ಅವತ್ತಿನ ನಮ್ಮ ಹಳ್ಳಿ ರಾಮನ ಪಾತ್ರಧಾರಿ ಈಗ ಏನಾದನೋ ಗೊತ್ತಿಲ್ಲ
-ಡಾ. ಮೊಗಳ್ಳಿ ಗಣೇಶ್, ಹೆಸರಾಂತ ಕಥೆಗಾರ
ನನ್ನ ಬಾಲ್ಯದ ರಾಮ ಸೀತೆಯ ಜೊತೆಗೂ ಲಕ್ಷ್ಮಣನ ಜೊತೆಗೂ ಸುಂದರವಾಗಿ ನಿಂತಿರುತ್ತಿದ್ದ ರಾಮನ ಪಾದ ತಳದಲ್ಲಿ ನಿಯತ್ತಿನ ಹನುಮ ಮಂಡಿಯೂರಿರುತ್ತಿದ್ದ. ಪ್ರತಿಯೊಬ್ಬರಲ್ಲೂ ರಾಮ ರಾಮಾ ಎಂಬ ಹತ್ತಾರು ದನಿಗಳು ಮೊಳಗುತ್ತಿದ್ದವು. ಊರ ಕೇರಿಯ ನಾಟಕಗಳಲ್ಲಿ ರಾಮಾಯಣದ ಕಥೆ ಯಾವಾಗಲೂ ಕೇಳುತಿತ್ತು. ರಾಮಾಯಣದ ಕತೆಯೇ ನಮಗೆ ಪಾಠ ಪ್ರವಚನವಾಗಿತ್ತು. ಸಾವಿರಾರು ವರ್ಷಗಳ ಹಳೇ ಕಾಲದ ರಾಮ ಕಥೆ ನಮ್ಮದೇ ಪಾಡಿನಂತೆ ಕಾಣುತ್ತಿತ್ತು. ಇಷ್ಟು ಗತಕಾಲದ ಕತೆ ಯಾಕೆ ನಮ್ಮ ಹಟ್ಟಿಗಳಲ್ಲಿ ಹಳ್ಳಿಯ ಕೇರಿ ಕೇರಿಗಳಲ್ಲಿ ಬೇರು ಬಿಟ್ಟಿತ್ತು ಎಂಬುದೇ ತಿಳಿಯುತ್ತಿರಲಿಲ್ಲ. ರಾಮಾ ಎಂದು ಕೂಗಿ ಕಾಣದ ಆ ರಾಮನ ಜೊತೆ ಅಜ್ಜಿಯರು ತಮ್ಮ ಸಂಸಾರದ ಕಷ್ಟ ನಷ್ಟವ ಒಪ್ಪಿಸಿ ನ್ಯಾಯ ಕೇಳುತ್ತಿದ್ದರು.
ರಾಮನನ್ನು ಒಂದು ಪ್ರಮಾಣವಾಗಿ ಆಣೆ ಮಾಡುವವರೂ ಇದ್ದರು. ಆ ಕಾಲದ ರಾಮ ಇವತ್ತು ಏನೇನೊ ಆಗಿಬಿಟ್ಟಿದ್ದಾನೆ. ಆದರೂ ಅವನ ಅಗತ್ಯ ಬೆಳೆಯುತ್ತಲೇ ಇದೆ. ರಾಮ ದೇವರಾಗಿರಲಿಲ್ಲ. ಪಿತೃವಾಕ್ಯ ಪರಿಪಾಲಕನಾಗಿದ್ದ. ಅವತ್ತಿನ ರಾಮನ ಬಗ್ಗೆ ನೂರಾರು ತಗಾದೆಗಳಿವೆ. ರಾಮನ ಅವಶ್ಯಕತೆ ನಾಲ್ಕು ಸಾವಿರ ವರ್ಷಗಳ ಹಿಂದೆ ಇದ್ದುದಕ್ಕಿಂತಲೂ ಈಗ ಹೆಚ್ಚಾಗಿದೆ. ಯಾವ ಕಾರಣಕ್ಕೆ? ಕೇವಲ ರಾಜಕೀಯ ಕುತಂತ್ರಗಳಿಂದ ರಾಮನ ಅನಿವಾರ್ಯತೆ ಹೆಚ್ಚಾಗಿಲ್ಲ. ಬ್ರಾಹ್ಮಣ್ಯದಿಂದಲೇ ಶ್ರೀರಾಮ ಜೈ ಶ್ರೀರಾಮ್ ಆಗುತ್ತಿಲ್ಲ. ನಾವೆಲ್ಲ ಹಿಂದೂ ಧರ್ಮದವರು ಎಂಬ ಧಾರ್ಮಿಕ ಕಾರಣದಿಂದ ರಾಮನ ‘ರಾಮ ಜನ್ಮ ಭೂಮಿ’ ಪವಿತ್ರ ಆಗುತ್ತಿಲ್ಲ. ನಮ್ಮ ಹಳ್ಳಿಯವರಿಗೆ ಇವೆಲ್ಲ ಗೊತ್ತಿರಲಿಲ್ಲ; ಬೇಕಿರಲೂ ಇಲ್ಲ. ಇದು ಮುಖ್ಯವಾಗಿ ಆಧುನಿಕೋತ್ತರ ಭಾರತದಲ್ಲಿ ಆಗುತ್ತಿರುವುದು ರಾಮ ಎಂಬ ದೇವ ಮಾನವನ ಮೂಲಕ ಅಥವಾ ದೇವದೂತನನ್ನು ಘನವಾಗಿ ರಾಜಕೀಯವಾಗಿ ಪ್ರತಿಷ್ಠಾಪಿಸಿಕೊಂಡು ಹಿಂದೂ ಧರ್ಮದ ಮೂಲಕವೇ ಅದರಿಂದಲೇ ಹೊರ ಬಂದು ಹೊಸದೊಂದು ಧರ್ಮವನ್ನು ರೂಪಿಸಿಕೊಳ್ಳುವ ಪ್ರಜ್ಞಾಪೂರ್ವಕ ಸಮಾಜ ಸಮ್ಮೋಹನವಿರಬಹುದು. ಭಾರತೀಯ ಸಮಾಜಗಳ ಧಾರ್ಮಿಕ ಇತಿಹಾಸದಲ್ಲಿ ಇದೆಲ್ಲ ಹಿಂದೆ ಬಹಳ ಆಗಿದೆ. ಜೈನ, ಬೌದ್ಧ ಧರ್ಮಗಳ ನೆನೆಯಿರಿ. ಶ್ರೀರಾಮ ಅಯೋಧ್ಯೆಯ ರಾಜನಾಗಿದ್ದ. ಆದರೆ ಅವನ ಸುತ್ತ ಬೆಳೆದ ಮಹಾಕಾವ್ಯ ಪರಂಪರೆಗಳು ಪ್ರಪಂಚದ ಯಾವ ನಾಗರಿಕತೆಯಲ್ಲೂ ಇಲ್ಲ. ಈ ಬಗೆಯನ್ನು ಮಾಡಿದವರು ಯಾರು? ನಮ್ಮ ಜನಸಾಮಾನ್ಯರೇ! ಬಾಬ್ರಿ ಮಸೀದಿಯನ್ನು ಕೆಡವಿದವರೂ ನಮ್ಮವರೇ… ಈಗ ರಾಮಜನ್ಮ ಭೂಮಿಯಲ್ಲಿ ಉನ್ನತ ದೇಗುಲ ಕಟ್ಟಿ ಉದ್ಘಾಟನೆಗೆ ಮುಂದಾಗಿರುವವರೂ ಭಾರತೀಯರೇ! ಈ ವಿಷಯ ಇಷ್ಟೆಲ್ಲ ಧಾರ್ಮಿಕ ಆಯಾಮ ಪಡೆದುಕೊಳ್ಳಲು ಹೇಗೆ ಸಾಧ್ಯವಾಯಿತು? ಈ ಬಗೆಯ ಮಾನಸಿಕ, ರಾಜಕೀಯ, ಸಾಮಾಜಿಕ ಸ್ಥಿತಿಯನ್ನು ಆರ್ಥಿಕವಾಗಿ ವಿವೇಚಿಸಬೇಕು. ಧರ್ಮಗಳು ಹುಟ್ಟಿದ್ದೇ ಸಾಮ್ಯಾಜ್ಯಶಾಹಿ ಆರ್ಥಿಕತೆಯ ತಂತ್ರ ಮಂತ್ರಗಳಿಂದ ಅವತ್ತು ನಮ್ಮ ಹಳ್ಳಿಯ ರಾಮನ ಪಾತ್ರಧಾರಿ ಈಗ ಏನಾದನೊ ಇದ್ದಾನೊ ಇಲ್ಲವೊ ಗೊತ್ತಿಲ್ಲ.
