ಪಾನ್ ಇಂಡಿಯಾ ಚಿತ್ರಗಳ ನಿರ್ಮಾಣ, ಪ್ರಚಾರ, ಪ್ರಯೋಗದಲ್ಲಿ ನಮ್ಮವರು, ಅವರು ಸೋಲು-ಗೆಲುವುಗಳೇನೇ ಇರಲಿ, ಅಲ್ಲೊಂದು ಇಲ್ಲೊಂದು ವರ್ತಮಾನ ಕನ್ನಡ ಚಿತ್ರೋದ್ಯಮದ ಸಾಹಸ, ಸಾಧನೆ, ಪ್ರಯೋಗಗಳ ಮೇಲೆ ಬೆಳಕು ಚೆಲ್ಲುತ್ತಿರುತ್ತವೆ. ಹೊಸ ಪ್ರಯೋಗಗಳು, ಹೊಸ ಸಾಧನೆಯತ್ತ ಹೆಜ್ಜೆ.
ಮೊನ್ನೆ ನಿರ್ಮಾಪಕ ರಮೇಶ್ ರೆಡ್ಡಿ ಅವರು ತಮ್ಮ ಹೊಸಚಿತ್ರ‘೪೫’ರ ಪ್ರಚಾರಯಾತ್ರೆ ಹೊರಟಿದ್ದರು. ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಕೊಚ್ಚಿಗಳಲ್ಲಿ ಪ್ರಚಾರ. ಅದಕ್ಕಾಗಿಯೇ ಪ್ರತ್ಯೇಕ ವಿಮಾನ ವ್ಯವಸ್ಥೆ ಮಾಡಿದ್ದರು. ಹಿಂದೆ ಚಿತ್ರ ಬಿಡುಗಡೆ ಪೂರ್ವದಲ್ಲಿ ಪ್ರಚಾರಕ್ಕಾಗಿ ಹೀಗೆ ವ್ಯವಸ್ಥೆ ಯನ್ನು ಬೇರೆ ನಿರ್ಮಾಪಕರು ಮಾಡಿರುವ ಕುರಿತ ಮಾಹಿತಿ ಇಲ್ಲ; ಅಥವಾ ಮಾಡಿದ್ದರೂ ಇರಬಹುದು. ಸಂಗೀತ ಸಂಯೋಜಕ ಅರ್ಜುನ್ ಜನ್ಯ ಇದೇ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ ಚಿತ್ರ‘೪೫’.
ಅದ್ಧೂರಿಯಾಗಿ ತಯಾರಾಗುತ್ತಿರುವ ಈ ಚಿತ್ರದ ಕುರಿತಂತೆ ಸಾಕಷ್ಟು ನಿರೀಕ್ಷೆ ಇದೆ. ಇದರ ಗ್ರಾಫಿಕ್ಸ್ ಕೆಲಸ ಸಾಕಷ್ಟು ಇದ್ದು ವಿದೇಶದಲ್ಲಿ ಮಾಡಲಾಗುತ್ತಿದೆ. ಶಿವರಾಜಕುಮಾರ್, ಉಪೇಂದ್ರ ಮತ್ತು ರಾಜ್ ಬಿ. ಶೆಟ್ಟಿ ಮುಖ್ಯ ಭೂಮಿಕೆಯ ಈ ಚಿತ್ರದ ಪೂರ್ವಸಿದ್ಧತೆಯನ್ನು ಅನಿಮೇಟೆಡ್ ಸ್ಟೋರಿಬೋರ್ಡ್ ಮೂಲಕ ಮಾಡಿದ್ದು ಇದೇ ಮೊದಲು ಎನ್ನಲಾಗಿದೆ. ಮೊನ್ನೆ ಸೆಟ್ಟೇರಿದ ಸುದೀಪ್ ಮುಖ್ಯಭೂಮಿಕೆಯ ‘ಬಿಲ್ಲರಂಗಭಾಷ’ ಚಿತ್ರಕ್ಕೂ ಇದೇ ರೀತಿಯಲ್ಲಿ ಸಿದ್ಧತೆಮಾಡಿ ಕೊಂಡದ್ದಾಗಿ ಹೇಳಲಾಗುತ್ತಿದೆ. ಹಾಲಿವುಡ್ ಮಂದಿ ಸಾಕಷ್ಟು ಮೊದಲಿನಿಂದಲೂ ಚಿತ್ರ ನಿರ್ಮಾಣಕ್ಕೆ ಹೀಗೆಯೇ ತಯಾರಾಗುತ್ತಾರೆ.
