ಅಂಕಣಗಳು

ಪ್ರಗತಿಪರ ಚಿಂತನೆಯೂ ಕ್ರಿಯಾಶೀಲ ಸಮಾಜವೂ

ನಾ.ದಿವಾಕರ

ಯಾವುದೇ ಸಮಾಜದ ಸಾರ್ವಜನಿಕ ಜೀವನದಲ್ಲಿ ಸಾಮಾನ್ಯ ಜನತೆಯ ಬದುಕಿಗೆ ಪೂರಕವಾದ ಚಿಂತನಾ ವಾಹಿನಿಗಳು ಹುಟ್ಟಿಕೊಳ್ಳುವುದು ಆಯಾ ಸಮಾಜದ ಒಂದು ಕಲಿತ ವರ್ಗದಿಂದ ಈ ವರ್ಗಗಳಲ್ಲಿರಬಹುದಾದ ತಾತ್ವಿಕ ಚಿಂತನೆಗಳು, ಸೈದ್ಧಾಂತಿಕ ಆಲೋಚನೆಗಳು ಹಾಗೂ ಪುರೋಗಾಮಿ ಮನಸ್ಥಿತಿಯೇ ‘ಬುದ್ಧಿಜೀವಿ’ ಎಂಬ ಒಂದು ವರ್ಗವನ್ನೂ ಸೃಷ್ಟಿಸುತ್ತವೆ. ಸಮಾಜದ ಅಭಿವೃದ್ಧಿಯಲ್ಲಿ ಭೌತಿಕವಾಗಿ, ಬೌದ್ಧಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಪ್ರಮುಖ ಫಲಾನುಭವಿಗಳಿಂದಲೇ ಉಗಮಿಸುವ ಈ ವರ್ಗವು ತಾವು ಬದುಕುವ ಮತ್ತು ಅದರಿಂದ ಹೊರಗಿನ ಸಮಾಜದ ಆರೋಗ್ಯಕರ ಮುನ್ನಡೆಗಾಗಿ, ಸೌಹಾರ್ದಯುತ ಬೆಳವಣಿಗೆಗಾಗಿ ಹುಟ್ಟುಹಾಕುವ ನಿರೂಪಣೆಗಳು ಸಮಾಜವನ್ನು ಯಾವ ದಿಕ್ಕಿನಲ್ಲಿ, ಯಾವ ಮಾರ್ಗ ಅಥವಾ ಗುರಿಗಳೆಡೆಗೆ ಕೊಂಡೊಯ್ಯುತ್ತವೆ ಎನ್ನುವುದು ಒಂದು ನಿರ್ಣಾಯಕ ಅಂಶ.

ಭಾರತವನ್ನೂ ಒಳಗೊಂಡಂತೆ ಎಲ್ಲ ದೇಶಗಳಲ್ಲೂ ಜನಜೀವನವನ್ನು ನಿರ್ದೇಶಿಸುವಂತಹ ಪ್ರಾಚೀನ ನಡವಳಿಕೆಗಳು, ಆಚರಣಾತ್ಮಕ ಪದ್ಧತಿಗಳು ಹಾಗೂ ಇವುಗಳನ್ನು ಪೋಷಿಸುವಂತಹ ಒಂದು ಸಮಾಜವನ್ನು ಗುರುತಿಸಲು ಸಾಧ್ಯ ಪಿತೃಪ್ರಧಾನತೆ, ಊಳಿಗಮಾನ್ಯ ಧೋರಣೆ, ಮತಾಚರಣೆ, ಧಾರ್ಮಿಕ ನಂಬಿಕೆಗಳು, ಸಂಪ್ರದಾಯ-ಪರಂಪರೆಯ ಹೆಸರಿನಲ್ಲಿ ಹೇರಲಾಗುವ ಜೀವನಾದರ್ಶಗಳು ಸಾಮಾಜಿಕ ನಿಯಮಗಳನ್ನೂ ರೂಪಿಸುತ್ತವೆ. ಮಾನವ ಸಮಾಜವು ಆಧುನಿಕತೆಯತ್ತ ಹೊರಳುತ್ತಿರುವಂತೆಲ್ಲಾ ನಾಗರಿಕತೆಯನ್ನೂ ಮೈಗೂಡಿಸಿಕೊಳ್ಳುವುದರಿಂದ ಇಂತಹ ಪ್ರಾಚೀನತೆಗಳನ್ನು ಸಮಾಜದ ಅಭ್ಯುದಯಕ್ಕೆ ಕಂಟಕಪ್ರಾಯ ಎಂದೇ ಪರಿಗಣಿಸಲಾಗುತ್ತದೆ. ನಾಗರಿಕ ಅಥವಾ civilised ಎಂದು ಕರೆದುಕೊಳ್ಳುವ ಯಾವುದೇ ಸಮಾಜದಲ್ಲಾದರೂ ಇಂತಹ ವರ್ಗಗಳನ್ನು ಪ್ರತಿಗಾಮಿ ಎಂದೇ ಪರಿಗಣಿಸಬೇಕಾಗುತ್ತದೆ.

