ಡಿ.ವಿ.ರಾಜಶೇಖರ
ಭಾರತದಲ್ಲಿ ಈ ವರ್ಷ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಿದ ನೀಟ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 24 ಲಕ್ಷ. ಸರ್ಕಾರಿ ಕೋಟಾದ ಅಡಿ ಸುಮಾರು 90 ಸಾವಿರ ವೈದ್ಯಕೀಯ ಸೀಟುಗಳಿಗೆ ಇರುವ ಬೇಡಿಕೆಯ ಪ್ರಮಾಣ ಇದು. ಇದರ ಜೊತೆಗೆ ಅಷ್ಟೇ ಪ್ರಮಾಣದಲ್ಲಿ ಖಾಸಗಿ ಸೀಟುಗಳೂ ಇರುತ್ತವೆ. ಆ ಸೀಟುಗಳಿಗೆ ಕೋಟಿ, ಲಕ್ಷ ಲಕ್ಷ ರೂ. ತೆರಲು ಸಿದ್ಧವಿರುವವರು ಪ್ರವೇಶ ಪಡೆಯುತ್ತಾರೆ. ಈ ಸ್ಪರ್ಧೆಯನ್ನು ನೋಡಿದರೆ ಇನ್ನು ವಾಣಿಜ್ಯ ಮತ್ತು ಎಂಜಿನಿಯರಿಂಗ್ ಮತ್ತು ಇತರ ಕೋಸ್ ೯ಗಳಿಗೆ ಇರುವಬೇಡಿಕೆಯನ್ನು ಯಾರುಬೇಕಾದರೂ ಊಹಿಸಿಕೊಳ್ಳಬಹುದು. ಇದು ದೇಶೀಯ ಮಟ್ಟದ ಪ್ರವೇಶಕ್ಕೆ ಇರುವ ಅವಕಾಶ. ಇನ್ನು ವಿದೇಶೀ ಮಟ್ಟದಲ್ಲಿ ಈ ಸ್ಪರ್ಧೆ ಇನ್ನೂ ಜೋರಾಗಿದೆ.
ಭಾರತ ಬಡ ದೇಶ ಎನ್ನುವ ಕಾಲ ಆಗಿಹೋಗಿದೆ. ಬಡವರು ಬಡವರಾಗಿಯೇ ಉಳಿದಿದ್ದಾರೆ ಎನ್ನುವುದು ಬೇರೆ ಮಾತು. ಅಭಿವೃದ್ಧಿಯ ಲಾಭವನ್ನು ಕೆಲವರೇ ಪಡೆಯುತ್ತಿದ್ದಾರೆ. ಜೊತೆಗೆ ಭ್ರಷ್ಟಾಚಾರ ಅವರಿಗೆ ವರದಾನವಾಗಿದೆ. ಹೀಗಾಗಿ ಉಳ್ಳವರ ಸಂಖ್ಯೆ ಈಗ ಬಹು ದೊಡ್ಡದಿದೆ. ವಿದೇಶಗಳಲ್ಲಿ ತಮ್ಮ ಮಕ್ಕಳನ್ನು ಓದಿಸಲು ಹರಸಾಹಸ ಮಾಡುವ ಲಕ್ಷಾಂತರ ಜನರು ಈಗ ಭಾರತದಲ್ಲಿ ಇದ್ದಾರೆ. ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡಿಸಲು ಆರಂಭದಲ್ಲಿಯೇ 30 ರಿಂದ 50 ಲಕ್ಷ ರೂ. ಬೇಕಾಗುತ್ತದೆ. ಬ್ಯಾಂಕುಗಳು ಸ್ಥಿರ ಆಸ್ತಿ ಆಧಾರ ಮಾಡಿಸಿಕೊಂಡು ಸಾಲ ಸೌಲಭ್ಯ ಒದಗಿಸುತ್ತವೆ. ಎಲ್ಲರಿಗೂ ಸಾಲ ಸಿಗುವುದಿಲ್ಲ. ಸಾಲ ಸಿಗದಿದ್ದಾಗ ಸ್ವಂತ ಹಣದಲ್ಲಿ ತಮ್ಮ ಮಕ್ಕಳಿಗೆ ವಿದೇಶೀ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಬೇಕಾಗುತ್ತದೆ. ಪ್ರತಿ ವರ್ಷದ ಖರ್ಚು ಕನಿಷ್ಠ 15 ಲಕ್ಷ ರೂ. ಆಗುತ್ತದೆ. ಇಷ್ಟೊಂದು ಹಣ ವೆಚ್ಚ ಮಾಡಲು ಸಿದ್ಧರಿರುವ ತಂದೆ ತಾಯಿಯರು ಭಾರತದಲ್ಲಿ ಲಕ್ಷಾಂತರ ಮಂದಿ ಇದ್ದಾರೆ ಎಂದರೆ ಯಾರಿಗಾದರೂ ಆಶ್ಚರ್ಯ ಆಗಬಹುದು. ಈಗ ಲಭ್ಯವಿರುವ ಮಾಹಿತಿ ಪ್ರಕಾರ ಪ್ರತಿ ವರ್ಷ ಕನಿಷ್ಠ ಹತ್ತು ಲಕ್ಷ ವಿದ್ಯಾರ್ಥಿಗಳು ವಿದೇಶೀ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆಯುತ್ತಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 13 ಲಕ್ಷ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ವಿದೇಶಗಳಿಗೆ ಹೋಗುತ್ತಾರೆ ಎಂದು ಅಂದಾಜು ಮಾಡಲಾಗಿದೆ.
ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದೇಶೀ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಪಡೆಯಲು ಈಗಲೇ ಸಿದ್ಧತೆಗಳು ನಡೆದಿವೆ. ಯಾವ ದೇಶ ಹಾಗೂ ಯಾವ ವಿಶ್ವವಿದ್ಯಾನಿಲಯದಲ್ಲಿ ಯಾವ ಕೋರ್ಸ್‌ಗೆ ಸೇರಬೇಕು ಎಂಬ ಬಗ್ಗೆ ಮಾಹಿತಿ ಸಂಗ್ರಹವನ್ನು ಒಂದು ವರ್ಷ ಮೊದಲು, ಕನಿಷ್ಠ ಆರು ತಿಂಗಳ ಮೊದಲು ನಡೆಸಬೇಕಾಗುತ್ತದೆ. ಸಾಮಾನ್ಯವಾಗಿ ಸೆಪ್ಟೆಂಬರ್ (ಫಾಲ್) ಮತ್ತು ಜನವರಿಯಲ್ಲಿ (ಸ್ಟಿಂಗ್) ವಿದೇಶೀ ವಿವಿಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗುತ್ತದೆ. ಬೇಸಿಗೆ ಕಾಲದಲ್ಲಿಯೂ ಪ್ರವೇಶಾತಿ ಇದ್ದರೂ ಅಂಥ ವಿವಿಗಳ ಸಂಖ್ಯೆ ಕಡಿಮೆ. ವಿದೇಶಗಳಲ್ಲಿ ಶಿಕ್ಷಣ ಪಡೆದರೆ ಉತ್ತಮ ವೇತನದ ಕೆಲಸ ಸಿಗಬಹುದು ಎನ್ನುವುದು ಶ್ರೀಮಂತ ತಂದೆ ತಾಯಿಯರ ಲೆಕ್ಕಾಚಾರ. ಕೆಲವರಿಗೆ ಅದು ಪ್ರತಿಷ್ಠೆಯ ಪ್ರಶ್ನೆಯೂ ಹೌದು. ಹೀಗಾಗಿ ಸ್ಪರ್ಧೆ ಜೋರಾಗಿದೆ.