ಹ್ಞಾಂ, ‘೪೫’ ಚಿತ್ರದ ಪ್ರಚಾರದ ವೇಳೆ ಇನ್ನೂ ಒಂದೆರಡು ವಿಷಯಗಳು ಬಹಿರಂಗವಾದವು. ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರದಲ್ಲಿ ತಾವು ಅಭಿನಯಿಸಿದ್ದನ್ನು ಉಪೇಂದ್ರ ಅವರು ಮಾಧ್ಯಮದ ಮುಂದೆ ಹೇಳಿದ್ದಾಗಿ ವರದಿಯಾಯಿತು. ಮಾತ್ರವಲ್ಲ, ಅಮೀರ್ ಖಾನ್, ನಾಗಾರ್ಜುನ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ವಿಶೇಷವೆಂದರೆ, ೩೮ ವರ್ಷಗಳ ನಂತರ ಸತ್ಯರಾಜ್ ಕೂಡ ರಜನಿ ಅವರ ಈ ಚಿತ್ರದಲ್ಲಿ ನಟಿಸಿ ದ್ದಾರೆ. ರಜನಿಕಾಂತ್ ಚಿತ್ರಗಳೆಂದರೆ, ಅದರಲ್ಲೂ ಇಂತಹದೊಂದು ತಾರಾ ಗಣದ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಾಣುವುದರಲ್ಲಿ ಸಂದೇಹವಿಲ್ಲ.
ಕಳೆದ ಬಾರಿ ರಜನಿಕಾಂತ್ ಅವರ ಚಿತ್ರವೊಂದು ಮೊದಲ ದಿನ, ವಾರ ಸಾವಿರದವರೆಗೆ ಪ್ರದರ್ಶನ ಕಂಡಿತ್ತು. ಸಾಮಾನ್ಯವಾಗಿ ಇಂತಹ ಚಿತ್ರಗಳ ಬಿಡುಗಡೆಯ ವೇಳೆ ಕನ್ನಡದ ಅದ್ಧೂರಿ ವೆಚ್ಚದ ಚಿತ್ರಗಳು ತೆರೆಗೆ ಬರುವುದು ಕಡಿಮೆ. ಆದರೆ ಈ ಬಾರಿ ‘೪೫’ ಮತ್ತು ‘ಕೂಲಿ’ ಒಂದೇ ವಾರ ತೆರೆಗೆ ಬರುತ್ತಿವೆ. ಆಗಸ್ಟ್ ೧೫, ‘೪೫’ ಚಿತ್ರದ ಬಿಡುಗಡೆಯ ದಿನವಾದರೆ, ಒಂದು ಮೊದಲೇ ರಜನಿಕಾಂತ್ ಅಭಿನಯದ ‘ಕೂಲಿ’ ಬಿಡುಗಡೆ ಇದೆ. ಅಷ್ಟಕ್ಕೂ ಎರಡೂ ಚಿತ್ರಗಳನ್ನು ಕನ್ನಡದ ಹಂಚಿಕಾ ಸಂಸ್ಥೆಗಳೇ ಬಿಡುಗಡೆ ಮಾಡಲಿವೆ!
ಒಂದೇ ವಾರದಲ್ಲಿ ತಮ್ಮ ಎರಡು ಚಿತ್ರಗಳು ಬಿಡುಗಡೆ ಕಾಣುವ ದಾಖಲೆ ನಟ ಉಪೇಂದ್ರ ಅವರದಾಗಲಿದೆ. ಕನ್ನಡ ಮತ್ತು ತಮಿಳು ಚಿತ್ರಗಳು. ತಮಿಳು ಚಿತ್ರದ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್. ಚೆನ್ನೈಯಲ್ಲಿ ‘೪೫’ರ ಪ್ರಚಾರದ ವೇಳೆ ಇನ್ನೂ ಒಂದು ಸುದ್ದಿ ಹೊರಬಿತ್ತು. ಅದು