ಅಂಕಣಗಳು

ಬಜೆಟ್‌ ಆಶ್ವಾಸನೆ ಈಡೇರಿಕೆಗೆ ಆದ್ಯತೆ ಇರಲಿ

 ಪ್ರೊ.ಆರ್.ಎಂ.ಚಿಂತಾಮಣಿ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರವರು ಸರಿಯಾಗಿ ಒಂದು ತಿಂಗಳ ನಂತರ ಸಂಸತ್ತಿನಲ್ಲಿ ೨೦೨೫-೨೬ರ ಮುಂಗಡಪತ್ರ ಮಂಡನೆ ಮಾಡಲಿದ್ದಾರೆ. ಇದು ಅವರ ಏಳನೆಯ ಪೂರ್ಣಾವಧಿ ಬಜೆಟ್. ಇದೂ ಒಂದು ದಾಖಲೆ.

ಇದುವರೆಗೆ ಯಾವ ಕೇಂದ್ರ ವಿತ್ತ ಮಂತ್ರಿಯೂ ಸತತ ಏಳು ಬಾರಿ ಬಜೆಟ್ (ಪೂರ್ಣಾವಧಿ) ಮಂಡಿಸಿಲ್ಲ. ೧೯೫೦ರ ದಶಕದಲ್ಲಿ ಸಿ.ಡಿ.ದೇಶಮುಖರು ಸತತ ಆರು ಪೂರ್ಣಾವಧಿ ಬಜೆಟ್ ಮಂಡಿಸಿದ್ದರು. ಮೊರಾರ್ಜಿ ದೇಸಾಯಿ ಮತ್ತು ಪಿ.ಚಿದಂಬರಂ ತಲಾ ಎಂಟು ಬಜೆಟ್ ಗಳನ್ನು ಮಂಡಿಸಿದ್ದರೂ ಸತತವಾಗಿ ಮಂಡಿಸಿಲ್ಲ. ಬೇರೆ ಬೇರೆ ಅವಧಿಗಳಲ್ಲಿ ಮಂಡಿಸಿದ್ದಾರೆ. ದೇಸಾಯಿಯವರು ಮೊದಲ ಅವಧಿಯಲ್ಲಿ ಐದು ಬಜೆಟ್ ಗಳನ್ನು ಮಂಡಿಸಿದ್ದರೆ, ನಂತರದ ಅವಧಿಯಲ್ಲಿ ಮೂರು ಬಜೆಟ್‌ಗಳನ್ನು ಮಂಡಿಸಿದ್ದಾರೆ. ಚಿದಂಬರಂ ಒಂದು ಅವಧಿಯಲ್ಲಿ ಎರಡು, ಇನ್ನೊಂದರಲ್ಲಿ ಐದು ಮತ್ತು ಮೂರನೆಯ ಅವಧಿಯಲ್ಲಿ ಒಂದು ಬಜೆಟ್‌ಗಳನ್ನು ಮಂಡಿಸಿದ್ದಾರೆ.

ಮಹಿಳಾ ವಿತ್ತ ಸಚಿವರಾಗಿರುವವರು ಈವರೆಗೆ ಇವರೊಬ್ಬರೆ. ಆದರೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ೧೯೬೯ರಲ್ಲಿ ಮೊರಾರ್ಜಿ ದೇಸಾಯಿಯವರು ರಾಜೀನಾಮೆ ನೀಡಿದ ನಂತರ ಅರ್ಥ ಖಾತೆಯನ್ನೂ ತಾವೇ ವಹಿಸಿಕೊಂಡು ಒಂದೇ ಬಾರಿ ೧೯೭೦-೭೧ರ ಮುಂಗಡಪತ್ರವನ್ನು ಮಂಡಿಸಿದ್ದರು. ಅದೂ ಒಂದು ರೀತಿಯಲ್ಲಿ ದಾಖಲೆಯೇ.

