ಅಂಕಣಗಳು

ಆರ್‌.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ದಿಲ್ಲಿಯ ಕಾಂಗ್ರೆಸ್ ವರಿಷ್ಠರಿಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟ ಸಂದೇಶ

ಬೆಂಗಳೂರು ಡೈರಿ

ಆರ್.ಟಿ.ವಿಠ್ಠಲಮೂರ್ತಿ 

ದಾವಣಗೆರೆ ಉಪ ಚುನಾವಣೆ ಬಂಡಾಯ ಶಮನಗೊಳಿಸಿದ ಮುಖ್ಯಮಂತ್ರಿ

ದಿಲ್ಲಿಯ ಕಾಂಗ್ರೆಸ್ ವರಿಷ್ಠರಿಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಅಂದ ಹಾಗೆ ಕಾಂಗ್ರೆಸ್ ವರಿಷ್ಠರಿಗೆ ಅವರು ರವಾನಿಸಿದ ಸಂದೇಶವೇನು ಎಂಬುದನ್ನು ನೋಡುವ ಮುನ್ನ ಇಂತಹ ಸಂದೇಶ ರವಾನಿಸಲು ಅವರಿಗಿರುವ ಪ್ರೇರಣೆ ಏನು? ಎಂಬುದನ್ನೂ ಗಮನಿಸಬೇಕು. ಅಂದ ಹಾಗೆ ಇವತ್ತು ಕರ್ನಾಟಕದ ನೆಲೆಯಲ್ಲಿ ಸರ್ಕಾರದ ನೇತೃತ್ವ ಸಿದ್ದರಾಮಯ್ಯ ಅವರ ಕೈಯಲ್ಲಿರಬೇಕು ಎಂಬ ಭಾವನೆ ರಾಹುಲ್ ಗಾಂಧಿ ಅವರಲ್ಲಿದೆಯಾದರೂ, ಅದೇ ಭಾವನೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲ ಅವರಂತಹ ನಾಯಕರಲ್ಲಿ ಇಲ್ಲ.

ಅದರರ್ಥ ಸಿದ್ದರಾಮಯ್ಯ ಸಿಎಂ ಹುದ್ದೆಯಲ್ಲಿರಲು ಅರ್ಹ ನಾಯಕರಲ್ಲ ಅಂತ ಅವರಂದುಕೊಂಡಿಲ್ಲ. ಕರ್ನಾಟಕದ ಸಾಮಾಜಿಕ ಸಂರಚನೆಯನ್ನು ಬಲ್ಲ ಯಾರೇ ಆದರೂ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಸಿದ್ದರಾಮಯ್ಯ ನಾಯಕತ್ವ ಎಷ್ಟು ಅನಿವಾರ್ಯ ಎಂಬುದನ್ನು ಅರಿತಿರುತ್ತಾರೆ. ಆದರೆ ಇದು ಗೊತ್ತಿದ್ದ ಮೇಲೂ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರಂತಹ ನಾಯಕರು ವಿವಶರಾಗಿದ್ದಾರೆ.

ಕಾರಣ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಅವರ ವರ್ಚಸ್ಸು ದೊಡ್ಡ ಕಾರಣವಾದರೂ ಡಿ.ಕೆ.ಶಿವಕುಮಾರ್ ಅವರ ಚುನಾವಣಾ ತಂತ್ರಗಾರಿಕೆಯ ಪಾಲೂ ಇದೆ. ಹೀಗಾಗಿ ಡಿ.ಕೆ.ಶಿವಕುಮಾರ್ ಅವರು ಕೂಡ ಒಂದು ಬಾರಿ ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಲಿ ಎಂಬ ಬಯಕೆ ಇದೆ. ಹೀಗಾಗಿ ಕಳೆದ ಹಲವು ಕಾಲದಿಂದ ಈ ತ್ರಿಮೂರ್ತಿಗಳು ರಾಹುಲ್ ಗಾಂಧಿಯವರ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ಸಿದ್ದರಾಮಯ್ಯ ಅವರ ಮನವೊಲಿಸಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಪಟ್ಟ ಕೊಡಿಸುವಂತೆ ಹೇಳುತ್ತಲೇ ಇದ್ದಾರೆ.

