ಅಂಕಣಗಳು

ಅಧಿಕಾರ ಹಂಚಿಕೆ; ‘ಕೈ’ ಪಾಳೆಯದಲ್ಲಿ ಮುಂದುವರಿದ ಗೊಂದಲ

ಬೆಂಗಳೂರು ಡೈರಿ 

ರಾಜ್ಯ ಕಾಂಗ್ರೆಸ್ ಪಾಳೆಯವನ್ನು ಹೊಕ್ಕು ನೋಡಿದರೆ ಜನಪ್ರಿಯ ಗಾದೆಯೊಂದು ನೆನಪಿಗೆ ಬರುತ್ತದೆ. ಮಳೆ ನಿಂತರೂ, ಮಳೆ ಹನಿ ನಿಲ್ಲುವುದಿಲ್ಲ ಎಂಬುದು ಈ ಗಾದೆ. ಕಳೆದೆರಡು ವರ್ಷಗಳಿಂದ ಕೇಳಿ ಬರುತ್ತಿದ್ದ ಅಧಿಕಾರ ಹಂಚಿಕೆಯ ಮಾತಿಗೆ ಸಿಎಂ ಸಿದ್ದರಾಮಯ್ಯ ದಿಲ್ಲಿಯಲ್ಲೇ ಬ್ರೇಕ್ ಹಾಕಿ ಬಂದರಲ್ಲ. ಇದಾದ ನಂತರವೂ ಕಾಂಗ್ರೆಸ್ ಪಾಳೆಯದಲ್ಲಿ ಗೊಂದಲ ಮುಂದುವರಿದೇ ಇದೆ.

ಅಧಿಕಾರ ಹಂಚಿಕೆಯ ಮಾತಿಗೆ ದಿಲ್ಲಿಯಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು ಮುಂದಿನ ಐದು ವರ್ಷಗಳ ಕಾಲ ನಾನೇ ಸಿಎಂ ಎಂದಿದ್ದಲ್ಲದೆ, ಅಧಿಕಾರ ಹಂಚಿಕೆಯ ಯಾವುದೇ ಒಪ್ಪಂದ ಆಗಿಯೇ ಇಲ್ಲ ಎನ್ನುವ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಬಣ ತಬ್ಬಿಬ್ಬಾಗುವಂತೆ ಮಾಡಿದರು. ಹೀಗೆ ಅವರು ಅಧಿಕಾರ ಹಂಚಿಕೆಯ ಒಪ್ಪಂದವೇ ಆಗಿಲ್ಲ ಎಂದಾಗ, ಹೈಕಮಾಂಡ್ ಪ್ರಮುಖರು ಅದನ್ನು ನಿರಾಕರಿಸಿದ್ದರೆ, ಮುಖ್ಯಮಂತ್ರಿ ಹುದ್ದೆ ಮೊದಲ ಎರಡೂವರೆ ವರ್ಷಗಳ ಕಾಲ ಸಿದ್ದರಾಮಯ್ಯ ಅವರಿಗೆ, ನಂತರದ ಎರಡೂವರೆ ವರ್ಷಗಳ ಕಾಲ ಡಿಕೆಶಿ ಮುಖ್ಯಮಂತ್ರಿಯಾಗ ಬೇಕು ಎಂಬ ಒಪ್ಪಂದವಾಗಿದೆ ಎಂದಿದ್ದರೆ ಆಟ ಬೇರೆ ರೀತಿಯೇ ಇರುತ್ತಿತ್ತು.

ಅಧಿಕಾರ ಹಂಚಿಕೆ ಒಪ್ಪಂದವೇ ಆಗಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿ ಹಲವು ದಿನಗಳೇ ಕಳೆದಿವೆ. ಆದರೆ ಇದುವರೆಗೆ ರಾಹುಲ್ ಗಾಂಧಿ ಅವರಿಂದ ಹಿಡಿದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ತನಕ ಯಾರೊಬ್ಬರೂ ಈ ಮಾತನ್ನು ನಿರಾಕರಿಸಿಲ್ಲ.