ಸಾಮಾನ್ಯವಾಗಿ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ಜರ್ಮನಿ, ನೆದರ್ ಲ್ಯಾಂಡ್, ಸ್ವೀಡ್ನರ್ ಲ್ಯಾಂಡ್ ಮತ್ತಿತರ ಐದಾರು ದೇಶಗಳ ವಿಶ್ವವಿದ್ಯಾಲಯ ಗಳಿಗೆ ಹೆಚ್ಚು ಬೇಡಿಕೆ ಇದೆ. ಈ ದೇಶಗಳಲ್ಲಿ ಶಿಕ್ಷಣದ ಗುಣಮಟ್ಟ ಅತ್ಯುತ್ತಮವಾದುದು. ಜೊತೆಗೆ ಉದ್ಯೋಗ ಮಾಡಿಕೊಂಡು ಓದುವ ಅವಕಾಶ ಈ ದೇಶಗಳಲ್ಲಿ ಹೆಚ್ಚಿದೆ. ಪಾರ್ಟ್ ಟೈಂ ಜಾಬ್ ಮಾಡುವುದರಿಂದ ಬಂದ ಹಣದಲ್ಲಿ ಸಾಲವನ್ನೂ ತೀರಿಸಬಹುದೆಂಬುದು ಲೆಕ್ಕಾಚಾರ. ಹೀಗೇ ನಡೆಯುತ್ತ ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸಾಧ್ಯತೆಗಳು ಕಡಿಮೆಯಾಗುತ್ತಿವೆ. ಅಮೆರಿಕದವರು ಈಗ ಸೂಡೆಂಟ್ಸ್ ವಿಸಾ ಸಂಖ್ಯೆಯನ್ನು ಕಡಿಮೆ ಮಾಡಿದ್ದಾರೆ. ಅಲ್ಲದೆ ಪಾರ್ಟ್ ಟೈಮ್ ಜಾಬ್ ಸಿಗುವ ಸಾಧ್ಯತೆಗಳೂ ಕಡಿಮೆಯಾಗುತ್ತಿವೆ. ಅಮೆರಿಕ ಬಿಟ್ಟರೆ ಕೆನಡಾ, ಆಸ್ಟ್ರೇಲಿಯಾ ಮತ್ತು ಬ್ರಿಟನ್ ದೇಶಗಳ ವಿಶ್ವವಿದ್ಯಾಲಯಗಳು ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತ ಬಂದಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅದೂ ಸಮಸ್ಯೆಯಾಗತೊಡಗಿದೆ. ಕೆನಡಾದಲ್ಲಿ ಖಾಲಿಸ್ತಾನಿ ಬೆಂಬಲಿಗರ ಉಪಟಳ ಹೆಚ್ಚಾಗಿದೆ. ಜೊತೆಗೆ ಅಲ್ಲಿ ಈಗ ವಸತಿ ಸಮಸ್ಯೆಯೂ ಉದ್ಭವಿಸಿದೆ. ಈ ಸಮಸ್ಯೆ ಈಗ ಆಸ್ಟ್ರೇಲಿಯಾ ಮತ್ತು ಬ್ರಿಟನ್‌ನಲ್ಲಿಯೂ ಕಂಡುಬಂದಿದೆ. ಇದೇ ಕಾರಣ ಕೊಟ್ಟು ಕೆನಡಾ ಸರ್ಕಾರ ಮುಂದಿನ ವರ್ಷಕ್ಕೆ ಸೂಡೆಂಟ್ಸ್ ವಿಸಾ ಸಂಖ್ಯೆಯನ್ನು ಶೇ.35ರಷ್ಟು ಕಟ್ ಮಾಡಿದೆ. ಮುಂದಿನ ವರ್ಷಕ್ಕೆ 3.84 ಲಕ್ಷ ಸೂಡೆಂಟ್ಸ್ ವಿಸಾ ಮಾತ್ರ ಕೊಡುವುದಾಗಿ ಘೋಷಿಸಿದೆ.