ಆದರೆ ಇಂತಹ ಒತ್ತಡಗಳೇನೇ ಇದ್ದರೂ ರಾಹುಲ್ ಗಾಂಧಿ ಅವರು ಮಾತ್ರ ಕೇರ್ ಮಾಡುತ್ತಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರ ಕೈಯಿಂದ ಡಿ.ಕೆ.ಶಿವಕುಮಾರ್ ಅವರಿಗೆ ಅಧಿಕಾರದ ದಂಡ ಹೋಗಬೇಕು ಎಂಬ ತ್ರಿಮೂರ್ತಿಗಳ ಬಯಕೆ ಈಡೇರುತ್ತಿಲ್ಲ. ಹೀಗೆ ನಾಯಕತ್ವದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ವಿಷಯದಲ್ಲಿ ರಾಹುಲ್ ಗಾಂಧಿ ಒಪ್ಪಿಗೆ ನೀಡದಿರಲು ಮತ್ತೊಂದು ಕಾರಣವಿದೆ. ಅದೆಂದರೆ ಕೇರಳದ ನಾಯಕ ಕೆ.ಸಿ.ವೇಣುಗೋಪಾಲ್.

ಸದರಿ ವೇಣುಗೋಪಾಲ್ ಅವರಿಗೆ ಕರ್ನಾಟಕದ ಸಾಮಾಜಿಕ ಸಂರಚನೆಯ ಸ್ವರೂಪ ಎಷ್ಟು ಚೆನ್ನಾಗಿ ಗೊತ್ತಿದೆ ಎಂದರೆ ದೇವರಾಜ ಅರಸರ ಕಾಲದಲ್ಲಿ ಪಕ್ಷದ ಹೈಕಮಾಂಡ್ ಮಾಡಿದ ತಪ್ಪು ಪುನರಾವರ್ತನೆಯಾದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಕತೆ ಏನಾಗುತ್ತದೆ? ಅಂತ ಅವರು ರಾಹುಲ್ ಗಾಂಧಿ ಅವರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಅಂದ ಹಾಗೆ ೧೯೮೦ರಲ್ಲಿ ದೇವರಾಜ ಅರಸರಂತಹ ಜನನಾಯಕನನ್ನು ಕೆಳಗಿಳಿಸಿದ ಕಾಂಗ್ರೆಸ್ ಹೈಕಮಾಂಡ್ ಗುಂಡೂರಾಯರಿಗೆ ಪಟ್ಟ ಕಟ್ಟಿತು. ಹೀಗೆ ಅರಸರ ಜಾಗಕ್ಕೆ ಬಂದ ಗುಂಡೂರಾಯರ ಬೆನ್ನ ಹಿಂದೆ ಪ್ರಬಲ ಜನಸಮುದಾಯಗಳ ಬೆಂಬಲ ಇರಲಿಲ್ಲ.

