬೀದಿಗಿಳಿದಿದ್ದಾರೆ. ಮೊದಲು ಸಣ್ಣ ಪ್ರಮಾಣದಲ್ಲಿದ್ದ ಪ್ರತಿಭಟನೆ ಕ್ರಮೇಣ ಬೀದಿ ಬೀದಿಗೆ ಹಬ್ಬಿ ಆಂದೋಲನದಂತೆ ವ್ಯಾಪಿಸಿದೆ. ಹಿಂಸಾಚಾರ ಸಿಡಿದಿದೆ. ಹಿಂಸಾಚಾರವನ್ನು ನಿಯಂತ್ರಿಸಲು ಪೊಲೀಸರು ಟಿಯರ್ ಗ್ಯಾಸ್, ನಂತರ ಗುಂಡು ಹಾರಿಸಿದ್ದಾರೆ. ಮೊದಲ ದಿನದಲ್ಲೇ ೧೯ ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ ಬಹು ಮಂದಿ ಹದಿಹರೆಯದ ಹುಡುಗರು. ಈ ಸಾವು, ನೋವು ಹಿಂಸಾಚಾರವನ್ನು ತಗ್ಗಿಸಲಿಲ್ಲ, ಬದಲಾಗಿ ಹಿಂಸಾಚಾರ ಹೆಚ್ಚಿದೆ. ಪ್ರತಿಭಟನೆ ಶಾಂತಿಯುತವಾಗಿಯೇ ಆರಂಭವಾಗಿತ್ತು. ಆದರೆ ಕ್ರಮೇಣ ದುಷ್ಕರ್ಮಿಗಳು ಮತ್ತು ರಾಜಕೀಯ ಅತೃಪ್ತರ ಬೆಂಬಲದ ಜನರು ಆಂದೋಲನವನ್ನು ಬಳಸಿಕೊಂಡು ಹಿಂಸಾಚಾರ ನಡೆಸಿದರು ಎಂದು ಈಗ ಜೆನ್ ಝಿ ನಾಯಕರು ಹೇಳುತ್ತಿದ್ದಾರೆ.

ಹಿಂಸಾಚಾರ ಹೆಚ್ಚಿದಂತೆ ಸರ್ಕಾರ ಸಾಮಾಜಿಕ ಜಾಲತಾಣದ ಮೇಲಿನ ನಿಷೇಧವನ್ನು ಹಿಂತೆಗೆದುಕೊಂಡಿತು. ಆದರೆ ಪ್ರತಿಭಟನಾಕಾರರು ಆಂದೋಲನವನ್ನು ನಿಲ್ಲಿಸಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿ ಓಲಿ ಸೇನೆಯ ರಕ್ಷಣೆಯಲ್ಲಿ ಹೆಲಿಕಾಪ್ಟರ್‌ನಲ್ಲಿ ಬೇರೆ ದೇಶಕ್ಕೆ ಪಲಾಯನ ಮಾಡಿದರಷ್ಟೇ ಅಲ್ಲ, ಇಡೀ ಮಂತ್ರಿ ಮಂಡಲ ರಾಜೀನಾಮೆ ನೀಡಿದೆ. ಪ್ರತಿಭಟನಾಕಾರರು ದೇಶದ ಅಧ್ಯಕ್ಷ ರಾಮಚಂದ್ರ ಪೌಡಾಲ್ ಅವರ ಖಾಸಗಿ ಮನೆಗೆ, ಮುಖ್ಯ ನ್ಯಾಯಾಧೀಶರ ಮನೆಗೆ ಬೆಂಕಿ ಹಚ್ಚಿದ್ದಾರೆ. ಈ ಮೊದಲೇ ಪಾರ್ಲಿಮೆಂಟ್ ಭವನಕ್ಕೂ ಬೆಂಕಿ ಹಚ್ಚಿದ್ದು ಇಡೀ ವ್ಯವಸ್ಥೆ ಕುಸಿದು ಹೋಗಿದೆ. ಜೈಲು ಬಾಗಿಲುಗಳನ್ನು ಮುರಿದು ಬಂದಿಗಳನ್ನು ಬಿಡುಗಡೆ ಮಾಡಲಾಗಿದೆ. ಜೈಲಿನಿಂದ ಹೊರ ಹೋದವರಲ್ಲಿ ಬಹಳ ಮಂದಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಗಳು. ಮೊದಲ ವರದಿಗಳ ಪ್ರಕಾರ ಜೈಲುಗಳಿಂದ ಪರಾರಿಯಾಗಿರುವವರ ಸಂಖ್ಯೆ ಮೂವತ್ತು ಸಾವಿರ. ಕೊನೆಗೂ ಸೇನೆ ಮಧ್ಯ ಪ್ರವೇಶ ಮಾಡಿ ಕಠ್ಮಂಡುವಿನಲ್ಲಿ ಶಾಂತಿ ನೆಲೆಸುವಂಥ ಕ್ರಮಗಳನ್ನು ತೆಗೆದುಕೊಂಡಿದೆ.