ಶಿವರಾಜಕುಮಾರ್ ರಜನಿಕಾಂತ್ ಜೊತೆ ಇನ್ನೊಂದು ಚಿತ್ರದಲ್ಲಿ ನಟಿಸಲಿರುವ ಸುದ್ದಿ. ಸ್ವತಃ ಶಿವಣ್ಣ ಅವರೇ ಇದನ್ನು ಅಲ್ಲಿನ ಪತ್ರಿಕಾ ಗೋಷ್ಠಿಯ ವೇಳೆ ಹೇಳಿದ್ದಾಗಿ ವರದಿ. ರಜನಿಕಾಂತ್ ಜೊತೆ ಈ ಹಿಂದೆ ಅವರು ‘ಜೈಲರ್’ ಚಿತ್ರದಲ್ಲಿ ನಟಿಸಿದ್ದರು. ಚಿತ್ರದಲ್ಲಿ ಅವರ ಪಾತ್ರ ಚಿಕ್ಕದಾದರೂ ಅವರಿಗೆ ಅದು, ತಮಿಳುನಾಡಿನಲ್ಲಿ ಅತ್ಯಽಕ ಜನಪ್ರಿಯತೆ ತಂದುಕೊಟ್ಟಿತ್ತು. ಪಾತ್ರ ಎಷ್ಟೇ ಚಿಕ್ಕದಿರಲಿ, ತಾವು ಆ ಚಿತ್ರದ ಭಾಗವಾಗುವುದಾಗಿ ಅವರು ಹೇಳಿದ್ದು, ‘ಜೈಲರ್ ೨’ ಚಿತ್ರದ ಕುರಿತಂತೆ. ಈಗಾಗಲೇ ಆ ಚಿತ್ರದ ಮೊದಲ ಹಂತದ ಚಿತ್ರೀಕರಣ ಕೇರಳದಲ್ಲಿ ಆರಂಭವಾಗಿದೆ. ರಜನಿಕಾಂತ್ ಮತ್ತು ರಮ್ಯ ಕೃಷ್ಣ ಅಭಿನಯದ ಭಾಗಗಳ ಚಿತ್ರೀಕರಣ ನಡೆಯುತ್ತಿರುವುದಾಗಿ ಸುದ್ದಿ.
ದೇಶಾದ್ಯಂತ ಪಾನ್ ಇಂಡಿಯಾ ಹೆಸರಿನ ಚಿತ್ರಗಳ ಕಾರುಬಾರು ಕಡಿಮೆ ಏನಿಲ್ಲ. ಒಂದು ಭಾಷೆಯಲ್ಲಿ ತಯಾರಿಸಿ, ಇತರ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡುವ ಈ ಬೆಳವಣಿಗೆಯನ್ನು ಪಾನ್ ಇಂಡಿಯಾ ಎಂದು ಕರೆಯುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗಿದೆ. ಈಗ ಅಂತಹ ಚಿತ್ರಗಳಲ್ಲಿ ಬೇರೆ ಬೇರೆ ಭಾಷೆಗಳ ಜನಪ್ರಿಯ ನಟರನ್ನು ಸೇರಿಸಿಕೊಳ್ಳುವುದು ಹೊಸದು. ಇದು ವ್ಯಾವಹಾರಿಕ ಲೆಕ್ಕಾಚಾರ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ‘ಕೂಲಿ’ ಚಿತ್ರದಲ್ಲಿ ರಜನಿಕಾಂತ್ ಜೊತೆ ತಮಿಳು ನಟರು ಮಾತ್ರವಲ್ಲದೆ, ಕನ್ನಡ, ಹಿಂದಿ, ತೆಲುಗು ಮಲಯಾಳ ಭಾಷೆಗಳ ಜನಪ್ರಿಯ ನಟರು ಕೂಡ ಸೇರಿದ್ದರೆ, ಸಹಜವಾಗಿಯೇ ಅದರ ವ್ಯವಹಾರ ಹೆಚ್ಚೇ ಆಗುತ್ತದೆ. ಅಂತಹ ಪ್ರಯೋಗಗಳು ಅಲ್ಲಲ್ಲಿ ಆಗುತ್ತಿವೆ.