ಸಮಾಜವನ್ನು ಯಾಂತ್ರಿಕವಾಗಿ ಹಿಂದಕ್ಕೆ ಕರೆದೊಯ್ಯುವ ಇಂತಹ ಪ್ರತಿಗಾಮಿ ಚಿಂತನಾಕ್ರಮಗಳ ವಿರುದ್ಧ ತಾತ್ವಿಕ ನೆಲೆಯಲ್ಲಿ ಆಧುನಿಕತೆ ಮತ್ತು ನಾಗರಿಕತೆಯ (Civilizational) ಲಕ್ಷಣಗಳನ್ನೊಳಗೊಂಡ ಆಲೋಚನಾ ವಿಧಾನಗಳೇ ಸಮಾಜದಲ್ಲಿ ಪ್ರಗತಿಪರ’ ಎನ್ನಲಾಗುವ ಬೌದ್ಧಿಕ ವಲಯಗಳನ್ನು ಸೃಷ್ಟಿಸುತ್ತವೆ. ಮಾರ್ಕ್ಸ್, ಅಂಬೇಡ್ಕರ್, ಲೋಹಿಯಾ, ಫುಲೆ, ಪೆರಿಯಾರ್, ಗಾಂಧಿ ಮೊದಲಾದ ರಾಜಕೀಯ ಚಿಂತಕರೊಂದಿಗೆ ನಾರಾಯಣಗುರು, ಠಾಗೋರ್ ಮುಂತಾದ ಆಧ್ಯಾತ್ಮಿಕ ಪರಿಚಾರಕರೂ ಆಧುನಿಕ ಪ್ರಗತಿಪರ ಚಿಂತನಾ ಕ್ರಮಗಳನ್ನು ರೂಪಿಸುತ್ತಾರೆ.