ಸಾಮಾಜಿಕ ಜಾಲ ತಾಣಗಳನ್ನು ಸರ್ಕಾರ ನಿಷೇಽಸಿದ್ದೇ ಈ ಆಂದೋಲನ ಸಿಡಿಯಲು ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದರೂ ವಾಸ್ತವವಾಗಿ ಇನ್ನೂ ಬಲವಾದ ಬೇರೆ ಕಾರಣಗಳಿವೆ. ಈ ಆಂದೋಲನದ ಹಿಂದೆಇರುವವರು ‘ಜನರಲ್ ಝೀ’ ಎಂಬ ಗುಂಪಿನ ಯುವಕರು ಎಂದು ಗುರುತಿಸಲಾಗಿದೆ. ಜನರಲ್ ಝಡ್ ಅಥವಾ ಝೀ ಅಂದರೆ ೧೯೯೫ ಮತ್ತು ೨೦೧೨ರ ಮಧ್ಯೆ ಜನಿಸಿದವರು. ಅಂದರೆ ಇಂಟರ್‌ನೆಟ್, ಸ್ಮಾರ್ಟ್ ಫೋನ್, ಡಿಜಿಟಲ್ ಕ್ರಾಂತಿಯ ಜೊತೆ ಹುಟ್ಟಿ ಬೆಳೆದವರು. ಇಂಟರ್‌ನೆಟ್, ಸ್ಮಾರ್ಟ್ ಫೋನ್‌ಗಳಿಲ್ಲದೆ ಇವರ ಬದುಕು ಇಲ್ಲ. ಅವರ ಚಟುವಟಿಕೆಗಳೆಲ್ಲವೂ ಈ ಆಧುನಿಕ ಗ್ಯಾಡ್ಜೆಟ್‌ಗಳ ಮೂಲಕವೇ ನಡೆಯುತ್ತದೆ. ಇವೆರೆಲ್ಲಾ ಈ ಗ್ಯಾಡ್ಜೆಟ್ಗಳ ಮೂಲಕವೇ ಸಮಾಜದ ಆಗು ಹೋಗುಗಳಿಗೆ ಸ್ಪಂದಿಸುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲ ತಾಣಗಳನ್ನೇ ನಿಷೇಽಸಿದ್ದು ಆ ಯುವಕರಿಗೆ ಸಹಜವಾಗಿಯೇ ಆಘಾತ ನೀಡಿದೆ. ಇದರ ಜೊತೆ ಒಂದು ಭಾವನಾತ್ಮಕ ವಿಷಯವೂ ಇದೆ. ನೇಪಾಳದಲ್ಲಿ ಉದ್ಯೋಗಾವಕಾಶಗಳು ಕಡಿಮೆ. ಹೀಗಾಗಿ ಬಹುಪಾಲು ಮಂದಿ ಉದ್ಯೋಗಕ್ಕಾಗಿ ವಿದೇಶಗಳಿಗೆ ಹೋಗಿದ್ದಾರೆ.

