ಅಂಕಣಗಳು

ಪ್ರೊ.ಆರ್.ಎಂ.ಚಿಂತಾಮಣಿ ಅವರ ವಾರದ ಅಂಕಣ: ವಿಮಾ ವಲಯದಲ್ಲಿ ಹೊಸ ಗಾಳಿ ಬೀಸುತ್ತಿದೆ

ಕೇಂದ್ರ ಸರ್ಕಾರ ಕಳೆದ ವಾರ ಅಧಿಕೃತ ಪ್ರಕಟಣೆಯನ್ನು ಹೊರಡಿಸಿ ಜೀವ ವಿಮೆಯೂ ಸೇರಿ ವಿಮಾ ರಂಗದಲ್ಲಿ ಇನ್ನು ಮುಂದೆ ಶೇ.೧೦೦ರಷ್ಟು ವಿದೇಶಿ ನೇರ ಹೂಡಿಕೆಗಳಿಗೆ (ವಿದೇಶಿ ದೀರ್ಘಾವಧಿ ಬಂಡವಾಳ ತೊಡಗಿಸಲಿಕ್ಕೆ) ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದೆ. ಅಂದರೆ ವಿದೇಶಿ ದೀರ್ಘಾವಧಿ ಹೂಡಿಕೆದಾರರು ಮತ್ತು ಹೂಡಿಕೆ ಕಂಪೆನಿಗಳು ಭಾರತೀಯ ಪಾಲುದಾರ ಕಂಪೆನಿಗಳಿಗಾಗಿ ಕಾಯದೆ ನಮ್ಮ ನೆಲದಲ್ಲಿ ನಮ್ಮ ಕಾಯ್ದೆಗಳ ಅಡಿಯಲ್ಲಿ ತಮ್ಮವೇ ವಿಮಾ ಕಂಪೆನಿಗಳನ್ನು ಸ್ಥಾಪಿಸಿ ವಿಮಾ ವ್ಯವಹಾರ ನಡೆಸಬಹುದು. ಸೂಕ್ತ ಕಾಯ್ದೆ ತಿದ್ದುಪಡಿ ಮಾಡಲಾಗುವುದು.

೧೯೯೧ರ ಆರ್ಥಿಕ ಸುಧಾರಣೆಗಳವರೆಗೆ ಭಾರತೀಯ ಜೀವವಿಮಾ ನಿಗಮ ಮತ್ತು ನಾಲ್ಕು ಸಾಮಾನ್ಯ ವಿಮಾ ಕಂಪೆನಿಗಳೊಡನೆ ಅವುಗಳ ನಿಯಂತ್ರಕ ಸಾಮಾನ್ಯ ವಿಮಾ ಕಾರ್ಪೊರೇಷನ್ ಎಲ್ಲವೂ ಸಂಪೂರ್ಣ ಕೇಂದ್ರ ಸರ್ಕಾರದ ಮಾಲೀಕತ್ವದಲ್ಲಿ ಇದ್ದವು. ನಿರ್ವಹಣೆ ಮತ್ತು ನಿಯಂತ್ರಣ ಎಲ್ಲವೂ ಮುಂದೆ ಖಾಸಗಿಯವರಿಗೆ ಅವಕಾಶ ಕಲ್ಪಿಸಲಾಯಿತು. ಅಂದು ವ್ಯವಹಾರದ ವಿಸ್ತರಣೆ ಮತ್ತು ದೂರದ ಹಳ್ಳಿಗಳಿಗೆ ವಿಮಾ ರಕ್ಷಣೆಯನ್ನು ತಲುಪಿಸುವ ಉದ್ದೇಶಕ್ಕಾಗಿ ಖಾಸಗೀಕರಣ ಅನಿವಾರ್ಯವಾಗಿತ್ತು. ಇದರ ಭಾಗವಾಗಿ ಹಂತ ಹಂತವಾಗಿ (ಶೇ. ೨೪ ರಷ್ಟು, ಶೇ. ೪೯ ಮತ್ತು ಶೇ.೭೪) ವಿದೇಶಿ ನೇರ ಹೂಡಿಕೆಗಳಿಗೂ ಅನುಮತಿ ಕೊಡಲಾಯಿತು. ಅತಿ ಸೂಕ್ಷ್ಮ ವಲಯಗಳಾದ ರಕ್ಷಣಾ ಉತ್ಪಾದನೆ ಮತ್ತು ಕೃಷಿರಂಗ ಹೆಚ್ಚು ಹೆಚ್ಚು ವಿದೇಶಿ ನೇರ ಹೂಡಿಕೆಗಳಿಗೆ ತೆರೆದುಕೊಳ್ಳಲಿವೆ ಎಂದೂ ಹೇಳಲಾಗುತ್ತದೆ.

