Jagdeep Dhankhar
ದೆಹಲಿ ಕಣ್ಣೋಟ
ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರ ದಿಢೀರ್ ರಾಜೀನಾಮೆ ದೇಶದ ರಾಜಕೀಯ ವಲಯದಲ್ಲಿ ಮತ್ತು ಜನಸಾಮಾನ್ಯರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕಳೆದ ಸೋಮವಾರದ ಈ ಅಚ್ಚರಿಯ ಬೆಳವಣಿಗೆ ರಾಜಕೀಯ ಕ್ಷೇತ್ರವನ್ನು ದಂಗುಬಡಿಸಿದೆ. ಜಗದೀಪ್ ಧನ್ಕರ್ ತಮ್ಮ ರಾಜೀನಾಮೆ ಪತ್ರದಲ್ಲಿ ‘ಆರೋಗ್ಯದ ಕಾರಣಗಳನ್ನು’ ನೀಡಿದ್ದಾರೆ. ನಿಜ ಅವರಿಗೆ ಇತ್ತೀಚೆಗೆ ಹೃದಯಾಘಾತವಾಗಿತ್ತು. ಆರೋಗ್ಯದ ದೃಷ್ಟಿಯಿಂದ ವಿಶ್ರಾಂತಿ ಪಡೆಯುವಂತೆ ಮತ್ತು ಎಚ್ಚರಿಕೆ ವಹಿಸುವಂತೆ ಸಹಜವಾಗಿ ತಜ್ಞ ವೈದ್ಯರು ಸಲಹೆ ನೀಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಆದರೆ ಈ ರಾಜೀನಾಮೆಯ ಹಿಂದೆ ಹತ್ತಾರು ಕಾರಣಗಳು ನಿಗೂಢವಾಗಿರುವುದು ದೇಶದ ಆಡಳಿತ ಮತ್ತು ರಾಜಕೀಯ ವಲಯದಲ್ಲಿ ಏನು ನಡೆಯುತ್ತಿದೆ ಎನ್ನುವ ಕುತೂಹಲ ಹುಟ್ಟಿಸಿದೆ.
ಧನ್ಕರ್ ೧೯೯೦ರಲ್ಲಿ ಅಂದಿನ ಪ್ರಧಾನಿ ಚಂದ್ರಶೇಖರ್ ನೇತೃತ್ವದ ರಾಷ್ಟ್ರೀಯ ರಂಗದ ಸರ್ಕಾರದಲ್ಲಿ ಸಚಿವರಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. ರಾಜಸ್ತಾನದ ಜುನ್ ಜುನು ಲೋಕಸಭೆ ಕ್ಷೇತ್ರದಿಂದ ಗೆದ್ದು ಬಂದಿದ್ದರು. ಅವರು ಜನತಾದಳ, ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷವನ್ನು ಒಳಹೊಕ್ಕು ಬಂದಿರುವ ಅನುಭವಿ. ೨೦೦೩ರಲ್ಲಿ ಬಿಜೆಪಿ ಸೇರಿದ ನಂತರ ಆ ಪಕ್ಷದಲ್ಲಿ ಹಲವು ಅಧಿಕಾರವನ್ನು ಅನುಭವಿಸಿದ್ದಾರೆ. ಮೂಲತಃ ವಕೀಲಿ ವೃತ್ತಿ ಆರಂಭಿಸಿ ಸುಪ್ರೀಂ ಕೋರ್ಟ್‌ನವರೆಗೂ ತಮ್ಮ ವಕೀಲಿ ವೃತ್ತಿಯ ಛಾಪು ಮೂಡಿಸಿದ್ದಾರೆ. ಉಪರಾಷ್ಟ್ರಪತಿ ಆಗುವ ಮುನ್ನ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದಾಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ಮತ್ತು ಅವರ ಸರ್ಕಾರಕ್ಕೂ ನಿರಂತರವಾಗಿ ‘ತಲೆನೋವಾಗಿದ್ದರು’ ಎನ್ನುವುದು ಇತಿಹಾಸ.