ಇದನ್ನು ಓದಿ : ರಾಜೀನಾಮೆಗೆ ಕಾರಣ ನೀಡಿದ ನೇಪಾಳ ಮಾಜಿ ಪ್ರಧಾನಿ ಕೆ.ಪಿ.ಓಲಿ

ದೇಶದಲ್ಲೇ ನೆಲೆಸಿರುವವರಿಗೆ ಸಂಪರ್ಕ ಇರುವುದು ಸಾಮಾಜಿಕ ಜಾಲ ತಾಣಗಳ ಮೂಲಕವೇ. ಈ ಸಂಪರ್ಕವನ್ನು ನಿಷೇಧಿಸಿದ್ದರಿಂದಾಗಿ ಯುವಕರು ಕುಪಿತರಾಗಿ ಸರ್ಕಾರದ ವಿರುದ್ಧ ಬೀದಿಗಿಳಿದಿದ್ದಾರೆ ಎಂದು ಹೇಳಲಾಗಿದೆ. ಸುಳ್ಳು ಸುದ್ದಿ ಹರಡಲು, ಸಮಾಜದಲ್ಲಿ ಅಶಾಂತಿ ಬಿತ್ತಲು ಸಾಮಾಜಿಕ ತಾಣಗಳನ್ನು ಬಳಸಲಾಗುತ್ತಿತ್ತು. ಅದನ್ನು ನಿಯಂತ್ರಿಸಲು ಎಲ್ಲ ಸಾಮಾಜಿಕತಾಣಗಳನ್ನೂ ಕಾನೂನು ವ್ಯಾಪ್ತಿಗೆ ತರಲು ಸರ್ಕಾರದ ಸಂಪರ್ಕ ಇಲಾಖೆಯಲ್ಲಿನೊಂದಾವಣೆ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ನ್ಯಾಯಾಲಯ ಕೂಡ ಈ ಕ್ರಮಕ್ಕೆ ಒಪ್ಪಿಗೆ ನೀಡಿತ್ತು. ಆದರೆ ಸಾಮಾಜಿಕ ಜಾಲತಾಣಗಳು ನಿಗದಿತ ಅವಧಿಯಲ್ಲಿ ರಿಜಿಸ್ಟರ್ ಮಾಡಿಕೊಳ್ಳಲಿಲ್ಲ. ಹೀಗಾಗಿ ಅವುಗಳನ್ನು ನಿಷೇಧಿಸಲಾಯಿತು ಎಂಬುದು ಸರ್ಕಾರ ಕೊಟ್ಟ ಕಾರಣ. ಆದರೆ ವಾಸ್ತವ ಚಿತ್ರಣವೇ ಬೇರೆ ಇದೆ ಎಂದು ಅಲ್ಲಿನ ಕಾನೂನು ತಜ್ಞರು ಹೇಳುತ್ತಾರೆ.