ನನ್ನ ರಾಮ ಶಬರಿಯ ಎಂಜಲು ಬೋರೆಹಣ್ಣು ತಿಂದವ
-ರಂಜಾನ್ ದರ್ಗಾ, ಹೆಸರಾಂತ ಕವಿ ಮತ್ತು ಪತ್ರಕರ್ತ
ಆರು ದಶಕಗಳ ಹಿಂದಿನ ಮಾತು. ನಮ್ಮ ಮನೆ ವಿಜಯಪುರದ ನಾವಿಗಲ್ಲಿಯಲ್ಲಿ ಇತ್ತು. ಮರಾಠಿ ಮಾತನಾಡುವ ನಾವಿ ಸಮಾಜದವರು ಮತ್ತು ಇತರರು ಭೇಟಿಯಾದಾಗ ರಾಮ್ ರಾಮ್” ಎಂದು ಕೈ ಮುಗಿಯುತ್ತಿದ್ದುದನ್ನು ಕೇಳಿಸಿಕೊಳ್ಳುತ್ತಿದ್ದೆ. ಪ್ರಾಥಮಿಕ ಶಾಲೆಯಲ್ಲಿ ಕಾಲಿಡುತ್ತಿದ್ದ ನನಗೆ ರಾಮನ ಹೆಸರು ಮೊದಲ ಬಾರಿಗೆ ಅರಿವಿಗೆ ಬಂದಿತು. ಮೂರನೆಯ ಇಯತ್ತೆ ಇದ್ದಾಗ ಆಟವಾಡುವಾಗ ಬಿದ್ದು ತಲೆಗೆ ಗಾಯವಾಗಿ ರಕ್ತ ಸೋರಿಸಿಕೊಂಡು ಮನೆಗೆ ಬಂದಾಗ ತಾಯಿ ಗಾಬರಿಯಾಗಿ ರಾಮಾರಗತ’ ಎಂದಿದ್ದ ನೆನಪು. ನಮ್ಮ ಮನೆಯ ಮುಂದಿನ ದಾರಿಯ ಮೂಲಕ ಮರಾಠಿ ಭಾಷಿಕರು ಶವ ಸಂಸ್ಕಾರಕ್ಕೆ ಹೋಗುವಾಗ “ರಾಮನಾಮ ಸತ್ಯ ಹೈ’ ಎಂದು ಹೇಳುತ್ತಿದ್ದರು. ಜಗಳಾಡುವಾಗ “ರಾಮನಾಮ ಜಪನಾ ಪರಾಯಾ ಧನ ಅಪನಾ’ ಎನ್ನುತ್ತಿದ್ದರು. ಹೀಗೆ ನನಗೆ ರಾಮನ ಪರಿಚಯವಾಯಿತು.
ಆಗ ನಾವಿದ್ದ ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ರಾಮ ಮಂದಿರವಿದೆ. ಅದು ವಿಶಾಲವಾಗಿದ್ದು ದೊಡ್ಡ ಮನೆಯ ಹಾಗೆ ಇದೆ. ಆ ಮಂದಿರಕ್ಕೆ ಹೊಂದಿಕೊಂಡಂತೆ ಶನಿದೇವರ ದೇವಸ್ಥಾನವಿದೆ. ನಾನು ಶನಿವಾರ ಜನಿಸಿದ್ದರಿಂದ ನನ್ನ ತಂದೆ ನನ್ನನ್ನು ಪ್ರತಿ ಶನಿವಾರ ಶನಿದೇವರ ಗುಡಿಗೆ ಕರೆದುಕೊಂಡು ಹೋಗುತ್ತಿದ್ದರು. ಆಗ ನಾವು ರಾಮನಿಗೂ ಕೈಮುಗಿದು ಬರುತ್ತಿದ್ದೆವು. ರಾಮನವಮಿಯ ಮುನ್ನಾದಿನಗಳಲ್ಲಿ ಉತ್ತರದಿಂದ ಬಂದ ಕಲಾವಿದರು ರಾಮಮಂದಿರದಲ್ಲಿ ರಾಮಾಯಣದ ಪ್ರಸಂಗಗಳನ್ನು ಆಡುತ್ತಿದ್ದರು. ಆ ಸಂದರ್ಭದ ಪ್ರಖರ ಬೆಳಕಿನಲ್ಲಿ ಗರ್ಭಗುಡಿಯಲ್ಲಿರುವ ಸಾಲಂಕೃತ ಸೀತಾ ರಾಮ ಲಕ್ಷ್ಮಣರ ಅಮೃತಶಿಲೆಯ ಮೂರ್ತಿಗಳು ಅತಿಸುಂದರವಾಗಿ ಕಾಣುತ್ತಿದ್ದವು. ಆ ಮೂರ್ತಿಗಳ ಬಗ್ಗೆ ನಾನು ಎಷ್ಟೊಂದು ಆಕರ್ಷಿತನಾಗಿದ್ದೆ ಎಂದರೆ, ಇಂದಿಗೂ ಆ ನೆನಪು ಅಚ್ಚಳಿಯದೆ ಉಳಿದಿದೆ.
ನನ್ನ ರಾಮ ಶಂಬೂಕನ ವಧೆ ಮಾಡಿದವನಲ್ಲ, ಶೂರ್ಪನಖಿಯ ಮೂಗು ಕತ್ತರಿಸಿದವನಲ್ಲ, ಯಾರದೋ ಮಾತು ಕೇಳಿ ಹೆಂಡತಿಯನ್ನು ಕಾಡಿಗೆ ಅಟ್ಟಿದವನೂ ಅಲ್ಲ. ಆತ ಪಿತೃವಾಕ್ಯ ಪರಿಪಾಲಕ, ಹೆಂಡತಿ, ತಮ್ಮನೊಡನೆ 14 ವರ್ಷ ಕಾಡು ಸುತ್ತಿದವ, ಶಬರಿಯ ಎಂಜಲು ಬೋರೆಹಣ್ಣು ತಿಂದವ. ನನ್ನ ರಾಮ ಗಾಂಧೀಜಿ ಕಂಡ ರಾಮ.
ಗ್ರಂಥದ ರಾಮ ನಿರ್ಜೀವ, ನಮ್ಮೊಳಗಿರುವ ರಾಮ ಸಜೀವ
-ಡಾ.ಹಿ.ಶಿ.ರಾಮಚಂದ್ರೇಗೌಡ, ಜಾನಪದ ವಿದ್ವಾಂಸರು ಮತ್ತು ರೈತ ಹೋರಾಟಗಾರರು
ನಾನು ರಾಮನನ್ನು ವಿರೋಧಿಸುವ ಅಗತ್ಯವೇನೂ ಇಲ್ಲ. ನಮ್ಮ ಅಮ್ಮ ಮಹಾ ರಾಮಭಕ್ತಿ. ಅಪ್ಪ ಪುರಂದರ ವಿಠಲನ ಮಹಾಭಕ್ತ. ಅಮ್ಮನದು ದೈವೀ ಪ್ರಜ್ಞೆ. ಅಪ್ಪನದು ವ್ಯಾಪಾರಿ ಪ್ರಜ್ಞೆ. ನಾನು ಅಮ್ಮನ ಕಿರಿಕೂಸು. ಆದ್ದರಿಂದಲೇ ನಮ್ಮ ಮನೆಯ ಶೈವ ಪರಂಪರೆಯನ್ನು ಬಿಟ್ಟು ನನ್ನನ್ನು ರಾಮನನ್ನಾಗಿ ಮಾಡಿದಳು.
