ಪಕ್ಷದ ಗೆಲುವಿಗೆ ಶ್ರಮಿಸಲು ರಾಜ್ಯದ ನಾಯಕರಿಗೆ ಹೈಕಮಾಂಡ್ ಸೂಚನೆ
ಕಳೆದ ವಾರ ಬಿಜೆಪಿ ಪಾಳೆಯದಲ್ಲಿ ಹರಿದಾಡಿದ ಒಂದು ಸುದ್ದಿ ಕುತೂಹಲಕ್ಕೆ ಕಾರಣವಾಯಿತು. ಅದರ ಪ್ರಕಾರ ಕರ್ನಾಟಕದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುವ ಗರಿಷ್ಟ ಯತ್ನ ನಡೆಯಲಿ ಅಂತ ಬಿಜೆಪಿಯ ವರಿಷ್ಠರು ರಾಜ್ಯದ ನಾಯಕರಿಗೆ ಸೂಚಿಸಿದ್ದಾರೆ. ಅಂದ ಹಾಗೆ ಕರ್ನಾಟಕದ ಎರಡು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಯನ್ನು ಬಿಜೆಪಿ ವರಿಷ್ಠರು ಏಕೆ ಇಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆ.
ಮೇಲ್ನೋಟಕ್ಕೆ ನೋಡಿದರೆ ಈ ಉಪಚುನಾವಣೆಯಲ್ಲಿ ಬಿಜೆಪಿ- ಜಾ.ದಳ ಮಿತ್ರಕೂಟದ ಗೆಲುವು ರಾಜಕೀಯವಾಗಿ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಅರ್ಥಾತ್, ಈ ಕ್ಷೇತ್ರಗಳಲ್ಲಿ ಗೆಲುವು ಗಳಿಸಿದರೆ ಕಾಂಗ್ರೆಸ್ ಸರ್ಕಾರಕ್ಕೆ ಅಪಾಯವೂ ಇಲ್ಲ ಅಥವಾ ಕರ್ನಾಟಕದ ನೆಲೆಯಲ್ಲಿ ರಾಜಕೀಯ ಅಲ್ಲೋಲ ಕಲ್ಲೋಲವಾಗುವುದಿಲ್ಲ. ಹೋಗಲಿ, ಈ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದರೆ ಬಿಜೆಪಿಯ ನೆಲೆಗೆ ಹೊಡೆತ ಬೀಳುತ್ತದಾ ಎಂದರೆ ಅದೂ ಇಲ್ಲ. ಏಕೆಂದರೆ ಈ ಎರಡೂ ಕ್ಷೇತ್ರಗಳು ಕಾಂಗ್ರೆಸ್ಸಿನ ಭದ್ರಕೋಟೆಗಳಾಗಿವೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ನಿರಂತರವಾಗಿ ಗೆಲುವು ಸಾಧಿಸುತ್ತಾ ಬಂದಿದ್ದರು. ಇನ್ನು ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದ ಉದಾಹರಣೆಗಳಿವೆಯಾದರೂ ಕ್ಷೇತ್ರದಲ್ಲಿರುವ ಅಹಿಂದ ವರ್ಗಗಳ ಮತ ಬ್ಯಾಂಕ್ ಸಿದ್ದರಾಮಯ್ಯ ಅವರ ಕಾರಣಕ್ಕಾಗಿ ಸಾಲಿಡ್ಡಾಗಿ ಕ್ರೋಢೀಕರಣಗೊಂಡಿದ್ದವು ಮತ್ತು ಇದರ ಪರಿಣಾಮವಾಗಿ ಎಚ್.ವೈ. ಮೇಟಿ ನಿರಾಯಾಸವಾಗಿ ಗೆಲುವು ಸಾಧಿಸುತ್ತಿದ್ದರು. ಆದರೆ ಇಂತಹ ಕ್ಷೇತ್ರಗಳಲ್ಲಿ ಶತಾಯಗತಾಯ ಕಾಂಗ್ರೆಸ್ ವಿರುದ್ಧ ಗೆಲುವು ಸಾಧಿಸಲು ಯತ್ನಿಸಿ ಅಂತ ಈಗ ಬಿಜೆಪಿ ವರಿಷ್ಠರು ರಾಜ್ಯದಲ್ಲಿರುವ ಸ್ವಪಕ್ಷದ ನಾಯಕರಿಗೆ ಹೇಳುತ್ತಿರುವುದಕ್ಕೆ ಕಾರಣವೇನು ಎಂದು ನೋಡಿದರೆ ಕುತೂಹಲಕಾರಿ ಅಂಶಗಳು ಹೊರಬೀಳುತ್ತವೆ.
ಉದಾಹರಣೆಗೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವನ್ನೇ ತೆಗೆದುಕೊಳ್ಳಿ.ಈ ಕ್ಷೇತ್ರದಲ್ಲಿ ಬಿಜೆಪಿ ವರಿಷ್ಠರ ಕಣ್ಣು ಕುಕ್ಕುವ ಒಂದು ಸಂಗತಿ ಇದೆ.ಅದೆಂದರೆ ಕ್ಷೇತ್ರದಲ್ಲಿರುವ ಮುಸ್ಲಿಂ ಮತದಾರರ ಸಂಖ್ಯೆ. ಕ್ಷೇತ್ರದಲ್ಲಿರುವ ೨.೩೦ ಲಕ್ಷ ಮತದಾರರ ಪೈಕಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು ಎಂಬತ್ತು ಸಾವಿರ. ಒಂದು ವೇಳೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವೇನಾದರೂ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ ಬಿಜೆಪಿ ಸಾಂಪ್ರದಾಯಿಕ ಮಾರ್ಗವನ್ನು ಅನುಸರಿಸುತ್ತಿತ್ತು. ಅರ್ಥಾತ್,ಮುಸ್ಲಿಂ ಅಭ್ಯರ್ಥಿಯ ವಿರುದ್ದ ಹಿಂದೂ ಮತಗಳನ್ನು ಕ್ರೋಢೀಕರಿಸಲು ಯತ್ನಿಸುತ್ತಿತ್ತು.
ಆದರೆ ಈಗ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದರಿಂದ ಬಿಜೆಪಿ ಸಾಂಪ್ರದಾಯಿಕ ಶೈಲಿಯಲ್ಲಿ ಹೋರಾಡಲು ಸಾಧ್ಯವಿಲ್ಲ.ಅದರೆ ಇತ್ತೀಚೆಗೆ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಾಡಿದಂತೆ ವಿಭಿನ್ನ ತಂತ್ರಗಾರಿಕೆಯನ್ನು ಅನುಸರಿಸುವುದು.ಅಂದರೆ ಕ್ಷೇತ್ರದ ಮುಸ್ಲಿಂ ಮತಗಳು ವಿಭಜನೆಯಾಗುವಂತೆ ಮಾಡುವುದು. ರಾಷ್ಟ್ರದ ರಾಜಕೀಯ ಸಂದರ್ಭವನ್ನು ಗಮನಿಸಿದರೆ ಮುಸ್ಲಿಂ ಮತದಾರರು ಬಿಜೆಪಿಯ ಜತೆ ನಿಲ್ಲುವುದಿಲ್ಲ. ಬದಲಿಗೆ ಬಿಜೆಪಿಯನ್ನು ವಿರೋಧಿಸುವ ಶಕ್ತಿಗಳ ಜತೆ ನಿಲ್ಲುತ್ತಾರೆ. ಆದರೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಮತದಾರರ ಮನಃಸ್ಥಿತಿ ಬದಲಾಗಿರುವುದು ಸ್ಪಷ್ಟವಾಯಿತು.