ಕಳೆದ ಮೂರು ತಿಂಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಭ್ರಷ್ಟಾಚಾರದ ಬಗ್ಗೆ ವರದಿಗಳು ಬರುತ್ತಿದ್ದವು. ನಿರುದ್ಯೋಗ , ಬಡತನ, ತಮ್ಮ ಬಂಧುಗಳು ದೂರದ ದೇಶಗಳಲ್ಲಿ ಕೆಲಸಮಾಡುತ್ತ ಸಂಸಾರ ನಿರ್ವಹಿಸಲು ಹಣ ಕಳುಹಿಸಿ ಕಷ್ಟಪಡುತ್ತಿರುವ ಬಗ್ಗೆ ಯುವಕರು ಸತತವಾಗಿ ಪ್ರತಿಕ್ರಿಯೆ ನೀಡುತ್ತಿದ್ದರು. ಜನರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವಾಗ ಅಧಿಕಾರದಲ್ಲಿರುವ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಅವರ ಮಕ್ಕಳು ಐಶಾರಾಮಿ ಜೀವನ ನಡೆಸುತ್ತಿರುವ ವಿವರಗಳು ಪ್ರಕಟವಾಗುತ್ತಿದ್ದವು. ರಾಜಕಾರಣಿಗಳು ಮತ್ತು ಅಧಿಕಾರಿಗಳ ಪ್ರಭಾವ ಬಳಸಿ ಉದ್ಯೋಗ ಗಿಟ್ಟಿಸಿದವರು ಮತ್ತು ಸ್ವಜನ ಪಕ್ಷಪಾತದಿಂದ ಲಾಭ ಪಡೆದು ಐಶಾರಾಮಿ ಜೀವನ ನಡೆಸುತ್ತಿರುವ ಮಕ್ಕಳನ್ನು ‘ನೆಪೋಕಿಡ್ಸ್ ’ ಎನ್ನುತ್ತಾರೆ. ನೆಪೋ ಎಂದರೆ ನೆಪೋಟಿಸಂ (ಸ್ವಜನ ಪಕ್ಷಪಾತ). ಇದನ್ನು ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದರು. ಇದರ ಪರಿಣಾಮವಾಗಿ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂಬ ಆರೋಪ ಮುಂದಿಟ್ಟುಕೊಂಡು ಸಾಮಾಜಿಕ ಮಾಧ್ಯಮಗಳ ಮೇಲೆ ಓಲಿ ಸರ್ಕಾರ ನಿಷೇಧ ಹೇರಿತು ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ ಇದೇ ಕಾರಣದಿಂದ ಯುವಕರು ರೊಚ್ಚಿಗೆದ್ದಿದ್ದಾರೆ. ಹೋರಾಟದ ಮೂಲ ಉದ್ದೇಶ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಬಡತನ, ನಿರುದ್ಯೋಗದಂಥ ಸಮಸ್ಯೆಗಳು ಎಂದು ಜೆನ್ ಝಿ ಗುಂಪಿನ ನಾಯಕರು ಹೇಳುತ್ತಾರೆ.

ರಾಜಕೀಯ ಅಸ್ಥಿರತೆಯಿಂದಾಗಿ ನೇಪಾಳ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಸುಮಾರು ೨೪೦ ವರ್ಷಗಳ ರಾಜಾಽಕಾರ ಜನಾಂದೋಲನದಿಂದಾಗಿ೨೦೦೮ರಲ್ಲಿ ಅಂತ್ಯವಾಯಿತು. ನಂತರದ ೧೭ ವರ್ಷಗಳಲ್ಲಿ ೧೪ ಸರ್ಕಾರಗಳು ಅಸ್ತಿತ್ವಕ್ಕೆ ಬಂದಿವೆ. ಈಗ ಪಲಾಯನ ಮಾಡಿರುವ ಓಲಿಯವರು ನಾಲ್ಕನೆಯ ಬಾರಿಗೆ ಪ್ರಧಾನಿಯಾದವರು. ದೊರೆ ಆಡಳಿತ ಅಂತ್ಯವಾಗಬೇಕೆಂದು ತಮ್ಮ ಜೀವನದುದ್ದಕ್ಕೂ ಹೋರಾಡಿದವರು, ಜೈಲು ಶಿಕ್ಷೆ ಅನುಭವಿಸಿದವರು. ನೇಪಾಳದಲ್ಲಿ ಮುಖ್ಯವಾಗಿ ಎರಡು ಪಕ್ಷಗಳಿವೆ. ನೇಪಾಳಿ ಕಾಂಗ್ರೆಸ್ ಭಾರತ ಪರವಾದ ಹಳೆಯ ಪಕ್ಷ. ಈ ಪಕ್ಷದಲ್ಲೂ ಎರಡು ಗುಂಪುಗಳು ಇವೆ. ನೇಪಾಳಿ ಕಾಂಗ್ರೆಸ್ ನಂತರ ಚೀನಾ ಪರವಾದಿ ಮತ್ತು ಭಾರತ ವಿರೋಽ ಕಮ್ಯುನಿಸ್ಟ್ ಪಾರ್ಟಿ ಬಲವಾಗಿದ್ದು ಸತತವಾಗಿ ವಿರೋಧ ಪಕ್ಷವಾಗಿ ಮತ್ತು ದೊರೆ ಆಡಳಿತದ ವಿರುದ್ಧ ಭೂಗತವಾಗಿ ಹೋರಾಡುತ್ತಾ ಬಂದಿದೆ. ಈ ಪಕ್ಷ ಎರಡು ಗುಂಪುಗಳಾಗಿ ಒಡೆದು ಮತ್ತೆ ಒಂದಾಗಿ ಸರ್ಕಾರ ರಚಿಸಿ ಮತ್ತೆ ಕಿತ್ತಾಡಿ ಬೇರೆಯಾದದ್ದಿದೆ. ನೇಪಾಳಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸಿದ್ದೂ ಇದೆ. ಅಂಥ ಸರ್ಕಾರ ಬಹಳ ಕಾಲ ಇರಲೂ ಇಲ್ಲ.