ಇಲ್ಲಿ ಒಂದು ಮಾತನ್ನು ಹೇಳಲೇಬೇಕು. ವಿದೇಶಿ ಪ್ರಸಿದ್ಧ ಕಂಪೆನಿಗಳು, ದೀರ್ಘಾವಧಿ ಹೂಡಿಕೆದಾರರು ಮತ್ತು ಹೂಡಿಕೆ ಸಂಸ್ಥೆಗಳು ಭಾರತದಲ್ಲಿ ವ್ಯವಹಾರ ವಿಸ್ತರಿಸಲು ಉತ್ಸುಕರಾಗಿರುವುದು ನಿಜವಾದರೂ ಅವರು ನಿರಾತಂಕ ವ್ಯವಹಾರ ನಿರ್ವಹಿಸುವ ವಾತಾವರಣ (Ease of doing business) ಮತ್ತು ಪಾರದರ್ಶಕತೆಯನ್ನು ನಿರೀಕ್ಷಿಸುತ್ತಾರೆ.

ಇದನ್ನು ಓದಿ: ಶೀಘ್ರದಲ್ಲಿಯೇ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಕಿಮೋಥೆರಪಿ ಆರಂಭ 

ಮೋಸ, ವಂಚನೆಗಳಿಂದ ವಾರ್ಷಿಕ ರೂ.೧೦ ಸಾ.ಕೋ. ನಷ್ಟ: 

ಜಗತ್ತಿನಾದ್ಯಂತ ದೊಡ್ಡ ಹೆಸರು ಹೊಂದಿರುವ ಬೋಸ್ಟನ್ ಕನ್ಸಲ್ಟೆನ್ಸಿ ಗ್ರೂಪ್ (ಬಿ.ಸಿ.ಜಿ.) ತನ್ನ ಸಂಶೋಧನಾ ವಿಭಾಗದಿಂದ ಭಾರತದ ವಿಮಾ ಕಂಪೆನಿಗಳ ಹಣಕಾಸು ಬಗ್ಗೆ ಅಧ್ಯಯನ ನಡೆಸಿ ಒಂದು ವರದಿಯನ್ನು ಇತ್ತೀಚೆಗೆ ಪ್ರಕಟಿಸಿದೆ. ಅದರಂತೆ ವಿಮಾ ರಕ್ಷಣೆಯ ಪರಿಹಾರ ಪಡೆಯುವಾಗ ನಡೆಯುವ ಮೋಸ ,ವಂಚನೆ, ವಿಳಂಬ ಮತ್ತು ಕಾಯ್ದೆ ಪ್ರಕಾರ ಅವಕಾಶಗಳ ದುರುಪಯೋಗ ಮುಂತಾದವುಗಳಿಂದ ವಿಮಾ ಕಂಪೆನಿಗಳಿಗೆ ವಾರ್ಷಿಕ ಶೇ.೮-೧೦ ರಷ್ಟು ಅಪವ್ಯಯವಾಗುತ್ತದೆ. ಇಂಥ ಅಪವ್ಯಯಗಳಿಂದ ಕಂಪೆನಿಗಳ ವಾರ್ಷಿಕ ಆದಾಯಗಳಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆ ಎಂದು ವರದಿ ಹೇಳುತ್ತದೆ. ಇಂಥ ಅಪವ್ಯಯಗಳಲ್ಲಿ ಶೇ.೧.೦೦ ರಷ್ಟು ಕಡಿಮೆ ಮಾಡುವುದಾದರೆ ಕಂಪೆನಿಗಳ ಲಾಭದಲ್ಲಿ ಶೇ ೦.೮ ರಷ್ಟಾದರೂ ಹೆಚ್ಚಳ ಕಾಣಬಹುದು ಎಂದು ಅಂದಾಜಿಸಲಾಗಿದೆ.