ಪರಿಣಾಮ೧೯೮೩ ರಲ್ಲಿ ಕಾಂಗ್ರೆಸ್ ಪಕ್ಷ ಮೊದಲ ಬಾರಿ ಗದ್ದುಗೆಯಿಂದ ಕೆಳಗಿಳಿದು ಜನತಾ ಪರಿವಾರ ಅಧಿಕಾರಕ್ಕೆ ಬರಲು ದಾರಿ ಮಾಡಿಕೊಟ್ಟಿತು. ಆವತ್ತಿನ ಸಂದರ್ಭಕ್ಕೆ ಹೋಲಿಸಿದರೆ ಇವತ್ತಿನ ಸಂದರ್ಭ ಕೂಡ ಹಾಗೆಯೇ ಇದೆ. ವ್ಯತ್ಯಾಸವೆಂದರೆ ಅವತ್ತು ದೇವರಾಜ ಅರಸರಿದ್ದ ಜಾಗದಲ್ಲಿ ಇವತ್ತು ಸಿದ್ದರಾಮಯ್ಯ ಇದ್ದಾರೆ. ಒಂದು ವೇಳೆ ಆವತ್ತು ದೇವರಾಜ ಅರಸರನ್ನು ಇಳಿಸಿದಂತೆ ಇವತ್ತು ಸಿದ್ದರಾಮಯ್ಯ ಅವರನ್ನು ಪಟ್ಟದಿಂದ ಇಳಿಸಿದರೆ ಸನ್ನಿವೇಶವನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ಬಿಜೆಪಿ-ಜಾ.ದಳ ಮೈತ್ರಿಕೂಟ ಸಜ್ಜಾಗಿ ಕುಳಿತಿವೆ. ಗಮನಿಸಬೇಕಾದ ಸಂಗತಿ ಎಂದರೆ ಅರಸರು ಕೆಳಗಿಳಿದ ಸಂದರ್ಭದಲ್ಲಿ ಜನತಾ ಪರಿವಾರ ಸರ್ವ ಸನ್ನದ್ಧ ಪರಿಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ ಗುಂಡೂರಾಯರಂತಹ ದುರ್ಬಲ ನಾಯಕತ್ವದ ಕಾಂಗ್ರೆಸ್ ಸೈನ್ಯವನ್ನು ಸೋಲಿಸಲು ಜನತಾ ಪರಿವಾರ ಹರಸಾಹಸ ಮಾಡಬೇಯಿತು. ಹೀಗಾಗಿ ಒಂದು ಕಡೆಯಿಂದ ಜನತಾ ಪಕ್ಷ, ಮತ್ತೊಂದು ಕಡೆಯಿಂದ ಕ್ರಾಂತಿರಂಗ, ಮಗದೊಂದು ಕಡೆಯಿಂದ ಬಿಜೆಪಿ ಸೈನ್ಯ ದಾಳಿಯನ್ನು ಸಂಘಟಿಸಬೇಕಾಯಿತು.

ಆದರೆ ಈಗ ಕಾಂಗ್ರೆಸ್ ವಿರುದ್ಧ ಸಂಘಟಿತವಾಗುತ್ತಿರುವ ಬಿಜೆಪಿ-ಜಾ.ದಳ ಮಿತ್ರಕೂಟ ಎಷ್ಟು ಪವರ್‌ಫುಲ್ಲಾಗಿವೆ ಎಂದರೆ, ಇವತ್ತೇ ವಿಧಾನಸಭೆಗೆ ಚುನಾವಣೆ ನಡೆದರೂ ಈ ಮಿತ್ರಕೂಟ ಬಹುಮತ ಪಡೆಯುತ್ತದೆ ಎಂಬ ಮಟ್ಟಿನ ಮನಃಸ್ಥಿತಿ ಮತದಾರರಲ್ಲಿದೆ. ಇದಕ್ಕೆ ಕಾರಣವೂ ಇದೆ. ಅದೆಂದರೆ ನಿರ್ದಿಷ್ಟ ಮತ ಬ್ಯಾಂಕುಗಳ ಕ್ರೋಢೀಕರಣ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂಬುದು. ಅದರೆ ಇದಕ್ಕೆ ಪ್ರತಿಯಾಗಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಗೊಂದಲದ ಛಾಯೆ ಇದೆ. ಅಧಿಕಾರ ಹಂಚಿಕೆಯ ಪ್ರಸ್ತಾಪ ನಿರಂತರವಾಗಿರುವುದೇ ಇದಕ್ಕೆ ಸಾಕ್ಷಿ.