ರಾಜಕೀಯ ನೆಲೆಯಲ್ಲಿ : 1970ರಲ್ಲಿ ಭಾರತೀಯ ಸಮಾಜದ ತಳಸಮುದಾಯಗಳು, ಶೋಷಿತ ವಲಯಗಳು ರೂಪಿಸಿದ ಹೋರಾಟಗಳಲ್ಲಿ ಕಂಡುಬಂದಂತಹ ಪ್ರಗತಿಪರ ಚಿಂತನೆಗಳು ಮೂಲತಃ ತಳಸ್ತರದ ಸಮಾಜದ ನಾಡಿಮಿಡಿತಕ್ಕೆ ಸ್ಪಂದಿಸುವಂತಿದ್ದವು. ಶತಶತಮಾನಗಳ ಶೋಷಣೆಯಿಂದ ವಿಮೋಚನೆ ಬಯಸಿದ್ದ ಕೆಳಸ್ತರದ ಜಾತಿ ಸಮುದಾಯಗಳು, ಪಿತೃ ಪ್ರಧಾನತೆಯ ಸಂಕೋಲೆಗಳಿಂದ ಮುಕ್ತವಾಗಲು ಬಯಸಿದ್ದ ಮಹಿಳಾ ಸಂಕುಲ ಹಾಗೂ ಬಂಡವಾಳಶಾಹಿಯ ಬಿಗಿಮುಷ್ಟಿಯಿಂದ ಬಿಡುಗಡೆ ಬಯಸಿದ್ದ ಶ್ರಮಿಕ ವರ್ಗಗಳು ಈ ಕಾಲಘಟ್ಟದ ನಿರೂಪಣೆಗಳನ್ನು ನಿರ್ವಹಿಸಿದ್ದವು. 1975ರ ತುರ್ತು ಪರಿಸ್ಥಿತಿ ಈ ಹೋರಾಟಗಳಿಗೆ ಒಂದು ಹೊಸ ಆಯಾಮವನ್ನು ನೀಡುವುದರ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳ ರಕ್ಷಣೆ ಪ್ರಧಾನ ಭೂಮಿಕೆಯಾಗಿ ಪರಿಣಮಿಸಿತು. ಈ ಅವಧಿಯಲ್ಲಿ ‘ಪ್ರಗತಿಪರ’ ಚಿಂತನೆಗಳನ್ನು ನಿರ್ದೇಶಿಸಿದ ಬೌದ್ಧಿಕ ವಲಯದಲ್ಲಿ ಎಲ್ಲ ಸೈದ್ಧಾಂತಿಕ ಎಳೆಗಳೂ ಸಕ್ರಿಯವಾಗಿದ್ದವು. 1990ರ ದಶಕದ ವೇಳೆಗೆ ‘ಪ್ರಗತಿಪರ’ ಬೌದ್ಧಿಕ ವಲಯದ ಚಿಂತನಾ ವಾಹಿನಿಗಳು ಆರೆಸ್ಸೆಸ್-ಬಿಜೆಪಿ ಪ್ರಾಯೋಜಿತ ಹಿಂದುತ್ವ ಮತ್ತು ಮತೀಯವಾದದ ವಿರುದ್ಧ ಧ್ವನಿ ಎತ್ತಬೇಕಾಯಿತು. ಈ ಹಂತದಲ್ಲೇ 1970ರ ಕಾಂಗ್ರೆಸ್ ವಿರೋಧಿದನಿಗಳೆಲ್ಲವೂ ಬಹುತೇಕವಾಗಿ ಹಿಂದುತ್ವವಿರೋಧಿ ದನಿಯಾಗಿ ರೂಪಾಂತರ ಹೊಂದುವುದು ಅನಿವಾರ್ಯವೂ ಆಗಿತ್ತು. ಏಕೆಂದರೆ ಭಾರತ ಒಂದೆಡೆ ನವ ಉದಾರವಾದದ ಜಾಗತೀಕರಣ ಮತ್ತು ಮತೀಯ ರಾಜಕಾರಣದ ಹಿಂದುತ್ವ, ಈ ಎರಡು ಶಕ್ತಿಗಳ ವಿರುದ್ಧ ಹೋರಾಡಲೇಬೇಕಿತ್ತು.