ರಾಮನನ್ನು ಯಾಕೆ ವಿರೋಧಿಸಬೇಕು, ಬೇರೆ ಯಾವುದೇ ದೇವರನ್ನು ಕೂಡ. ಭಾರತಕ್ಕೆ ರಾಮ ಒಂದು ವಿಶ್ವ ಪ್ರಜ್ಞೆ. ಅವನು ಎಲ್ಲರೊಳಗೂ ಸೇರಿ ಹೋಗಿದ್ದಾನೆ. ನಾನು ಬಾಬರಿ ಮಸೀದಿ ಧ್ವಂಸವಾದಾಗಿನಿಂದ ಹೇಳುತ್ತಿದ್ದೇನೆ. ಬರೆದಿದ್ದೇನೆ. ರಾಮನನ್ನು ರಗಳೆ ಮಾಡಿಕೊಳ್ಳಬೇಕಿಲ್ಲ. ಊರಿಗೊಂದು ರಾಮ ಮಂದಿರವಿದೆ. ಊರಿನಲ್ಲೆಲ್ಲಾ ರಾಮರಿದ್ದಾರೆ. ನಾನು ರಾಮ-ಚಂದ್ರೇಗೌಡ, ಒಬ್ಬ ಬ್ರಾಹ್ಮಣ ರಾಮ ಭಟ್ಟ, ರಾಮ ನಾಯಕ ಎಂಬ ವಾಲ್ಮೀಕಿಯವನು ರಾಮಪ್ಪ ಲಿಂಗಾಯತ, ರಾಮಯ್ಯ ಕುರುಬರವನು.
ಗ್ರಂಥದ ರಾಮ ನಿರ್ಜೀವ, ನಮ್ಮೊಳಗಿರುವ ರಾಮ ಸಜೀವ. ಅಯೋಧ್ಯೆಯ ರಾಮ ಇವನಲ್ಲ. ಕೆಲವರಿಂದ ಕೆಲವರಿಗೋಸ್ಕರ ಮತ್ತು ಕೆಲವರಿಂದಾಗಿ ಮಾಡಿಕೊಳ್ಳುತ್ತಿರುವ ರಾಮ. ಈ ಹೊತ್ತಿನ ಜಾಗತಿಕ ಪರಿಭಾಷೆಯಲ್ಲಿ ಹೇಳುವುದಾದರೆ ಕಾರ್ಪೊರೇಟ್ ಮಾರುಕಟ್ಟೆ ರಾಮ.
ಮಹಾಕವಿ ಕುವೆಂಪು ರಾಮನನ್ನು ಪುನರವತರಿಸಿದರು. ಜನರ ರಾಮನನ್ನು ಜನರಲ್ಲಿ ತಂದರು. ಮಂಥರೆ, ಶಬರಿ, ಊರ್ಮಿಳಾರನ್ನು ಶೂದ್ರ ತಪಸ್ವಿಯಲ್ಲಿ ಬೆಳಗಿಸಿದರು. ಅವನು ಲೋಕೋತ್ತರ ರಾಮ, ಎಂಥ ದಾರಿದ್ಯ ಈಗ! ಆ ವಿಶ್ವಮಾನವ ರಾಮನನ್ನು ಅನ್ಯ ಧರ್ಮ ವಿರೋಧಿಯನ್ನಾಗಿಸಬಹುದೇ! ಏಕ ಪಕ್ಷದ ಪ್ರಚಾರಕನನ್ನಾಗಿ ಮಾಡಬಹುದೇ! ಮರ್ಯಾದಾ ಪುರುಷನ ಮರ್ಯಾದೆ ಕಳೆಯುತ್ತಿದ್ದೇವಲ್ಲ!! ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ತಿಳಿದುಕೊಳ್ಳುತ್ತದೆ. ಹೌದಾ? ಗೊತ್ತಾಗುವುದಿಲ್ಲವೆ!
ರಾಮ ಒಂದು ಜೀವಿಸುವ ಹಾದಿ
-ಸುಹಾಸಿನಿ ಕೌಲಗಿ, ಹೆಸರಾಂತ ಭರತನಾಟ್ಯ ಪಟು
ಭರತನಾಟ್ಯದ ನರ್ತಕಿಯಾಗಿ ನನಗೆ ಪುರಾಣದ ಎರಡು ಪಾತ್ರಗಳು ಸದಾ ಕಾಡಿವೆ ಮತ್ತು ಆಕರ್ಷಿಸಿವೆ. ಮೊದಲನೆಯದು ಶ್ರೀ ಕೃಷ್ಣನಾದರೆ, ಎರಡನೆಯದು ಶ್ರೀರಾಮನದು. ಕೃಷ್ಣನ ಲೀಲೆಗಳನ್ನು ನರ್ತನದಲ್ಲಿ ತೋರಿಸುವುದು ಅತ್ಯಂತ ಸಂತೋಷದ ಮತ್ತು ಸಂಭ್ರಮದ ಸಂಗತಿಯಾದರೆ, ನೀಳಕಾಯದ ರಾಮನ ಗಂಭೀರ ವ್ಯಕ್ತಿತ್ವವನ್ನು ನರ್ತನದಲ್ಲಿ ಅಭಿನಯದ ಮೂಲಕ ತೋರಿಸುವುದು ಸವಾಲಿನ ಸಂಗತಿ.
ನನ್ನ ನರ್ತನ ಕಾರ್ಯಕ್ರಮದಲ್ಲಿ ಶ್ರೀರಾಮನಿಗೆ ಸಂಬಂಧಿಸಿದ ಒಂದೆರಡು ಸಂಗತಿಗಳನ್ನಾದರೂ ಸೇರಿಸದಿದ್ದರೆ ನನಗೆ ಸಮಾಧಾನವೇ ಇಲ್ಲ.
ನನ್ನ ನರ್ತನದಲ್ಲಿ ತುಳಸೀದಾಸರ, ‘ಶ್ರೀ ರಾಮಚಂದ್ರ ಕೃಪಾಲು ಭಜಮನ ಕೃತಿಯನ್ನು ಯಮನ್ ಕಲ್ಯಾಣ್ ರಾಗದಲ್ಲಿ ನರ್ತಿಸುವುದು ನನಗೆ ಬಲು ಇಷ್ಟ ಎಲ್ಲ ಭವಭಯಗಳನ್ನೂ ಹರಣ ಮಾಡುವ ರಾಮನಾಮದ ಶಕ್ತಿಯನ್ನು ಅಭಿನಯಿಸುವುದು ನನ್ನಲ್ಲೊಂದು ಧನ್ಯತೆಯ ಭಾವ ತರುತ್ತದೆ.
ನನಗೆ ದುಃಖವಾದಾಗಲೆಲ್ಲಾ ನಾನು ಕೇಳುವ ಮತ್ತು ಗುನುಗಿಕೊಳ್ಳುವ ಹಾಡು ಗಜಾನನ ಶರ್ಮರ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’. ರಾಮನಲ್ಲಿರುವಷ್ಟು ನೆಮ್ಮದಿ ಇನ್ನೆಲ್ಲೂ ಇಲ್ಲ ಎಂಬ ಸಾಲು ಮಹತ್ವದ ಸಾಲು. ಇದರಲ್ಲಿ ರಾಮ ಒಬ್ಬಬ್ಬರಿಗೂ ಒಂದೊಂದು ರೀತಿಯಲ್ಲಿ ಸಾಂತ್ವನ ನೀಡಿ ನೆಮ್ಮದಿಯ ಅಂದರೆ ಮುಕ್ತಿಯ ಹಾದಿ ತೋರಿದ ಬಗೆಯನ್ನು ಸರಳವಾಗಿ ಕಾಣಬಹುದಾಗಿದೆ. ಇಲ್ಲಿ ರಾಮನನ್ನು ಒಬ್ಬ ವ್ಯಕ್ತಿಯಾಗಿ ಅಲ್ಲದೆ ಒಂದು ಜೀವಿಸುವ ಹಾದಿ”ಯಾಗಿ ನಾವು ನೋಡಬೇಕು.