ಈಗ ಪ್ರಸ್ತುತ ಹಣಕಾಸು ವರ್ಷಕ್ಕೆ ಬಂದರೆ ಎರಡನೇ ತ್ರೈಮಾಸಿಕದಲ್ಲಿ ರಾಷ್ಟ್ರೀಯ ಒಟ್ಟಾದಾಯ (Gross Domestic Product  ಜಿಡಿಪಿ) ಶೇ.೫.೪ ಬೆಳವಣಿಗೆಯಾಗಿದ್ದು, ಬಜೆಟ್ ಅಂದಾಜಿಗಿಂತ ತೀರಾ ಕಡಿಮೆಯಾಗಿದೆ. ಜಾಗತಿಕ ಅನಿಶ್ಚಿತತೆಗಳು ನಮ್ಮ ಜಿಡಿಪಿ ಮೇಲೆ ಪರಿಣಾಮ ಬೀರಿವೆ ಎನ್ನಬಹುದು. ಸ್ಥಳೀಯ ಪೇಟೆಗಳಲ್ಲಿ ಗ್ರಾಹಕ ಬೇಡಿಕೆಯು ಕುಸಿದಿರುವುದನ್ನು ಮರೆಯಬಾರದು. ಹಣದುಬ್ಬರ ಶೇ.೬.೨ಕ್ಕೆ ಏರಿರುವುದು ಆತಂಕಕಾರಿ. ಇವು ವಾರ್ಷಿಕ ಬೆಳವಣಿಗೆ ದರ ಮತ್ತು ಹಣದುಬ್ಬರ ದರ ಅಂದಾಜುಗಳ ಮೇಲೆ ಪರಿಣಾಮ ಬೀರಲಿವೆ. ಮೊದಲಿನ ಜಿಡಿಪಿ ಬೆಳವಣಿಗೆ ಅಂದಾಜು ಶೇ.೭.೨ನ್ನು ಇಳಿಸಿ ಈಗ ಶೇ.೬.೬ ಎಂದು ಮರು ಅಂದಾಜಿಸಲಾಗಿದೆ. ಕೋಶೀಯ ಕೊರತೆ (Fiscal Deficit) ಅಂದಾಜು ಹೆಚ್ಚಾಗಬಹುದು.

ನಾಲ್ಕು ಮಹತ್ವದ ಬಜೆಟ್ ಆಶ್ವಾಸನೆಗಳು: ಬಜೆಟ್, ಮಧ್ಯಮಾವಧಿ ಮತ್ತು ದೀರ್ಘಾವಧಿ ಆರ್ಥಿಕ ನೀತಿಗಳ ವಾರ್ಷಿಕ ದಾಖಲೆಯಾಗಿರುತ್ತದೆ. ಆದ್ದರಿಂದ ಮುಂಗಡಪತ್ರದಲ್ಲಿ ಅರ್ಥಮಂತ್ರಿಗಳು ದಾಖಲಿಸಿರುವ ಆಶ್ವಾಸನೆಗಳು ಮಹತ್ವ ಪಡೆಯುತ್ತವೆ. ಅವುಗಳ ಅನುಷ್ಠಾನ ನಂತರದ ಆರ್ಥಿಕ ನಿರ್ಧಾರಗಳಿಗೆ ಆಧಾರ ಒದಗಿಸುತ್ತವೆ. ಅರ್ಥವ್ಯವಸ್ಥೆಯ ಮುಂದಿನ ದಿನಗಳಲ್ಲಿಯ ಬೆಳವಣಿಗೆ ಚುರುಕಾಗಲು ಅನುಕೂಲವಾಗುತ್ತದೆ.