ಅಂದ ಹಾಗೆ ಅಧಿಕಾರ ಹಂಚಿಕೆಯ ಮಾತು ಎಷ್ಟು ತೀವ್ರತೆಯಲ್ಲಿದೆ ಎಂದರೆ ಹೆಜ್ಜೆ ಹೆಜ್ಜೆಗೂ ಇಂದಲ್ಲ ನಾಳೆ ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಇಳಿಯುತ್ತಾರೆ ಎಂಬ ಮಾತು ನಿರಂತರವಾಗಿ ಕೇಳಿ ಬರುತ್ತಲೇ ಇದೆ. ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ಮಾತು ಮೇ ಇಪ್ಪತ್ತರವರೆಗೆ ಮುಂದೆ ಹೋಗಿದೆ ಮತ್ತು ಕಾಂಗ್ರೆಸ್ ವರಿಷ್ಠರು ೩:೨ ಸೂತ್ರವನ್ನು ಜಾರಿಗೊಳಿಸಲು ಬಯಸಿದ್ದಾರೆ. ಅದರ ಪ್ರಕಾರ ಸರ್ಕಾರಕ್ಕೆ ಮೂರು ವರ್ಷ ಭರ್ತಿಯಾದ ನಂತರ ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ನಂತರದ ಎರಡು ವರ್ಷಗಳ ಅವಧಿಗೆ ಡಿ.ಕೆ.ಶಿವಕುಮಾರ್ ಸಿಎಂ ಅಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಮಾತು ಅಸ್ತಿತ್ವದಲ್ಲಿರುವಾಗಲೇ ಸಿದ್ದರಾಮಯ್ಯನವರು ತಮ್ಮ ಸಚಿವ ಸಂಪುಟ ಸರ್ಜರಿಗೆ ಮುಂದಾಗಿರುವುದು ಏನನ್ನು ಸೂಚಿಸುತ್ತದೆ? ಅಧಿಕಾರದಿಂದ ಕೆಳಗಿಳಿಯುವ ಮನಃಸ್ಥಿತಿಯಲ್ಲೇ ಅವರಿಲ್ಲ ಎಂಬುದನ್ನು ತಾನೇ? ಕುತೂಹಲದ ಸಂಗತಿ ಎಂದರೆ ಸರ್ಕಾರಕ್ಕೆ ಮೂರು ವರ್ಷಗಳು ಭರ್ತಿಯಾದ ಕೂಡಲೇ ತಮ್ಮ ಸಂಪುಟಕ್ಕೆ ಸರ್ಜರಿ ಮಾಡಲು ಬಯಸಿರುವ ಸಿದ್ದರಾಮಯ್ಯ, ಅದೇ ಕಾಲಕ್ಕೆ ಕರ್ನಾಟಕದಲ್ಲಿ ನಡೆಯುತ್ತಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ವರಿಷ್ಠರಿಗೆ ಒಂದು ಸಂದೇಶವನ್ನು ರವಾನಿಸಿದ್ದಾರೆ.

ಈ ಪೈಕಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಶಾಮನೂರು ಸ್ಪರ್ಧಿಸಿದ್ದಾರೆ. ಅದರೆ ಅವರಿಗೆ ಪಕ್ಷ ಟಿಕೆಟ್ ಕೊಟ್ಟ ನಂತರ ಕುದ್ದು ಹೋದ ಮುಸ್ಲಿಂ ಮತ ಬ್ಯಾಂಕ್‌ನ ಮುಂಚೂಣಿಯಲ್ಲಿ ಕಾಣಿಸಿಕೊಂಡ ಸಾದಿಕ್ ಪೈಲ್ವಾನ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಹೀಗೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದ ಸಾದಿಕ್ ಪೈಲ್ವಾನ್ ಅವರು ಸಿಎಂ ವಿರೋಧಿ ಬಣದ ಯಾವುದೇ ಪ್ರಯತ್ನಗಳಿಗೆ ಬಗ್ಗದೇ ಬಂಡಾಯವನ್ನು ಮುಂದುವರಿಸುವುದಾಗಿ ಘೋಷಿಸಿದರು.

ಅವರ ಈ ಬಂಡಾಯ ಅಸ್ತಿತ್ವದಲ್ಲಿದ್ದಿದ್ದರೆ ಚುನಾವಣೆಯಲ್ಲಿ ಮುಸ್ಲಿಂ ಮತ ಬ್ಯಾಂಕಿನ ದೊಡ್ಡ ಷೇರನ್ನು ಅವರು ಪಡೆಯುವುದು ನಿಶ್ಚಿತವಾಗಿತ್ತು. ಹೀಗೆ ಅವರು ಮುಸ್ಲಿಂ ಮತ ಬ್ಯಾಂಕಿನ ದೊಡ್ಡ ಪಾಲನ್ನು ಪಡೆದರೆ, ಕಣದಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿರುವ ಇನ್ನಷ್ಟು ಮುಸ್ಲಿಂ ಅಭ್ಯರ್ಥಿಗಳು ಸಣ್ಣ ಪ್ರಮಾಣದ ಮತ ಗಳಿಸಿದರೂ ಕಾಂಗ್ರೆಸ್ ಮತ ಬ್ಯಾಂಕ್ ಅಸ್ತವ್ಯಸ್ತವಾಗುತ್ತಿತ್ತು.