ಇದಕ್ಕಿರುವ ಕಾರಣ ರಾಷ್ಟ್ರ ರಾಜಕಾರಣದ ಸ್ಥಿತಿ. ಇವತ್ತು ಕೇಂದ್ರದಿಂದ ಹಿಡಿದು ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರಿದೆ.ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷ ಕಾಂಗ್ರೆಸ್‌ನ ಸ್ಥಿತಿ ಹೇಗಿದೆ ಎಂದರೆ ದಿನ ಕಳೆದಂತೆ ದುರ್ಬಲವಾಗುತ್ತಿದೆ. ಇವತ್ತು ಕರ್ನಾಟಕ ಹೊರತುಪಡಿಸಿದರೆ ದೇಶದ ಯಾವ ರಾಜ್ಯದಲ್ಲೂ ಕಾಂಗ್ರೆಸ್ ಸ್ಥಿತಿ ಸರಳವಾಗಿಲ್ಲ. ತೆಲಂಗಾಣ, ಹಿಮಾಚಲ ಪ್ರದೇಶದಂತಹ ರಾಜ್ಯಗಳಲ್ಲಿ ಅಧಿಕಾರದಲ್ಲಿದೆಯಾದರೂ ಅವಕ್ಕೆ ಶಕ್ತಿ ಕಡಿಮೆ.ಅರ್ಥಾತ್,ಅವು ದಿಲ್ಲಿ ಗದ್ದುಗೆಯ ಮೇಲೆ ಕಾಂಗ್ರೆಸ್ ಪಕ್ಷವನ್ನು ಮರಳಿ ಪ್ರತಿಷ್ಠಾಪಿಸಲು ಶಕ್ತಿ ತುಂಬಲಾರವು.ಆ ದೃಷ್ಟಿಯಿಂದ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಟಾನಿಕ್ ನೀಡುವ ಶಕ್ತಿಯಿದ್ದರೆ ಅದು ಕರ್ನಾಟಕ ಮಾತ್ರ.
ಕಾಂಗ್ರೆಸ್ ಪಕ್ಷದ ಈ ದುರ್ಬಲ ಸ್ಥಿತಿ ಮುಸ್ಲಿಂ ಮತದಾರರಲ್ಲಿ ಒಂದು ಭಾವನೆಯನ್ನು ಬಿತ್ತುತ್ತಿದೆ.ಅದೆಂದರೆ ತಾವು ಬಿಜೆಪಿ ಪರವಾಗಿ ನಿಲ್ಲದಿದ್ದರೂ ಅದನ್ನು ಎದುರು ಹಾಕಿಕೊಳ್ಳಬಾರದು ಎಂಬ ಎಚ್ಚರಿಕೆ. ಇಂತಹ ಎಚ್ಚರಿಕೆಯ ಒಳತಿರುಳು ಹೇಗಿದೆ ಎಂದರೆ ಬಿಜೆಪಿಗೆ ತಾವು ಮತ ಕೊಡಬಾರದು ಎಂಬುದು ಹೇಗೆ ಮುಖ್ಯವೊ ಹಾಗೆಯೇ ಕಾಂಗ್ರೆಸ್ ಜತೆಗೂ ನಿಲ್ಲಬಾರದು. ಹಾಗೆ ನಿಂತರೆ ಬಿಜೆಪಿಯ ದುರಾಗ್ರಹಕ್ಕೆ ನಾವು ಪಾತ್ರರಾಗಬೇಕಾಗುತ್ತದೆ. ಹೀಗಾಗಿ ತಮ್ಮವರು ಪಕ್ಷೇತರರಾಗಿ ಸ್ಪರ್ಧಿಸಿದರೆ ಅವರ ಬೆಂಬಲಕ್ಕೆ ಹಾಗೆ ನಿಂತರೆ ನಾವು ಬಿಜೆಪಿಯ ದುರಾಗ್ರಹಕ್ಕೆ ಪಾತ್ರರಾಗುವುದಿಲ್ಲ ಎಂಬುದು ಬಹುತೇಕ ಮುಸ್ಲಿಮರ ಮನಃಸ್ಥಿತಿ. ಇಂತಹ ಕಾರಣಕ್ಕಾಗಿಯೇ ಬಿಹಾರದಲ್ಲಿ ಮುಸ್ಲಿಂ ಮತ ಬ್ಯಾಂಕು ಬಿಜೆಪಿ, ಕಾಂಗ್ರೆಸ್ ಕಡೆ ಹೋಗದೆ ಪಕ್ಷೇತರರಾಗಿ ನಿಂತ ತಮ್ಮವರ ಪರ ಚಲಾವಣೆಯಾಯಿತು.ಅಂತಿಮವಾಗಿ ಇದು ಲಾಭ ಕೊಟ್ಟಿದ್ದು ಬಿಜೆಪಿಗೆ. ಮತ್ತು ಇದೇ ಕಾರಣಕ್ಕಾಗಿ ಬಹುತೇಕ ಮುಸ್ಲಿಂ ಮತದಾರರ ಬಾಹುಳ್ಯ ಇರುವ ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಇವತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಂತಹದೇ ಪರಿಸ್ಥಿತಿ ಇದೆ. ಯಾಕೆಂದರೆ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಹಲವು ಮುಸ್ಲಿಂ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.