ಇದರರ್ಥ ೨೦೨೩ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಸಿಎಂ ಹುದ್ದೆಗೆ ಸಂಬಂಧಿಸಿದಂತೆ ಒಂದು ಒಪ್ಪಂದ ಅಂತ ಆಗಿಲ್ಲ. ಹಾಗೊಂದು ವೇಳೆ ಒಪ್ಪಂದವಾಗಿದ್ದು ನಿಜವೇ ಆಗಿದ್ದರೆ ಅದನ್ನು ನಿರಾಕರಿಸುವುದು ಸಿದ್ದರಾಮಯ್ಯ ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ ಕುತೂಹಲ ಕಾಡುವುದು ಅಧಿಕಾರ ಹಂಚಿಕೆಯ ಬಗ್ಗೆ ಒಂದು ಸ್ಪಷ್ಟ ಒಪ್ಪಂದ ಆಗಿಯೇ ಇಲ್ಲದಿದ್ದರೂ ಡಿ.ಕೆ.ಶಿವಕುಮಾರ್ ಅವರೇಕೆ ಅದನ್ನು ಜಗ್ಗಾಡುತ್ತಾ ಬಂದರು? ಮತ್ತು ಅವರ ಬೆಂಬಲಿಗರೇಕೆ ಪದೇ ಪದೇ ರಣೋತ್ಸಾಹ ತೋರಿಸುತ್ತಲೇ ಬಂದರು? ಈ ಮಾತಿಗೆ ಉತ್ತರ ಹುಡುಕಲು ಹೋದರೆ ಒಂದು ಸಾಧ್ಯತೆ ಕಣ್ಣಿಗೆ ಕಾಣುತ್ತದೆ. ಅದೆಂದರೆ,ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರಿಬ್ಬರೂ ಪಟ್ಟು ಹಿಡಿದು ಕುಳಿತಿದ್ದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರೇ ನಂಬರ್ ಒನ್ ಜನನಾಯಕ ಎಂಬುದನ್ನು ಮನವರಿಕೆ ಮಾಡಿಕೊಂಡಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಅಂತಿಮವಾಗಿ ಸಿದ್ದರಾಮಯ್ಯ ಅವರ ನೆತ್ತಿಯ ಮೇಲೆ ಕಿರೀಟ ಇಡಲು ತೀರ್ಮಾನಿಸಿದರು.

ಆದರೆ ಇಂತಹ ತೀರ್ಮಾನ ಮಾಡುವ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ದೂರ ತಳ್ಳಲು ಸಾಧ್ಯವಿಲ್ಲವಲ್ಲ ಏಕೆಂದರೆ ಹಲವು ವರ್ಷಗಳಿಂದ ಹೈಕಮಾಂಡ್ ಪಾಲಿಗೆ ಡಿಕೆಶಿ ಒಂದು ಶಕ್ತಿಯಾಗಿ ಕೆಲಸ ಮಾಡಿದ್ದಾರೆ. ಇದೇ ಕಾರಣಕ್ಕಾಗಿ ತಿಹಾರ್ ಜೈಲಿಗೂ ಹೋಗಿ ಬಂದಿದ್ದಾರೆ. ಅವರು ಜೈಲಿಗೆ ಹೋದ ನೆಪ ಏನೇ ಇರಲಿ, ಆದರೆ ಅವತ್ತು ರಾಜ್ಯಸಭಾ ಚುನಾವಣೆಯಲ್ಲಿ ಅಮಿತ್ ಶಾ ಆಪ್ತ ಅಭ್ಯರ್ಥಿಯ ವಿರುದ್ಧ ಸೋನಿಯಾ ಆಪ್ತ ಅಹ್ಮದ್ ಪಟೇಲ್ ಅವರನ್ನು ಗೆಲ್ಲಿಸಲು ಡಿಕೆಶಿ ಶ್ರಮಿಸಿದ್ದು ನಿಜ. ಮತ್ತು ಅದರಲ್ಲಿ ಅವರು ಯಶಸ್ವಿಯಾಗಿದ್ದೂ ನಿಜ. ಪರಿಣಾಮ ಡಿಕೆಶಿ ಇನ್ಯಾವುದೋ ನೆಪದಲ್ಲಿ ಜೈಲು ಸೇರಬೇಕಾಯಿತು. ಹೀಗೆ ಅವರು ಜೈಲು ಸೇರಿದ ಸಂದರ್ಭದಲ್ಲಿ ಅವರನ್ನು ನೋಡಲು ಜೈಲಿಗೆ ಹೋಗಿದ್ದ ಸೋನಿಯಾ ಗಾಂಧಿ ಅವರು ನಿಮ್ಮ ಜತೆ ನಾವಿದ್ದೇವೆ. ಹೋಗಿ ಕರ್ನಾಟಕದಲ್ಲಿ ಪಕ್ಷ ಕಟ್ಟಿ. ಉಳಿದಿದ್ದನ್ನು ನಮಗೆ ಬಿಡಿ ಎಂದು ಹೇಳಿದ್ದರು.