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಮೂರು ದಶಕಗಳಿಗೂ ಹೆಚ್ಚು ಕಾಲ ಕೆಂಪು ಧ್ವಜದ ಎಡ ಪಕ್ಷಗಳ ಆಡಳಿತವನ್ನು ಹೇಳ ಹೆಸರಿಲ್ಲದಂತೆ ಮಾಡಿದ್ದು ಕೂಡ ಚರಿತ್ರೆಯ ಒಂದು ಭಾಗವೇ ಆಗಿದೆ. ಧನ್ಕರ್ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೌಖಿಕ ಆದೇಶ ಮತ್ತು ಸೂಚನೆಗಳಂತೆ ನಡೆದುಕೊಂಡು ತೃಣ ಮೂಲ ಕಾಂಗ್ರೆಸ್ ಆಡಳಿತ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ತಾವು ಕೊಲ್ಕತ್ತಾದಲ್ಲಿ ಇರುವ ದಿನಗಳವರೆಗೂ ನಿದ್ದೆ ಗೆಡಿಸಿದ್ದನ್ನು ರಾಜಕೀಯ ಬಲ್ಲವರಾರೂ ಮರೆಯಲಾರರು. ಆನಂತರ ಎರಡು ವರ್ಷಗಳ ಹಿಂದೆ ತಮ್ಮ ದೆಹಲಿ ದೊರೆಗಳನ್ನು ತೃಪ್ತಿಪಡಿಸಿದರೆನ್ನುವ ಮತ್ತು ಉತ್ತರ ಭಾರತದ ರಾಜಕೀಯ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಜಾಟ್ ಜನಾಂಗಕ್ಕೆ ಸೇರಿದ ಧನ್ಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆಯ್ಕೆಯಂತೆ ಉಪರಾಷ್ಟ್ರಪತಿ ಸ್ಥಾನಕ್ಕೆ ಬಂದರು. ಮೇಲ್ನೋಟಕ್ಕೆ ತೀರಾ ಗಡಸು ಸ್ವಭಾವ ಮತ್ತು ಖಡಕ್ ವ್ಯಕ್ತಿತ್ವದವರೆನ್ನುವಂತೆ ಕಂಡರೂ ರಾಜ್ಯಸಭೆಯ ಸಭಾಪತಿಯಾಗಿ ಜಗದೀಪ್ ಧನ್ಕರ್ ನಿಷ್ಪಕ್ಷಪಾತವಾಗಿ ನಡೆದುಕೊಂಡಿದ್ದಾರೆ ಎಂದು ಯಾರೂ ಎದೆಮುಟ್ಟಿ ಹೇಳುವಂತೆ ಕಲಾಪವನ್ನು ನಡೆಸಿಲ್ಲ ಎನ್ನುವುದು ಕಳೆದೆರಡು ವರ್ಷಗಳ ರಾಜ್ಯಸಭೆ ಕಲಾಪವನ್ನು ಮೆಲುಕು ಹಾಕಿದರೆ ತಿಳಿಯುತ್ತದೆ.
ಧನ್ಕರ್ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳಿಗೆ ನಿತ್ಯವೂ ಕಹಿ ಗುಳಿಗೆ ಆಗಿದ್ದರು ಎನ್ನುವುದು ಗುಟ್ಟಾಗೇನೂ ಉಳಿದಿಲ್ಲ. ಆಡಳಿತ ಪಕ್ಷದ ಪಕ್ಷಪಾತಿಯಂತೆ ಮತ್ತುಪ್ರತಿ ಪಕ್ಷಗಳಿಗೆ ‘ಬೇಡವಾದ ಸಭಾಪತಿ’ ಆಗಿದ್ದರು ಎನ್ನುವುದರಲ್ಲಿ ಯಾವ ಮುಚ್ಚುಮರೆಯೂ ಇಲ್ಲ. ಎಲ್ಲವೂ ಕಪ್ಪು ಬಿಳುಪಿನಂತೆ ಕಲಾಪದ ವ್ಯವಹಾರಗಳು ನಡೆದು ಹೋಗಿವೆ. ಹಾಗಾಗಿಯೇ ಸದನದಲ್ಲಿ ಅವರ ವಿರುದ್ಧ ಟೀಕೆಗಳ ಸುರಿಮಳೆಯೇ ಆಗುತ್ತಿತ್ತು. ಕಲಾಪ ಬಹಿಷ್ಕಾರ ಒಂದು ಕಡೆಯಾದರೆ, ಅವರ ನೇರ ಕ್ರಮದಿಂದ ಪ್ರತಿಪಕ್ಷಗಳ ಸದಸ್ಯರನ್ನು ಆಗಾಗ ಹೊರ ಹಾಕುವುದು ಮತ್ತು ಅಮಾನತ್ತುಗೊಳಿಸಿ ಆಡಳಿತ ಪಕ್ಷ ಮೆಚ್ಚುವಂತೆ ನಡೆದುಕೊಂಡಿದ್ದಾರೆ ಎನ್ನುವುದು ಹಗಲಿನಷ್ಟೇ ಸತ್ಯ.
ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದವರಲ್ಲಿ ಧನ್ಕರ್ ಮೂರನೆಯವರು. ಆದರೆ ಈ ಹಿಂದೆ ಹೀಗೆ ರಾಜೀನಾಮೆ ನೀಡಿದ್ದ ವಿ.ವಿ.ಗಿರಿ ಮತ್ತು ಆರ್.ವೆಂಕಟರಾಮನ್ ಅವರ ರಾಜೀನಾಮೆಯ ಉದ್ದೇಶವೇ ಬೇರೆ ಇತ್ತು. ಮುಂದೆ ಅವರು ರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯಾಗುವ ಉದ್ದೇಶದಿಂದ ಆ ಸ್ಥಾನವನ್ನು ತೊರೆದಿದ್ದರು. ಆದರೆ ಧನ್ಕರ್ ರಾಜೀನಾಮೆಯ ಪ್ರಹಸನ ದೇಶದ ಜನತೆಗೆ ಇನ್ನೂ ನಿಗೂಢವಾಗಿಯೇ ಉಳಿದಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಲೆಕ್ಕಾಚಾರ ಮತ್ತು ಸರ್ಕಾರಕ್ಕೆ ಧನ್ಕರ್ ಅವರಿಂದಾಗಿರುವ ಅಪಚಾರ ಮತ್ತು ಅಪಾಯವಾದರೂ ಏನು ಎನ್ನುವುದು ಕುತೂಹಲವಾಗಿಯೇ ಉಳಿದಿದೆ.
ಧನ್ಕರ್ ಅವರನ್ನು ಮುಂದಿನ ರಾಷ್ಟ್ರಪತಿಯನ್ನಾಗಿ ಮಾಡಬೇಕೆನ್ನುವ ಲೆಕ್ಕಾಚಾರವೇನೂ ಪ್ರಧಾನಿ ಮೋದಿ ಅವರಿಗಾಗಲಿ, ಬಿಜೆಪಿಗಾಗಲಿ ಅಥವಾ ಪರೋಕ್ಷವಾಗಿ ಬಿಜೆಪಿ ಆಡಳಿತವನ್ನು ನಡೆಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಇದ್ದಿರಲಿಲ್ಲ. ಧನ್ಕರ್ ಅವರಿಗಿಂತ ಹಿಂದೆ ಇದ್ದ ಎಂ. ವೆಂಕಯ್ಯ ನಾಯ್ಡು ಮೂಲ ಬಿಜೆಪಿಯವರಾಗಿದ್ದು, ಪಕ್ಷದ ಅಂದಿನ ಅಗ್ರಗಣ್ಯ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಅವರ ಶಿಷ್ಯ ಮತ್ತು ಪಕ್ಷದ ನಿಷ್ಠಾವಂತರಾಗಿದ್ದರೂ ತಮ್ಮ ಅಧಿಕಾರಾವಧಿ ಮುಗಿದ ಮೇಲೆ ಮೋದಿ ಅವರ ಆಶೀರ್ವಾದವಿಲ್ಲದೆ ನಿರ್ಗಮಿಸಿದ್ದರು. ಆದ್ದರಿಂದ ಧನ್ಕರ್ ಮುಂದಿನ ರಾಷ್ಟ್ರಪತಿ ಆಗುವರೆಂಬ ಯಾವ ಲೆಕ್ಕಾಚಾರವೂ ಇದ್ದಿರಲಿಲ್ಲ. ಹಾಗಾಗಿ ಬಿಜೆಪಿಗೆ ಧನ್ಕರ್ ತಮ್ಮ ರಾಜಕೀಯ ಆಡಂಬೋಲದ ಉಪರಾಷ್ಟ್ರಪತಿಯಾಗಿದ್ದರಷ್ಟೆ.