ವಸ್ತುಸ್ಥಿತಿ ಎಂದರೆ ಈ ಹಿಂದೆ ಕ್ಷೇತ್ರದಲ್ಲಿ ಗೆಲ್ಲುತ್ತಿದ್ದ ಶಾಮನೂರು ಶಿವಶಂಕರಪ್ಪ ಅವರಿಗೆ ಮುಸ್ಲಿಂ ಮತಗಳ ಬೆಂಬಲವೇ ನಿರ್ಣಾಯಕವಾಗಿ ಕೆಲಸ ಮಾಡುತ್ತಿದ್ದವು. ಈ ಸಲ ಆ ಮತ ಬ್ಯಾಂಕ್ ವಿಭಜನೆಗೊಂಡರೆಬಿಜೆಪಿಯ ಅಭ್ಯರ್ಥಿ ಅದರ ಲಾಭ ಪಡೆಯುವುದು ನಿಶ್ಚಿತವಾಗಿತ್ತು. ಆದರೆ ಈ ಹಂತದಲ್ಲಿ ನಿರ್ಣಾಯಕ ಆಟಕ್ಕಿಳಿದ ಸಿದ್ದರಾಮಯ್ಯನವರು ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರ ಮನವೊಲಿಸಿದ್ದಲ್ಲದೆ ಅವರು ಕಣದಲ್ಲಿ ತಟಸ್ಥರಾಗುವಂತೆ ಮತ್ತು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇನೆ ಅಂತ ಸಾದಿಕ್ ಪೈಲ್ವಾನ್ ಘೋಷಿಸುವಂತೆ ಮಾಡಿದರು.

ಹೀಗೆ ಮಾಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್‌ಗೆ ನಿರ್ದಿಷ್ಟ ಸಂದೇಶವನ್ನು ನೀಡಿದ ಸಿದ್ದರಾಮಯ್ಯ ಅವರು ಕರ್ನಾಟಕದ ನೆಲೆಯಲ್ಲಿ ಮುಸ್ಲಿಂ ಮತಗಳ ಮೇಲೆ ತಮಗಿರುವ ಹಿಡಿತ ಬೇರೆ ಯಾರಿಗೂ ಇಲ್ಲ ಎಂಬ ಅಂಶ ಮನದಟ್ಟಾಗುವಂತೆ ಮಾಡಿದರು. ಸಹಜವಾಗಿಯೇ ಈ ಬೆಳವಣಿಗೆ ಸಿದ್ದರಾಮಯ್ಯ ಅವರಿಗಿರುವ ಶಕ್ತಿಯನ್ನು ಪ್ರತಿಪಾದಿಸುತ್ತದೆಯಲ್ಲದೆ, ಅವರಿಲ್ಲದಿದ್ದರೆ ಕಾಂಗ್ರೆಸ್ ಪರಿಸ್ಥಿತಿ ಕಷ್ಟಕರವಾಗಲಿದೆ ಎಂಬ ಸಂದೇಶ ರವಾನಿಸುವಲ್ಲಿ ಯಶಸ್ವಿಯಾಗಿದೆ. ಅಂದ ಹಾಗೆ ಇಂತಹ ಸಂದೇಶ ಅಧಿಕಾರ ಹಂಚಿಕೆಯ ಬಗ್ಗೆ ನಡೆಯುತ್ತಿರಯವ ಚರ್ಚೆಗಳಿಗೆ ಮತ್ತೊಮ್ಮೆ ಬ್ರೇಕ್ ಹಾಕಿದರೂ ಆಶ್ಚರ್ಯವಿಲ್ಲ.

” ಒಂದು ವೇಳೆ ಆವತ್ತು ದೇವರಾಜ ಅರಸರನ್ನು ಇಳಿಸಿದಂತೆ ಇವತ್ತು ಸಿದ್ದರಾಮಯ್ಯ ಅವರನ್ನು ಪಟ್ಟದಿಂದ ಇಳಿಸಿದರೆ ಸನ್ನಿವೇಶವನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಬಿಜೆಪಿ-ಜಾ.ದಳ ಮೈತ್ರಿಕೂಟ ಸಜ್ಜಾಗಿ ಕುಳಿತಿವೆ.”