ಮುಂದೆ ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಅವರ ಪರ ವಾಲಿಕೊಳ್ಳುವ ಸಂದರ್ಭ ಬಂದಾಗಲೂ ಸೋನಿಯಾ ಗಾಂಧಿ ಅವರು ಡಿಕೆಶಿ ಅವರನ್ನು ಸಮಾಧಾನಿಸಿದ್ದಾರೆ. ಸೂಕ್ತ ಸಂದರ್ಭದಲ್ಲಿ ನಿಮ್ಮ ಹಿತ ಕಾಯುವ ಜವಾಬ್ದಾರಿ ನನ್ನದು ಎಂದಿದ್ದಾರೆ.

ಅವರು ಕೊಟ್ಟ ಈ ವಚನವೇ ಡಿಕೆಶಿ ಪಾಲಿನ ಏಕೈಕ ಭರವಸೆ. ಇದೇ ರೀತಿ ಅಧಿಕಾರ ಹಂಚಿಕೆಯ ಮಾತು ಕರ್ನಾಟಕದಲ್ಲಿ ಪದೇ ಪದೇ ತಮ್ಮ ಮತ್ತು ಸಿದ್ದರಾಮಯ್ಯ ಅವರ ಬೆಂಬಲಿಗರ ನಡುವೆ ಸಂಘರ್ಷಕ್ಕೆ ಕಾರಣವಾದಾಗ ಡಿಕೆಶಿ ಅವರು ಸಿದ್ದರಾಮಯ್ಯ ಆಪ್ತರ ಬಾಯಿಗೆ ಬೀಗ ಹಾಕಿಸಿದ್ದಾರೆ. ಅಂದರೆ ಅಧಿಕಾರ ಹಂಚಿಕೆಯ ಒಪ್ಪಂದವೇ ಆಗಿಲ್ಲ, ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಮಾತನಾಡಿದವರಿಗೆ ವರಿಷ್ಠರಿಂದಲೇ ಎಚ್ಚರಿಕೆ ಕೊಡಿಸಿದ್ದಾರೆ. ಆದರೆ ಯಾವಾಗ ಈ ಮಾತು ಮೆಗಾ ಷೋ ಆಗಿ ಪರಿವರ್ತನೆಯಾಗುತ್ತಿದೆ ಎಂಬ ಮಾಹಿತಿ ಸಿದ್ದರಾಮಯ್ಯ ಅವರಿಗೆ ಸಿಕ್ಕಿತೋ ಆನಂತರ ಅವರು ನೇರವಾಗಿ ದಿಲ್ಲಿಗೆ ಹೋಗಿ ಅಲ್ಲಿಂದಲೇ ಪಕ್ಷದ ವರಿಷ್ಠರಿಗೆ, ಡಿಕೆಶಿ ಅವರಿಗೆ ಪಂಥಾಹ್ವಾನ ನೀಡಿದ್ದಾರೆ.

ಹೀಗೆ ಅವರು ಪಂಥಾಹ್ವಾನ ನೀಡಿದ್ದಾರೆ ಎಂಬುದರ ಅರ್ಥ ಹೈಕಮಾಂಡ್ ಬಯಸಿದರೂ,ಇನ್ನು ಅಧಿಕಾರ ಹಂಚಿಕೆಯ ಮಾತು ಸರಳವಾಗಿ ಬಗೆ ಹರಿಯುವುದಿಲ್ಲ. ಏಕೆಂದರೆ ಹೈಕಮಾಂಡ್ ಅಂತಹತೀರ್ಮಾನಕ್ಕೇನಾದರೂ ಬಂದರೆ ಸಿದ್ದರಾಮಯ್ಯ ನಿಶ್ಚಿತವಾಗಿ ತಿರುಗೇಟು ನೀಡಲಿದ್ದಾರೆ.