ವಿಮಾ ರಕ್ಷಣೆಯ ಪರಿಹಾರಗಳನ್ನು ಅರ್ಹತೆಗಿಂತ ಹೆಚ್ಚಿಗೆ ಪಡೆಯಲು ಉತ್ಪ್ರೇಕ್ಷಿತ ವೆಚ್ಚಗಳ ಸುಳ್ಳು ಪಾವತಿಗಳನ್ನು ಸಲ್ಲಿಸುವುದು, ವಾರಾಂತ್ಯದಲ್ಲಿ ವೈದ್ಯರ ಅಲಭ್ಯತೆಯನ್ನು ನೆಪ ಮಾಡಿಕೊಂಡು ಹೆಚ್ಚು ದಿನಗಳವರೆಗೆ ಆಸ್ಪತ್ರೆಯಲ್ಲಿದ್ದಂತೆ ತೋರಿಸುವುದು, ಅರ್ಹತೆಗಿಂತ ಹೆಚ್ಚಿನ ಆಸ್ಪತ್ರೆ ಬೆಡ್, ಸೇವೆಗಳು (ಸ್ಪೆಷಲ್ ವಾರ್ಡ್ ಮುಂ.) ಮತ್ತು ಇತರ ವೆಚ್ಚಗಳ ಬಿಲ್ ಗಳನ್ನು ಸಲ್ಲಿಸುವುದು, ವಾಹನಗಳ ವಿಮೆ ಇದ್ದರೆ ದುರಸ್ತಿ ವೆಚ್ಚಗಳಿಗೆ ಉತ್ಪ್ರೇಕ್ಷಿತ ಬಿಲ್ಲು ಗಳನ್ನು ಸಲ್ಲಿಸುವುದು ಮುಂತಾದವುಗಳು ವಂಚನೆಯ ಕೆಲವು ಮುಖಗಳು. ಸಂಬಂಧಪಟ್ಟವರ ಅಧಕ್ಷತೆಗಳು, ನಿರ್ಲಕ್ಷ್ಯಗಳು ಮತ್ತು ಅಪ್ರಾಮಾಣಿಕತೆ ಗಳೂ ಅಪವ್ಯಯಗಳಿಗೆ ಕಾರಣಗಳಾಗಬಹುದು. ಅವಕಾಶಗಳ, ಕಾಯ್ದೆ ಕಲಮುಗಳ ಮತ್ತು ಸ್ಥಾನಬಲದ ದುರುಪಯೋಗವೂ ವಿಮಾ ಕಂಪೆನಿಗಳ ವೆಚ್ಚಗಳು ಅನವಶ್ಯಕವಾಗಿ ಹೆಚ್ಚಾಗಲು ಕಾರಣಗಳೆನ್ನಬಹುದಾಗಿದೆ. ಇಂತಹ ಇನ್ನೂ ಹಲವು ಕಾರಣಗಳು ವಿಮಾ ಕಂಪೆನಿಗಳ ಲಾಭದಾಯಕತೆ ಮತ್ತು ಸುಸ್ಥಿರತೆಗಳ (Profitability and Sustainability) ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಎಲ್ಲ ರೀತಿಯ ಸೋರಿಕೆಗಳನ್ನು