ಈ ದೇಶದ ಜನಮಾನಸದಲ್ಲಿ ಒಂದಾಗಿ ಹೋಗಿರುವ ರಾಮನಾಮದಈ ಸಾಮರ್ಥ್ಯವೇ ಇದಕ್ಕೆ ಕಾರಣ. ಬೆಳಿಗ್ಗೆ ಎದ್ದಾಗ, ರಾತ್ರಿ ಮಲಗುವಾಗ, ಕಷ್ಟಬಂದಾಗ ಅರಿವಿಲ್ಲದೆ ನಮ್ಮ ಬಾಯಿಯಲ್ಲಿ ಬರುವ ಶಬ್ದ ರಾಮ’.
ಆ ಗುಡಿಯಲ್ಲಿ ದೇವರಿಲ್ಲ
ವಿಶ್ವಕವಿ ಶ್ರೀ ರವೀಂದ್ರ ನಾಥ ಠಾಕೂರರು
1900ನೆಯ ಇಸವಿಯ ಶ್ರಾವಣದಲ್ಲಿ ಬರೆದ ಬಂಗಾಳೀ ಕವಿತೆ. ಕನ್ನಡಕ್ಕೆ ಓ.ಎಲ್.ನಾಗಭೂಷಣಸ್ವಾಮಿ
“ಆ ಗುಡಿಯಲ್ಲಿ ದೇವನಿಲ್ಲ,” ಸಾಧು ನುಡಿದ. ರಾಜ ಕೆರಳಿದ.
“ದೇವರಿಲ್ಲಾ? ಓ, ಸಾಧು, ನಾಸ್ತಿಕನಂತೆ ನುಡಿಯುತಿರುವೆ. ಅಮೂಲ್ಯ ವಜ್ರವೈಡೂರ್ಯ ಖಚಿತ ಸಿಂಹಾಸನದ ಮೇಲೆ ಸ್ವರ್ಣ ಪುತ್ತಳಿ.
ವಿರಾಜಮಾನವಾಗಿದೆ
ಆದರೂ ದೇವನಿರದೆ ದೇಗುಲ ಖಾಲಿ ಅನುವೆಯಾ?” “ದೇಗುಲ ಖಾಲಿಯಲ್ಲ, ಅದರಲಿ ತುಂಬಿದೆ ಆಳುವ ಪ್ರಭುವಿನ ದುರಹಂಕಾರ,
ಮೂಲೋಕದ ಒಡೆಯನದಲ್ಲ, ನಿನ್ನದೇ ಪ್ರತಿಷ್ಠಾಪನೆಯಾಗಿದೆ ಓ ರಾಜ,”
ಸಾಧು ನುಡಿದ.
ರಾಜನ ಹುಬ್ಬು ಗಂಟಿಕ್ಕಿದವು, “ಇಪ್ಪತ್ತು ಲಕ್ಷ ಸ್ವರ್ಣ ಮುದ್ರೆಗಳ ಅಭಿಷೇಕ ನಡೆದಿದೆ ಆಕಾಶವನು ಚುಂಬಿಸುವ ದೇವ ಪುತ್ತಳಿಗೆ ಆದನೆಲ್ಲ ದೇವರಿಗೇ ಅರ್ಪಿಸಿರುವೆ! ಇಂಥ ವೈಭವದ ದೇಗುಲದಲಿ
ದೇವರಿಲ್ಲವೆಂದು ನುಡಿಯುವೆಯಾ?” ಪ್ರಶಾಂತನಾಗಿ ನುಡಿದನು ಹೀಗೆ ಆ ಸಾಧು:
“ನಿನ್ನ ಇಪ್ಪತ್ತು ಲಕ್ಷ ಪ್ರಜೆಗಳು ಭೀಕರ ಬರಗಾಲದಲ್ಲಿ ನರಳಿದರು. ಹೊಟ್ಟೆಗನ್ನವಿಲ್ಲದೆ, ಇರಲು ಮನೆಯಿಲ್ಲದೆ ಕಂಗಾಲಾದರು.
ಸಹಾಯ ಮಾಡೆಂದು ನಿನ್ನ ಬೇಡಿ ಗೋಗರೆದರು. ಅವರನು ಬರಿಗೈಯಲ್ಲಿ ಕಳಿಸಿದೆ ನೀನು,
ಕಾಡಿನಲಿ, ಗುಹೆ ಗವಿಗಳಲಿ, ಬೀದಿಯ ಮರಗಳಡಿಯಲಿ ಹಾಳು ದೇಗುಲಗಳಲಿ ತಲೆ ಮರೆಸಿಕೊಂಡರು. ಅದೇ ವರುಷ ನೀನು
ನಿನ್ನ ವೈಭವದ ದೇಗುಲಕೆ ದಾನ ನೀಡಿದೆ ಇಪ್ಪತ್ತು ಲಕ್ಷ ಸ್ವರ್ಣಮುದ್ರೆ.
ಅಂದು ದೇವ ನುಡಿದನು ಹೀಗೆ:
“ಎಂದೂ ನಂದದ ದೀಪಗಳು ಬೆಳಗುವ
ನೀಲಿ ಬಾನು ನನ್ನ ನಿತ್ಯ ನಿಜ ನಿವಾಸ.
ಸತ್ಯ, ಶಾಂತಿ, ದಯೆ, ಪ್ರೀತಿ ನನ್ನ ನಿವಾಸದ ತಳಹದಿ ಮನೆಯಿರದ ನಿನ್ನ ಬಡ ಜನರಿಗೆ ಏನೂ ಕೊಡಲಾಗದೆ ಬಡತನ ಬಡಿದ ಗೇಣುದ್ದವಿರುವ ದುರ್ಬಲ ಜಿಪುಣಾ ನೀನು ನನಗೆ ಗುಡಿಯ ಕಟ್ಟಿಸುವೆಯಾ?” ದೇವನು ಅಂದೇ ನಿನ್ನ ಗುಡಿಯ ತೆರಳಿದನು. > ಬಿಟ್ಟು
ಬೀದಿ ಬೀದಿಯಲಿ ಮರಗಳ ಕೆಳಗೆ ಇದ್ದ ಬಡವರೊಡನೆ ಸೇರಿದನು ಕಡಲ ಅಲೆಯ ಬುದ್ದುದವೆಷ್ಟು ಖಾಲಿಯೋ
ಅಷ್ಟೇ ಖಾಲಿ ಲೊಳಲೊಟ್ಟೆ
ನಿನ್ನ ಸಂಪತ್ತಿನ ನಿನ್ನ ಅಹಂಕಾರದ ನೀರ್‌ಗುಳ್ಳೆಯಂಥ ಈ ಗುಡಿ.”
ಕನಲಿದ ರಾಜ ಚೀರಿ ನುಡಿದ,
“ಮತಿವಿಕಲ ನಾಸ್ತಿಕಾ,
ನನ್ನ ದೇಶ ಬಿಟ್ಟು ಕಳಿಸುವೆ ನಿನ್ನ ಇದೇ ಈಕ್ಷಣ.”
ಶಾಂತ ದನಿಯಲಿ ಸಂತ ನುಡಿದ,
“ದೇವನನೇ ದೇಶಭ್ರಷ್ಟಗೊಳಿಸಿದವ
ನೀನು ದಯವಿಟ್ಟು ಭಕ್ತನನೂ ಕಳಿಸಿಬಿಡು ನಿನ್ನ ರಾಜ್ಯದಿಂದ…
ಅಮ್ಮನಂತಹ ರಾಮ!
-ಮಂಡ್ಯ ರಮೇಶ್, ಹೆಸರಾಂತ ನಟ ಮತ್ತು ನಿರ್ದೇಶಕ
ನನಗೆ ‘ರಾಮ’ ಎಂದರೆ ಸಾತ್ವಿಕವಾದ ಒಂದು ಮಹಾ ರೂಪಕ ಪ್ರೀತಿಯಲ್ಲಿ, ಸಂಕಟದಲ್ಲಿ, ನೋವಿನಲ್ಲಿ, ನಗುವಿನಲ್ಲಿ, ಹತಾಶೆ-ಕೋಪ-ಅಸಹನೆ… ಎಂತಹದೇ ಸಂದರ್ಭದಲ್ಲಿ ಇಡೀ ಭಾರತಕ್ಕೆ ಮತ್ತು ಜಗತ್ತಿಗೆ ಆದರ್ಶಪ್ರಾಯವಾದ ಎರಡಕ್ಷರವೇ ರಾಮ!