ಒಂದು ವೇಳೆ ಈ ಮುಸ್ಲಿಂ ಅಭ್ಯರ್ಥಿಗಳು ತಮ್ಮ ಸಮುದಾಯದ ಗಣನೀಯ ಮತಗಳನ್ನು ಬಾಚಿದರೆ ಮತ್ತು ಮುಸ್ಲಿಂ ಸಂಘಟನೆಯ ಪಕ್ಷದ ಅಭ್ಯರ್ಥಿ ಕೂಡ ದೊಡ್ಡಮಟ್ಟದಲ್ಲಿ ಮತಗಳನ್ನು ಗಳಿಸಿದರೆ ಕಾಂಗ್ರೆಸ್ ಗೆಲುವು ಕಷ್ಟವಾಗುತ್ತದೆ. ಹಾಗೊಂದು ವೇಳೆ ಕಾಂಗ್ರೆಸ್ ಅಭ್ಯರ್ಥಿ ಸೋಲುಂಡರೆ ಅನುಮಾನವೇ ಬೇಡ. ಕರ್ನಾಟಕದ ರಾಜಕೀಯ ಸ್ವರೂಪ ಬಿಹಾರದ ರಾಜಕೀಯ ಸ್ವರೂಪ ಪಡೆಯುತ್ತದೆ ಎಂದೇ ಅರ್ಥ. ಹಾಗಾಗಲಿ ಎಂಬುದೇ ಬಿಜೆಪಿ ವರಿಷ್ಠರ ಬಯಕೆ. ಅಂದ ಹಾಗೆ ಪಕ್ಷಾತೀತವಾಗಿ ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಶಾಮನೂರು ಶಿವಶಂಕರಪ್ಪ ಅವರಿಗೆ ಆತ್ಮೀಯರಾಗಿರುವುದರಿಂದ ರಾಜಕೀಯವನ್ನು ಮೀರಿದ ಲೆಕ್ಕಾಚಾರ ಮತ್ತು ಸಿದ್ದರಾಮಯ್ಯ ಅವರ ನಾಯಕತ್ವದ ವರ್ಚಸ್ಸು ಸಮರ್ಥ್ ಗೆಲುವಿಗೆ ದಾರಿಯಾಗುತ್ತದೆ ಎಂಬುದು ಒಂದು ಲೆಕ್ಕಾಚಾರವಾದರೂ ಬಿಜೆಪಿ ವರಿಷ್ಠರ ಸುಪಾರಿ ಹೇಗೆ ಕೆಲಸ ಮಾಡುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇನ್ನು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ವಿಷಯ ಬಂದಾಗಲೂ ಅಷ್ಟೇ. ಇಲ್ಲಿ ಬಿಜೆಪಿ ಗೆಲುವು ಗಳಿಸಿದರೆ ಅಹಿಂದ ಮತ ಬ್ಯಾಂಕನ್ನು ಛಿದ್ರ ಮಾಡಿದ ಖ್ಯಾತಿ ಅದಕ್ಕೆ ದಕ್ಕುತ್ತದೆ. ಅಷ್ಟೇ ಅಲ್ಲ, ಮುಂದಿನ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಅದಕ್ಕೆ ಟಾನಿಕ್ ಕೂಡ ಆಗುತ್ತದೆ. ಹಾಗಾಗುತ್ತದಾ ಗೊತ್ತಿಲ್ಲ. ಅದರೆ ಬಿಜೆಪಿ ವರಿಷ್ಠರ ಸದ್ಯದ ಲೆಕ್ಕಾಚಾರ ಮಾತ್ರ ಇಂಟರೆಸ್ಟಿಂಗ್ ಅಗಿದೆ.