ತಡೆಗಟ್ಟಲು ಇತ್ತೀಚೆಗೆ ಬಂದಿರುವ ಕೃತಕ ಬುದ್ಧಿಮತ್ತೆ (Artificial Intelligence) ಒಳಗೊಂಡಿರುವ ಹೊಸ ತಂತ್ರಜ್ಞಾನದ ಬಳಕೆ ನಮ್ಮ ದೇಶದಲ್ಲಿ ಹೆಚ್ಚಾಗಬೇಕಾಗಿದೆ. ಇದಕ್ಕಾಗಿ ಮಾನವಸಂಪನ್ಮೂಲವನ್ನು ಸಿದ್ಧಪಡಿಸಿಕೊಳ್ಳಲು ಸೂಕ್ತ ತರಬೇತಿಗಳನ್ನು ಕೂಡಲೇ ಕೊಡಬೇಕು. ವಂಚನೆಯನ್ನು ಕಂಡುಹಿಡಿದು ವಂಚಕರು ಮತ್ತು ಅದಕ್ಕೆ ಸಹಕರಿಸಿದ ವಿಮಾ ಕಂಪೆನಿಗಳ ಸಿಬ್ಬಂದಿಗಳೂ ಸೇರಿದಂತೆ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು. ಅಂಥ ನೌಕರರನ್ನು ಕೂಡಲೇ ಕೆಲಸದಿಂದ ತೆಗೆಯಬೇಕಲ್ಲದೆ ಅವರ ಎಲ್ಲಾ ಸೌಲಭ್ಯಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಬೇಕು. ಕಠಿಣ ಶಿಕ್ಷೆ ಅಪರಾಧ ತಡೆಗೆ ರಾಜಮಾರ್ಗ. ಅಪರಾಧ ತಡೆ ಕ್ರಮಗಳಿಂದ ಸಮರ್ಪಕ ಉಪಯುಕ್ತ ಬಳಕೆಗೆ ಹೆಚ್ಚು ಸಂಪನ್ಮೂಲ ಲಭ್ಯವಾಗುತ್ತದೆ. ಅದರಿಂದ ವಿಮಾ ರಕ್ಷಣೆಯ ಕೆಳಗೆ ಹೆಚ್ಚು ಜನರು ಮತ್ತು ಆಸ್ತಿಗಳು ಒಳಗೊಳ್ಳುವಂತೆ ಮಾಡಬಹುದು. ಅದರಿಂದ ವೆಚ್ಚಗಳು ದೊಡ್ಡ ಸಂಖ್ಯೆ ರಕ್ಷಿತರಲ್ಲಿ ಹಂಚಲ್ಪಟ್ಟು ಪ್ರತಿಯೊಬ್ಬರ ವಿಮಾ ವೆಚ್ಚಗಳು ಕಡಿಮೆಯಾಗಿ ವಿಮಾ ಪ್ರೀಮಿಯಂ ದರಗಳನ್ನು ಇಳಿಸಲಿಕ್ಕೆ ಸಾಧ್ಯವಾಗುತ್ತದೆ.