ಸಾಮಾಜಿಕ ಸಾಂಸ್ಕೃತಿಕ ನೆಲೆಯಲ್ಲಿ: ಜಾತಿ ಪೀಡಿತ ಶ್ರೇಣೀಕೃತ ಸಮಾಜದ ನೆಲದ ವಾಸ್ತವಗಳ ನೆಲೆಯಲ್ಲಿ ನಿಂತು ನೋಡಿದಾಗ ಯಾವುದೇ ಕಾಲಘಟ್ಟವಾದರೂ ‘ಪ್ರಗತಿಪರ ಚಿಂತನಾ ಕ್ರಮಗಳು ಒಂದೇ ಮೂಲದಲ್ಲಿ ನಿರ್ವಚನೆಗೊಳಗಾಗುವುದು ಅನಿವಾರ್ಯ. ಏಕೆಂದರೆ ಭಾರತ ಇಂದಿಗೂ ಜಾತಿ ಶೋಷಣೆ-ತಾರತಮ್ಯ- ದೌರ್ಜನ್ಯ, ಮಹಿಳಾ ದೌರ್ಜನ್ಯ, ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಠಾರ ಮತ್ತು ಮೇಲು-ಕೀಳುಗಳ ವ್ಯಾಧಿಯಿಂದ ಮುಕ್ತವಾಗಿಲ್ಲ. ಜಾತಿ ಪದ್ಧತಿ, ಪಿತೃಪ್ರಧಾನತೆ ಮತ್ತು ಸಾಮಾಜಿಕ ಅಸಮಾನತೆಗಳನ್ನು ವಿರೋಧಿಸದ ಯಾವುದೇ ಚಿಂತನಾ ಕ್ರಮವೂ ಇಂದು ‘ಪ್ರಗತಿಪರ’ ಎನಿಸಿಕೊಳ್ಳಲಾಗದು. ಸಾಮಾಜಿಕ ಮುಂಗಾಣೆ ಇಲ್ಲದ ಯಾವುದೇ ಬೌದ್ಧಿಕ ಆಲೋಚನೆಗಳೂ ಇವತ್ತಿನ ಸಂದರ್ಭದಲ್ಲಿ ಪ್ರತಿಗಾಮಿಯಾಗಿಯೇ ಕಾಣುತ್ತವೆ. ರಾಜಕೀಯ ಸಿದ್ಧಾಂತಗಳಿಗೆ ಅಥವಾ ನಿರ್ದಿಷ್ಟ ಧಾರ್ಮಿಕ ತತ್ವಗಳಿಗೆ ಬದ್ಧವಾಗಿದ್ದುಕೊಂಡು ತಮ್ಮ ತಾತ್ವಿಕ ಭೂಮಿಕೆಗಳಿಂದ ವಿಮುಖವಾಗಿರುವ ಹಲವು ಜನಪರ ಸಂಘಟನೆಗಳೂ ಈ ಹಂತದಲ್ಲಿ ಸಾಮಾಜಿಕ ಅನ್ಯಾಯ, ಅಸಮಾನತೆಗಳನ್ನು ಸಾಪೇಕ್ಷವಾಗಿ ನೋಡುತ್ತಿರುವ ವಿಕೃತ ಸನ್ನಿವೇಶಕ್ಕೆ ವರ್ತಮಾನ ಭಾರತ ಸಾಕ್ಷಿಯಾಗಿದೆ. ಹಾಗಾಗಿ ಕೆಲವೊಮ್ಮೆ ರಾಜಕೀಯವಾಗಿ ಹಿಂದುತ್ವದ ಮತೀಯ ರಾಜಕಾರಣವನ್ನು ವಿರೋಧಿಸುವ ‘ಪ್ರಗತಿಪರ’ ಲೇಬಲ್ ಹೊತ್ತ ಚಿಂತನಾಕ್ರಮಗಳು, ಮುಸ್ಲಿಮರಲ್ಲಿ ಅಥವಾ ಕ್ರೈಸ್ತರಲ್ಲಿರುವ ಮತಾಂಧತೆಗೆ, ಮೌಡ್ಯಾಚರಣೆಗಳಿಗೆ, ಪಿತೃಪ್ರಧಾನತೆಗೆ ಕುರುಡಾಗಿರುತ್ತವೆ. ಅಥವಾ ಸಮುದಾಯಗಳಲ್ಲಿ ಬೇರೂರಿರುವ ಮಾನವ ವಿರೋಧಿ ಅವೈಚಾರಿಕತೆಗೆ, ಮೂಢ ನಂಬಿಕೆಗಳಿಗೆ ಕುರುಡಾಗಿರುತ್ತವೆ. ಈ ದೃಷ್ಟಿಯಿಂದ ಅಂಬೇಡ್ಕರ್ ವಾದಿಗಳು, ಎಡಪಂಥೀಯ ಸಂಘಟನೆಗಳೂ ಸ್ಪಷ್ಟತೆ ಪಡೆದುಕೊಳ್ಳಬೇಕಿದೆ.