ನಿರ್ಮಲಾ ಸೀತಾರಾಮನ್‌ರವರು ಕಳೆದ ಜುಲೈನಲ್ಲಿ ಹೊಸ ಸರ್ಕಾರದ ಮೊದಲನೆಯ ಮುಂಗಡಪತ್ರ ಮಂಡಿಸುವಾಗ ನಾಲ್ಕು ಆಶ್ವಾಸನೆಗಳನ್ನು ಮುಂದಿಟ್ಟಿದ್ದರು. ಮೊದಲನೆಯ ಮಹತ್ವದ ಭರವಸೆ ಎಂದರೆ ಕೇಂದ್ರದ ಕೋಶೀಯ ಶಿಸ್ತು ಪಾಲನೆಯ ((Fiscal Consolidation) ಭಾಗವಾಗಿ ೨೦೨೫-೨೬ರ ಹೊತ್ತಿಗೆ ಬಜೆಟ್ ಕೋಶೀಯ ಕೊರತೆಯನ್ನು ಶೇ.೪.೫ಕ್ಕಿಂತ ಕಡಿಮೆ ಮಟ್ಟಕ್ಕೆ ತರಲಾಗುವುದು (ಜಿಡಿಪಿಯ) ಅಂದರೆ ಅದು ಶೇ.೪.೪ ಅಥವಾ ಶೇ.೪.೩ ಅಥವಾ ಶೇ.೪.೨ ಆಗಬಹುದು. ಅಂದರೆ ಅವರೇ ಹೇಳುವಂತೆ ಈ ವರ್ಷದ ಬಜೆಟ್‌ನಲ್ಲಿಯ ಅಂದಾಜಿನಂತೆ ಶೇ.೫.೧ರಿಂದ ಶೇ.೦.೯ರಷ್ಟನ್ನು ಈ ಎರಡು ವರ್ಷಗಳಲ್ಲಿ (ಒಂದು ವರ್ಷ ಒಂಬತ್ತು ತಿಂಗಳುಗಳಷ್ಟೇ ಅಂದು ಉಳಿದಿದ್ದು) ಕಡಿಮೆ ಮಾಡುವುದು. ಇದು ಸಾಧ್ಯವೇ?

ಸರ್ಕಾರ ಈ ವರ್ಷದ ಅರ್ಧ ವಾರ್ಷಿಕ ವರದಿಯಲ್ಲಿ (ಹಿಂದಿನ ವಾರದಲ್ಲಿ ಪ್ರಕಟಿಸಿದ) ಹೇಳುವಂತೆ ಅಂತಾರಾಷ್ಟ್ರೀಯ ರಾಜಕೀಯ ಭೌಗೋಳಿಕ ಅನಿಶ್ಚಿತತೆಗಳು ಹೆಚ್ಚಾಗುವುದರಿಂದ ನಮ್ಮ ಬಜೆಟ್ ಅಂದಾಜುಗಳಲ್ಲಿ ವ್ಯತ್ಯಾಸಗಳಾಗಬಹುದು. ಅದಕ್ಕಾಗಿ ಸರ್ಕಾರದ ವೆಚ್ಚ ನೀತಿಗಳ ಬದಲಾವಣೆ ಅನಿವಾರ್ಯವಾಗಬಹುದು ಎನ್ನಲಾಗಿದೆ. ಈಗ ಕೋಶೀಯ ಕೊರತೆಯ ಮಟ್ಟವನ್ನು ಬದಲಾಯಿಸಿ ೨೦೦೩ರ ಕೋಶೀಯ ಶಿಸ್ತು ಮತ್ತು ಬಜೆಟ್ ನಿರ್ವಹಣೆಯ ಕಾಯ್ದೆಯ ಕೋಶೀಯ ಕೊರತೆಯನ್ನು ಶೇ.೩.೦ ಮಿತಿಗೆ ತರುವುದು ಇನ್ನಷ್ಟು ತಡವಾಗಬಹುದು. ಆದರೂ ಅರ್ಥ ಮಂತ್ರಿಗಳು ಮುಂದಿನ ಬಜೆಟ್‌ನಲ್ಲಿ ಈ ದಿಕ್ಕಿನಲ್ಲಿ ಗಟ್ಟಿ ಹೆಜ್ಜೆ ಇಡಬೇಕು ಎನ್ನುವುದು ತಜ್ಞರ ಅಭಿಪ್ರಾಯ. ಈ ವರ್ಷ ಕೇಂದ್ರ ಸರ್ಕಾರದ ಒಟ್ಟು ಸಾಲವು ಜಿಡಿಪಿಯ ಶೇ.೫೬.೮ರಷ್ಟಿದೆ. ಅದನ್ನು ಶೇ.೪೦ರ ಮಟ್ಟಿಗೆ ತರುವುದು ಅವಶ್ಯ.

ಎರಡನೇ ಆಶ್ವಾಸನೆ ಕೇಂದ್ರದ ಕಸ್ಟಮ್ಸ್ ಸುಂಕದಲ್ಲಿ ಸುಧಾರಣೆ ತರುವುದಕ್ಕೆ ಸಂಬಂಧಿಸಿದ್ದು. ನಮ್ಮ ವಿದೇಶ ವ್ಯಾಪಾರ ತೀವ್ರಗತಿಯಲ್ಲಿ ಬೆಳೆಯಬೇಕಾದರೆ ಕಸ್ಟಮ್ಸ್ ಸುಂಕ ವ್ಯವಸ್ಥೆ ಸರಳ ಮತ್ತು ವ್ಯವಹಾರಸ್ಥರ ಸ್ನೇಹಿಯಾಗಿರಬೇಕು. ಅರ್ಥ ಮಂತ್ರಿಗಳು ಬಜೆಟ್‌ನಲ್ಲಿ ಹೇಳುವಂತೆ ಆಮದು ಮತ್ತು ನಿರ್ಯಾತ ಸುಂಕ ವ್ಯವಸ್ಥೆಯನ್ನು ಸರಳಗೊಳಿಸಲಾಗುವುದು ತೆರಿಗೆ ವ್ಯಾಜ್ಯಗಳಿಗೆ ಕಾರಣವಾಗಬಾರದು. ಒಂದು ಉತ್ಪನ್ನದ ವಿವಿಧ ಹಂತಗಳ ರೂಪಗಳಿಗೆ ಹಲವು ತೆರಿಗೆ ದರಗಳಿರಬಾರದು. ನಮ್ಮ ಉತ್ಪಾದನಾ ಉದ್ಯಮಗಳಿಗೆ ಬೇಕಾಗುವ ಮೆಷಿನರಿಗಳು ಮತ್ತು ತಂತ್ರಜ್ಞಾನ ಆಯಾತ ವೆಚ್ಚ ಕಡಿಮೆಯಾಗುವಂತೆ ಕಸ್ಟಮ್ಸ್ ಸುಂಕವಿರಬೇಕು. ಈ ದಿಕ್ಕಿನಲ್ಲಿ ಕಸ್ಟಮ್ಸ್ ಸುಂಕದಲ್ಲಿ ತುರ್ತು ಸುಧಾರಣೆ ಬೇಕಿದೆ.

ಮೂರನೇ ಆಸ್ವಾಸನೆ ಆದಾಯ ತೆರಿಗೆಗೆ ಸಂಬಂಧಿಸಿದ್ದು. ಕಾರ್ಪೊರೇಟ್ ತೆರಿಗೆ ಮತ್ತು ವ್ಯಕ್ತಿಗಳ ಆದಾಯ ತೆರಿಗೆ ಕಾಯ್ದೆಯಲ್ಲಿ ಇನ್ನೂ ಸುಧಾರಣೆ ಬೇಕಾಗಿದೆ ಎಂಬುದನ್ನು ಅರ್ಥ ಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಆದಾಯ ತೆರಿಗೆ ಕಾಯ್ದೆ ಇನ್ನೂ ಸರಳಗೊಳ್ಳಬೇಕಾಗಿದೆ. ವ್ಯಾಜ್ಯಗಳಿಗೆ ಅವಕಾಶವಿಲ್ಲದಂತೆ ತೆರಿಗೆ ಸಂಗ್ರಹದ ಖಚಿತತೆಯೂ ಅವಶ್ಯವಿದೆ. ತೆರಿಗೆದಾರರಿಗೆ ಅರ್ಥ ವಾಗುವಂತೆ ಕಾಯ್ದೆಯ ಭಾಷೆ ಸರಳ ಮತ್ತು ನಿಖರ ಶಬ್ದಗಳಲ್ಲಿರಬೇಕು. ಈ ಕೆಲಸವನ್ನು ಸಚಿವರು ಆದಷ್ಟು ಬೇಗನೆ ಮಾಡಬೇಕು.