 

 

ಆಂದೋಲನ ಡೆಸ್ಕ್

Recent Posts

ಇಂಧನ ವ್ಯತ್ಯಯ ಆತಂಕ ; ಎಲೆಕ್ಟ್ರಿಕ್‌ ವಾಹನ ಮಾರಾಟದಲ್ಲಿ ಏರಿಕೆ

ಬೆಂಗಳೂರು : ಯುದ್ಧದ ಪರಿಣಾಮ ಕೆಲ ಉದ್ಯಮಗಳಿಗೆ ಹೊಡೆತ ನೀಡಿದರೆ, ಇನ್ನೂ ಕೆಲವು ಕ್ಷೇತ್ರಗಳಿಗೆ ಅದೇ ಅವಕಾಶವಾಗಿ ಪರಿಣಮಿಸಿದೆ. ಅದರಲ್ಲೂ…

37 mins ago

ಮಡಿಕೇರಿ | ಕಾರಿನ ಮೇಲೆ ಉರುಳಿ ಬಿದ್ದ ಪ್ರವಾಸಿಗರ ಬಸ್

ಮಡಿಕೇರಿ : ಪ್ರವಾಸಿಗರ ಬಸ್​​ವೊಂದು ಕಾರಿನ‌ ಮೇಲೆ ಉರುಳಿ ಬಿದ್ದಿರುವ ಘಟನೆ ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದಲ್ಲಿ ನಡೆದಿದೆ. ಕಾರಿನಲ್ಲಿದ್ದ…

54 mins ago

ಎಲ್‌ಪಿಜಿ ಹೊತ್ತ ಮತ್ತೊಂದು ಹಡಗು ಭಾರತದತ್ತ

ಅನುಮತಿಗಾಗಿ ಕಾಯುತ್ತಿರುವ ಮತ್ತೆರಡು ಹಡಗುಗಳು ಹೊಸದಿಲ್ಲಿ : ಸುಮಾರು 46,000 ಮೆಟ್ರಿಕ್ ಟನ್‌ಗಳಿಗೂ ಹೆಚ್ಚು ಇಂಧನ ಹೊತ್ತ ದೊಡ್ಡ ದ್ರವೀಕೃತ…

1 hour ago

ಐಪಿಎಲ್‌ ಟಿಕೆಟ್‌ಗಾಗಿ ಸ್ವೀಕರ್‌ ಕಚೇರಿ ಮುಂದೆ ಶಾಸಕರ ಪಿಎಗಳ ಕ್ಯೂ

ಬೆಂಗಳೂರು : ರಾಜ್ಯದಲ್ಲಿ ಗ್ಯಾಸ್ ಸಿಗದೆ ಆಟೋ ಚಾಲಕರು ರಾತ್ರಿಯಿಡೀ ಕ್ಯೂ ನಿಲ್ಲುತ್ತಿದ್ದರೆ, ಜನಪ್ರತಿನಿಧಿಗಳಾದ ಶಾಸಕರು ಮಾತ್ರ ಐಪಿಎಲ್ ಟಿಕೆಟ್‌ಗಳ…

3 hours ago

ಬಿಜೆಪಿಯವರಿಗೆ ಸೋಲಿನ ಭಯ ಕಾಡುತ್ತಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ

ಬಾಗಲಕೋಟೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಬಿಜೆಪಿಯವರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು…

4 hours ago

ಗ್ಯಾಸ್‌ ಸಿಗದೇ ಆಟೋ ಚಾಲಕರ ಪರದಾಟ: ಕೇಂದ್ರದ ವಿರುದ್ಧ ಡಿಸಿಎಂ ಡಿಕೆಶಿ ಆಕ್ರೋಶ

ಬೆಂಗಳೂರು: ಗ್ಯಾಸ್‌ ಸಿಗದೇ ಆಟೋ ಚಾಲಕರು ಪರದಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್‌ ತೀವ್ರ ಆಕ್ರೋಶ…

4 hours ago