ನಮ್ಮಲ್ಲಿ 300ಕ್ಕೂ ಹೆಚ್ಚು ರಾಮಾಯಣಗಳಿದ್ದರೂ, ರಾಮನನ್ನು, ಆತನ ಕತೆಯನ್ನು ಹಲವು ದೃಷ್ಟಿ ಕೋನಗಳಲ್ಲಿ, ವಿವಿಧ ಮಾದರಿಗಳಲ್ಲಿ ಭಿನ್ನವಾಗಿ ಬಣ್ಣಿಸುವ ಹಲವು ಬಗೆಯ ಆಖ್ಯಾನ, ವ್ಯಾಖ್ಯಾನಗಳಿದ್ದರೂ ರಾಮ ಎಂದೊಡನೆ ನನ್ನ ಮನಸ್ಸಿಗೆ ಬರುವುದು ಆತ ಸತ್ಯಸಂಧ ಏಕಪವ್ರತಸ್ಥ, ಪಿತೃವಾಕ್ಯ ಪರಿಪಾಲಕ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಕುಟುಂಬ ಪರಿವಾರ ಸಮೇತವಾಗಿ ಬದುಕಿದ ಬಹುತ್ವದ ಪ್ರತಿಪಾದಕ ಎಂಬ ಕಲ್ಪನೆ, ರಾಮನಷ್ಟೇ ನೋವು ನುಂಗಿದ ಪತ್ನಿ ಸೀತೆ, ವಿನಮ್ರನಾಗಿ ಭಾತೃತ್ವವನ್ನು ಪ್ರತಿನಿಧಿಸುವಲಕ್ಷ್ಮಣ ಹಾಗೂ ಅವರ ಜೊತೆ ಸದಾ ಸಹಾಯಕ್ಕೆ ನಿಂತ ರಾಮಭಂಟ ಹನುಮ ಮತ್ತು ತನ್ನ ಬೃಹತ್ ಸಂಸಾರದ ಸಮೇತ ಜೊತೆಗೂಡಿ ಬದುಕಿದ ಶ್ರೀರಾಮಚಂದ್ರನೇ ಇವತ್ತಿನ ಜಗತ್ತಿಗೆ ಬೇಕಾದ ಮಾದರಿ ವ್ಯಕ್ತಿತ್ವ
ಸಂತೋಷವಾದಾಗ ‘ಹಾ ರಾಮ’, ದುಃಖವಾದಾಗ ‘ರಾಮ ರಾಮ’, ಹಾಗೆ ಆಶ್ಚರ್ಯದ ಸಂದರ್ಭದಲ್ಲಿ ‘ಅಯ್ಯೋ ರಾಮ’ ಅಂತ ಉದ್ದರಿಸಿದ್ದು, ಉದ್ಧರಿಸುವುದು ನಿತ್ಯದ ರೂಢಿಯಾಗಿಬಿಟ್ಟಿದೆ. ‘ರಾಮ’ ಒಬ್ಬ ವ್ಯಕ್ತಿ ಅಥವಾ ನಿರ್ದಿಷ್ಟ ಗುಂಪು/ಜಾತಿ/ಪಂಗಡ/ಧರ್ಮ/ಪಕ್ಷದ ಪ್ರತಿನಿಧಿ ಅಲ್ಲ; ಅದೊಂದು ಬಹುಮುಖಿ ವ್ಯಕ್ತಿತ್ವ. ಚಂದದ ಪ್ರತಿಮಾ ಸೃಷ್ಟಿ, ನನಗೆ ಮರದಲ್ಲೂ, ಕಲ್ಲಲ್ಲೂ, ಕಟ್ಟಿಗೆಯಲ್ಲೂ, ವಾಹನದಲ್ಲೂ, ರಸ್ತೆಯಲ್ಲೂ, ರಂಗ ಮಂದಿರದಲ್ಲೂ, ಸಾಹಿತ್ಯದ ಹಾಳೆ ಹಾಳೆಗಳಲ್ಲೂ, ಹೋರಾಟಗಳಲ್ಲೂ ರಾಮ ಎನ್ನುವ ಹೆಸರು, ಅಮ್ಮ’ ಅಂತ ಮಾರ್ದನಿಸುವಷ್ಟು ಪ್ರಬಲವಾದದ್ದು ಅನ್ನಿಸುತ್ತದೆ. ಹಾಗಾಗಿ ಜಗತ್ತು ‘ರಾಮ’ ಎಂಬ ಅಪೂರ್ವ ಕಲ್ಪನೆಗೆ ಸದಾ ಪ್ರತಿಕ್ರಿಯಿಸುತ್ತದೆ.
ಹುತ್ತಗಟ್ಟದೆ ಚಿತ್ತ ಕೆತ್ತೀತೇ ಅಂಥ ಆ ರಾಮನ ಮೂರ್ತಿ?
-ಡಾ.ಶುಭಶ್ರೀ ಪ್ರಸಾದ್, ಲೇಖಕಿ, ಮಂಡ್ಯ
ಶ್ರೀರಾಮ ಎಂದಾಕ್ಷಣ ನಮ್ಮೆಲ್ಲರ ಕಣ್ಣ ಮುಂದೊಂದು ನಗುಮೊಗದ ಸೌಮ್ಯ ಮೂರ್ತಿ ಕಾಣುತ್ತದೆ. ಪಟ್ಟದಲ್ಲಿ ಕುಳಿತು ಸೀತಾ, ಲಕ್ಷ್ಮಣ, ಹನುಮ, ಭರತರೊಡ ಗೂಡಿದ ಶ್ರೀರಾಮಚಂದ್ರ ಮಹಾಪ್ರಭುವಿನ ಚಿತ್ರ ಒಂದೆಡೆಯಾದರೆ, ಅಪ್ಪನ ಮಾತಿಗೆ ಒಪ್ಪಿಗೆಯಿತ್ತು ಮನದೊಡತಿ ಮತ್ತು ಅನುಜರೊಡನೆ ಕಾಡಿಗೆ ಹೋದ ರಾಮನ ಚಿತ್ರ ಮನದಲ್ಲಿ ಮೂಡುತ್ತದೆ. ರಾಜ್ಯಕ್ಕೆ ಅರಸನಾದರೆ ಸಾಲದು, ಮನೆಮಂದಿಯ ಆಪ್ತನೂ ಆಗಬೇಕೆಂಬ ದೊಡ್ಡ ತತ್ವವನ್ನು ಬಾಯಿಯಲ್ಲಿ ಹೇಳದಲೇ ಮಾಡಿ ತೋರಿದ ಮಹಾಪರಾಕ್ರಮಿ ಮತ್ತು ಅದ್ಭುತ ಸಂಯಮಿ ಯಾರಾದರೂ ಇದ್ದರೆ ಅದು ರಾಮನೇ.
ಕಲ್ಲಾದ ಅಹಲ್ಯಯ ಶಾಪ ವಿಮೋಚನೆ ಮಾಡಿದ ರಾಮ ಒಮ್ಮೆ ನೆನಪಾದರೆ, ಮರೆಯಲ್ಲಿ ನಿಂತು ವಾಲಿಗೆ ಬಾಣಹೂಡಿದ ರಾಮನೂ ನೆನಪಾಗುತ್ತಾನೆ. ನೂರಾರು ಆದರ್ಶ ಸ್ತ್ರೀಯರ ಹೆಸರು ನೆನೆಪಿಗೆ ಬಂದರೂ ಪುರುಷೋತ್ತಮ ಎಂದರೆ ಅದು ಶ್ರೀರಾಮ ಮಾತ್ರವೇ.