ಕಡೆಯವಾಗಿ ಅರ್ಥಮಂತ್ರಿಗಳು ವಿಶೇಷವಾಗಿ ಆರ್ಥಿಕ ನೀತಿ ವ್ಯವಸ್ಥೆ (Economic Policy Framework) ರೂಪಿಸುವುದಾಗಿ ಹೇಳಿದ್ದರು. ಅದರ ರೂಪರೇಷೆ ಮತ್ತು ವ್ಯಾಪ್ತಿಯ ಬಗ್ಗೆಯೂ ಪ್ರಸ್ತಾಪಿಸಿದ್ದರು. ಆರ್ಥಿಕ ಅಭಿವೃದ್ಧಿಯ ದಿಕ್ಕು ಮತ್ತು ಹಣಕಾಸು ಸುಧಾರಣೆಗಳ ಬಗ್ಗೆಯೂ ಅದು ತೀರ್ಮಾನಿಸುತ್ತದೆ ಎಂದು ರಾಜ್ಯ ಸರ್ಕಾರಗಳೊಡನೆ ಸಹಮತವಿರುತ್ತದೆ ಎಂದೂ ಹೇಳಲಾಗಿತ್ತು. ಅದರ ಸುಳಿವು ಈವರೆಗೆ ಸಿಕ್ಕಿಲ್ಲ. ಕೂಡಲೇ ಕ್ರಮಗಳು ಬೇಕು.

ಈ ಎಲ್ಲ ಪ್ರಸ್ತಾವನೆಗಳು ಅನುಷ್ಠಾನಕ್ಕೆ ಬಂದರೆ ದೇಶದಲ್ಲಿ ಆರ್ಥಿಕ ಚಟುವಟಿಕೆಗಳು ತೀವ್ರಗೊಂಡು ಉದ್ಯೋಗಾವಕಾಶಗಳು ಹೆಚ್ಚುತ್ತವಲ್ಲದೆ ಉತ್ಪಾದಕತೆಯೂ ((Productivity) ಹೆಚ್ಚಾಗುತ್ತದೆ. ನಂತರದ ಬಜೆಟ್ ಗಳ ಮಂಡನೆಗೆ ಮೊದಲೇ ಹಿಂದಿನ ಬಜೆಟ್ ಪ್ರಸ್ತಾವನೆಗಳೆಲ್ಲ ಅನುಷ್ಠಾನಕ್ಕೆ ಬರಬೇಕು. ದೀರ್ಘಾವಧಿ ಪರಿಣಾಮವಿರುವ ಪ್ರಸ್ತಾವನೆಗಳನ್ನು ಹಂತ ಹಂತವಾಗಿಯಾದರೂ ಅನುಷ್ಠಾನಗೊಳಿಸಬೇಕು.

ಬಜೆಟ್, ಮಧ್ಯಮಾವಧಿ ಮತ್ತು ದೀರ್ಘಾವಧಿ ಆರ್ಥಿಕ ನೀತಿಗಳ ವಾರ್ಷಿಕ ದಾಖಲೆಯಾಗಿರುತ್ತದೆ. ಆದ್ದರಿಂದ ಮುಂಗಡಪತ್ರದಲ್ಲಿ ಅರ್ಥಮಂತ್ರಿಗಳು ದಾಖಲಿಸಿರುವ ಆಶ್ವಾಸನೆಗಳು ಮಹತ್ವ ಪಡೆಯುತ್ತವೆ. ಅವುಗಳ ಅನುಷ್ಠಾನ ನಂತರದ ಆರ್ಥಿಕ ನಿರ್ಧಾರಗಳಿಗೆ ಆಧಾರ ಒದಗಿಸುತ್ತವೆ. ಅರ್ಥವ್ಯವಸ್ಥೆಯ ಮುಂದಿನ ದಿನಗಳಲ್ಲಿಯ ಬೆಳವಣಿಗೆ ಚುರುಕಾಗಲು ಅನುಕೂಲವಾಗುತ್ತದೆ