ಬಹುತ್ವದ ನೆಲೆಯಲ್ಲಿ, ಬಹುಸಾಂಸ್ಕೃತಿಕ ಸಮಾಜವನ್ನು ಪ್ರತಿನಿಧಿಸುವ ಭಾರತವನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕಾದರೆ ಇಲ್ಲಿನ ಜನಮೂಲ ಸಂಸ್ಕೃತಿಗಳನ್ನು ಭೇದಿಸುವುದು ಅನಿವಾರ್ಯ ಎನ್ನುವುದನ್ನು ವರ್ತಮಾನದ ‘ಪ್ರಗತಿಪರ’ ಚಿಂತನಾ ವಾಹಿನಿಗಳು ಗ್ರಹಿಸಬೇಕಿದೆ. ಇಸ್ಲಾಂ, ಕ್ರೈಸ್ತ, ಹಿಂದೂ, ಸಿಖ್, ಪಾರ್ಸಿ ಯಾವುದೇ ಆದರೂ ಈ ಧಾರ್ಮಿಕ ಚಿಂತನೆಗಳಿಂದ ಭಿನ್ನವಾದ ತಳಸ್ತರದ ಸಾಂಸ್ಕೃತಿಕ ಜಗತ್ತನ್ನು ಭಾರತದಲ್ಲಿ ಕಾಣಲು ಸಾಧ್ಯ. ಈ ಸಾಂಸ್ಕೃತಿಕ ಪ್ರಪಂಚದ ಒಳಹೊಕ್ಕು, ಅಲ್ಲಿರಬಹುದಾದ ಮಾನವೀಯ ಮೌಲ್ಯಗಳನ್ನು ಮೇಲಕ್ಕೆತ್ತಿ, ಪ್ರಾಚೀನ, ಅಮಾನುಷ, ನಾಗರಿಕ ವಿರೋಧಿ ಆಚರಣೆಗಳನ್ನು ಅಂತ್ಯಗೊಳಿಸುವ ಒಂದು ಪ್ರಯತ್ನ ನಮ್ಮಲ್ಲಿನ್ನೂ ಆಗಬೇಕಿದೆ. ಇವತ್ತಿನ ‘ಪ್ರಗತಿಪರ ಚಿಂತನಾ ಕ್ರಮದ ಆದ್ಯತೆ ಇದೇ ಆಗಬೇಕಿದೆ. ಸಾಹಿತ್ಯ, ಕಲೆ, ಸಂಗೀತ, ರಂಗಭೂಮಿ ಮತ್ತಾವುದೇ ಸೃಜನಶೀಲ ಬೌದ್ಧಿಕ ವಲಯದಲ್ಲಿ ಈ ಚರ್ಚೆ ನಡೆಯಬೇಕಿದೆ.

ವೈಚಾರಿಕತೆ-ವೈಜ್ಞಾನಿಕತೆ: ಮೇಲಿನ ಮೂರೂ ನೆಲೆಗಳಲ್ಲಿ ಪ್ರಗತಿಪರ ಚಿಂತನಾ ಕ್ರಮಗಳು ರೂಢಿಸಿಕೊಳ್ಳಲೇಬೇಕಾದ ಬೌದ್ಧಿಕತೆಯನ್ನು “ವೈಚಾರಿಕತೆ- ವೈಜ್ಞಾನಿಕತೆ’ಯಲ್ಲಿ ಗುರುತಿಸಬಹುದು. ದೈವತ್ವದ ನಿರಾಕರಣೆಯಂತಹ ಉನ್ನತ ಚಿಂತನಾಧಾರೆಯನ್ನು ಬದಿಗಿಟ್ಟು ನೋಡಿದಾಗಲೂ, ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸದೆ ಹೋದರೆ ಯಾವುದೇ ಸಾಂಸ್ಕೃತಿಕ ಅಪಸವ್ಯಗಳನ್ನೂ, ಸಾಮಾಜಿಕ ಅನಿಷ್ಟಗಳನ್ನೂ ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗುವುದಿಲ್ಲ ಎನ್ನುವುದು ಸ್ಪಷ್ಟ ವಾಗುತ್ತದೆ. ಆರಾಧನೆ, ಆಚರಣೆ ಮತ್ತು ವಿಧಿವಿಧಾನಗಳ ಮೂಲಕವೇ ಜನಮಾನಸ ಶ್ರದ್ಧೆ, ನಂಬಿಕೆ ಮತ್ತು ವಿಶ್ವಾಸಗಳನ್ನು ರೂಪಿಸುವ ಒಂದು ಸಾಂಸ್ಕೃತಿಕ ಎಳೆಯನ್ನು ಭಾರತದ ಇತಿಹಾಸದುದ್ದಕ್ಕೂ ಗುರುತಿಸಬಹುದು. ಈ ಸಮಾನ ಎಳೆಯೇ ಎಲ್ಲ ಧಾರ್ಮಿಕ ಅನುಸರಣೆಯನ್ನೂ ನಿರ್ದೇಶಿಸಲಾರಂಭಿಸುತ್ತದೆ. ಹಾಗಾಗಿ ಆಚರಣಾತಕ ನೆಲೆಯಲ್ಲಿ ವೈಚಾರಿಕ-ವೈಜ್ಞಾನಿಕ ಪ್ರಜ್ಞೆ ಕೊಂಚ ಮಟ್ಟಿಗಾದರೂ ಹಿಂದಕ್ಕೆ ಸರಿಯುತ್ತದೆ.