” ಬಾಗಲಕೋಟೆ, ದಾವಣಗೆರೆ ಕ್ಷೇತ್ರಗಳಲ್ಲಿ ಗೆಲುವು ಗಳಿಸಿದರೆ ಕಾಂಗ್ರೆಸ್ ಸರ್ಕಾರಕ್ಕೆ ಅಪಾಯವೂ ಇಲ್ಲ ಅಥವಾ ಕರ್ನಾಟಕದ ನೆಲೆಯಲ್ಲಿ ರಾಜಕೀಯ ಅಲ್ಲೋಲ ಕಲ್ಲೋಲವಾಗುವುದಿಲ್ಲ. ಹೋಗಲಿ, ಈ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದರೆ ಬಿಜೆಪಿಯ ನೆಲೆಗೆ ಹೊಡೆತ ಬೀಳುತ್ತದಾ ಎಂದರೆ ಅದೂ ಇಲ್ಲ. ಏಕೆಂದರೆ ಈ ಎರಡೂ ಕ್ಷೇತ್ರಗಳು ಕಾಂಗ್ರೆಸ್ಸಿನ ಭದ್ರಕೋಟೆಗಳಾಗಿವೆ.”
ಮದ್ದೂರು: ತಾಲ್ಲೂಕಿನ ಭಾರತೀನಗರ ಸಮೀಪದ ಚಿಕ್ಕರಸಿನಕೆರೆ ಗ್ರಾಮದಲ್ಲಿ ಈಜಲು ತೆರಳಿದ್ದ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಳವಳ್ಳಿ ತಾಲ್ಲೂಕಿನ ಬಾಣಸಮುದ್ರ…
ದಾವಣಗೆರೆ: ಈ ಉಪಚುನಾವಣೆಗಳು ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿಗಳಿಗೆ ಕಬ್ಬಿಣದ ಕಡಲೆ ಆಗಿ ಪರಿವರ್ತನೆ ಆಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು…
ರೋಮ್: ಇಟಲಿ ಕರಾವಳಿಯಲ್ಲಿ ಭೀಕರ ಬೋಟ್ ದುರಂತ ಸಂಭವಿಸಿದ್ದು, ಮೆಡಿಟೇರಿಯನ್ ಸಮುದ್ರದಲ್ಲಿ ಬೋಟ್ ಮುಳುಗಿ 71 ಜನರು ನಾಪತ್ತೆಯಾಗಿದ್ದಾರೆ. ಈಸ್ಟರ್…
ಮೈಸೂರು: ಕಾಳಸಂತೆಯಲ್ಲಿ ಗ್ಯಾಸ್ ಸಿಲಿಂಡರ್ ಮಾರಾಟವಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಇರಾನ್ ಮೇಲೆ ಇಸ್ರೇಲ್…
ಮೈಸೂರು: ಇನ್ನೂ ಎರಡು ವರ್ಷಗಳ ಕಾಲ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ಸಿಎಂ…
ಟೆಹರಾನ್: ನಷ್ಟ ಪರಿಹಾರವಿಲ್ಲದೇ ಹಾರ್ಮುಜ್ ಜಲಸಂಧಿ ಓಪನ್ ಮಾಡಲ್ಲ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್ ಕೌಂಟರ್ ಕೊಟ್ಟಿದೆ.…