ಆಂದೋಲನ ಡೆಸ್ಕ್

Recent Posts

ಪೌತಿ ಖಾತಾ ಅರ್ಜಿ ಶೀಘ್ರ ವಿಲೇವಾರಿ ಮಾಡಿ : ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಸೂಚನೆ

ಮಂಡ್ಯ : ಪೌತಿ ಖಾತಾ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಮುಂದಿನ ಆರು ತಿಂಗಳುಗಳೊಳಗೆ ಪೌತಿ ಖಾತಾ ಆಂದೋಲನದಲ್ಲಿ ಯಾವುದೇ…

5 hours ago

ಜಿ-ರಾಮ್‌ಜಿ ವಾಪಸ್‌ ಪಡೆಯಿರಿ : ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ

ಬೆಂಗಳೂರು : ಉದ್ಯೋಗ ಖಾತರಿಯನ್ನು ಇಲ್ಲವಾಗಿಸುವ ಮತ್ತು ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವ್ಯತಿರಿಕ್ತವಾಗಿರುವ ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು…

6 hours ago

ಹಣ ಅಕ್ರಮ ವರ್ಗಾವಣೆ ಪ್ರಕರಣ : ಕಾಂಗ್ರೆಸ್‌ ಶಾಸಕ ವೀರೇಂದ್ರಗೆ ಜಾಮೀನು

ಬೆಂಗಳೂರು : ಜಾರಿ ನಿರ್ದೇಶನಾಲಯ(ಇ.ಡಿ) ದಾಖಲಿಸಿದ್ದ ಕ್ರಿಮಿನಲ್‌ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಕಾಂಗ್ರೆಸ್‌ ಶಾಸಕ ಕೆ.ಸಿ.ವೀರೇಂದ್ರ ಅವರಿಗೆ ಬಿಗ್‌ ರಿಲೀಫ್‌…

7 hours ago

ಮೈಸೂರಿನಲ್ಲಿ ಪತ್ರಕರ್ತರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ : ಜಿಲ್ಲಾಧಿಕಾರಿ ಮೆಚ್ಚುಗೆ

ಮೈಸೂರು : ಬೇರೆ ಜಿಲ್ಲೆಗಳಿಗೆ ಹೋಲಿಸಿಕೊಂಡರೆ ಮೈಸೂರಿನ ಪತ್ರಿಕೋದ್ಯಮ ಗುಣಮಟ್ಟದಿಂದ ಕೂಡಿದ್ದು, ಇಲ್ಲಿನ ಪತ್ರಕರ್ತರು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು…

8 hours ago

ಕೈಗಾರಿಕೆ ಸ್ಥಾಪನೆಗೆ ಅರ್ಜಿ ಬಂದರೆ ಸಂಪೂರ್ಣ ಬೆಂಬಲ: ಸಚಿವ ಚಲುವರಾಯಸ್ವಾಮಿ ಭರವಸೆ

ಮಂಡ್ಯ : ಕೇಂದ್ರ ಬೃಹತ್ ಉಕ್ಕು ಮತ್ತು ಕೈಗಾರಿಕಾ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಯಾವುದಾದರೂ ಕಂಪನಿಗಳಿಂದ ಕೈಗಾರಿಕೆ ಸ್ಥಾಪನೆಗೆ…

9 hours ago

ಜ.1ರಂದು ಚಾ.ಬೆಟ್ಟಕ್ಕೆ ಹೆಚ್ಚಿನ ಜನ ನಿರೀಕ್ಷೆ : ಅಗತ್ಯ ವ್ಯವಸ್ಥೆಗೆ ಜಿಲ್ಲಾಧಿಕಾರಿ ಸೂಚನೆ

ಮೈಸೂರು : ಹೊಸ ವರ್ಷ ಜನವರಿ 1ರಂದು ಚಾಮುಂಡಿ ಬೆಟ್ಟಕ್ಕೆ ಹೆಚ್ವಿನ ಭಕ್ತಾಧಿಗಳು ಆಗಮಿಸುವ ನಿರೀಕ್ಷೆ ಇದ್ದು, ಅಗತ್ಯ ವ್ಯವಸ್ಥೆಗಳನ್ನು…

9 hours ago