ಖಾಲಿಸ್ತಾನ ಸಮಸ್ಯೆ ಭಾರತ ಮತ್ತು ಕೆನಡಾ ಸಂಬಂಧ ಕೆಡಲು ಕಾರಣವಾಗಿದೆ. ಇದೇ ಕಾರಣದಿಂದ ಸ್ಪೂಡೆಂಟ್ಸ್ ವಿಸಾ ಪ್ರಮಾಣ ಕಡಿಮೆ ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ. ಕೆಲವು ತಿಂಗಳ ಹಿಂದೆ ಕೆನಡಾದ ಪ್ರಿನ್ಸ್ ಎಡ್ವರ್ಡ್ ಐಲ್ಯಾಂಡ್ (ಪಿಇಐ) ಪ್ರಾಂತ್ಯ ಸರ್ಕಾರ ತನ್ನ ವಲಸೆ ನೀತಿಯಲ್ಲಿ ಬದಲಾವಣೆ ತಂದಿತು. ವಿದ್ಯಾರ್ಥಿ ವಿಸಾ ಸಂಖ್ಯೆಯನ್ನು ಕಡಿಮೆ ಮಾಡಿತು. ಕೆನಡಾದಲ್ಲಿ ಓದಿದವರಿಗೆ ಅಲ್ಲಿಯೇ ಕೆಲಸ ಮಾಡುವ ಮತ್ತು ಅಲ್ಲಿಯೇ ಇರುವ ಅವಕಾಶ ಇತ್ತು. ಆ ಸೌಲಭ್ಯವನ್ನು ರದ್ದು ಮಾಡುವ ನಿರ್ಧಾರ ತೆಗೆದುಕೊಂಡು ಅದನ್ನು ಹಿಂದಿನ ವರ್ಷದಿಂದ ಅನ್ವಯವಾಗು ವಂತೆ ಜಾರಿಗೆ ತಂದದ್ದರಿಂದ ಅನೇಕ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಈಡಾದರು. ಪ್ರಾಂತೀಯ ಸರ್ಕಾರದ ನೀತಿಯ ವಿರುದ್ಧ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಆಸ್ಟ್ರೇಲಿಯಾ, ಬ್ರಿಟನ್‌ನಲ್ಲಿಯೂ ಸೂಡೆಂಟ್ಸ್ ವಿಸಾ ಸಂಖ್ಯೆ ಕಡಿತಮಾಡಲಾಗಿದೆ. ಬ್ರಿಟನ್‌ನಲ್ಲಿಯೂ ಸೂಡೆಂಟ್ಸ್ ವಿಸಾ ಸಂಖ್ಯೆ ಕಡಿತಮಾಡಲಾಗಿದೆ. ಅಮೆರಿಕದಲ್ಲಿಯೂ ನಿರ್ಬಂಧಗಳು ಜಾರಿಗೆ ಬಂದಿವೆ. ವಿದ್ಯಾಭ್ಯಾಸ ಮುಗಿಸಿದ ಕೆಲವು ತಿಂಗಳಲ್ಲಿ ಉದ್ಯೋಗ ಸಿಗದಿದ್ದರೆ ಭಾರತಕ್ಕೆ ಹಿಂತಿರುಗಿ ಬರಬೇಕಾಗುತ್ತದೆ. ಉದ್ಯೋಗ ಸಿಗುವುದು ಈಗ ಅಷ್ಟು ಸುಲಭ ಇಲ್ಲ. ಈ ಹಿಂದೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ ಮೊದಲು ಅಮೆರಿಕದವರಿಗೆ ಕೆಲಸ ಎಂಬ ಕಾನೂನು ಜಾರಿಯಲ್ಲಿತ್ತು. ಅಮೆರಿಕದ ವ್ಯಕ್ತಿಗೆ ಸಿಗದಿದ್ದಾಗ ಮಾತ್ರ ವಿದೇಶೀಯರಿಗೆ ಉದ್ಯೋಗ ಕೊಡಬಹುದು ಎಂಬ ನಿಯಮ ಇತ್ತು. ಈ ನಿಯಮದಿಂದಾಗಿ ಬಹಳಷ್ಟು ಮಂದಿ ಭಾರತೀಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಗಿದ ಮೇಲೆ ಸ್ವದೇಶಕ್ಕೆ ಹಿಂತಿರುಗುವಂತಾಗಿತ್ತು. ಆಸ್ಟ್ರೇಲಿಯಾ ಮತ್ತು ಬ್ರಿಟನ್‌ನಲ್ಲಿಯೂ ಉದ್ಯೋಗಗಳು ಸಿಗುವುದು ದಿನೇ ದಿನೇ ಕಷ್ಟವಾಗುತ್ತಿದೆ.