ರಾಮ ಎಂದಾಕ್ಷಣ ರಾವಣನನ್ನು ಸಂಹರಿಸಿದ ರಾಮ ನೆನಪಿನಂಗಳದಲ್ಲಿ ಮೂಡುತ್ತಾನೆ; ಆದರೆ ಹಾಗೆ ಸಂಹರಿಸಿದ ಕಾರಣ ನೆನಪಿಗೆ ಬಾರದು. ಯಾವುದು ಆದರ್ಶಪ್ರಾಯ ಗುಣ, ಯಾವುದು ಅಸುರೀಗುಣ ಎಂಬುದನ್ನು ವಿಶ್ಲೇಷಿಸುವ ಅರಿವು ಮೂಡಬೇಕು. ನಾಲಗೆಯ ಜಪ ಮಾತ್ರವಲ್ಲದೆ ಒಳಮನದ ಬೇಗುದಿಯ ಪರಿಹರಿಸುವ ರಾಮನಾಮ ಒಳಗೇ ರಿಂಗಣವಾಗಬೇಕು.
ಶ್ರೀರಾಮ ಭಾರತೀಯರ ಸಾಂಸ್ಕೃತಿಕ ಪ್ರಜ್ಞೆಯ ಬಾಹ್ಯರೂಪ. ಅಷ್ಟಲ್ಲದೆ ಅಡಿಗರು ಹೇಳಿಹರೇ ‘ಹುತ್ತಗಟ್ಟದೆ ಚಿತ್ತ ಕೆತ್ತೀತೇ ಅಂಥ ಆ ರಾಮನ ಮೂರ್ತಿ?’
ರಾಮಕ್ಕನ ಹಾದಿಯ ಪ್ರೀತಿಯ ಹೂಗಳು
-ಗುರುಪ್ರಸಾದ್ ಕಂಟಲಗೆರೆ, ಪ್ರಶಸ್ತಿ ಪುರಸ್ಕೃತ ಕಥೆಗಾರ
ಮೊನ್ನೆ ಇದ್ದಕ್ಕಿದ್ದಂತೆ ದಿನದ ಮೊದಲ ಅವಧಿಯಲ್ಲೇ ವಿದ್ಯಾರ್ಥಿನಿಯೊಬ್ಬಳು ರಾಮನಿರುವ ಕರಪತ್ರವನ್ನೊಂದು ತಂದು ಕೈಗಿಟ್ಟು, ಇದನ್ನು ಇಂಥದ್ದೆ ದಿನದಂದು ದೇವರ ಮನೆಯಲ್ಲಿಟ್ಟು ಪೂಜಿಸಿ, ಅಕ್ಷತೆ ಹಾಕಬೇಕಂತೆ ಸರ್ ಎಂದಳು. ಉಳಿದ ಮಕ್ಕಳೂ ತಕ್ಷಣವೇ ತಮ್ಮ ಬ್ಯಾಗುಗಳಲ್ಲಿದ್ದ ಅಂಥದ್ದೇ ಕರಪತ್ರಗಳನ್ನು ಹೊರತೆಗೆದು ತಮ್ಮ ಬಳಿಯೂ ಇದೆ ಸರ್, ಊರಿನ ಎಲ್ಲ ಮನೆಗಳಿಗೂ ಹಂಚಿದ್ದಾರೆ. ನಮ್ಮಮ್ಮ ಈಗಾಗಲೆ ದೇವರಮನೆಯಲ್ಲಿ ಒಂದನ್ನು ಪ್ರತಿಷ್ಠಾಪಿಸಿದ್ದಾರೆ ಎಂದಳು. ಚರಿತ್ರೆಯಲ್ಲಿನ ಅಳವಡಿಸಿಕೊಳ್ಳಬೇಕಾದ ಉತ್ತಮ ಅಂಶಗಳನ್ನು ತುಸು ಒತ್ತುಕೊಟ್ಟು ಪಾಠ ಮಾಡುವ ನನಗೆ ವರ್ತಮಾನದಲ್ಲಿ ಬರುವ ಇಂಥ ಪ್ರವಾಹಗಳು ನಾನು ಕಟ್ಟಿದ ವಿಶ್ವಾಸದ, ಪ್ರೀತಿಯ, ಸೌಹಾರ್ದದ ಅಣೆಕಟ್ಟನ್ನು ಒಂದೇ ಏಟಿಗೆ ಹೊಡೆದುರುಳಿಸಿಬಿಡುತ್ತಿವೆಯಲ್ಲ ಎಂದು ಆತಂಕವಾದದ್ದು ಸುಳ್ಳಲ್ಲ.
ತಕ್ಷಣ ನನ್ನ ನೆನಪಿಗೆ ಬಂದದ್ದು ‘ರಾಮಕ್ಕೆ ಹೆಸರಿನ ನನ್ನ ಮುತ್ತಜ್ಜಿ, ನಾಕಾರು ಜನ ತನ್ನ ಮೊಮ್ಮಕ್ಕಳ ಜೊತೆಗೂಡಿ ತನ್ನ ತವರೂರಿಗೆ ನಡೆದೇ ಹೋಗುತ್ತಿದ್ದ ರಾಮಕ್ಕ ಮಾರ್ಗ ಮಧ್ಯದಲ್ಲಿ ಶಿವಮ್ಮನ ಗುಡಿಸಲು ಅಂಗಡಿಯಲ್ಲಿ ಸ್ವಲ್ಪ ಹೊತ್ತು ವಿರಮಿಸುತ್ತಿದ್ದಳು. ಶಿವಮ್ಮ ಕೊಟ್ಟ ಈಚಲು ಹೆಂಡವನ್ನು ಗುಟುಕಿಸಿ, ದಣಿವಾರಿಸಿಕೊಂಡು ನೆತ್ತಿ ಮೇಲಿನ ಬಿಸಿಲಿಳಿಸಿಕೊಂಡು ಪ್ರಯಾಣ ಮುಂದುವರಿಸುತ್ತಿದ್ದಳು. ಸಂಜೆಯಷ್ಟರಲ್ಲಿ ಮಕ್ಕಳು, ಮೊಮ್ಮಕ್ಕಳೊಂದಿಗೆ ಬಂಧು ಬಳಗವಿರುವ ತವರೂರು ಸೇರುತ್ತಿದ್ದಳು. ಆಗ ಈಗಿನಂತೆ ‘ರಾಮ’ ಎಂಬ ಹೆಸರು ಕೇವಲ ಗಂಡಸರಿಗಷ್ಟೆ ಸೀಮಿತವಾಗಿರಲಿಲ್ಲ ಹಲವು ‘ರಾಮಕ್ಕಂದಿರೂ ಇದ್ದರು. ಯಾಕೋ ‘ರಾಮ’ ನಾಮಾಂಕಿತ ಬರುಬರುತ್ತ ಹೆಂಗಸರನ್ನು ತನ್ನಿಂದ ದೂರವೇ ಆಗಿಸಿಕೊಂಡಂಡಂತಿದೆ. ಅವಳು ಸಾಗಿದ್ದು ಕಲ್ಲು ಮುಳ್ಳಿನ ಹಾದಿಯೇ ಆದರೂ ದಾರಿಯುದ್ದಕ್ಕೂ ಪ್ರೀತಿಯ ಹೂಗಳು ಅರಳಿರುತ್ತಿದ್ದವು. ಕಮ್ಮಾರ, ಕುಂಬಾರ, ಚಮ್ಮಾರ ಎಲ್ಲರ ಎಡತಾಕಿಯೇ ಅವಳು ಹೋಗುತ್ತಿದ್ದಳು. ತೀರಿ ಹೋದ ರಾಮಕ್ಕನಿಗೆ ಯಾವ ಸಮಾಧಿಯೂ ಇಲ್ಲ, ಅವಳ ಗುರುತಿಗೆ ಒಂದು ಫೋಟೊವೂ ಇಲ್ಲ. ಆದರೆ ಅವಳು ಬಿಟ್ಟು ಹೋದ ಈ ಬಾಂಧವ್ಯದ ನೆನಪುಗಳು ಸದಾ ಜೀವಂತ, ಎಲ್ಲರೂ ಸೇರಿದಾಗ ಅವಳ ನಡೆ ನುಡಿ ಬದುಕಿನದೇ ಚರ್ಚೆ.