ಇದನ್ನು ಓದಿ : ನೇಪಾಳದಲ್ಲಿ ಮುಂದುವರಿದ ಹಿಂಸಾಚಾರ: ಕಠ್ಮಂಡು ವಿಮಾನ ನಿಲ್ದಾಣ ಸೇನೆ ವಶಕ್ಕೆ

ಅಸ್ಥಿರತೆಯಿಂದಾಗಿ ಹಲವು ರೀತಿಯ ರಾಜಕೀಯ ಸರ್ಕಸ್‌ಗಳು ನಡೆದಿವೆ. ಈ ರಾಜಕೀಯ ಸರ್ಕಸ್‌ಗಳಿಂದಾಗಿ ಸರ್ಕಾರಗಳನ್ನು ನಡೆಸುವವರು ಜನರನ್ನುಮರೆತಿದ್ದಾರೆ. ತಮಗೆ, ತಮ್ಮ ಮಕ್ಕಳಿಗೆ ಏನು ಬೇಕೋ ಅದನ್ನು ಮಾಡಿಕೊಂಡು  ಸುಖ ಜೀವನ ನಡೆಸುತ್ತಾ ಬಂದಿದ್ದಾರೆ. ಬಡವರು ಬಡವರಾಗಿಯೂ ಉಳಿದಿದ್ದಾರೆ. ದೇಶವನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುವ ದಿಟ್ಟ ಯತ್ನಗಳು ನಡೆಯುತ್ತಿಲ್ಲ. ಹೀಗಾಗಿಯೇ ಜನರು ರಾಜಕಾರಣಿಗಳ ಬಗ್ಗೆ ರೋಸಿ ಹೋಗಿ ಬೀದಿಗಿಳಿದಿದ್ದಾರೆ. ಇದರ ಪರಿಣಾಮವಾಗಿ ಸರ್ಕಾರ ಪತನವಾಗಿದೆ. ದೇಶ ಬದಲಾವಣೆಯತ್ತ ಹೊರಳಿದೆ. ಮುಂದೇನು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ನೇಪಾಳದಲ್ಲಿ ನಡೆದ ಜನಾಂದೋಲನ ಮೂರು ವರ್ಷಗಳ ಹಿಂದೆ ಶ್ರೀಲಂಕಾ ಮತ್ತು ಕಳೆದ ವರ್ಷ ಬಾಂಗ್ಲಾದಲ್ಲಿ ಆದ ಜನಾಂದೋಲನಗಳನ್ನುನೆನಪಿಗೆ ತರುತ್ತದೆ. ಶ್ರೀಲಂಕಾದಲ್ಲಿ ಜನಾಂದೋಲನದಿಂದಾಗಿ ಪ್ರಧಾನಿ ಮಹಿಂದಾ ರಾಜಪಕ್ಸೆ ಪಲಾಯನ ಮಾಡಿದರು. ಬಾಂಗ್ಲಾದೇಶದಲ್ಲಿ ಜನಾಂದೋಲನದಿಂದಾಗಿ ಪ್ರಧಾನಿ ಷೇಕ್ ಹಸೀನಾ ಪಲಾಯನ ಮಾಡಿ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಅಷ್ಟೇ ಅಲ್ಲ ಭಾರತದ ನೆರೆಯ ದೇಶಗಳಾದ ಪಾಕಿಸ್ತಾನ, ಆಫ್ಘಾನಿಸ್ತಾನ, ಮ್ಯಾನ್ಮಾರ್‌ನಲ್ಲಿಯೂ ಅಸ್ಥಿರತೆ ತಲೆದೋರಿದೆ. ಇಂಥ ಸ್ಥಿತಿಯಲ್ಲಿ ಭಾರತದಲ್ಲಿ ಅಂಥದ್ದೇನಾದರೂ ಬೆಳವಣಿಗೆಗಳು ಆಗಬಹುದೇ ಎಂಬ ಬಗ್ಗೆ ಊಹೆಗಳು ರಾಜಕೀಯ ವಲಯಗಳಲ್ಲಿ ಆರಂಭವಾಗಿವೆ. ಭಾರತದಲ್ಲಿಯೂ ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಸ್ವಜನ ಪಕ್ಷಪಾತ ತಾಂಡವವಾಡುತ್ತಿದೆಯಾದ್ದರಿಂದ ಅಂಥ ಒಂದು ಲೆಕ್ಕಾಚಾರ ಪ್ರಗತಿಪರರಲ್ಲಿ ಕಾಣುತ್ತಿದೆ. ಆದರೆ ರಾಜಕೀಯ ಸ್ಥಿರತೆ ಇರುವ ಭಾರತದಂಥ ದೊಡ್ಡ ದೇಶದಲ್ಲಿ ಅಂಥ ಸಾಧ್ಯತೆ ಕಡಿಮೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಡುತ್ತಿದ್ದಾರೆ.

” ನೇಪಾಳದಲ್ಲಿ ನಡೆದ ಜನಾಂದೋಲನ ಮೂರು ವರ್ಷಗಳ ಹಿಂದೆ ಶ್ರೀಲಂಕಾ ಮತ್ತು ಕಳೆದ ವರ್ಷ ಬಾಂಗ್ಲಾದಲ್ಲಿ ಆದ ಜನಾಂದೋಲನಗಳನ್ನು ನೆನಪಿಗೆ ತರುತ್ತದೆ. ಶ್ರೀಲಂಕಾದಲ್ಲಿ ಜನಾಂದೋಲನದಿಂದಾಗಿಪ್ರಧಾನಿ ಮಹಿಂದಾ ರಾಜಪಕ್ಸೆ  ಪಲಾಯನ ಮಾಡಿದರು. ಬಾಂಗ್ಲಾದೇಶದಲ್ಲಿ ಜನಾಂದೋಲನದಿಂದಾಗಿ ಪ್ರಧಾನಿ ಷೇಕ್ ಹಸೀನಾ ಪಲಾಯನ ಮಾಡಿ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಅಷ್ಟೇ ಅಲ್ಲ ಭಾರತದ ನೆರೆಯದೇಶಗಳಾದ ಪಾಕಿಸ್ತಾನ, ಆಫ್ಘಾನಿಸ್ತಾನ, ಮ್ಯಾನ್ಮಾರ್ ನಲ್ಲಿಯೂ ಅಸ್ಥಿರತೆ ತಲೆದೋರಿದೆ. ಇಂಥ ಸ್ಥಿತಿಯಲ್ಲಿ ಭಾರತದಲ್ಲಿ ಅಂಥದ್ದೇನಾದರೂ ಬೆಳವಣಿಗೆಗಳು ಆಗಬಹುದೇ ಎಂಬ ಬಗ್ಗೆ ಊಹೆಗಳು ರಾಜಕೀಯ ವಲಯಗಳಲ್ಲಿ ಆರಂಭವಾಗಿವೆ. ಭಾರತದಲ್ಲಿಯೂ ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಸ್ವಜನ ಪಕ್ಷಪಾತ ತಾಂಡವವಾಡುತ್ತಿದೆಯಾದ್ದರಿಂದ ಅಂಥ ಒಂದು ಲೆಕ್ಕಾಚಾರ ಪ್ರಗತಿಪರರಲ್ಲಿ ಕಾಣುತ್ತಿದೆ. ಆದರೆರಾಜಕೀಯ ಸ್ಥಿರತೆ ಇರುವ ಭಾರತದಂಥ ದೊಡ್ಡ ದೇಶದಲ್ಲಿ ಅಂಥ ಸಾಧ್ಯತೆ ಕಡಿಮೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಡುತ್ತಿದ್ದಾರೆ.”