ಪಾನ್ ಇಂಡಿಯಾ ಹೆಸರಿನಲ್ಲಿ ಬರುತ್ತಿರುವ ಚಿತ್ರಗಳು, ಅದು ಯಾವುದೇ ಭಾಷೆಯಲ್ಲಿ ತಯಾರಾಗಿರಲಿ, ಡಬ್ ಆಗಿಬಂದಿರಲಿ, ಅವು ಮೂಲ ಭಾಷೆಯ ಹೊರತಾಗಿ ಇತರ ಭಾಷಾ ಚಿತ್ರೋದ್ಯಮಗಳಿಗೆ ಪೂರಕ ಅಲ್ಲ ಎನ್ನುವುದು ಉದ್ಯಮದ ಲೆಕ್ಕಾಚಾರ. ಮಲಯಾಳದಲ್ಲಿ ಮೋಹನ್‌ಲಾಲ್ ಅಭಿನಯದ ‘ದೃಶ್ಯಂ’ ಚಿತ್ರಬಂದಿತ್ತು. ಕೇರಳದಲ್ಲಿ ಮಾತ್ರವಲ್ಲ, ಇತರ ರಾಜ್ಯಗಳಲ್ಲೂ ಅದು ಬಿಡುಗಡೆಯಾಗಿ ಯಶಸ್ವಿಯಾಗಿತ್ತು. ಅದು ಕನ್ನಡದಲರಿಮೇಕ್ ಆಯಿತು. ರವಿಚಂದ್ರನ್ ಅಭಿನಯಿಸಿದ್ದರು. ಹಿಂದಿಯಲ್ಲಿ ಅಜಯ್ ದೇವಗನ್ ನಟಿಸಿದ್ದರು. ಮಲಯಾಳದಲ್ಲಿ ಅದರ ಎರಡನೇ ಭಾಗವೂ ತೆರೆಕಂಡಿತು. ಯಶಸ್ವಿಯಾಯಿತು. ಹಿಂದಿನಂತೆಯೇ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಅದರ ರಿಮೇಕ್ ತಯಾರಾಯಿತು. ಇದೀಗ ‘ದೃಶ್ಯಂ ೩’ ಸಿದ್ಧವಾಗುತ್ತಿದೆ. ನಿರ್ಮಾಪಕರು ಅದನ್ನು ಮಲಯಾಳ ಮಾತ್ರವಲ್ಲದೆ, ಹಿಂದಿಯಲ್ಲೂ ನಿರ್ಮಿಸುವ ಯೋಚನೆಯಲ್ಲಿದ್ದಾರೆ ಎನ್ನುವ ಸುದ್ದಿ, ಹಿಂದಿಯಲ್ಲಿ ಆ ಚಿತ್ರನಿರ್ಮಿಸುವ ಅಜಯ್ ದೇವಗನ್‌ಗೆ ಇದು ತೊಂದರೆಯಾಗಬಹುದು ಎನ್ನುವ ಚರ್ಚೆ ಇದೀಗ ಎಲ್ಲೆಡೆ ನಡೆದಿದೆ.
ಹಿಂದಿನ ದಿನಗಳಲಿ ಒಂದು ಭಾಷೆಯಲ್ಲಿ ತಯಾರಾಗಿ ಜನಮನ್ನಣೆ ಪಡೆದ ಚಿತ್ರಗಳನ್ನು ಇತರ ಭಾಷೆಗಳಲ್ಲಿ ನಿರ್ಮಿಸುವುದು ಸಾಮಾನ್ಯವಾಗಿತ್ತು. ಒಂದು ಭಾಷೆಯ ಜನಪ್ರಿಯ ನಟರು ನಟಿಸಿದ ಚಿತ್ರದ ಇತರ ಭಾಷಾ ಅವತರಣಿಕೆಯಲ್ಲಿ ಅಲ್ಲಿನ ಜನಪ್ರಿಯ ನಟರು ನಟಿಸುತ್ತಿದ್ದರು. ಆದರೆ ಈಗ ಅವು ಕಷ್ಟಸಾಧ್ಯ. ಏಕೆಂದರೆ ಮೂಲಚಿತ್ರಗಳೇ ಡಬ್ ಆಗಿ ಎಲ್ಲ ಭಾಷೆಗಳಲ್ಲೂ ಲಭ್ಯ. ‘ಕೂಲಿ’ ಮತ್ತು‘೪೫’ ಚಿತ್ರಗಳ ಬಿಡುಗಡೆ ಈಗ ನಿಗದಿಯಾದಂತೆ ಒಂದೇ ವಾರದಲ್ಲಿ ಆದದ್ದೇ ಆದರೆ, ಅದು ಕನ್ನಡ ಚಿತ್ರೋದ್ಯಮದ ಪಾಲಿಗೆ ಪರೀಕ್ಷೆಯ ದಿನಗಳಾಗಲಿವೆ. ಅದ್ಧೂರಿ ನಿರ್ಮಾಣ ವೆಚ್ಚದ ಚಿತ್ರಗಳು ಕೆಲವು ಅದರ ಹಿಂದೆ ಸರದಿಯಲ್ಲಿವೆ. ಕೋಟಿಗಟ್ಟಲೆ ಬಂಡವಾಳ ಹೂಡಿದ ಚಿತ್ರಗಳ ನಡುವೆ ಕೃತಕ ಬುದ್ಧಿಮತ್ತೆ ಆಧುನಿಕತಂತ್ರಜ್ಞಾನ ಬಳಸಿ ತಯಾರಾದ ಚಿತ್ರವೊಂದರ ಸುದ್ದಿ. ನಿರ್ದೇಶಕರು, ಬಂಡವಾಳ ಹೂಡಿದ ನಿರ್ಮಾಪಕರು ಮತ್ತು ಕೃತಕ ಬುದ್ದಿಮತ್ತೆಯನ್ನು ಈ ಮಾಧ್ಯಮದಲ್ಲಿ ಬಳಸುವ ತಜ್ಞರು ಮಾತ್ರ ಸೇರಿ ನಿರ್ಮಿಸಿದ ‘ಲವ್ ಯೂ’ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ. ಬಹುಶಃ ವಿಶ್ವದಲ್ಲೇ ತಯಾರಾದ ಮೊದಲ ಕೃತಕಬುದ್ಧಿ ಮತ್ತೆ ತಂತ್ರ ಜ್ಞಾನದ ಚಿತ್ರವಿದು. ಈ ತಂತ್ರಜ್ಞಾನದ ಮೂಲಕ, ನಮ್ಮನ್ನು ಅಗಲಿದ ಜನಪ್ರಿಯ ನಟನಟಿಯರು ಅಭಿನಯಿಸಿದ ಹೊಸ ಚಿತ್ರಗಳನ್ನು ನೋಡುವ ದಿನಗಳು ಬಹಳ ದೂರ ಇರಲಾರದು.
ಸಂಗೀತ ಸಂಯೋಜಕ ಅರ್ಜುನ್ ಜನ್ಯ ಹೊಸ ತಂತ್ರಜ್ಞಾನದ ಜೊತೆಗೆ ಹೆಜ್ಜೆ ಹಾಕಿದರೆ, ‘ಕೆಜಿಎಫ್’ ಮೂಲಕ ಗಮನ ಸೆಳೆದ ಇನ್ನೊಬ್ಬ ಸಂಗೀತ ಸಂಯೋಜಕ ರವಿ ಬಸರೂರು ಅವರದು ಇನ್ನೊಂದು ಸಾಹಸ. ಕನ್ನಡ ನಾಡಿನ ಜನಪದ ಕಲೆ ಯಕ್ಷಗಾನದ ಮೂಲಕ ತೆರೆಯ ಮೇಲೆ ಕಥೆ ಹೇಳುವ ಸಾಹಸ. ಅಲ್ಲಿನದೇ ವೇಷಭೂಷಣ, ಮಾತುಗಾರಿಕೆ, ಹಿನ್ನೆಲೆ ಸಂಗೀತ (ಭಾಗವತಿಕೆ) ಇತ್ಯಾದಿಗಳ ಮೂಲಕ ಜೈಮಿನಿ ಭಾರತದಲ್ಲಿ ಬರುವ ಚಂದ್ರಹಾಸನ ಕಥೆಯನ್ನು ತೆರೆಗೆ ತಂದಿದ್ದಾರೆ. ‘ವೀರಚಂದ್ರಹಾಸ’ ಚಿತ್ರದ ಹೆಸರು. ಸಿನಿಮಾ ಮೂಲಕ ಯಕ್ಷಗಾನವನ್ನು ಪರಿಚಯಿಸುವ ಉದ್ದೇಶ ಅವರದು. ಅವರ ಶಕ್ತಿ, ಮಿತಿ, ಸಾಧ್ಯತೆಗಳ ಪ್ರಯೋಗವೂ ಹೌದು.
ಇಂದು ತಾನೇನಾದರೂ ಆಗಿದ್ದರೆ ಅದಕ್ಕೆ ಮೂಲ ಕಾರಣ ಯಕ್ಷಗಾನ ಎನ್ನುವ ಅವರು, ಈ ಕಲೆಯನ್ನು ವಿಶ್ವಕ್ಕೆ ಪರಿಚಯಿಸಲು ಸಿನಿಮಾ ಉತ್ತಮ ದಾರಿ ಎಂದು ನಂಬಿದ್ದಾರೆ. ಆ ಚಿತ್ರದಲ್ಲಿ ನಟಿಸುವ ಮೂಲಕ ಅವರಿಗೆ ಒತ್ತಾಸೆಯಾಗಿ ಶಿವರಾಜ್‌ಕುಮಾರ್ ನಿಂತಿದ್ದಾರೆ. ಹೊಂಬಾಳೆ ಈ ಚಿತ್ರವನ್ನುಅರ್ಪಿಸಿದೆ. ಇಂದು ತೆರೆಗೆ ಬರಲಿರುವ ಈ ಚಿತ್ರವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕು.
ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…
ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…
ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…
ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಈ…
ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್ ಎಕ್ಸ್…
ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…