ಪಪ್ಪನ ತೋಳದಿಂಬಿನ ಮೇಲೆ ಮಲಗಿ ಕೇಳಿದ ರಾಮನ ಕಥೆ
-ಅಮಿತಾ ರವಿಕಿರಣ್, ಗಾಯಕಿ, ಲೇಖಕಿ, ಬೆಲ್ಲಾಸ್ಟ್, ಉತ್ತರ ಐರ್ಲೆಂಡ್
ರಾಮ, ನನಗೆ ಅವನು ಕಂಡಿದ್ದು ನನ್ನ ಪಪ್ಪ ಹೇಳುತ್ತಿದ್ದ ಕಥೆಗಳಲ್ಲಿ, ಪಪ್ಪನ ತೋಳದಿಂಬಿನ ಮೇಲೆ ಮಲಗಿಕೊಂಡು, ಕಥೆ ಕೇಳುತ್ತಾ, ಅಲ್ಲೇ ಕಳೆದು ಹೋಗಿ, ನಾರದ ಬೇಡನಿಗೆ ಹೇಳಿದ ಆ ಮರ, ಈ ಮರ ಮಂತ್ರವನ್ನು ನಾನೂ ಹೇಳುತ್ತಾ ರಾಮ್ ರಾಮ್ ಆಗುವುದನ್ನು ಕಂಡು ವಿಸ್ಮಿತಳಾಗಿದ್ದೇನೆ. ಅವರು ಹೇಳುವ ಆ ಕಥೆಯ ಗುಂಗಿನಲ್ಲಿ ರಾಮನ ಜೊತೆ ಅಯೋಧ್ಯೆಯಿಂದ ಲಂಕೆಯ ತನಕ ಪಯಣಿಸಿದ್ದೇನೆ. ಮತ್ತೆ ಅವರ ಧ್ವನಿಯು ತೋರಿದ ಹಾದಿಯಲ್ಲಿ ಸೀತೆ, ರಾಮ, ಲಕ್ಷ್ಮಣನ ಜೊತೆಗೆ ಅಯೋಧ್ಯೆಗೆ ಬಂದು, ರಾಮನ ಪಟ್ಟಾಭಿಷೇಕವನ್ನೂ ನೋಡಿದ್ದೇನೆ.
ಜೊತೆಗೆ, ರಾಮಾಯಣದ ನಡು ನಡುವೆ ಅವರಿಗೆ ರಾಮನನ್ನು ಕಾಣಿಸಿದ, ತೋರಿಸಿದ ಶಿರಸಿಯ ಅವರ ಅಜ್ಜಿ ಮನೆಯಲ್ಲಿದ್ದ ಆ ತಾಳೆಗರಿಯ ಮೇಲೆ ಬರೆಯಲಾದ ಆ ರಮ್ಯ ಶ್ರೀರಾಮನ ಕಥೆ, ಶ್ರಾವಣದ ಸಂಜೆಗಳಲ್ಲಿ ದಿನಕ್ಕೊಂದು ಅಧ್ಯಾಯದಂತೆ ಮಾಡಲಾಗುತ್ತಿದ್ದ ಪಾರಾಯಣ, ರಾಮನಿಗೆ ಸಂಕಟ ಬಂದಂಥ ಸಂದರ್ಭ ಕಥೆಯಲ್ಲಿ ಬಂದಾಗ ಆ ಅಧ್ಯಾಯ ನಿಲ್ಲಿಸದೆ ಮುಂದುವರಿಸುತ್ತಿದ್ದ ಪರಿಯನ್ನೂ ಹೇಳುತ್ತಿದ್ದರು. ಈ ಕಥೆಗಳನ್ನು ಕೇಳುವಾಗ ಕಣ್ಣಮುಂದೆ ಬರುತ್ತಿದ್ದುದು, ನಮ್ಮ ಹಳೇ ಮನೆಯ ಮುಂಭಾಗದಲ್ಲಿ ದೊಡ್ಡ ಪ್ರೇಮಿನಲ್ಲಿ ನಸುನಗುತ್ತಾ ನಿಂತ ಆ ಬಾಲ ರಾಮನ ಮುಖ. ಈವತ್ತಿಗೂ ರಾಮ ಎಂದರೆ ನನಗೆ ಆ ಬಾಲರಾಮನ ಚಿತ್ರವೇ ಕಣ್ಣಮುಂದೆ.
ರಾಮನ ಹೆಸರನು ಮರಳಲಿ ಬರೆದ ಸುಖ
-ಫಾತಿಮಾ ರಲಿಯಾ, ಪ್ರಶಸ್ತಿ ಪುರಸ್ಕೃತ ಕಥೆಗಾರ್ತಿ
ಬಾಲ್ಯಕಾಲದ ಶ್ರೀರಾಮನೆಂದರೆ ಕಡಲ ತೀರದ ಮರಳಲಿ ಅವನ ಹೆಸರು ಬರೆಯುವ ಸುಖ.
ರಾಮನನ್ನು ಪೂಜಿಸುವರು “ಅಲೆಗಳು ಬಂದು ಹೇಗೆ ರಾಮನನ್ನು ತಬ್ಬಿಕೊಳ್ಳುತ್ತವೆ ನೋಡು” ಅನ್ನುತ್ತಿದ್ದರು. ಉಗುರೊಳಗೆ ಮರಳು ಸೇರಿಕೊಳ್ಳದಂತೆ ತೋಸ್ಟೆರಳ ತುದಿಯಲಿ ಅವನ ಹೆಸರು ಗೀಚಿ ಮುಗಿಸುವಷ್ಟರಲ್ಲಿ ಅಲೆಗಳು ಬಂದು ಅದನ್ನು ಅಳಿಸಿ ಹಾಕಿ ರಾಮನನ್ನು ತನ್ನೆದೆಯೊಳಗೆ ಹೊತ್ತುಕೊಂಡು ಕಡಲಿಗೆ ಮರಳುತ್ತಿತ್ತು. ಅಲ್ಲಿಂದ ಮುಂದೆ ರಾಮನೆಂದರೆ ಬೆರಗು, ರಾಮನೆಂದರೆ ಅಚ್ಚರಿ. ಆಗ ಅಗಾಧ ಕಡಲು ರಾಮನ ಹೆಸರನ್ನು ತಬ್ಬಿಕೊಂಡಂತೆ ರಹೀಮನನ್ನೂ ತಬ್ಬಿಕೊಳ್ಳುತ್ತದೆ ಎಂದು ಯೋಚಿಸುವಷ್ಟು ಮನಸ್ಸು ಲಾಜಿಕಲ್ ಆಗಿರಲೇ ಇಲ್ಲ.
ಕಲ್ಲಾಗಿದ್ದ ಅಹಲೈಗೆ ಮರು ಜೀವ ಕೊಟ್ಟದ್ದು, ಜನಕ ರಾಜನ ಅರಮನೆಯಲ್ಲಿ ಶಿವನ ಧನಸ್ಸನ್ನು ಎತ್ತಿದ್ದು, ಪಿತೃವಾಕ್ಯ ಪರಿಪಾಲಕನಾಗಿ ಕಾಡಿಗೆ ಹೋದದ್ದು, ವಾನರ ಹನುಮಂತನನ್ನು ಆಪ್ತ ಸಖನನ್ನಾಗಿ ಮಾಡಿಕೊಂಡದ್ದು… ರಾಮನಿಗೆ ಜೈ ಅನ್ನಲು ಎಷ್ಟೊಂದು ವಿಚಾರಗಳಿದ್ದವು ಆಗ. ಪ್ರಜಾಪರಿಪಾಲಕ ರಾಮ ಎದೆಯೊಳಗೆ ಬಿತ್ತಿದ ಬೆಳಕು ಕಾಮನಬಿಲ್ಲಾಗಲು ಯಾವ ಪಟ್ಟಕವೂ ಬೇಕಿರಲಿಲ್ಲ. ಗರ್ಭಗುಡಿಯಲ್ಲಿ, ಭಕ್ತರ ಹೃದಯದಲ್ಲಿ ಮೂಡುತ್ತಿದ್ದ ಕಾಮನಬಿಲ್ಲಿನಂಥ ರಾಮನಿಗೆ ಬಲವಂತವಾಗಿ ‘ಜೈ ಶ್ರೀರಾಮ್’ ಹೇಳಿಸುವ ದರ್ದು ಇರಲೇ ಇಲ್ಲ
ನನ್ನ ಪತಿ ದೇವರ ಹೆಸರೂ ರಾಮಚಂದ್ರ
-ಮಾಯ ರಾಮಚಂದ್ರನ್, ವಿಶೇಷ ಮಕ್ಕಳ ಶಿಕ್ಷಕಿ, ಮೈಸೂರು
ನಾವು ಶ್ರೀ ರಾಮನನ್ನು ಆದಿಪುರುಷ, ಮರ್ಯಾದಾ ಪುರುಷೋತ್ತಮ, ವಿಷ್ಣುವಿನ ಅವತಾರ ಎಂದು ಹೀಗೆಲ್ಲಾ ಕರೆಯುತ್ತೇವೆ. ಶ್ರೀರಾಮನಲ್ಲಿ ಒಬ್ಬ ಪುತ್ರ, ಸಹೋದರ, ಪತಿಯಲ್ಲಿ ಯಾವ ಗುಣಗಳಿರಬೇಕೋ ಅವೆಲ್ಲಾ ಇದ್ದವು. ತಂದೆ ತಾಯನ್ನು ಪೂಜಿಸುವ ಮಗ, ತಮ್ಮಂದಿರನ್ನು ಪ್ರೀತಿಸುವ ಅಣ್ಣ ಮತ್ತು ಒಲವಿನಿಂದ ಪತ್ನಿಯ ಆಸೆ ಆಕಾಂಕ್ಷೆಗಳನ್ನು ಪೂರೈಸುವ ಪತಿ.