ಕಳೆದ ಸೋಮವಾರವಷ್ಟೇ ಆರಂಭವಾಗಿದ್ದ ಮಳೆಗಾಲದ ಸಂಸತ್ ಅಧಿವೇಶನದ ಮೊದಲ ದಿನ ಮಾಮೂಲಿನಂತೆ ಸದನದ ಕಲಾಪ ನಡೆಯಿತು. ಅಂದು ಪ್ರತಿಪಕ್ಷದ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ಅವರ ಹುಟ್ಟು ಹಬ್ಬದ ಶುಭಾಶಯವನ್ನೂ ಧನ್ಕರ್ ಕೋರಿ ಖರ್ಗೆ ಅವರ ರಾಜಕೀಯ ಹೆಜ್ಜೆಗಳನ್ನು ಗುರುತಿಸಿ ಐದು ಭಾಷೆಗಳನ್ನು ಬಲ್ಲ ಹಿರಿಯ ನಾಯಕ ಎಂದು ಹೊಗಳಿದ್ದು ಅಚ್ಚರಿಯಾಗಿತ್ತು. ಏಕೆಂದರೆ ಖರ್ಗೆ ಮತ್ತು ಧನ್ಕರ್ ಅವರ ನಡುವೆ ಯಾವುದೇ ಸೌಹಾರ್ದ ಸಂಬಂಧ ಕಲಾಪದಲ್ಲಿ ಕಂಡು ಬಂದಿರಲಿಲ್ಲ. ಉಭಯತ್ರರ ನಡುವೆ ನೇರಾ ನೇರಾ ಮಾತಿನ ಚಕಮಕಿ, ಆರೋಪ ಮತ್ತು ಪ್ರತ್ಯಾರೋಪ ನಡೆಯುತ್ತಿತ್ತು. ಸದನದಲ್ಲಿ ಅತ್ಯಂತ ಹಿರಿಯ ಮತ್ತು ಮಾಜಿ ಪ್ರಧಾನಿ ಎನ್ನುವ ಕಾರಣಕ್ಕೆ ಸಭಾಪತಿ ಸ್ಥಾನದಲ್ಲಿದ್ದಾಗಲೆಲ್ಲ ಧನ್ಕರ್ ಅವರು ದೇವೇಗೌಡರ ವಿಷಯದಲ್ಲಿ ಗೌರವ ಮತ್ತು ಮೃದು ಸ್ವಭಾವದಿಂದ ನಡೆದುಕೊಳ್ಳುತ್ತಿದ್ದರು. ಗೌಡರು ಮೋದಿ ಸರ್ಕಾರವನ್ನು ಹಾಡಿ ಹೊಗಳು ವುದಕ್ಕೆ ಮುಕ್ತ ಸ್ವಾತಂತ್ರ್ಯ ನೀಡುತ್ತಿದ್ದರು. ಗೌಡರು ಎಷ್ಟು ಹೊತ್ತು ಮಾತನಾಡಿದರೂ ಅವರ ಮಾತಿಗೆ ಎಂದೂ ತಡೆ ಒಡ್ಡುತ್ತಿರಲಿಲ್ಲ.
ಅಂದರೆ ಮೋದಿ ಆಡಳಿತವನ್ನು ಹಾಡಿಹೊಗಳುವವರ ಬಗೆಗೆ ಉದಾರವಾಗಿ ನಡೆದುಕೊಳ್ಳುತ್ತಿದ್ದದ್ದನ್ನು ಬಿಟ್ಟರೆ ಧನ್ಕರ್ ಕಲಾಪ ನಡೆಸುವ ವಿಷಯದಲ್ಲಿ ಖಡಕ್ ಆಗಿರುತ್ತಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೆಲ್ಲವೂ ಸರಿಯೇ. ಆದರೆ ಅವರ ದಿಢೀರ್ ರಾಜೀನಾಮೆಗೆ ಕಾರಣವೇನು ಎಂಬ ವಿಷಯ ರಾಜಕೀಯ ಮತ್ತು ಮಾಧ್ಯಮ ವಲಯದಲ್ಲಿ ನಡೆದಿದೆ. ಅವರ ರಾಜೀನಾಮೆಗೆ ಪ್ರಧಾನಿ ಮೋದಿ ಮತ್ತು ಆಡಳಿತ ಪಕ್ಷದ ಹಿರಿಯ ಸಚಿವರು ಮತ್ತು ಪಕ್ಷದ ಕೆಲವು ಹಿರಿಯ ನಾಯಕರಿಗೆ ಹಾಗೂ ಧನ್ಕರ್ ಅವರಿಗೆ ಮಾತ್ರ ಸತ್ಯ ಸಂಗತಿ ಗೊತ್ತಿರುವುದನ್ನು ಬಿಟ್ಟರೆ ಎಲ್ಲವೂ ಉಹಾಪೋಹವಾಗಿದೆ. ದೆಹಲಿಯ ಆಡಳಿತ ವಲಯದಲ್ಲಿ ಏನು ನಡೆಯುತ್ತಿದೆ ಎನ್ನುವುದು ಗೋಪ್ಯವಾಗಿಯೇ ಉಳಿದು ಹೋಗಿದೆ.