ಭಾರತದಿಂದ ವಿದೇಶಗಳಿಗೆ ಹೋದ ವಿದ್ಯಾರ್ಥಿಗಳು ಮೊದಲು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕು. ಕೆಲವು ದೇಶಗಳಲ್ಲಿ ಸದಾ ಚಳಿ, ಬಿಟ್ಟರೆ ಸದಾ ಬಿಸಿಲು. ಅನೇಕ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ನೀಡುತ್ತವೆ. ಅಲ್ಲಿ ಭಾರತೀಯ ಶೈಲಿಯ ಊಟವೇ ಸಿಗುವ ಗ್ಯಾರಂಟಿ ಇಲ್ಲ. ಪ್ರವೇಶಾತಿ ಸಂದರ್ಭದಲ್ಲಿಯೇ ಒಂದು ವರ್ಷದ ಹಾಸ್ಟೆಲ್ ಫೀಸನ್ನು ಕಟ್ಟಿಸಿಕೊಂಡಿರುವುದರಿಂದ ಊಟದ ವ್ಯವಸ್ಥೆ ಸರಿಯಾಗದಿದ್ದರೆ ಬೇರೆ ದಾರಿ ಹುಡುಕಿಕೊಳ್ಳಬೇಕಾಗುತ್ತದೆ. ಸಾಮಾನ್ಯವಾಗಿ ಪಿಜಿಗಳಲ್ಲಿ ವಿದ್ಯಾರ್ಥಿಗಳು ನೆಲೆಸುತ್ತಾರೆ. ಕೆಲವು ವಿದ್ಯಾರ್ಥಿಗಳು ಒಟ್ಟಿಗೆ ಸೇರಿ ಮನೆ ಮಾಡಿ ಅಡುಗೆ ಮಾಡಿಕೊಂಡು ಊಟಮಾಡುತ್ತಾರೆ. ಇಷ್ಟು ಕಷ್ಟಪಟ್ಟು ಅಲ್ಲಿ ಶಿಕ್ಷಣ ಪಡೆಯುತ್ತಿದ್ದರೂ ನೆಮ್ಮದಿ ಇಲ್ಲ. ಭದ್ರತೆ ಸಮಸ್ಯೆ ದೊಡ್ಡದು. ಕೇಂದ್ರ ಸರ್ಕಾರ ನೀಡುವ ಮಾಹಿತಿ ಪ್ರಕಾರ 2018 ರಿಂದ 2023ರವರೆಗೆ ವಿದೇಶಗಳಲ್ಲಿ ಸತ್ತಿರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 403.
ಒಂಟಿಯಾಗಿ ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡುವುದು ಕಷ್ಟ. ಹೀಗಾಗಿಯೇ ಸಾಮಾನ್ಯವಾಗಿ ವಿದೇಶೀ ವಿವಿಗಳಲ್ಲಿ ಶಿಕ್ಷಣ ಪಡೆಯಲು ಬಯಸುವವರು ಮೊದಲು ಅಲ್ಲಿನ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳುತ್ತಾರೆ. ಅಲ್ಲಿಯೇ ಓದಿದ, ಓದುತ್ತಿರುವ ವಿದ್ಯಾರ್ಥಿಗಳನ್ನು ವಿಚಾರಿಸಿ ಪರಿಸ್ಥಿತಿ ಉತ್ತಮವಾಗಿದ್ದರೆ ಮಾತ್ರ ಪ್ರವೇಶ ಪಡೆಯಲು ಮುಂದಾಗುತ್ತಾರೆ. ಪ್ರವೇಶ ಪಡೆಯುವ ಮೊದಲು ತಾವು ಹೋಗಲು ಇಚ್ಛಿಸುವ ವಿವಿ ಅಥವಾ ಕಾಲೇಜಿನ ಮಾನ್ಯತೆ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ಹಣಕ್ಕಾಗಿ ಎಷ್ಟೋ ವಿವಿಗಳ ಸಂಸ್ಥಾಪಕರು ಶಿಕ್ಷಣವನ್ನು ದಂಧೆಯನ್ನಾಗಿ ಮಾಡಿಕೊಂಡು ಮೋಸ ಮಾಡು ತ್ತಾರೆ. ಹೀಗಾಗಿ ಮೊದಲೇ ಎಲ್ಲ ತಿಳಿಯಬೇಕಾಗಿರುತ್ತದೆ. ವಿದೇಶೀ ವಿವಿಗಳಲ್ಲಿ ಪ್ರವೇಶ ದೊರಕಿಸುವಲ್ಲಿ ನೆರವಾಗುವ ಅನೇಕ ಸಂಸ್ಥೆಗಳಿವೆ. ಅಂಥ ಸಂಸ್ಥೆಗಳ ಜೊತೆ ಸಮಾಲೋಚನೆ ಅನುಕೂಲಕರ. ಯಾರಾದರೂ ವಿದೇಶೀ ವಿವಿಯಲ್ಲಿ ಶಿಕ್ಷಣ ಪಡೆದವರಿದ್ದರೆ ಅವರ ಜೊತೆ ಮೊದಲು ಸಮಾಲೋಚನೆ ನಡೆಸಬೇಕು. ಸಮಾಲೋಚನಾ ಸಂಸ್ಥೆಗಳಲ್ಲಿ ಯಾವುದು ಮೋಸದ್ದು, ಯಾವುದು ನಿಜ ವಾದದ್ದು ಎಂಬುದನ್ನು ತಿಳಿದು ಸಮಾಲೋಚನೆಗೆ ಹೊರಡುವುದು ಸೂಕ್ತ.
ಜರ್ಮನಿ ಸೇರಿದಂತೆ ಯೂರೋಪಿನ ಹಲವು ದೇಶಗಳಲ್ಲಿ ಉತ್ತಮ ವಿವಿಗಳಿವೆ. ಅನೇಕ ವಿವಿಗಳು ವಿದ್ಯಾರ್ಥಿವೇತನಗಳನ್ನೂ ನೀಡುತ್ತವೆ. ಪ್ರವೇಶ ಪಡೆಯಲು ಮೊದಲು ಒಂದು ಪ್ರಾಥಮಿಕ ಪರೀಕ್ಷೆ ಪಾಸು ಮಾಡಲೇಬೇಕು. ಇದರ ಜೊತೆಗೆ ಇಂಗ್ಲಿಷ್ ಭಾಷೆಯ ಒಂದು ಪರೀಕ್ಷೆ ಕಡ್ಡಾಯ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಬ್ರಿಟನ್ ದೇಶಗಳ ವಿವಿಗಳಲ್ಲಿ ಪ್ರವೇಶ ಪಡೆಯಲೂ ಪ್ರವೇಶ ಪರೀಕ್ಷೆ ಮೊದಲು ಪಾಸು ಮಾಡಬೇಕು. ಟಾಪೆಲ್, ಜಿಆರ್‌ಇ, ಐಇಎಲ್‌ಟಿಎಸ್, ಎಸ್‌ಟಿ ಮುಂತಾದ ಪ್ರಾಥಮಿಕ ಪರೀಕ್ಷೆ ಪಾಸು ಮಾಡಿದರೆ ಮಾತ್ರ ವಿದೇಶೀ ವಿವಿಗಳ ಪ್ರವೇಶಕ್ಕೆ ಮುಂದಾಗಬಹುದು. ಈ ಪರೀಕ್ಷೆ ಪಾಸಾದ ಮೇಲೆ ತಾವು ಓದಲಿರುವ ದೇಶ, ವಿವಿ ಆಯ್ಕೆ ಮಾಡಿ ಸೂಡೆಂಟ್ಸ್ ವಿಸಾಗೆ ಅರ್ಜಿ ಸಲ್ಲಿಸುವುದು ಅನಿವಾರ್ಯ. ಈ ಪ್ರಕ್ರಿಯೆಗಳಿಲ್ಲದೆ ಮುಂದುವರಿಯುವುದು ಕಷ್ಟ. ಇದಕ್ಕೆಲ್ಲ ಸಾಕಷ್ಟು ಹಣ ವೆಚ್ಚವಾಗುತ್ತದೆ. ಅದಕ್ಕೆ ಸಿದ್ಧರಿರುವವರು ಮಾತ್ರ ವಿದೇಶೀ ವಿವಿಗಳಲ್ಲಿ ಪ್ರವೇಶ ಪಡೆಯಲು ಯತ್ನಿಸಬಹುದು.
ವಿದೇಶಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಆ ದೇಶಗಳ ಭದ್ರತೆಯ ನಿಯಮಗಳಿಗೆ ಅನ್ವಯವಾಗುವಂತೆ ಬದುಕಬೇಕಾಗುತ್ತದೆ. ಕಾನೂನು ಉಲ್ಲಂಘಿಸಿ ಸಮಸ್ಯೆ ತಂದುಕೊಂಡರೆ ಅವರ ಸಹಾಯಕ್ಕೆ ಹೋಗುವವರು ಯಾರೂ ಇರುವುದಿಲ್ಲ. ದೇಶದ ಭದ್ರತೆಯ ಸಮಸ್ಯೆಯೂ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ ರಷ್ಯಾ ದೇಶ ಉಕ್ರೇನ್ ಮೇಲೆ ಅತಿಕ್ರಮಣ ಮಾಡಿದ್ದರಿಂದ ಅಲ್ಲಿನ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸುಮಾರು 19 ಸಾವಿರ ಭಾರತೀಯ ವಿದ್ಯಾರ್ಥಿ ಗಳು ಎದುರಿಸಿದ ಸಮಸ್ಯೆ ಯಾರಿಗೂ ಬೇಡ, ಯುದ್ಧದ ನಡುವೆಯೇ ಭಾರತ ಮಧ್ಯಪ್ರವೇಶಿಸಿ ಅವರನ್ನು ದೇಶದಿಂದ ಹೊರತಂದದ್ದು ದೊಡ್ಡ ಸಾಹಸ. ಯುದ್ಧದಿಂದಾಗಿ ಕೆಲವು ವಿದ್ಯಾರ್ಥಿಗಳು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಭಾರತಕ್ಕೆ ವಾಪಸ್ ಬಂದ ವಿದ್ಯಾರ್ಥಿಗಳು ಶಿಕ್ಷಣ ಮುಂದುವರಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಭಾರತದಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದ್ದರಿಂದ ಕೆಲವರು ಆತಂಕದ ಮಧ್ಯೆಯೇ ಉಕ್ರೇನ್‌ಗೆ ಹಿಂತಿರುಗಿದರು. ಅವಕಾಶ ಸಿಕ್ಕಿದ್ದರಿಂದಾಗಿ ಕೆಲವರು ರಷ್ಯಾ, ತಜಕೀಸ್ತಾನ ಮುಂತಾದ ದೇಶಗಳ ವಿವಿಗಳಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ. ಅನಿರೀಕ್ಷಿತವಾದುದು ಏನಾದರೂ ಆದರೆ ಪರಿಸ್ಥಿತಿ ನಿಭಾಯಿಸುವ ಸಾಮರ್ಥ್ಯ ಇದ್ದವರು ಮಾತ್ರ ರಾಜಕೀಯ ಅಸ್ಥಿರತೆ ಇರುವ ದೇಶಗಳ ವಿವಿಗಳಲ್ಲಿ ಪ್ರವೇಶ ಪಡೆಯಬಹುದು. ಆದರೆ ಸಂಕಷ್ಟವನ್ನು ಮೊದಲೇ ತಲೆಯ ಮೇಲೆ ಎಳೆದುಕೊಳ್ಳುವುದು ಬುದ್ಧಿವಂತರ ಲಕ್ಷಣ ಅಲ್ಲ.
ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…
ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…