ಇದನ್ನು ಓದಿ: ಡಿಕೆಶಿ ಬರಿಗೈಲಿ ವಾಪಸ್

ಜೀವ ವಿಮೆಯಲ್ಲಿಯೂ ಆರೋಗ್ಯ ವಿಮೆ, ಅಪಘಾತ ವಿಮೆ ಮುಂತಾದ ಹಲವು ರೀತಿ ವಿಮೆ ಪಾಲಿಸಿಗಳಿವೆ. ಆದರೂ ನಮ್ಮಲ್ಲಿ ವಿಮಾ ರಕ್ಷಣೆ ಪಡೆದವರ ಸಂಖ್ಯೆ ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ತೀರಾ ಕಡಿಮೆ ಇದೆ. ಆಸ್ತಿ ಮತ್ತು ಸ್ವತ್ತುಗಳ ವಿಮೆ ವಿಷಯದಲ್ಲಂತೂ ನಾವು ಇನ್ನೂ ಹಿಂದಿದ್ದೇವೆ. ಜನರಲ್ಲಿ ಅರಿವು ಮೂಡಿಸುವ ಅವಶ್ಯಕತೆ ಹೆಚ್ಚಾಗಿದೆ. ಅಪಘಾತ ಮತ್ತು ಅವಘಡಗಳು ಸಂಭವಿಸಿ ಜೀವ ಹಾನಿ ಮತ್ತು ಆಸ್ತಿ ಹಾನಿ ಉಂಟಾದಾಗ ಪರಿಹಾರಕ್ಕಾಗಿ ಸರ್ಕಾರಕ್ಕೆ ಮೊರೆ ಇಟ್ಟು ಭಿಕ್ಷೆಯಂತೆ ಪರಿಹಾರಕ್ಕಾಗಿ ಕಾಯುವ ಬದಲು ವಿಮಾರಕ್ಷಣೆ ಪಡೆದು ಸಣ್ಣ ಮೊತ್ತಗಳ ಪ್ರೀಮಿಯಂ ಕಟ್ಟುತ್ತಿದ್ದರೆ ಪರಿಹಾರ ತಾನಾಗಿಯೇ ಮನೆ ಬಾಗಿಲಿಗೆ ಬರುತ್ತದೆ. ವಿಮಾ ರಕ್ಷಣೆ ಪಡೆದ ಜೀವಗಳ ಮತ್ತು ಆಸ್ತಿಗಳ ಸಂಖ್ಯೆ ಹೆಚ್ಚಾದಂತೆ ಪ್ರತಿಯೊಂದು ಪಾಲಿಸಿಗೆ ವೆಚ್ಚಗಳು ವಿಂಗಡಣೆಯಾಗಿ ಪ್ರತಿ ಪಾಲಿಸಿಯ ವೆಚ್ಚ ಕಡಿಮೆಯಾಗುತ್ತದೆ. ಪ್ರೀಮಿಯಂ ತಾನಾಗಿ ಕಡಿಮೆಯಾಗುತ್ತದೆ. ಅಂದರೆ ಅತಿ ಕಡಿಮೆ ವೆಚ್ಚದಲ್ಲಿ ದೊಡ್ಡ ಮೊತ್ತದ ರಕ್ಷಣೆ ಸಿಗುತ್ತದೆ. ಅನಿಶ್ಚಿತತೆಗಳ ಆತಂಕಗಳಿರುವುದಿಲ್ಲ

” ಅಪರಾಧ ತಡೆ ಕ್ರಮಗಳಿಂದ ಸಮರ್ಪಕ ಉಪಯುಕ್ತ ಬಳಕೆಗೆ ಹೆಚ್ಚು ಸಂಪನ್ಮೂಲ ಲಭ್ಯವಾಗುತ್ತದೆ. ಅದರಿಂದ ವಿಮಾ ರಕ್ಷಣೆಯ ಕೆಳಗೆ ಹೆಚ್ಚು ಜನರು ಮತ್ತು ಆಸ್ತಿಗಳು ಒಳಗೊಳ್ಳುವಂತೆ ಮಾಡಬಹುದು. ಅದರಿಂದ ವೆಚ್ಚಗಳು ದೊಡ್ಡ ಸಂಖ್ಯೆಯ ರಕ್ಷಿತರಲ್ಲಿ ಹಂಚಲ್ಪಟ್ಟು ಪ್ರತಿಯೊಬ್ಬರ ವಿಮಾ ವೆಚ್ಚಗಳು ಕಡಿಮೆಯಾಗಿ ವಿಮಾ ಪ್ರೀಮಿಯಂ ದರಗಳನ್ನು ಇಳಿಸಲಿಕ್ಕೆ ಸಾಧ್ಯವಾಗುತ್ತದೆ.”