ಮನೆಯಲ್ಲಿ ಅಕ್ರಮವಾಗಿ ಹಣ ಸಂಗ್ರಹಿಸಿದ್ದರು ಎಂಬ ಆಪಾದನೆಯ ಮೇರೆಗೆ ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿ ಯಶ್ವಂತ್ ವರ್ಮಾ ಅವರ ವಿರುದ್ಧ ಸಂಸತ್ತಿನಲ್ಲಿ ಮಹಾಭಿಯೋಗದ ಮೂಲಕ ಅವರನ್ನು ನ್ಯಾಯ ಮೂರ್ತಿ ಹುದ್ದೆಯಿಂದ ಪದಚ್ಯುತಿಗೊಳಿಸುವ ಪ್ರಕರಣದ ಸುತ್ತ ನಡೆದಿರುವ ಬೆಳವಣಿಗೆಗಳೇ ಧನ್ಕರ್ ಅವರು ದಿಢೀರ್ ರಾಜೀನಾಮೆ ನೀಡಲು ಕಾರಣ ಎನ್ನಲಾಗಿದೆ. ಸದನ ಸೇರಿದ ಮೊದಲ ದಿನ ಮಧ್ಯಾಹ್ನ ೧೨ ಗಂಟೆಗೆ ಸದನದ ಕಲಾಪ ಸಮಿತಿಯ ಸಭೆಯು ಸಭಾಪತಿ ಧನ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆದಿದೆ. ಸಭೆಯು ಭೋಜನದ ವೇಳೆಗೂ ಮುಗಿಯದ ಕಾರಣ ಸಂಜೆ ನಾಲ್ಕು ಗಂಟೆಗೆ ಮುಂದೂಡಲಾಗಿತ್ತು. ನ್ಯಾ. ಯಶ್ವಂತ್ ವರ್ಮಾ ಅವರ ವಿರುದ್ಧ ದೋಷಾರೋಪಣೆ ನಿರ್ಣಯ ಕುರಿತಂತೆ ೫೪ ಮಂದಿ ಸಂಸತ್ ಸದಸ್ಯರು ಸಹಿ ಮಾಡಿದ್ದರು. ಈ ೫೪ ಸದಸ್ಯರು ನೀಡಿರುವ ನಿರ್ಣಯದಲ್ಲಿ ೫೫ ಮಂದಿಯ ಸಹಿ ಕಂಡು ಬಂದಿದ್ದು, ಒಬ್ಬ ಸದಸ್ಯರು ಎರಡು ಬಾರಿ ಸಹಿ ಹಾಕಿರುವ ಪ್ರಕರಣವೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ನ್ಯಾ.ಯಶ್ವಂತ್ ವರ್ಮಾ ವಿರುದ್ಧ ಸದನದಲ್ಲಿ ಕೈಗೊಳ್ಳುವ ದೋಷಾ ರೋಪಣೆ ವಿಷಯದಲ್ಲಿ ಸಭಾಪತಿ ಧನ್ಕರ್ ಸರ್ಕಾರದ ಜೊತೆ ಚರ್ಚಿಸಿಲ್ಲ ಎನ್ನಲಾಗಿದೆ. ಅಂದು ಬೆಳಿಗ್ಗೆ ನಡೆದ ಸದನದ ಕಲಾಪದ ಸಭೆಯಲ್ಲಿ ಸದನದ ಸಭಾನಾಯಕ ಜೆ.ಪಿ. ನಡ್ಡಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜುಜು ಭಾಗವಹಿಸಿದ್ದರು. ಆದರೆ ಸಂಜೆ ಮುಂದೂಡಿದ ಸಭೆಯಲ್ಲಿ ಈ ಇಬ್ಬರೂ ಗೈರಾಗಿರುವ ಒಳಗುಟ್ಟು ಈಗ ಚರ್ಚೆಯ ಗ್ರಾಸವಾಗಿದೆ. ಮಧ್ಯಾಹ್ನದ ಸಭೆ ಬಳಿಕ ಸಂಜೆ ಮತ್ತೆ ಸಭೆ ಸೇರುವ ಅವಧಿಯಲ್ಲಿ ಸರ್ಕಾರ ಮತ್ತು ಸಭಾಪತಿ ಅವರ ನಡುವೆ ಏನು ನಡೆದಿದೆ ಎನ್ನುವ ಸತ್ಯ ಘಟನೆಗಳೇ ಸಂಜೆ ನಾಲ್ಕೂವರೆ ಗಂಟೆಗೆ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರ ರಾಜೀನಾಮೆಗೆ ಕಾರಣ ಎನ್ನುವುದು ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿರುವ ಮಾತುಗಳು.
ಈ ಮಧ್ಯೆ ನ್ಯಾ. ಯಶ್ವಂತ್ ವರ್ಮಾ ವಿರುದ್ಧದ ದೋಷಾರೋಪಣೆ ನಿರ್ಣಯ ಮಂಡಿಸಲು ಲೋಕಸಭೆಯಲ್ಲೂ ೧೦೦ ಮಂದಿ ಸಹಿ ಹಾಕಿದ್ದರು ಎನ್ನಲಾಗಿದೆ. ಈ ದೋಷಾರೋಪಣೆ ನಿರ್ಣಯವನ್ನು ಲೋಕಸಭೆಯಲ್ಲಿ ಮಂಡಿಸಿ ನಿರ್ಧಾರಕ್ಕೆ ಬರುವ ಬಗೆಗೆ ಸಹಜವಾಗಿ ಸರ್ಕಾರಕ್ಕೆ ಒಲವು ಇತ್ತು ಎನ್ನಲಾಗಿದೆ. ಆದರೆ ರಾಜ್ಯಸಭೆಯಲ್ಲಿ ಸಭಾಪತಿಗಳು ಈ ವಿಷಯದಲ್ಲಿ ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ ಎನ್ನುವ ಗಂಭೀರ ಆರೋಪ ಆಡಳಿತವಲಯದಲ್ಲಿ ಬಲವಾಗಿ ಕೇಳಿ ಬರುತ್ತಿದೆ. ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ಕೊಡುವ ಸಂಗತಿ ಸಾಮಾನ್ಯವಾದುದೇನಲ್ಲ. ಅದನ್ನು ಅಂಗೀಕರಿಸುವ ವಿಷಯವೂ ಸೂಕ್ಷ್ಮವಾದುದು. ಧನ್ಕರ್ ಅವರು ರಾಷ್ಟ್ರಪತಿ ಅವರ ಭೇಟಿಗೆ ಅಽಕೃತ ಅವಕಾಶವನ್ನೂ ಪಡೆಯದೇ ನೇರವಾಗಿ ಅಂದು ಸಂಜೆ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜೀನಾಮೆಯನ್ನು ಅಂಗೀಕರಿಸಿ ಧನ್ಕರ್ ಅವರ ಆರೋಗ್ಯ ಸುಧಾರಿಸಲಿ ಎಂದಷ್ಟೇ ಹಾರೈಸಿದ್ದಾರೆ. ಪ್ರಧಾನಿ ಮೋದಿ ಅವರು ಕೂಡ ಧನ್ಕರ್ ಅವರ ಆರೋಗ್ಯ ಚೆನ್ನಾಗಿರಲಿ ಎಂದಷ್ಟೇ ಪ್ರತಿಕ್ರಿಯೆ ವ್ಯಕ್ತಪಡಿಸಿರುವುದನ್ನು ಬಿಟ್ಟರೆ ಅವರ ಸೇವೆಯನ್ನು ಸ್ಮರಿಸುವುದಾಗಲಿ ಅಥವಾ ಅವರ ಮನವೊಲಿಸಿ ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಮಾಡುವ ಸೌಜನ್ಯದ ಮಾತುಗಳು ಕೂಡ ಕೇಳಿ ಬಂದಿಲ್ಲ. ಇಂತಹ ಉನ್ನತ ಸ್ಥಾನದಲ್ಲಿರುವ ಪ್ರಮುಖರು ತಮ್ಮ ಹುದ್ದೆಯನ್ನು ತ್ಯಜಿಸುವಾಗ ಅಥವಾ ನಿವೃತ್ತರಾಗುವಾಗ ಅವರ ಗೌರವಾರ್ಥ ಬೀಳ್ಕೊಡುಗೆ ಕಾರ್ಯಕ್ರಮ ನಡೆಯುವುದು ಸಂಪ್ರದಾಯ. ಆದರೆ ಇದುವರೆಗೂ ಸರ್ಕಾರದಿಂದ ಅಂತಹ ಯಾವುದೇ ಪ್ರಕ್ರಿಯೆಗಳು ನಡೆಯುವ ಕುರುಹುಗಳು ಕಾಣದಿರುವುದು ಸರ್ಕಾರ ಮತ್ತು ಧನ್ಕರ್ ನಡುವೆ ಇದ್ದ ಬಾಂಧವ್ಯ ಹದಗೆಟ್ಟಿದೆ ಎನ್ನುವುದನ್ನು ತಿಳಿಯಲು ಹೆಚ್ಚಿನ ಸಮಯ ಬೇಕಿಲ್ಲ.
ಉಪರಾಷ್ಟ್ರಪತಿಯೊಬ್ಬರು ದಿಢೀರನೇ ನೀಡಿರುವ ರಾಜೀನಾಮೆಗೆ ನಿಜವಾದ ಕಾರಣಗಳೇನು ಎನ್ನುವುದನ್ನು ತಿಳಿಯುವ ಹಕ್ಕು ದೇಶದ ಜನತೆಗಿದೆ. ರಾಜೀನಾಮೆಯ ನಿಗೂಢ ನಡೆ ಮತ್ತು ಕಾರಣಗಳು ಸತ್ಯವನ್ನು ಮುಚ್ಚಿಡಬಾರದು. ಉಪರಾಷ್ಟ್ರಪತಿ ಅವರು ‘ಅವಮಾನಿತರಾಗಿ’ ಅಧಿಕಾರ ತ್ಯಾಗ ಮಾಡುವುದು ಜನತಂತ್ರ ವ್ಯವಸ್ಥೆಯಲ್ಲಿ ಸರಿಯಾದ ಮಾರ್ಗವಲ್ಲ. ಸತ್ಯ ಸಂಗತಿ ಹೊರಬರದಿದ್ದರೆ ದೇಶದ ಆಡಳಿತ ವ್ಯವಸ್ಥೆಯಲ್ಲಿ ಮತ್ತು ಸಂಸತ್ತಿನ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆಯಾಗಿ ಉಳಿಯಬಹುದು.
” ಧನ್ಕರ್ ರಾಜ್ಯಸಭೆಯ ವಿರೋಧ ಪಕ್ಷಗಳಿಗೆ ನಿತ್ಯವೂ ಕಹಿ ಗುಳಿಗೆ ಆಗಿದ್ದರು ಎನ್ನುವುದು ಗುಟ್ಟಾಗೇನೂ ಉಳಿದಿಲ್ಲ. ಆಡಳಿತ ಪಕ್ಷದ ಪಕ್ಷಪಾತಿಯಂತೆ ಮತ್ತು ಪ್ರತಿ ಪಕ್ಷಗಳಿಗೆ ‘ಬೇಡವಾದ ಸಭಾಪತಿ’ ಆಗಿದ್ದರು ಎನ್ನುವುದರಲ್ಲಿ ಯಾವ ಮುಚ್ಚುಮರೆಯೂ ಇಲ್ಲ. ಎಲ್ಲವೂ ಕಪ್ಪು ಬಿಳುಪಿನಂತೆ ಕಲಾಪದ ವ್ಯವಹಾರಗಳು ನಡೆದು ಹೋಗಿವೆ.”
ಶಿವಾಜಿ ಗಣೇಶನ್
ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…
ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…