ಇದನ್ನು ನಿರ್ದಿಷ್ಟವಾಗಿ ಗುರುತಿಸುವ ಮೂಲಕ ನಾವಿಂದು ‘ಪ್ರಗತಿಪರ ಚಳವಳಿಗಳನ್ನು ಮರುಕಟ್ಟಬೇಕಿದೆ. ‘ಪ್ರಗತಿಪರ’ ಆಲೋಚನೆ ಮತ್ತು ಚಿಂತನಾ ಕ್ರಮಗಳನ್ನು ಕೇವಲ ರಾಜಕೀಯ ಪ್ರತಿರೋಧಗಳಿಗೆ ಸೀಮಿತಗೊಳಿಸದೆ ಒಂದು ಸಮಗ್ರ ಭೂಮಿಕೆಯಲ್ಲಿ ನಿರ್ವಚನೆ ಮಾಡುವ ಸಂದರ್ಭ ಇದಾಗಿದೆ. ಬುದ್ಧನಿಂದ ಅಂಬೇಡ್ಕರ್‌ವರೆಗಿನ ವೈಚಾರಿಕತೆಯ ಪಯಣದಲ್ಲಿ ನಮಗೆ ಎದುರಾಗುವ ಎಲ್ಲ ಚಾರಿತ್ರಿಕ ಚಿಂತಕರ ಆಲೋಚನೆಗಳನ್ನು ಸಮಕಾಲೀನಗೊಳಿಸಿ ವರ್ತಮಾನ ಸಮಾಜದ ಹಾಗೂ ಭವಿಷ್ಯ ತಲೆಮಾರಿನ ಮುನ್ನಡೆಗಾಗಿ ಅಳವಡಿಸಿಕೊಂಡು, ಮುನ್ನಡೆಸುವ ಜವಾಬ್ದಾರಿ ಪ್ರಗತಿಪರ ವ್ಯಕ್ತಿ ಮತ್ತು ಸಂಘಟನೆಗಳ ಮೇಲಿದೆ.

ಆಂದೋಲನ ಡೆಸ್ಕ್

Recent Posts

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

5 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

6 hours ago

ನಾನು ಅಶ್ಲೀಲ ಪದ ಬಳಸಿಲ್ಲ : ಪೊಲೀಸರ ಬಳಿ ಸಿ.ಟಿ ರವಿ ಹೇಳಿಕೆ

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…

6 hours ago

ವೈದ್ಯ ಮೇಲೆ ಹಲ್ಲೆ: ದೂರು ದಾಖಲು

ಮೈಸೂರು: ನಗರದ ಅಲ್‌ ಅನ್ಸಾರ್‌ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ  ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…

6 hours ago

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

8 hours ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

8 hours ago