ಹೀಗಾಗಿ ಕಾಂಗ್ರೆಸ್ ವರಿಷ್ಠರು ಸದ್ಯದ ಸ್ಥಿತಿಯಲ್ಲಿ ಮೌನವಾಗಿ ಸಿದ್ದರಾಮಯ್ಯ ಅವರ ನಾಯಕತ್ವ ಮುಂದುವರಿಕೆಗೆ ಅವಕಾಶ ಕೊಡಬೇಕು, ಒಂದು ವೇಳೆ ಅವರು ಈ ಲೆಕ್ಕಾಚಾರಕ್ಕೆ ಹೊರತಾಗಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ, ಡಿಕೆಶಿಗೆ ಪಟ್ಟ ಕಟ್ಟುವ ನಿರ್ಧಾರಕ್ಕೆ ಬಂದರೆ ಗಂಡಾಂತರ ಎದುರಿಸಲು ಸಜ್ಜಾಗಬೇಕು. ಅಂದ ಹಾಗೆ ಇದು ಕೂಡ ಅಷ್ಟು ಸರಳವಲ್ಲ,ನೇರವಾಗಿ ಹೇಳಬೇಕೆಂದರೆ ಕರ್ನಾಟಕದ ನೆಲೆಯಲ್ಲಿ ಮುಖ್ಯಮಂತ್ರಿಗಳಾದವರನ್ನು ಕಾಂಗ್ರೆಸ್ ಹೈಕಮಾಂಡ್ ಯಾವಾಗ ಬಲವಂತವಾಗಿ ಪದಚ್ಯುತಗೊಳಿಸಿದೆಯೋ ಆಗೆಲ್ಲ ಹೀನಾಯವಾಗಿ ಸೋಲು ಅನುಭವಿಸಿದೆ.

೧೯೮೦ ರಲ್ಲಿ ದೇವರಾಜ ಅರಸರನ್ನು ಇಂದಿರಾ ಗಾಂಧಿ ಬಲವಂತವಾಗಿ ಕೆಳಗಿಳಿಸಿದ ನಂತರ ೧೯೮೩ರಲ್ಲಿ ನಡೆದ ಚುನಾವಣೆಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಅನುಭವಿಸಿತು. ಇದೇ ರೀತಿ ೧೯೯೦ರಲ್ಲಿ ವೀರೇಂದ್ರಪಾಟೀಲರನ್ನು ಕೆಳಗಿಳಿಸಿದ ಮತ್ತು ೧೯೯೨ರಲ್ಲಿ ಬಂಗಾರಪ್ಪ ಅವರನ್ನು ಪದಚ್ಯುತಗೊಳಿಸಿದ ರೀತಿ ಅದಕ್ಕೆ ಯಾವತ್ತೂ ಮರೆಯಲಾಗದ ಪಾಠ ಕಲಿಸಿತು.

ಅಂದ ಹಾಗೆ ದೇವರಾಜ ಅರಸು, ವೀರೇಂದ್ರ ಪಾಟೀಲ್ ಮತ್ತು ಬಂಗಾರಪ್ಪ ಅವರನ್ನು ಬಲವಂತವಾಗಿ ಕೆಳಗಿಳಿಸಿದ ಕಾಲಘಟ್ಟದಲ್ಲಿ ಕಾಂಗ್ರೆಸ್ ಹೈಕಮಾಂಡ್‌ಗೆ ಎರಡು ಅನುಕೂಲಗಳಿದ್ದವು. ಮೊದಲನೆಯದಾಗಿ,ಅಹಿಂದ ವರ್ಗಗಳು ರಾಜಕೀಯವಾಗಿ ಸಂಘಟಿತವಾಗಿರಲಿಲ್ಲ. ಎರಡನೆಯದಾಗಿ ಹೀಗೆ ಮುಖ್ಯಮಂತ್ರಿಗಳನ್ನು ಕೆಳಗಿಳಿಸಿದಾಗ ಎದುರಾಗಬಹುದಾದ ರಿಸ್ಕ್ ಅನ್ನು ಎದುರಿಸಲು ಕಾಂಗ್ರೆಸ್ ಹೈಕಮಾಂಡ್‌ಗೆ ಸಾಧ್ಯವಿತ್ತು.ಅರ್ಥಾತ್,ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಆಗ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಿತ್ತು.

ಹೀಗಾಗಿ ಅವತ್ತು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ತಕ್ಷಣದ ಪರಿಣಾಮವಾಗಲಿಲ್ಲ.ಆದರೆ ಈಗ ಹಾಗಲ್ಲ, ಮೊದಲನೆಯದಾಗಿ ಸಿದ್ದರಾಮಯ್ಯ ಅವರು ನಾಡಿನ ಅಹಿಂದ ವರ್ಗಗಳ ಮತ ಬ್ಯಾಂಕ್ ಮೇಲೆ ನಿರ್ಣಾಯಕ ಹಿಡಿತ ಹೊಂದಿದ್ದಾರೆ ಮತ್ತು ಅಹಿಂದ ವರ್ಗಗಳ ರಾಜಕೀಯ ಪ್ರಜ್ಞೆಯೂ ಈಗ ಬಲಿಷ್ಠವಾಗಿದೆ. ಎರಡನೆಯದಾಗಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರನ್ನು ಬದಲಿಸುವ ರಿಸ್ಕು ತೆಗೆದುಕೊಂಡರೆ ಕಾಂಗ್ರೆಸ್ ಹೈಕಮಾಂಡ್‌ಗೆ ಅಪಾಯ ಜಾಸ್ತಿ. ಏಕೆಂದರೆ,ಸರ್ಕಾರ ಹೋದರೆ ಹೋಗಲಿ ಎಂಬ ಹಠದಿಂದ ಹೆಜ್ಜೆ ಇಡುವ ಸ್ಥಿತಿಯಲ್ಲಿ ಅದಿಲ್ಲ.

ಇವತ್ತು ಹಿಮಾಚಲ ಪ್ರದೇಶ, ತೆಲಂಗಾಣದಂತಹ ಕೆಲ ರಾಜ್ಯಗಳಲ್ಲಿ ಅದು ಅಧಿಕಾರದಲ್ಲಿದೆಯಾದರೂ ಆ ಯಾವ ರಾಜ್ಯಗಳೂ ಕರ್ನಾಟಕದಷ್ಟು ಬಲ ತುಂಬುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಸರ್ಕಾರ ಹೋದರೆ ಹೋಗಲಿ ಎಂಬ ಹಠದಲ್ಲಿ ಅದು ಸಿದ್ದರಾಮಯ್ಯ ಅವರನ್ನು ಬದಲಿಸಲು ಮುಂದಾಗುವುದು ಕಷ್ಟ. ಒಂದು ವೇಳೆ ಅದು ಬಲವಂತವಾಗಿ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಪ್ರಯತ್ನ ಮಾಡಿದರೆ,ಅನುಮಾನವೇ ಬೇಡ,ಮುಂದಿನ ಚುನಾವಣೆಯಲ್ಲಿ ಒಕ್ಕಲಿಗ-ಲಿಂಗಾಯತರನ್ನು ಮೂಲಶಕ್ತಿಯಾಗಿ ಇರಿಸಿಕೊಂಡ ಬಿಜೆಪಿ-ಜಾ.ದಳ ಮೈತ್ರಿಕೂಟ ನಿರಾಯಾಸವಾಗಿ ಬಹುಮತ ಪಡೆಯುತ್ತದೆ.

ಹೀಗಾಗಿ ಅದು ಡಿಕೆಶಿ ವಿಷಯದಲ್ಲಿ ಎಷ್ಟೇ ವಿಶ್ವಾಸವಿದ್ದರೂ ಸಿದ್ದರಾಮಯ್ಯ ಅವರ ನಾಯಕತ್ವವನ್ನು ಮೌನವಾಗಿ ಒಪ್ಪಿಕೊಂಡು ಹೋಗುವ ಸ್ಥಿತಿ ಇದ್ದೇ ಇದೆ. ಆದರೆ ಕುತೂಹಲದ ಸಂಗತಿ ಎಂದರೆ, ಸಿದ್ದರಾಮಯ್ಯ ಅವರ ಶಕ್ತಿ,ಕಾಂಗ್ರೆಸ್ ವರಿಷ್ಠರ ಅಸಹಾಯಕತೆ ಗೊತ್ತಿದ್ದರೂ ಡಿಕೆಶಿ ಬಣ ಮಾತ್ರ: ನೋಡುತ್ತಿರಿ, ಅಧಿಕಾರ ಹಂಚಿಕೆ ಕಾರ್ಯ ಸುಸೂತ್ರವಾಗಿ ನಡೆಯಲಿದೆ ಎನ್ನುತ್ತಿದೆ. ಹೀಗಾಗಿ ಮಳೆ ಬಂದರೂ ಮಳೆ ಹನಿ ನಿಲ್ಲುವುದಿಲ್ಲ ಎಂಬ ಮಾತು ಕೈ ಪಾಳೆಯದಲ್ಲಿ ನಿರಂತರವಾಗಿ ಅನುರಣಿಸುತ್ತಲೇ ಇದೆ.

” ಕರ್ನಾಟಕದ ನೆಲೆಯಲ್ಲಿ ಮುಖ್ಯಮಂತ್ರಿಗಳಾದವರನ್ನು ಕಾಂಗ್ರೆಸ್ ಹೈಕಮಾಂಡ್ ಯಾವಾಗ ಬಲವಂತವಾಗಿ ಪದಚ್ಯುತಗೊಳಿಸಿದೆಯೋ ಆಗೆಲ್ಲ ಹೀನಾಯವಾಗಿ ಸೋಲು ಅನುಭವಿಸಿದೆ.”

ಆರ್.ಟಿ.ವಿಠ್ಠಲಮೂರ್ತಿ 

ಆಂದೋಲನ ಡೆಸ್ಕ್

Recent Posts

ಧರ್ಮಸ್ಥಳ ಪ್ರಕರಣ : ಚಿನ್ನಯ್ಯಗೆ ಕೊನೆಗೂ ಬಿಡುಗಡೆ ಭಾಗ್ಯ

ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದಿಂದ ಬಂಧನಕ್ಕೆ ಒಳಗಾದ ಚಿನ್ನಯ್ಯ ಕೊನೆಗೂ…

3 mins ago

ಕೈಗಾರಿಕೆ ಸ್ಥಾಪನೆಗೆ 500 ಎಕರೆ ಜಾಗ ಕೊಡುತ್ತೇನೆ : ಎಚ್‌ಡಿಕೆ ಯಾವ ಕೈಗಾರಿಕೆ ತರುತ್ತಾರೋ ತರಲಿ : ಶಾಸಕ ನರೇಂದ್ರಸ್ವಾಮಿ ಸವಾಲು

ಮಂಡ್ಯ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಯಾವ ಕೈಗಾರಿಕೆಯನ್ನು ತರುವರೋ ತರಲಿ. ಮಳವಳ್ಳಿ ಕ್ಷೇತ್ರದಲ್ಲಿ 400ರಿಂದ 500 ಎಕರೆ…

6 mins ago

ಮೈಸೂರಿನಲ್ಲಿ ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಕೆ ಪ್ರಗತಿ : 1,100 ಕಿ.ಮೀ ವರೆಗೆ ಕೇಬಲ್ ಅಳವಡಿಕೆ

ಮೈಸೂರು : ನಗರದಲ್ಲಿ ಓವ‌ರ್ ಹೆಡ್ (ಮೇಲ್ಬಾಗದ) ವಿದ್ಯುತ್ ಮಾರ್ಗವನ್ನು ತೆರವು ಮಾಡಿ ವಿದೇಶಿ ಮಾದರಿಯಲ್ಲಿ ಭೂಗತಕೇಬಲ್‌ಗಳಾಗಿ ಪರಿವರ್ತಿಸುವ 408…

14 mins ago

ಮೈ-ಬೆಂ ಹೆದ್ದಾರಿ ಅಪಘಾತ | 2 ವರ್ಷದಲ್ಲಿ 1,674 ಅಪಘಾತ, 215ಮಂದಿ ಸಾವು

ಮಂಡ್ಯ : ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ-275 ರಲ್ಲಿ 2023ರಿಂದ 2025 ರವರೆಗೆ ಒಟ್ಟು 1,674 ಅಪಘಾತಗಳು ನಡೆದಿದ್ದು, 215 ಮಂದಿ…

22 mins ago

ಮೈ-ಬೆಂ ಹೆದ್ದಾರಿ |ರೂ.855 ಕೋಟಿ ಟೋಲ್‌ ಸಂಗ್ರಹ

ಮಂಡ್ಯ : ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ-275 ವಾಹನಗಳ ಸಂಚಾರಕ್ಕೆ ಮುಕ್ತವಾದ ದಿನದಿಂದ ಈವರೆಗೆ 855.79 ಕೋಟಿ ರೂ. ಟೋಲ್ ಶುಲ್ಕ…

26 mins ago

ಸಾಮಾಜಿಕ ಬಹಿಷ್ಕಾರ : ಶಿಕ್ಷೆ ಪ್ರಮಾಣ 7 ವರ್ಷಕ್ಕೆ ಹೆಚ್ಚಿಸಲು ಆಗ್ರಹ

ಮಂಡ್ಯ : ಸಾಮಾಜಿಕ ಬಹಿಷ್ಕಾರ ನಿಷೇಧ ವಿಧೇಯಕದಡಿ ಶಿಕ್ಷೆ ಪ್ರಮಾಣ 7 ವರ್ಷಕ್ಕೆ ಹೆಚ್ಚಿಸಬೇಕು. ಎಸ್ಸಿ, ಎಸ್ಟಿ ಸಮುದಾಯ ಪ್ರತಿ…

30 mins ago