ಅವರೇ ನನ್ನ ಶ್ರೀರಾಮ. ಅವರ ಹೆಸರಿನಲ್ಲೂ ‘ರಾಮ’ ಇದ್ದಾನೆ. ಅವರೆ ನನ್ನ ಅಮ್ಮನ ಅಣ್ಣ. ನನ್ನ ಮಾಮ. ಇಂತಹ ಮಹಾಪುರುಷರನ್ನು ನಾವು ಎಲ್ಲೆಲ್ಲೂ ನೋಡುತ್ತಿರುತ್ತೇವೆ. ಕಡೆಯದಾಗಿ ನನ್ನ ಪತಿ ದೇವರ ಹೆಸರೂ ರಾಮಚಂದ್ರ!!
ಕತ್ತಲ ಕಳೆಯುವ ಬೆಳಕೇ ರಾಮ!
-ಶ್ರೀವಿದ್ಯಾ, ಉದ್ಯಮಿ ಮತ್ತು ಕಲಾವಿದೆ, ಮೈಸೂರು.
ನಾನಾಗ ಒಂಬತ್ತನೇ ತರಗತಿಯಲ್ಲಿದ್ದಿರಬಹುದು. ಜಿಲ್ಲಾ ಮಟ್ಟದಲ್ಲಿ ನಡೆದ ಪ್ರತಿಭಾ ಪ್ರದರ್ಶನದಲ್ಲಿ, ಪ್ರೌಢಶಾಲಾ ಮಕ್ಕಳಿಗಾಗಿ ಎರಡು ನಿಮಿಷದ ಏಕವ್ಯಕ್ತಿ ನಾಟಕ ಸ್ಪರ್ಧೆಯಲ್ಲಿ, ನಾನು ‘ಶಬರಿ’..! ಶಬರಿಯಂತಹ ಮಹಾಭಕ್ತಿಯ ಪಾತ್ರವನ್ನು ನಿಭಾಯಿಸಲು ಸಾಧ್ಯವೇ?! ಅದಕ್ಕೂ ಸರಿಯಾಗಿ, ನನ್ನ ಸರದಿ ಬರುವಷ್ಟರಲ್ಲಿ, ವಿದ್ಯುಚ್ಛಕ್ತಿ ವಿಫಲವಾಗಿ ಕಾಯುತ್ತ ನಿಂತಿರುವ ಹೊತ್ತಲ್ಲಿ, ವೇದಿಕೆಯೇರುವ ಮುನ್ನ, ರಾಮನನ್ನು ಸ್ವಲ್ಪವಾದರೂ ನನಗೆ ಅರ್ಥ ಮಾಡಿಸಲು, ನಾಟಕದ ಮೇಷ್ಟ್ರು ಮಾಡಿದ ಕೊನೆಯ ಪ್ರಯತ್ನದ ರಾಮ, ನನಗಿನ್ನೂ ಮನದಾಳದಲ್ಲಿ ಬೇರೂರಿದ್ದಾನೆ…
‘ರಾಮ’ನ ವ್ಯಕ್ತಿತ್ವಕ್ಕೂ ಮುಂಚೆ, ‘ರಾಮ’ ಎನ್ನುವ ಶಬ್ದವೇ ಶಕ್ತಿಯುತ! ಆ ಹೆಸರೇ, ಜ್ಞಾನದ ಹಾದಿ, ಭಾವದ ಸೌಂದರ್ಯ, ಕಾರ್ಯಕ್ಕೆ ಪ್ರೇರಣೆ! ರಾಮನ ಹೆಸರಿನಿಂದಲೇ, ಪಾನಕ ಅಷ್ಟು ಸಿಹಿ, ಅದೇ ಪಾನಕ ಬೇರೆ ಸಮಯದಲ್ಲಿ, ರುಚಿ ನೀಡುವುದಿಲ್ಲ… ‘ರಾಮ’ ಅಪೂರ್ವ, ಅನಂತ, ಅವ್ಯಕ್ತ ಹಾಗೂ ಅಗಾಧ ಪ್ರೇಮವುಳ್ಳವನು… ಹಾಗಾಗಿ ಶಬರಿಗೆ, ‘ರಾಮ’ನೇ ಬೆಳಕು’… ಎಂದು ಅವರು ಹೇಳುತ್ತಲೇ, ಫಕ್ಕನೆ ಎಲ್ಲದೀಪಗಳೂ ಹೊತ್ತಿಕೊಂಡವು! ‘ರಾಮನೇ ಬೆಳಕೆಂಬ ಅವರ ಮಾತು, ನನ್ನನ್ನು ಮೂಕಳನ್ನಾಗಿಸಿತು…
ಮಾಗಿದ ಹಣ್ಣಲ್ಲ ಮಂತ್ರಕ್ಕೆ ಉದುರಿದ ಹಣ್ಣಲ್ಲ ಗುದ್ದಿ ಗುದ್ದಿ ಮಾಗಿಸಿದ ಹಣ್ಣು ಮತ್ತೆ ಮೈಮರೆತರೆ ಕೈಯಿಂದಲೇ ಮಾಯವಾಗುವ ಹಣ್ಣು ಕೈಗೆ…
ನಕಲಿ ನೋಟುಗಳು, ನಕಲಿ ಆಹಾರ ಪದಾರ್ಥಗಳು, ನಕಲಿ ದಾಖಲೆಗಳು, ನಕಲಿ ಅಧಿಕಾರಿಗಳು, ನಕಲಿ ಪೊಲೀಸರು, ನಕಲಿ ಸುದ್ದಿ ವಾಹಿನಿಗಳು ಅಷ್ಟೇ…
ಚನ್ನಪಟ್ಟಣದ ಕಲ್ಪಶ್ರೀ ಪ್ರದರ್ಶನ ಕಲೆಗಳು ಕೇಂದ್ರ ಟ್ರಸ್ಟ್ ವತಿಯಿಂದ ನವಂಬರ್ 5ರ ಸಂಜೆ 5.30ಕ್ಕೆ ಮಲೇಷಿಯಾದ ಕೌಲಾಲಂಪುರದ ಸುಭಾಷ್ ಚಂದ್ರ…
ಮಡಿಕೇರಿ: ನಾಳೆ ತಲಕಾವೇರಿ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯ ನಡೆಯುವುದರಿಂದ ಮಧ್ಯಾಹ್ನ 2 ಗಂಟೆ ಬಳಿಕ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.…
ಮೈಸೂರು: ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ನಡೆದಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ…
ಎಚ್.ಡಿ.ಕೋಟೆ: ಕಳೆದ ಕೆಲ ದಿನಗಳಿಂದ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿ ಸೆರೆಗೆ ದಸರಾ ಆನೆ ಮಹೇಂದ್ರನನ್ನು ಬಳಸಿಕೊಳ್ಳಲಾಗಿದೆ.…