-ಡಿ.ವಿ.ರಾಜಶೇಖರ 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಕೆ.ಕೆ.ಮಹಮದ್ ಅವರ ಹೇಳಿಕೆ ಪ್ರಬುದ್ಧ ನಡೆ

ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್…

25 mins ago

ಓದುಗರ ಪತ್ರ: ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ನಾಗರಿಕ ಸ್ನೇಹಿ

ಕಂದಾಯ ಇಲಾಖೆ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಇದು ನಾಗರಿಕ ಸ್ನೇಹಿಯೂ ಆಗಿದೆ. ಇಂದಿಗೂ ತಾಲ್ಲೂಕು…

29 mins ago

ಓದುಗರ ಪತ್ರ: ದ್ವೇಷ ಭಾಷಣಕ್ಕೆ  ಕಾನೂನು ಕಡಿವಾಣ ಸಾಗತಾರ್ಹ

ರಾಜ್ಯದಲ್ಲಿ ಇನ್ನು ಮುಂದೆ, ಜಾತಿ, ಧರ್ಮ ಭಾಷೆ, ಧಾರ್ಮಿಕ ಮತ್ತು ಜನಾಂಗೀಯ ನಿಂದನೆ, ಲೈಂಗಿಕ ದೃಷ್ಟಿಕೋನ ಮತ್ತು ಜನ್ಮ ಸ್ಥಳದ…

42 mins ago

ಡಾ.ಬಿ.ಆರ್.ಅಂಬೇಡ್ಕರ್ ಎಂಬ ಅಮರ ಜಗತ್ತು…

ಮಲ್ಕುಂಡಿ ಮಹದೇವಸ್ವಾಮಿ ವಿಕಲ್ಪಗಳ ಅಲೆಯ ಮೇಲೆ ಸದಾ ತೇಲಿ ಬರುವ ಸಂಕಲ್ಪ  ಬಾಬಾ ಸಾಹೇಬರ ಪಾರ್ಥಿವ ಶರೀರ ಪ್ರಕೃತಿಯಲ್ಲಿ ಲೀನವಾಗುವ…

48 mins ago

ರೈಲ್ವೆ ಮೇಲ್ಸೇತುವೆ; ಭೂ ದರ ಕಗ್ಗಂಟು ಬಗೆಹರಿಯುವುದೇ?

ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…

3 hours ago

ಜನವರಿಗೆ ಚಾ.ಬೆಟ್ಟದ ಅಭಿವೃದ್ಧಿ ಕಾಮಗಾರಿ ಶುರು

ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…

4 hours ago