ಪ್ರೊ.ಆರ್.ಎಂ.ಚಿಂತಾಮಣಿ

ಆಂದೋಲನ ಡೆಸ್ಕ್

Recent Posts

ವಾಹನ ದಟ್ಟನೆ : ಸುಗಮ ಸಂಚಾರಕ್ಕೆ ರೈಲ್ವೆ ಅಂಡರ್‌ ಬ್ರಿಡ್ಜ್‌ ವಿಸ್ತರಿಸಲು ಮನವಿ

ಮೈಸೂರು : ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ನಿಯಂತ್ರಣ ಹಾಗೂ ಸುಗಮ ಸಂಚಾರಕ್ಕಾಗಿ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು…

5 hours ago

ಮೈಸೂರು–ಜಲ್ಪೈಗುಡಿ ನಡುವೆ ವಿಶೇಷ ರೈಲು ಸಂಚಾರ

ಮೈಸೂರು : ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು, ನೈರುತ್ಯ ರೈಲ್ವೆಯು ಮೈಸೂರು- ಜಲ್ಪೈಗುರಿ ಜಂಕ್ಷನ್‌ ನಡುವೆ ವಿಶೇಷ ಎಕ್ಸ್‌ಪ್ರೆಸ್…

5 hours ago

ಯಮುನಾ ನದಿಯಲ್ಲಿ ಮುಳುಗಿದ ಪ್ರವಾಸಿಗರ ದೋಣಿ ; 6 ಮಂದಿ ಸಾವು, ಹಲವರು ನಾಪತ್ತೆ

ಮಥುರಾ : ಬೃಂದಾವನದ ಕೇಶಿ ಘಾಟ್ ಸಮೀಪ ಯಮುನಾ ನದಿಯಲ್ಲಿ ಪ್ರವಾಸಿಗರಿಂದ ತುಂಬಿದ ದೋಣಿ ಪಲ್ಟಿಯಾಗಿ ಆರು ಮಂದಿ ಸ್ಥಳದಲ್ಲೇ…

6 hours ago

ಹಡಗುಗಳ ಮೇಲಿನ ಶುಲ್ಕ ನಿಲ್ಲಿಸಿ ; ಇರಾನ್‌ಗೆ ಟ್ರಂಪ್ ಸೂಚನೆ

ಟೆಹ್ರಾನ್ : ಇರಾನ್ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳ ಮೇಲೆ ಶುಲ್ಕ ವಿಧಿಸುತ್ತಿದ್ದರೆ, ಅದು ತಕ್ಷಣವೇ ಅದನ್ನು ನಿಲ್ಲಿಸಬೇಕು…

7 hours ago

ನಂಜನಗೂಡು | ದೇವರಾಯಶೆಟ್ಟಿಪುರದಲ್ಲಿ ಚಿರತೆ ಪ್ರತ್ಯಕ್ಷ ; ಗ್ರಾಮಸ್ಥರಲ್ಲಿ ಆತಂಕ

ಮಲ್ಕುಂಡಿ : ರಾತ್ರಿ ವೇಳೆ ರಸ್ತೆ ಮಧ್ಯೆ ಚಿರತೆ ಪ್ರತ್ಯಕ್ಷವಾಗಿರುವ ಘಟನೆ ದೇವರಾಯಶೆಟ್ಟಿಪುರ ಗ್ರಾಮದಿಂದ ಹುರ ಗ್ರಾಮಕ್ಕೆ ತೆರಳುವ ಮುಖ್ಯ…

7 hours ago

ಹನೂರು | ಪ್ರತ್ಯೇಕ ಮನೆಕಳ್ಳತನ ; ಐವರ ಬಂಧನ

ಹನೂರು : ಮೂರು ಪ್ರತ್ಯೇಕ ಮನೆಗಳಲ್ಲಿ ಕಳ್ಳತನ ನಡೆಸಿ ನಗದು ಹಾಗೂ ಚಿನ್ನ ದೋಚಿಕೊಂಡು ಪರಾರಿಯಾಗಿದ್ದ ಐವರು ಆರೋಪಿಗಳನ್ನು ರಾಮಾಪುರ…

9 hours ago